
ದರ್ಶನ್ ಜಯಣ್ಣ
ನಮ್ಮ ಮನೆಯ ಹಿಂದೆಯೇ ಸಾಬರ ಬೀದಿ.
ಅಲ್ಲಿ ಸುಮಾರು ಒಂದು ಸಾವಿರಕ್ಕೊ ಮೀರಿ ಮುಸ್ಲಿಂ ಕುಟುಂಬಗಳು ನೂರಾರು ವರ್ಷಗಳಿಂದಲೂ ವಾಸವಾಗಿವೆ. ಆ ಬೀದಿಯ ಹೆಸರೇನು ಎಂಬುದು ಯಾರಿಗೂ ಸ್ವತಃ ಕಾರ್ಪೋರೇಶನ್ ನವರಿಗೂ ಗೊತ್ತಿಲ್ಲವೇನೋ. ಎಲ್ಲರೂ ಅದನ್ನು ಸಾಬರ ಬೀದಿ ಎಂದೇ ಕರೆಯುತ್ತಾರೆ.
ಅಲ್ಲಿರುವ ಬಹುಪಾಲು ಜನ ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡು ಜೀವನ ನಡೆಸುತ್ತಾರೆ. ಅವುಗಳಲ್ಲಿ ಪ್ರಮುಖವಾದವುಗಳು ಗೂಡಂಗಡಿ, ಹಣ್ಣಿನ ವ್ಯಾಪಾರ, ಸೈಕಲ್-ಬೈಕ್ ರಿಪೇರಿ, ಪಂಚರ್ ಶಾಪ್, ಕುದುರೆ ಗಾಡಿ, ಟೀ ಅಂಗಡಿ ಇತ್ಯಾದಿ. ಸ್ವಾಭಾವಿಕವಾಗಿ ಪ್ರತಿನಿತ್ಯ ಅವರೊಡನೆ ನಮ್ಮ, ನಮ್ಮೊಡನೆ ಅವರ ಒಡನಾಟ ಸಾಗುತ್ತದೆಯಾದ್ದರಿಂದ ಒಂದಷ್ಟು ಉರ್ದು ನಮಗೂ ಬಂದಿದೆ.
ಹಾಗೆಯೇ ಇದರ ಪ್ರಭಾವ ಅವರ ಕನ್ನಡದ ಮೇಲೂ ಆಗಿ ” ಸಾಬರ ಕನ್ನಡ ” ಎಂದೇ ಒಂದು ಪ್ರಕಾರ ಚಾಲ್ತಿಯಲ್ಲಿರುವುದು ನಮಗೆಲ್ಲಾ ತಿಳಿದಿದುದೆ ಆಗಿದೆ.
ಅಪ್ಪನಿಗೆ ಸಾಬರ ಭಾಷೆ ತುಂಬಾ ಚೆನ್ನಾಗಿ ಬರುತ್ತಿತ್ತು. ಕಾರಣ ಅಪ್ಪ ಹುಟ್ಟಿ ಬೆಳೆದದ್ದು ಹೊರಪೇಟೆ ಅರಳೇಪೇಟೆಯಾದ್ದರಿಂದ ಅವರ ಹಲವು ಗೆಳೆಯರು ಉರ್ದು ಭಾಷಿಕರು. ಚಿಕ್ಕಂದಿನಿಂದಲೇ ಅಪ್ಪ ಅವರೊಡನೆ ಒಡನಾಟ ಇಟ್ಟುಕೊಂಡಿದ್ದರಿಂದ ಸರಾಗವಾಗಿ ಉರ್ದು ಮಾತನಾಡುತ್ತಿದ್ದರು. ಇದೇ ಕಾರಣಕ್ಕೆ ಅವರನ್ನು ಅವರ ಸರೀಕರಾದ ಹಿಂದೂ ಗೆಳೆಯರು ” ದೋ ಕೆಜಿ ” ಅನ್ನುತ್ತಿದ್ದರು. ಅಂದರೆ ಒಂದು ಕೆಜಿ ಹಿಂದೂ ಮತ್ತೊಂದು ಕೆಜಿ ಮುಸ್ಲಿಂ ! ಅಪ್ಪನಿಗೆ ಉರ್ದುವಿನಲ್ಲಿ ಯಾವಮಟ್ಟಿಗಿನ ಪ್ರೌಢಿಮೆ ಇತ್ತೆಂದರೆ ಮುಸ್ಲಿಂನವರೇ ಅನೇಕ ಮಂದಿ ಬೆರಗಾಗುತ್ತಿದ್ದರು.
“ಅಣ್ಣ ತುಮೆಹ್ ಕೈಸಾ ಸೀಕ್ ದಾಲ್ಯ? ” ಅಂತ ಆಗಾಗ ಕೇಳುತ್ತಲೇ ಇದ್ದರು. ಇದರ ಜೊತೆಗೆ ಅಪ್ಪ ತೊಡುತ್ತಿದ್ದ ಬಿಳಿ ಪ್ಯಾಂಟು ಬಿಳಿ ಶರ್ಟ್ ಬಿಡುತ್ತಿದ್ದ ಗಡ್ಡ ಅವರನ್ನು ಕೆಲವರ ಪಾಲಿಗೆ ಮುಸ್ಲಿಮ್ಮ್ ಆಗಿಸಿಬಿಟ್ಟಿತ್ತು.
ಅಪ್ಪ ಅಂಗಡಿಯ ಸಾಮಾನು ಸರಂಜಾಮು ತರಲು ಬೆಂಗಳೂರಿಗೆ ಹೋಗುತ್ತಿದ್ದದ್ದು ವಾಡಿಕೆ. ಅವತ್ತು ಹಾಗೆಯೇ ಆಯಿತು. ದೊಡ್ಡದೊಂದು ಗಟ್ಟಿಯಾದ ಪ್ಲಾಸ್ಟಿಕ್ ಬ್ಯಾಗ್ ಹಿಡಿದು ಹೊರಟರು. ಗಡ್ಡ ಮಾಡಿರಲಿಲ್ಲ. ಬಿಳಿ ಶರ್ಟ್ ಬಿಳಿ ಪ್ಯಾಂಟು ತೊಟ್ಟಿದ್ದರು. ಬೆಂಗಳೂರಿನ ಚಿಕ್ಕಪೇಟೆ, ತರಗುಪೇಟೆ, ಮಾಮೂಲುಪೇಟೆ, ಸುಲ್ತಾನಪೇಟೆ ಅವಿನ್ಯೂ ರಸ್ತೆಗಳಲ್ಲಿ ಖರೀದಿ ಮುಗಿದಿತ್ತು.

ಅತ್ಯಂತ ತ್ವರಿತವಾಗಿ ಬೇಕಿದ್ದ ಸಾಮಾನನ್ನು ಬ್ಯಾಗಿಗೆ ಹಾಕಿಕೊಂಡು ಉಳಿದ ಸರಕನ್ನು ಲಾರಿ ಆಫೀಸಿನಲ್ಲಿ ಬಿಟ್ಟು ವಿಳಾಸ ಬರೆದು ಮೆಜೆಸ್ಟಿಕ್ ಗೆ ಬಂದರು. ಬಂದೊಡನೆಯೇ ನಾಲ್ಕನೇ ಪ್ಲಾಟ್ಫಾರ್ಮ್ ನಲ್ಲಿ ತುಮಕೂರಿನ ಬಸ್ಸು ಸಿಕ್ಕಿತು ಹತ್ತಿದರು. ಬಸ್ಸು ತುಂಬಿತ್ತು. ಹಿಂದೆ ಮೂರು ಸೀಟಿರುವ ಬಳಿ ಒಂದು ಖಾಲಿ ಇತ್ತು. ಅಲ್ಲಿ ಕುಳಿತರು. ಅಪ್ಪನ ಪಕ್ಕಕ್ಕೆ ಸಾಬರೊಬ್ಬರು ಕುಳಿತಿದ್ದರು. ಅಪ್ಪನನ್ನು ನೋಡಿದೊಡನೆ ” ಆವ್ ಜೀ ಬೈಟೊ ” ಅಂದರು. ಅಪ್ಪನಿಗೆ ಅವರ ಪರಿಚಯವಿರಲಿಲ್ಲ. ಕುಳಿತೊಡನೆ ಪ್ರಶ್ನೆಗಳ ಸುರಿಮಳೆ.
” ಕ್ಯಾ ತುಮಕೂರ್? ”
” ಹಾಂ ” ಅಂದರು ಅಪ್ಪ.
” ಕಹಾ ಭೀ? ”
” ಬಾರ್ ಲೈನ್ ರೋಡ್ “
” ಕ್ಯಾ ಕರ್ತಾ ಸೊ? ”
” ಮೇರಾ ಜಡಿಬೂಟಿಕಾ ದುಕಾನ್ ಹೈ ಸೊ ”
” ಮಾಷಲ್ಲಾಹ್ !” ಎಂದರು ಸಾಬ್ರು.
ಬಸ್ಸು ಹೊರಟಿತು ಅಪ್ಪ ಮತ್ತು ಸಾಬರ ಮಾತು ಹೀಗೆ ಲೋಕಾಭಿರಾಮವಾಗಿ ಸಾಗಿತ್ತು. ಅಪ್ಪನ ವಾಚಾಳಿತನ, ಉಡುಗೆ ಮತ್ತು ಉರ್ದು ಮಾತನಾಡುವ ರೀತಿ ಯಾರಿಗೂ ಅವರು ಮುಸ್ಲಿಂ ಅಲ್ಲ ಅನ್ನಿಸುತ್ತಿರಲಿಲ್ಲ.
ಹೀಗೆ ಮಾತನಾಡುವಾಗ ಅಪ್ಪ ಸಾಬರನ್ನು ಕುರಿತು
” ತುಮ್ ನಾ ಕ್ಯಾ ಕರ್ತಾ ಸೊ? ” ಎಂದು ಕೇಳಿದರು.
ಅದಕ್ಕೆ ಸಾಬ್ರು ” ಮೇರಾ ಕ್ಯಾತ್ಸಂದ್ರ ಮೇಯ್ನ್ ಮಟನ್ ಕಾ ದುಕಾನ್ ಹೈ ಭೀ ” ಅಂದರಂತೆ.
ಇನ್ನು ಮುಂದೆ ಹೋಗಿ ” ದೆಕ್ ಭೀ ತುಮಕೂರ್ ಮೇಯ್ನ್ ಏಕ್ ದುಕಾನ್ ಓಪನ್ ಕರ್ನ ಸೊ ಪಾರ್ಟ್ನರ್ ಶಿಪ್ ಮೇಯ್ನ್ ” ಅಂದರಂತೆ.
ಅದಕ್ಕೆ ಅಪ್ಪ ” ಪಾರ್ಟ್ನರ್ ಶಿಪ್ ಮೇಯ್ನ್ ಕರ್ ನಕ್ಕೋ ಬಾ ” ಅಂದರು.
ಸಾಬ್ರು ” ಕಯ್ಕು ” ಎಂದು ಕೇಳಿದರು.
ಅದಕ್ಕೆ ಅಪ್ಪ ” ಪಾರ್ಟ್ನರ್ ಶಿಪ್ನಲ್ಲಿ ನಂಬಿಕೆ ಬಹಳಾ ಮುಖ್ಯ ವ್ಯವಹಾರ ಸರಿದೂಗಲಿಲ್ಲ ಎಂದರೆ ಅನರ್ಥವಾಗಿ ಎಲ್ಲಾ ಹಾಳಾಗುತ್ತದೆ ” ಎಂದರಂತೆ.
ಅದಕ್ಕೆ ಸಾಬ್ರು ತಲೆಕೆಡಿಸಿ ಕೊಳ್ಳದೆ ” ದೇಖೊ ಭಾ ತುಮ್ನಾ ಹಾ ಬೊಲ್ಯಾ ತೋ ತುಮಕೂರ್ ಮೇಯ್ನ್ ಪಾರ್ಟ್ನರ್ ಶಿಪ್ ಮೇ ಮಟನ್ ಕಾ ದುಕಾನ್ ಖೋಲೆಂಗೆ ” ಅಂತ ಅಂದಕೂಡಲೇ ಅಪ್ಪ ಹೌಹಾರಿದ !
” ರೀ ಸಾಬ್ರೆ ನಾವು ತಿನ್ನ ಜಾತಿ ಅಲ್ಲ ಕಣ್ರೀ !” ಅಂದಾಗ ಸಾಬ್ರು ” ಅಲ್ಲ ಸಾಮಿ, ನಾನು ನಿಮ್ನಾ ಸಾಬ್ರು ಅನ್ಕೊಂಡಿದ್ದೆ. ಹಂಗೆ ಇದ್ದೀರಾ !” ಅಂದರಂತೆ.
ಅಪ್ಪಾ ನಕ್ಕು ತನ್ನ ‘ದೋ ಕೆಜಿ’ ಕಥೆಯನ್ನೆಲ್ಲ ಹೇಳಿದ ಮೇಲೆ ಸಾಬರೂ ನಕ್ಕರಂತೆ !






0 Comments