ತೇಜಸ್ವಿಯನ್ನು ಹುಡುಕುತ್ತಾ : ಕೃಷಿ ವಿಜ್ಞಾನಿಗಳು ಹಂಚಿಕೊಂಡ ತೇಜಸ್ವಿಯ ನೆನಪುಗಳು

 

(ಇಲ್ಲಿಯವರೆಗೆ…)

“ಅಂಡಮಾನ್ ಗೆ ಬಂದ ತಕ್ಷಣ ಮೊಟ್ಟಮೊದಲನೆದಾಗಿ ತೇಜಸ್ವಿ ಕೇಳಿದ ಪ್ರಶ್ನೆನೇ ’ರೀ ಈ ಅಂಡಮಾನ್ ನಲ್ಲಿ ಏನೇನ್ ಇದಾವ್ರಿ ನೋಡೋದಿಕ್ಕೆ?’ ಅಂತ. ನಾನ್ ಇದೇನ್ ಹಿಂಗ್ ಕೇಳ್ತಾ ಇದಾರಲ್ಲ ಅಂತ ಅಂದ್ಕೊಂಡು ’ಯಾಕ್ ಸಾರ್ ಹಿಂಗ್ ಕೇಳ್ತಾ ಇದೀರ?’ ಅಂದೆ. ಅದಕ್ಕೆ ತೇಜಸ್ವಿಯವ್ರು ಹೇಳಿದ್ದು, ’ನಾನು ಅವನೆಲ್ಲಾ ನೋಡ್ಬೇಕು ಅಂತ ಅಲ್ಲಾರಿ ಕೇಳ್ತಿರೋದು. ಇಲ್ಲಿಂದ ವಾಪಸ್ ಮೂಡಿಗೆರೆಗೆ ಹೋದ್ಮೇಲೆ ಸಿಕ್ಕಸಿಕ್ಕಿದೋರೆಲ್ಲ ’ಅಂಡಮಾನ್ ನಲ್ಲಿ ಏನೇನ್ ನೋಡಿದ್ರಿ? ಅದ್ ನೋಡಿದ್ರ? ಇದ್ ನೋಡಿದ್ರ?’ ಅಂತ ಕೇಳಿ ತಲೆತಿಂದುಬಿಡ್ತಾರೆ. ಅದಕ್ಕೆ ಕೇಳಿದ್ದು. ನೀವು ಏನೇನ್ ಇದಾವೆ ಇಲ್ಲಿ ನೋಡೋಕೆ ಅಂತ ಹೇಳಿ. ವಾಪಸ್ ಊರಿಗೆ ಹೋದ್ಮೇಲೆ ಯಾರಾದ್ರು ಕೇಳಿದ್ರೆ ನೀವು ಹೇಳಿದ ಜಾಗನ್ನೆಲ್ಲಾ ಹೇಳಿ ಅವರನ್ನ ಸಮಾಧಾನ ಪಡಿಸ್ತೀನಿ’ ಅಂತಂದ್ರು…”
ಸಮಯ: ಸಂಜೆ ಸುಮಾರು ನಾಲ್ಕು ಗಂಟೆ
ಸ್ಥಳ: ಬೆಂಗಳೂರಿನ ಹೆಬ್ಬಾಳದ ಜಿಕೆವಿಕೆಯ ವಿಶಾಲ ಆವರಣದ ಕಾಡಿನಂತಹ ಒಂದು ಮೂಲೆ
ಅಲ್ಲೊಂದು ಅರೆವೃತ್ತಾಕಾರದ ಕಲ್ಲು ಬೆಂಚು. ಆ ಒರಟು ಬೆಂಚಿನ ಮೇಲೆ ನಾಲ್ಕು ಜನ ಕನ್ನಡ ನಾಡು ಹೆಮ್ಮೆಪಡಬಹುದಾದ ಹಿರಿಯ ಕೃಷಿ ವಿಜ್ಞಾನಿಗಳು. ಅವರಲ್ಲಿ ಒಬ್ಬರು ಅದಾಗಲೇ ನಿವೃತ್ತಿಯಾಗಿ ಮತ್ತೆ ಅದೇ ಸಂಸ್ಥೆಯಲ್ಲೇ ಹಿರಿಯ ಮಾರ್ಗದರ್ಶಕರಾಗಿ ಸೇವೆ ಮುಂದುವರಿಸುತ್ತಿದ್ದರೆ ಮತ್ತುಳಿದ ಮೂರು ಜನರು ನಿವೃತ್ತಿಯ ಅಂಚಿನಲ್ಲಿದ್ದವರು. ಆ ನಾಲ್ಕೂ ಜನಜನ ವಿಜ್ಞಾನಿಗಳು ಕೃಷಿವಿಜ್ಞಾನದ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಪಾರ ಶ್ರದ್ಧೆ, ಆಸಕ್ತಿಗಳಿಂದ ಕೆಲಸ ಮಾಡಿ ಪಾಂಡಿತ್ಯ ಪಡೆದಂತಹವರು. ಅ ವಯಸ್ಸಿನಲ್ಲೂ ಆ ನಾಲ್ಕು ಜನರಲ್ಲಿ ಯಾರೊಬ್ಬರಿಗೂ ಜೀವನೋತ್ಸಾಹ, ಲವಲವಿಕೆ ಕಡಿಮೆಯಾದಂತೆ ಕಾಣುತ್ತಿರಲಿಲ್ಲ.
ಅವರು ತಮ್ಮತಮ್ಮ ಬಗ್ಗೆಯೇ ಜೋಕುಗಳನ್ನು ಮಾಡಿಕೊಳ್ಳುತ್ತಾ, ಅವಕಾಶ ಸಿಕ್ಕಾಗ ಮತ್ತೊಬ್ಬರ ಕಾಲನ್ನು ಅನಾಯಾಸವಾಗಿ ಎಳೆಯುತ್ತಾ, ಗಹಗಹಿಸಿ ನಗುತ್ತಾ ಆನಂದಪಡುತ್ತಿದ್ದರು. ಹಾಗೆ ಅವರಲ್ಲಿ ನನ್ನಂತಹ ಯುವಕರನ್ನೂ ನಾಚಿಸುವಷ್ಟು ಲವಲವಿಕೆ, ಜೀವನೋತ್ಸಾಹ ಪುಟಿದೇಳುತ್ತಿದ್ದುದ್ದನ್ನು ಕಂಡು ನಾನು ಸೋಜಿಗಪಡುತ್ತಿರಬೇಕಾದರೆ ಜಿಕೆವಿಕೆಯಲ್ಲಿ ಕೆಲಸ ಮಾಡುವವರು ಎಂದು ಕಾಣುತ್ತದೆ, ಒಬ್ಬರು ಹೆಂಗಸು ದೊಡ್ಡ ಟ್ರೇ ಒಂದರಲ್ಲಿ ಕಾಫಿ, ಬಿಸ್ಕೆಟ್ ಕಿಕ್ಕಿರಿಯುವಂತೆ ತುಂಬಿಕೊಂಡು ತಂದು ಆ ನಾಲ್ಕು ಜನರ ಮಧ್ಯಕ್ಕಿಟ್ಟು ಹಿಂತಿರುಗಿ ಹೋದರು. ’ತಗೊಳ್ರಿ, ನಿಮಗೇ ತರಿಸಿರೋದು. ನಿಮ್ಮ ಟೀಮ್ ನವರಿಗೂ ಹೇಳಿ ಕಾಫಿ ತಗೊಳ್ಳಕ್ಕೆ…’ ಎಂದು ಅ ಗುಂಪಿನ ಒಬ್ಬರು ನಮಗೆ ಹೇಳಿದರು. ನಾನು ನಮ್ಮ ಹುಡುಗರು ಕಾಫಿ, ಬಿಸ್ಕೆಟ್ ತೆಗೆದುಕೊಂಡೆವು. ಆ ನಾಲ್ವರು ಹಿರಿಯ ವಿಜ್ಞಾನಿಗಳು ನಮಗೆ ಕಂಪನಿ ಕೊಟ್ಟರು. ಹಾಗೆ ಆ ನಾಲ್ಕು ಜನ ಕೃಷಿ ವಿಜ್ಞಾನಿಗಳನ್ನು ಹುಡುಕಿಕೊಂಡು ಹೋಗಿ ಮಾತನಾಡಿಸಲು ಪ್ರಮುಖವಾದ ಕಾರಣ ತೇಜಸ್ವಿಯವರೊಂದಿಗೆ ಅವರೆಲ್ಲ ಅತ್ಯಂತ ಆಪ್ತ ಒಡನಾಟವಿಟ್ಟುಕೊಂಡಿದ್ದವರು ಎಂಬುದು. ತೇಜಸ್ವಿಯವರ ಅಲೆಮಾರಿಯ ಅಂಡಮಾನ್ ಓದಿದವರಿಗೆ ಆ ಕೃತಿಯಲ್ಲಿ ತೇಜಸ್ವಿ ಮತ್ತೆ ಮತ್ತೆ ಪ್ರಸ್ತಾಪಿಸುವ ಮೂರು ಹೆಸರುಗಳು ಚೆನ್ನಾಗಿನೆನಪಿರಲೇಬೇಕು.
ಒಂದು ’ಚಂದ್ರು’ ಎರಡು ’ಮಲ್ಲಿಕ್’ ಮೂರು ’ಬೆಳವಾಡಿ’. ’ಅಲೆಮಾರಿಯ ಅಂಡಮಾನ್’ ಪುಸ್ತಕದಲ್ಲಿ ಈ ಮೂರು ಜನ ಗೆಳೆಯರೊಂದಿಗೆ ಅಂಡಮಾನ್ ನಲ್ಲಿ ನಡೆದ ಘಟನೆಗಳು, ಆದ ಅನುಭವಗಳನ್ನು ತೇಜಸ್ವಿಯವರು ಅವರದ್ದೇ ಆದ ವಿಶಿಷ್ಟ ಶೈಲಿಯಲ್ಲಿ ದಾಖಲಿಸಿರುವುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಬಹುದು. ನಮ್ಮೊಂದಿಗೆ ತೇಜಸ್ವಿ ಒಡನಾಟದ ನೆನಪುಗಳನ್ನು ಹಂಚಿಕೊಳ್ಳಲು ಕುಳಿತಿದ್ದ ಈ ಮೂರು ಜನ ತೇಜಸ್ವಿ ಒಡನಾಡಿಗಳೊಂದಿಗೆ ಇದ್ದ ಮತ್ತೊಬ್ಬರು ಕೃಷಿ ವಿಜ್ಞಾನದ ಜೊತೆಗೆ ಸಾಹಿತ್ಯದಲ್ಲೂ ಆಸಕ್ತಿ ಹೊಂದಿರುವ ಡಾ.ಕೆ.ಎನ್ ಗಣೇಶಯ್ಯನವರು. ಗಣೇಶಯ್ಯನವರೂ ಸಹ ತೇಜಸ್ವಿ ಒಡನಾಟ ಹೊಂದಿದ್ದವರೇ ಆದ್ದರಿಂದ ಆನಾಲ್ಕೂ ಜನರನ್ನೂ ಒಟ್ಟಿಗೆ ಸೇರಿಸಿ ಅವರ ತೇಜಸ್ವಿ ನೆನಪುಗಳನ್ನು ಚಿತ್ರೀಕರಿಸಬೇಕು ನಾವು ಯೋಚಿಸಿ ಜಿಕೆವಿಕೆ ಕ್ಯಾಂಪಸ್ ನಲ್ಲಿ ಅಂದು ಸಂಜೆ ಚಿತ್ರೀಕರಣ ಇಟ್ಟುಕೊಂಡಿದೆವು.ಅವರೆಲ್ಲರೂ ತೇಜಸ್ವಿ ನೆನಪಿನ ಬುತ್ತಿ ಬಿಚ್ಚಲು ಕಾತುರರಾಗಿದಂತೆಕಂಡರು.
ಮೊದಲಿಗೆ ನೆನೆಪಿನ ಯಾತ್ರೆ ಆರಂಭಿಸಿದವರು ಡಾ. ಕೆ.ಎನ್ ಗಣೇಶಯ್ಯರವರು, “ಲೆಟ್ ಮಿ ಸ್ಟಾರ್ಟ್ ದಿ ಟಾಕ್ ಫಸ್ಟ್. ಸೋ ದಟ್ ಅದರ್ಸ್ ವಿಲ್ ಫೀಲ್ ಕಂಫರ್ಟಬಲ್. ನನ್ನ ಹೆಸರು ಗಣೇಶಯ್ಯ ಅಂತ. ಫಾರೆಸ್ಟ್ರಿ ಡಿಪರ್ಟ್ಮೆಂಟ್ ನಲ್ಲಿ ಪ್ರೊಫೆಸರ್ ಆಗಿದ್ದೀನಿ. ತೇಜಸ್ವಿಯವರ ಪರಿಚಯ ನನಗೆ ಮೊದಲೇ ಇದ್ರು ಕೂಡ ಅವರ ಒಡನಾಟ ಶುರುವಾಗಿದ್ದು ಆಕಸ್ಮಿಕವಾಗಿ. ಒಂದಿನ ನಮ್ಮ ಚಂದ್ರು ’ಟ್ರೆಕ್ಕಿಂಗ್ ಇದೆ ಬರ್ತೀರ?’ ಅಂದ್ರು. ನಾನು ’ಆಯ್ತು’ ಅಂತ ಒಪ್ಕೊಂಡು ಹೋದೆ. ಮೂರು ದಿನಗಳ ಕಾಲ, ಮೂರು ಹಗಲು, ಎರಡು ರಾತ್ರಿ ನಮ್ಮನ್ನ ಭದ್ರಾ ನದಿ ಉದ್ದಕ್ಕೂ ತೇಜಸ್ವಿ, ಚಂದ್ರು, ಮಲ್ಲಿಕ್ ಕರ್ಕೊಂಡ್ ಹೋಗಿದ್ರು. ಆ ಮೂರು ದಿನಗಳ ಅನುಭವ ಇದ್ಯಲ್ಲ ಅದನ್ನ ಮಾತ್ರ ನಾನು ನನ್ನ ಜೀವನದಲ್ಲಿ ಮರೆಯೋಕೆ ಸಾಧ್ಯ ಇಲ್ಲ. ಅದರ ನಂತರ ತೇಜಸ್ವಿ ನಮಗೆ ಎಷ್ಟು ಪರಿಚಯ ಆಗ್ಬಿಟ್ಟಿದ್ರು ಅಂದ್ರೆ ನಮ್ಮ ಫ್ಯಾಮಿಲಿ ಮೆಂಬರ್ ಥರ ಆಗ್ಬಿಟ್ಟಿದ್ರು. ನಮ್ಮ ಮಗಳ ಹೆಸರು ಬಹಳ ಇಷ್ಟ ಅವರಿಗೆ. ಅವರ ಮನೆಗೆ ಅನೇಕ ಸಲ ಹೋಗಿದ್ವಿ ನಾವು. ಅಲ್ಲೇ ಊಟ ಗೀಟ ಮಾಡ್ಕೊಂಡ್ ಬರ್ತಿದ್ವಿ. ಹೀಗೇ ಇರ್ಬೇಕಾದ್ರೆ ನಮ್ಮ ಮಗಳು, ಪುಣ್ಯಕೋಟಿ ಅಂತ ಅವಳ ಹೆಸರು ಕುವೆಂಪುರವರ ’ಶ್ರೀ ರಾಮಾಯಣ ದರ್ಶನಂ’ ನ ಹದಿನೈದು ಛಾಪ್ಟರ್ ನ ಬಾಯಲ್ಲಿ ಹೇಳ್ತಾಳೆ. ಒಂದ್ಸಾರ್ತಿ ಕುಪ್ಪಳ್ಳಿನಲ್ಲಿ ಕುವೆಂಪುರವರದ್ದು ಒಂದು ಕಾರ್ಯಕ್ರಮದಲ್ಲಿ ನನ್ನ ಮಗಳು ’ರಾಮಾಯಣ ದರ್ಶನಂ’ ಹೇಳಿದ್ಳು. ಆ ಕಾರ್ಯಕ್ರಮಕ್ಕೆ ಬಂದಿದ್ದ ತೇಜಸ್ವಿ ’ಥುಥುಥುಥುಥು ಅದೇನ್ರಿ ನಿಮ್ಮ ಮಗಳು ರಾಮಾಯಣ ದರ್ಶನಂ ಅಷ್ಟು ಚೆನ್ನಾಗಿ ಹೇಳ್ತಾಳೆ. ಎಲ್ಲಿ ಕಲಿಸಿದ್ರಿ ಅವಳಿಗೆ?’ ಅಂತ ಕೇಳಿದ್ರು.
ಹಾಗೆ ನಮ್ಮ ಅವರ ರಿಲೇಷನ್ಶಿಪ್ಪು ಒಂತರ ಫ್ಯಾಮಿಲಿ ರಿಲೇಷನ್ಶಿಪ್ಪು ಮತ್ತು ಅವರ ಜೊತೆಗೆ ಒಡನಾಟ ಶುರುವಾಗಿದ್ದು ಹಾಗೆ”. ನಂತರ ಮಾತು ಶುರುವಿಟ್ಟುಕೊಂಡವರು ಪ್ರೊಫೆಸರ್ ಚಂದ್ರುರವರು, “ನಾನು ಮೂಡಿಗೆರೆಗೆ ೧೯೮೨ರಲ್ಲಿ ಪೆಥಾಲಜಿಸ್ಟ್ ಆಗಿ ಹೋದೆ. ಆ ವರ್ಷ ನನಗೆ ಅವರ ಪರಿಚಯ ಆಗ್ಲಿಲ್ಲ. ಅದರ ಮಾರನೇ ವರ್ಷ ನಮಲ್ಲಿ ಪ್ರತಿವರ್ಷ ಒಂದು ಸೈಂಟಿಫಿಕ್ ವರ್ಕ್ ಶಾಪ್ ಆಗುತ್ತೆ. ಅದಕ್ಕೆ ಅವ್ರನ್ನ ಇನ್ವೈಟ್ ಮಾಡ್ದಾಗ ಅವರು ಬಂದು ನನ್ನ ಹಿಂದೆ ಕೂತಿದ್ರು. ನಾನು ಹಿಂದೆ ತಿರುಗಿ ನೋಡ್ದೆ. ಆಗ ಅವರ್ಯಾರು ಅಂತ ನನಗೊತ್ತಿತ್ತು, ಆದರೆ ನಾನ್ಯಾರು ಅಂತ ಅವರಿಗೆ ಗೊತ್ತಿರ್ಲಿಲ್ಲ.ಸೊ ಅವತ್ತು ಅವರ ಜೊತೆ ಫಸ್ಟ್ ಟೈಮ್ ಮಾತಾಡಿ ಪರಿಚಯ ಮಾಡ್ಕೊಂಡೆ. ಅಲ್ಲಿಂದ ಹತ್ತು ವರ್ಷಗಳ ಕಾಲ ನಾವು ಒಟ್ಟಿಗೆ ಇದ್ವಿ ಮೂಡಿಗೆರೆನಲ್ಲಿ. ಎಷ್ಟು ಅಂತ ಅಂದ್ರೆ ಆಲ್ಮೋಸ್ಟ್ ಪ್ರತಿದಿವ್ಸ ಭೇಟಿ ಮಾಡ್ತಾ ಇದ್ವಿ. ಅವರು ಏನ್ ಬರೀತಾ ಇರ್ತಿದೊ ಅದರ ಬಗ್ಗೆ ಅವಾಗವಾಗೆ ಪೂರ್ವಭಾವಿಯಾಗಿ ಡಿಸ್ಕಸ್ ಮಾಡ್ತಾ ಇದ್ವಿ. ನನಗೆ ಫಿಶಿಂಗ್ ಹುಚ್ಚು ಹಿಡಿಸಿದ್ದು ಅವರು. ಇದರ ಜೊತೆಗೇನೆ ಕಾಡು ಸುತ್ತೋದು, ಪರಿಸರ ಹೇಗಿದೆ? ಕಾಡು ಹೇಗಿದೆ ಇವತ್ತು? ಅಂತ ಕಾಡಿನೊಳಕ್ಕೆ ಹೋಗಿ ಪ್ರತ್ಯಕ್ಷವಾಗಿ ನೋಡಿ ಡಿಸ್ಕಸ್ ಮಾಡ್ತಿದ್ವಿ. ಆಮೇಲೆ ನನಗೆ ಇನ್ನೊಂದು ಹುಚ್ಚು ಆಗ ಶುರುವಾಯ್ತು, ಆರ್ಕಿಡ್ ಗಳನ್ನ ಸ್ಟಡಿ ಮಾಡೋದು. ಮಲೆನಾಡಿನಲ್ಲಿರೊ ಆಲ್ಮೋಸ್ಟ್ ಎಲ್ಲ ಆರ್ಕಿಡ್ ಗಳನ್ನು ನಾನು ತೇಜಸ್ವಿ ಇಬ್ರೂ ಸ್ಟಡಿ ಮಾಡಿದ್ದೀವಿ. ಯಾವ್ ಮರದಲ್ಲಿ ಯಾವ ಆರ್ಕಿಡ್ ಇದೆ ಅಂತ ನಾನು ಇವತ್ತಿಗೂ ಕರೆಕ್ಟಾಗಿ ಹೇಳಬಲ್ಲೆ. ಫಿಶಿಂಗ್ ಗೆ ಹೋಗ್ಬಾಕಾದ್ರೆ ಅಥವ ಟ್ರೆಕ್ಕಿಂಗಿಗೆ ಹೋಗ್ಬೇಕಾದ್ರೆ ಅವರು ಸ್ಕೂಟ್ರು ಓಡ್ಸೋರು, ನಾನು ಹಿಂದೆ ಕೂತ್ಕೊಂಡು ಸುತ್ತಮುತ್ತಲಿನ ಮರಗಳನ್ನೆಲ್ಲ ಗಮನ ಇಟ್ಟು ನೋಡಿ ಅದರಲ್ಲಿ ಯಾವ ರೀತಿಯ ಆರ್ಕಿಡ್ ಗಳಿವೆ? ಯಾವ ಆರ್ಕಿಡ್ ಯಾವ ಟೈಮಲ್ಲಿ ಹೂ ಬಿಡುತ್ತೆ? ಅಂತೆಲ್ಲಾ ಸ್ಟಡಿ ಮಾಡಿ ಅದರ ಸ್ಯಾಂಪಲ್ ಕೂಡ ಕಲೆಕ್ಟ್ ಮಾಡ್ತಿದ್ವಿ. ಆಮೇಲೆ ಪ್ರತಿದಿನ ಸಂಜೆ ಅವರ ತೋಟದಲ್ಲೇ ಒಂದು ಕಡೆ ಷೆಟಲ್ ಕಾಕ್ ಆಡೋದಿಕ್ಕೆ ಜಾಗ ಮಾಡ್ಕೊಂಡು ನಾವೆಲ್ಲ ಅಲ್ಲಿ ಷೆಟ್ಲ್ ಆಡ್ಕೊಂಡು ಸೆಟ್ಲ್ ಆಗ್ಬಿಡ್ತಿದ್ವಿ. ಹೀಗೆ ನಮ್ಮ ಒಡನಾಟ ಶುರುವಾಯ್ತು.

ನಂತರ ಒಂದ್ಸಾರ್ತಿ ಕುಪ್ಪಳ್ಳಿ ಸುತ್ತಮುತ್ತ ಇರೊ ಕಾಡನೆಲ್ಲ ಕಡಿಬೇಕು ಅಂತ ಒಂದು ಕ್ರೈಸಿಸ್ ಬಂತು. ಅಲ್ಲಿ ಕಾಡನ್ನ ಕಡಿಬೇಕು ಅಂತ ಒಂದು ಪ್ರಯತ್ನ ಆಯ್ತು. ಅದನ್ನ ತಪ್ಪಿಸೋಕೆ ಲಂಕೇಶ್, ತೇಜಸ್ವಿ ಮತ್ತು ಪಾಂಡುರಂಗ ಹೆಗಡೆ ಕೊಪ್ಪದಲ್ಲಿ ಒಂದು ಬಹಿರಂಗ ಸಭೆ ಎರ್ಪಡಿಸಿದ್ದರು. ಅದಕ್ಕೆ ನಾವೆಲ್ಲಹೋದ್ವಿ. ಅದರಲ್ಲಿ ಭಾಗವಹಿಸಿದ್ವಿ. ಆ ಸಭೆನಲ್ಲಿ ಪಾಂಡುರಂಗ ಹೆಗಡೆ ಒಂದು ಪುಸ್ತಕಾನ ತೇಜಸ್ವಿಗೆ ಕೊಟ್ರು. ಅದು ’one straw revolution’ ಅಂತ. ಫುಕವೊಕ ಅವರ ಸುಮಾರು ನಲವತ್ತು ವರ್ಷಗಳ ಸುದೀರ್ಘವಾದ ಕೃಷಿ ಅನುಭವಗಳನ್ನ ದಾಖಲೆಮಾಡಿದ್ದಂತಹ ಪುಸ್ತಕ ಅದು ’one straw revolution’. ಬಹುಶಃ ಜಗತ್ತಿಗೆ ’ಸಹಜ ಕೃಷಿ’ಯ ಬಗ್ಗೆ ತಿಳಿ ಹೇಳಿದಂತಹ ಪುಸ್ತಕ ಅದು. ಆ ಪುಸ್ತಾಕಾನ ತೇಜಸ್ವಿ ನನ್ನ ಕೈಗೆ ಕೊಟ್ಟು ’ಇದರಲ್ಲಿ ಏನಿದೆ ಓದಿ ಹೇಳಿ’ ಅಂತಂದ್ರು. ನಾನು ಅದನ್ನ ಎರಡೇ ದಿನದಲ್ಲಿ ಓದಿ ತೇಜಸ್ವಿಗೆ ಹೇಳಿದೆ ’ಇದರಲ್ಲಿ ಅದ್ಭುತವಾದ ವಿಚಾರ ಇದೆ…’ ಅಂತ. ನಂತರ ತೇಜಸ್ವಿಯವರು ಹಲವಾರು ದಿನ ನಾನು ಮತ್ತು ನಮ್ಮ ಆರ್ ಆರ್ ಎಸ್ (ರೀಜಿನಲ್ ರಿಸರ್ಚ್ ಸೆಂಟರ್ Mudigere) ನ ಗೆಳೆಯರನ್ನೆಲ್ಲಾ ಸೇರಿಸಿ ಆ ಪುಸ್ತಕದ ವಿಚಾರಗಳ ಬಗ್ಗೆ ಸುದೀರ್ಘವಾದ ಚರ್ಚೆ ನಡೆಸಿದ್ರು. ಅದು ’ಸಹಜ ಕೃಷಿ’ ಪದ್ದತಿಯ ಬಗ್ಗೆ ಅಲೋಚನೆ ಪ್ರಾರಂಭವಾಗೋದಿಕ್ಕೆ ನಾಂದಿ ಆಯ್ತು” ಪ್ರೊಫೆಸರ್ ಚಂದ್ರುರವರು ತೇಜಸ್ವಿಯವರೊಂದಿಗಿನ ಒಡನಾಟದ ಪ್ರಾರಂಭದ ದಿನಗಳನ್ನು ಹೀಗೆ ನೆನಪಿಸಿಕೊಳ್ಳತೊಡಗಿದರು.
ನಂತರ ಮಾತು ಪ್ರಾರಂಭಿಸಿದವರು ಪ್ರೊಫೆಸರ್ ವಿವಿ ಬೆಳವಾಡಿರವರು, “ನನ್ನ ತೇಜಸ್ವಿಯವರ ಮೊದಲ ಭೇಟಿಯಾಗಿದ್ದು ಅಂಡಮಾನ್ ನಲ್ಲಿ. ನಾನು ೧೯೮೫ರಿಂದ ೮೮ರವರೆಗು ಅಂಡಮಾನ್ ನಲ್ಲಿದ್ದೆ. ಅಲ್ಲಿ ಸೆಂಟ್ರಲ್ ಅಗ್ರಿಕಲ್ಚರಲ್ ರಿಸರ್ಚ್ ಸೆಂಟರ್ ಅಂತ ಇದೆ. ಅಲ್ಲಿ ಕೀಟಶಾಸ್ತ್ರಜ್ಞನಾಗಿದ್ದೆ. ಆ ಸಮಯದಲ್ಲಿ ತೇಜಸ್ವಿ ಈ ಚಂದ್ರು, ಮಲ್ಲಿಕ್, ಅವರ ಮನೆಯವರು, ಕೆಲವು ಗೆಳೆಯರನ್ನೆಲ್ಲ ಕರ್ಕೊಂಡು ಅಂಡಮಾನಿಗೆ ಬಂದ್ರು. (’ಅಲೆಮಾರಿಯ ಅಂಡಮಾನ್’ ಗಮನಿಸಿ).
“ಅಂಡಮಾನ್ ಗೆ ಬಂದ ತಕ್ಷಣ ಮೊಟ್ಟಮೊದಲನೆದಾಗಿ ತೇಜಸ್ವಿ ಕೇಳಿದ ಪ್ರಶ್ನೆನೇ ’ರೀ ಈ ಅಂಡಮಾನ್ ನಲ್ಲಿ ಏನೇನ್ ಇದೇರೀನೋಡೋದಿಕ್ಕೆ?’ ಅಂತ. ನಾನ್ ಇದೇನ್ ಹಿಂಗ್ ಕೇಳ್ತಾ ಇದಾರಲ್ಲ ಅಂತ ಅಂದ್ಕೊಂಡು ’ಯಾಕ್ ಸಾರ್ ಹಿಂಗ್ ಕೇಳ್ತಾ ಇದೀರ?’ ಅಂದೆ. ಅದಕ್ಕೆ ತೇಜಸ್ವಿಯವ್ರು ಹೇಳಿದ್ದು, ’ನಾನು ಅವನೆಲ್ಲಾ ನೋಡ್ಬೇಕು ಅಂತ ಅಲ್ಲಾರಿ ಕೇಳ್ತಿರೋದು. ಇಲ್ಲಿಂದ ವಾಪಸ್ ಮೂಡಿಗೆರೆಗೆ ಹೋದ್ಮೇಲೆ ಸಿಕ್ಕಸಿಕ್ಕಿದೋರೆಲ್ಲ ’ಅಂಡಮಾನ್ ನಲ್ಲಿ ಏನೇನ್ ನೋಡಿದ್ರಿ? ಅದ್ ನೋಡಿದ್ರ? ಇದ್ ನೋಡಿದ್ರ?’ ಅಂತ ಕೇಳಿ ತಲೆತಿಂದುಬಿಡ್ತಾರೆ. ಅದಕ್ಕೆ ಕೇಳಿದ್ದು. ನೀವು ಇಲ್ಲಿಏನೇನ್ ಇದಾವೆ ನೋಡೋಕೆ ಅಂತ ಹೇಳಿ. ವಾಪಸ್ ಊರಿಗೆ ಹೋದ್ಮೇಲೆ ಯಾರಾದ್ರು ಕೇಳಿದ್ರೆ ನೀವು ಹೇಳಿದ ಜಾಗನ್ನೆಲ್ಲಾ ಹೇಳಿ ಅವರನ್ನ ಸಮಾಧಾನ ಪಡಿಸ್ತೀನಿ’ ಅಂತಂದ್ರು…”ಹಾಗಾಗಿ ಮೊದಲನೇ ಬಾರಿಗೆ ಅವರನ್ನ ನೋಡಿದ್ದು ಅಂಡಮಾನ್ ನಲ್ಲಿ. ಅದಕ್ಕೆ ಮೊದಲು ಅವರ ಕರ್ವಾಲೊ, ಚಿದಂಬರ ರಹಸ್ಯ ಪುಸ್ತಕ ಓದಿದ್ದೆ. ಆದರೆ ತೇಜಸ್ವಿ ಇವರೇ ಅಂತ ಗೊತ್ತಿರಲಿಲ್ಲ. ನಂತರ ’ಅಲೆಮಾರಿಯ ಅಂಡಮಾನ್’ ನಲ್ಲಿ ಒಂದು ಪಾತ್ರನೇ ಆಗಿಬಿಟ್ಟೆ’, ಎಂದು ನಗುತ್ತಾ ಬೆಳವಾಡಿರವರು ತೇಜಸ್ವಿ ಒಡನಾಟದ ಪ್ರಾರಂಭದ ದಿನಗಳನ್ನು ನೆನಪಿಸಿಕೊಳ್ಳತೊಡಗಿದರು.
ನಂತರ ಪ್ರೊಫೆಸರ್ ಬೆಳವಾಡಿರವರೇ ನೆನಪಿನ ಪಯಣವನ್ನು ಮುಂದುವರೆಸಿದರು, ನನಗೆ ನಗು ಬರ್ತಿತ್ತು ಅವರು ಹಾಗ್ ಹೇಳ್ತಿದ್ದಾಗ. ಆದರೆ ಅವರು ಅಂಡಮಾನಿಗೆ ಬಂದೋರು ಕೆಲವೊಂದು ಮುಖ್ಯವಾದ ಜಾಗಗಳನ್ನ ನೋಡ್ಲೇ ಇಲ್ಲ. ರಾಸ್ ಐಲ್ಯಾಂಡ್ ಅಂತ ಒಂದು ಜಾಗ ಇದೆ ಅಲ್ಲಿ, ಅಲ್ಲಿಗೆ ಅವರು ಬರ್ಲಿಲ್ಲ, ಚಂದ್ರುನೂ ಬರ್ಲಿಲ್ಲ. ಮತ್ತೆ ಸೆಲ್ಯುಲಾರ್ ಜೈಲು ’ಅದನ್ನೇನ್ರಿ ನೋಡೋದು? ನಾಲಕ್ ಗೋಡೆ ಕಟ್ಟಿರ್ತಾರೆ. ಒಂದು ಸಣ್ಣ ಕಿಂಡಿ ಇಟ್ಟಿರ್ತಾರೆ. ಅದನ್ನೇನ್ರಿ ನೋಡೋದು. ಮಾಡಕ್ ಕೆಲ್ಸ ಇಲ್ಲ ಅಷ್ಟೆ’ ಅಂತೇಳಿ ಅಲ್ಲಿಗೂ ಬರ್ಲಿಲ್ಲ. ಆ ಸಮಯನ್ನೆಲ್ಲಾ ತೇಜಸ್ವಿ ಮತ್ತು ಚಂದ್ರು ಮೀನು ಹಿಡಿಯೋಕೆ ಉಪಯೋಗಿಸ್ಕೊಂಡ್ರು”. ಆ ರೀತಿ ಎಲ್ಲರೂ ಮಾತು ಪ್ರಾರಂಭಿಸಿದರು.ಮೊದಲಿಗೆ ಸಾಕ್ಷ್ಯಚಿತ್ರದ ಚಿತ್ರೀಕರಣದ ಶೈಲಿಯಲ್ಲಿ ಪ್ರಾರಂಭವಾದ ಆ ನಾಲ್ಕು ಜನ ತೇಜಸ್ವಿ ಒಡನಾಡಿಗಳ ಮಾತುಗಳು ಕ್ರಮೇಣ ಅದು ಚಿತ್ರೀಕರಣ ಎಂಬುದನ್ನೇ ಮರೆತವರಂತೆ ಅವರೆಲ್ಲರೂ ತಮ್ಮತಮ್ಮಲ್ಲೇ ತೇಜಸ್ವಿ ಒಡನಾಟದ ನೆನಪುಗಳ ವಿನಿಮಯ ಮಾಡಿಕೊಳ್ಳತೊಡಗಿದರು. ನಾನು ಅವರನ್ನು ತಡೆಯಲು ಹೋಗಲಿಲ್ಲ. ಹಾಗೆ ಎಷ್ಟು ಸಾಧ್ಯವೊ ಅಷ್ಟು ನೈಜವಾಗಿ ಬರಲಿ ಎಂಬ ಕಾರಣಕ್ಕೆ ಅವರ ನಡುವಿನ ಆ ಚರ್ಚೆಯನ್ನು ಮುಂದುವರೆಸುವಂತೆ ಪ್ರೊತ್ಸಾಹಿಸಿದೆ.
ಹಾಗೆ ಪ್ರಾರಂಭವಾದ ಆ ಚರ್ಚೆಯಲ್ಲಿ ಮಾತು ಮುಂದುವರೆಸಿದವರು ಚಂದ್ರುರವರು, “ಹಡಗಿನಲ್ಲಿ ಹೋಗಿ ಅಂಡಮಾನಿಗೆ ಕಾಲಿಟ್ಟ ಕೂಡಲೇ ನಾನು ತೇಜಸ್ವಿ ಶುರುಮಾಡಿದ್ದೆ ಫಿಶಿಂಗ್! ಯಾಕಂದ್ರೆ ನಮಗೆ ಅದುವರೆಗೆ ನದಿ ಮೀನುಗಳ ಪರಿಚಯ ಮಾತ್ರ ಇತ್ತು. ಸಮುದ್ರದ ಮೀನುಗಳ ಪರಿಚಯ ನಮಗಿರ್ಲಿಲ್ಲ. ಹಾಗಾಗಿ ಸಮುದ್ರದ ಮೀನು ಹಿಡಿಲೇಬೇಕು ಅಂತೇಳಿ ನಾನು ತೇಜಸ್ವಿ ಒಂಚೂರೂ ಟೈಮ್ ವೇಸ್ಟ್ ಮಾಡದೇ ಫಿಶಿಂಗ್ ಶುರುಮಾಡಿದ್ವಿ. ಹಾಗಾಗಿ ನಮಗೆ ಅಂಡಮಾನಿನ ಜೈಲು ಮುಂತಾದ ಜಾಗಗಳು ಕುತೂಹಲ ಕೆರಳಿಸಲಿಲ್ಲ. ಹೋದ ತಕ್ಷಣ ಸಮುದ್ರದ ಒಳಗೇನಿದೆ ಅಂತ ನೋಡಿಬಿಡಬೇಕು ಅನ್ನೊ ಕುತೂಹಲ ನಮ್ಮನ್ನ ಕಾಡ್ತಿತ್ತು’. ಚಂದ್ರುರವರ ಮಾತನ್ನು ತುಂಡರಿಸಿ ಬೆಳವಾಡಿರವರು ಮಾತು ಮುಂದೆ ತೆಗೆದುಕೊಂಡು ಹೋದರು, “ಆದರೆ ಅಲ್ಲಿ ಅವರಿಗೆ ವಂಡೂರ್ ಐಲ್ಯಾಂಡ್, ಜಾಲಿ ಬಾಯ್ ಅಂತ ಒಂದು ದ್ವೀಪ ಇದೆ ಅದು, ರೆಡ್ ಸ್ಕಿನ್ ಐಲ್ಯಾಂಡ್ ಇವೆಲ್ಲ ಅವರಿಗೆ ತುಂಬಾ ಇಷ್ಟ ಆಗಿತ್ತು. ಯಾಕಂದ್ರೆ ಅಲ್ಲಿ ಜನವಸತಿ ಅಷ್ಟಾಗಿ ಇರಲಿಲ್ಲ. ನಿರ್ಜನ ಪ್ರದೇಶಗಳವು. ಅವನ್ನೆಲ್ಲ ಅವರು ತುಂಬಾ ಇಷ್ಟಪಟ್ರು. ಆಮೇಲೆ ಒಂದ್ಸಲ ಅವರು ಅಲ್ಲಿ ಮೀನು ಹಿಡೀತಾ ಕೂತಿದ್ದಾಗ ಒಂದು ಆಕ್ಟೋಪಸ್ ಬಂತು. ತುಂಬಾ ದೊಡ್ಡ ಆಕ್ಟೋಪಸ್ ಅದು. ಅದೇ ಮೊದಲ್ನೇ ಸಾರಿ ನಾವೆಲ್ರೂ ಆಕ್ಟೋಪಸ್ ಅನ್ನೊ ಪ್ರಾಣಿನ ನೋಡ್ತಿದ್ದಿದ್ದು. ಜೊತೆಗೆ ಜೆಲ್ಲಿ ಫಿಶ್ ಕೂಡ ನೋಡಿದ್ವಿ. ಅದನ್ನೆಲ್ಲ ನೋಡಿ ನಮಗೆ ಒಂತರ ಮೈ ರೋಮಾಂಚನ ಆದಂಗಾಯ್ತು. ಅವೆಲ್ಲ ತೇಜಸ್ವಿಯವರ ಜೊತೆಗೆ ಕಳೆದ ಒಳ್ಳೆ ಕ್ಷಣಗಳು. ಅಂಡಮಾನ್ ಘಟನೆಗಳನ್ನ ಮುಂದೆ ಮತ್ತೆ ಮಾತಾಡೋಣ. ಅದಾದ ಎರಡು ವರ್ಷಕ್ಕೆ ನನಗೆ ಅಗ್ರಿಕಲ್ಚರಲ್ ಯೂನಿವರ್ಸಿಟಿಯಲ್ಲಿ ಕೆಲಸ ಸಿಕ್ತು. ಕೆಲಸ ಸಿಕ್ಕಿದ್ದಕ್ಕಿಂತಲೂ ಹೆಚ್ಚಿಗೆ ಸಂತೋಷ ಆಗಿದ್ದು ಯಾಕೆ ಅಂದ್ರೆ ನನಗೆ ಪೋಸ್ಟಿಂಗು ಮೂಡಿಗೆರೆಗೆ ಆಗಿತ್ತು. ತುಂಬಾ ಜನಕ್ಕೆ ಬೆಂಗಳೂರಿನಿಂದ ಹೊರಗಡೆಗೆ ಪೋಸ್ಟಿಂಗ್ ಆದ್ರೆ ಅವರು ಮಾಡೊ ಮೊದಲ್ನೇ ಕೆಲಸ ಅಂದ್ರೆ ಯಾರಾದ್ರು ಮಂತ್ರಿಗಳನ್ನೊ, ಅಧಿಕಾರಿಗಳನ್ನೊ ಹಿಡಿದು ಬೆಂಗಳೂರಿಗೆ ಪೋಸ್ಟಿಂಗ್ ಮಾಡ್ಸಿ ಅಂತ ಗೋಗರೆಯೋದು. ಆದರೆ ನಾನು ತುಂಬಾ ಖುಷಿಯಿಂದ ಮೂಡಿಗೆರೆಗೆ ಹೋದೆ. ಅಲ್ಲಿ ಹತ್ತೊಂಬತ್ತು ವರ್ಷ ಕೆಲಸ ಮಾಡಿದೆ. ಅದಕ್ಕೆಲ್ಲ ಮುಖ್ಯ ಕಾರಣ ತೇಜಸ್ವಿ ಮೂಡಿಗೆರೆಲಿದಾರೆ ಅನ್ನೋದು”.
ಬೆಳವಾಡಿರವರ ಮಾತು ಮುಗಿಯುತ್ತ ಬಂದಂತೆ ನಂತರ ಮಾತು ಪ್ರಾರಂಭಿಸಿದವರು ಪ್ರೊಫೆಸರ್ ಮಲ್ಲಿಕ್ ರವರು. “ನಾನು ತೇಜಸ್ವಿಯವ್ರನ್ನ ಮೊದಲು ನೋಡಿದ್ದು ೧೯೭೪ರಲ್ಲಿ. ನಾನು ಆಗಿನ್ನೂ ಪಿಹೆಚ್ ಡಿ ಮಾಡ್ತಿದ್ದೆ. ಆಗ ಇಲ್ಲಿ ಮೂಡಿಗೆರೆನಲ್ಲಿ ಸಿದ್ದಪ್ಪಾಜಿ ಅಂತ ಒಬ್ರು ಸೈಂಟಿಸ್ಟ್ ಇದ್ರು. ನಾನು ಅವರತ್ರ ’ಸಾರ್ ಮೂಡಿಗೆರೆಗೆ ಬರ್ತೀವಿ. ಒಂದಷ್ಟು ಕೀಟಗಳ ಬಗ್ಗೆ ಮಾಹಿತಿ ಬೇಕು. ನಿಮ್ಮ ಸಹಾಯ ಬೇಕು’ ಅಂತ ಕೇಳಿದ್ದೆ. ಅವರು ’ಒ ಧಾರಾಳವಾಗಿ. ನೀವು ಬನ್ನಿ, ನಿಮಗೆ ಇಲ್ಲೊಂದು ಪೆಕ್ಯೂಲಿಯರ್ ಕ್ಯಾರೆಕ್ಟರ್ ತೋರಿಸ್ತೀನಿ’ ಅಂತ ಹೇಳಿದ್ರು. ಸರಿ ಅಂತೇಳಿ ನಾನು ಮತ್ತು ಘೋರ್ಪಡೆ ಅಂತ ಒಬ್ರು, ಇಬ್ರೂ ಮೂಡಿಗೆರೆಗೆ ಹೋದ್ವಿ. ಹೋಗಿ ಸಿದ್ದಪ್ಪಾಜಿಯರ ಹತ್ರ ಮಾತಾಡ್ತಾ ನಿಂತಿದ್ವಿ. ಸುಮಾರು ಹತ್ತು ಗಂಟೆ ಅಂತ ಕಾಣುತ್ತೆ, ’ಏನ್ರೀ ಸಿದ್ದಪಾಜಿ ಎಲ್ರಿ ನಿಮ್ಮ ಫ್ರೆಂಡ್ಸ್ ಯಾರೊ ಬರ್ತಾರೆ ಅಂದ್ರಲ್ರಿ. ಬಂದ್ರ?’ ಅಂತ ಕೇಳ್ತಾ ಒಬ್ರು ಬಂದ್ರು. ಸಿದ್ದಪಾಜಿ ಅಂದ್ರು ’ನೋಡಿ ಇವರೇ ನಾನು ಹೇಳಿದ ಆ ಹುಡುಗ್ರು’ ಅಂತ ನಮ್ಮ ಕಡೆ ತೋರ್ಸಿ ಹೇಳಿ ’ಇವರು ತೇಜಸ್ವಿ ಅಂತ. ಇಲ್ಲೇ ಹತ್ತಿರದಲ್ಲಿ ತೋಟ ಮಾಡ್ತಾರೆ’ ಅಂತ ನಮಗೆ ಆ ವ್ಯಕ್ತಿನ ಪರಿಚಯ ಮಾಡಿಕೊಟ್ರು. ಅದೇ ಮೊದಲ್ನೇ ಸಲ ನಾನು ತೇಜಸ್ವಿನ ನೋಡಿದ್ದು. ಆಗ ಮೊದಲ್ನೇ ಸಲ ನೋಡ್ದಾಗ ನನಗೆ ಒಂತರ ಆಶ್ಚರ್ಯ ಆಯ್ತು. ಯಾಕಂದ್ರೆ ಅವರಲ್ಲಿ ಒಂದು ರೀತಿ ಈ ಪೋಲಿ ಹುಡುಗ್ರು ಅಟಿಟ್ಯೂಡ್ ಇರುತ್ತಲ್ಲ ಆ ಥರದ ಒಂದು ಹುಡುಗುತನ, ಉತ್ಸಾಹ, ಲವಲವಿಕೆ ಅವರಲ್ಲಿ ಕಾಣಿಸ್ತು. ಆಮೇಲೆ ಅವರು ಒಂದು ಓಪನ್ ಜೀಪ್ ನಲ್ಲಿ ಬಂದಿದ್ರು. ನಂತರ ನಮ್ಮನ್ನೆಲ್ಲ ತೋಟಕ್ಕೆ ಬನ್ನಿ ಅಂತ ಹೇಳಿ ಜೀಪ್ ಹತ್ಕೊಂಡು ಹೊರಟೇಹೋದ್ರು. ಅದು ನಾನು ತೇಜಸ್ವಿಯ ಸಂಪರ್ಕಕ್ಕೆ ಬಂದ ಬಗೆ. ಆಮೇಲೆ ಅವರ ತೋಟಕ್ಕೆ ಕಾಲುದಾರಿನಲ್ಲಿ ನಡ್ಕೊಂಡು ನಾನು, ಘೋರ್ಪಡೆ ಹೋದ್ವಿ.
ಚಿತ್ರಕೂಟ ತೋಟ ಅದು, ಜನ್ನಾಪುರದ ಹತ್ರ. ಅಲ್ಲಿ ಹೋದಾಗ ತೇಜಸ್ವಿ ನಮಗೆ ಅವರ ತೋಟನೆಲ್ಲ ತೋರ್ಸಿದ್ರು, ಅವರು ತೆಗೆದ ಫೋಟೋಗಳನ್ನೂ ತೋರ್ಸಿದ್ರು. ಆದರೆ ಅವೆಲ್ಲಕ್ಕಿಂತಲೂ ನಮಗೆಲ್ಲರಿಗೂ ಆಶ್ಚರ್ಯ ಆಗಿದ್ದೇನು ಅಂದ್ರೆ ಅವರು ಅವರ ತೋಟಕ್ಕೆ ಮೇಲೆ ಗುಡ್ಡದ ಮೇಲಿಂದ ಹರಿಯೊ ನೀರನ್ನ ಪಂಪ್ ಮಾಡೋದಿಕ್ಕೆ ಒಂದು ಅಟೋಮ್ಯಾಟಿಕ್ ಪಂಪಿಂಗ್ ಸಿಸ್ಟಮ್ ಮಾಡಿದ್ರು. ತೋಟದ ಪಕ್ಕದಲ್ಲಿರೊ ಗುಡ್ದದ ಮೇಲಿಂದ ಹರಿಯೊ ನೀರನ್ನ ಇವರ ತೋಟಕ್ಕೆ ಬರೊ ಹಾಗ್ ಮಾಡೋದಿಕ್ಕೆ ಒಂದು ಪಂಪಿಂಗ್ ಸಿಸ್ಟಮ್ ಅದು. ಅದಕ್ಕೆ ಕರೆಂಟ್ ಬೇಡ, ಪವರ್ ಬೇಡ ಎಂತದ್ದು ಬೇಡ. ಆಮೇಲೆ ಅದು ತನ್ನಷಕ್ಕೆ ತಾನೇ ಕೆಲಸ ಮಾಡುತ್ತೆ. ಅಂತ ಒಂದು ಆಟೋಮ್ಯಾಟಿಕ್ ಸಿಸ್ಟಂ ಅವರು ಅವರ ತೋಟದಲ್ಲಿ ಮಾಡಿದ್ರು’ ಮಲ್ಲಿಕ್ ರವರ ಈ ಮಾತಿಗೆ ಚಂದ್ರುರವರು ವಿವರಣೆ ನೀಡತೊಡಗಿದರು, ’ಅದು ಹೈಡ್ರಾಂ ಟೆಕ್ನಾಲಜಿ ಅಂತ. ಅದು ಈಗಲೂ ಶಿಂಷಾ ಅಣೆಕಟ್ಟಿದೆಯಲ್ಲ ಅಲ್ಲಿದೆ. ಅದೇನಾಗುತ್ತೆ ಅದರಲ್ಲಿ ಒಂದು ಪಿಸ್ಟನ್ ಥರ ಇರುತ್ತೆ. ಅದು ಟಕ್ಟಕ್ ಟಕ್ ಅಂತ ಹೊಡ್ಕೊಳ್ತಾ ಇರುತ್ತೆ. ಡ್ಯಾಂನಿಂದ ನೀರು ಬರೊ ಫೋರ್ಸಿಗೆ ಅದು ಕೆಲಸ ಮಾಡುತ್ತೆ. ಅದಕ್ಕೆ ಎಲೆಕ್ಟ್ರಿಸಿಟಿ ಬೇಡ ಎಂಥದ್ದೂ ಬೇಡ’ ಚಂದ್ರು ಆ ಸ್ವಯಂಚಾಲಿತ ಪಂಪ್ ನ ಬಗ್ಗೆ ವಿವರಣೆ ಕೊಟ್ಟು ಮುಗಿಸಿದರು. ನಂತರ ಮತ್ತೆ ಮಲ್ಲಿಕ್ ಮಾತು ಮುಂದುವರೆಸಿದರು, ’ನಾನು ಆಮೇಲೆ ಅವರನ್ನ ಕೇಳ್ದೆ’ಏನ್ಸಾರ್ ಇದು? ಇದು ಯಾವ್ ಪ್ರಿನ್ಸಿಪಲ್ ಮೇಲೆ ಕೆಲಸ ಮಾಡುತ್ತೆ? ಅಂತ. ಅದಕ್ಕವರು ಒಂದು encyclopedia ತೆಗ್ದು ಅದರ ಚಿತ್ರ, ಅದರ ವಿವರಣೆ ಎಲ್ಲಾ ತೋರಿಸಿ ’ನೋಡಿ ಇದು ಹೀಗೆ ಕೆಲಸ ಮಾಡುತ್ತೆ’ ಅಂತ ವಿವರ್ಸಿದ್ರು.
ನನಗೆ ಆಶ್ಚರ್ಯ ಅನ್ಸಿತ್ತು ’ಏನಪ್ಪ ಇದು ಈ ಮನುಷ್ಯ ಹೀಗೆ’ ಅಂತ. ಅಷ್ಟು ವಿಜ್ಞಾನದ ಬಗ್ಗೆ ಅವರಿಗೆ ಜ್ಞಾನ ಇತ್ತು” ಮಲಿಕ್ ರವರು ಮಾತಿಗೆ ಅಲ್ಪವಿರಾಮ ತೆಗೆದುಕೊಂಡಿದ್ದರಿಂದ ಚಂದ್ರು ಮಾತು ಮುಂದುವರೆಸಿದರು “ಅವರದ್ದೇ ಮತ್ತೊಂದು ಪ್ರಯೋಗ ಏನು ಅಂದ್ರೆ ಮನೆಲಿ ಇರೊ ಸ್ಟೀಲ್ ಪ್ಲೇಟ್ ನ ಕಟ್ ಮಾಡಿ ಅದರಲ್ಲಿ ಮೀನು ಹಿಡಿಯೋಕೆ ಬೇಕಾದ ಸ್ಪಿನ್ನರ್ ಮಾಡೋದು. ಯಾಕಂದ್ರೆ ಇಂಪೋರ್ಟೆಡ್ ಸ್ಪಿನ್ನರ್ ಗಳಲ್ಲಿ ಮಹಶೀರ್ ಮೀನುಗಳನ್ನ ಹಿಡಿಯೋಕೆ ಆಗಲ್ಲ. ಅವಕ್ಕೆ ಟ್ರೆಮಂಡಸ್ ಫೋರ್ಸ್ ಇರುತ್ತೆ. ಅವು ಎಳೆಯೊ ರಭಸಕ್ಕೆ ಸ್ಪಿನ್ನರ್ ಬೆಂಡ್ ಆಗ್ಬಿಡುತ್ತೆ. ಅದಕ್ಕೆ ಅವರು ಸ್ವತಃ ತಾವೇ ತಟ್ಟೆ ಕಟ್ ಮಾಡಿ ಅದರಲ್ಲಿ ಗಟ್ಟಿಯಾದ ಸ್ಪಿನ್ನರ್ ಮಾಡ್ಕೊಂಡು ಮೀನು ಹಿಡೀತಾ ಇದ್ರು’ ಹೀಗೆ ಚಂದ್ರುರವರು ಫಿಶಿಂಗ್ ಕುರಿತು ಮಾತನಾಡಲು ಪ್ರಾರಂಭಿಸಿದ್ದರಿಂದ ತೇಜಸ್ವಿ ನೆನಪು ಆ ಕಡೆಗೆ ಹೊರಳಿತು. ಮಲ್ಲಿಕ್ ರವರು ಆ ಕುರಿತು ಮಾತನಾಡತೊಡಗಿದರು, ’೧೯೮೬ರಲ್ಲಿ ನಾನು ಸಹ ಮೂಡಿಗೆರೆಗೆ ಪೋಸ್ಟಿಂಗ್ ಆಗಿ ಹೋದೆ. ಆಗ ತೇಜಸ್ವಿ ಜೊತೆಗೆ ಫಿಶಿಂಗಿಗೆ ಸಹ ಹೋಗ್ತಾ ಇದ್ದೆ. ಅವರತ್ರ ಒಂದು ಗ್ರೀನ್ ಕಲರ್ ಸ್ಕೂಟ್ರಿತ್ತು. ಅವರು ’ಬರ್ತಿರೇನ್ರಿ ಮೀನು ಹಿಡಿಯೋಕ್ ಹೋಗೋಣ’ ಅಂತ ಕರಿತಿದ್ರು. ಫ್ರೀ ಇದ್ರೆ ಹೋಗ್ತಿದ್ದೆ.
ಆದರೆ ನಾನು ಮೀನು ತಿನೋದಿಲ್ಲ ಶಾಕಾಹಾರಿ. ಆದ್ರೂ ನನಗೊಂದು ಕುತೂಹಲ ಏನದು ಮೀನು ಹಿಡಿಯೋದು ಅಂತಂದ್ರೆ ಅಂತ. ಆ ಥರ ಹೋದಾಗ ಅವರು ನನ್ನ ಕೈಗೊಂದು ಚಿಕ್ಕ ರಾಡು ರೀಲು ಕೊಟ್ಟು ಅವರು ದೊಡ್ದದೊಂದು ಹಿಡ್ಕೊಂಡು ಮೀನ್ ಹಿಡೀತಾ ಗಂಟಗಟ್ಟಲೆ ಕೂತ್ಬಿಡ್ತಿದ್ರು. ನಾನು ಕೇಳ್ದೆ ಅವ್ರನ್ನ ’ಏನ್ ಸಾರ್ ಸುಮ್ನೆ ಹೀಗೆ ಗಂಟೆಗಟ್ಟಲೆ ಕೂತ್ಕೊತೀರಲ್ಲ, ಏನ್ ಪ್ರಯೋಜನ ಅದ್ರಿಂದ?’ ಅಂತ. ಅವರಂದ್ರು, ’ನನಗೂ ಸರಿಗ್ ಗೊತ್ತಿಲ್ಲ ಕಣ್ರಿ. ಆದ್ರೆ ಮೀನು ಹಿಡಿಯೋಕೆ ಗಾಳ ಹಾಕ್ಕೊಂಡು ಕೂತಾಗ ಏನೇನೊ ಆಲೋಚನೆಗಳು ಬರ್ತಾವೆ. ಯೋಚನೆ ಮಾಡೋಕೆ ಟೈಮ್ ಸಿಗುತ್ತೆ’ ಅಂತ”. ” ಐ ಥಿಂಕ್ ಫಿಶಿಂಗ್ ವಾಸ್ ಓನ್ಲಿ ಏ ಮೀನ್ಸ್ ಫಾರ್ ಹಿಮ್ ಟು ಫೈಂಡ್ ಟೈಮ್. ಅಂತ ನನಗನ್ಸುತ್ತೆ. ಸುತ್ತಲೂ ಕಾಡು, ಹಸಿರು, ನದಿ ಅವುಗಳ ಮಧ್ಯೆ ಊತ್ಕೊಂಡು ಹಿ ವಾಸ್ ಬಿಕಮಿಂಗ್ ಒನ್ ಅಮಾಂಗ್ ದಿ ನೇಚರ್ ಅಂತ ನನಗನ್ಸುತ್ತೆ. ಪ್ಲಸ್ ಅವರ ಮನಸ್ಸಿನಲ್ಲಿ ಓಡ್ತಿರೊ ಕಥೆ, ಕಾದಂಬರಿಗಳಿಗೆ ಒಂದು ಸ್ಪಷ್ಟವಾದ ರೂಪ ಕೊಡೋದಿಕ್ಕೆ ಆ ಟೈಮ್ ನ ಅವರು ಯೂಟಿಲೈಸ್ ಮಾಡ್ತಿದ್ರು ಅನೋದು ನನ್ನ ಅಬ್ಸರ್ವೇಷನ್ನು” ಎಂದು ಮಲ್ಲಿಕ್ ರವರ ಮಾತಿಗೆ ಕೆ.ಎನ್ ಗಣೇಶಯ್ಯ ಸೇರಿಸಿದರು. “ಆಮೇಲೆ ರೋಟೀನ್ ಲೈಫ್ ನಿಂದ ಒಂದು ಬ್ರೇಕ್ ಅದು ಅವ್ರಿಗೆ. ಬೆಳಿಗ್ಗಿನಿಂದ ಸಂಜೆವರೆಗೂ ಕಾಫಿ ತೋಟದಲ್ಲಿ ಕೆಲಸ ಮಾಡ್ತಾ, ಆಳುಗಳ ಜೊತೆ ಹೊಡೆದಾಡ್ತಾ, ಕಾಫಿ ಬೋರ್ಡಿನವರ ಜೊತೆ ಗುದ್ದಾಡ್ತಾ, ಬೇಕೊ ಬೇಡ್ವೊ ಮನೆಗೆ ಬಂದೋರ ಜೊತೆ ಮಾತಾಡ್ತಾ ಈ ಥರದ ಸಾವಿರ ತಲೆಬಿಸಿಗಳಿಂದ ಸಾಧ್ಯವಾದಷ್ಟು ಸಮಯ ದೂರ ಇರೋಕೆ ಫಿಶಿಂಗ್ ಒಂದು ಮೀನ್ಸ್ ಅಷ್ಟೆ ಅವರಿಗೆ ಅಂತ ನನಗನ್ಸುತ್ತೆ. ಜಸ್ಟ್ ಡಿಸಪಿಯರ್ ಫ್ರಮ್ ರೊಟೀನ್ ಲೈಫ್. ಗೊ ಟು ನೇಚರ್, ಬಿ ವಿಥ್ ನೇಚರ್’ ಇದು ಅವರ ಪಾಲಿಸಿ ಆಗಿತ್ತು ಅನ್ಸುತ್ತೆ. ’ನಾವು ಪ್ರಕೃತಿಯನ್ನ ಅರ್ಥ ಮಾಡ್ಕೊಳ್ಳೋದಿಕ್ಕೆ ಒಂದು ಕೀಲಿಕೈ ಬೇಕು. ಅದಕ್ಕೆ ಇದು ಒಂದು, ಫಿಶಿಂಗ್’ ಇದನ್ನ ತೇಜಸ್ವಿನೇ ಒಂದ್ಸಲ ನನಗೆ ಹೇಳಿದ್ದು” ಚಂದ್ರುರವರು ತಮ್ಮ ಅಬ್ಸರ್ವೇಶನ್ನನ್ನು ಈ ಕುರಿತು ಸೇರಿಸಿದರು.
ಮಲ್ಲಿಕ್ ರವರು ಈ ಸಂದರ್ಭದಲ್ಲಿ ಮುಖ್ಯವಾದ ಒಂದು ಮಾತು ಸೇರಿಸಿದರು, “ಅರ್ನೆಸ್ಟ್ ಹೆಮ್ಮಿಂಗ್ವೇ ಇದ್ನಲ್ಲ ರೈಟ್ರು ಅವನ influence ತೇಜಸ್ವಿಯವರ ಮೇಲೆ ಜಾಸ್ತಿ ಇತ್ತು ಕಾಣುತ್ತೆ ಈ ವಿಚಾರದಲ್ಲಿ. ಒಂದ್ಸಾರ್ತಿ ಅವರೇ ನನಗೆ ಹೆಮ್ಮಿಂಗ್ವೇದು ’ದ ಓಲ್ಡ್ ಮ್ಯಾನ್ ಅಂಡ್ ದ್ ಸೀ’ ಅಂತ ಒಂದು ನಾವೆಲ್ ಇದೆ, ಅದನ್ನ ಕೊಟ್ಟು ’ಓದ್ರಿ ಇದನ್ನ’ ಅಂತ ಹೇಳಿದ್ರು. ಮತ್ತೆ ಆ ಕಾದಂಬರಿ ಬಗ್ಗೆ ತುಂಬಾ ಒಂದು ಇಂಟೆಂಸಿವ್ ಆದಂತ ಅಭಿಪ್ರಾಯ ಇಟ್ಕೊಂಡಿದ್ರು. ಆ ಕಾದಂಬರಿಲೂ ಕೂಡ ಒಬ್ಬ ಮೀನುಗಾರ, ಅವರ ಸಂಬಂಧಗಳು ಇಂತ ಒಂದು ವಿಷಯಾನೇ ಬರುತ್ತಲ್ಲ. ಸೊ ಅದರ ಪ್ರಭಾವ ಅವರಿಗಿತ್ತು ಅಂತ ಕಾಣುತ್ತೆ”. “ತೇಜಸ್ವಿ ಇಸ್ ಆನ್ ಆಫ್ ಬೀಟ್ ಮ್ಯಾನ್. ಬೇರೆಯವರೆಲ್ರೂ ಫಾರ್ಮಲ್ಲಾಗಿ ಯೋಚ್ನೆ ಮಾಡ್ತಾ ಇದ್ರೆ ಅವರು ಮಾತ್ರ ತುಂಬಾ ಇನ್ ಫಾರ್ಮಾಲ್ಲಾಗೆ, ಬೇರೆಯವರಿಗೆ ಸ್ವಲ್ಪ ಅಸಹಜ ಅನ್ನಿಸೊ ಹಾಗೆ ಯೋಚ್ನೆ ಮಾಡ್ತಾ ಇದು. ಅದು ಅವರ ಸ್ಪೆಷಾಲಿಟಿ ಅಂತ ನನಗನ್ಸುತ್ತೆ…” ನಂತರ ಚಂದ್ರುರವರು ಮುಂದುವರೆಸಿದರು…
ಕೃಷಿ ವಿಜ್ಞಾನಿಗಳ ಒಡನಾಟದ ಉಳಿದ ಅನುಭವಗಳು ಮುಂದಿನವಾರ…
(ಹುಡುಕಾಟ ಮುಂದುವೆರೆಯುವುದು)
 
 

‍ಲೇಖಕರು G

March 3, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: