ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ ಕಥನ: ರಂಗದ ಮೇಲೆ ಕುವೆಂಪು

ಪ್ರಸಾದ್ ರಕ್ಷಿದಿ

ಕುವೆಂಪು ಶತಮಾನೋತ್ಸವದ ಸಂದರ್ಭದಲ್ಲಿ ಹಾಸನ ಜಿಲ್ಲಾಡಳಿತ ಉದ್ಘಾಟನಾ ಸಮಾರಂಭಕ್ಕೆಂದು ಕುವೆಂಪು ಅವರ ನಾಟಕೊವೊಂದನ್ನು ಪ್ರದರ್ಶಿಸಲು ನಮ್ಮ ರಂಗತಂಡಕ್ಕೆ ಆಹ್ವಾನ ನೀಡಿತ್ತು. ಕುವೆಂಪು ಅವರ ಸಣ್ಣ ಕಥೆ ‘ಧನ್ವಂತರಿಯಚಿಕಿತ್ಸೆ’ಯನ್ನು ರಂಗಕ್ಕೆ ಆಳವಡಿಸಿ ನಾಟಕವೊಂದನ್ನು ಸಿದ್ಧಪಡಿಸಿಕೊಂಡಿದ್ದೆವು. ನಾಟಕದಲ್ಲಿ ಕುವೆಂಪು ಅವರೇ ಒಂದು ಪಾತ್ರವಾಗಿ ಬರುವಂತೆ, ಆ ಮೂಲಕ ಕುವೆಂಪು ಅವರ ವಿಚಾರಗಳು ಮತ್ತು ಕಾಳಜಿಗಳು ಸ್ವಲ್ಪಮಟ್ಟಿಗೆ ನಾಟಕದಲ್ಲಿ ಚರ್ಚಿತವಾಗುವಂತೆ ರಂಗಪಠ್ಯವೊಂದನ್ನು ತಯಾರಿಸಲಾಗಿತ್ತು. ಆ ಸಂದರ್ಭದಲ್ಲೇ ಒಮ್ಮೆ ಮೂಡಿಗೆರೆಗೆ ಹೋದಾಗ, ತೇಜಸ್ವಿಯವರನ್ನು ಕಂಡು ನಾಟಕದ ವಿಚಾರವನ್ನೂ, ಹಾಗೇ ತಾಲೀಮಿನ ಸಂದರ್ಭದಲ್ಲಿ ತೆಗೆದಿದ್ದ ಕೆಲವು ಫೋಟೋಗಳನ್ನು ತೋರಿಸಿದೆ. ‘ಧನ್ವಂತರಿಯಚಿಕಿತ್ಸೆ’ ಗೆ ಕುವೆಂಪು ಪಾತ್ರ ಅಗತ್ಯ ಇತ್ತೇನ್ರಿ? ಎಂದರು.

ಸಾಧ್ಯವಾದರೆ ಮೂಡಿಗೆರೆಯಲ್ಲಿ ಒಂದು ಪ್ರದರ್ಶನ ಮಾಡಬೇಕೆಂದಿದ್ದೇವೆ. ಆಗ ತಿಳಿಸುತ್ತೇನೆ ಬನ್ನಿ ಎಂದೆ.. ಕೆಲವು ದಿನಗಳ ನಂತರ ಮೂಡಿಗೆರೆಯ ನೇಚರ್ ಕ್ಲಬ್ನವರು ನಾಟಕ ಪ್ರದರ್ಶನದ ವ್ಯವಸ್ಥೆ ಮಾಡಿದರು. ಆಗಲೇ ಈ ನಾಟಕ ಒಂದೆರಡು ಕಡೆ ಪ್ರದರ್ಶನಗಳಾಗಿತ್ತು. ಪ್ರದರ್ಶನಕ್ಕೆ ತೇಜಸ್ವಿಯವರು ಬಂದಿದ್ದರು. ಅಂದು ಪ್ರದರ್ಶನ ಅನೇಕ ಕಾರಣಗಳಿಂದ ಚೆನ್ನಾಗಿರಲಿಲ್ಲ.

ಕೆಲವು ದಿನಗಳನಂತರ ಅವರನ್ನು ಭೇಟಿಯಾದಾಗ ಸ್ವಲ್ಪ ಆಳುಕುತ್ತಲೇ ನಾಟಕದ ಬಗ್ಗೆ ಕೇಳಿದೆ. ಯಾಕೆ ಏನಾಯ್ತು ನಿಮಗೆ ಅವತ್ತು.  ಅಂದು  ಬಾಡಿಗೆಗೆ ತಂದಿದ್ದ ಜನರೇಟರ್ ನ  ತೊಂದರೆಯಿಂದಾಗಿ ನಮ್ಮ ಡಿಮ್ಮರ್ ಒಂದು ಸುಟ್ಟು ಹೋಯಿತು, ಧ್ವನಿ ವ್ಯವಸ್ಥೆಯೂ ಹಾಳಾಯಿತು. ಜೊತೆಗೆ ಒಂದಿಬ್ಬರು ನಟರೂ ಬದಲಿಯಿದ್ದರು ಎಂದು ವಿವರಿಸಿದೆ. ಅವೆಲ್ಲ ಸಬೂಬು ಕಣ್ರಿ ಜನರ ಮುಂದೆ ಬರಬೇಕಾದ್ರೆ ಎಲ್ಲ ಸಿದ್ಧತೆ ಮಾಡಿಕೊಂಡೇ ಬರಬೇಕು, ಏನನ್ನಾದರೂ ಬರೀಬೇಕಾದ್ರೂ ಅಷ್ಟೇ, ಸರಿಯಾಗಿ ಯೋಚ್ನೆಮಾಡಿ ಕೂತ್ಕೊಂಡು ಬರೀಬೇಕು, ಅರೆಬರೆ ಕೆಲಸ ನಡಿಯೋಲ್ಲ ಎಂದರು.

ಹೋರಾಟಗಳಂತೇ ನಮಗೆ ಇದೊಂದು ತರಾ ಅಭ್ಯಾಸ ಆಗ್ಬಿಟ್ಟಿದೆ ಸಾರ್, ಮಧ್ಯದಲ್ಲಿ ಯಾರೋ ಕೈಕೊಡೋದು, ಇನ್ನೇನೋ ತೊಂದ್ರೆ ಆಗೋದು, ಹೀಗೆ ಮುಂದುವರಿತಾ ಇದ್ದೀವಿ ಎಂದೆ.

ಅದ್ಕೇ ಕಣ್ರಿ ನನಗೆ ಜನರ ಗುಂಪು ಕಟ್ಟಿಕೊಂಡು ಮಾಡೋಕೆಲಸನೇ ಬೇಡಾ ಅನ್ನಿಸಿಬಿಟ್ಟಿದೆ ಏನಿದ್ರೂ ನಾನೊಬ್ನೇ ಮಾಡ್ಬೇಕು ಅಷ್ಟೆ (ಇದೇ ಮಾತನ್ನು ಬೇರೊಂದು ಸಂದರ್ಭದಲ್ಲಿ ಕವಿ ಸುಬ್ರಾಯ ಚೊಕ್ಕಾಡಿಯವರೂ ಹೇಳಿದ್ದರು)

ಸಾರ್ ನಾಟಕದಲ್ಲಿನ ಕುವೆಂಪು ಪಾತ್ರ……… ರಾಗವೆಳೆದೆ

ಹೇಗೂ ಮಾಡ್ತಾ ಇದ್ದೀರಲ್ಲ ಇರ್ಲಿ ಬಿಡಿ ಎಂದರು.

ಸಾರ್ ಆಕಡೆ ಬಂದಾಗ ನೋಡಿ ದಾರಿ ಪಕ್ಕದಲ್ಲೇ, ಕಾಣ್ಸುತ್ತೆ ಗುಡ್ದ ಮೇಲೆ ನಾವು ಕಟ್ತಾಇರೋ ರಂಗಮಂದಿರ ಎಂದೆ.

ತುಂಬಾ ಹೆವಿಯಾಗಿ ಮಾಡ್ಕೋಬೇಡಿ, ಕೆಲವು ಸಾರಿ ಕಾರ್ಯಕ್ರಮಗಳಿಗಿಂತ ಕಟ್ಟಡಗಳೇ ಭಾರವಾಗಿಬಿಡ್ತವೆ ಎಂದು ಕಿವಿಮಾತು ಹೇಳಿದರು.

‍ಲೇಖಕರು G

3 June, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading