ಕೊಟ್ಟಿಗೆಹಾರದ ಶಾಲೆಯ ಕಟ್ಟೆಯ ಮೇಲೆ ಕುಳಿತು ಎದುರುಗಿನ ವಿಶಾಲ ಮೈದಾನದ ನೋಡುತ್ತಾ ನರೇಂದ್ರ ರೈ ದೇರ್ಲರವರು ನಿಧಾನವಾಗಿ ಮಾತು ಪ್ರಾರಂಭಿಸಿದರು, ’ನನ್ನ ಹೆಸ್ರು ನರೇಂದ್ರ ರೈ ದೇರ್ಲ ಅಂತ, ಡಾ||ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ, ಸುಳ್ಯ ತಾಲ್ಲೂಕು…ಇಲ್ಲಿ ಕನ್ನಡ ಉಪನ್ಯಾಸಕನಾಗಿ ಕೆಲಸ ಮಾಡ್ತಿದ್ದೇನೆ. 1991ರಲ್ಲಿ ನಾನು ಕನ್ನಡ ಸ್ನಾತಕೋತ್ತರ ಪದವಿ ಮುಗಿಸಿ ತರಂಗ ವಾರಪತ್ರಿಕೆಗೆ ಉಪಸಂಪಾದಕನಾಗಿ ಸೇರಿದೆ. ಆಗ ನಾನು ಸಾಹಿತ್ಯದ ವಿದ್ಯಾರ್ಥಿಯಾಗಿದ್ದಕ್ಕೊ ಏನೋ ಪತ್ರಿಕೆಯ ಸಂಪಾದಕರಾಗಿದ್ದ ಸಂತೋಷ್ ಕುಮಾರ್ ಗುಲ್ವಾಡಿಯವರು ನನಗೊಂದು ಹೊಸ ಜವಬ್ದಾರಿ ಕೊಟ್ರು.…ಕನ್ನಡದ ಪ್ರಮುಖ ಲೇಖಕರನ್ನ ಸಂದರ್ಶನ ಮಾಡಿ ಅದನ್ನ ತರಂಗದಲ್ಲಿ ಪ್ರಕಟಿಸಬೇಕು ಅಂತ. ಅದು ನನ್ನ ಕೈಗೆ ಬಂತು. ನಾನು ಒಟ್ಟು ಹತ್ತು ಜನ ಲೇಖಕರ ಹೆಸರುಗಳನ್ನ ಪಟ್ಟಿ ಮಾಡಿದೆ. ಅದರಲ್ಲಿ ಮೊದಲನೆ ಹೆಸರೇ ಪೂರ್ಣಚಂದ್ರ ತೇಜಸ್ವಿಯವರದ್ದು. ಅದರಲ್ಲಿ ಕಯ್ಯಾರ ಕಿಂಯ್ಯಿಣ್ಣ ರೈ, ಚದುರಂಗ, ಎನ್ಕೆ, ಎಚ್ಚೆಸ್ಕೆ, ಚನ್ನವೀರ ಕಣವಿ, ಪುತಿನ, ಕೆ.ಎಸ್ ನರಸಿಂಹ ಸ್ವಾಮಿ ಇವ್ರೆಲ್ಲರ ಹೆಸರು ಪಟ್ಟಿ ಮಾಡ್ಕೊಂಡು ಗುಲ್ವಾಡಿಯವರ ಕೈಗೆ ಕೊಟ್ಟೆ.
