ದಸರಾ ಮೆರವಣಿಗೆಗೆ ಮೆರಗು ನೀಡುವ ಸ್ತಬ್ಧ ಚಿತ್ರ ಕಲಾವಿದರ ಕತೆ-ವ್ಯಥೆ

ಜಿ ಕೃಷ್ಣಪ್ರಸಾದ್
ಮೈಸೂರು ದಸರಾದ ಮುಖ್ಯ ಆಕರ್ಷಣೆ ದಸರಾ ಮೆರವಣಿಗೆ. ಅಂಬಾರಿ ಹೊತ್ತ ಅಭಿಮನ್ಯು ಮೆರವಣೆಗೆಯ ಕೊನೆಗೆ ಬರುವ ಮುನ್ನ, ನೆರೆದ ಜನರಿಗೆ ಮನರಂಜನೆ ಮತ್ತು ಮಾಹಿತಿ ನೀಡಲು ಬರುವ ಸ್ತಬ್ಧ ಚಿತ್ರಗಳು, ಕಲಾವಿದರ ತಂಡಗಳು ಮೆರವಣಿಗೆಗೆ ರಂಗು ತುಂಬುತ್ತವೆ. ಕರ್ನಾಟಕದ ವಿವಿಧ ಜಿಲ್ಲೆಗಳ ಕಲೆ, ಸಂಸ್ಕೃತಿ , ಪ್ರವಾಸಿ ತಾಣವನ್ನು ಬಿಂಬಿಸುವ ಸ್ತಬ್ಧ ಚಿತ್ರಗಳ ಕಾಣಲು ಜನ ಕಾತರದಿಂದ ಕಾಯುತ್ತಾರೆ.
ಇವತ್ತು ಮೈಸೂರಿನ ಎಪಿಎಂಸಿಯಲ್ಲಿರುವ ಸಹಜ ಸೀಡ್ಸ ಕಛೇರಿಯ ಆಯುಧ ಪೂಜೆಗೆಂದು ಹೋಗಿದ್ದೆ. ಅರ್ಧಂಬರ್ಧ ಸಿದ್ದವಾಗಿದ್ದ ಸ್ತಬ್ಧ ಚಿತ್ರಗಳು ಗಮನ ಸೆಳೆದೆವು.
ಸ್ತಬ್ಧ ಚಿತ್ರಗಳು ಮೈಸೂರಿನಲ್ಲಿ ಸಿದ್ದವಾಗುತ್ತವೆ ಎಂಬುದು ಗೊತ್ತಿರಲಿಲ್ಲ. ಆಯಾ ಜಿಲ್ಲೆಗಳಲ್ಲಿ ಸಿದ್ದವಾಗಿ ದಸರಾಗೆ ಬರುತ್ತವೆ ಎಂದುಕೊಂಡಿದ್ದೆ.

ಆಯಾ ಜಿಲ್ಲಾಡಳಿತ ದಸರಾ ಮೆರವಣಿಗೆಯ ಸ್ತಬ್ಧ ಚಿತ್ರ ಹೇಗಿರಬೇಕೆಂದು ತೀರ್ಮಾನಿಸಿದ ಮೇಲೆ ಕಂಪನಿಯೊಂದಕ್ಕೆ ಕಾಂಟ್ರಾಕ್ಟ ಕೊಡುತ್ತಾರೆ. ಆ ಕಂಪನಿ ಕಲಾವಿದರು ಮತ್ತು ಕೆಲಸಗಾರರನ್ನು ಮೈಸೂರಿಗೆ ಕರೆತರುತ್ತದೆ. ಎಪಿಎಂಸಿಯಲ್ಲಿ ಅವರಿಗೆ ಇರಲು ಮತ್ತು ಸ್ತಬ್ಧ ಚಿತ್ರ ರಚಿಸಲು ಅವಕಾಶ ನೀಡುತ್ತದೆ.
ಲಕ್ಷಾಂತರ ಜನರ ಮನರಂಜಿಸುವ ಸ್ತಬ್ಧ ಚಿತ್ರಗಳನ್ನು ರಚಿಸುವ ಕಲಾವಿದರಿಗೆ ಸೂಕ್ತ ವಸತಿ ಮತ್ತು ವ್ಯವಸ್ಥೆ ಇಲ್ಲದಿರುವುದು ಶೋಚನೀಯ. ಬಿಸಿಲು – ಮಳೆ ಲೆಕ್ಕಿಸದೆ ರಸ್ತೆಯ ಬದಿ ನಿಲ್ಲಿಸಿದ ಲಾರಿಯ ಮೇಲೆ ಸ್ತಬ್ಧ ಚಿತ್ರ ಸಿದ್ದಮಾಡಬೇಕು. ದೂರದೂರಿನಿಂದ ಬರುವ ಕಲಾವಿದರು ಸಿಕ್ಕದ್ದನ್ನು ತಿಂದು, ಜಾಗ ಸಿಕ್ಕ ಕಡೆ ಮಲಗಬೇಕು.
ಕಳೆದ ವಾರವೇ ಬಂದಿರುವ ಕಲಾವಿದರು ಮತ್ತು ಕೆಲಸಗಾರರು ಬಿಡುವಿಲ್ಲದಂತೆ ದುಡಿಯುತ್ತಿದ್ದಾರೆ. ಧರ್ಮೋಕೋಲ್, ಪ್ಲೇವುಡ್, ಪ್ಲಾಸ್ಟರ್ ಆಫ್ ಪ್ಯಾರೀಸ್ ಮೊದಲಾದ ಕಚ್ಚಾವಸ್ತುವನ್ನು ಬಳಸಿ ಸ್ತಬ್ಧ ಚಿತ್ರ ರೂಪಿಸಲಾಗುತ್ತದೆ.

ಇಷ್ಟು ಶ್ರಮವಹಿಸಿ ಮಾಡಿದ ಸ್ತಬ್ಧ ಚಿತ್ರಗಳು ಬನ್ನಿಮಂಟಪದ ಬಳಿ ಮೆರವಣಿಗೆ ಕೊನೆಗೊಳ್ಳುವ ಹೊತ್ತಿಗೆ ಜನರ ಕೈಗೆ ಸಿಕ್ಕಿ ಚೂರಾಗುತ್ತವೆ.
ದಸರೆಯ ಸ್ತಬ್ಧ ಚಿತ್ರಗಳ ರೂಪಿಸುವ ಕಲಾವಿದರನ್ನು ಇನ್ನಷ್ಟು ಗೌರವದಿಂದ ನಡೆಸಿಕೊಳ್ಳುವ, ಊಟ ವಸತಿಯ ಕಾಳಜಿ ಮಾಡಬೇಕಾದ ಅಗತ್ಯವಿದೆ ಎಂದು ಆ ಕ್ಷಣ ನನಗನ್ನಿಸಿತು. ಮೈಸೂರಿನ ಸಂಘ ಸಂಸ್ಥೆಗಳು,ಕಲಾ ಪೋಷಕರು ಈ ನಿಟ್ಟಿನಲ್ಲಿ ಗಮನಹರಿಸಬೇಕು.






0 Comments