ಭಾಗ ೧೧
(ಭಾಗ ೧೦ ಓದಲು ಇಲ್ಲಿ ಕ್ಲಿಕ್ಕಿಸಿ )
’ಸರಿ ನಾನು ಹೊರಡ್ತೀನಿ, ಎಲ್ಲ ಮುಗಿದ ಮೇಲೆ ಫೋನ್ ಮಾಡಿ ಎನ್ನುತ್ತಾ ನಮ್ಮನ್ನು ಆ ಪ್ರಿಂಟಿಂಗ್ ಪ್ರೆಸ್ಸಿಗೆ ಕರೆದುಕೊಂಡು ಬಂದ ಕೃಷ್ಣಪ್ಪನವರು ಹಿಂತಿರುಗಿ ಹೋದರು. ಅಲ್ಲಿಯವರೆಗೂ ನಾವು ಭೇಟಿಯಾಗಲಿದ್ದ ತೇಜಸ್ವಿ ಒಡನಾಡಿಗಳಿಗೆ ಫೋನ್ ಮಾಡಿ ವಿಷಯ ತಿಳಿಸಿ ನಂತರ ಅವರನ್ನು ಭೇಟಿಯಾಗುತ್ತಿದ್ದುದ್ದರಿಂದ ತೇಜಸ್ವಿ ಕುರಿತು ಮಾತನಾಡಲು ಅವರು ಮಾನಸಿಕವಾಗಿ ಸಿದ್ದರಾಗಿರುತ್ತಿದ್ದರು. ಆದರೆ ರಮೇಶ್ ರವರಿಗೆ ನಮ್ಮ ಭೇಟಿ ಅನಿರೀಕ್ಷಿತವಾದದ್ದಾಗಿತ್ತು. ಅಸಲಿಗೆ ಅವರಿಗೆ ನಾವು ಅವರನ್ನು ಹುಡುಕಿಕೊಂಡು ಹೋಗಿದ್ದ ಉದ್ದೇಶವೇ ತಿಳಿದಿರಲಿಲ್ಲವಾದ್ದರಿಂದ ‘ನಾವ್ಯಾರಿರಬಹುದೆಂದು’ ಯೋಚಿಸುತ್ತಿರುವಂತೆ ಮುಖಭಾವ ಮಾಡಿಕೊಂಡು ನಮ್ಮನ್ನು ಅಲ್ಲಿದ್ದ ಕುರ್ಚಿಗಳ ಮೇಲೆ ಕೂರುವಂತೆ ವಿನಂತಿಸಿದರು. ಅವರ ಮುಖಭಾವವನ್ನು ಗಮನಿಸಿ ನಾವು ಅವರನ್ನು ಹುಡುಕಿ ಹೋಗಿದ್ದ ಕಾರಣವನ್ನು ಅವರಿಗೆ ವಿವರಿಸಿದೆ. ನಮ್ಮ ಭೇಟಿಯ ಉದ್ದೇಶ ಕೇಳಿದ ರಮೇಶ್ ‘ಓ..ಅದಕ್ಕೇನಂತೆ ನಮ್ ತೇಜಸ್ವಿಯವರ ಬಗ್ಗೆ ಮಾತಾಡು ಅಂತಂದ್ರೆ ಸಂಜೆತಂಕ ಬೇಕಾದ್ರು ಮಾತಾಡ್ತೀನಿ. ಒಂದ್ನಿಮಿಷ’….ಎನ್ನುತ್ತಾ ಪ್ರೆಸ್ಸಿನ ಹುಡುಗನಿಗೆ ಕಾಫಿ ತರಲು ಹೇಳಿ ತೇಜಸ್ವಿಯವರ ನೆನಪಿನ ಬುತ್ತಿಯನ್ನು ಬಿಚ್ಚತೊಡಗಿದರು.
‘ನಮ್ಮದು ರಾಘವೇಂದ್ರ ಪ್ರಿಂಟಿಂಗ್ ಪ್ರೆಸ್ ಅಂತ. ಬಹಳ ಹಿಂದೆ ‘ಬುಕ್ಸ್ ಪ್ರಿಂಟ್ ಮಾಡ್ತೀರ’ ಅಂತ ಕೇಳ್ಕೊಂಡು ತೇಜಸ್ವಿಯವರು ನಮ್ ಹತ್ರ ಬಂದ್ರು. ಹಾಗೆ ಶುರುವಾಗಿದ್ದು ನಮ್ಮ ಹಾಗೂ ತೇಜಸ್ವಿಯವರ ಸಂಪರ್ಕ. ಅಲ್ಲಿವರೆಗೂ ಅವರು ಪೇಟೇಲಿ ಓಡಾಡೋದನ್ನ ನೋಡಿದ್ವೇ ಹೊರತು ಪರಿಚಯ ಇರಲಿಲ್ಲ’ ಎಂದು ತೇಜಸ್ವಿಯವರೊಂದಿಗಿನ ಮೊದಲ ಭೇಟಿಯ ದಿನಗಳಿಂದ ಆರಂಭಿಸಿದರು. ‘ಆಗ ನಾವು ಮೊಳೆ ಜೋಡಿಸಿ ಪ್ರಿಂಟ್ ಮಾಡ್ತಿದ್ವಿ. ಆ ಮೊಳೆ ಜೋಡಿಸೊ ಪ್ರೆಸ್ಸಿನಲ್ಲೇ ಅವ್ರ ಎರಡು ಬುಕ್ಸ್ ಪ್ರಿಂಟ್ ಮಾಡಿದ್ವಿ. ಅಮೇಲೆ ಕಂಪ್ಯೂಟರ್ರು, ಡಿಟಿಪಿ ಬಂದ ನಂತ್ರ ನಮ್ ಹತ್ರ ಬುಕ್ಸ್ ಪ್ರಿಂಟ್ ಮಾಡ್ಸೊದ್ ನಿಲ್ಸಿದ್ರು. ಆದ್ರೂ ನಮ್ ಜೊತೆ ಸಂಪರ್ಕ, ಫ್ರೆಂಡ್ಶಿಪ್ಪು ಬಿಡಲಿಲ್ಲ, ಹಾಗೇ ನಡೀತಾ ಇತ್ತು’ ಎಂದು ಆ ಮಾತು ಮುಗಿಸುವಷ್ಟರಲ್ಲಿ ಹುಡುಗ ಕಾಫಿ ಹಿಡಿದು ಬಂದ.
ಕಾಫಿ ಹೀರುತ್ತಲೇ ರಮೇಶ್ ಮಾತು ಮುಂದುವರೆಸಿದರು. ‘ಅವ್ರು ಹ್ಯಾಗೆ ಅಂತಂದ್ರೆ, ನಾನ್ ದೊಡ್ಡೋನು, ಏನಾದ್ರು ಡೌಟ್ ಇದ್ರೆ ‘ಇವನತ್ರ ಏನ್ ಕೇಳೋದು…’ ಅಂತೆಲ್ಲಾ ಜಂಭ ಮಾಡ್ತಾನೇ ಇರ್ಲಿಲ್ಲ. ಗೊತ್ತಿಲ್ಲ ಅನ್ನೋದನ್ನ ‘ಗೊತ್ತಿಲ್ಲ…ಹ್ಯಾಗೆ ಅಂತ ಹೇಳು’ ಅಂತ ನೇರವಾಗಿ ಕೇಳೋರು. ಕಂಪ್ಯುಟರ್ ಬಂದ್ಮೇಲೆ ನಡೆದ ಘಟನೆ ಇದು…ಒಂದ್ಸಲ ನನ್ನತ್ರ ಬಂದು ‘ರಮೇಶ ಏನಯ್ಯ ಇದು…ಇಷ್ಟ್ ತೊಂದ್ರೆ ಕೊಡ್ತಾ ಉಂಟು. ಏನಯ್ಯ ಮಾಡೋದು ಇದಕ್ಕೆ?’ ಅಂತ ಕೇಳಿದ್ರು. ಅದು ಕಂಪ್ಯುಟರ್ ಟೈಪಿಂಗಿಗೆ ಸಂಬಂಧಪಟ್ಟಿದ್ದ ಒಂದು ಚಿಕ್ಕ ಪ್ರಾಬ್ಲಮ್ಮು. ತಕ್ಷಣ ನಾನು ‘ಸಾರ್ ಒಂದ್ ಸ್ಪೇಸ್ ಹೊಡೀರಿ ಸಾರ್’ ಅಂತ ಹೇಳಿದೆ. (ಕೀಬೋರ್ಡಿನ ಸ್ಪೇಸ್ ಬಾರ್) ಅಷ್ಟೇ ಅವ್ರು ಸ್ಕೂಟರ್ ಹತ್ತಿ ಹೊರಟಾಯ್ತು. ಮನೇಗ್ ಹೋಗಿ ಸ್ಪೇಸ್ ಬಾರ್ ಹಾಕಿ ನೋಡಿ ಸಂಜೆ ಬಂದು ‘ಅಲ್ಲ ಕಣಯ್ಯ ರಮೇಶ…ನಾನ್ ಎಷ್ಟ್ ದಡ್ಡ ಆಗೋಗ್ಬಿಟ್ಟೆ ನೋಡಯ್ಯ…ಸ್ಪೇಸ್ ಬಾರ್ ಗೊತ್ತಿಲ್ದೇ ಹೋಯ್ತಲ್ಲಯ್ಯ ನನಗೆ’ ಅಂತ ಪೇಚಾಡ್ತಿದ್ರು. ಹಾಗೆ ಕಲಿಯೊ ಅವಕಾಶನಂತು ಅವ್ರು ಬಿಡ್ತಾನೆ ಇರ್ಲಿಲ್ಲ. ಅದಕ್ಕೆ ಅವ್ರು ಅಷ್ಟ್ ಕೆಲ್ಸ ಮಾಡೊಕ್ ಸಾಧ್ಯ ಆಯ್ತು ಅಂತ ಕಾಣುತ್ತೆ’ ಎಂದು ತೇಜಸ್ವಿಯ ಕಲಿಕೆಯ ಕುತೂಹಲದ ಕುರಿತು
ಮಾತನಾಡಿದರು. ನಾನು ತೇಜಸ್ವಿಯವರು ಇವರ ಪ್ರೆಸ್ಸಿನಲ್ಲಿ ಪುಸ್ತಕ ಪ್ರಿಂಟ್ ಮಾಡಿಸುತ್ತಿದ್ದ ದಿನಗಳ ಬಗ್ಗೆ ಮಾತನಾಡುವಂತೆ ಅವರಲ್ಲಿ ಕೇಳಿದೆ. ರಮೇಶ್ ನಗುತ್ತಲೇ ಮತ್ತೆ ಮಾತು ಪ್ರಾರಂಬಿಸಿದರು ‘ಮೊದಲು ನಾವು ಇಲ್ಲಿ ಪ್ರಿಂಟ್ ಮಾಡಿದ್ದು ‘ಕಿರಗೂರಿನ ಗಯ್ಯಾಳಿಗಳು’, ಅದನ್ನೇ ಎರಡು ಸಲ ಪ್ರಿಂಟ್ ಮಾಡಿದ್ವಿ, ಮೊದಲನೇ ಸಲ ಒಂದುಸಾವಿರ ಅದು ಹದಿನೈದೇ ದಿನದಲ್ಲಿ ಖರ್ಚಾಗಿ ಹೋಯಿತಂತೆ. ಅಮೇಲೆ ಎರಡು ಸಾವಿರ ಪ್ರಿಂಟ್ ಮಾಡಿದ್ವಿ. ಕೆಲ್ಸದ್ ವಿಚಾರದಲ್ಲಿ ಅವ್ರುದ್ದು ಪಕ್ಕಾ ಕಾಲ್ಕುಲೇಶನ್ನು, ಮೊಳೆ ಜೋಡಿಸಿ ಪ್ರಿಂಟ್ ಮಾಡ್ಬೇಕಿತ್ತಲ್ಲ ಅದಕ್ಕೆ ಅವ್ರು ‘ಒಂದ್ ಪೇಜ್ ಪ್ರಿಂಟ್ ಮಾಡೋಕೆ ಎಷ್ಟ್ ಸಮಯ ಬೇಕು? ಒಬ್ಬ ಎಷ್ಟ್ ಪೇಜ್ ಮಾಡಬಹುದು? ಇಷ್ಟ್ ಕೆಲ್ಸ ಮಾಡಿದ್ರೆ ಪುಸ್ತಕ ಪ್ರಿಂಟ್ ಅಗೋಕೆ ಎಷ್ಟ್ ದಿನ ಬೇಕು? ಅಂತೆಲ್ಲ ಕೇಳಿ ತಿಳ್ಕೊಂಡು ಅಮೇಲೆ ಕೆಲ್ಸ ಶುರು ಮಾಡಿಸ್ತಿದ್ರು.
ಪ್ರೂಫ್ ನೋಡ್ಬೆಕಾದ್ರು ಅಷ್ಟೇನೆ, ಅವ್ರು ಪ್ರೂಫ್ ನೋಡೊಕ್ ಕೂತ್ರು ಅಂದ್ರೆ ಮೈಮೇಲೆ ಏನಾದ್ರು ಹಾಕಿದ್ರು ಗೊತ್ತಗ್ತಿರ್ಲಿಲ್ಲ ಅವ್ರಿಗೆ. ಅಷ್ಟು ಕಾನ್ಸನ್ಟ್ರೇಷನ್ನು, ಇನ್ವಾಲ್ವ್ಮೆಂಟ್ಟು. ಓಂದೊಂದ್ ಸಲ ಅಂತು ರಾತ್ರಿ ೧೧ ಗಂಟೆಗೆಲ್ಲ ಬತ್ರಿದ್ರು ಪ್ರೂಫ್ ನೋಡೋಕೆ! ನನಗೆ ನಮ್ ಹುಡುಗ್ರಿಗೆಲ್ಲಾ ಆಶ್ಚರ್ಯ ಅಗೋದು ಇವ್ರ ಕಮಿಟ್ಮೆಂಟ್ ನೋಡಿ. ಆದ್ರೆ ಮಾತ್ರ ಪ್ರತಿಯೊಂದು ನೇರ ನೇರ. ಹಿಂದೊಂದು ಮುಂದೊಂದು ಇರಲೆ ಇಲ್ಲ’ ಎನ್ನುತ್ತಾ ಮಾತು ಮುಂದುವರೆಸಿದರು. ಕಡೆಯ ಮಾತು ಹೇಳುವಾಗ ಅವರ ಕಣ್ಣುಗಳಲ್ಲಿ ತೇಜಸ್ವಿ ಕುರಿತ ಹೆಮ್ಮೆ ಎದ್ದು ಕಾಣುತ್ತಿತ್ತು.
ಅವರ ಮೂಡ್ ಚೆನ್ನಾಗಿದ್ಯ?
ಕೆಲವು ಸಲ ಏನಾಗೋದು ಇವ್ರು ನಮ್ ಪ್ರೆಸ್ಸಿಗೆ ರೆಗ್ಯುಲರ್ ಆಗಿ ಬರ್ತಾರೆ ಅಂತ ತಿಳ್ಕೊಂಡು ಇವ್ರನ್ನ ನೋಡ್ಬೇಕು ಮಾತಾಡಿಸ್ಬೇಕು ಅಂತ ತುಂಬಾ ಜನ ಪ್ರೆಸ್ಸಿನ ಹೊರಗಡೆ ಬಂದು ನಿಂತು ಬಗ್ಗಿ ಬಗ್ಗಿ ನೋಡ್ತಿದ್ರು. ನೇರವಾಗಿ ಬಂದು ಮಾತಾಡ್ಸಕ್ಕೆ ಭಯ ಪಡೋರು. ಹಾಗೆ ಬಗ್ಗಿ ನೋಡುವಾಗ ತೇಜಸ್ವಿ ಕಣ್ಣಿಗೇನಾದ್ರು ಬಿದ್ರೆ ‘ಏನಯ್ಯ ಇಲ್ಲಿ ಬಗ್ ನೋಡ್ತಿಯ? ಇಲ್ಲೇನ್ ಕೋತಿ ಕುಣೀತಿದ್ಯ? ಹೋಗ್ ಹೋಗ್ ನಿನ್ ಕೆಲ್ಸ ನೋಡ್ಕೊ…’ ಅಂತ ರೇಗಿ ಕಳಿಸಿಬಿಡೊರು. ಕಾಲೇಜು ಲೆಕ್ಚರರಗಳು, ಸ್ಕೂಲ್ ಟೀಚರ್ಸ್, ಸ್ಟೂಡೆಂಟ್ಸ್ ಹೀಗೆ ತುಂಬಾ ಜನ ಬರೋರು. ಕೆಲವರಂತು ಅವ್ರನ್ನ ಮಾತಾಡ್ಸೋಕ್ ಮುಂಚೆ ನಮ್ ಪ್ರೆಸ್ಸಿಗ್ ಬಂದು ಅವ್ರ ಮೂಡ್ ಹ್ಯಾಗಿದೆ? ಈಗ ಹೋಗಿ ನೋಡಬಹುದ? ಅಂತ ಕೇಳ್ಕೊಂಡ್ ಅಮೇಲೆ ಅವ್ರನ್ನ ಮೀಟ್ ಮಾಡೋಕೆ ಹೋಗ್ತಿದ್ರು. ಮನೆಗೆ ಹೋದ್ರು ಅಷ್ಟೆ, ಕಿಟಕಿಯಲ್ಲೇ ನೋಡಿ ಯಾರಾದ್ರು ಕಿರಿಕಿರಿ ಪಾರ್ಟಿಗಳು ಅಂತ ಗೊತ್ತಾದ್ರೆ ಇವತ್ತು ಅಗೋದಿಲ್ಲ ಅಂತ ನೇರವಾಗಿ ಹೇಳಿ ಕಳಿಸಿಬಿಡ್ತಿದ್ರು.
ಅದ್ರೆ ಹುಡುಗರು ಅಂದ್ರೆ ಯೂತ್ಸ್ ಜೊತೆಗೆ ಅವ್ರು ಹಾಗಿರಲಿಲ್ಲ. ತುಂಬಾ ಮುಕ್ತವಾಗಿ ಬೆರೀತಿದ್ರು. ಪರಿಚಯದ ಯಾರಾದ್ರು ಹುಡುಗ ಕಂಡ್ರೆ ’ಏಯ್ ಯಾವಾಗ್ ಬಂದ್ಯೊ?’ ಅಂತ ಹೆಗಲ ಮೇಲೆ ಕೈ ಹಾಕ್ಕೊಂಡು ಹೋಗ್ತಿದ್ರು, ಗೆಳೆಯನ ಥರ. ಹಾಗಾಗಿ ಅವ್ರ ಓದುಗರಲ್ಲೂ ಯೂತ್ಸ್ ಜಾಸ್ತಿ ಇರೋದು ಇದೇ ಕಾರಣಕ್ಕೆ ಇರಬೇಕು ಅನ್ಸುತ್ತೆ’ ಎಂದು ತುಂಬಾ ಮುಗ್ಧವಾಗಿ ತೇಜಸ್ವಿಯವರ ಹಲವು ಮುಖಗಳ ಅನಾವರಣ ಮಾಡುತ್ತಾ ಹೋದರು ರಮೇಶ್. ಹೇಮಂತ ಪ್ರಿಂಟಿಂಗ್ ಮಶೀನ್ ಕೆಲಸ ಮಾಡುವ ಕಾರ್ಯವಿಧಾನದ ಬಗ್ಗೆ ಅವರಲ್ಲಿ ಪ್ರಶ್ನಿಸಿದ. ಅವರು ಪ್ರಿಂಟಿಂಗ್ ಮಷಿನ್ ಕೆಲಸ ಮಾಡುವ ಕಾರ್ಯವಿಧಾನವನ್ನು ಕೆಲವು ಸ್ಯಾಂಪಲ್ ಪ್ರಿಂಟ್ ಮಾಡಿ ತೋರಿಸಿ ನಮಗೆ ವಿವರಿಸಿದರು. ದರ್ಶನ್ ಎಲ್ಲವನ್ನೂ ಚಿತ್ರೀಕರಿಸಿಕೊಳ್ಳುತ್ತಿದ್ದರು. ನಿತಿನ್ ಮಾತ್ರ ’ನೀವು ಏನು ಬೇಕಾದ್ರು ಮಾಡಿಕೊಳ್ಳಿ’ ಎಂಬಂತೆ ಮೂಲೆಯಲ್ಲಿದ್ದ ಚೇರಿನಲ್ಲಿ ಕುಳಿತು ಬಾಗಿಲಾಚೆ ರಸ್ತೆಯಲ್ಲಿ ಹೋಗಿಬರುವವರನ್ನು ನೋಡುತ್ತಿದ್ದ.
’ಸಾರ್ ಕಾಫಿ ತರುಸ್ಲಾ…?’
ಹೀಗೆ ಪ್ರಿಂಟಿಂಗ್ ಮಶಿನ್ ಡೆಮೊ ಆ ತೋರಿಸುತ್ತಿದ್ದಾಗ ಅದರೊಟ್ಟಿಗೆ ತಳುಕು ಹಾಕಿಕೊಂಡಿದ್ದ ಹಳೆಯ ಘಟನೆಯೊಂದು ನೆನಪಾಗಿ ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದರು. ‘ಆಗ ಕಿರಗೂರಿನ ಗಯ್ಯಾಳಿಗಳು ಪ್ರಿಂಟಿಂಗ್ ನಡೀತಿತ್ತು. ನಮಗಂತು ಹಗಲು-ರಾತ್ರಿ ಕೆಲಸ ಅದು. ತೇಜಸ್ವಿಯವ್ರು ಬಂದ್ರೆ ಇಲ್ಲಿ ಮಧ್ಯದಲ್ಲಿ ಮೇಲೆ ಅಟ್ಟ ಹತ್ತೊಕೆ ಅಂತ ಮೆಟ್ಟಿಲು ಇತ್ತು. ಬಂದು ಎರಡು ಕಡೆ ಕೈಹಾಕ್ಕೊಂಡು ಒರಗಿ ನಿಂತ್ಕೋತಿದ್ರು. ಒಂದ್ಸಲ ಇವ್ರು ಬಂದವರೆ ’ಏಯ್ ರಮೇಶ ಕಾಫಿ ತರಿಸಯ್ಯ’ ಅಂದ್ರು. ಇಲ್ಲಿ ಪಕ್ಕದಲ್ಲಿ ಒಬ್ರು ಹೋಟೆಲ್ ಇತ್ತು. ಆ ಹೋಟೆಲಿನವನ ಹೆಸರು ನಾಗರಾಜ ಅಂತ. ಅವನು ಬಂದ. ತೇಜಸ್ವಿಯವ್ರಿಗೆ ಕಾಫಿ ಬೇಕಂತೆ ಆನ್ನೊ ಮಾತು ಕೇಳೇ ಅವನು ಸಿಕ್ಕಾಪಟ್ಟೆ ಖುಷಿಯಾಗಿ ’ಸ್ಟ್ರಾಂಗಾಗಿ ಮಾಡ್ಕೋಂಡ್ ಬರ್ತೀನಿ ಸಾರ್’ ಕಾಫಿ ತರೋಕೆ ಓಡಿದ.
ಅವನಿಗೇನೊ ಇವರಿಗೆ ಕಾಫಿ ಕೊಡೋದೆ ದೊಡ್ಡ ಸಂಭ್ರಮ. ಹೋದವನೇ ಚೆನ್ನಾಗಿ ಡಿಕಾಕ್ಷನ್ನು, ಹಾಲು ಎಲ್ಲಾ ಹಾಕಿ ಸ್ಟ್ರಾಂಗಾಗಿ ಕಾಫಿ ಮಾಡ್ಕೊಂಡ್ ತಂದ. ನಮ್ ಹುಡುಗ್ರು ನಾವು ಎಲ್ಲಾ ಸೇರಿ ೯ ಜನ ಇದ್ವಿ. ಎಲ್ರೂ ಕಾಫಿ ತಗೊಂಡ್ರು…ಇವ್ರು ತಗೊಂಡ್ರು ಕುಡಿಯೋಕೆ ಶುರು ಮಾಡಿದ್ರು. ತೇಜಸ್ವಿ ಅವ್ರ ಪಾಡಿಗೆ ಅವ್ರು ಕಾಫಿ ಕುಡೀತಿದಾರೆ, ಆದ್ರೆ ನಮ್ ಹುಡುಗ್ರು ಮಾತ್ರ ಒಂದ್ ಗುಟುಕು ಕುಡಿಯೋದು ಮುಖ ಹಿಂಡಿಕೊಂಡು ಇವ್ರ ಕಡೆ ನೋಡೊದು ಒಂದ್ ಗುಟುಕು ಕುಡಿಯೋದು ಮುಖ ಹಿಂಡಿಕೊಂಡು ಇವ್ರ ಕಡೆ ನೋಡೊದು ಹೀಗೆ ಮಾಡ್ತಿದ್ರು. ಅಷ್ಟರಲ್ಲಿ ಒಬ್ಬ’ಸಾರ್….’ ಅಂದ. ’ಏನೋ ನಿಂದು?’ಇವ್ರು ಅಂದ್ರು. ’ಕಾಫಿಗೆ ಸಕ್ರೇನೆ ಹಾಕಿಲ್ಲ ಸಾರ್’ ಅಂದ ಅವ್ನು. ತಕ್ಷಣ ಅವ್ರು ’ಹೌದ?’ ಅಂದ್ಬಿಟ್ಟು ಮತ್ತೆ ಕುಡಿದು ನೋಡಿ ’ಹೌದಲ್ಲೊ, ಏಯ್ ದಡ್ಡ ಸಕ್ರೇನೆ ಹಾಕ್ದೆ ಕಾಫಿ ತಂದಿಯಲ್ಲೊ. ಹೋಗ್ ಹೋಗ್ ಸಕ್ರೆ ಹಾಕ್ಕೊಂಡ್ ಬಾ’ ಅಂತ ಇವ್ರಿಗೆ ಕಾಫಿ ಕೊಟ್ ಆದ್ಮೇಲೆ ಇವ್ರು ಕಾಫಿ ಕುಡಿಯೋದನ್ನೇ ನೋಡ್ತಾ ಅಲ್ಲೇ ನಿಂತಿದ್ದಾಅ ನಾಗರಾಜ ಅನ್ನೊನಿಗೆ ಬೈದು ಕಳಿಸಿದ್ರು.
ರಮೇಶ್ ರವರಿಗೆ ಈ ಘಟನೆ ಹೇಳುತ್ತಾ ಅವರಿಗೆ ನಗು ತಡೆಯಲಾಗದೇ ನಗುತ್ತಲೇ ಮಾತು ಮುಂದುವರೆಸಿದರು. ’ಅಲ್ಲ ಸಾರ್ ಇಲ್ಲಿವರ್ಗೂ ಕಾಫಿ ಕುಡ್ದಿದ್ರಲ್ಲ, ಕಾಫಿಗೆ ಸಕ್ರೇನೆ ಇಲ್ಲ ಅಂತ ಗೊತ್ತೆ ಆಗ್ಲಿಲ್ವ? ಅಂತ ಕೇಳ್ದಾಗ ಅವ್ರು ’ಹಾ ನಂಗ್ ಸಾಕು. ಪಾಪ ನಿಮಗೆ ಬೇಕಾಗುತ್ತೆ. ಹಾಕಿಸ್ಕೊಂಡ್ ಕುಡೀರಿ’ ಅಂತ ಹೇಳಿದ್ರು ಎಂದು ಕಿರಗೂರಿನ ಗಯ್ಯಾಳಿಗಳು ಪುಸ್ತಕ ಮುದ್ರಣದ ಸಂದರ್ಭದ ಘಟನೆಯನ್ನು ವಿವರಿಸಿದರು.
ರಮೇಶ್ ಹೀಗೆ ತೇಜಸ್ವಿ ನೆನಪಿನ ವಿಶ್ವಕೋಶ ಬಿಚ್ಚಿಡುತ್ತಾ ಹೋದರು. ಹೀಗೆ ನಮ್ಮ ಹಾಗೂ ಅವರ ಮಾತು ಮುಗಿದಾಗ ಸಮಯ ಬೆಳಿಗ್ಗೆ ೧೧ ಗಂಟೆ. ರಮೇಶ್ ರವರ ಭಾಗದ ಮಾತುಗಳನ್ನು ಚಿತ್ರೀಕರಿಸಿಕೊಂಡು ಹೊರಡಲು ಸಿದ್ದರಾದಾಗ ಅವರು ’ಇಲ್ಲಿ ಒಬ್ರಿದಾರೆ. ಅವ್ರು ಅಂಗಡಿಯಲ್ಲೇ ತೇಜಸ್ವಿ ಕಡೆ ಬಾರಿಗೆ ಕೂತು ಮಾತಾಡಿ ಹೋಗಿದ್ದು. ಅವ್ರನ್ನು ಮಾತಾಡಿಸ್ತೀರ?’ ಎಂದು ನನ್ನನ್ನು ಕೇಳಿದರು. ’ತೇಜಸ್ವಿ ಕಡೆಯ ದಿನ ಕಡೆಯ ಬಾರಿಗೆ ಕೂತು ಮಾತನಾಡಿ ಹೋಗಿದ್ದು ಒಂದು ಟಿವಿ ರಿಪೇರಿ ಮಾಡುವ ಅಂಗಡಿಯಲ್ಲಿ’ ಎಂಬ ಮಾಹಿತಿ ನಾನು ಸಾಕ್ಷ್ಯಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಎಲ್ಲೋ ಓದಿಕೊಂಡಿದ್ದ ನೆನಪಾಯಿತು. ತಕ್ಷಣ ರಮೇಶ್ ರವರಿಗೆ ’ಖಂಡಿತ ಅವ್ರನ್ನ ಮೀಟ್ ಮಾಡ್ಬೇಕು ಸರ್. ಎಲ್ಲಿ ಸಿಗ್ತಾರೆ ಅವ್ರು’ ಎಂದು ಅವರನ್ನು ವಿಚಾರಿಸಿದೆ. ರಮೇಶ್ ನಗುತ್ತಾ ಅವ್ರ ಹೆಸರು ಸೂರಿ ಅಂತ ’ಇಲ್ಲೇ ಹತ್ತಿರದಲ್ಲಿ ಅವರ ಟಿವಿ ರಿಪೇರಿ ಅಂಗಡಿ ಇದೆ. ಬನ್ನಿ ತೋರಿಸ್ತೀನಿ’ ಎಂದು ನಮ್ಮನ್ನು ಕರೆದುಕೊಂಡು ಹೊರಟರು. ಕೇವಲ ಒಂದು ರಸ್ತೆ ದಾಟಿ ಎಡಕ್ಕೆ ತಿರುಗಿದ ಕೂಡಲೇ ’ತೇಜಸ್ವಿ ಕಡೆಯ ಬಾರಿಗೆ ಕೂತು ಮಾತನಾಡಿ ಹೋಗಿದ್ದ’ ಆ ಟಿವಿರಿಪೇರಿ ಅಂಗಡಿ ಹಾಗೂ ಅಂಗಡಿಯ ಬೋರ್ಡ್ ’ಹರ್ಷ ಎಲೆಕ್ಟ್ರಾನಿಕ್ಸ್’ ಕಾಣಿಸಿತು.
‘ಹರ್ಷ ಎಲೆಕ್ಟಾನಿಕ್ಸ್ ಸುರೇಂದ್ರರವರು ಕಂಡ ತೇಜಸ್ವಿ’
ಅಂಗಡಿಯಲ್ಲಿ ಅಂಗಾಂಗ ಕಳಚಿಕೊಂಡು ಅಸ್ತವ್ಯಸ್ತವಾಗಿ ರಾಶಿ ಬಿದ್ದಿದ್ದ ಹಳೆಯ ಟಿವಿಯೊಂದರ ರಿಪೇರಿಯಲ್ಲಿ ಮುಳುಗಿದ್ದ ವ್ಯಕ್ತಿಯೊಬ್ಬರು ರಮೇಶ್ ಬರುತ್ತಿರುವುದನ್ನು ನೋಡಿ ಕೈಲಿದ್ದ ಸಾಲ್ಡರಿಂಗ್ ಯಂತ್ರದಲ್ಲಿ ಕೆಲಸ ಮುಂದುವರೆಸುತ್ತಲೇ ’ಏನ್ ರಮೇಶಣ್ಣ ಯಾವ್ದೋ ಟೀಮ್ ಕರ್ಕೊಂಡ್ ಬರ್ತಿದ್ದೀರ. ಯಾರಿವ್ರು? ಏನ್ ಸಮಾಚಾರ’ ಎಂದು ರಮೇಶ್ ರನ್ನು ಪ್ರಶ್ನಿಸಿದರು. ರಮೇಶ್ ಅವರ ಮಾತಿಗೆ ನಗುತ್ತಾ ’ತೇಜಸ್ವಿಯವ್ರ ಬಗ್ಗೆ ಶೂಟಿಂಗ್ ಮಾಡೊಕೆ ಅಂತ ಬಂದಿದಾರೆ. ಅದಕ್ಕೆ ಕರ್ಕೊಂಡ್ ಬಂದೆ. ನಿನಗೇನ್ ಗೊತ್ತೊ ಅದನ್ನ ಅವ್ರಿಗೆ ಹೇಳು’ ಎಂದು ನಮ್ಮನ್ನು ಅವರಿಗೆ ಪರಿಚಯಿಸಿದರು. ರಮೇಶ್ ಹಾಗೆ ನಮ್ಮನ್ನು ಪರಿಚಯಿಸಿದ ಮರುಕ್ಷಣವೇ ಟಿವಿ ಅಂಗಡಿಯ ಸುರೇಂದ್ರರವರು ’ತೇಜಸ್ವಿಯವ್ರು ಕಡೇದಿನ ಕೂತಿದ್ದು, ಮಾತಾಡಿ ಎದ್ದು ಹೋಗಿದ್ದು ನಮ್ ಅಂಗಡೀಲೆ, ಇದೇ ಚೇರಿನಲ್ಲೆ…’ ಎಂದು ಕೆಲಸ ಮುಂದುವರೆಸುತ್ತಲೇ ಮೂಲೆಯಲ್ಲಿದ್ದ ಖುರ್ಚಿಯೊಂದನ್ನು ತೋರಿಸಿ ನೇರವಾಗಿ ಮಾತು ಪ್ರಾರಂಭಿಸಿದರು.
ಸುರೇಂದ್ರರವರು ಹೀಗೆ ಒಂದೇ ಸಲಕ್ಕೆ ಮಾತು ಪ್ರಾರಂಭಿಸುತ್ತಾರೆಂದು ನಾವು ನಿರೀಕ್ಷಿಸಿರಲಿಲ್ಲವಾದ್ದರಿಂದ ಆಗ ನಮ್ಮ ಕ್ಯಾಮೆರ ಆನ್ ಇರಲಿಲ್ಲ. ಹಾಗಾಗಿ ಅವರಿಗೆ ಕೊಂಚ ವಿರಾಮ ಕೊಡುವಂತೆ ಹೇಳಿ ಕ್ಯಾಮೆರ ಆನ್ ಮಾಡಿಸಿ ಮತ್ತೆ ಮೊದಲಿನಿಂದ ಮಾತು ಪ್ರಾರಂಭಿಸುವಂತೆ ವಿನಂತಿಸಿದೆ. ಅವರು ಮತ್ತೊಮ್ಮೆ ಅದೇ ಮಾತನ್ನ ಪುನರಾವರ್ತಿಸುತ್ತಾ ಮುಂದುವರೆಸಿದರು, ’ಅವತ್ತು ಏಪ್ರಿಲ್ ೦೭ನೇ ತಾರೀಖು ಅವ್ರು ಅವ್ರ ಮೊಮ್ಮಗಳು ಅಪರೂಪಕ್ಕೆ ನಮ್ ಅಂಗಡಿಗೆ ಬಂದು ಕೂತು ತುಂಬಾ ಹೊತ್ತು ಮಾತಾಡ್ತಿದ್ರು. ಯಾವತ್ತೂ ಇಲ್ದೇ ಅವತ್ತು ನಾನು ಅವ್ರ ಹತ್ರ ಕುವೆಂಪು ಬಗ್ಗೆ ಕೇಳ್ತಿದ್ದೆ. ಅವ್ರು ಒಳ್ಳೆ ಮೂಡಿನಲ್ಲಿ ಇದ್ರೇನೊ ಚೆನ್ನಾಗ್ ಮಾತಾಡಿದ್ರು. ಅಮೇಲೆ ’ಏಯ್ ಸುಮ್ನಿರೊ ಮಾರಾಯ, ನನಗೆ ಹೊತ್ತಾಗ್ತಿದೆ…ಮತ್ತೆ ಬರ್ತೀನಿ ಇರು..ಈಗ ಹೋಗ್ಬೇಕು….’ ಅಂತ ಹೇಳಿ ಹೋದ್ರು….ಅಷ್ಟೇ….’ ಎಂದು ಮಾತು ತಡೆದು ಅಲ್ಲಿಯವರೆಗೂ ಕೈಯಲ್ಲಿ ಹಿಡಿದಿದ್ದ ಸಾಲ್ಡರಿಂಗ್ ಯಂತ್ರವನ್ನು ಕೆಳಗಿಟ್ಟು ಸುಮ್ಮನಾದರು.
ಕೆಲನಿಮಿಷಗಳ ನಂತರ ಸುರೇಂದ್ರರವರು ನಾವೆಷ್ಟೇ ಬೇಡವೆಂದರು ಬಿಡದೆ ಹತ್ತಿರದಲ್ಲೇ ಇದ್ದ ಅವರ ಮನೆಗೆ ಕರೆದುಕೊಂಡು ಹೋಗಿ ಅವರ ಪತ್ನಿ ಹಾಗು ಮಗನನ್ನು ಪರಿಚಯಿಸಿದರು. ಅವರ ಪತ್ನಿ ತುಂಬಾ ಸಂಭ್ರಮದಿಂದ ನಮಗೆಲ್ಲ ಕ್ಯಾರೆಟ್ ಹಲ್ವ, ಬಿಸ್ಕೆಟ್, ಕಾಫಿ ಕೊಟ್ಟು ಸತ್ಕರಿಸಿದರು. ಹಾಗೆ ಅವರು ಕೊಟ್ಟ ಕಾಫಿ ಕುಡಿಯುತ್ತಿರಬೇಕಾದರೆಸುರೇಂದ್ರರವರು ತೇಜಸ್ವಿಯವರ ಮನೆಯಲ್ಲಿ ಕಂಡ ಸಂಗತಿಯೊಂದನ್ನು ನಮ್ಮೊಂದಿಗೆ ಹಂಚಿಕೊಂಡರು. ’ಒಂದಿನ ನಾನು ತೇಜಸ್ವಿಯವರ ಮನೆಗೆ ಬೆಳಿಗ್ಗೆನೆ ಹೋಗಿದ್ದೆ.
ಅಲ್ಲಿ ಮಹಡಿ ಮೇಲೆ ಬುಟ್ಟಿ ತುಂಬಾ ದ್ರಾಕ್ಷಿ ಹಣ್ಣಿಟಿದ್ದರು. ನಾನು ನನ್ನ ಕೆಲ್ಸ ಎಲ್ಲ ಮುಗಿಸಿ ಹೊರಡಬೇಕಾದರೆ ನನಗೂ ಸ್ವಲ್ಪ ಹಣ್ಣು ಕೊಡ್ತಾರೆ ಅಂದ್ಕೊಂಡಿದ್ದೆ. ಆದರೆ ಅವ್ರು ಬುಟ್ಟಿ ತಗೊಂಡ್ ಹೊರಗಡೆ ಹೋದ್ರು. ಏನ್ ಮಾಡ್ತಾರೆ ಅಂತ ನೋಡಿದ್ರೆ ಅವ್ರು ಆ ಹಣ್ಣನ್ನೆಲ್ಲಾ ಅಲ್ಲಿದ್ದ ಮರದ ಕೊಂಬೆಗಳಿಗೆ ಕಟ್ತಾ ಇದ್ರು. ನನಗೆ ಆಶ್ಚರ್ಯ ಆಗಿ ಯಾಕೆ ಹೀಗೆ ಅಂತ ಕೇಳ್ದಾಗ ಅವ್ರು ಹೇಳಿದ್ದು ಕಾಡಿನ ಹಕ್ಕಿಗಳಿಗೆ ತಿನ್ನೊಕೆ ಅಂತ. ನಾನು ಮತ್ತೇನು ಮಾತಾಡ್ದೇ ಅಲ್ಲಿಂದ ಬಂದೆ’ ಎಂದು ಎಂದು ಹೇಳಿದರು. ಸುರೇಂದ್ರರವರು ಈ ಘಟನೆ ವಿವರಿಸುತ್ತಿದ್ದಾಗ ತೇಜಸ್ವಿಯವರ ಮನೆಯ ಮಹಡಿಯ ಮೇಲೆ ಅವರು ಹಕ್ಕಿಗಳ ಫೋಟೋ ತೆಗೆಯಲು ಮಾಡಿಕೊಂಡಿದ್ದ ವ್ಯವಸ್ಥೆ ನೆನಪಿಗೆ ಬಂತು. (ಅಲ್ಲಿನ ಒಂದು ಕಿಟಕಿಗೆ ಕಪ್ಪು ಬಟ್ಟೆ ಕಟ್ಟಿ ಅದಕ್ಕೆ ಕ್ಯಾಮೆರಾದ ಲೆನ್ಸ್ ನುಗ್ಗುವಷ್ಟು ರಂದ್ರ ಮಾಡಿ ಕಿಟಕಿಯ ಆಚೆಗೆ ಕಾಣುವ ಮರದ ಕೊಂಬೆಗಳಿಗೆ ಹಣ್ಣಿನ ಗೊಂಚಲು ಕಟ್ಟಿ ಹಕ್ಕಿಗಳ ಫೋಟೋ ತೆಗೆಯಲು ಪ್ರಯತ್ನಿಸುತ್ತಿದ್ದರಂತೆ).
ಅಷ್ಟರಲ್ಲಿ ಕಾಫಿಯೊಂದಿಗೆ ಮಾತು ಸಹ ಮುಗಿದಿತ್ತು. ಅಲ್ಲಿಂದ ಹೊರಡುವ ಮೊದಲು ’ತೇಜಸ್ವಿಯವರು ಬಿರ್ಯಾನಿ ಹೋಟೆಲ್ ಯಾವ್ದು ಅಂತ ಗೊತ್ತ ತಮಗೆ?’ ಎಂದು ಅವರಿಗೆ ಕೇಳಿದೆ. ಅದಕ್ಕವರು ಓ ಚೆನ್ನಾಗಿ ಗೊತ್ತು…ಬನ್ನಿ ಹೋಗ್ತಾ ದಾರಿನಲ್ಲೇ ಸಿಗುತ್ತೆ ತೋರಿಸ್ತೀನಿ’ ಎಂದು ನಮ್ಮನ್ನು ಕರೆದುಕೊಂಡು ಹೊರಟರು. ನಮ್ಮ ಅಂದಿನ ಶೂಟಿಂಗ್ ಶೆಡ್ಯೂಲ್ ಪ್ರಕಾರ ತೇಜಸ್ವಿ ವಾರಕ್ಕೊಮ್ಮೆ ತಪ್ಪದೆ ಬಿರಿಯಾನಿ ಪಾರ್ಸೆಲ್ ಮಾಡಿಸಿಕೊಂಡು ಹೋಗುತ್ತಿದ್ದ ಹೋಟೆಲಿನವರ ಮಾತುಗಳನ್ನು ಚಿತ್ರೀಕರಿಸಬೇಕಿತ್ತು. ನಮ್ಮ ಮೂರು ಜನ ಹುಡುಗರು ಹಾಗು ಸುರೇಂದ್ರರವರೊಟ್ಟಿಗೆ ಆ ಬಿರಿಯಾನಿ ಹೋಟೆಲಿನೆಡೆಗೆ ಹೆಜ್ಜೆ ಹಾಕಿದೆ.
…ಮುಂದುವರೆಯುವುದು
ಗಾಂಧಿನಗರ, ಜಯನಗರ ಹಾಗೂ ಕೋರಮಂಗಲದ ಸಪ್ನ ಪುಸ್ತಕ ಮಳಿಗೆಗಳಲ್ಲಿ, ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ರೇಸ್ ಕೋರ್ಸ್ ಬಳಿಯ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ “ಮತ್ತೆ ಮತ್ತೆ ತೇಜಸ್ವಿ” ಸಾಕ್ಷ್ಯಚಿತ್ರದ ಡಿವಿಡಿಗಳು ದೊರೆಯುತ್ತವೆ.
ಹೆಚ್ಚಿನ ಮಾಹಿತಿಗಾಗಿ ಟೋಟಲ್ ಕನ್ನಡದ ಲಕ್ಷ್ಮಿಕಾಂತ್ (ಡಿವಿಡಿ ವಿತರಣೆಯ ಹಕ್ಕುದಾರರು) ರವರನ್ನು ಸಂಪರ್ಕಿಸಿ. Mobile No: 9986222402







Geleyare
nimma baravanige tumba aptavaagide. dayavittu neevu tegediruva
Documentary DVD elli doreyuttatendu tilisi athava ondu DVDyannu
Kaluhisikottare adara Hanavannu nimma khatege tumbuve. haageye
nimma baravanigeyu pustaka roopadalli bandiddare dayavittu tilisi
athava neevu koduvudaadre naane prakatisuve.
vandanegalu
M. Byregowda
Kshamisi
Nanna email id: byregowda.m1@gmail.com
Phone number 9448102158, nimma number tilisi
Contact maduve
vandanegalu
M. Byregowda
ತೇಜಸ್ವಿ ಇಲ್ಲದೆ ಮೂಡಿಗೆರೆಯನ್ನೂ ಕಲ್ಪಿಸಿಕೊಳ್ಳುವುದು ಸಾದ್ಯವಿಲ್ಲ.ಅವರ ಬದುಕು ಬರಹ ನಮ್ಮಂತಹ ಯುವಕರಿಗೆ ದಾರಿದೀಪ