ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ ಕಥನ: ಅವರು ಮೀನು ಹಿಡಿಯಲು ಬಂದರು..

ಪ್ರಸಾದ್ ರಕ್ಷಿದಿ

ಹೀಗಿದ್ದ ಸಂದರ್ಭದಲ್ಲಿ ಮುಂದಿನವಾರ ತೇಜಸ್ವಿಯವರು ಎತ್ತಿನಹಳ್ಳಕ್ಕೆ ಮೀನು ಹಿಡಿಯಲು ಬರುತ್ತಾರೆಂಬ ಸುದ್ದಿ ನಮ್ಮ ಪಕ್ಕದ ಗಾಣದಹೊಳೆಯ ಗೆಳೆಯರಿಂದ ಬಂತು (ಊರಿನ ಹೆಸರು ಮಾತ್ರ ಗಾಣದ ಹೊಳೆ, ಅಲ್ಲಿ ಯಾವುದೇ ಹೊಳೆ ಇಲ್ಲ. ಆ ಊರಿನಲ್ಲಿ ನಾವೊಂದಷ್ಟು ಜನ ಗೆಳೆಯರು ‘ಮಿತ್ರ ರೈತ ಯುವಕ ಸಂಘ’ ಎಂಬ ಸಂಘವನ್ನು ಸ್ಥಾಪಿಸಿಕೊಂಡಿದ್ದೆವು). ತೇಜಸ್ವಿಯವರು ಮೀನು ಹಿಡಿಯವ ವೃತ್ತಾಂತ ಆಗಲೇ ಧಾರಾವಾಹಿಯಾಗಿ ನಮ್ಮೂರ ಸುತ್ತ ಸುತ್ತುತ್ತಿದ್ದುದರಿಂದ ಮೀನು ಹಿಡಿಯುವುದನ್ನು ನೋಡಲು ನಾನೂ ಹೊರಟೆ. ಆಗ ಇಂದಿನಂತೆ ಮೊಬೈಲ್ಗಳಿರಲಿ ಹಳ್ಳಿಗಳಲ್ಲಿ ಫೋನೇ ಇರಲಿಲ್ಲ. ನಾನು ಸೈಕಲ್ಲೇರಿ ಗಾಣದಹೊಳೆ ತಲಪುವ ವೇಳೆಗೆ ಅವರೆಲ್ಲ ಸೇರಿ ಎತ್ತಿನ ಹಳ್ಳಕ್ಕೆ ಹೊರಟು ಹೋಗಿಯಾಗಿತ್ತು. ಅವರಿವರಲ್ಲಿ ಮೀನು ಹಿಡಿಯಲು ಹೋದವರ ದಿಕ್ಕನ್ನು ವಿಚಾರಿಸುತ್ತಾ ನಾನು ಏಕಾಂಗಿಯಾಗಿ ಐದಾರು ಕಿಲೋಮೀಟರು ಸುತ್ತಾಡಿ ಅವರಿರುವ ಸ್ಥಳವನ್ನು ಪತ್ತೆಮಾಡುವ ವೇಳೆಗೆ ಮಧ್ಯಾಹ್ನವಾಯಿತು. ದಟ್ಟ ಕಾಡಿನ ಮಧ್ಯೆ ಎತ್ತಿನಹಳ್ಳದ ಪುಟ್ಟ ಜಲಪಾತವೊಂದರ ಪಕ್ಕದಲ್ಲಿ ಅವರೆಲ್ಲ ಠಿಕಾಣಿ ಹೂಡಿದ್ದರು.

ಕಲ್ಲುಗಳನ್ನು ಜೋಡಿಸಿಟ್ಟು ಮಾಡಿದ ಒಲೆಯಮೇಲೆ ದೊಡ್ಡ ಪಾತ್ರೆಯಲ್ಲಿ ಅನ್ನ ಬೇಯುತ್ತಿತ್ತು. ಅಲ್ಲಿ ಏಳೆಂಟು ಜನರಿದ್ದರು. ತೇಜಸ್ವಿಯವರ ಜೊತೆ ಮೂಡಿಗೆರೆಯಿಂದಲೂ ಒಬ್ಬರು ಬಂದಿದ್ದರು. ಅವರಿಗೆ ಹೆಚ್ಚೇನೂ ಮೀನು ದೊರೆತಂತೆ ಕಾಣಿಸಲಿಲ್ಲ. ತೇಜಸ್ವಿಯವರಾಗಲೇ ಉಳಿದವರಿಗೆ, ಹೊಳೆಯಲ್ಲಿ ಸಿಗುವ ಮೀನುಗಳ ಬಗ್ಗೆ ವಿವರಿಸುತ್ತಿದ್ದರು. ನನಗೆ ಮೀನುಗಳ ಬಗ್ಗೆಯಾಗಲೀ, ಮೀನು ಹಿಡಿಯುವ ಬಗ್ಗೆಯಾಗಲೀ ಏನೂ ಜ್ಞಾನವಿಲ್ಲದ್ದರಿಂದ ಸುಮ್ಮನಿದ್ದೆ. ಅಲ್ಲೇ ಇದ್ದ ನನ್ನ ಗೆಳೆಯನೊಬ್ಬ ತೇಜಸ್ವಿಯವರಿಗೆ ನನ್ನನ್ನು ತೋರಿಸಿ ಇವ್ನೂ ಕಥೆ ಬರೀತಾನೆ ಎಂದು ಹೇಳಿದ. ಹೊಳೆಯ ಸದ್ದಿನಲ್ಲಿ ಅವರಿಗೆ ಕೇಳಿಸಿತೋ ಇಲ್ಲವೋ ನನ್ನನ್ನು ನೋಡಿ ನಕ್ಕರು. ಅವರೇನಾದರೂ ಕೇಳಿದರೆ ಏನು ಹೇಳುವುದೆಂದು ತಿಳಿಯದೆ ಮೆಲ್ಲನೆ ಹೊಳೆಯತ್ತ ಜಾರಿಕೊಂಡೆ. ಹೊಳೆಯಲ್ಲಿ ಸಾಕಷ್ಟು ನೀರಿತ್ತು. ಒಂದಿಬ್ಬರು ಈಜುತ್ತಿದ್ದರು. ನಾನೂ ಅವರೊಡನೆ ಸೇರಿ ಈಜತೊಡಗಿದೆ. ದಡದಲ್ಲಿ ತೇಜಸ್ವಿಯವರಿಂದ ಮೀನಿನ ಪಾಠ ಮುಂದುವರಿದಿತ್ತು.

ಊಟಕ್ಕೆ ಕುಳಿತಾಗ ದೊಡ್ಡ ದೊಡ್ಡ ಎಲೆಗಳಲ್ಲಿ ಅನ್ನದ ಗುಡ್ಡೆಯನ್ನು ಪೇರಿಸಿಕೊಂಡು ನಮ್ಮ ಗಾಣದಹೊಳೆಯ ಹುಡುಗರು ಕುಳಿತರು. ಊಟ ಮುಂದುವರಿದಂತೆ ಈ ಅನ್ನದ ಗುಡ್ಡೆಗಳು ಕರಗಿ ಖಾಲಿಯಾಗುತ್ತಿದ್ದ ಪರಿಯನ್ನು ಕಂಡ ತೇಜಸ್ವಿಯವರು ನಿಮ್ಗೆ ಸಣ್ಣ ಪುಟ್ಟ ಶಿಕಾರಿ ಸಾಕಾಗಲ್ಲ ಕಣ್ರಯ್ಯ ಏನಿದ್ರೂ ಮೂರು ಆನೆ ಹೊಡ್ಕೊಡ್ಬೇಕು ಅಷ್ಟೆ ಎಂದು ಗಹಗಹಿಸಿ ನಕ್ಕರು.

ನಂತರದ ದಿನಗಳಲ್ಲಿ ಅವರು ಮೀನು ಹಿಡಿಯಲು ಬರುವುದನ್ನು ಕಡಿಮೆಮಾಡಿದರು.

ನಾವು ಹಲವು ಮಂದಿ ಗೆಳೆಯರು ರೈತ ಚಳುವಳಿಯಲ್ಲಿ ತೊಡಗಿಕೊಂಡಿದ್ದೆವು. ತಾಲ್ಲೂಕುಕೇಂದ್ರ ಅಥವಾ ಜಿಲ್ಲಾಕೇಂದ್ರಗಳಲ್ಲಿ ರೈತ ಸಂಘ ನಡೆಸುತ್ತಿದ್ದ ಅಭ್ಯಾಸ ಶಿಬಿರಗಳಲ್ಲಿ ಕೆಲವು ಬಾರಿ ತೇಜಸ್ವಿಯವರು ಬಂದು ಮಾತಾಡಿದ್ದುಂಟು. ಆದರೆ ನಮಗ್ಯಾರಿಗೂ ಆಗ ಅವರೊಂದಿಗೆ ಹೆಚ್ಚಿನ ಸಂಪರ್ಕವಾಗಲೀ ಸಲಿಗೆಯಾಗಲೀ ಬೆಳೆಯಲಿಲ್ಲ.

ರೈತಸಂಘದ ಅಭ್ಯಾಸ ಶಿಬಿರಗಳಲ್ಲೂ ಅಷ್ಟೆ ರೈತ ಸಂಘದ ಕಾರ್ಯಕ್ರಮಗಳೂ ಅವರ ವಿಮರ್ಶೆಗೆ ಒಳಗಾಗುತ್ತಿದ್ದವು. ಅದರಲ್ಲೂ ಕಾನೂನುಭಂಗದಂತಹ ಚಳುವಳಿಗಳನ್ನು ನೀವು ಕೈಗೆತ್ತಿಕೊಂಡಾಗ ನಿಮ್ಮಲ್ಲಿ ಸ್ಪಷ್ಟತೆ ಮತ್ತು ಸಮರ್ಥ ನಾಯಕತ್ವ ಎರಡೂ ಇಲ್ಲದಿದ್ದರೆ ಖಂಡಿತವಾಗಿಯೂ ಅರಾಜಕತೆಯನ್ನು ಸೃಷ್ಟಿಸುತ್ತೀರಿ, ನಿಮ್ಮ ಉದ್ದೇಶವೂ ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆ ಸಂದರ್ಭದಲ್ಲಿ ರೈತ ಸಂಘ ಹಳ್ಳಿಗಳಲ್ಲಿ  ಸಣ್ಣಪುಟ್ಟ ಜಗಳಗಳ ತೀರ್ಮಾನದಿಂದ ಹಿಡಿದು, ಪ್ರತಿಯೊಂದು ನಿರ್ಧಾರವೂ ಸಂಘದ ನೇತೃತ್ವದಲ್ಲೇ ನಡೆಯುವಂತೆ ಪ್ರಯತ್ನಿಸುತ್ತಿತ್ತು. ಇದರಿಂದ ಕೆಲವು ಕಡೆ ಘರ್ಷಣೆಗಳೂ ಆದವು. ಇನ್ನು ಕೆಲವು ಕಡೆಗಳಲ್ಲಿ ರೈತಸಂಘದ ಹೆಸರಿನಲ್ಲಿ ಕೆಲವರು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದರು. ತೇಜಸ್ವಿಯವರು ಅಂದು ಹೇಳಿದ ಮಾತುಗಳು ಮಲೆನಾಡಿನ ಮಟ್ಟಿಗಂತೂ ಬಹಳಬೇಗ ನಿಜವಾಗಿಬಿಟ್ಟಿತು.

ಮಲೆನಾಡಿನಲ್ಲಿ ರೈತ ಸಂಘದ ಪ್ರಬಲ ಸಮರ್ಥಕರಾಗಿದ್ದವರೆಲ್ಲ ಹಳ್ಳಿಗಳ ಸಣ್ಣ ರೈತರೇ. ಕಾಫಿ ವಲಯದ ಹೆಚ್ಚಿನ ಪ್ಲಾಂಟರುಗಳೆಲ್ಲ ರೈತ ಸಂಘದ ವಿರೋಧವೇ ಇದ್ದರು. ತೋಟ ಕಾರ್ಮಿಕರಲ್ಲೂ ರೈತಸಂಘದ ಬಗ್ಗೆ ಅಂಥಾ ಒಲವೇನೂ ಇರಲಿಲ್ಲ. ರೈತಸಂಘವೆಂದರೆ ಜಮೀನಿದ್ದವರ ಸಂಘವೆಂದೇ ಅವರು ತಿಳಿದಿದ್ದರು. ಅದಲ್ಲದೆ ರೈತಸಂಘಕ್ಕೆ ಮಲೆನಾಡಿನಲ್ಲಿ ಭೂ ರಹಿತ ಕೂಲಿಕಾರ್ಮಿಕರ- ದಲಿತರ ಬೆಂಬಲ ಕೂಡಾ ಅಷ್ಟಾಗಿ ದೊರಕಲೇ ಇಲ್ಲ. ಇದಕ್ಕೆ ರೈತಸಂಘದ ಸೈದ್ಧಾಂತಿಕ ನೆಲೆಗಟ್ಟಿನ ದೌರ್ಬಲ್ಯವೇ ಕಾರಣವಾಗಿರಬಹುದು. ನಮ್ಮೂರಿನಲ್ಲಿದ್ದಂತಹ ಕೆಲವು ರೈತಸಂಘದ ಶಾಖೆಗಳನ್ನು ಬಿಟ್ಟರೆ ಹೆಚ್ಚಿನ ಕಡೆಗಳಲ್ಲಿ ರೈತಸಂಘದ ಸದಸ್ಯರು ಕೂಲಿ ಕಾರ್ಮಿಕರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವುದಿರಲಿ, ಏಕ ಪಕ್ಷೀಯವಾಗಿ ಕೃಷಿಕೂಲಿಯನ್ನು ಇಳಿಸುವಂತಹ ಕ್ರಮಕ್ಕೂ ಮುಂದಾಗಿದ್ದರು. ಇದರೊಂದಿಗೆ ರೈತ ಸಂಘದ ನಗರ – ಹಳ್ಳಿ ವಿಭಜನೆ ಕೂಡಾ ಸ್ಪಷ್ಟತೆಯನ್ನು ಪಡೆದುಕೊಳ್ಳದೆ ನಗರಗಳ ಕೆಳವರ್ಗದ ಜನರ ಬೆಂಬಲ ಕೂಡಾ ರೈತಸಂಘಕ್ಕೆ ಸಿಗದೇ ಹೋಯಿತು.

ಚಿತ್ರ: ಸತೀಶ್ ಆಚಾರ್ಯ

ಕಾಂಗ್ರೆಸ್ ವಿರೋಧಿ ನೆಲೆಯಲ್ಲಿ ರೈತಸಂಘದಲ್ಲಿದ್ದ ಅನೇಕರು ಹೆಗಡೆ ಸರ್ಕಾರದ ಬಗ್ಗೆ ಮೃದು ಧೋರಣೆ ಹೊಂದಿದ್ದರು. ಅಲ್ಲದೆ ಅಂದಿನ ಹೆಗಡೆ ಸರ್ಕಾರ ಕೂಡಾ ರೈತಸಂಘವನ್ನು ಒಂದೆಡೆ ಪೋಲಿಸ್ ಬಲದಿಂದ ತುಳಿಯುತ್ತಾ ಇನ್ನೊಂದೆಡೆ ಓಲೈಸುತ್ತಾ ಜನರಲ್ಲಿ ಗೊಂದಲ ಸೃಷ್ಟಿಸಿ ಬಿಟ್ಟಿತು. ಅದಕ್ಕೆ ಸರಿಯಾಗಿ ಪಂಚಾಯತ್ ಚುನಾವಣೆ ಮಟ್ಟದಲ್ಲಿ ಪ್ರಯತ್ನಿಸದೆ ಏಕಾಏಕಿ ಪಾರ್ಲಿಮೆಂಟಿಗೇ ಅಭ್ಯರ್ಥಿಗಳನ್ನು ಹಾಕುವಂತಹ ಆತುರದ ನಿರ್ಧಾರವನ್ನು ರೈತಸಂಘ ಮಾಡಿತು. ಈ ಎಲ್ಲಾ ಕಾರಣಗಳಿಂದ ಅನೇಕರು ರೈತಸಂಘದಿಂದ ದೂರವಾಗಿ ಅನೇಕ ಪಕ್ಷಗಳಲ್ಲಿ ಹಂಚಿಹೋದರು. ಬಯಲು ಸೀಮೆಯಲ್ಲಿ ರೈತ ಸಂಘತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಮುಂದುವರಿದರೂ ಮಲೆನಾಡಿನಲ್ಲಿ ನಾಮಾವಶೇಷವಾಗಿಹೋಯಿತು.

 

‍ಲೇಖಕರು G

19 May, 2011

16 Comments

  1. shivu.k

    ತೇಜಸ್ವಿಯವರ ಬಗ್ಗೆ ಬರೆಯುತ್ತಿರುವ ಈ ಹೊಸ ಲೇಖನ ತುಂಬಾ ಇಷ್ಟವಾಗುತ್ತಿದೆ. ಅವರೆಲ್ಲಾ ಪುಸ್ತಕಗಳನ್ನು ಓದಿದ್ದರೂ ಕೂಡ ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಕುತೂಹಲ ಏಕೆ ಬರುತ್ತಿದೆಯೋ ಗೊತ್ತಿಲ್ಲ. ಈ ಕುತೂಹಲ ಬೇರೆ ಲೇಖಕರ ಬಗ್ಗೆ ಬರೆದಿರುವುದು ಏಕೆ? ಅಂತ ನಾನೇ ಅನೇಕ ಬಾರಿ ಪ್ರಶ್ನಿಸಿಕೊಂಡರೂ ಉತ್ತರ ದೊರಕಿಲ್ಲ.

    • Anonymous

      tejasvi baraha namma samakalinate. nadinalli hutti kadinalli suttadi vaicharikavagi, sookshmateya harikaranagi dvanisuttale iddare.

  2. Dr.B.R.Satyanarayana

    ಬದುಕಿದಂತೆ ಬರೆದಿರುವುದರಿಂದ ತೇಜಸ್ವಿ ಹೆಚ್ಚು ಕಾಡಿಸುತ್ತಾರೆ.

  3. Shiva

    ‘ನನ್ನ ತೇಜಸ್ವಿ’ ಓದಿ ಆದ ಮೇಲೂ ತೇಜಸ್ವಿ ಬಗ್ಗೆಗಿನ ಆಸಕ್ತಿ, ಕುತೂಹಲ ಕಮ್ಮಿಯಾಗಿಲ್ಲ್. 🙂

  4. prasadraxidi

    k.shivu avare
    yaakendare, shivrama karantha, goruru ramaswamy iyengar, tejasvi,inthavrigella baduku matthu baraha antha bere bere irlilla avrella badukidanthe bredaru, haagagi nammanthavrige avara baduku saha nmage asakti matthu bharavseya sangathiglaagive

  5. Mahendra vi. sheela

    atyaMta sogasAda citrakale! citragararige namisuve.
    vi.sheela, berlin, 25.06.13

  6. ವಿಶ್ವಾರಾಧ್ಯ ಸತ್ಯಂಪೇಟೆ

    ತೇಜಸ್ವಿ ನಿಜವಾದ ಶರಣ. ಯಾವುದೆ ಹಮ್ಮು ಬಿಮ್ಮುಗಳಿಲ್ಲದೆ ಬದುಕಿ ಬಾಳಿ ಹೋದವರು. ಲೋಕದಂತೆ ಬಾರರು. ಲೋಕದಂತೆ ಇರರು. ಲೋಕದತೆ ಹೋಗರು ನೋಡಯ್ಯಾ. ಪುಣ್ಯದಂತೆ ಬಪ್ಪರು. ಜ್ಞಾನದಂತೆ ಇಪ್ಪರು. ಮುಕ್ತಿಯಂತೆ ಹೋಹರು ನೋಡಯ್ಯಾ ಎಂಬಂತೆ ನಮ್ಮಿಂದ ದೈಹಿಕವಾಗಿ ಮರೆಯಾಗಿ ಹೋದರೂ ಮಾನಸಿಕವಾಗಿ – ವೈಚಾರಿಕವಾಗಿ ತಮ್ಮ ಬರಹಗಳ ಮೂಲಕ ನಮ್ಮ ಮನದ ಮೂಲೆಯಿಂದ ತೇಜಸ್ವಿಯವರು ಮರೆಯಾಗಿಲ್ಲ. ರಕ್ಷಿದಿ ಅವರ ಬರಹ ತೇಜಸ್ವಿಯವರನ್ನು ಮತ್ತೊಮ್ಮೆ ರೀಫ್ರಶ್ ಮಾಡಿತು.

  7. somu

    I am heavy fan of Mr K P Tejashvi……..

  8. ನಿತೀಶ ಪ್ರಭು

    ಹೊಯ್, ವ್ಯಂಗ್ಯಚಿತ್ರ ಚೆನ್ನಾಗಿದೆ ಮರಾಯ್ರೆ..–ನಿತೀಶ ಪ್ರಭು

  9. shivaiah

    thumba santhosha sir

  10. Anonymous

    chennagide…

  11. shreenathghegde

    ತೆಜಸ್ವಿಯವರು ಪೃಕೃತಿಯಷ್ಟು ಸರಳ , ಚಿಂತನೆಗಳು ಯಾರಿಗೂ ನಿಲುಕದಷ್ಟು ವಿರಳ

  12. AKHILA

    “ಕಾನೂನುಭಂಗದಂತಹ ಚಳುವಳಿಗಳನ್ನು ನೀವು ಕೈಗೆತ್ತಿಕೊಂಡಾಗ ನಿಮ್ಮಲ್ಲಿ ಸ್ಪಷ್ಟತೆ ಮತ್ತು ಸಮರ್ಥ ನಾಯಕತ್ವ ಎರಡೂ ಇಲ್ಲದಿದ್ದರೆ ಖಂಡಿತವಾಗಿಯೂ ಅರಾಜಕತೆಯನ್ನು ಸೃಷ್ಟಿಸುತ್ತೀರಿ, ನಿಮ್ಮ ಉದ್ದೇಶವೂ ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.”

    This view of Tejasvi was not viewed by other so called eminent leaders of KRRS then. Even if few foreseen it, they didn’t give needed importance to it. If they would have guided the leaders and the members of KRRS intellectually Karnataka would have been in a leading position in Rights based activism.

  13. jyothi

    tejasvi baraha thumba channagide

  14. ಮಹಾವೀರ್ ಕುಮಾರ್ ಹೆಚ್.ವಿ.

    “ಕರ್ವಾಲೋ” ಮುಖಾಂತರ ಮಲೆನಾಡಿನ ಆಗಾಧತೆಯನ್ನು,ಬದುಕನ್ನು, ಮನುಷ್ಯನಿಗೆ ನಿಲುಕಲಾರದ ಪ್ರಕೃತಿಯ ನಿಗೂಢತೆಯನ್ನು ಪರಿಚಯಿಸಿದ ತೇಜಸ್ವಿಯವರಿಗೆ…
    “ಚಿದಂಬರ ರಹಸ್ಯ”ದಲ್ಲಿ ಮನುಷ್ಯನ ಕ್ಷುಲ್ಲತೆಯಿಂದಾಗಿ ಇಡಿ ಕೆಸರೂರು ಉರಿದು ನಾಶವಾಗಿ,ಪ್ರೀತಿಯೊಂದೆ ಬದುಕುಳಿಯುವುದನ್ನು ನಿರೂಪಿಸಿದ ತೇಜಸ್ವಿಯವರಿಗೆ…
    “ಪರಿಸರದ ಕಥೆ” ಯ ಮೂಲಕ ಪ್ರಾಣಿ,ಪಕ್ಷಿಗಳ ಬಗ್ಗೆ ಒಂದಿಷ್ಟು ತಿಳುವಳಿಕೆ, ಆಸ್ಥೆ ಮೂಡಿಸಿದ ತೇಜಸ್ವಿಯವರಿಗೆ…
    ದೇಶ ವಿದೇಶದ ವಿಸ್ಮಯಕಾರಿ ಘಟನೆಗಳನ್ನು ಕುತೂಹಲಕಾರಿಗೆ, ನಮಗೆಲ್ಲಾ ಅರ್ಥವಾಗುವಂತೆ ಹೇಳಿದ ತೇಜಸ್ವಿಯವರಿಗೆ…
    “ಕಿರುಗೂರಿನ ಗಯ್ಯಾಳಿಗಳು”, “ಜುಗಾರಿ ಕ್ರಾಸ್”, ಒಹ್!, ಇವೆಲ್ಲಾ ನಮ್ಮಂತಹ ಓದುಗರ ಬದುಕಿನ ವಿಶಿಷ್ಠ, ವಿಷೇಶ ಅನುಭವಗಳಾಗಿ ಉಳಿದುಬಿಟ್ಟಿವೆ.
    ಈ ಮೂಲಕ ನೀವು ನಮ್ಮೋಳಗಿರುತ್ತಿರಿ.

  15. DINESH

    TEJASWI IS A GREAT NATURAL WRITER

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading