ಯೋಗರಾಜಭಟ್ಟರ ನೆನಪಿನ ತೇಜಸ್ವಿ ಎಂಬ ಎನರ್ಜಿ
ಅವತ್ತು ಮಧ್ಯಾಹ್ನ ಬಿ.ಎಲ್ ಶಂಕರ್ ರವರ ತೇಜಸ್ವಿ ಕುರಿತ ನೆನಪುಗಳನ್ನು ಚಿತ್ರೀಕರಿಸಿಕೊಂಡ ನಂತರ ಅವರ ಮನೆಯಿಂದ ಹೊರಟು ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ) ತಲುಪುವ ಆತುರದಲ್ಲಿದ್ದೆವು. ಅಲ್ಲಿ ತೇಜಸ್ವಿಯವರೊಂದಿಗೆ ಬಹಳ ವರ್ಷಗಳ ಕಾಲ ಸಂಪರ್ಕದಲ್ಲಿದ್ದ ಕೆಲ ಕೃಷಿ ವಿಜ್ಞಾನಿಗಳನ್ನು ಮಾತನಾಡಿಸಬೇಕಿತ್ತು. ಹಾಗೇ ನಮ್ಮ ವ್ಯಾನು ಹೆಬ್ಬಾಳದ ಕಡೆ ಹೊರಟಿದ್ದಾಗ ’ಆಫೀಸಿನಲ್ಲಿದ್ದೀನಿ. ಬರೋದಾದ್ರೆ ತಕ್ಷಣ ಬಂದುಬಿಡಿ’ ಎಂದು ನನ್ನ ಮೊಬೈಲಿಗೊಂದು ಮೆಸೇಜ್ ಬಂತು. ನಾನು ಹಿಂದು ಮುಂದು ಯೋಚನೆ ಸಹ ಮಾಡದೇ ಗಾಡಿ ಓಡಿಸುತ್ತಿದ್ದ ನಿತಿನ್ ಗೆ ’ಬನಶಂಕರಿ ಕಡೆ ತಿರುಗ್ಸು’ ಅಂತ ಹೇಳಿದೆ. ಅವನು ’ಯಾಕೆ?’ ಅಂತ ಕೇಳ್ಬೇಕು ಅಂತ ಅಂದುಕೊಂಡನೊ ಏನೊ, ಆದರೆ ಹಾಗೆ ಕೇಳಿದರೆ ಎಲ್ಲಿ ಬೈಸಿಕೊಳಬೇಕಾಗುತ್ತೊ ಅಂತ ಏನೂ ಕೇಳದೇ ಮೇಕ್ರಿ ಸರ್ಕಲ್ ಅಂಡರ್ ಪಾಸ್ ಮೇಲೆ ಯೂ ಟರ್ನ್ ತೆಗೆದುಕೊಂಡು ಬನಶಂಕರಿ ಕಡೆ ಹೊರಟ.
ಅಲ್ಲಿಂದ ಹೊರಟ ಅರ್ಧಗಂಟೆಯಲ್ಲಿ ನಾವು ಬನಶಂಕರಿ ಸೆಕೆಂಡ್ ಸ್ಟೇಜ್ ನ ಸುಚಿತ್ರ ಫಿಲ್ಮ್ ಸೊಸೈಟಿ ಮುಂದುಗಡೆ ರಸ್ತೆಯಲ್ಲಿನ ಒಂದು ಆಫೀಸಿನಲ್ಲಿದ್ದೆವು. ಅದು ಕನ್ನಡ ಚಿತ್ರ ನಿರ್ದೇಶಕ ಯೋಗರಾಜ ಭಟ್ಟರ ಆಫೀಸು. ಕಳೆದ ಒಂದು ವಾರದಿಂದ ಸಾಕ್ಷ್ಯಚಿತ್ರಕ್ಕಾಗಿ ಭಟ್ಟರ ಸಂದರ್ಶನ ತಗೊಳ್ಳಬೇಕು ಅಂತ ನಾನು ಪ್ರಯತ್ನಿಸುತ್ತಿದ್ದೆ. ಮೊದಲನೇ ಸಲ ಫೋನ್ ಮಾಡಿ ’ಹೀಗೀಗೆ…’ ಅಂತ ವಿಷಯ ಹೇಳಿದಾಗಲೇ ಭಟ್ಟರು ತುಂಬಾ ಸಂತೋಷದಿಂದ ತೇಜಸ್ವಿ ಬಗ್ಗೆ ಮಾತನಾಡಲು ಒಪ್ಪಿಕೊಂಡಿದ್ದರು. ಆದರೆ ಅವರ ಸಿನಿಮಾ ಕೆಲಸಗಳ ಒತ್ತಡದಿಂದಾಗಿ ಅವರು ನಮಗೆ ಸಮಯ ಖಚಿತವಾಗಿ ಹೇಳಿರಲಿಲ್ಲ. ಆದರೆ ಅವತ್ತು ಬಿ.ಎಲ್ ಶಂಕರ್ ರವರ ಮನೆಯಿಂದ ಜಿಕೆವಿಕೆ ಕಡೆ ಹೊರಟಿದ್ದಾಗ ಮೇಲಿನಂತೆ ಅವರು ನನಗೆ ಮೆಸೇಜ್ ಕಳಿಸಿದ್ದರು.
ಸಿನಿಮಾದ Timeless ಕೆಲಸಗಳ ಪರಿಚಯ ಸಿನಿಮಾ ರಂಗದಲ್ಲೇ ಕೆಲಸ ಮಾಡುತ್ತಿರುವ ನನಗೆ ಚೆನ್ನಾಗೇ ಗೊತ್ತಿದ್ದರಿಂದ ’ಭಟ್ಟರು ಈಗ ಕೊಟ್ಟಿರುವ ಟೈಮ್ ತಪ್ಪಿಸಿಕೊಂಡರೆ ಮತ್ತೆ ಯಾವಾಗ ಸಿಕ್ತರೊ ಏನೋ?’ ಅನ್ನಿಸಿ ಹಾಗೆ ಹಿಂದುಮುಂದು ಯೋಚನೆ ಮಾಡದೇ ಅವರ ಸಂದರ್ಶನ ತೆಗೆದುಕೊಳ್ಳೋದಕ್ಕೆ ಅವರ ಆಫೀಸಿಗೆ ಹೋದೆವು. ಬರುತ್ತಾ ದಾರಿಯಲ್ಲಿ ಜಿಕೆವಿಕೆ ಕೃಷಿ ವಿಜ್ಞಾನಿಗಳಿಗೆ ಫೋನ್ ಮಾಡಿ ಮಧ್ಯಾಹ್ನಕ್ಕೆ ಫಿಕ್ಸ್ ಆಗಿದ್ದ ಅವರ ಸಂದರ್ಶನವನ್ನು ನಂಬುವಂತಹ ಒಂದು ನೆಪಹೇಳಿ ಅದೇ ದಿನ ಸಾಯಂಕಾಲಕ್ಕೆ ಮುಂದೂಡುವಲ್ಲಿ ಯಶಸ್ವಿಯಾಗಿದ್ದೆ. ಹಾಗೆ ನಾವು ಹೋದಾಗ ಭಟ್ಟರು ಆಫೀಸಿನ ಅವರ ರೂಮಿನಲ್ಲಿ ಟೇಬಲ್ ಮೇಲೆ ಒಂದಷ್ಟು ಹಾಳೆಗಳನ್ನ ಹರಡಿಕೊಂಡು ಅದೇ ಟೇಬಲ್ ಮೇಲೆ ಅವರ ಎಡಗಡೆಗೆ ಸುಮಾರು ಇಪ್ಪತ್ತೈದು, ಮೂವತ್ತು ಪೆನ್ಸಿಗಳಿದ್ದ ಸ್ಟಾಂಡಿನಿಂದ ಒಂದು ಪೆನ್ಸಿಲ್ ತೆಗೆದುಕೊಂಡು ಏನೋ ಬರೆಯುತ್ತಾ, ಅದನ್ನು ಚಿತ್ತು ಮಾಡುತ್ತಾ ಕುಳಿತ್ತಿದ್ದರು.
ನಾವು ಹೋದ ನಂತರ ಪೆನ್ಸಿಲ್ ಬಿಟ್ಟು ನಮ್ಮೊಂದಿಗೆ ಮಾತನಾಡತೊಡಗಿದರು. ಯೋಗರಾಜ ಭಟ್ಟರು ತೇಜಸ್ವಿಯವರ ಬಗ್ಗೆ, ಅವರ ಕೃತಿಗಳ ಬಗ್ಗೆ ಮಾತನಾಡುವುದನ್ನ ಆಗಾಗ ಕೇಳಿದ್ದೆ ಮತ್ತು ಕೆಲವು ಸ್ನೇಹಿತರು ’ಭಟ್ರು ತೇಜಸ್ವಿಯವ್ರ ಪಕ್ಕ ಫ್ಯಾನು ಗುರು’ ಅಂತ ಹೇಳುತ್ತಿದ್ದದ್ದೂ ಸಹ ನನ್ನ ಕಿವಿಗೆ ಬಿದ್ದಿತ್ತು. ಹಾಗಾಗಿ ತೇಜಸ್ವಿಯವರ ಓದುಗರ ವಲಯದಿಂದ ಒಬ್ಬರನ್ನ ಸಂದರ್ಶಿಸಬೇಕೆಂದುಕೊಂಡಾಗ ನನಗೆ ತಕ್ಷಣ ನೆನಪಾಗಿದ್ದವರೇ ಯೋಗರಾಜ ಭಟ್ಟರು. ’ಓದುಗರು ತೇಜಸ್ವಿಯವರನ್ನ ಹೇಗೆ ನೋಡ್ತಾರೆ?’ ಎಂಬ ಮುಖ್ಯ ವಿಷಯ ಇಟ್ಟುಕೊಂಡು ಅವರನ್ನು ಮಾತನಾಡಿಸಬೇಕೆಂದು ನಿರ್ಧರಿಸಿ ಅವರ ಸಂದರ್ಶನಕ್ಕೆ ಮುಂದಾಗಿದ್ದೆವು. ಕೆಲ ದಿನಗಳ ಹಿಂದೆ ಸಿನಿಮಾವೊಂದಕ್ಕೆ ಹಾಡು ಬರೆಸುವ ಕೆಲಸವಾಗಿ ಯೋಗರಾಜ ಭಟ್ಟರೊಂದಿಗೆ ಕೆಲದಿನಗಳ ಒಡನಾಟದ ಕಾರಣವಾಗಿ ನನ್ನ ಪರಿಚಯ ಅವರಿಗಿದ್ದಿದ್ದರಿಂದ ಪೀಠಿಕೆಯಲ್ಲೇ ಹೆಚ್ಚು ಟೈಮ್ ವೇಸ್ಟ್ ಮಾಡದೇ ನೇರ ವಿಷಯ ಪ್ರಸ್ತಾಪಿಸಿದೆ. ಭಟ್ಟರು ಸಾಕ್ಷ್ಯಚಿತ್ರದ ಉದ್ದೇಶ, ರೂಪುರೇಶೆಗಳನ್ನೆಲ್ಲ ಕೇಳಿಕೊಂಡರು. ನಂತರ ನಮ್ಮ ಅವರ ಮಾತುಕತೆ ಪ್ರಶ್ನೋತ್ತರದ ರೀತಿಯಲ್ಲಿ ಪ್ರಾರಂಭವಾಯಿತು ಭಟ್ಟರು ನಿಧಾನವಾಗಿ ಅವರದ್ದೇ ಆದ ಟಿಪಿಕಲ್ ಧಾಟಿಯಲ್ಲಿ ತಮ್ಮ ಮಾತು ಆರಂಭಿಸಿದರು,
ಮೊದಲ ನೆನಪು…?
’ನಾನು ಅವರನ್ನ ಮೊದ್ಲು ನೋಡಿದ್ದು ಫೋಟೋದಲ್ಲಿ ಅಂತಲೆ ಹೇಳಬೇಕು. ನಾನು ನೈನ್ತ್ ಸ್ಟಾಂಡರ್ಡ್ ನಲ್ಲಿದ್ದೆ, ಆ ಟೈಮಲ್ಲಿ ನನ್ನ ಅಕ್ಕಂದಿರಿಗೆಲ್ಲಾ ’ಕರ್ವಾಲೋ’ ಟೆಕ್ಸ್ಟ್ ಆಗಿತ್ತು. ಕನ್ನಡ ಐಚ್ಛಿಕ ಅಂತ ಬರೋದು ಆಗ. ಐವತ್ತು ಮಾರ್ಕ್ಸ್ ಗೊ, ಅರವತ್ತು ಮಾರ್ಕ್ಸ್ ಗೊ ಆ ಕಾದಂಬರಿ ಇತ್ತು ಆಗ. so ನನ್ನ ನೆನಪಿನ ಪ್ರಕಾರ ೯ನೇ ಕ್ಲಾಸಿಗೆ ತೇಜಸ್ವಿ ನನಗೆ ಸಿಕ್ಕಿದ್ದೇ ಕರ್ವಾಲೋ ಮೂಲಕ. ತದನಂತರ ನಾನು ಪಿಯುಸಿ ಮಾಡಿದಾಗಲೂ ಅದು ನನಗೆ ಟೆಕ್ಸ್ಟ್ ಆಗಿತ್ತು. ಅವರನ್ನ ಪುಸ್ತಕದಲ್ಲಿ ನೋಡೋದು ಒಂದು ದೊಡ್ಡ ಸುಖ. ಏನೋ ಒಂದು ದೊಡ್ಡ ಅನುಭವವನ್ನ, ವಿಡಂಬನೆಯನ್ನ ತಮಷೆಯಾಗಿ ಅಷ್ಟು ಸರಳ ಭಾಷೆನಲ್ಲಿ ತುಂಬಾ ಹೊಸತರ ಕಟ್ಟಿಕೊಟ್ಟೋರವರು. ಅದು ಪರಿಸರದ ಕತೆ ಇರಬಹುದು, ಕಿರಗೂರಿನ ಗಯ್ಯಾಳಿಗಳಿರಬಹುದು ಅಥವ ಕೃಷ್ಣೇಗೌಡನ ಆನೆ ಇರಬಹುದು…ಇಂಥದ್ದನ್ನೆಲ್ಲಾ ಪಿಯುಸಿ ಅಕ್ಕಪಕ್ಕ ಓದಿ ಓದಿ ಓದಿ ಅದೇನೋ ಒಂತರ ಎನರ್ಜಿ ಫಾರ್ಮ್ ಆಗ್ತಾ ಹೋಯ್ತು. ನನಗೊಬ್ಬನಿಗೇ ಅಲ್ಲ ಇದು, ನನ್ನ ತಲೆಮಾರು, ನನ್ನ ಹಿಂದೆ ಮುಂದಿನ ತಲೆಮಾರಿನವರಿಗೆಲ್ಲರಿಗೂ ಸಾಹಿತ್ಯವನ್ನ ಓದೋ ಪ್ಯಾಕೇಜ್ ಅಂತ ಕರೀತೀವಲ್ಲ ಅದನ್ನ ತುಂಬಾ ಸುಪುಷ್ಟವಾಗಿ ಕೊಟ್ಟೋರವರು. ನನ್ನ ಪ್ರಜ್ಞೆಗೆ ತಿಳಿದ ಮಟ್ಟಿಗೆ ಅದು ಕನ್ನಡ, ಕನ್ನಡ ಸಾಹಿತ್ಯ ತುಂಬಾ ಉತ್ತುಂಗದಲ್ಲಿದ್ದ ಕಾಲ. ತೇಜಸ್ವಿಯವರು, ಅನಂತಮೂರ್ತಿಯವರು, ಲಂಕೇಶ್… ಏನೋ ಒಂತರ ಕಾಂಬಿನೇಷನ್ ಇತ್ತಾಗ.
’ಎಲ್ಲಾ ಸರಿ ಇದೆ ಸಮಾಜದಲ್ಲಿ’ ಅನ್ನಿಸೊ ಹಾಗೆ, ಅಥವ ’ಇವರಿಗೆ ಗೊತ್ತಾದರೆ ಎಲ್ಲ ಸರಿ ಹೋಗುತ್ತೆ’ ಅನ್ನೊ ಹಾಗೆ ಒಂದು ವಾತಾವರಣ ಇತ್ತಾಗ. ಯಾಕಂದ್ರೆ ಸಾಹಿತ್ಯ ಅನ್ನೋದು ಸಮಾಜದ ಬಹಳ ದೊಡ್ಡ ಅಭಿವ್ಯಕ್ತಿ. ಹಾಗಾಗಿ ಒಂದಿಡೀ ತಲೆಮಾರನ್ನ ರೆಡಿ ಮಾಡಿದ ಬರಹಗಳವು, ಸಾಮಾನ್ಯ ಬರಹಗಳಲ್ಲ. ಎಷ್ಟೋ ಪುಟಗಟ್ಟಲೇ ಗಂಭೀರವಾಗಿ ಚರ್ಚೆ ಆಗಬೇಕಾದಂತಹದನ್ನ ಇನ್ನೆಲ್ಲೋ ಬಹಳ ಸರಳವಾಗಿ ಹೇಳಿರುತಿದ್ರು ಅವರು. ಆಮೇಲೆ ಅವರಿಂದಾಗಿ ನಮಗೆಲ್ಲಾ ಲೋಹಿಯಾ ಪರಿಚಯ ಆಗಿದ್ದು. ಲೋಹಿಯಾ ಬಗ್ಗೆ ಯಾಕೆ ತೇಜಸ್ವಿಯವರು ಅಷ್ಟು ಮಾತಾಡ್ತಾರೆ? ಜಾತ್ಯಾತೀತತೆ ಅಂದ್ರೆ ಏನು? ಇತ್ಯಾದಿ ತುಂಬಾ ದೊಡ್ಡ ದೊಡ್ಡ ಹುಳಗಳನ್ನ ನಮ್ಮ ತಲೆಗೆ ಬಿಟ್ಟವರು ಅವರು. ‘ಸೆಕ್ಯುಲರಿಸಂ ಅಥವ ಜಾತ್ಯಾತೀತತೆ ಅಂತ ಏನ್ ಕರಿತೀವಿ ನಾವು ಆ ಪದಾನ ಬಳಸೋದ್ರಲ್ಲೇನೇ ನಾವು ಜಾತಿವಾದಿಗಳಾಗೊ ಸಾಧ್ಯತೆ ಇದೆ. ಅಂಥ ಒಂದು ದುರಂತ ರಾಷ್ಟ್ರದಲ್ಲಿ ನಾವೆಲ್ಲ ವಾಸ ಮಾಡ್ತಾ ಇದೀವಿ’ ಅಂತ ಹೇಳಿದಾರೆ ಒಂದು ಕಡೆ. ಎಂಥ ಸತ್ಯದ ಮಾತದು? ತುಂಬಾ ಸತ್ಯಗಳನ್ನ ಆರೀತಿ ಪಠಾರ್ ಅಂತ ಹೇಳ್ತಿದ್ರು ಅವರು. ಆ ನಂತರ ನಾನು ಸಿನಿಮಾ ಗಿನಿಮಾ ಅಂತ ಹಾಳಾಗಿ ಬೆಂಗಳೂರಿಗೆ ಬಂದು ಸಹಯಕ ನಿರ್ದೇಶಕನಾಗಿ ಕೆಲಸ ಮಾಡೋವಂತ ಟೈಮಲ್ಲಿ ಒಂದ್ಸಾರ್ತಿ ತೇಜಸ್ವಿಯವರು ’ಯವನಿಕಾ’ಗೆ ಬರ್ತಾರೆ ಅಂತ ಗೊತ್ತಾಯ್ತು. ಇದ್ದಬದ್ದ ಕೆಲ್ಸ ಕಾರ್ಯನೆಲ್ಲಾ ಬಿಟ್ಟು ಎದ್ದು ಬಿದ್ದು ಓಡ್ದೆ.
ಹೋಗಿ ನೋಡಿದ್ರೆ ಇಡೀ ಯವನಿಕಾ ಒಳಗೆ ಹೊರಗೆ ಎಲ್ಲ ಜನ ಕಿಕ್ಕಿರಿದು ತುಂಬಿಹೋಗಿದಾರೆ. ಒಳಗಡೆ ಹೋಗ್ಲಿ ಹೊರಗಡೆ ಅಂಗಳ ಇದೆಯಲ್ಲ ಅಲ್ಲಿ ಕೂಡ ನಿಲ್ಲೋಕೆ ಜಾಗ ಇರಲಿಲ್ಲ. ಅದ್ರೂ ಯಾರ್ಯಾರದ್ದೊ ಕೈಕಾಲ್ ಹಿಡ್ಕೊಂಡು ಒಳಗೆ ಹೋಗಿದ್ದಾಯ್ತು, ನಾನು ಮತ್ತು ಧಾರವಾಡ ಯೂನಿವರ್ಸಿಟಿಯ ನನ್ನ ಸ್ನೇಹಿತರೊಬ್ಬರು. ತೇಜಸ್ವಿ ಅದೇ ತಾನೇ ಎಲೆ ಅಡಿಕೆ ಉಗುಳಿ ಬಂದು ಕೂತ್ಕೊಂಡ್ರು. ತುಂಬಾ ಜನ ಅವತ್ತಿನ ಪ್ರಜ್ಞಾವಂತರೆಲ್ಲ ಅಲ್ಲಿ ತೇಜಸ್ವಿಯವರ ಜೊತೆ ಕೂತಿದ್ರು.ಅಲ್ಲಿ ಒಂದು ಮಾತು ಹೇಳಿದ್ರು ಅವರು. ಅದು ಎಂಥ ಸಂಚಲನ ಉಂಟು ಮಾಡ್ತು ನನ್ನಲ್ಲಿ ಅಂತಂದ್ರೆ, ನಾನು ಅದೇ ತಾನೆ ಓದ್ತಿದ್ದ ಎಂಎ ಅರ್ಧಕ್ಕೆ ಬಿಟ್ಟು ಬಂದುಬಿಟ್ಟಿದ್ದೆ. ಅಂಥ ಸಂದರ್ಭದಲ್ಲಿ ಅವರು ’ವಿದ್ಯೆ ಅಂದರೆ ಏನು? ಬುದ್ಧಿ ಅಂದ್ರೆ ಏನು?’ ಅಂತ ಮಾತಾಡಿದ್ರು. ಎಲ್ಲೋ ಒಂದು ಕಡೆ ಮಾಸ್ಟರ್ ಡಿಗ್ರಿನ ಬೈಯೊ ಟೋನ್ ಇತ್ತು ಅವರ ಮಾತಲ್ಲಿ. ‘ಓದಿ ಸರ್ಟಿಫೀಕೇಟ್ ಯಾಕ್ ತಗೋಬೇಕು?’ ಅನ್ನೊ ಅಂತ ಒಂದು ಧ್ವನಿ ಅದು. ಅದನ್ನ ಕೇಳಿ ನನಗೆ ಎಷ್ಟು ಸಂತೋಷ ಆಯ್ತು ಅಂದ್ರೆ ’ನಾನು ಎಂಎ ಬಿಟ್ಟಿದ್ದು ಒಳ್ಳೇದೇ ಆಯ್ತು, ಗುರುಗಳು ಕರೆಕ್ಟಾಗಿ ಹೇಳ್ತಾ ಇದಾರೆ’ ಅಂತ ನನಗೆ ನಾನೇ ಹೇಳ್ಕೊಂಡೆ.
ಅದೇ ಸಭೆನಲ್ಲಿ ವೇದಿಕೆ ಮೇಲಿದ್ದ ಯಾರೊ ಒಬ್ರು ’ಕನ್ನಡ ಉಳುಸ್ಬೇಕು, ಕನ್ನಡ ಬೆಳೆಸ್ಬೇಕು..’ ಅಂತ ಮಾತಾಡ್ತಿದ್ರೆ ಇವರು ಮಧ್ಯದಲ್ಲಿ ಎದ್ದು ನಿಂತು ’ಜಗತ್ತಿನ ಸುಮಾರು ಭಾಷೆಗಳ ತಾಯಿ ಸಂಸ್ಕೃತ. ಅದೇ ಮನೆನಲ್ಲಿ ಮಲ್ಕೊಂಡಿದೆ. ಇನ್ನು ನೀನ್ಯಾರಪ್ಪ ಕನ್ನಡ ಉಳ್ಸೋದಿಕ್ಕೆ?’ ಅಂತ ಕೇಳಿದ್ರು, ನೇರವಾಗಿ. ಅಲ್ಲಿ ತುಂಬಾ ಜನ ದಡ್ಡರಿದ್ರು. ಅವರೆಲ್ಲಾ ಶಿಳ್ಳೆ ಹೊಡೆದ್ರು. ಆದ್ರೆ ಶಿಳ್ಳೆ ಹೊಡೆಯೊ ವಿಚಾರ ಅಲ್ಲ ಅದು. ಆತ ಸತ್ಯ ಹೇಳ್ತಿದ್ರು, ’ಒಂದು ಭಾಷೆ ಅದರ ಪಾಡಿಗದು ಹುಟ್ಟುತ್ತೆ ಅದರ ಪಾಡಿಗದು ಸಾಯುತ್ತೆ. ಯಾರೂ ಅದನ್ನ ಸಾಯ್ಸೋಕೂ ಆಗೋದಿಲ್ಲ, ಉದ್ದಾರ ಮಾಡೋಕೂ ಆಗೋದಿಲ್ಲ’ ಅನ್ನುವ ಧ್ವನಿ ಅವರ ಮಾತಿನಲ್ಲಿತ್ತು. ‘ಹಾಗಾದ್ರೆ ಸಂಸ್ಕೃತ ಅಷ್ಟು ಶ್ರೀಮಂತವಾದ ಭಾಷೆ. ಅದು ಉರ್ದುಗಿಂತ ಅಥವ ಇಂಗ್ಲೀಷಿಗಿಂತ ಯಾಕೆ ಮೇಲೆ ಹೋಗಲಿಲ್ಲ?’ ಅಂತ ಚರ್ಚೆ ನಡೀತಿತ್ತು. ಆದರೆ ಅವರಿಗೆ ಆ ಚರ್ಚೆನಲ್ಲಿ ಯಾವ ಆಸಕ್ತಿನೂ ಇರಲಿಲ್ಲ ಅನ್ನೋದು ಅವರ ಬಾಡಿ ಲಾಂಗ್ವೇಜ್ ನಲ್ಲೇ ಗೊತ್ತಾಗ್ತಿತ್ತು. ಇಂಥ ಚರ್ಚೆ, ನಗರಗಳಲ್ಲಿ ನಡೆಯೊ ಸಭೆ, ಸಮಾರಂಭಗಳ ಬಗ್ಗೆ, ನಗರದ ಜನರ ಡೋಂಗಿತನಗಳ ಬಗ್ಗೆ ಬೇಸತ್ತೇ ಅವರು ಮೂಡಿಗೆರೆ ಕಾಡಿಗೆ ಓಡಿಹೋಗಿದ್ದು ಅನ್ನೋದು ನನ್ನ ಅಭಿಪ್ರಾಯ. ಹಾಗೆ ಅಲ್ಲಿ ಜಾಗತೀಕರಣದ ಬಗ್ಗೆ ಕೂಡ ಯಾರೋ ಪುಣ್ಯಾತ್ಮರು ಗಂಟೆಗಟ್ಟಲೆ ಭಾಷಣ ಮಾಡಿ ಕೊರಿತಿದ್ರು. ಅದಕ್ಕೊಂದಿಷ್ಟು ಉಗಿದ್ರು ಅವರು. ಕೊನೆಗೆ ಅಲ್ಲಿ ಅವರು ಮಾತಾಡಿದ್ರೆ ಸಾಕು ನಗೋವಂತ ಪರಿಸ್ಥಿತಿ ಕ್ರಿಯೇಟ್ ಆಯ್ತು. ಆದ್ರೆ ಅವರು ಹೇಳ್ತಿದ್ದಿದ್ದೆಲ್ಲಾ ಕಟುಸತ್ಯಗಳು. ಮಧ್ಯೆ ಒಂದು ಕಡೆ ತುಂಬಾ ಸೀರಿಯಸ್ ಆದ್ರು. ಮಧ್ಯಾಹ್ನ ಊಟದ ಟೈಮಿಗೆ ಎದ್ದು ಹೋಗೇ ಬಿಟ್ರು. ಅದು ನಾನು ತೇಜಸ್ವಿಯವ್ರನ್ನ ಮೊಟ್ಟಮೊದಲನೇ ಸಲ ನೋಡಿದ್ದು. ನಂತರ ಟಿವಿಗಳಲ್ಲಿ ಬಂದಾಗ, ಅಥವ ಪೇಪರ್ ನಲ್ಲಿ ಅವರ ಬಗ್ಗೆ ಬಂದಾಗಲೆಲ್ಲಾ ತಪ್ಪದೇ ನೋಡ್ತಿದ್ದೆ.
ಇನ್ನೊಂದ್ಸಾರ್ತಿ ನಾನು, ಜಯಂತ್ ಕಾಯ್ಕಿಣಿ ಎಲ್ಲಾ ಸ್ನೇಹಿತರಾದ ನಂತರ, ಮುಂಗಾರುಮಳೆ ರಿಲೀಸ್ ಆದ ನಂತರ ಒಂದ್ಸಾರ್ತಿ ಜಯಂತ್ ಕಾಯ್ಕಿಣಿಯವರ ಪುಸ್ತಕ ಬಿಡುಗಡೆಗೆ ಬಂದಿದ್ರು. ಅವತ್ತು ಬಹಳ ಆನಂದ ಆಯ್ತು ಅವರನ್ನ ನೋಡಿ. ಅವತ್ತು ಬಹಳ ಆನಂದ ಆಯ್ತು ಅವರನ್ನ ನೋಡಿ. ಮಾಮೂಲಿದೊಂದು ಪ್ಯಾಂಟು, ಬುಶ್ ಷರ್ಟ್ ಹಾಕ್ಕೊಂಡು ಯಾವ ತಲೆ ಬಿಸಿನೂ ಇಲ್ಲ ಅನ್ನೊವಷ್ಟು ಆರಾಮಾಗಿ ಒಂದು ಛೇರ್ ನಲ್ಲಿ ಕೂತಿದ್ರು. ಮಾತಾಡಿಸ್ಲಿಲ್ಲ ಅವತ್ತು. ಆದರೆ ಮುಖತಃ ಸಂವಹನಕ್ಕಿಂತಲೂ ಸಾವಿರಪಟ್ಟು ಸಂವಹನ ಒಬ್ಬ ಓದುಗನಾಗಿ ಅವರ ಜೊತೆಗಿದೆ ಅಂತ ನಾನು ಹೇಳಬಹುದು.
ಭಟ್ಟರ ಬರವಣಿಗೆಯ ಮೇಲೆ ಪ್ರಭಾವ…?
“ನಾನು ತೇಜಸ್ವಿಯವರನ್ನ ಅಥವ ಬೇಂದ್ರೆಯವರನ್ನ ಓದಿರಲಿಲ್ಲ ಅಂದಿದ್ರೆ, ಈಗ್ಲೇ ಸಿನಿಮಾದಲ್ಲಿ ಅಧಮರ ಥರ ಇದೀನಿ ಇನ್ನಷ್ಟು ಅಧಮನಾಗಿ ಬಿಡ್ತಿದ್ನೊ ಏನೊ ಗೊತ್ತಿಲ್ಲ. ತುಂಬಾ ದೊಡ್ಡ ಪ್ರಭಾವ ಇದೆ ತೇಜಸ್ವಿಯವರದ್ದು ವೈಯುಕ್ತಿವಾಗಿ ನನ್ನ ಮೇಲೆ. ಜೊತೆಗೆ ಮಾರ್ಕ್ ಟ್ವೈನ್ ಅಂತ ಒಬ್ಬ ಇಂಗ್ಲೀಷ್ ಬರಹಗಾರ, ನನಗೆ ತುಂಬಾ ಇಷ್ಟ ಆವನು, ಆತನ ಪ್ರಭಾವ ಸಹ ತುಂಬಾ ಇದೆ. ಅದು ಹೇಗೆ ಅಂತ ಹೇಳೋದು ಕಷ್ಟ. ತೇಜಸ್ವಿಯವರದ್ದು ಒಂದು ವಕ್ರ ವಿನೋದ, ಏನೋ ಒಂದು ಥರದ ವಿಡಂಬನೆ, ಸೀರಿಯಸ್ ಆದಾಗ ಅದಕ್ಕಿಂತಲೂ ಸೀರಿಯಸ್ ಆಗೋದಿಕ್ಕೆ ಸಾಧ್ಯನೇ ಇಲ್ಲ ಒಬ್ಬ ವ್ಯಕ್ತಿ ಅನ್ನೋ ಬರವಣಿಗೆಯ ಧಾಟಿ ಎಲ್ಲ ಇದ್ಯಲ್ಲ ಅದು ಎಲ್ಲೆಲ್ಲಿ, ಹ್ಯಾಗ್ಯಾಗೆ ನಮ್ಮ ತಲೆ ಅಥವ ಮನಸ್ಸನ್ನ ಆವರಿಸುತ್ತೆ? ಅಂತ ಹೇಳೋದು ತುಂಬಾ ಕಷ್ಟ. ಒಬ್ಬ ಓದುಗನಾಗಿ ಮಾತ್ರ ಅದನ್ನ ಅನುಭವಿಸೋಕೆ ಸಾಧ್ಯ ಅದನ್ನ. ನಾವಿಲ್ಲಿ ಸಂದರ್ಶನ, ಪಂದರ್ಶನ ಅಂತ ದೊಡ್ಡಸ್ತಿಕೆ ಮೆರೆಯೋವಂತ ಟೈಮಲ್ಲಿ ಕಿಟಕಿ ಆಚೆ ಬದುಕು ಅಲ್ಲೆಲ್ಲೋ ಅದರ ಪಾಡಿಗೆ ಅದು ನಡೀತಿರುತ್ತೆ. ಅಲ್ಲೆಲ್ಲೋ ಒಂದು ಚಿಕ್ಕ ಆಕ್ಸಿಡೆಂಟ್ ಆಗಿರಬಹುದು, ಇನ್ಯಾರಿಗೊ ಪ್ರೀತಿ ಆಗಿರಬಹುದು, ಇನ್ನೊಬ್ಬನಿಗೆ ಮಗಳು ಹುಟ್ಟಿರಬಹುದು, ಆ ರೀತಿಯ ಒಂದು ಟೋನ್ ಇರುತ್ತೆ ಅವರ ಬರವಣಿಗೆನಲ್ಲಿ.
ಅವರ ‘ಪರಿಸರದ ಕತೆ’ ಯಾವುದೇ ಕಾದಂಬರಿಗಿಂತ ಲಕ್ಷಪಟ್ಟು ಓದಿಸ್ಕೊಂಡ್ ಹೋಗುತ್ತೆ. ಅದರಲ್ಲೆಲ್ಲಾ ಡೌನ್ ಟು ಅರ್ಥ್ ಅಂತೀವಲ್ಲ ಅಂತ ರೂಟ್ ಲೆವೆಲ್ ಅಪ್ರೋಚ್ ಇದೆ. ಅದಕ್ಕಿಂತಲೂ ಡೌನ್ ಟು ಅರ್ಥ್ ಆಗೋಕೆ ಸಾಧ್ಯಾನೇ ಇಲ್ಲ ಒಬ್ಬ ಬರಹಗಾರ. ಅವರ ದೃಷ್ಟಿಕೋನದ ಜೊತೆಗೆ ಅಕ್ಕಪಕ್ಕದವರ ಅನುಭವಗಳನ್ನೂ ಸೇರಿಸಿ ಒಂದು ಕಥೆ ಅಲ್ಲದ ಕಥೆ ಹೇಳೋದಿದೆಯಲ್ಲ, ಆ ದೃಷ್ಟಿನಲ್ಲಿ ಹೇಳೋದಾದ್ರೆ ’ಪರಿಸರದ ಕತೆ’ ವಿಶ್ವದಲ್ಲೇ ಮೊಟ್ಟಮೊದಲ ಪ್ರಯೋಗ. ಆ ಥರದ್ದನ್ನೆಲ್ಲ ಬರೆಯೋದಕ್ಕೆ ಎಷ್ಟು ಸಿಂಪಲ್ ಆದ್ರೂ ಸಾಲದು, unlearning ಮಾಡ್ಕೊಂಡ್ರು ಸಾಲದು. ನಮ್ಮನ್ನ ನಾವು ಬೌದ್ಧಿಕವಾಗಿ ಖಾಲಿ ಮಾಡ್ಕೊಂಡಾಗ ಹೊಸದು ತುಂಬಿಕೊಳ್ತಾ ಹೋಗುತ್ತಲ್ವ, ಆ ರೀತಿಯ ಒಂದು unlearning ಇತ್ತು ಅವರಿಗೆ. ಸೊ ಬಹಳ ಜನರಿಗೆ ಮಾದರಿಯಾಗಬೇಕಾದ ಬರಹಗಳವು. ನನಗೆ ತಿಳಿದ ಮಟ್ಟಿಗೆ ಕಾರಂತರ ನಂತರ ತುಂಬಾ ದೊಡ್ಡ ದೊಡ್ಡ ವಿಚಾರಗಳನ್ನ ತುಂಬಾ ಸರಳವಾಗಿ ಕಟ್ಟಿಕೊಟ್ಟವರು ತೇಜಸ್ವಿ. ಅದನ್ನ ಅವರು ’ಮಿಲೇನಿಯಂ ಸೀರೀಸ್’ನಲ್ಲಿ ಮಾಡಿದಾರೆ. ಬಹುಶಃ ಬಹಳ ಜನ ಸಾಹಿತಿಗಳಿಗೆ ಸೈನ್ಸ್ ತುಂಬಾ ಆಕರ್ಷಿಸುತ್ತೊ ಏನೊ ನನಗೊತ್ತಿಲ್ಲ, ಆದರೆ ಬಹುಪಾಲು ಸಾಹಿತಿಗಳು ಸೈನ್ಸ್ ಕಡೆ ಶಿಫ್ಟ್ ಆಗ್ತಾರೆ.
ವಿಜ್ಞಾನವನ್ನ ತುಂಬಾ ಹತ್ತಿರದಿಂದ ನೋಡೋಕೆ ಶುರು ಮಾಡ್ತಾರೆ. ‘ಮಿಲೇನಿಯಂ ಸಿರೀಸ್’ ಅಂತ ಒಂದು ಪ್ರಯೋಗ. ಆಮೇಲೆ ಎಷ್ಟೋ ಸಾಹಿತ್ಯದಲ್ಲಿ ಬೇಡದ ಹಿಂಡಿಬೂಸ ಇರುತ್ತೆ, ಯಾವತ್ತೂ ಯಾರೂ ತೆಗೆದು ನೋಡದ ಪುಸ್ತಕಗಳಿರ್ತಾವೆ. ಆ ಥರದ ಪುಸ್ತಕಗಳಲ್ಲ ಅವು, ಅಥವ ಕೇವಲ ಮಾರ್ಕೆಟ್ ಇದೆ ಅಂತ ಬರೆದಂತವೂ ಅಲ್ಲ. ಅದೊಂದು ಜ್ಞಾನ. ಅದರಿಂದ ಅವರೇನೊ ಥ್ರಿಲ್ ಆಗಿರ್ತಾರೆ, ಅದನ್ನ ಓದುಗರ ಜೊತೆ ಹಂಚಿಕೊಳ್ಳಬೇಕು ಅನ್ನಿಸಿರುತ್ತೆ ಅವರಿಗೆ. ಆಮೇಲೆ ಅವರ ಮತ್ತೊಂದು ಶ್ರೇಷ್ಠ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಅಂದರೆ ‘ಜಿಮ್ ಕಾರ್ಬೆಟ್’ನ ಬೇಟೆಗೆ ಸಂಬಂಧಪಟ್ಟ ಪುಸ್ತಕಗಳನ್ನ ಅನುವಾದಿಸಿದ್ದು, ‘ಕಾಡಿನ ಕಥೆಗಳು’. ಅದಂತೂ ದೊಡ್ದ ಪ್ರಯೋಗ ಅಂತಾನೇ ನನ್ನ ಭಾವನೆ. ಇನ್ನೂ ಒಂದು ಮುಖ್ಯವಾದ ವಿಚಾರ ಅಂದ್ರೆ ಅವರ ಬರವಣಿಗೆನಲ್ಲಿ ಇಲ್ಲೆಲ್ಲೋ ಕಥೆ ಬೆಳೆಸೋದಕ್ಕೆ ಕಷ್ಟಪಟ್ಟಿದಾರೆ, ಇಲ್ಲಿ ತಿಣುಕಾಡಿದಾರೆ ಅಂತ ಅನ್ನಿಸೋದೆ ಇಲ್ಲ. ನೀಟಾಗಿ ಬರೆದು, ಪ್ಯಾಕ್ ಮಾಡಿ ಕೈಗೆ ಇಟ್ಟಹಾಗಿರುತ್ತೆ ಅವರ ಬರವಣಿಗೆ. ಪ್ರಾಯಶಃ ಬಹಳ Rare ಆ ರೀತಿಯ ಬರಹಗಾರರು ನಮ್ಮಲ್ಲಿ. ಅವರ ಬರಹಗಳು ಹೆಚ್ಚು ಯುವ ಪೀಳಿಗೆ ಅಂತ ಕರೀತೀವಲ್ಲ ಅವರನ್ನ ಯಾಕೆ ಹೆಚ್ಚು ಕಾಡಿಸ್ತಾವೆ ಅಂದ್ರೆ ಬಹುಶಃ ಅವರ ಸರಳತೆ ಇರಬಹುದು ಅಥವ ಪ್ರಾಮಾಣಿಕತೆ ಇರಬಹುದು. ಅಸಾಧಾರಣವಾದ ಪ್ರಾಮಾಣಿಕತೆ ಇತ್ತು ಅವರಲ್ಲಿ. ಆ ಮನಸ್ಥಿತಿನಲ್ಲಿ ಏನನ್ನ ಗೀಚಿದರೂ ಕೂಡ ಅದು ಯಾವ ಕಾಲದ ಹುಡುಗರಿಗೂ ಇಷ್ಟ ಆಗುತ್ತೆ ಅನ್ನೋದು ನನ್ನ ನಂಬಿಕೆ.
ಕಾಡುವ ಪಾತ್ರ…?
ಅವರ ಬರಹಗಳಲ್ಲಿ ಸಾರ್ವಕಾಲಿಕವಾಗಿ ನನಗೆ ಕಾಡೋದು ಮಂದಣ್ಣ. ಅವನನ್ನ ಮಾತ್ರ ನಾವು ಯಾವತ್ತೂ ಮರೆಯೋದಕ್ಕೆ ಸಾಧ್ಯಾನೇ ಇಲ್ಲ. ಯಾರನ್ನ ನಾವು ಕಾಂಜೀಪೀಂಜಿ ಅಂಥ consider ಮಾಡ್ತೀವಿ ಅಥವ ignore ಮಾಡ್ತೀವಲ್ಲ ಆ categoryಗೆ ಸೇರೊ ಮಂದಣ್ಣ ನಮ್ಮ ದೇಶದ ೯೫ ಭಾಗ ಮುಗ್ಧ ಜನರ ಪ್ರತಿನಿಧಿಯ ಹಾಗೆ ಕಾಣ್ತಾನೆ. ಮಂದಣ್ಣನ ಹಾಗೆ ಅಸಾಧಾರಣವಾದ ತಿಳುವಳಿಕೆ ಇದ್ದೂ ಯಾವುದರ ಬಗ್ಗೆಯೂ ತಲೆ ಕೆಡಿಸ್ಕೊಳದೇ ಇರೋವಂತ ಜನಗಳೇ ನಮ್ಮ ದೇಶದಲ್ಲಿ ಮೆಜಾರಿಟಿ ಇರೋರು. ಅವರ ಪ್ರತಿನಿಧಿಯ ಹಾಗೆ ಕಾಣ್ತಾನೆ ಮಂದಣ್ಣ. So ಮಂದಣ್ಣನ ಮಾತ್ರ ಯಾವತ್ತೂ ಮರೆಯೋಕೆ ಸಾಧ್ಯಾನೇ ಇಲ್ಲ.
ತೇಜಸ್ವಿ ಇಲ್ಲದ ಶೂನ್ಯ…
ಅವರು ತೀರಿಕೊಂಡಾಗ ಮೂಡಿಗೆರೆ ಹೋಗಿದ್ವಿ. ಗೆಳೆಯ ಸೂರಿನೂ ಇದ್ದ. ಆಗ ಶಿವಮೊಗ್ಗ ಸುಬ್ಬಣ್ಣ ’ಅನಂದಮಯ ಈ ಜಗಹೃದಯ’ ಅಂತ ಹಾಡು ಹೇಳಿದ್ರು. ಅಷ್ಟು ವರ್ಷಗಳ ತುಂಬು ಬದುಕು ಬದುಕಿ ಎಷ್ಟು ಆರಾಮಾಗಿ ಹೋದ್ರಲ್ಲ ಯಾವ ತಲೆ ಬಿಸಿಗಳೂ ಇಲ್ಲ ಅನ್ನೊ ಹಾಗೆ, ಇಲ್ಲೇ ಎಲ್ಲೋ ಹೋಗಿಬರ್ತೀನಿ ಅನ್ನೋ ಥರ ಅಂತ ನನಗೆ ಅನ್ನಿಸ್ತಿತ್ತು ಅವರನ್ನ ನೋಡಿ. ಅವರ ಜೊತೆಗೆ ಅವರ ಕೆಲವು ಪುಸ್ತಕಗಳನ್ನೂ ಇಟ್ಟಿದ್ರು ಅಲ್ಲಿ. ಸಾವಿನ್ನಲೂ ಕೂಡ ಅವರನ್ನ ನೋಡಿದ್ರೆ ‘ಏನೋ ಸತ್ಯಾನೇ ಹೇಳ್ತಾ ಇದಾರೆ’ ಅನ್ನಿಸ್ತಾ ಇತ್ತು. ಆವತ್ತು ಅಲ್ಲಿ ಹೋದಾಗ ಅವರು ಆ ಕೆರೆ ಬಗ್ಗೆ ಬರೆದಿದ್ದು, ನಾಯಿ, ಸ್ಕೂಟರ್ ಬಗ್ಗೆ ಇದರ ಬಗ್ಗೆ ಎಲ್ಲಾ ಬರೆದಿದ್ದು ಅದೆಲ್ಲ ನೆನಪಿಗೆ ಬಂದು ಮನಸ್ಸಿಗೆ ಒಂಥರ ಆಯ್ತು. ಆಮೇಲೆ ಅವರ ಸ್ಕೂಟ್ರು ಅಲ್ಲೇ ಒಂದು ಕಡೆ ನಿಂತಿತ್ತು. ಅದನ್ನ ನೋಡಿದಾಗ ’ಅದೇ ಸ್ಕೂಟರ್ ಇರಬಹುದು, ಅವರು ಅವರ ತಂದೆ ಮುಂದೆ ಬಿಚ್ಚಿ ಬಾಂಡ್ಲಿಗೆ ಹಾಕಿದ್ದು’ ಅಂತ ನನ್ನಷ್ಟಕ್ಕೆ ನಾನೇ ಅಂದುಕೊಂಡೆ.
ಆದರೆ ಅವರನ್ನ ನಾನು ನಿಜವಾಗ್ಲೂ ಮಿಸ್ ಮಾಡ್ಕೊಂಡಿದ್ದು ಅವರು ದಿಢೀರ್ ಅಂತ ತೀರಿಹೋದಾಗಲ್ಲ. ಪ್ರತಿವರ್ಷ ಒಂದು, ಎರಡು ಅವರ ಪುಸ್ತಕಗಳು ಬರ್ತಾ ಇದ್ವು.ಅದು ಸಡನ್ನಾಗಿ ನಿಂತು ಹೋದಾಗ ’ಓ ಇನ್ನುಅವರು ಬರೆಯೋದಿಲ್ಲ. ಅವರ ಹೊಸ ಪುಸ್ತಕಗಳು ಬರೋದಿಲ್ಲ’ ಅಂತ ಅನ್ನಿಸಿದಾಗ ತುಂಬಾ ಮಿಸ್ ಮಾಡ್ಕೋತೀನಿ ಅವರನ್ನ. ಪುಸ್ತಕದ ಅಂಗಡಿಗೆ ಹೋದಾಗ ಆ ರೀತಿ ತುಂಬಾ ಸಲ ಅನ್ನಿಸುತ್ತೆ. ಅವರ ಸಾವು ಕೂಡ ನನಗೆ ಅಷ್ಟು ಕಾಡ್ಸಿರಲಿಲ್ಲ. ಲಂಕೇಶ್ ತೀರಿಕೊಂಡಾಗಲೂ ಹಾಗೆ ಅನ್ಸಿತ್ತು. ಬೇಂದ್ರೆಯವರ ಬಗ್ಗೇನೂ ಹಾಗೆ ಅನ್ಸುತ್ತೆ. ಬೇಂದ್ರೆಯವರ ’ಔದುಂಬರಗಾತೆ’ ಓದ್ತಾ ಇದ್ದೆ ಮೊನ್ನೆ. ಆಗ ಅನ್ನಿಸ್ತು ’ಕನ್ನಡದಲ್ಲಿ ಇನ್ನು ಯಾರೂ ಏನೂ ಬರೆಯೋವಂತದು ಉಳಿದಿಲ್ಲ’ ಅಂತ. ನಂತರ ಅವರು ತೀರಿಕೊಂಡ ಒಂದ್ಸಲ ನಾನು, ಜಯಂತ ಕಾಯ್ಕಿಣಿ ಮೂಡಿಗೆರೆಗೆ ಹೋಗಿದ್ವಿ. ಅವರ ಪುಸ್ತಕಗಳ ಮತ್ತು ಫೋಟೋಗಳ ಎಕ್ಸಿಬಿಷನ್ ಇತ್ತು. ಅಮ್ಮ ರಾಜೇಶ್ವರಿಯವರು ಟೀ ಕೊಟ್ರು. ಮಂಗಟ್ಟೆ ಹಕ್ಕಿ ಬಂದು ಕಿಟಕಿ ಗಾಜು ಕುಟ್ಟಿ ಹೋಗೋದನ್ನ ತೋರ್ಸಿದ್ರು, ಅವರು ಬಟ್ಟೆ ಅಡ್ಡ ಕಟ್ಕೊಂಡು ಫೋಟೋ ತೆಗೀತಿದ್ದ ಜಾಗ ಎಲ್ಲಾ ತೋರ್ಸಿದ್ರು. ಈಗ್ಲೂ ಮೂಡಿಗೆರೆಗೆ ಸಾಕಷ್ಟು ಸಾರ್ತಿ ಹೋಗ್ತೀವಿ . ಸೌತ್ ಕೆನರಾ ಕಡೆ ಹೋಗ್ಬೇಕದಗಲೆಲ್ಲಾ ಆ ಕಡೆ ಎಳೆಯುತ್ತೆ ಮನಸ್ಸು. ದಿಢೀರ್ ಅಂತ ಮೂಡಿಗೆರೆಯ ಆ ’ಹ್ಯಾಂಡ್ ಪೋಸ್ಟ್’ ಅದನ್ನ ನೋಡ್ಬೇಕು ಅಂತ ಬಯಸುತ್ತೆ ಮನಸ್ಸು. ಹೋಗ್ತೀನಿ. ಹೋಗಿ ಏನ್ ಮಾಡ್ಬೇಕು ಗೊತ್ತಾಗೋದಿಲ್ಲ. ಹೋಗಿ ಸುಮ್ನೆ ನಿಂತ್ರೆ ಏನೋ ಒಂಥರ ಸಮಾಧಾನ. ಹಾಗೆ ಜನಮಾನಸದಲ್ಲಿ ಯಾವತ್ತೂ ಮರೆಯೋಕೆ ಸಾಧ್ಯವೇ ಇಲ್ಲದ ಹಾಗೆ ಬೆರೆತುಹೋದ ಒಂದು ಎನರ್ಜಿ ಅದು….” ಯೋಗರಾಜ ಭಟ್ಟರು ಅವರನ್ನು ಬಹಳವಾಗಿ ಪ್ರಭಾವಿಸಿದ ತೇಜಸ್ವಿಯವರ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದು ಹಾಗೆ. ಹಾಗೆ ಅವರ ನೆನಪುಗಳ, ಅನುಭವಗಳ ಚಿತ್ರೀಕರಣ ಮುಗಿದ ನಂತರ ಅವರಿಗೆ ಧನ್ಯವಾದ ಹೇಳಿ ಆತುರಾತುರದಲ್ಲಿ ವ್ಯಾನ್ ಹತ್ತಿ ಹೊರಟೆವು. ವ್ಯಾನು ಹೆಬ್ಬಾಳದ ಜಿಕೆವಿಕೆಯ ಕಡೆ ಹೊರಟಿತ್ತು.
(ಹುಡುಕಾಟ ಮುಂದುವರೆಯುವುದು…)
nenapugale haage madhura bhavanegalanna nammondige sadaa ulisutte.nijakku tejaswi mareyadaddu barahagaliganna yaro bandisidantide. navu tejaswiya hudukutta………………………………………………….. avrigagi kayutta…………………………………………………………….
ತೇಜಸ್ವಿಯವರ ಬಗ್ಗೆ ಯೋಗರಾಜರ ಗ್ರಹಿಕೆಯ unpretentiosness ಅರ್ಥಪೂರ್ಣ ಒಳನೋಟಗಳಿಂದ ಕೂಡಿದೆ. ಭಟ್ಟರ ಮತ್ತು ನಿರೂಪಕ ಪರಮೇಶ್ವರರ ವಿನಯ ಇಷ್ಟವಾಗುತ್ತದೆ.
– ತೇಜಸ್ವಿಯವರ ಕುರಿತ ಯೊಗರಾಜ ಭಟ್ಟರ ಅನೇಕ ಬಹುತೇಕ ಎಲ್ಲ ಒದುಗರದು ಸಹ, ಆದರೆ ಒಮ್ಮೆಯು ಸಹ ಅವರನ್ನು ನೊಡಲಾಗದುದು ಅವರ ಮಾತು ಆಲಿಸಲಾಗದುದು ನಮ್ಮ ದುರಾದೃಷ್ಟ.
ನಿಜ, ಕನ್ನಡದಲ್ಲಿ ಬರೆಯಬೇಕಾದ್ದನ್ನೆಲ್ಲ ನಮ್ಮ ಹಿರಿಯರು ಕುಂದುಳಿಸದೆ ಬರೆದು ಬಿಟ್ಟಿದ್ದಾರೆ, ನನಗೂ ಅನೇಕ ಸರ್ತಿ ಹೀಗೆ ಅನ್ನಿಸುತ್ತಲೆ ಇರುತ್ತದೆ, ನಾವು ಬರೆವುದೇನಿದ್ದರು ಅದರ ನೆರಳು ಅನ್ನಿಸಿದೆ.
A very small correction: ‘ಜಿಮ್ ಕಾರ್ಬೆಟ್’ನ ಬೇಟೆಗೆ ಸಂಬಂಧಪಟ್ಟ ಪುಸ್ತಕಗಳನ್ನ ಅನುವಾದಿಸಿದ್ದು, ‘ಕಾಡಿನ ಕಥೆಗಳು’. It is not Jim Corbett; it is Kenneth Anderson.
ನಮ್ಮ ಬದುಕಿನಲ್ಲಿ ಬೇಕಾದ ಅಷ್ಟೂ ಸಂವೇದನೆಗಳನ್ನ ತುಂಬಿಹೋದ ತೇಜಸ್ವಿರವರ ಬಗ್ಗೆ ಬಟ್ಟರ ಅನಿಸಿಕೆಗಳೆ ಬಹುಪಾಲು ಓದುಗರ ಅನಿಸಿಕೆಗಳು…. ಅವರಲ್ಲಿ ನಾನೂ ಒಬ್ಬ
ನಾವು ಇತಿಹಾಸದ ತಳಹದಿಯ ಮೇಲೆ ಬದುಕುತ್ತಾ ಬವಿಷ್ಯದ ಕನಸು ಕಾಣುತ್ತಿದ್ದೇವೆ… ಇಂದು ಬದುಕುತ್ತಿರುವ ಮನೆಯ ತಳಪಾಯದ ಅರಿವಿಲ್ಲದೆ ಮನೆಯ ಮೇಲೆ ಮನೆ ಕಟ್ಟುವ ಪ್ರಯತ್ನ ಮಾಡಿದರೆ ಬದುಕೆಲ್ಲವು ಮುಗುಚಿ ಬೀಳುವ ಸಾದ್ಯತೆ ಇದೆ, ಆಗೆಂದ ಮಾತ್ರಕ್ಕೆ ಕನಸು ಕಾಣಲೇ ಬಾರದೆಂದಲ್ಲ, ಹಿಂದಿನದನ್ನು ಅರಿತು ಮುಂದಿನ ಬದುಕಿಗೆ ಬರವಸೆಯ ಪಿಲ್ಲರುಗಳನ್ನು ನಿರ್ಮಿಸಿಕೊಳ್ಳುವುದು ಯಾವಾಗಲೂ ಸೂಕ್ತ ಅನಿಸುತ್ತೆ…
ಪ್ರೀತಿಯ ಪರಮೇಶ್ವರ್ ,
ಯೋಗರಾಜ್ ಭಟ್ಟ್ ಇಲ್ಲಿ ತೇಜಸ್ವಿರವರ ಓದುಗ ಸಮೂಹವನ್ನ ಪ್ರತಿನಿಧಿಸಿದ್ದಾರೆ.
ಎಲ್ಲ ಓದುಗರ ತಲ್ಲಣ್ಣ ಮತ್ತು ಪುಸ್ತಕದ ಅಂಗಡಿಯಲ್ಲಿ ನಾವು ಅನುಭವಿಸುವ , ಹೇಳಿ ಕೊಳ್ಳಲು ಆಗದ ಸ್ತಿತಿಯನ್ನ ವಿವರಿಸಿದ್ದಾರೆ.
ನಿಜವಾಗಿಯೂ ನಾನು ಕೆಲವೊಮ್ಮೆ ರಸ್ತೆಯಲ್ಲಿ ಯಾರೋ ಕೈ ತೋರಿ ಬೈಕ್ ನ ಹೆಡ್ ಲೈಟ್ ಉರಿತಿದೆ ಎಂದು ಸನ್ನೆ ಮಾಡಿದಾಗ ತಟ್ಟನೆ ನೆನಪಾಗುವ ತೇಜಸ್ವಿಯವರ ಮಾತುಗಳು…
ನಮ್ಮ ಬದುಕಿನಲ್ಲಿ ಬೇಕಾದ ಅಷ್ಟೂ ಸಂವೇದನೆಗಳನ್ನ ತುಂಬಿಹೋದ ತೇಜಸ್ವಿರವರ ಬಗ್ಗೆ ಬಟ್ಟರ ಅನಿಸಿಕೆಗಳೆ ಬಹುಪಾಲು ಓದುಗರ ಅನಿಸಿಕೆಗಳು.
Tejaswi ajaramara..thumba kaduva prathibe
nija bhattara maatu ,
mandannana yaktitva yavagaloo
manasannu kaaduttiruttade