ತೇಜಸ್ವಿ ಎಂಬ 'ಮ್ಯಾಜಿಕ್' 

ಜಿ ಎನ್ ಮೋಹನ್  

KA-01 ಗೂ KA-18 ಗೂ ಎತ್ತಣಿಂದೆತ್ತ ಸಂಬಂಧವಯ್ಯ??
ಎತ್ತಣಿಂದೆತ್ತ ಸಂಬಂಧವಯ್ಯ?? ಎಂದು ನಿಜಕ್ಕೂ ಅನಿಸಿದ್ದು ಮೊನ್ನೆ ನ. ಸಂಪತ್ ಕುಮಾರ್ ಫೇಸ್ ಬುಕ್ ವಾಲ್ ನೋಡಿದಾಗ. ‘ಕಿರಗೂರಿನ ಗಯ್ಯಾಳಿಗಳು’ ಸಿನೆಮಾದಲ್ಲಿ ಈತ ಒಂದೇ ಏಟಿಗೆ ಎಲ್ಲರನ್ನೂ ಆವರಿಸಿಕೊಂಡುಬಿಡುವ ಉಳುಕು ತೆಗೆಯುವ ತಜ್ಞ.
ಮೊನ್ನೆ ಅವರು ಗೆಳೆಯರೊಂದಿಗೆ ಟೀ ಕುಡಿಯಲೆಂದು ನಾಗರಭಾವಿಯ ರಸ್ತೆ ಬದಿ ಹೋಟೆಲ್ ಹೊಕ್ಕಿದ್ದಾರೆ. ಸೊರ್ರನೆ ಟೀ ಹೀರುತ್ತಾ  ನೋಡಿದರೆ ಒಂದು ಸ್ಕೂಟರ್ ಕಂಡಿದೆ. ಬೆಂಗಳೂರನ್ನು ಕಿಷ್ಕಿಂದೆ ಮಾಡಿರುವುದರಲ್ಲಿ ಈ ಸ್ಕೂಟರ್, ಬೈಕ್ ಗಳ ಪಾತ್ರವೇನು ಕಡಿಮೆಯೇ?  ಹಾಗಂತ ಅವರೂ ಸುಮ್ಮನಿರುತ್ತಿದ್ದರೇನೋ.. ಆದರೆ ಕ್ಷಣ ಮಾತ್ರದಲ್ಲಿ ಕೈಲಿದ್ದ ಕಪ್ಪನ್ನು ಕೆಳಗೆ ಇಟ್ಟವರೇ ಓಡೋಡಿ ಆ ಸ್ಕೂಟರ್ ನ ಬಳಿ ಹೋಗಿದ್ದಾರೆ. ಅಷ್ಟೇ ಅಲ್ಲ ಕ್ಲಿಕ್ ಕ್ಲಿಕ್ ಕ್ಲಿಕ್ ಅಂತ ಸೆಲ್ಫಿ ಹೊಡೆದುಕೊಂಡಿದ್ದಾರೆ
ಅಂತಾದ್ದೇನಿತ್ತು ಆ ಸ್ಕೂಟರ್ ನಲ್ಲಿ..??
ಸ್ಕೂಟರ್ ಮೇಲೆ ಈಗ ಭಜರಂಗಿಗಳದ್ದೇ ಚಿತ್ರ. ಕೇಸರಿ ಹನುಮಾನ್. ಅದನ್ನು ಬಿಟ್ಟರೆ ಅಪ್ಪನ ಆಶೀರ್ವಾದ, ಅಮ್ಮನ ಆಶೀರ್ವಾದ.. ಅದೂ ಅಲ್ಲದಿದ್ದರೆ ಗೌಡಾಸ್ ಕುರುಬಾಸ್ ಅಂತ ಜಾತಿ  ಮೊಹರು. ಅದಕ್ಕೂ ಆಚೆ ಸಿದ್ಧಲಿಂಗೇಶ್ವರ, ಜಡೆ ಮುನೇಶ್ವರ, ಮಲೆ ಮಹಾದೇವ ಅನ್ನೋ ದೇವರುಗಳು
ಆದರೆ ಈ ಸ್ಕೂಟರ್ ಅದಕ್ಕೆಲ್ಲಾ ‘ಬಾಯ್ ಬಾಯ್’ ಹೇಳಿ ತನ್ನ ಇಡೀ ದೇಹದ ಮೇಲೆ ತೇಜಸ್ವಿಯವರ ಅಷ್ಟೂ ಕೃತಿಗಳ ಹೆಸರುಗಳನ್ನು ಹಚ್ಛೆ ಹಾಕಿಸಿಕೊಂಡು ನಿಂತಿತ್ತು!!.
‘ನಿಗೂಢ ಮನುಷ್ಯ’ರಿಂದ ಹಿಡಿದು ‘ಮಾಯಾಲೋಕ’ದವರೆಗೆ, ‘ಪ್ಯಾಪಿಲಾನ್’ನಿಂದ ಹಿಡಿದು ‘ಪರಿಸರ ಕಥೆಗಳ’ವರೆಗೆ, ‘ಅಬಚೂರಿನ ಪೋಸ್ಟಾಫೀಸಿ’ನಿಂದ ಹಿಡಿದು ‘ಜುಗಾರಿ ಕ್ರಾಸ್’ವರೆಗೆ  ‘ಅಲೆಮಾರಿ ಅಂಡಮಾನ್’ ನಿಂದ ಹಿಡಿದು ‘ವ್ಯಕ್ತಿ ವಿಶಿಷ್ಟ ಸಿದ್ಧಾಂತ’ದವರೆಗೆ..
ನಾನು ಫೋಟೋದಲ್ಲಿದ್ದ ಸ್ಕೂಟರ್ ನ ರಿಜಿಸ್ಟ್ರೇಷನ್ ನಂಬರ್ ನೋಡಿದೆ KA-01. ಮೂಡಿಗೆರೆಯ ರಿಜಿಸ್ಟ್ರೇಷನ್ ನಂಬರ್ ಗೂಗಲ್ ಮಾಡಿದೆ KA 18
ಅರೆ! ಆ ತಕ್ಷಣವೇ ಹೊಳೆದು ಹೋಯಿತು. ತೇಜಸ್ವಿ ಎನ್ನುವ ಮಾಯಾವಿಯ ತಾಖತ್ತೇ ಅದು..
ಅದಕ್ಕೆ ಗಡಿ ಗೋಡೆಗಳಿಲ್ಲ,
ಹಾಗೆ ಗಾಡಿ ನಂಬರ್ ನೋಡಲು ಹೇಳಿಕೊಟ್ಟಿದ್ದೂ ತೇಜಸ್ವಿಯೇ. ಒಂದೇ ಸೀಟಿನ ತಮ್ಮ ಸ್ಕೂಟರ್ ಅನ್ನು ದಂತಕಥೆಯಾಗಿಸುವ ಮೂಲಕ.
ಯಾರಿಗೇ ಕೇಳಿ ಅವರ ಸ್ಕೂಟರ್ ನಂಬರ್ MEN 6625 ಕಂಠಪಾಠ.
ಹಾಗಾಗಿಯೇ ತೇಜಸ್ವಿ ಬೆಂಗಳೂರಿಗೂ ಮೂಡಿಗೆರೆಗೂ, ಮೂಡಿಗೆರೆಗೂ ಜರ್ಮನಿಗೂ, ಜರ್ಮನಿಗೂ ದೆಹಲಿಗೂ ನಂಟು ಬೆಸೆದು ಹೋಗಿಬಿಟ್ಟರು. ತೇಜಸ್ವಿ ಹೊಸ ಪುಸ್ತಕ ಎಂದರೆ ೮೩ ರ ನನ್ನ ಅಮ್ಮ, ಅಂದರೆ ಬಿ ಎಂ ವೆಂಕಟಲಕ್ಷ್ಮಮ್ಮ ಹೇಗೆ ಈಗಲೂ ಕಾತರಿಸುತ್ತಾರೋ ಹಾಗೆಯೇ ಜರ್ಮನಿಯ ವೂರ್ತ್ಸ್ ಬರ್ಗ್ ವಿವಿಯ ವಿದ್ಯಾರ್ಥಿಗಳೂ ಕಾತರಿಸುತ್ತಾರೆ. ಟಿ ಪಿ ಅಶೋಕ ಅವರು ಕಮ್ಮಟ ನಡೆಸಿ ತೇಜಸ್ವಿ ಒಳಗಣ್ಣು ಪರಿಚಯಿಸುತ್ತಾ ಹೋದರೆ, ಬಿ ಎ ವಿವೇಕ ರೈ ಅವರು ಜರ್ಮನಿಯ ಪ್ರೊ ಬ್ರೂಕ್ನರ್ ಹಾಗೂ ಡಾ ಕತ್ರಿನ್ ಬಿಂದರ್  ಕೂತು ತೇಜಸ್ವಿ ಕಥೆಗಳನ್ನು ಜರ್ಮನಿಗೆ ಅನುವಾದಿಸುತ್ತಾರೆ.
ತೇಜಸ್ವಿ ಎನ್ನುವ ‘ಮ್ಯಾಜಿಕ್’ ಅನ್ನು ಅರ್ಥ ಮಾಡಿಕೊಳ್ಳಲು ಇನ್ನೂ ಯತ್ನಿಸುತ್ತಿದ್ದೇನೆ. ತೇಜಸ್ವಿ ಇನ್ನಿಲ್ಲ ಎಂದಾಗ ಅವರ ಅಪಾರ ಬಳಗದ ಒಳಹೊಕ್ಕು ನೋಡುವ ಅವಕಾಶ ನನಗೆ ಸಿಕ್ಕಿತ್ತು. ಹಾಗೆ ಶೋಕಿಸಿದವರು ಒಂದು ತಲೆಮಾರಿಗೆ ಸೇರಿದವರಲ್ಲ, ಬರೀ ಸಾಹಿತ್ಯ ದ ಓದುವವರಲ್ಲ, ತೇಜಸ್ವಿ ಎಂಬ ನಿಗೂಢ ಲೋಕದಲ್ಲಿ ಟೆಕಿಗಳಿದ್ದರು,  ಪರಿಸರವಾದಿಗಳಿದ್ದರು, ಚಾರಣಿಗರಿದ್ದರು, ಫೋಟೋಗ್ರಾಫರ್ ಗಳಿದ್ದರು, ಮೀನು ಹಿಡಿಯುವ  ಹುಚ್ಚಿನವರು, ಗೂಬೆ ಅಧ್ಯಯನ  ಮಾಡುವವರೂ, ಹಕ್ಕಿ ಕುಕಿಲುಗಳನ್ನು ದಾಖಲಿಸುವವರು.. ಕುಡಿ ಮೀಸೆ ಮೂಡುತ್ತಿದ್ದವರೂ, ಹಣ್ಣಣ್ಣು   ಗಡ್ಡದವರು ಎಲ್ಲರಿಗೂ ತೇಜಸ್ವಿ ಸೇರಿ ಹೋಗಿದ್ದರು.
ತೇಜಸ್ವಿ ಎಷ್ಟು ನಿಜವೋ ಅವರ ಸ್ಕೂಟರ್ ಸಹಾ  ನಿಜ, ಅವರ ಪ್ಯಾರ, ಗಯ್ಯಾಳಿಗಳು, ಎಂಗ್ಟ, ಮಂದಣ್ಣ, ಎಲ್ಲಾ.. ತೇಜಸ್ವಿ ಎಂದರೆ ಎಲ್ಲರಿಗೂ ತೇಜಸ್ವಿ ಮಾತ್ರವಲ್ಲ. ಈ ಪಾತ್ರಗಳೆಲ್ಲಾ ಸೇರಿದ ಕೂಡು ಕುಟುಂಬ. ಹಾಗಾಗಿ ಎಲ್ಲರೂ ತೇಜಸ್ವಿಯನ್ನು ಎಷ್ಟು ಪ್ರೀತಿಸಿದರೋ ಅವರ ಪಾತ್ರಗಳನ್ನೂ ಅಷ್ಟೇ ಪ್ರೀತಿಸಿದರು.

ಈಗಲೂ ಬೆಂಗಳೂರು ವಿವಿಯ ಕನಸುಗಣ್ಣಿನ ಹುಡುಗ ಶಿವಪ್ರಸಾದ್ ಫೇಸ್ ಬುಕ್ ಹೊಕ್ಕರೆ ಸಾಕು ಅಲ್ಲಿ ತೇಜಸ್ವಿ ತೇಜಸ್ವಿ ತೇಜಸ್ವಿ, ಈಶ್ವರಪ್ರಸಾದ್ ಬಾಗಿಲು ತಟ್ಟಿದರೆ ಅಲ್ಲಿ ಹಕ್ಕಿ, ಗೂಗೆ, ಜೇಡ ಹೀಗೆ ತೇಜಸ್ವಿಗೆ ಪ್ರಿಯವಾದ ಎಲ್ಲವೂ ಇವೆ. ತೇಜಸ್ವಿ ನೆನಪುಗಳನ್ನು ಬದುಕುತ್ತಿವೆ. ಅವಿರತದ ಗೆಳೆಯರಿಗೆ ತೇಜಸ್ವಿ ಎನ್ನುವುದು ಗುಂಗು. ಆ ನ ರಾವ್ ಜಾಧವ್ ಅವರಿಗೆ ತೇಜಸ್ವಿ ಕೃತಿಗಳನ್ನು ರಂಗಕ್ಕೇರಿಸುವುದು ಎಂದರೆ ಮಹಾನ್ ಉತ್ಸಾಹ. ಸುಮನಾ ಕಿತ್ತೂರ್ ಕೈನಲ್ಲಿ ಗಯ್ಯಾಳಿಗಳಿಗೆ ಹಿರಿ ತೆರೆ ಪ್ರವೇಶ,  ಮಾತನಾಡುವುದನ್ನು ನಿಲ್ಲಿಸಿಯೇ ವರ್ಷಗಳಾಗಿ ಹೋಗಿರುವ ಬೆಂಗಳೂರಿನ ಮೌನಿ ಸ್ವಾಮಿಗೆ  ತೇಜಸ್ವಿಯವರ ಪುಸ್ತಗಳನ್ನು ಮಾರುವುದೇ ಪ್ರಿಯ. ಮೈಸೂರಿನ ವೈದ್ಯ ಪ್ರಾಧ್ಯಾಪಕ ರವೀಂದ್ರನಾಥ್ ಅವರಿಗೆ ತಮ್ಮ ವೈದ್ಯಕೀಯ ಕಾಲೇಜಿನಲ್ಲಿ ತೇಜಸ್ವಿ ಕಾರ್ಯಕ್ರಮ ನಡೆಸದಿದ್ದರೆ ಸಮಾಧಾನವಿಲ್ಲ.
ತೇಜಸ್ವಿಯವರ ಮಾಯಾ ಲೋಕದಲ್ಲಿ ಎಷ್ಟೆಲ್ಲಾ.. ಈ ಒಗಟು ಬಿಡಿಸುವ ರೀತಿ ನನಗೂ ತಿಳಿದಿಲ್ಲ.

‍ಲೇಖಕರು avadhi

April 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

 1. Sudha Chidanand Gowd

  ಹಾರುವ ಓತಿಕ್ಯಾತ..
  ನನಗೆ ತೇಜಸ್ವಿಯವರನ್ನು ಪರಿಚಯಿಸಿದ್ದೇ ಈ ವಿಶಿಷ್ಠ, ಪುಟ್ಟ ಸರೀಸೃಪ. ಕನ್ನಡದಲ್ಲಿ ಸೈನ್ಸ್ ಓದಲು ಸಾಧ್ಯವೇ ಎಂದು ಯೋಚಿಸುತ್ತಿದ್ದವಳಿಗೆ ದೊರಕಿದ ಸೊಗಸಾದ ಕಾದಂಬರಿ ಕರ್ವಾಲೋ.. ಅಲ್ಲಿಂದ ಶುರುವಾದ ತೇಜಸ್ವಿ ಹುಚ್ಚು ಇನ್ನೂ ಬಿಡುವ ಲಕ್ಷಣವಿಲ್ಲ…
  ಮರುಓದಿಗೆ ಒಳಗಾಗುತ್ತಲೇ ಇದ್ದಾರೆ ತೇಜಸ್ವಿ…
  ಒಳ್ಳೆ ಮ್ಯಾಜಿಕ್ ಗಾಗಿ ಥ್ಯಾಂಕ್ಯೂ…

  ಪ್ರತಿಕ್ರಿಯೆ
 2. ಶಿವಪ್ರಸಾದ ಪಟ್ಟಣಗೆರೆ

  ಧನ್ಯವಾದಗಳು ಸರ್

  ಪ್ರತಿಕ್ರಿಯೆ
 3. ಮಹಾಂತೇಶ್ ಆಧುನಿಕ್

  ತೇಜಸ್ವಿ ಎಂಬ ಹೆಸರೇ ಒಮ್ಮೆಲೇ ನಮ್ಮನ್ನು ಅಕ್ರಮಿಸುತ್ತಾರೆ.ಗಾಡಿಯ ಮೇಲೆ ಆ ರೀತಿ ಸ್ಟಿಕ್ಕರಿಂಗ್ ಮಾಡಿಸಿದಾಗ ಜನ ಅದನ್ನು ಇಷ್ಟ ಪಟ್ಟಂತೆಲ್ಲ ಅದರ ಮೇಲೆ ಅಭಿಮಾನ ಮೂಡತೊಡಗಿತು.
  ಮೊನ್ನೆಯಷ್ಟೇ ‘ಚಾರಣ ಸುತ್ತಾಟ’ ಹಾಗೂ ‘ಜಾಗಟೆ’ ಎಂಬ ಸಂಸ್ಥೆಗಳು ಆಯೋಜಿಸಿದ್ದ ತೇಜಸ್ವಿ ಕುರಿತು ಇವೆಂಟ್ ಮತ್ತೆ ಚಾರಣದೊಂದಿಗಿನ ಚರ್ಚೆ ಗೆ ಸುಮಾರು ನಲವತ್ತು ಮಂದಿ ಬೆಂಗಳೂರಿನಿಂದ 100 ಕಿಮಿ ದೂರದ ಬೆಟ್ಟದಲ್ಲಿ ಸೇರುವುದು ಎಂದರೆ ಅದು ಮೂಡಿಗೆರೆ ಮಾಯಾವಿಯ ಕೆಲಸವಷ್ಟೇ ಎನ್ನಬಹುದು.

  ಪ್ರತಿಕ್ರಿಯೆ
 4. Anagha H

  ಚಂದದ ಇನ್ಸ್ಪಿರೆಷನಲ್ ಬರಹ…ಈ ಬರಹ ಮತ್ತೆ ತೇಜಸ್ವಿಯವರ ಕಡೆಗೆ ಪಯಣ ಬೆಳೆಸುವಂತೆ ಮಾಡಿತು.ನನ್ನ ತಮ್ಮ ಎಂಜಿನಿಯರಿಂಗ್ ಪುಸ್ತಕಗಳನ್ನು ಒತ್ತಟ್ಟಿಗೆ ಸರಿಸಿ,’ನೀನು ಇಲ್ಲ ನಾನು’ ಎಂದು ಪಟ್ಟುಬಿಡದೆ ಎಂಜಾಯ್ ಮಾಡಿಕೊಂಡು ಕೊನೆ ವಾರ ಓದಿ ಮುಗಿಸಿದ,ನಾನಿನ್ನೂ ಅರ್ಧಕ್ಕೆ ನಿಲ್ಲಿಸಿದ ‘ಮಾಯಾಲೋಕ’ವನ್ನು ಓದಿ ಮುಗಿಸುವೆ..ಚಾಲನೆ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: