ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ ಕಥನ: ನಿಲ್ದಾಣದಲ್ಲಿ ಒಬ್ಬರು ವ್ಯಕ್ತಿ ನನ್ನ ಗಮನ ಸೆಳೆದರು..

ತೇಜಸ್ವಿ ಕಥನ-೧

ಪ್ರಸಾದ್ ರಕ್ಷಿದಿ

ಎಪ್ಪತ್ತರ ದಶಕದ ಪ್ರಾರಂಭದ ವರ್ಷಗಳು, ನಾನು ಪಿ.ಯು. ವಿದ್ಯಾರ್ಥಿಯಾಗಿದ್ದೆ. ರಜೆಯಲ್ಲಿ, ನಮ್ಮೂರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಳ್ಳೇಕೆರೆಯಿಂದ, ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಸಮೀಪದಲ್ಲಿರುವ ಬಂಧುಗಳ ಮನೆಗೆ ಹೋದವನು, ಸುಳ್ಯದ ಬಸ್ ನಿಲ್ದಾಣದಲ್ಲಿ ಸುಬ್ರಹ್ಮಣ್ಯದತ್ತ ಹೋಗುವ ಬಸ್ಸಿಗಾಗಿ ಕಾಯುತ್ತ ನಿಂತಿದ್ದೆ. ನಿಲ್ದಾಣದಲ್ಲಿ ಒಬ್ಬರು ವ್ಯಕ್ತಿ ನನ್ನ ಗಮನ ಸೆಳೆದರು. ಕಪ್ಪು ಬಣ್ಣದ ಮೂಲಂಗಿ ಪ್ಯಾಂಟು, ಬಿಳಿ ಬಣ್ಣದ ಚೌಕುಳಿಗಳಿದ್ದ ಅಂಗಿ, ಮೀಸೆಯನ್ನು ಸೇರಿದಂತೆ ಬಾಯಿಯನ್ನು ಸುತ್ತುವರಿದ ಉರುಟಾದ ಗಡ್ಡ, ಕೈಯಲ್ಲೊಂದು ವಿಚಿತ್ರ ಆಕಾರದ ಚೀಲ. ಇವರು ದಕ್ಷಿಣ ಕನ್ನಡ ಜಿಲ್ಲೆಯವರಲ್ಲವೆಂದು ಮೇಲ್ನೋಟಕ್ಕೇ ತಿಳಿಯುವಂತಿತ್ತು.

ನಾನು ನೋಡುತ್ತಿದ್ದಂತೆಯೇ ಒಬ್ಬೊರಾಗಿ ಹಲವು ಜನ ಅವರ ಸುತ್ತ ಸೇರತೊಡಗಿದರು. ಕೆಲವರು ಅವರನ್ನು ಮಾತಾಡಿಸುತ್ತಿದ್ದರು. ಏಳೆಂಟು ಜನರು ಸೇರುತ್ತಿದ್ದಂತೆಯೇ ಅವರ್ಯಾರೋ ಸಿನಿಮಾ ನಟರೆಂದು ನನ್ನ ತಲೆಯಲ್ಲಿ ಸುಳಿದುಹೋಯಿತು. ನಾನು ಈಗಾಗಲೇ ನೋಡಿದ, ಮಾತನಾಡಿಸಿದ ಸಿನಿಮಾನಟರ ಪಟ್ಟಿಗೆ ಇನ್ನೂ ಒಬ್ಬರ ಹೆಸರನ್ನು ಸೇರಿಸಿಕೊಂಡು ಬೀಗುವ ಘನ ಉದ್ದೇಶದಿಂದ, ಅವರಿದ್ದಲ್ಲಿಗೆ ಓಡಿದೆ. ನಾನು ಓಡುತ್ತಿರುವುದನ್ನು ನೋಡಿ ಕುತೂಹಲದಿಂದ ಇನ್ನೂ ಕೆಲವರು ಅಲ್ಲಿಗೆ ಜಮಾಯಿಸಿದರು. ಅಲ್ಲಿದ್ದವರು ಏನು ಮಾತನಾಡುತ್ತಿದ್ದಾರೆಂದು ತಿಳಿಯದೆ, ಅಕ್ಕಪಕ್ಕದವರಲ್ಲಿ ವಿಚಾರಿಸುತ್ತಿದ್ದಂತೆ ಮಡಿಕೇರಿಗೆ ಹೋಗುವ ಬಸ್ ಬಂತು. ಆ ವ್ಯಕ್ತಿ ಬಸ್ ಹತ್ತಿದರು. ಆನಂತರ ಗುಂಪು ಕರಗಿತು. ಅಲ್ಲೇ ಇದ್ದ ಸ್ವಲ್ಪ ಹಿರಿಯರಲ್ಲಿ ಅವರ್ಯಾರೆಂದು ಕೇಳಿದೆ. ಕೆ.ವಿ.ಪುಟ್ಟಪ್ಪನವರ ಮಗ ಇಲ್ಲೇ ನೆಂಟರ ಮನೆಗೆ ಬಂದಿದ್ದರಂತೆ ಎಂದರು.

ಪ್ರಯಾಣ ಮುಂದುವರೆಸಿ ಜಿ.ಎಸ್. ಉಬರಡ್ಕ ಅವರ ಮನೆ ಸೇರಿದೆ. ಆ ಕಾಲದಲ್ಲಿ, ನಮ್ಮೂರು ಬೆಳ್ಳೇಕೆರೆಯಿಂದ ಸುಳ್ಯದ ನಾರ್ಣಕಜೆಯಲ್ಲಿರುವ ಉಬರಡ್ಕ ಅವರ ಮನೆಯನ್ನು ತಲಪಬೇಕಾದರೆ ಬೆಳಗಿನಿಂದ ಸಂಜೆಯ ತನಕದ ಪ್ರಯಾಣ, ಸ್ನಾನ ಊಟಗಳ ನಂತರ ಜಿ.ಎಸ್.ರೊಂದಿಗೆ ಮಾತನಾಡುತ್ತ (ಅವರಾಗಲೇ ಕವನ-ಲೇಖನಗಳನ್ನು ಬರೆಯುತ್ತಿದ್ದರು). ಇವತ್ತು ಸುಳ್ಯದ ಬಸ್ಸ್ಟಾಂಡಿನಲ್ಲಿ ಕುವೆಂಪು ಅವರ ಮಗ ಇದ್ದರು. ಹಲವಾರು ಜನರು ಅವರ ಸುತ್ತ ಸೇರಿದ್ದರು. ನಾನು ಅವರನ್ನು ನೋಡಿ ಯಾರೋ ಸಿನಿಮಾನಟರು ಅಂದುಕೊಂಡೆ ಎಂದೆ. ಅದಕ್ಕವರು ಹೋ ತೇಜಸ್ವಿ, ಸಿನಿಮಾ ನಟರಿಗಿಂತ ಹೆಚ್ಚು, ಒಳ್ಳೆಯ ಕಥೆಗಾರ ಈಗ ನಿಮ್ಮೂರಿನ ಹತ್ರವೇ ಇದ್ದಾರೆ ಎಂದರು. ಸ್ವಲ್ಪ ಹೊತ್ತಿನಲ್ಲಿ ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಪುಸ್ತಕವನ್ನು ತಂದು ಇಕೊ ಅವರನ್ನು ನೋಡಿಯಾಯ್ತಲ್ಲ, ಈಗ ಓದಿ ನೋಡು ಎಂದು ಕೊಟ್ಟರು.

ಹೀಗೆ ನನಗೆ ತೇಜಸ್ವಿಯವರ ಪ್ರಥಮ ದರ್ಶನವಾಯಿತು. ಅವರಾಗಲೇ ಮೈಸೂರನ್ನು ಬಿಟ್ಟು ಮೂಡಿಗೆರೆಯ ಬಳಿ ‘ಚಿತ್ರಕೂಟ’ದಲ್ಲಿ ಬಂದು ನೆಲೆಸಿದ್ದರು. ಅಬಚೂರಿನ ಪೋಸ್ಟಾಫೀಸು ಓದಿದೆ. ನಮ್ಮದೇ ಪರಿಸರದ ಕಥೆಯಾದ್ದರಿಂದ ಅರ್ಥವಾಗದಿದ್ದರೂ ಖುಷಿಯಾಯಿತು. ಊರಿಗೆ ಹಿಂದಿರುಗುವಾಗ ಜಿ.ಎಸ್.ರಲ್ಲಿ ಲಭ್ಯವಿದ್ದ ತೇಜಸ್ವಿಯವರ ಇನ್ನೂ ಕೆಲವು ಪುಸ್ತಕಗಳನ್ನು ಹಿಡಿದುಕೊಂಡು ಬಂದೆ. ಆಗ ‘ಕುಬಿ ಮತ್ತು ಇಯಾಲ’, ‘ಡೇರ್ ಡೆವಿಲ್ ಮುಸ್ತಾಫ’, ‘ತುಕ್ಕೋಜಿ’ ಮುಂತಾದ ಕಥೆಗಳನ್ನು ಮನೆಯವರೆಲ್ಲ ಓದಿದೆವು.

ಆ ಕಾಲದಲ್ಲಿ ಸಾಮಾನ್ಯವಾಗಿ ಯಾವುದೇ ಹಳ್ಳಿಯ ಪೋಸ್ಟಾಫೀಸುಗಳಲ್ಲಿ ವಿತರಣೆಗೆ ಬರುವ ಎಲ್ಲ ಪತ್ರಗಳ ಸಕಲ ವಿವರಗಳೂ ಪೋಸ್ಟ್ ಮಾಸ್ಟರ್, ಪೋಸ್ಟ್ಮ್ಯಾನ್, ಮತ್ತಿತರ ಎಲ್ಲ ಸಿಬ್ಬಂದಿಯವರಿಂದ ದಿನಪತ್ರಿಕೆಗಳಂತೆ ಓದಿಸಿಕೊಂಡು ವಿಳಾಸದಾರರಿಗೆ ತಲಪುತ್ತಿದ್ದುದು, ಎಲ್ಲರಿಗೂ ತಿಳಿದಿದ್ದ ಸಾಮಾನ್ಯ ಸಂಗತಿಯಾಗಿತ್ತು. ಇದು ಹಳ್ಳಿಯಲ್ಲಿದ್ದ ನಮಗೂ ತಿಳಿದೇ ಇದ್ದುದರಿಂದ, ನಾನು ಮತ್ತು ನನ್ನಕ್ಕ ‘ಅಬಚೂರಿನ ಪೋಸ್ಟಾಫೀಸು’ ಓದಿದ ನಂತರ ಯಾವುದೇ ಹಳ್ಳಿಯ ಪೋಸ್ಟಾಫೀಸನ್ನು ಕಂಡರೂ ‘ಬೋಬಣ್ಣನ ಮನೆ’ ಎನ್ನುತ್ತಿದ್ದೆವು.

ತೇಜಸ್ವಿಯವರ ‘ಚಿತ್ರಕೂಟ’ ಮೂಡಿಗೆರೆಯ ಬಳಿಯ ಜನ್ನಾಪುರದ ಪಕ್ಕದ ಚಂದ್ರಾಪುರ ಎಂಬ ಹಳ್ಳಿಯಲ್ಲಿತ್ತು. ಜನ್ನಾಪುರಕ್ಕೆ ಸಮೀಪದಲ್ಲೇ ಎರಡು ಕಿಲೋಮೀಟರ್ ದೂರದಲ್ಲಿ ಗೋಣೀಬೀಡು ಎಂಬ ಊರು ಇದೆ. ಇದು ತೇಜಸ್ವಿಯವರ ಹಲವು ಕಥೆಗಳಲ್ಲಿ ಬರುವ ಊರು. (ಈ ಊರಿನಲ್ಲಿ ಯು.ಆರ್. ಅನಂತಮೂರ್ತಿಯವರು ಬಾಲ್ಯದಲ್ಲಿ ಶಾಲೆಗೆ ಹೋಗಿದ್ದರಂತೆ, ಅನಂತಮೂರ್ತಿಯವರ ಅಜ್ಜ ಈ ಗೋಣಿಬೀಡಿನ ದೇವಸ್ಥಾನದಲ್ಲಿ ಅರ್ಚಕರಾಗಿದ್ದರಂತೆ). ತೇಜಸ್ವಿಯವರ ಹತ್ತು ಹಲವು ಹವ್ಯಾಸಗಳಿಂದಾಗಿ ಮೂಡಿಗರೆಯ ಸುತ್ತಮುತ್ತಲ ಊರುಗಳಲ್ಲಿ ಹುಚ್ಚು ಹವ್ಯಾಸಿಯೆಂಬ ಖ್ಯಾತಿಯನ್ನು ಆಗಿನ್ನೂ ಗಳಿಸುತ್ತಿದ್ದರಷ್ಟೆ. ಜನರು ಕುತೂಹಲದಿಂದ ಅಲ್ಲಲ್ಲಿ ಅವರ ಬಗ್ಗೆ ಮತ್ತು ಅವರ ಹಲವು ಹವ್ಯಾಸಗಳ ಬಗ್ಗೆ ಮಾತನಾಡುವುದು ಕೇಳಿಬರುತ್ತಿತ್ತು.

ನಾನು ಆಗತಾನೇ ಕಾಲೇಜು ಶಿಕ್ಷಣ ಮುಗಿಸಿ ಊರಿಗೆ ಬಂದಿದ್ದೆ. ಬೆಳ್ಳೇಕೆರೆಯ ಸುತ್ತಮುತ್ತ ನಾವೊಂದಷ್ಟು ಜನ ಗೆಳೆಯರು, ರಾತ್ರಿಶಾಲೆ ನಡೆಸುತ್ತಾ, ಜನಸಂಘಟನೆಗಳಲ್ಲಿ ತೊಡಗಿಕೊಳ್ಳಲು ಪ್ರಾರಂಭಿಸಿದ್ದೆವು. ಆ ಸಂದರ್ಭದಲ್ಲಿ ನಾನು ವಿದ್ಯೆಕಲಿತ ಹಾನುಬಾಳು ಹೈಸ್ಕೂಲಿನ ವಾರ್ಷಿಕೋತ್ಸವಕ್ಕೆ ತೇಜಸ್ವಿಯವರು ಆಹ್ವಾನಿತರಾಗಿ ಬರಲಿದ್ದಾರೆಂದು ತಿಳಿಯಿತು. ಹಾನುಬಾಳು, ಮೂಡಿಗೆರೆಗೂ ನಮ್ಮೂರು ಬೆಳ್ಳೇಕೆರೆಗೂ ಮಧ್ಯದಲ್ಲಿರುವ ಹೋಬಳಿ ಕೇಂದ್ರ ಸ್ಥಳ. ಆ ವಾಷರ್ಿಕೋತ್ಸವ ಕಾರ್ಯಕ್ರಮಕ್ಕೆ ನಾನೂ ಸೇರಿದಂತೆ ನಮ್ಮಲ್ಲಿ ಕೆಲವರ ಸವಾರಿ ಹಾನುಬಾಳಿಗೆ ಹೋಯಿತು. ಅಂದು ತೇಜಸ್ವಿಯವರು ಸಾಹಿತ್ಯ, ಸಾಮಾಜಿಕತೆ, ಇತ್ಯಾದಿಗಳ ಬಗ್ಗೆ ಮಾತಾಡಿದಂತೆ ನೆನಪು. ಆ ವೇಳೆಗಾಗಲೇ ಕರ್ನಾಟಕದಾದ್ಯಂತ ಸಾಹಿತ್ಯವಲಯದಲ್ಲಿ ‘ಬ್ರಾಹ್ಮಣ-ಶೂದ್ರ’ ಚರ್ಚೆ ಜೋರಾಗಿ ನಡೆದಿತ್ತು. ಸಭೆಯಲ್ಲಿದ್ದವರೊಬ್ಬರು ಕುವೆಂಪುರವರ ಸಾಹಿತ್ಯದ ಬಗ್ಗೆ ಕೇಳಿದ ಪ್ರಶ್ನೆ ತೇಜಸ್ವಿಯವರನ್ನು ಸಿಟ್ಟಿಗೆಬ್ಬಿಸಿತು. ಸಂಸ್ಕೃತ ಜ್ಞಾನವಿಲ್ಲದವರೊಬ್ಬರು ರಾಮಾಯಣ ಬರೆಯೋಕೆ ಹೇಗೆ ಸಾಧ್ಯ ಅಂತೇನೋ ಅವರು ಕೇಳಿದ್ದರು. ಅದಕ್ಕೆ ಉತ್ತರಿಸುತ್ತಾ ಅವರು ಹೌದ್ರಿ ಶೂದ್ರನೊಬ್ಬ ಸಾಹಿತಿಯಾಗೋದಿರ್ಲಿ ಸ್ವಲ್ಪ ಬುದ್ಧಿವಂತ ಅನ್ನಿಸಿಕೊಂಡ್ರೂ ಅವನ ಹುಟ್ಟಿನ ಬಗ್ಗೆ ಅನುಮಾನಪಡೋ ಸಮಾಜ ನಮ್ಮದು, ಹಾಗಾದರೆ ಮೇಲ್ಜಾತಿಯಲ್ಲಿ ಹುಟ್ಟಿದ ದಡ್ಡರ ಬಗ್ಗೆ ಏನನ್ಬೇಕು ಎಂದು ಗುಡುಗಿದರು. ಆಗ ತಾನೇ ಜೆ.ಪಿ.ಯವರ ಸಂಪೂರ್ಣ ಕ್ರಾಂತಿ, ಹಾಗೂ ಎಡಪಂಥೀಯ ಧೋರಣೆಗಳ ಹುಮ್ಮಸ್ಸಿನಲ್ಲಿದ್ದ ನಮಗೆಲ್ಲ ಅವರ ಮಾತನ್ನು ಕೇಳಿ, ಬತ್ತಳಿಕೆಗೆ ಹೊಸ ಅಸ್ತ್ರವೊಂದು ಸಿಕ್ಕಿದ ಸಂತೋಷವಾಯಿತು. ಆದರೆ ಸಭೆಗೆ ಬಂದಿದ್ದ ಅನೇಕ ಹಿರಿಯರಿಗೆ ತೇಜಸ್ವಿಯವರ ಆ ಮಾತು ಇಷ್ಟವಾಗಲಿಲ್ಲವೆಂದು ನಮಗೆ ನಂತರ ತಿಳಿಯಿತು. ಏನಾದ್ರೂ ಪುಟ್ಟಪ್ಪನ ಮಗ ಹಂಗ್ ಮಾತಾಡ್ಬಾರ್ದಾಗಿತ್ತು ಎಂದು ಕೆಲವರು ಹೇಳುವುದು ಕೇಳಿಸಿತು.

ಅವರು ಸಾಹಿತ್ಯ, ಸಾಮಾಜಿಕತೆ, ನಮ್ಮ ಪರಿಸರ ಅಂತೆಲ್ಲ ಮಾತಾಡಿದ್ದು ನನ್ನ ತಲೆಯಲ್ಲಿ ಸುತ್ತುತ್ತಲೇ ಇತ್ತು. ಅವರ ಕೆಲವು ಕಥೆಗಳನ್ನೂ ಓದಿಕೊಂಡಿದ್ದೆ. ಆದ್ದರಿಂದ ನಮ್ಮ ಪರಿಸರ ಯಾರು ಬೇಕಾದರೂ ಕಥೆಬರೆಯಲು ಬಹಳ ಸೂಕ್ತವಾದ ಸ್ಥಳ ಎಂಬ ತೀರ್ಮಾನಕ್ಕೆ ಬಂದೆ. ಕಥೆಯೊಂದನ್ನು ಬರೆದು ಸುಧಾ ವಾರಪತ್ರಿಕೆಗೆ ಕಳುಹಿಸಿದೆ. ಅದು ಪ್ರಕಟವಾಗಿಯೇ ಬಿಟ್ಟಿತು.

ಕಥೆಯಲ್ಲಿ ನಮ್ಮೂರಿನ ಕೆಲವರನ್ನು ನನಗೆ ತಿಳಿದ ಮಟ್ಟಿಗೆ ಯಥಾವತ್ತಾಗಿ ಚಿತ್ರಿಸಿದ್ದೆ. ಯಾರ ಮೂಲಕವೋ ಅವರಿಗೆಲ್ಲ ಆ ವಿಚಾರ ತಿಳಿದು ಅದು ಊರಲ್ಲಿ ಗುಸುಗುಸು ಸುದ್ದಿಯಾಯಿತು. ಕುತೂಹಲದಿಂದ ಪತ್ರಿಕೆ ತರಿಸಿಕೊಂಡು ಓದಿದ ಕೆಲವರು ಪಾಪ ರೈಟ್ರು (ನಮ್ಮಪ್ಪ ಕಾಫಿ ತೋಟವೊಂದರಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದರು) ಕಷ್ಟಪಟ್ಟು ಮಗನಿಗೆ ವಿದ್ಯೆ ಕಲಿಸಿದರೆ ಇವನು ಹೀಗಾದನಲ್ಲ ಎಂದು ನಮ್ಮಪ್ಪನ ಬಗ್ಗೆ ಮರುಕ ತೋರಿದರು!. ಆ ಕಾಲದಲ್ಲಿ ಕಥೆ, ಸಾಹಿತ್ಯ, ನಾಟಕ ಇತ್ಯಾದಿಗಳ ಹುಚ್ಚು ಹತ್ತಿಸಿಕೊಂಡವರು ಕೆಲಸಕ್ಕೆ ಬಾರದ ನಾಲಾಯಕ್ ಜನರೆಂಬ ಭಾವನೆಯೇ ಹೆಚ್ಚಿನವರಲ್ಲಿ ಇತ್ತು. ನಾನು ಮಾತ್ರ, ನಾನೂ ಒಬ್ಬ ಕಥೆಗಾರ ಎಂದು ನಾನು ಬೀಗುತ್ತ ತಿರುಗಿದೆ.

ತೇಜಸ್ವಿಯವರ ಕಥೆಗಳಂತೆಯೇ ಅವರ ಫೋಟೋಗ್ರಫಿ, ಮೀನುಹಿಡಿಯುವ ಹವ್ಯಾಸಗಳೂ ಪ್ರಚಾರ ಪಡೆಯುತ್ತಿದ್ದಂತೆ, ‘ಆಚೆವಾರ ಮದನಾಪುರಕ್ಕೆ ಬಂದಿದ್ರಂತೆ ಮೀನು ಹಿಡಿಯೋಕೆ’, ‘ಹೋದವಾರ ಮಾವಿನಹಳ್ಳಿ ಎಣ್ಣೆಹೊಳೇಲಿ(ಹೇಮಾವತಿ ನದಿ) ಮೀನು ಹಿಡೀತಿದ್ದರಂತೆ’, ನಮ್ಮ ಮಾವ ಹೇಳ್ದ. ‘ಮೊನ್ನೆ ನಾನೇ ಹೋಗಿದ್ದೆ ‘ಅಗನಿ ಬೆಣಗಿನ ಹಳ್ಳದಲ್ಲಿ ಸಕತ್ ಮೀನು ಹಿಡುದ್ರು’, ಎಂದು ತೇಜಸ್ವಿಯೆಂದರೆ ವಾರದ ಸಂತೆಗೆ ಬರುವ ಮೀನುವ್ಯಾಪಾರಿಯೆಂಬಂತೆ ವಣರ್ಿಸುವವರು ಹುಟ್ಟಿಕೊಂಡರು. ಹಾಗೇ ‘ಹೆಂಗ್ ಮೀನಿಡಿತಾರೆ ಅಂತೀರಿ, ಎಲ್ಲ ಬ್ರಿಟಿಷ್ನೋರ ತರನೇ ಮಿಷಿನ್ಗಾಣ(ಗಾಳ) ಹಿಡ್ಕೊಂಡ್ ಬಂದಿದ್ರು, ಒಂದೊಂದೇ ಮೀನು ಹಿಡ್ದು ತೂಕ ನೋಡಿ ಸಣ್ಣವುನೆಲ್ಲಾ ವಾಪಸ್ ನೀರಿಗೆ ಬಿಡೋರು, ಅವ್ರಿಗೆ ಯಾವುದು ಬೇಕು ಅದನ್ನ ಮಾತ್ರ ಹಿಡಿಯೋರು, ಅದನ್ನ ನೋಡೋದೆ ಒಂದು ಚಂದ.. ನಂಗೂ ನೋಡಿ .. ನೋಡಿ ಸಾಕಾಯ್ತಪ್ಪ’ ಎಂದು ರೀಲು ಸುತ್ತುವವರೂ ಇದ್ದರು. ಇವರೆಲ್ಲ ಹೇಳುವ ಜಾಗದಲ್ಲಿ ನಿಜವಾಗಿಯೂ ಮೀನು ಇದೆಯೆ ಅಥವಾ ತೇಜಸ್ವಿಯವರು ಅಲ್ಲಿಗೆ ಬಂದಿದ್ದರೇ ಇಲ್ಲವೇ ಅನ್ನುವುದನ್ನು ಯಾರೂ ವಿಚಾರಿಸುತ್ತಿರಲಿಲ್ಲ. ಎಂಬತ್ತರ ದಶಕದ ಹೊತ್ತಿಗಾಗಲೇ ‘ಮೀನು ಹಿಡಿಯುವ ತೇಜಸ್ವಿ’ ನಮ್ಮೂರ ಸುತ್ತಮುತ್ತ, ಭಾರತದಾದ್ಯಂತ ಸಾವಿರಾರು ಊರುಗಳಲ್ಲಿ ಹೇಳುವ, ಭೀಮ ಬಕಾಸುರನನ್ನು ಕೊಂದಸ್ಥಳ ಇದೇ ಎಂದು ರಸವತ್ತಾಗಿ ವರ್ಣಿಸುವ, ಸ್ಥಳಪುರಾಣದಂತೆ ಆಗಿಹೋದರು!.

(ಇನ್ನೂ ಇದೆ..)

 

‍ಲೇಖಕರು G

18 May, 2011

10 Comments

  1. Dr.B.R.Satyanarayana

    ಆಸಕ್ತಿಕರ ಲೇಖನ. ಹಿಂದೊಮ್ಮೆ, ಬಹುಶಃ ಕ.ರ.ವೇ. ವೆಬ್ ಸೈಟಿನಲ್ಲೇನೋ ಓದಿದ ನೆನಪು. ಮುಂದಿನ ಸಂಚಿಕೆಗಳ ಬಗ್ಗೆ ಕುತೂಹಲ ಮೂಡಿದೆ.

  2. Shiva

    ಕರವೇಯವರ ನಲ್ನುಡಿಯಲ್ಲಿ ಓದಿದ್ದೆ. ಆದರೆ ಎಲ್ಲಾ ಸಂಚಿಕೆಗಳನ್ನು ಓದೋಕಾಗ್ಲಿಲ್ಲ.ಈಗ ಮತ್ತೊಂದು ಅವಕಾಶ ಓದೋದಕ್ಕೆ..

  3. santhosh tarikere

    super article… tejasvi is an amazing personality……

  4. Suresh

    chennagide, chennagide.

  5. ಸಿ ಪಿ ನಾಗರಾಜ

    ಪ್ರಸಾದ್ ಅವರ ಬರಹ ತೇಜಸ್ವಿ ಅವರನ್ನು ಮತ್ತೊಮ್ಮೆ ನಮ್ಮ ಕಣ್ಣಮುಂದೆ ಕರೆತಂದು ನಿಲ್ಲಿಸಿದಂತಿದೆ . ಸಿ.ಪಿ.ನಾಗರಾಜ , ಬೆಂಗಳೂರು .

  6. JOGI

    Wonderful. ತುಂಬ ಚೆನ್ನಾಗಿದೆ. ಖುಷಿಯಾಯಿತು.

  7. Bilimale

    Good one, thanks

  8. bharathi

    ishtavaaythu

  9. shivaprasad

    barithaa eri barithaa eri..nillisbedi

  10. Nagaraj Nayak

    ತುಂಬ ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading