ದತ್ತು ಕುಲಕರ್ಣಿ
‘ಇಲ್ಲಿ ನೋಡಲಿಕ್ಕೆ ಏನಿದೆ ಅಂತ ಇಲ್ಲಿಗೆ ಕರೆದುಕೊಂಡು ಬಂದ್ಯೋ… ಇದೇನು ಪಿಕ್ ನಿಕ್ ಸ್ಪಾಟಾ? ಇಲ್ಲಾ ನಿಸರ್ಗ ಸೌಂದರ್ಯದ ಸ್ಥಳನಾ..? ಅಥವಾ ಐತಿಹಾಸಿಕವಾಗಿ ಮಹತ್ವದ ಸ್ಥಳನಾ? ಇದಕ್ಕೆ ಹತ್ತು ಡಾಲರ ಬೇರೆ ಕೇಡು.. ಈ ದೇಶದವರ ತಿಕ್ಕಲು ಬುದ್ಧಿ ನೋಡು. ಇದು ಗುಡ್ಡ ಅಂದರೆ ಗುಡ್ಡ ಸಹಿತ ಅಲ್ಲ. ದೊಡ್ಡ ದಿಬ್ಬ. ಇದನ್ನು ನೋಡಲಿಕ್ಕೆ ಹತ್ತು ಡಾಲರ ಕೀಳತಾ ಇದ್ದಾರೆ. ಇಂಥ ದರಿದ್ರ ದೇಶದಲ್ಲಿ ಹೀಗೆ ಆಗೋದು’ ಅಂತ ಪ್ರಶಾಂತ ತನ್ನ ಆಲಾಪವನ್ನು ಎಂದಿನಂತೆ ಶುರುವಿಟ್ಟುಕೊಂಡ.
“ಏ ನೀನು ಯಾರಿಗಾದರು ಏನಾದರು ಬೈಯ್ಯಿ. ಆದರೆ ಈ ಆಷ್ಟ್ರೆಲಿಯಾಕ್ಕೆ ಮಾತ್ರ ಬೈಯ್ಯಬೇಡ. ಅಲ್ಲವೋ ಈ ದೇಶವನ್ನು ನೋಡು. ಈ ಸ್ಥಳದಲ್ಲಿ ಮೂವತ್ತು ವರ್ಷಗಳ ಹಿಂದೆ ಒಂದು ಸಿನೆಮಾ ಶೂಟ್ ಮಾಡಿದ್ದರು. ಆ ಸಿನೆಮಾ ಅವಾಗಿನ ಕಾಲಕ್ಕೆ ಬಹಳ ಹಿಟ್ ಆಗಿತ್ತು. ಆವಾಗಿನಿಂದ ಈಸ್ಥಳವನ್ನು ಹಾಗೆಯೇ ಕಾಯ್ದುಕೊಂಡು ,ಉಳಿಸಿಕೊಂಡು ಈಗಿನವರಿಗೆ ತೋರಿಸುತ್ತಿದ್ದಾರೆ. ನೋಡು ಅಲ್ಲೇನೋ ಇನ್ಫಾರ್ಮೆಶನ್ ಆಫೀಸ್ ಇದೆ. ಅಲ್ಲಿ ಹೋದರೆ ಇನ್ನೂ ಹೆಚ್ಚಿನ ಮಾಹಿತಿ ಸಿಗಬಹುದು. ಅಲ್ಲೇ ಪಕ್ಕದಲ್ಲಿ ಟಾಯಿಲೆಟ್ ಮಾಡಿದ್ದಾರೆ…ಒಳಗಡೆಯಂತು ಕುಡಿಯುವ ನೀರು ಸಿಕ್ಕೆ ಸಿಗುತ್ತೆ. ಇಷ್ಟೆಲ್ಲಾ ಸೌಕರ್ಯಗಳನ್ನು ಇಂಥ ಜಾಗೆಯಲ್ಲಿ ಒದಗಿಸಿ ಜನರಿಗೆ ಎಷ್ಟು ಅನುಕೂಲ ಮಾಡಿದ್ದಾರೆ ನೋಡು.ಈ ದೇಶದವರಿಂದ ನಮ್ಮ ದೇಶದವರು ಕಲಿಯುವದು ಬಹಳಷ್ಟಿದೆಯೊ ..” ಎನ್ನುತ್ತಾ ಆನಂದ ತನ್ನ ಪ್ರತಿವಾದವನ್ನು ಮುಂದಿಟ್ಟ.
ಆಗ ಪ್ರಶಾಂತ “ಇತಿಹಾಸವೇ ಇಲ್ಲದ ಈ ದೇಶದಿಂದ ನಾವೇನು ಕಲಿಯುವದಿದೆಯೋ…” ಅಂದ ಕೂಡಲೇ ಅವರಿಬ್ಬರ ನಡುವೆ ಇಂಡಿಯಾ-ಆಷ್ಟ್ರೇಲಿಯ ನಡುವಿನ ಬಿರುಸಿನ ಕ್ರಿಕೆಟ್ ಮ್ಯಾಚ್ ನಂತೆ ವಾಕ್ಸಮರ ಎಂದಿನಂತೆಯೇ ಶುರುವಿಟ್ಟುಕೊಂಡಿತು.

ನಾನು ಆನಂದ ಮತ್ತು ಪ್ರಶಾಂತ ಈ ಆಷ್ಟ್ರೇಲಿಯಕ್ಕೆ ಎಂಬಿಎ ಮಾಡಬೇಕೆಂದು ಬಂದು ಎರಡು ವರ್ಷಗಳಾಗುತ್ತ ಬಂತು.ಸ್ವಿನಬರ್ನ್ ಯುನಿವರ್ಸಿಟಿಯ ಓಪನ್ ಡೇಯಂದು ಒಬ್ಬರಿಗೊಬ್ಬರು ಪರಿಚಯವಾದ ನಾವು ಮೂವರೂ ಜನ ಕನ್ನಡದವರು ಎಂಬ ಕಾರಣಕ್ಕಾಗಿ ಒಂದೇ ಮನೆಯನ್ನು ಬಾಡಿಗೆ ಹಿಡಿದು ನಮ್ಮ ಯುನಿವರ್ಸಿಟಿಯ ಜೀವನವನ್ನು ಪ್ರಾರಂಭಿಸಿದೆವು. ಯುನಿವೆರ್ಸಿಟಿಯ ಕ್ಲಾಸ್ ಗಳು, ಅಸೈನ್ಮೆಂಟ್ ಗಳು, ಪೆಟ್ರೋಲ್ ಬಂಕ್, ರೆಸ್ಟೋರಂಟ್ ಮತ್ತು ಕಾಲಸೆಂಟರ್ ಗಳಲ್ಲಿ ಮಾಡುವ ಪಾರ್ಟ್ ಟೈಮ್ ಜಾಬ್ ಗಳಲ್ಲಿ ದಿನಗಳು ಓಡುತ್ತಿದ್ದವು. ಬಿಡುವಿದ್ದಾಗ ಎಲ್ಲರು ಸೇರಿ ಹತ್ತಿರದ ಪ್ರೇಕ್ಷಣಿಯ ಸ್ಥಳಗಳನ್ನು ನೋಡಲು ಹೋಗುತ್ತಿದ್ದೆವು. ದುಡ್ಡು ಸೇರಿದಾಗ ವಾರಾಂತ್ಯದಲ್ಲಿ ನೈಟ್ ಕ್ಲಬ್ ಗಳಿಗೆ ಹೋಗಿ ಇಲ್ಲಿನ ಬೀರ್ ಸಂಸ್ಕೃತಿ ಯನ್ನು ಪರಿಚಯ ಮಾಡಿಕೊಂಡೆವು. ದುಡ್ಡೇ ಇಲ್ಲದ್ದಾಗ ರೂಮಿನಲ್ಲೇ ಕುಳಿತು ಚೆನಲ್ ಸೆವೆನ್ ಅಥವಾ ಟೆನ್ ದಲ್ಲಿ ದಿನವಿಡೀ ಬರುವ ಫೂಟಿ ಅಥವಾ ರಗ್ಬಿ ಯನ್ನು ನೋಡಿ ದಿನ ದೂಡುತ್ತಿದ್ದೆವು.
ಹಾಗೆ ನೋಡಿದರೆ ಕನ್ನಡಿಗರೆಂಬುದೊಂದನ್ನು ಬಿಟ್ಟು ನಮ್ಮ ನಡುವೆ ಹೆಚ್ಚಿನ ಸಾಮ್ಯತೆಗಳೇನು ಇರಲಿಲ್ಲ. ಆಷ್ಟ್ರೇಲಿಯಕ್ಕೆ ಬಂದ ಕೂಡಲೆ ತನ್ನ ಜೀವನ ಧನ್ಯವಾಯಿತೆಂಬಂತೆ ವರ್ತಿಸುವ ಆನಂದ, ಇಲ್ಲಿ ಬಂದು ಎರಡು ವರ್ಷವಾದರೂ ಇಲ್ಲಿನ ಎಲ್ಲದಲ್ಲಿಯೂ ತಪ್ಪನ್ನು ಹುಡುಕುತ್ತಾ ಭಾರತದ ಸಂಸ್ಕೃತಿಯ ಹರಿಕಾರ ತಾನೇ ಎನ್ನುವಂತೆ ವರ್ತಿಸುವ ಪ್ರಶಾಂತ, ಇವರಿಬ್ಬರ ನಡುವೆ ಎಲ್ಲಿ ಹೇಗೆ ಅನುಕೂಲವಾಗುತ್ತೋ ಹಾಗೆ ಇದ್ದು ಯಾವದಕ್ಕೂ ತಲೆ ಕೆಡಿಸಿಕೊಳ್ಳದ ನಾನು.ಆನಂದನಿಗಂತೂ ಬೆಳಿಗ್ಗೆ ಎದ್ದು ಕೆಲ್ಲಿ ಮನೋಗ್ ಳ ‘ಏ ಬಾಯ್-ಕಾಂಟ್ ಗೆಟ್ ಯು ಆವುಟ್ ಆಪ್ ಮಾಯ ಹೆಡ್ ‘ ಹಾಡು ಕೇಳಿದರೆನೆ ಆ ಬೆಳಗು ಬೆಳಗೆನಿಸುತ್ತದೆ. ಪ್ರಶಾಂತನಿಗಂತೂ ಎಮ್ಎಸ್ ಸುಭಲಕ್ಷ್ಮಿ ಸುಪ್ರಭಾತದ ಮೂಲಕವೆ ಅವನನ್ನು ಎಬ್ಬಿಸಬೇಕು. ಅವನು ತನ್ನ ಸೌಂಡ ಸಿಸ್ಟಮ್ ದಲ್ಲಿ ಅದನ್ನೆ ಅಲಾರಂ ಆಗಿ ಇಟ್ಟುಕೊಂಡಿದ್ದಾನೆ. ನನಗೆ ಧಾರವಾಡ ರೇಡಿಯೋ ಸ್ಟೇಶನ್ದಿಂದ ಬರುವ ಶಿವಮೊಗ್ಗ ಸುಬ್ಬಣ್ಣ, ಹುಕ್ಕೇರಿ ಬಾಳಪ್ಪ ಅವರ ಹಾಡು ಒಂದೆ ಅಥವಾ ಇಲ್ಲಿಯ ಎಫ್ಎಂದಲ್ಲಿ ಬರುವ ಜಾನ್ ಫಾರ್ನ್ ಹ್ಯಾಮ್ ಅಥವಾ ಜಾನ್ ಈಲ್ಟನ್ ಹಾಡು ಒಂದೆ. ಎಲ್ಲ ಹಾಡಿಗೂ ನನ್ನ ಕಿವಿ ತೆರೆದುಕೊಳ್ಳುತ್ತವೆ. ಅಥವಾ ಏನೂ ಇಲ್ಲದಿದ್ದರೆ ನನ್ನ ಗೊರಕೆಯನ್ನೆ ನನ್ನ ಕಿವಿಗಳು ಆಸ್ವಾದಿಸುತ್ತವೆ.
‘ಈ ದಿಬ್ಬದ ಮೇಲೆ ಒಂದು ಹ್ಯಾಂಗಿಂಗ್ ರಾಕ್ ಇದೆಯೆಂತೆ. ಅದು ಎಲ್ಲಿದೆ ಅಂತ ಮೊದಲು ನೋಡೊಣು ಬನ್ರೋ. ಅದರ ಮುಂದೆ ಒಂದು ಫೋಟೊ ಹೊಡಿಸಿಕೊಂಡು ಫೇಸ್ಬುಕ್ಕಿನಲ್ಲಿ ಹಾಕಿದರೆ ಇಲ್ಲಿಗೆ ಬಂದದ್ದು ಸ್ವಲ್ಪಾದ್ರೂ ಸಾರ್ಥಕ ಆಗುತ್ತೆ.’
ಅಂತ ಪ್ರಶಾಂತ ಮುಂದೆ ಹೋದ. ನಾವಿಬ್ಬರೂ ಅವನನ್ನು ಅನುಸರಿಸಿದೆವು.
ಅಲ್ಲೆಲ್ಲಾ ಹುಡುಕಿದರೂ ನಮಗೆ ಆ ತರದ ಬಂಡೆ ಕಾಣಲು ಸಿಗಲಿಲ್ಲ. ಪ್ರಶಾಂತನಿಗೆ ಇದರಿಂದ ಮತ್ತಷ್ಟು ಸಿಟ್ಟು ಬಂತು.
‘ಸಮುದ್ರಕ್ಕೆ ಹೋಗಿ ನೀರು ಹುಡುಕಿದ ಹಾಗಾಯ್ತು. ಅಂತ ಜಾಗಕ್ಕೆ ಕರೆದುಕೊಂಡು ಬಂದಿದಿಯಾ..’ ಅಂತ ಅಂದ.
ಲೋ ಹ್ಯಾಂಗಿಂಗ ರಾಕ ಅಂದ ತಕ್ಷಣ ಅಲ್ಲೇನು ತೂಗು ಬಂಡೆ ಇರಲೇಬೇಕಾ..? ನಿನ್ನ ಇಂಡಿಯಾದಲ್ಲಿ.., ಅಂದ್ರೆ ನಮ್ಮೂರ ಹತ್ತಿರ ಕರಡಿಗುಡ್ದ(೩) ಅಂತ ಹಳ್ಳಿ ಇದೆ. ಅಲ್ಲಿ ಕರಡಿನೂ ಇಲ್ಲಾ…. ಗುಡ್ಡನೂ ಇಲ್ಲಾ… ಹಾಗೇನೆ ಇದು ಕೂಡ. ಏನೊಒಂದು ಹೆಸರು ಅಂತ ಇಟ್ಟಿದಾರೆ. ಇಲ್ಲಿ ಬಹಳಷ್ಟು ಊರುಗಳ ಹೆಸರುಗಳು ಇಂಗ್ಲೆಂಡ ಅಥವಾ ಯೂರೋಪಿನ ಊರುಗಳ ಹೆಸರುಗಳೇ ಆಗಿವೆ. ಸುಮ್ಮನೆ ಎಲ್ಲದರಲ್ಲಿ ತಪ್ಪು ಹುಡುಕೋದು ನಿನಗೆ ರೂಡಿ ಆಗಿಬಿಟ್ಟಿದೆ. ಅಂತ ಆನಂದ ತನ್ನ ಪ್ರತಿವಾದವನ್ನು ಮಂಡಿಸಿದ.
‘ಅಲ್ಲೋ ನಿಮ್ಮೂರ ಹತ್ತಿರ ಇರೋ ಕರಡಿ ಗುಡ್ಡ ನನಗೂ ಗೊತ್ತು. ಅಲ್ಲಿ ಬಹಳ ವರ್ಷಗಳ ಹಿಂದೆ ಕಾಡು ಇತ್ತಂತೆ, ಗುಡ್ಡ –ಪೊಟರೆಗಳೂ ಇದ್ದುವಂತೆ….ಹಾಗು ಕರಡಿಗಳು ಇದ್ದುವಂತೆ… ಅದಕ್ಕೆ ಆ ಊರಿಗೆ ಕರಡಿಗುಡ್ದ ಅಂತ ಹೆಸರು ಬಂದಿರೋದು. ಸುಳ್ಳು ಸುಳ್ಳು ಆ ಹೆಸರು ಕರೆಯಲು ಜನರಿಗೇನು ತಲೆ ಕೆಟ್ಟಿದೆಯಾ..? ಇತಿಹಾಸ ಅಂದ್ರೆ ಪುಸ್ತಕದಲ್ಲಿ ಬರೆದಿದ್ದಲ್ಲ. ತಲತಲಾಂತರದಿಂದ ಇದ್ದದ್ದು. ತಿಳಕೊ’ ಅಂತ ಪ್ರಶಾಂತ ತನ್ನ ವಿವರಣೆ ಕೊಟ್ಟ.
ಅಷ್ಟರಲ್ಲಿ ನಾವೆಲ್ಲ ನಡೆಯುತ್ತಾ ಇನ್ಫಾರ್ಮೆಶನ್ ಸೆಂಟರ್ ಹತ್ತಿರ ಬಂದಿದ್ದೆವು. ನಾನು ಒಳ ನಡೆದು ಅಲ್ಲಿದ ಸ್ವಾಗತ ಕಾರಿಣಿಯನ್ನು ‘ಎಕ್ಸ್ ಕ್ಯೂಸ್ ಮಿ, ವೇರ್ ಇಸ್ ಹ್ಯಾಂಗಿಂಗ್ ರಾಕ್ ಹಿಯರ್.. ವಿ ಕುಡಂಟ ಸಿ ಇಟ್.’ ಅಂತ ಅಂದೆ.
ಅವಳು ‘ಅಯ್ಯೊ ನಿಮಗೆ ಹ್ಯಾಂಗಿಂಗ್ ರಾಕ್ ಲೊಕೇಟ್ ಮಾಡಲಿಕ್ಕೆ ಆಗಲಿಲ್ಲವಾ…ಪರವಾಗಿಲ್ಲ ಬಹಳ ಜನರಿಗೆ ಹೀಗೆ ಆಗುತ್ತೆ. ಅದು ನೀವು ಹೀಗೆ ಇಲ್ಲಿ ಎಡಗಡೆ ಇರುವ ಪಾಥವೆದಲ್ಲಿ ಮೇಲೆ ಏರಿ ಆ ಕಡೆಯಿಂದ ಕೆಳಗಿಳಿಯ ಬೇಕಾದರೆ ಕಾಣಿಸುತ್ತೆ. ಅದೇನು ದೊಡ್ಡ ಬಂಡೆ ಅಲ್ಲ. ಎರಡು ಆಳೆತ್ತರದ ಬಂಡೆಗಳ ಮೇಲೆ ಒಂದು ಹಾಸುಗಲ್ಲು ಅಡ್ಡ ಕುಳಿತಿದೆ. ಅದಕ್ಕೆ ಹ್ಯಾಂಗಿಂಗ್ ರಾಕ್ ಅಂತ ಕರಿತಾರೆ. ಇಲ್ಲಿ ಬನ್ನಿ ಅದರ ಫೋಟೊ ತೋರಿಸ್ತೀನಿ.’ ಅಂದು ಗೋಡೆ ಮೇಲಿನ ಫೋಟೊ ತೋರಿಸಿದಳು. ಹಾಗೆ ಮುಂದುವರಿದು ‘ಈ ಸ್ಥಳ ಆ ಹ್ಯಾಂಗಿಂಗ್ ರಾಕ್ ಗಿಂತ ಸಿನೆಮಾ –ಪಿಕ್ ನಿಕ್ ಯಾಟ್ ಹ್ಯಾಂಗಿಂಗ್ ರಾಕ್ ಶೂಟ ಮಾಡಿದ ಸ್ಥಳ ಅಂತಾನೆ ಪ್ರಸಿದ್ಧ. ಆ ಸಿನೆಮಾದ ಬಗೆಗಿನ ವಿವರಗಳು, ಕೆಲ ಫೋಟೊ ಗಳನ್ನು ಗೋಡೆಗೆ ಅಂಟಿಸಲಾಗಿದೆ. ನೀವೆ ನೋಡಿ ‘ ಅಂದಳು.
ನಾನು ಅಲ್ಲಿರುವ ಫೋಟೊಗಳನ್ನು ನೋಡುತ್ತಿರಬೇಕಾದರೆ ತಕ್ಷಣ ಈ ಸಿನೆಮಾವನ್ನು ನೋಡಿದ ನೆನಪಾಯಿತು. ಅವತ್ತು ನಾನು ಪೆಟ್ರೋಲ್ ಬಂಕನಲ್ಲಿ ಸೆಕೆಂಡ್ ಶಿಫ್ಟ್ ಮುಗಿಸಿ ಮನೆಗೆ ಬಂದಾಗ ಎಸ್ಬಿಎಸ್ ಚೆನಲ್ ನಲ್ಲಿ ಈ ಸಿನೆಮಾ ಬರುತ್ತಿತ್ತು.
ನಿದ್ದೆ ಬರ್ತಾ ಇಲ್ಲವಾದದ್ದರಿಂದ ಸಿನೆಮಾ ಬೋರ್ ಆದರೂ ಹಾಗೆ ಕುಳಿತು ನೋಡಿದೆ. ಸಿನೆಮಾದಲ್ಲಿ ಒಂದು ವಸತಿ ಶಾಲೆಯ ಹುಡುಗಿಯರು ಈ ಹ್ಯಾಂಗಿಂಗ ರಾಕ್ ಗೆ ಒಂದು ವ್ಯಾಲಂಟೈನ್ ದಿನದಂದು ಪಿಕ್ನಿಕ್ ಅಂತ ಬಂದಿರುತ್ತಾರೆ. ಹಾಗೆ ಬಂದವರೆಲ್ಲ ಬೆಟ್ಟದ ಕೆಳಗೆ ಉಟ ಮಾಡಿ ವಿಶ್ರಾಂತಿ ತೆಗೆದುಕೊಳ್ಳುವಾಗ ನಾಲ್ಕು ಜನ ಹುಡಗಿಯರು ಬೆಟ್ಟದ ಮೇಲೆ ಹೋಗುತ್ತಾರೆ. ಆವಾಗ ಈಗಿನ ಹಾಗೆ ಮುಸ್ಸಂಜೆ ಆಗಿರುತ್ತದೆ. ಹಾಗೆ ಮೇಲೆ ಹೋದ ಹುಡಗಿಯರು ಹಾಗು ಅವರನ್ನು ನೋಡಲು ಹೋದ ಒಬ್ಬ ಟೀಚರ್ ಯಾವದೇ ಸುಳಿವು ಕೊಡದೆ ಕಾಣೆಯಾಗುತ್ತಾರೆ. ಆದರೆ ಅದರಲ್ಲಿ ಒಬ್ಬ ಹುಡುಗಿ ಚೀರುತ್ತಾ ಮಾತನಾಡದ ಸ್ಥಿತಿಯಲ್ಲಿ ವಾಪಸ್ಸು ಓಡಿ ಬರುತ್ತಾಳೆ. ಅಲ್ಲಿ ಗುಡ್ಡದ ಮೇಲೆ ಏನಾಯಿತು. ಆ ಹುಡುಗಿಯರು ಹೇಗೆ/ ಯಾಕೆ ಕಾಣೆಯಾದರು… ಎನ್ನುವದನ್ನು ತೋರಿಸದೆ ಸಿನೆಮಾ ತನ್ನ ಕೌತಕವನ್ನು ಉಳಿಸಿಕೊಂಡಿತ್ತು. ಮರುದಿನ ಪೊಲೀಸರು ಆ ಸಣ್ಣ ಬೆಟ್ಟವನ್ನು ಜಾಲಾಡಿದರೂ ಯಾರು ಸಿಗುವದಿಲ್ಲ. ಆದರೆ ಅದರ ಮರುದಿನ ಹುಡುಗನೊಬ್ಬ ತನ್ನ ಗೆಳೆಯ ಎಷ್ಟೇ ಬೇಡವೆಂದರೂ ಆ ಹುಡುಗಿಯರನ್ನು ಹುಡುಕಲು ಹೋಗುತ್ತಾನೆ.ಈ ಹುಡುಗ ರಾತ್ರಿ ಕಳೆದು ಮರು ದಿನ ಬೆಳೆಗ್ಗೆಯಾದರೂ ವಾಪಸು ಬಂದಿರುವದಿಲ್ಲ. ಆಗ ಗಾಬರಿಯಾದ ಅವನ ಗೆಳೆಯ ಪೊಲೀಸರೊಂದಿಗೆ ಅಲ್ಲಿಗೆ ಹೋಗುತ್ತಾನೆ. ಅಲ್ಲಿ ಈ ಹುಡುಗ ಎಚ್ಚರ ತಪ್ಪಿ ಬಿದ್ದಿರುತ್ತಾನೆ. ಪೊಲೀಸರು ಅವನನ್ನು ಕೆಳಗೆ ಸಾಗಿಸ ಬೇಕಾದರೆ ಅವನು ತನ್ನ ಅರೆ ಎಚ್ಚರ ಸ್ಥಿತಿಯಲ್ಲಿ ತನ್ನ ಕೈಯಲ್ಲಿರುವ ಹುಡುಗಿಯರ ಲಂಗದ ತುಂಡನ್ನು ಈ ಗೆಳೆಯನಿಗೆ ಕೊಡುತ್ತಾನೆ. ಅದನ್ನು ತೆಗೆದುಕೊಂಡು ಈ ಗೆಳೆಯ ಮತ್ತೆ ಮೇಲೆ ಹೋದಾಗ ಮತ್ತೊಬ್ಬ ಹುಡುಗಿಯು ಎಚ್ಚರ ತಪ್ಪಿ ಬಿದ್ದಿರುವದು ಕಂಡುಬರುತ್ತದೆ. ಆದರೆ ಅವಳಿಗೆ ಜ್ಞಾಪಕ ಶಕ್ತಿಯೇ ಹೋಗಿರುತ್ತದೆ.
ಮುಂದೆ ಉರವರೆಲ್ಲ ಈ ಘಟನೆಯ ಬಗ್ಗೆ ತಮ್ಮದೇ ವಿಶ್ಲೇಷಣೆಯಲ್ಲಿ ತೊಡಗುತ್ತಾರೆ. ಇಷ್ಟೆ ಅಲ್ಲದೆ ಮತ್ತೊಬ್ಬ ಹುಡುಗಿ ( ಇವಳನ್ನು ಆ ಘಟನೆ ನಡೆದ ದಿನ ಆ ಸ್ಟ್ರಿಕ್ಟ್ ಪ್ರಿನ್ಸಿಪಾಲ್ ಪಿಕನಿಕ್ ಗೆ ಹೋಗಲು ಬಿಟ್ಟಿರುವದಿಲ್ಲ.) ಬೇರೆ ಕಾರಣಕ್ಕೋಸ್ಕರ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇಷ್ಟೆಲ್ಲ ಆದ ಮೇಲೆ ಪಾಲಕರೆಲ್ಲ ಆ ವಸತಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವದಿಲ್ಲವೆಂದು ಪ್ರಿನ್ಸಿಪಾಲ್ ಗೆ ಗೊತ್ತಾಗುತ್ತದೆ. ಕೊನೆಗೆ ಆ ಪ್ರಿಸ್ನಿಪಾಲಳೂ ಆತ್ಮಹತ್ಯೆ ಮಾಡಿ ಕೊಳ್ಳುತ್ತಾಳೆ.
ಇಷ್ಟೆಲ್ಲ ಅಸಂಗತ ಘಟನೆಗಳು ಮಿಸ್ಟರಿ ಹಾಗೆ ಇದ್ದರೂ, ನಿಜವಾಗಿ ನಡೆದ ಘಟನೆಗಳೆನೊ ಎನ್ನುವಂತೆ ತೋರಿಸಿ , ನಿಜ ಸಂಗತಿ ಏನು ಎನ್ನುವದನ್ನು ಹೇಳದೆ ಸಿನೆಮಾ ಸಕ್ಸೆಸ್ ಆಗಿತ್ತು ಎನಿಸುತ್ತದೆ.
ಆನಂದ ಮತ್ತು ಪ್ರಶಾಂತ ಆ ಸಿನೆಮಾದ ಸ್ಟಿಲ್ ಗಳನ್ನು ತಮ್ಮ ವಾದ-ವಿವಾದ ಬಿಟ್ಟು ನೋಡುತ್ತಿದ್ದರು. ಆ ದೊಡ್ಡ ಹಾಲನಲ್ಲಿ ಈ ಫೋಟೊ ಸ್ಟಿಲ್ ಗಳೊಂದಿಗೆ ಹ್ಯಾಂಗಿಂಗ್ ರಾಕ್ ನ ಟಿ-ಶರ್ಟ್ಗಳು, ಗ್ರೀಟಿಂಗ್ ಕಾರ್ಡಗಳು, ಕೀಚೈನ್ ಗಳು ಮತ್ತು ಇನ್ನು ಹಲವಾರು ವಸ್ತುಗಳನ್ನು ಮಾರಾಟಕ್ಕಿದ್ದರು. ನಾನು ಅವುಗಳ ಮೇಲೆ ಕಣ್ಣಾಡಿಸುತ್ತಿರಬೇಕಾದರೆ ಸಹಾಯಕಿ ಬಂದು ನಿಮಗೇನಾದರು ಸಹಾಯ ಬೇಕಾ ಎಂದು ಕೇಳಿದಳು. ನಾನು ಏನೂ ಬೇಡ ಎಂದೆ.
ಅಷ್ಟರಲ್ಲಿ ಪ್ರಶಾಂತ ನನ್ನನ್ನು ಕರೆದು ಒಂದು ಪುಸ್ತಕ ತೋರಿಸಿದ “ಈ ಸಿನೆಮಾ ಕಾದಂಬರಿ ಆಧಾರಿತಾನೊ… ಪುಸ್ತಕದ ಹೆಸರು ಅದೇ ಪಿಕನಿಕ್ ಯಾಟ್ ಹ್ಯಾಂಗಿಂಗ್ ರಾಕ್(೪) ಅಂತ. ಬರೆದವಳು ಜೋನ್ ಲಿಂಡ್ಸೆ(೫). ಆಸ್ಟ್ರೇಲಿಯನ್ ಕಾದಂಬರಿಗಾರ್ತಿ. ಇಪ್ಪತ್ತೊಂಬತ್ತು ಡಾಲರು. ಆದರು ತೊಗೊತೇನೆ.ಇದನ್ನು ನಾನು ಓದಲೇ ಬೇಕು” ಅಂದು ಅದನ್ನು ತೊಗೊಂಡ.
ಇಷ್ಟೆಲ್ಲಾ ಆಗುವಷ್ಟರಲ್ಲಿ ನಾಲ್ಕೂವರೆ ಆಗುತ್ತಾ ಬಂತು. ನಾನು ಇಬ್ಬರಿಗೂ ಕೂಗಿ “ಆ ಹ್ಯಾಂಗಿಂಗ್ ರಾಕ್ ಎಲ್ಲಿದೆ ಅಂತ ನೋಡಿಕೊಂಡು ಹೋಗೋಣ ಬನ್ರೋ…. ಇಲ್ಲಿಗೆ ಬಂದೂ ಹ್ಯಾಂಗಿಂಗ್ ರಾಕ್ ನೋಡಿಲ್ಲಾ ಅಂದ್ರ ಅದೇನೋ ಅಂತಾರಲ್ಲಾ -ಸಿದ್ಧ ಕವಲೂರಿಗೆ ಹೋಗಿ ಬಂದಂಗ- ಹಂಗ ಆಗಬಾರದು.ಬೇಗ ಬನ್ರೋ. “ ಅಂದೆ.
ಗುಡ್ಡದ ಆ ಕಡೆಗೆ ಏರಿ ಹೋದೆವು. ಆಗಲೇ ಮುಸ್ಸಂಜೆ ಗುಡ್ಡದೊಂದಿಗೆ ಇಡಿ ಭೂಮಿಯನ್ನು ಅಕ್ರಮಿಸುತ್ತಾ ಇತ್ತು. ಗುಡ್ಡದ ಮೇಲಂತೂ ನಾವಷ್ಟೆ ಇದ್ದೆವು. ಇಂಥ ಜಾಗಕ್ಕೆ ಈ ಹೊತ್ತಿನಲ್ಲಿ ಯಾರು ಬರುತ್ತಾರೊ ಇಲ್ಲವೊ ಅನ್ನಿಸತೊಡಗಿತು. ಹಾಗೆ ಮುಂದೆ ಹೋಗುತ್ತಿರಬೇಕಾದರೆ ಎದುರಿಗೆ ಒಂದು ದೊಡ್ಡ ಬಂಡೆ ಕಾಣಿಸಿತು. ತಕ್ಷಣ ನನಗೆ ಸಿನೆಮಾ ನೆನಪಾಯಿತು. ಆ ಸಿನೆಮಾದಲ್ಲಿ ಎಲ್ಲ ಹುಡಿಗಿಯರು ಮಾಯವಾಗುವದಕ್ಕಿಂತ ಮೊದಲು ಇದೆ ಬಂಡೆ ಎದುರಿಗೆ ಕುಳಿತು ದಣಿವಾರಿಸಿಕೊಳ್ಳುತ್ತಿರುತ್ತಾರೆ. ಆಮೇಲೆ ಅವರಿಗೆ ಒಂದು ತರಹದ ಮಂಪರು ಆವರಿಸಿಕೊಳ್ಳುತ್ತದೆ. ಸ್ವಲ್ಪ ಹೊತ್ತು ಹಾಗೆ ಒರಗಿ ಕೊಂಡಿದ್ದ ಹುಡುಗಿಯರಲ್ಲಿ ಮೂವರು ಹುಡುಗಿಯರು ಇದೆ ಬಂಡೆಯ ಪಕ್ಕಕ್ಕಿರುವ ಪೊಟರೆಯೊಳಗೆ ಹೋಗುತ್ತಾರೆ.ನಾಲ್ಕನೆಯ ಹುಡುಗಿ ಚೀರುತ್ತಾ ಕೆಳಗೆ ಓಡಿಬರುತ್ತಾಳೆ.
ಆನಂದ ತನ್ನ ಮೊಬೈಲ್ ಹೊರತೆಗೆದು “ಏ ಇಲ್ಲಿ ನಿಂತಕೊಳ್ಳ್ರೋ..ನಿಮ್ಮಿಬ್ಬರದು ಒಂದು ಫೋಟೊ ತೆಗಿತೆನಿ” ಅಂದು ಗುಡ್ಡದ ಕಡೆಗೆ ಜೂಮ್ ಮಾಡತೊಡಗಿದ. ಅಷ್ಟರಲ್ಲಿ ಇಬ್ಬರು ಕೆಂಪು ಮೋತಿಯ ಹುಡುಗರು “ಹೇ ಗಯ್ಸ್, ಹೌ ಇಸ್ ಗೋಯಿಂಗ್…” ಅನ್ನುತ್ತಾ ಕೈಯಲ್ಲಿ ಸ್ಕೇಟಿಂಗ್ ಬೋರ್ಡ್ ಹಿಡಿದುಕೊಂಡು ಆ ಪೊಟರೆಯಿಂದ ಹೊರ ಬಂದರು. ನಾವೆಲ್ಲಾ ಆಕಡೆ ನೋಡುತ್ತಿದ್ದಂತೆ ಒಬ್ಬ ಹುಡುಗ ಆನಂದ ಕೈಯಲ್ಲಿದ್ದ ಮೊಬೈಲನ್ನು ಕಸಿದುಕೊಂಡು ಓಡತೊಡಗಿದ. ಆನಂದ ಸ್ವಲ್ಪ ಪ್ರತಿರೋಧ ಒಡ್ಡಿದನಾದರು ಇನ್ನೊಬ ಹುಡುಗ ಅವನನ್ನು ಎಳೆದು ದೂಡಿದ್ದರಿಂದ ಅವನು ಜೋರಾಗಿ ಬಿದ್ದ. ನಾನು ಮತ್ತು ಪ್ರಶಾಂತ ಆ ಹುಡುಗರ ಹಿಂದೆ ಓಡಿದರೂ ಅವರನ್ನು ಹಿಡಿಯುವದಾಗಲಿಲ್ಲ.
ಆನಂದನಿಗೆ ಬಿದ್ದಿದ್ದರಿಂದ ಅಲ್ಲಲ್ಲಿ ತರಚ್ದ ಗಾಯ ಗಳಾಗಿದ್ದವು. ಅವನಿಗೆ ಸಿಕ್ಕಾಪಟ್ಟೆ ಕೋಪ ಬಂದಿತ್ತು. ವಾಪಸ್ಸು ಬಂದು ಕಾರಿನಲ್ಲಿ ಕುಳಿತಾಗ ಆಸ್ಪತ್ರೆಗೆ ಹೋಗೊಣವೇನೊ? ಎಂದು ಕೇಳಿದೆ. “ಆಸ್ಪತ್ರೆಗೆ ಬೇಡ. ಪೋಲಿಸ್ ಸ್ಟೇಶನ್ ಗೆ ಹೋಗೊಣ ನಡಿ… ಆ ಬೋಳಿಮಕ್ಕಳಿಗೆ ಬುದ್ಧಿ ಕಲಿಸ ಬೇಕು” ಅಂದ.
“ನೀನು ಕಂಪ್ಲೇಂಟ್ ಕೊಟ್ಟರೆ ಪೋಲಿಸ್ರು ಆ ಹುಡುಗರಿಗೆ ಏನಾದ್ರೂ ಮಾಡ್ತಾರೆ ಅಂದ್ಕೊಂಡ್ಯಾ..? ಏನೂ ಮಾಡಲ್ಲ..ಮೈನರ್ ಆಗಿರೋದರಿಂದ್ರ ಅವರನ್ನು ಕರೆಸಿ ಬುಧ್ದಿ ಸಹಿತ ಹೇಳುವ ಹಾಗಿಲ್ಲ ಈ ದೇಶದಲ್ಲಿ… ಆ ಹುಡುಗರಿಗೂ ಅಪ್ಪ ಅಮ್ಮ ಪಾಕೆಟ್ ಮನಿ ಕೊಡಲ್ಲ..ಮತ್ತು ಇವರು ಎಲ್ಲೂ ಕೆಲಸ ಮಾಡುವ ಹಾಗಿಲ್ಲ. ಆದ್ದರಿಂದ ಹೀಗೆ ಕಳ್ಳತನ ಮಾಡಿ ಸೆಕೆಂಡಹ್ಯಾಂಡ ಅಂಗಡಿಯಲ್ಲಿ ಮಾರಿಕೊಳ್ಳುತ್ತವೆ. ನೀನು ಕಂಪ್ಲೇಂಟ್ ಕೊಡೋದು …. ಅದು ನಾಳೆ ಪೇಪರ್ ನಲ್ಲಿ ಬರೋದು.. ಇಂಡಿಯಾದ ಮಿಡಿಯಾಕ್ಕೆ ಸಿಕ್ಕರಂತೂ ಅವರು “ಭಾರತಿಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ಹಲ್ಯೆ” ಅಂತೆಲ್ಲಾ ಬರೆಯೊದೂ… ಅದೆಲ್ಲ ಬೇಡ ಬಿಡು. ಅಂದ ಹಾಗೆ ಇಲ್ಲಿಗೆ ಬಂದು ಹ್ಯಾಂಗಿಂಗ್ ರಾಕ್ ನೋಡದೆ ಹೋಗುತ್ತಾ ಇದ್ದೇವಲ್ಲೊ” ಅಂದೆ.
“ಹ್ಯಾಂಗಿಂಗ ರಾಕ್ ಮೈ ಫುಟ್ …. ಮನೆಗೆ ಹೋಗೋಣ ನಡಿ..ಆಯ ಹೇಟ್ ಆಸೀಸ್” ಅಂದ. ಪ್ರಶಾಂತನ ಕಡೆ ನೋಡಿದೆ. ಅವನು ತಾನು ಕೊಂಡ ಪುಸ್ತಕದಲ್ಲಿ ತಲೆ ಹುದುಗಿಸಿ ಕುಳಿತ್ತಿದ್ದ. “ನಾನು ಈ ಜೋನ್ ಲಿಂಡ್ಸೆ ಬರೆದ ಪುಸ್ತಕಗಳನ್ನು…ಹಾಗೆ ಇನ್ನುಳಿದ ಆಸಿ ಬರಹಗಾರರು ಬರೆದ ಪುಸ್ತಕಗಳನ್ನು ಲೈಬ್ರರಿಗೆ ಹೋಗಿ ಹುಡುಕ ಬೇಕು” ಅಂದ.
ನಾನು ಕಾರ್ ಶುರು ಮಾಡಿದೆ. ಅನೇಕ ಮಿಸ್ಟರಿ ಗಳನ್ನೂ ಒಡಲಲ್ಲಿ ಇಟ್ಟುಕೊಂಡಿರುವ ಹ್ಯಾಂಗಿಂಗ್ ರಾಕ್ ನಮ್ಮನ್ನು ಈ ಕಡೆಯಿಂದ ಆ ಕಡೆಗೆ ಆ ಕಡೆಯಿಂದ ಈ ಕಡೆಗೆ ಒಲಾಡಿಸಿದ ಸೇತುವೆಯ ಹಾಗೆ ಅನಿಸಿತು.






0 Comments