ಅವರು ಎಲ್ಲಾ ಲೇಖಕರಿಗೂ ಪತ್ರ ಹಾಕಿದ್ರು. ಎಲ್ರೂ ಒಪ್ಪಿಕೊಂಡ್ರು…ಬಹಳ ಸಂತೋಷದಿಂದ ಉತ್ತರ ಬರೆದ್ರು. ಆದ್ರೆ ತೇಜಸ್ವಿಯವ್ರಿಂದ ಮಾತ್ರ ಉತ್ತರ ಬರಲೇ ಇಲ್ಲ ನಮಗೆ. ಆಗ ಪುಸ್ತಕ ಪ್ರಕಾಶನದ ಕಪ್ಪು ಬಿಳುಪು ಮುಖಪುಟದ ಪುಸ್ತಕ ಕೈಗೆತ್ತಿಕೊಂಡು ಅದರಲ್ಲಿದ್ದ ಮೂಡಿಗೆರೆಯ ತೇಜಸ್ವಿಯವರ ಮನೆಯ ನಂಬರಿಗೆ ಫೋನ್ ಮಾಡ್ದೆ..ಅವರೇ ಎತ್ತಿಕೊಂಡು “ಯಾವಾಗ ಬೇಕಾದ್ರೂ ಬನ್ನಿ…” ಅಂತ ಹೇಳಿದ್ರು. ಹಾಗಾಗಿನಾನು ನನ್ನ ಫೋಟೋಗ್ರಾಫರ್ ನನ್ನ ಜೊತೆ ತೇಜಸ್ವಿಯವರ ತೋಟಕ್ಕೆ ಹೋಗಿ ಒಂದು ಇಡೀ ದಿವಸ ಅವರ ಮನೆಯಲ್ಲಿದ್ದು ಅವರ ಜೊತೆ ಓಡಾಡ್ತಾ, ಮಾತ್ನಾಡ್ತಾ, ಅವರ ಸಾಹಿತ್ಯ, ಆಸಕ್ತಿಗಳು, ತೋಟ, ಕೃಷಿ, ಹೀಗೆ ಎಲ್ಲವನ್ನೂ ನಾನು ಬಗೀತಾ ಹೋದೆ.
ಆರಂಭದಲ್ಲಿ “ಈ ಸಂದರ್ಶನ ಪಂದರ್ಶನ ಎಲ್ಲ ಬೇಡ ಮಾರಾಯ…ಸುಮ್ನೆ ಹಾಗೆ ಕೂತು ಮಾತಾಡುವ’ ಅಂದವರು ನನ್ನ ಆಸಕ್ತಿ, ಅಧ್ಯಯನ ಎಲ್ಲಾ ಗಮನಿಸಿ ಒಂದಿಡೀ ದಿನ ನನ್ನೊಟ್ಟಿಗೆ ಮಾತಾಡಿದ್ರು. ಜೊತೆಗೆ ಹೊರಗಡೆ ಅವರ ಶ್ರೀಮತಿಯವರನ್ನು ಮತ್ತು ಅವರ ಮುದ್ದಿನ ನಾಯಿ ಕಿವಿಯನ್ನು ಅಕ್ಕ ಪಕ್ಕ ಕೂರಿಸ್ಕೊಂಡು ಫೋಟೋ ತೆಗೆಸ್ಕೊಂಡ್ರು. ನನಗೊತ್ತಿರುವ ಪ್ರಕಾರ ಕನ್ನಡದ ಜನ ಮೊಟ್ಟಮೊದಲ ಬಾರಿಗೆ ಅವರ ಶ್ರೀಮತಿಯವರನ್ನ ಮತ್ತವರ ನಾಯಿಯನ್ನ ನೋಡಿದ್ದು ಅದೇ ಮೊದಲು ತರಂಗದ ಮೂಲಕ. ಆ ಸಂದರ್ಶನ ಸುಮಾರು ಇಪ್ಪತ್ತು ಪುಟಗಳಲ್ಲಿ ಸುದೀರ್ಘವಾಗಿ ತರಂಗದಲ್ಲಿ ಪ್ರಕಟವಾಯ್ತು. ಬಹಳಷ್ಟು ಜನ ಅದನ್ನ ಮೆಚ್ಚಿಕೊಂಡ್ರು, ಅದೇ ಕಾರಣಕ್ಕೆ ಮಂಡ್ಯ, ಹಾಸನ, ಮೈಸೂರುಗಳಲ್ಲಿ ತರಂಗದ ಸರ್ಕ್ಯುಲೇಷನ್ ಕೂಡ ಜಾಸ್ತಿ ಆಯ್ತು. ತುಂಬಾ ಜನ ಈ ಪ್ರಯತ್ನವನ್ನ ಪ್ರಶಂಸಿಸಿದ್ರು.
ನಂತರ ನಾನು ಕುಪ್ಪಳ್ಳಿಯ ಮನೆಯ ಬಗ್ಗೆ ಒಂದು ಲೇಖನ ಮಾಡಿದೆ, ತೇಜಸ್ವಿಯವರು ಕಂಪ್ಯುಟರ್ ನಲ್ಲಿ ಬಿಡಿಸುತ್ತಿದ್ದ ಚಿತ್ರಗಳ ಬಗ್ಗೆ ಒಂದು ಲೇಖನ ಮಾಡಿದೆ, ಮುಖ್ಯವಾಗಿ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ಕುವೆಂಪುರವರ ಹಸ್ತಾಕ್ಷರದಲ್ಲೇ ಹೊರತರಬೇಕು ಅಂತ ತೇಜಸ್ವಿಯವರು ಮಾಡುತ್ತಿದ್ದ ಪ್ರಯತ್ನದ ಬಗ್ಗೆ ’ಶತಮಾನದ ಅದ್ವಿತೀಯ ಕಾರ್ಯ’ ಅಂತ ಒಂದು ಲೇಖನ ಮಾಡಿದೆ…ಹೀಗಾಗಿ ಈ ರೀತಿಯ ಹಲವು ಕಾರಣಗಳಿಂದಾಗಿ ತೇಜಸ್ವಿಯವರು ನನಗೆ ಹತ್ತಿರವಾಗ್ತಾ ಹೋದ್ರು. ನಂತರ ನಾನು ತರಂಗ ಬಿಟ್ಟು ಉಪನ್ಯಾಸಕನಾಗಿ ವೃತ್ತಿ ಮುಂದುವರೆಸಬೇಕು ಅಂತ ಅಂದುಕೊಂಡಾಗ ಆರಿಸಿಕೊಂಡಿದ್ದು ಹಾಸನದ ಬಳಿಯ ಜಾವಗಲ್ ಅನ್ನು. ಕಾರಣ ಇಷ್ಟೇ ಹಾಸನ ಜಿಲ್ಲೆ ಜಾವಗಲ್ ತೇಜಸ್ವಿಯವರ ಮೂಡಿಗೆರೆಗೆ ಹತ್ತಿರ ಇದೆ ಅಂತ. ಹಾಗಾಗಿ ನಾನು ಉಪನ್ಯಾಸಕನಾಗಿ ಹಾಸನಕ್ಕೆ ಬಂದ ನಂತರ ತೇಜಸ್ವಿಯವರ ತೋಟಕ್ಕೆ ಆಗಾಗ ಹೋಗಿ ಬರುವ ಪರಿಪಾಠ ಬೆಳೆಸಿಕೊಂಡಿದ್ದೆ. ಇದು ನನ್ನ ಮತ್ತು ಅವರ ಒಡನಾಟ ಪ್ರಾರಂಭವಾದ ರೀತಿ…’.
ದೇರ್ಲರವರು ವಿವರವಾಗಿ ಅವರ ಮತ್ತು ತೇಜಸ್ವಿಯವರ ಪ್ರಾರಂಭದ ದಿನಗಳ ಒಡನಾಟದ ದಿನಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾ ಹೋದರು. ’ತೇಜಸ್ವಿಯವರನ್ನ ಮತ್ತೆ ಮತ್ತೆ ಭೇಟಿ ಮಾಡೋಕೆ ಹೋಗ್ತಿದ್ದ ಕಾರಣ…?’ ನಾನು ಅವರನ್ನು ಪ್ರಶ್ನಿಸಿದೆ. ದೇರ್ಲರವರು ಕಾರಣ ನೆನಪಿಸಿಕೊಳ್ಳುವ ಅವಶ್ಯಕತೆ ಇಲ್ಲದೇ ಥಟ್ಟನೆ ಉತ್ತರಿಸಿದರು, ’ಅವರ ಮೌನ ನನಗಿಷ್ಟ. ಅದಕ್ಕೆ’ ಎಂದು ಹೇಳಿ ಮಾತು ಮುಂದುವರೆಸಿದರು, ’ಅನಂತಮೂರ್ತಿಯವರ ಮಾತು ಒಂದು ಕಲೆ ಆದ್ರೆ, ಲಂಕೇಶರ ಬರಹ ಒಂದು ಕಲೆ ಆದ್ರೆ, ತೇಜಸ್ವಿಯವರ ಬರಹ ಮತ್ತು ಮೌನ ಒಂದು ಆರ್ಟ್…!!! ನಾನದನ್ನ ಪ್ರಧಾನವಾಗಿ ಗುರ್ತಿಸ್ತೇನೆ. ಎಷ್ಟೋ ಸಲ ನಾನು ಅವರ ಮನೆಗೆ ಹೋದಾಗ, ಅಲ್ಲೇ ಉಳ್ಕೊಂಡಾಗ ಅವರ ಮೌನವನ್ನೇ ಗಮನಿಸ್ತಿದ್ದೆ. ಅವರ ಆ ಮೌನ ನನ್ನನ್ನ ಕಾಡಿಸಲಿಕ್ಕೆ ಶುರುಮಾಡಿತ್ತು. ಬಹುಶಃ ಈ ಮೌನವನ್ನ ಕಾಡು ಅವರಿಗೆ ಒದಗಿಸಿತ್ತು ಅಂತ ಕಾಣುತ್ತೆ. ಯಾಕಂದ್ರೆ ಕಾಡು ತೇಜಸ್ವಿಯವ್ರನ್ನ ರೂಪಿಸುವುದರಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದೆ.
ಲಿಂಗ ಬಂದ ಅನ್ನುವ ಕಥೆಯನ್ನ ತೇಜಸ್ವಿಯವರು ಕಾಲೇಜು ದಿನಗಳಲ್ಲಿ ಬರೆದು ಅದಕ್ಕೆ ಪ್ರಜಾವಾಣಿಯ ದೀಪಾವಳಿ ವಿಶೇಷಾಂಕದ ಬಹುಮಾನ ಬಂದಾಗ ಕನ್ನಡದ ಬುದ್ದಿವಂತರು ಅನ್ನಿಸ್ಕೊಂಡ ಒಂದಷ್ಟು ಜನ ಹೇಳಿದ್ರಂತೆ “ಇವನೆಲ್ಲಿ ಬರೀತಾನೆ ಅದನ್ನ. ಅದು ಎಲ್ಲೊ ಇವನಪ್ಪ ಬರೆದು ಕೊಟ್ಟಿದ್ದಿರ್ಬೇಕು” ಅಂತ. ಇಂತಹ ಕೀಳುಮಟ್ಟದ ವಿಮರ್ಶೆಗಳನ್ನ, ಕಟು ಮಾತುಗಳಿಂದ ತಪ್ಪಿಸಿಕೊಳ್ಲಿಕ್ಕೆ, ಮತ್ತು ಆ ಟೀಕೆಗಳಿಗೆ ಉತ್ತರ ಕೊಡ್ಲಿಕ್ಕೆ ಅವ್ರಿಗೆ ಸೂಕ್ತವಾಗಿ ಕಂಡದ್ದು ಕಾಡು. ಯಾಕಂದ್ರೆ ಕಾಡಿಗೆ ಮುಚ್ಚಿಕೊಳ್ಳುವ ಗುಣ ಇದೆ. ನಮ್ಮಲ್ಲಿ ವನವಾಸ ಮತ್ತು ಅಜ್ಞಾತವಾಸ ಎಂಬ ಎರಡು ಪರಿಕಲ್ಪನೆಗಳು ಬರ್ತಾವೆ. ಒಂದು ಕಾಡಿಗೆ ಹೋಗುವುದು, ಮತ್ತೊಂದು ಕಾಡಿನಲ್ಲೇ ಯಾರಿಗೂ ಗುರುತು ಸಿಗದಂತೆ ಅವಿತುಕೊಳ್ಳುವುದು. ಇಂತಹ ಕಾಡಿಗೆ ನಾವು ಶ್ರೀರಾಮನನ್ನ ಕಳಿಸ್ತೇವೆ, ಪಾಂಡವರನ್ನ ಕಳಿಸ್ತೇವೆ ಮತ್ತು ಇತಿಹಾಸದ ಎಲ್ಲ ರಾಜರುಗಳು ಕಾಡಿನ ಜೊತೆ ಸಂಪರ್ಕ ಇದ್ದವರೆ. ಅದೇ ರೀತಿ ಈ ಅಜ್ಞಾತವಾಸದ ಕಲ್ಪನೆ ತೇಜಸ್ವಿಯವರಲ್ಲೂ ಇತ್ತು ಅಂತ ಅನ್ನಿಸ್ತದೆ. ತಾನು ಎಲ್ಲೂ ಕೂಡ ಹೊರಗಡೆ ಕಾಣಿಸಿಕೊಳ್ಳದೆ, ಕಾಡಿನಲ್ಲೇ ಇದ್ದು, ಕಾಡಿನಲ್ಲಿ ಕಾಡಿದ್ದನ್ನ ಕಾಣದವರಿಗೆ ಕೊಡಬೇಕು ಅನ್ನುವ ಉದ್ದೇಶದಿಂದ ಅವರು ಕಾಡನ್ನ ಆರಿಸಿಕೊಂಡರು ಮತ್ತು ಆ ಕಾಡು ಇವರಿಗೆ ಆ ಮೌನವನ್ನ ಕೊಡುಗೆ ಕೊಟ್ಟಿತ್ತು ಅಂತ ನನಗನ್ನಿಸ್ತದೆ.
ಶಿವರಾಮ ಕಾರಂತರು ಒಂದು ಕಡೆ ತುಂಬಾ ಚೆನ್ನಾಗ್ ಹೇಳ್ತಾರೆ, “ಕರಾವಳಿಯವರು ಯಾಕೆ ಸಾಹಸಿಗರು ಅಂದ್ರೆ, ಒಂದು ಕಡೆ ಡೆಡ್ ಲೈನ್ ಇಲ್ಲದ ಕಡಲಿದೆ, ಮತ್ತೊಂದು ಕಡೆ ಅಡಿಗಡಿಗೆ ಕಾಡುವ ಕಾಡಿದೆ. ನಾವು ಈ ಕಡೆ ಹಾರಿದ್ರೆ ಕಡಲಿಗೆ ಬೀಳ್ತೇವೆ ಮತ್ತು ಆ ಕಡೆ ಹೋದ್ರೆ ಕಾಡಿಗೆ ನುಗ್ತೇವೆ. ಹಾಗಾಗಿ ಈ ನುಗ್ಗುವ ಮತ್ತು ಹಾರುವ ಕ್ರಿಯೆಗಳು ಕರಾವಳಿಯವರನ್ನ ಸಾಹಸಿಗಳನ್ನಾಗಿ ಮಾಡ್ತದೆ” ಅಂತ’ ದೇರ್ಲ ಸರ್ ಹೀಗೆ ನಿರಂತರವಾಗಿ, ಸುಸ್ಪಷ್ಟವಾಗಿ ಮಾತನಾಡುತ್ತಾ ಹೋದರು. ನನಗೆ ಇದೊಂತರ ಹೊಸ ಅನುಭವದಂತೆ ಅನ್ನಿಸತೊಡಗಿತು. ಕಾರಣ ಅಲ್ಲಿಯವರೆಗೆ ನಾವು ಮಾತನಾಡಿಸಿದ್ದ ತೇಜಸ್ವಿಯವರ ಒಡನಾಡಿಗಳೆಲ್ಲರೂ ತೇಜಸ್ವಿಯವರೊಂದಿಗೆ ಕಳೆದ ದಿನಗಳು, ಅವರೊಂದಿಗಿದ್ದಾಗ ನಡೆದ ಘಟನೆಗಳ ಆಧಾರದ ಮೇಲೆ ತೇಜಸ್ವಿಯನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದರು. ಆದರೆ ದೇರ್ಲ ಸರ್ ಬಹುಶಃ ಉಪನ್ಯಾಸಕರಾಗಿರುವ ಕಾರಣಕ್ಕೊ ಏನೊ ತೇಜಸ್ವಿಯವರ ಹಲವು ಮುಖಗಳ ಬಗ್ಗೆ ಬೇರೆಯದೆ ಒಂದು ನೆಲೆಯಲ್ಲಿ ಮಾತನಾಡುತ್ತಾ ಅವರನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದರು.
“ಬರೀ ಪುಸ್ತಕ ತಿರುವಿ ಹಾಕಿ ಪಡ್ಕೊಳ್ಳೊದಲ್ಲ ಅದು”
’ತೇಜಸ್ವಿಯವರನ್ನ ವಿಚಾರಗಳನ್ನ ಗ್ರಹಿಸುವ ಬಗೆ ಹೇಗೆ ಅಂತ ಹೇಳ್ತೀರ ಸರ್?’ ಸ್ವಲ್ಪ ಹೊತ್ತಿನ ನಂತರ ನಾನು ಅವರಿಗೆ ಕೇಳಿದೆ. ಅವರು ಅದೇ ಸ್ಪಷ್ಟ ದನಿಯಲ್ಲಿ ಉತ್ತರಿಸಲು ಪ್ರಾರಂಭಿಸಿದರು, ’ನೀವು ಅವ್ರನ್ನ ಯಾವ ದಾರಿಯಲ್ಲಿ ಬೇಕಾದ್ರೂ ನೋಡ್ಲಿಕ್ಕೆ ಪ್ರಯತ್ನ ಮಾಡಿ, ಆದ್ರೆ ನಾನು ಅವ್ರನ್ನ ಮುಖ್ಯವಾಗಿ ನೋಡುವುದು ಮೂರು ದಾರಿಗಳಲ್ಲಿ; ಒಂದು ಗಾಳದ ದಾರಿ, ಎರಡು ಕ್ಯಾಮೆರಾದ ದಾರಿ ಮತ್ತು ಮೂರನೆಯದು ಕೋವಿಯ ದಾರಿ ಅಥವ ಬೇಟೆಯ ದಾರಿ ಅಂತ ಇಟ್ಕೊಳಿ. ಅನೇಕ ಜನ ’ತೇಜಸ್ವಿಯವರು ಮೀನು ಹಿಡೀತಾ ಇದ್ರು, ತೇಜಸ್ವಿಯವ್ರು ಹಕ್ಕಿಗಳ ಫೋಟೋ ತೆಗೀತಾ ಇದ್ರು, ಅವರು ಬೇಟೆಯಾಡ್ತಾ ಇದ್ರು…’ ಅಂತ ಮೇಲೆ ಮೇಲೆ ಮಾತ್ನಾಡ್ತಾರೆ. ಆದ್ರೆ ಅದರ ಹಿಂದೆ ಅಗೋಚರವಾದದ್ದೇನೊ ಇದೆ. ಒಂದು ಗಮನಿಸಿ ನೀರಿಗೆ ಗಾಳ ಹಾಕಿ ದಿನ ಇಡೀ ಕೂರುವ ತೇಜಸ್ವಿ ಅದರ ಜೊತೆ ಗಾಳಕ್ಕೆ ಬಿದ್ದ ಮೀನುಗಳನ್ನ, ಹರಿಯುವ ನದಿಯನ್ನ, ಸುತ್ತಲಿನ ಕಾಡನ್ನ ಅಧ್ಯಯನ ಮಾಡ್ತಾ ಇದ್ರು. ಒಂದು 20 ಅಡಿ ಗಾಳವನ್ನು ನೀರಿಗೆ ಇಳಿಬಿಡುವುದು,ಅದರ ಒಂದು ತುದಿಯಲ್ಲಿ ಚೂಪಾದ ಗಾಳ ಇದ್ರೆ, ಇನ್ನೊಂದು ತುದಿ ಇವರ ಕೈಯಲ್ಲಿರ್ತದೆ.
ಆ ಕಾಡಿನ ಮಧ್ಯದಲ್ಲಿ ನದಿಯ ದಂಡೆಯ ಮೇಲೆ ತಪಸ್ಸಿಗೆ ಕೂತ ಋಷಿಯ ಹಾಗೆ ಧ್ಯಾನಸ್ಥ ಮನಸ್ಥಿತಿಯಲ್ಲಿ ಕೂರುವ ತೇಜಸ್ವಿಯವರನ್ನ ಎಲ್ಲೋ ಇಪ್ಪತ್ತು ಮುವತ್ತು ಅಡಿ ದೂರದಲ್ಲಿ ನೀರಿನೊಳಗೆ ಮೀನು ಗಾಳವನ್ನು ಕಚ್ಚಿದಾಗ ಉಂಟಾಗುವ ಸಂವೇದನೆ ಧ್ಯಾನಾವಸ್ಥೆಯಲ್ಲಿದ್ದ ತೇಜಸ್ವಿಯವರನ್ನು ಎಚ್ಚರಿಸ್ತಿದ್ದ ಪರಿ ಇದೆಯಲ್ಲ ಆ ದಾರಿನಲ್ಲೇ ನಾವು ತೇಜಸ್ವಿಯವ್ರನ್ನ ಅಧ್ಯಯನ ಮಾಡ್ಬೇಕು. ಇನ್ನೊಂದು ಅವರು ಕೇವಲ ಪಕ್ಷಿಗಳಿಗೆ ಕ್ಯಾಮೆರ ಗುರಿ ಇಡ್ತಾ ಇರ್ಲಿಲ ಅಥವ ಕೇವಲ ಪ್ರಾಣಿಗಳಿಗೆ ಕೋವಿ ಗುರಿ ಇಡ್ತಾ ಇರ್ಲಿಲ್ಲ… ಅದರ ಜೊತೆ ಆ ಪ್ರಾಣಿ ಪಕ್ಷಿಗಳನ್ನು ಅವರು ಅಧ್ಯಯನ ಮಾಡ್ತಾ ಇದ್ರು. ಒಂದು ಹೇಳ್ಲೇಬೇಕು, ಅವರು ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರ ಓದಿದವರಲ್ಲ, ಅಥವ ಕೀಟಶಾಸ್ತ್ರ ಓದಿದವರಲ್ಲ. ಆದರೆ ಕೋವಿಯ ಗುರಿಬಿಂದುವಿನ ಮೇಲೆ ಬಂದು ಕುಳಿತ ಕಾಡು ಕೀಟದ ಬಗ್ಗೆ ಅವರು ಮೂರ್ನಾಲ್ಕು ಪುಟ ಬರೀಬಲ್ಲರು. ಅದು ಹೇಗೆ ಸಾಧ್ಯ ಆಯ್ತು? ಎಲ್ಲಿಂದ ಬಂತು ಆ ಜ್ಞಾನ?…ಅಂತ ಕೇಳಿದ್ರೆ ಉತ್ತರ,‘ಅದು ನೆಲಮೂಲದಿಂದ, ಮಣ್ಣಿನ ಮೂಲದಿಂದ ದಕ್ಕಿದ ಜ್ಞಾನ’ ಅಂತ ಹೇಳ್ಬೇಕಾಗುತ್ತೆ. ಬರೀ ಪುಸ್ತಕ ತಿರುವಿ ಹಾಕಿ ಪಡ್ಕೊಳ್ಳೊ ಜ್ಞಾನ ಅಲ್ಲ ಅದು.
’ನೋಡಿ ನೀವು ಇನ್ನೊಂದು ಗಮನಿಸಿ, ಕುವೆಂಪು ಅವ್ರಿಗೂ ಸಹ ಕಾಡಿನ ಜೊತೆ, ಪ್ರಕೃತಿಯ ಜೊತೆ ನಿಕಟವಾದ ಸಂಬಂಧ. ಕುವೆಂಪು ಅವ್ರನ್ನ ದೊಡ್ಡ ಬೇಟೆಗಾರರು ಅಂತ ಕರೀತಾರೆ. ಅವರ ಆತ್ಮಚರಿತ್ರೆ ಓದಿದ್ರೆ ನಮಗೆ ಅದೆಲ್ಲಾ ಗೊತ್ತಾಗ್ತದೆ. ಕುವೆಂಪು ಅವ್ರು ಮೈಸೂರಿನಿಂದ ಕುಪ್ಪಳ್ಳಿಗೆ ಬಂದಾಗಲೆಲ್ಲಾ ತಮ್ಮ ಬಟ್ಟೆಯನ್ನು ಗೋಡೆಯ ಮೊಳೆಗೆ ನೇತು ಹಾಕಿ ಕೋವಿಯನ್ನು ಹೆಗಲಿಗೇರಿಸಿ ಮದ್ದುಗುಂಡು ತುಂಬಿದ ಚೀಲವನ್ನು ಹೊತ್ತುಕೊಂಡು ಕಾಡಿಗೆ ನುಗ್ತಾ ಇದ್ರು ಬೇಟೆ ಆಡ್ಲಿಕ್ಕೆ. ಇಲ್ಲಿ ಮುಖ್ಯವಾಗಿ ಒಂದು ಗಮನಿಸ್ಬೇಕಾದದ್ದು ಏನು ಅಂದ್ರೆ, ಯಾವ ಚೀಲದಲ್ಲಿ ಹಿಂಸೆಗೆ ಸಂಬಂಧಪಟ್ಟ, ಕ್ರೌರ್ಯಕ್ಕೆ ಸಂಬಂಧಪಟ್ಟ ಮದ್ದುಗುಂಡಿನ ