ಹಾಸನದಿಂದ ಕೆಲವರು ಗೆಳೆಯರು ನಮ್ಮೂರಿನ ಪಕ್ಕದ ‘ಮೂರುಕಣ್ಣುಗುಡ್ಡ’ದಲ್ಲಿ ಗುಡ್ಡದಲ್ಲಿ ಚಾರಣಕ್ಕೆಂದು ಬಂದಿದ್ದರು. ಅವರಲ್ಲಿ ಒಂದಿಬ್ಬರು ಸರ್ಕಾರಿ ನೌಕರರರಿದ್ದುದರಿಂದ ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರಕ್ಕೆ ಹೊಂದಿಸಿಕೊಂಡು ಅವರು ಕಾರ್ಯಕ್ರಮ ಹಾಕಿಕೊಂಡಿದ್ದರು. ಚಾರಣ ಮುಗಿಸಿ ಭಾನುವಾರ ಮಧ್ಯಾಹ್ನ ನಮ್ಮೂರಿಗೆ ಬಂದರು. ಇನ್ನೂ ಅರ್ಧದಿನ ಸಮಯ ಉಳಿದಿರುವುದರಿಂದ ಮೂಡಿಗೆರೆಗೆ ಹೋಗಿ ತೇಜಸ್ವಿಯವರಲ್ಲಿ ಕೆಲವು ಪುಸ್ತಕಗಳನ್ನು ಖರೀದಿಸುವ ಯೋಜನೆ ಹಾಕಿ ಜೊತೆಯಲ್ಲಿ ಬರುವಂತೆ ನನ್ನನ್ನು ಆಹ್ವಾನಿಸಿದರು. ನನಗೂ ಅಂದು ಬೇರೇನು ಕೆಲಸವಿಲ್ಲದ್ದರಿಂದ ಅವರೊಂದಿಗೆ ಹೊರಟೆ. ಅವರಲ್ಲಿ ಒಂದಿಬ್ಬರು ರೈತಸಂಘದ ಹಾಗೂ ಸಾಕ್ಷರತಾ ಆಂದೋಲನದ ಕಾಲದ ನನ್ನ ಮಿತ್ರರಿದ್ದುದೂ ಇದಕ್ಕೆ ಕಾರಣವಾಗಿತ್ತು.
ನಾವೆಲ್ಲರೂ ‘ನಿರುತ್ತರ’ವನ್ನು ತಲಪುವಾಗ ಸಂಜೆ ನಾಲ್ಕು ಗಂಟೆಯಾಗಿತ್ತು. ತೇಜಸ್ವಿಯವರು ಮನೆಯಲ್ಲಿರಲಿಲ್ಲ. ಆದರೆ ಅವರ ಹಲವು ವರ್ಷಗಳ ಸಂಗಾತಿಯಾಗಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ರಾಘವೇಂದ್ರ ಇದ್ದರು. ನಮ್ಮ ಗೆಳೆಯರು ಮನೆಯ ಸುತ್ತ ತಿರುಗಿ ಫೋಟೋಗಳನ್ನು ತೆಗೆದುಕೊಂಡು, ನಂತರ ಪುಸ್ತಕಗಳನ್ನು ನೋಡಿ ಹಲವು ಪುಸ್ತಕಗಳನ್ನು ಕೊಂಡುಕೊಂಡರು. ಆವೇಳೆಗೆ ಮೂಡಿಗೆರೆಗೆ ಹೋಗಿದ್ದ ತೇಜಸ್ವಿಯವರೂ ಮನೆಗೆಬಂದರು.
ಆಗಷ್ಟೇ ಅವರ ತೆಗೆದ ಛಾಯಾಚಿತ್ರಗಳನ್ನು ಒಳಗೊಂಡ ಶುಭಾಶಯ ಪತ್ರಗಳು ಬಂದಿದ್ದವು. ಅವುಗಳನ್ನು ನೋಡಿ ಚೆನ್ನಾಗಿರುವ ಕೆಲವನ್ನು ಆರಿಸಿಕೊಡುವಂತೆ ಹಾಸನದ ಗೆಳೆಯರೊಬ್ಬರು ನನ್ನಲ್ಲಿ ಕೇಳಿದರು. ನಾನು ಆರಿಸತೊಡಗಿದೆ ಅಷ್ಟರಲ್ಲಿ ರಾಘವೇಂದ್ರ ಇನ್ನೊಂದಿಷ್ಟನ್ನು ತಂದುಕೊಟ್ಟರು. ಅದರಲ್ಲಿ ನಾನಾಬಗೆಯ ಹಕ್ಕಿಗಳ ಚಿತ್ರಗಳಿದ್ದವು. ಕೆಲವರಿಗೆ ಯಾವುದನ್ನು ಆರಿಸಿಕೊಳ್ಳುವುದೆಂದು ತಿಳಿಯದಾಯಿತು. ಆಗ ತೇಜಸ್ವಿ ಅದು ಹಂಗೇ ಕಣ್ರೀ ಒಂದು ನೋಡುವಾಗ ಇನ್ನೊಂದು ಚೆನ್ನಾಗಿ ಕಾಣುತ್ತೆ ನಿಮಗೆ ಬೇಕಾದಷ್ಟು ಸುಮ್ನೆ ಆರಿಸಿಕೊಳ್ಬೇಕಷ್ಟೆ ಎಂದರು.
ಎಲ್ಲರ ಪರಿಚಯ ಮಾಡಿಕೊಂಡ ನಂತರ ಮಾತು ಮತ್ತೊಮ್ಮೆ ರೈತ ಚಳುವಳಿ, ಸಾಕ್ಷರತಾ ಆಂದೋಲನ, ಇವುಗಳತ್ತವೂ ಸಾಗಿತು. ಇವರೆಲ್ಲರೂ ಚಾರಣಕ್ಕೆ ಬಂದವರೆಂದು ತಿಳಿದಾಗ ನೀವು ಮೂರುಕಣ್ಣು ಗುಡ್ಡಕ್ಕಿಂತ ಇನ್ನೂ ಜೇನುಕಲ್ಲು ಗುಡ್ಡ, ಅಥವಾ ಚಾರ್ಮಾಡಿ ಇಲ್ಲವೇ ಕಬ್ಬಿನಾಲೆ -ಬಿಸಲೆ ಇಂಥ ಕಡೆ ಹೋಗ್ಬೇಕು, ಅಲ್ಲ ಮೂರುಕಣ್ಣು ಗುಡ್ಡಕ್ಕೆ ಹೋಗ್ಬಾರ್ದು ಅಂತೇನೂ ಅಲ್ಲ, ಎಂದರು.
ಆಗ ಹಾಸನದವರೊಬ್ಬರು ಸಾರ್ ಅಲ್ಲಿಗೇ ಹೋಗ್ಬೋದಾಗಿತ್ತು (ನನ್ನನ್ನು ತೋರಿಸಿ) ಇವ್ರಜೊತೇಲಿ ಹೋದ್ರೆ ನಮ್ಮನ್ನ ನಕ್ಸಲೈಟರು ಅಂದ್ಕೊಂಡಬಿಟ್ಟಾರು ಅಂತ ನಾವು ಅಲ್ಲಿಗೆಲ್ಲ ಹೋಗಲಿಲ್ಲ ಎಂದರು. ಉಳಿದವರೆಲ್ಲ ಜೋರಾಗಿ ನಕ್ಕರು. ತೇಜಸ್ವಿ ನಗಲಿಲ್ಲ.
ಆ ಸಮಯದಲ್ಲಿ ಪ್ರತಿದಿನವೆಂಬಂತೆ ಪತ್ರಿಕೆಗಳಲ್ಲಿ ನಕ್ಸಲೀಯರ ಚಟುವಟಿಕೆಗಳು ವರದಿಯಾಗುತ್ತಿದ್ದವು. ಒಂದೆರಡು ಎನ್ಕೌಂಟರುಗಳೂ ಆಗಿದ್ದವು. ತೀರ್ಥಹಳ್ಳಿ, ಉಡುಪಿ, ಮೂಡಿಗೆರೆಯ ಕೆಲವು ಭಾಗಗಳಲ್ಲಿ ಅವರ ಚಟುವಟಿಕೆ ವಿಸ್ತರಿಸಿದೆಯೆಂದು ಆ ವರದಿಗಳು ತಿಳಿಸಿದ್ದವು.
ಅಷ್ಟರಲ್ಲಿ ಹಳೆಯ ರೈತ ಸಂಗಾತಿಗಳೊಬ್ಬರು ಇವತ್ತಿನ ಪರಿಸ್ಥಿತಿ ನೋಡಿದ್ರೆ ಅವ್ರು ಮಾಡೋದೇ ಸರಿ ಅನ್ಸುತ್ತೆ, ಬೇರೆ ದಾರೀಲಿ ಈ ಸರ್ಕಾರಗಳನ್ನ ಎಚ್ಚರಿಸೋಕೇ ಆಗೋಲ್ವೇನೋ ಎಂದರು.
ಆ ಮಾತಿನಿಂದ ತೇಜಸ್ವಿಯವರು ಸ್ವಲ್ಪ ಸಿಟ್ಟಿಗೆದ್ದಂತೆ ಕಂಡರು. ರೀ ನಾವೆಲ್ಲ ಸ್ವಲ್ಪ ಜವಾಬ್ದಾರಿಯಿಂದ ಮಾತಾಡ್ಬೇಕ್ರಿ, ಅಲ್ಲಾ ಬೇರೆ ದಾರೀನೇ ಇಲ್ಲಾ ಅಂದರೆ ಏನಾದ್ರೂ ದಾರಿ ಕಂಡ್ಕೋಬೇಕಪ್ಪ, ಈತರ ಹೇಳಿ ಹೇಳಿ ಪಾಪ ಆ ಸಣ್ಣವಯಸ್ಸಿನ ಹುಡುಗ್ರು ಅಲ್ಲಿ ಕಾಡಲ್ಲಿ ಕೂತ್ಕೊಂಡು ಹುಚ್ಚುಚ್ಚಾಗಿ ಏನೋ ಮಾಡೋಕ್ಕೋಗಿ ಗುಂಡೇಟು ತಿಂದು ಸಾಯ್ತಾ ಇದಾರಲ್ರಿ, ಅವ್ರಿಗೆಲ್ಲಾ ನೀವು ಕಾಡುಬಿಟ್ಟು ಈಚೆಗೆ ಬನ್ನಿ ಹೋರಾಟಕ್ಕೆ ಬೇರೆ ದಾರಿಗಳಿವೆ ಅಂತ ಹೇಳೋರ್ಯಾರು. ಎಂದರು. ನಮ್ಮಗೆಳೆಯರೆಲ್ಲ ಎರಡು ನಿಮಿಷ ಮೌನವಾಗಿಬಿಟ್ಟರು.
ಮತ್ತೆ ಅವರೇ ಮುಂದುವರಿದು ನಾನ್ಹೀಗೆ ಅಂದೆ ಅಂತ ಬೇಜಾರು ಮಾಡ್ಕೋಬೇಡಿ ಇದ್ರಲ್ಲಿ ನಮ್ಮೆಲ್ರ ಜವಾಬ್ದಾರಿ ಇದೆ ನಾವು ಆಡುವ ಮಾತು, ನಮ್ಮ ನಡವಳಿಕೆಗಳು ಅಂತಾ ಹುಡುಗರನ್ನು ಇನ್ನಷ್ಟು ಹುಚ್ಚು ಸಾಹಸಕ್ಕೆ ಉತ್ತೇಜಿಸುವಂತೆ ಇರಬಾರದು ಈ ಆಧುನಿಕ ಕಾಲದ ರಾಜ್ಯ ಶಕ್ತಿಯ ವಿರುದ್ಧ ಇಂತಾ ಹೋರಾಟಗಳು ಪ್ರತಿಹಿಂಸೆಯನ್ನ ಹುಟ್ಟುಹಾಕ್ತವೆ ಅಷ್ಟೆ. ಬೇರೆ ಶಾಂತಿಯುತ ದಾರಿಗಳನ್ನು ಹುಡುಕ್ಬೇಕು ಎಂದರು.






Expression of dis-satisfaction
must be peaceful demonstration
Not by wild protest Causing trouble
to many innocent people.
Those who are troubled by such disturbance
will be cursing the protester-demonstrators
rather than sympathising their cause
ಬಹಳ ಚೆನ್ನಾಗಿ ಮತ್ತು ಆತ್ಮೀಯ ವಾಗಿ ಬರುತಿದೆ .ಬರೆಯುತಲಿರಿ