ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ ಕಥನ: ಆ ನೀನಾಸಂನವರನ್ನು ನೋಡು..

ತೇಜಸ್ವಿ ಕಥನ ೧೪

ಪ್ರಸಾದ್ ರಕ್ಷಿದಿ

2002 ನೇ ಇಸವಿಯಲ್ಲಿ ‘ಮಹಾವೀರರ 2000ವರ್ಷದ ಜನ್ಮ ಕಲ್ಯಾಣ ಮಹೋತ್ಸವ’ ವೆಂದು ಘೋಷಿಸಿ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದರಂತೆ ಮೈಸೂರಿನ ರಂಗಾಯಣ ಆ ವರ್ಷ ಅಹಿಂಸೆಯನ್ನು ಪ್ರತಿಪಾದಿಸುವ ನಾಟಕವೊಂದನ್ನು ಆರಿಸಿಕೊಂಡು ಅದನ್ನು ಎರಡು ಬೇರೆ ಬೇರೆ ತಂಡಗಳಿಂದ ಸಿದ್ದ ಪಡಿಸಿ ಅನೇಕ ಕಡೆಗಳಲ್ಲಿ ಪ್ರದರ್ಶನ ಮಾಡುವ  ಯೋಜನೆ ಮಾಡಿಕೊಂಡಿತ್ತು. ಎರಡು ಹವ್ಯಾಸಿ ತಂಡಗಳಲ್ಲಿ ಒಂದನ್ನು ಚಾಮರಾಜನಗರದಲ್ಲಿ ಅವರು ಈಗಾಗಲೇ ಆರಿಸಿದ್ದರು. ಇನ್ನೊಂದು ತಂಡ ನಮ್ಮನ್ನು ಆಯ್ಕೆಮಾಡಿದ್ದರು.

ಚಿತ್ರ: ಡಿ ಜಿ ಮಲ್ಲಿಕಾರ್ಜುನ್

ನಾಟಕದ ನಿರ್ದೇಶಕರು ಮತ್ತು ಇನ್ನಿತರ ತಾಂತ್ರಿಕ ವರ್ಗವನ್ನು ರಂಗಾಯಣ ಕಳುಹಿಸಿಕೊಡಲಿತ್ತು. ಈ ಕಾರ್ಯಕ್ರಮಕ್ಕಾಗಿಯೇ ರಂಗಾಯಣದ ರಾಮನಾಥ್- ‘ಅರಹಂತ’ ಎನ್ನುವ ನಾಟಕವನ್ನು ಬರೆದಿದ್ದರು. ಹುಲುಗಪ್ಪ ಕಟ್ಟೀಮನಿಯವರು ನಿರ್ದೇಶಕರಾಗಿ ನಮ್ಮಲ್ಲಿಗೆ ಬಂದರು. ಕಾರ್ಯಕ್ರಮದಲ್ಲಿನ ಒಪ್ಪಂದದಂತೆ ನಾವು ನಾಟಕವನ್ನು ಬೇರೆ ಬೇರೆ ಕಡೆಗಳಲ್ಲಿ ಕನಿಷ್ಠ ಎಂಟು ಪ್ರದರ್ಶನಗಳನ್ನು ಮಾಡಬೇಕಿತ್ತು. ನಮ್ಮಲ್ಲೂ  ರಂಗ ಶಿಬಿರಗಳಾಗದೆ ಸ್ವಲ್ಪ ಸಮಯವಾಗಿತ್ತು. ಹೊಸಬರಿಗೆ ತರಬೇತಿಯ ಅಗತ್ಯವಿತ್ತು.

ಸುಮಾರು ಒಂದು ತಿಂಗಳ ತರಬೇತಿಯ ನಂತರ ‘ಅರಹಂತ’ ಪ್ರದರ್ಶನಕ್ಕೆ ಸಿದ್ಧವಾಯಿತು. ಈ ನಾಟಕವನ್ನು ಹಾಸನ ಜಿಲ್ಲೆಯೊಳಗಲ್ಲದೆ, ಮೈಸೂರು,ಬೆಂಗಳೂರು, ಹೂವಿನಹಡಗಲಿ, ಮುಂತಾದ ಕಡೆಗಳಲ್ಲೂ ಪ್ರದರ್ಶಿಸಿದೆವು. ಈ ನಾಟಕಕ್ಕೆ ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಬಂತು. ಮೂಡಿಗೆರೆಯಲ್ಲೂ ಈ ನಾಟಕದ ಪ್ರದರ್ಶನವಾಯಿತು. ಮೂಡಿಗೆರೆಯ ನೇಚರ್ ಕ್ಲಬ್ನ ಧನಂಜಯ ಮತ್ತು ಗೆಳೆಯರು  ನಾಟಕ ಪ್ರದರ್ಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ನಾಟಕ ನೋಡಲು ತೇಜಸ್ವಿಯವರೂ ಬಂದಿದ್ದರು. ನಾಟಕ ಮುಗಿದನಂತರ ಮಾತನಾಡುತ್ತಾ, ನಾಟಕದ ಅಭಿನಯವೇನೋ ಚೆನ್ನಾಗಿತ್ತು ಎಂದು, ಅಲ್ಲ ಕಣ್ರಯ್ಯ ಎಲ್ಲಾ ವಿಚಾರವನ್ನೂ ಚರಿತ್ರೆಯ ಘಟನೆಗಳ ಮೂಲಕವೇ ಹೇಳ್ಬೇಕು  ಅನ್ನೋ ಹುಚ್ಚು ನಿಮಗೆ-ನಾಟಕದವ್ರಿಗೆ ಯಾವಾಗ ಬಿಡುತ್ತೋ ಗೊತ್ತಿಲ್ಲ ಎಂದು ಛೇಡಿಸಿದರು.

ನಮ್ಮ ರಂಗ ಚಟುವಟಿಕೆಗಳ ಬೆಳ್ಳಿಹಬ್ಬದ ಸಮಯದಲ್ಲಿ ನಾಟಕೋತ್ಸವ ಏರ್ಪಡಿಸಿದ್ದೆವು. ನಾಲ್ಕು ದಿನಗಳಕಾಲ ನಮ್ಮ ತಂಡದ ಮಕ್ಕಳ-ದೊಡ್ಡವರ ನಾಟಕಗಳಲ್ಲದೆ, ಮುದ್ರಾಡಿ, ಬೆಂಗಳೂರು (ಪ್ರಯೋಗರಂಗ) ತಂಡಗಳ ನಾಟಕವೂ ನಮ್ಮಲ್ಲಿ ಪ್ರದರ್ಶಿತವಾಯಿತು. ಆಗ ತೇಜಸ್ವಿಯವರನ್ನು ಆಹ್ವಾನಿದ್ದೆವು ಆದರೆ ಅವರಿಗೆ ಬರಲು ಸಾಧ್ಯವಾಗಿರಲಿಲ್ಲ.

ನಂತರ ನಮ್ಮೂರಲ್ಲಿ ರಂಗ ಮಂದಿರ ಕಟ್ಟಬೇಕೆನ್ನುವವವರ ಸಂಖ್ಯೆ ಹೆಚ್ಚಾಗಿ ಅದರ ಕೆಲಸವನ್ನು ಪ್ರಾರಂಭಿಸಿದೆವು. ಆ ಸಮಯದಲ್ಲಿ ಒಮ್ಮೆ ಮೂಡಿಗೆರೆಯಲ್ಲಿ ತೇಜಸ್ವಿಯವರನ್ನು ಭೇಟಿಯಾದಾಗ ನಮ್ಮಲ್ಲಿ ರಂಗ ಮಂದಿರವನ್ನು ಕಟ್ಟುವ ವಿಚಾರವನ್ನು ತಿಳಿಸಿದೆವು. ಅದಕ್ಕವರು ಸೆಕೆಂಡ್ ಲೈನ್ ಲೀಡರ್ಶಿಪ್ ಇದಿಯೇನ್ರಯ್ಯ ನಿಮ್ಮೂರಲ್ಲಿ, ನಿಮ್ಮ ನಂತರ ಅದು ಹಾಳು ಬೀಳೋ ಹಂಗಿದ್ರೆ ಮಾಡ್ಬೇಡಿ. ಎಷ್ಟೋ ಕಡೆಗಳಲ್ಲಿ ಹಂಗೇ ಆಗಿದೆ. ಅದನ್ನೆಲ್ಲ ಸರಿಯಾಗಿ ಯೋಚ್ನೆ ಮಾಡ್ಬೇಕು. ಆ ನೀನಾಸಂನವರನ್ನು ನೋಡು, ಆ ಥರ ಮುಂದುವರ್ಸಿಕೊಂಡು ಹೋಗೋಕೆ ಏನಾದ್ರು ವ್ಯವಸ್ಥೆ ಇರ್ಬೇಕು ಎಂದರು.

 

‍ಲೇಖಕರು G

1 June, 2011

1 Comment

  1. ರಾಕೇಶ ಜೋಷಿ

    ಪ್ರಸಾದ್ ಸರ್ ನಿಮ್ಮ ಲೇಖನಗಳು ತುಂಬಾ ಚೆನ್ನಾಗಿವೆ. ತುಂಬಾ ಸೋಗಸಾಗಿದಾವೆ. ಇಷ್ಟು ಬೇಗ ಮುಗಿತಾ, ಮತ್ತೆ ನಾಳೆವರೆಗೂ wait ಮಾಡಬೇಕಲ್ಲ ಅಂತ ಕೆಲವೊಮ್ಮೆ ಬೇಜಾರ್ ಆಗುತ್ತೆ. ತೇಜಸ್ವಿಯವರನ್ನ ಭೇಟಿಯಾಗಬೇಕು, ನೋಡ್ಬೇಕು ಅನ್ನೋ ಕನಸು ಹಾಗೆ ಉಳಿತು. ಆದರೆ ನಿಮ್ಮ ಲೇಖನಗಳನ್ನ ಓದ್ತಾ ಈಗ ಅದನ್ನೆಲ್ಲ ಸವಿತಾ ಇದೀನಿ. ನಿಮ್ಮ ಲೇಖನಗಳು ಹೀಗೆ ಮುಂದುವರಿಯಲಿ. ನಮಗೆಲ್ಲ ತೇಜಸ್ವಿಯವರ ಬಗ್ಗೆ ತಿಳಿಸ್ತಾ ಇರೋ ನಿಮಗೆ ತುಂಬಾ ತುಂಬಾ ಧನ್ಯವಾದಗಳು. ಇದನ್ನ ಪ್ರಕಟಿಸುತ್ತ ಇರುವ ಅವಧಿಗೂ, ಮೋಹನ್ ಸರ್ ಗೂ ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading