
ನಳಿನ ಡಿ
ನೇರ ಸಂದರ್ಶನ ನಡೆಸುವ ಮುಖಾಂತರ ಹಿರಿ-ಕಿರಿಯ ಸಮಾಜವಾದಿ ನಾಯಕರುಗಳ ಮತ್ತು ಸ್ತ್ರೀವಾದಿ ಚಿಂತಕರ ಬದುಕು-ಬರಹದ ಕುರಿತಾದ ವಿಸ್ತೃತವಾದ ವಿವರಗಳು ನಮಗೆ ಅಚ್ಚರಿ ಉಂಟುಮಾಡುತ್ತದೆ. ಸು ರಂ ಎಕ್ಕುಂಡಿಯವರ ಕವಿತೆಗಳನ್ನು ಗಮನಿಸುತ್ತೇವೆ, ಅವರ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿರುವುದಿಲ್ಲ. ಇಲ್ಲಿ ಸು ರಂ ಎಕ್ಕುಂಡಿಯವರ ಸಂದರ್ಶನವೂ ಜೊತೆಗೆ ಅವರ ಬದುಕಿನ ಒಕ್ಕಣೆಯೂ ಇದ್ದು ಕುತೂಹಲ ಕೆರಳಿಸುವುದು.
ನಾವು ಕಂಡ, ಕೇಳಿದ ಹೋರಾಟಗಾರರ ಮನದಾಳದ ಮಾತುಗಳನ್ನಿಲ್ಲಿ ಆಲಿಸಬಹುದು. ಲೇಖಕರು ಸಂದರ್ಶನಗಳಲ್ಲಿ ಕಂಡ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ. ಇದೊಂದು ರೀತಿಯಲ್ಲಿ ಜ್ಞಾನದ ವಿಸ್ತಾರಕ್ಕೆ ಸೇತುವೆಯೂ, ಇತಿಹಾಸದಲ್ಲಿ ಸೇರಿ ಹೋಗಿರುವ ಕೆಲವು ಮುಖ್ಯವಾದ ಘಟ್ಟಗಳ ಮರು ದಾಖಲೀಕರಣವೂ ಆಗಿರುವಂತೆ ಭಾಸವಾಗುತ್ತದೆ.
ರೇಣು ಚಕ್ರವರ್ತಿಯಿಂದ ಪ್ರಾರಂಭವಾಗಿ ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್, ಡಾ. ದೇವಕಿ ಜೈನ್, ಇತ್ತೀಚೆಗೆ ನಿದನರಾದ ಗೀತಾ ನಾಗಭೂಷಣ, ಸಾರಾ ಅಬೂಬಕ್ಕರ್, ರಂಗನಾಯಕಮ್ಮ, ವೈದೇಹಿ, ಬಿ. ಅನಸೂಯಮ್ಮ, ಭಾಂವ್ರಿದೇವಿ, ಮುಕ್ತಾ ದಾಭೋಲ್ಕರ್, ಡಾ. ಪ್ರತಿಭಾ ರೇ, ಡಾ. ಬಿ.ಎನ್. ಸುಮಿತ್ರಾಬಾಯಿ, ಡಾ. ಉಮಾ ಚಕ್ರವರ್ತಿ ಡಾ. ವಿಜಯಾ, ಡಾ. ದು. ಸರಸ್ವತಿ ಮೊದಲಾದ ಮಹಿಳಾ ಹೋರಾಟಗಾರ್ತಿಯರ ಧ್ವನಿಯ ಒಳಮಿಡಿತಗಳನ್ನಿಲ್ಲಿ ಆಲಿಸಬಹುದು.
ಸ್ತ್ರೀ ಸಂವೇದನೆಯ ಆಯಾಮದಲ್ಲಿ ಬದುಕನ್ನು ಕಟ್ಟಿಕೊಂಡಿರುವ ಮತ್ತು ನಿರಂತರವಾಗಿ ಬರಹಗಳಲ್ಲೂ, ಬದುಕಿನಲ್ಲೂ ಹೋರಾಟಗಳಲ್ಲಿ ನಿರತರಾಗಿರುವ ಬಗೆಯನ್ನು ಮನಗಾಣಲು ಸೇತುವೆಯೂ ಈ ಪುಸ್ತಕ ಆಗಬಹುದು.

ಚಿಂತಕರಾದ ಪ್ರೊ. ಜೆ. ಆರ್. ಲಕ್ಷ್ಮಣರಾವ್, ಗೋವಿಂದ ಪಾನ್ಸರೆ, ಪ್ರೊ. ಈ. ವೆಂಕಟಸುಬ್ಬಯ್ಯ, ಪ್ರೊ. ಬರಗೂರು ರಾಮಚಂದ್ರಪ್ಪ, ಡಾ.ಎಂ.ಎಸ್. ಪ್ರಭಾಕರ, ಡಾ. ಕನ್ನಯ್ಯ ಕುಮಾರ್, ಡಾ. ಪಿ. ಸಾಯಿನಾಥ್, ಡಾ. ಜಿ. ರಾಮಕೃಷ್ಣ ಮೊದಲಾದ ಹಿರಿ-ಕಿರಿಯ ತಲೆಮಾರಿನ ಸಂಯೋಜನೆಯೇ ಆಸಕ್ತಿ ಹುಟ್ಟಿಸುವಂತಿದೆ.
ರಹಮತ್ ತರೀಕೆರೆಯವರು ಅವಲೋಕಿಸುವಂತೆ, ಇಲ್ಲಿನ ಹೆಚ್ಚಿನ ಸಂದರ್ಶನಗಳು ಸೈದ್ಧಾಂತಿಕ, ಸ್ತ್ರೀವಾದಿ ಮಾರ್ಕ್ಸಿಸ್ಟ್ ಚೌಕಟ್ಟಿನಲ್ಲಿ ಮೂಡಿಬಂದಿವೆ. ಅರ್ಧ ಶತಮಾನದ ಚರಿತ್ರೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಜೊತೆಗೆ ಪರ್ಯಾಯ ಚರಿತ್ರೆಯ ಸಂಪುಟವಾಗಿದೆ. ಸಾಧಕರ ಹಾಗೂ ಅವರು ನಂಬಿದ ಸಿದ್ಧಾಂತ ಮತ್ತು ಮಾರ್ಗಗಳ ಸ್ವವಿಮರ್ಶೆಯೂ ಆಗಿದೆ. ಇಂದಿನ ಚಳುವಳಿಗಳು ಕಲಿಯಬೇಕಾದ ಪಾಠಗಳ ಎಳೆಗಳು ಇಲ್ಲಿವೆ.
ಮಲಯಶ್ರೀ ಹಶ್ಮಿಯವರು ಹೋರಾಟದ ನಿಲುವುಗಳುಳ್ಳ ತಮ್ಮ ಪತಿ ಸಪ್ದರ್ ಹಶ್ಮಿಯವರನ್ನು ಕಳೆದುಕೊಂಡವರು. ಅವರ ದಿಟ್ಟ ಹೆಜ್ಜೆಯಿಂದಾಗಿ ಇಂದಿಗೂ ಜನ ನಾಟ್ಯ ಮಂಚ್ ನ ಅಪ್ರತಿಮ ಕಲಾವಿದೆಯಾಗಿ ತೊಡಗಿಕೊಂಡಿದ್ದಾರೆ. ಗೂಂಡಾಗಳ ಕೈಯಲ್ಲಿ ರಂಗಮಂಚದ ಮೇಲೆ ಹುತಾತ್ಮರಾದ ಹಶ್ಮಿಯವರ ಪತಿಯ ಧ್ಯೇಯಗಳನ್ನು ಜೀವಂತವಾಗಿರಿಸಿರುವ ಪರಿ ಅನನ್ಯ.
ಮಹಿಳಾ ಚಳುವಳಿಯ ಅತ್ಯುತ್ತಮ ದಾಖಲೆ ಬರೆದಿರುವ ರೇಣು ಚಕ್ರವತಿಯವರು ಚರ್ಚಿಸುವ ಸತ್ಯಗಳು ಇಂದಿನ ರಾಜಕೀಯ ವ್ಯವಸ್ಥೆಯ ನಡುವೆ ಬಹಿರಂಗವಾಗಿ ಸಾವಿರಾರು ಜನರ ಸಮ್ಮುಖದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಸತಿ ಪದ್ಧತಿ ಆಚರಣೆ. ಕರ್ನಾಟದಲ್ಲಿ ಮುತ್ತು ಕಟ್ಟುವುದು ಇನ್ನೂ ನಿಂತಿಲ್ಲ, ಹಾಗೆಯೇ ರಾಜಸ್ತಾನದಲ್ಲಿ ಸತಿ ನಿಂತಿಲ್ಲ.
ಈ ಹೊತ್ತಿಗೆಯು ಸತ್ಯದರ್ಶನದ ದೀವಿಗೆಯಾಗಿ ಕಂಡರೆ ಅಚ್ಚರಿಯಿಲ್ಲ. ಪ್ರಧಾನ ಮಾಧ್ಯಮಗಳು ಪ್ರಕಟಿಸಲು ಅಂಕೆ ಇಡುವ ಸತ್ಯಾಂಶಗಳು ಇಲ್ಲಿ ಪ್ರಕಾಶಿಸಿವೆ ಎಂಬುದು ಗಮನಾರ್ಹ ಸಂಗತಿ.
‘ನಾವೆಲ್ಲಾ ಮನುಕುಲದ ಶ್ರೇಷ್ಠ ವಾರಸುದಾರರು’ ಎನ್ನುವ ಸುರಂ ಎಕ್ಕುಂಡಿಯವರ ನುಡಿಗಳಲ್ಲಿ ಸಹಜವಾದ ಬದುಕಿನ ಬಗೆ ತೆರೆದಿದೆ. ಬಾಲ್ಯದಲ್ಲಿಯೇ ನೊಂದು ಬೆಂದ ಎಸ್. ಜಿ ಸುಶೀಲಮ್ಮನವರು ಸುಮಂಗಲಿ ಸೇವಾಶ್ರಮ ಸ್ಥಾಪಿಸಿ ನೂರಾರು ಹೆಣ್ಣುಮಕ್ಕಳ, ಮಕ್ಕಳ ಪಾಲಿಗೆ ತಾಯಾಗಿದ್ದು ಅದೆಂತಹ ಹೋರಾಟದ, ತ್ಯಾಗದ ಪ್ರೇರಣೆ. ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ಅವರ ಹೋರಾಟದ ಶಿಸ್ತು, ಮಹಿಳಾ ಚಳುವಳಿ ಮತ್ತು ಮಹಿಳಾ ಅಧ್ಯಯನದಲ್ಲಿ ಖ್ಯಾತರಾದ ಬೆಂಗಳೂರಿನ ಡಾ. ದೇವಕಿ ಜೈನ್ ಅವರ ವಿಫುಲ ಅನುಭವದ ಮಜಗಳುಗಳು ನಮ್ಮನ್ನು ಚಕಿತಗೊಳಿಸುತ್ತದೆ.

ಕೆಳಜಾತಿಯ, ಶೋಷಿತರ ದುಃಖ ದುಗುಮಾನಗಳನ್ನು ಬರಹದಲ್ಲಿ ನಿರೂಪಿಸಿದ ಗೀತಾ ನಾಗಭೂಷಣ ಅವರು ನಿರ್ಭೀತ ಭಾಷೆಯ ಲೇಖಕಿ. ಮುಸ್ಲಿಂ ಸಮುದಾಯಗಳ ಮಹಿಳೆಯರ ತಳ್ಳಂಕಗಳನ್ನು ತೆರೆದಿಟ್ಟ ಸಾರಾ ಅಬೂಬಕ್ಕರ್ ಅವರ ಬರಹಗಳು, ರಾಮಾಯಣವನ್ನು ಮಾರ್ಕ್ಸ್ ವಾದ, ಸ್ತ್ರೀವಾದ, ಕೋಮುವಾದದ ಹಿನ್ನೇಲೆಯಲ್ಲಿ ವಿಶ್ಲೇಷಿಸಿದ ರಂಗನಾಯಕಮ್ಮನವರ ನಿಲುವುಗಳು, ಪ್ರಮುಖ ಕಥೆಗಾರಾರಾದ ವೈದೇಹಿಯವರ ಕಥೆಗಳಲ್ಲಿರುವ ತಾಯ್ತನ, ರೈತ ಮುಖಂಡರಾದ ಅನಸೂಯಮ್ಮನವರ ಕರ್ತೃತ್ವ ಶಕ್ತಿ, ಭಾಂವ್ರಿದೇವಿಯ ಮಹಿಳಾ ಹೋರಾಟದ ಹಾದಿ, ಗೋವಿಂದ ಪಾನ್ಸರೆಯವರ ಪ್ರಖರ ನಿಲುವುಗಳು, ಮೌಢ್ಯಮುಕ್ತ ಸಮಾಜಕ್ಕಾಗಿ ದುಡಿಯುತ್ತಿರುವ ಮುಕ್ತಾ ದಾಭೋಲ್ಕರ್ ಕುರಿತ ವಿಚಾರಗಳು, ಪ್ರೊ. ಜಿ ವೆಂಕಟಸುಬ್ಬಯ್ಯನವರ ಅನುಭವದ ನುಡಿಗಳು, ಎಲ್ಲವೂ ಒಂದೆಡೆ ಸಿಗುವ ಅಪರೂಪದ ಪುಸ್ತಕವಿದು.
ಪ್ರತಿಭಾ ರೇ ಅವರು ಎದುರಿಸಿದ ಹೋರಾಟಗಳ ಸಂದರ್ಭಗಳು, ಕೋರ್ಟು ಕಟಕಟೆಯಲ್ಲೂ ಗಟ್ಟಿಯಾಗಿ ನಿಂತು ಗೆದ್ದ ದಂತ ಕತೆಗಳು, ಪ್ರೊ. ಬಿ. ಎನ್. ಸುಮಿತ್ರಾಬಾಯಿಯವರ ಸ್ತ್ರೀವಾದಿ ನಿಲುವುಗಳು, ಸಾಹಿತ್ಯಿಕ ರಸಾನುಭವದ ಬರಹಗಳು, ಪ್ರೊ. ಬರಗೂರರ ಕನ್ನಡ ಅಸ್ಮಿತೆ, ಹೋರಾಟಗಳ ದೂರಗಾಮಿ ಚಿಂತನೆಗಳು, ಡಾ, ಉಮಾ ಚಕ್ರವರ್ತಿಯವರ ಸ್ತ್ರೀಪರ ಬರಹಗಳು, ರಂಜನಾ ಪಡಿಯವರ ರೈತಪರ ಲೇಖನಿಯ ಕಾರ್ಯಗಳು, ಪತ್ರಕರ್ತರಾದ ಡಾ. ಎಂ.ಎಸ್. ಪ್ರಭಾಕರ ಅವರ ಕೃತಿಗಳು, ಯುವಜನಾಂಗದ ಭರವಸೆಯ ನಾಯಕನಾಗಿರುವ ಡಾ. ಕನ್ನಯ್ಯ ಕುಮಾರ್, ಬಹುಮುಖಿ ಪ್ರತಿಭೆಯ ಹೋರಾಟಗಾರ್ತಿ ಆಂಧ್ರದ ಕೋಟೀಶ್ವರಮ್ಮನವರ ನಿರಂತರ ಚಳುವಳಿಗಳು, ಪತ್ರಕರ್ತರಾದ ಪಿ. ಸಾಯಿನಾಥ್ ಅವರ ಸಮಾಜಮುಖಿ ಕಾರ್ಯಗಳು, ಡಾ. ವಿಜಯಾ ಅವರ ಬದುಕಿನ ಚಿತ್ರಣ, ಹಿರಿಯ ಚಿಂತಕ ಡಾ. ಆರ್. ರಾಮಕೃಷ್ಣ ಅವರ ಪರಂಪರೆ-ವರ್ತಮಾನದ ಲೇಖನಗಳು, ದು. ಸರಸ್ವತಿಯವರ ವಿಭಿನ್ನ ಆಸಕ್ತಿಗಳು ಹೀಗೆ ಒಬ್ಬೊಬ್ಬರು ವಿಶೇಷ, ಭಿನ್ನ ಆಯಾಮದಲ್ಲಿ ಸಮಾಜಕ್ಕೆ ಕಾಣ್ಕೆಯಾದವರು, ಕಾಣ್ಕೆಯಾಗಬಯಸುವವರ ಸಚಿತ್ರ ಸಂಪುಟ ಧನಾತ್ಮಕ ಹಿತಚಿಂತನೆಗಳನ್ನು ನೀಡುವುದರಲ್ಲಿ ಸಫಲವಾಗಿದೆ.






0 Comments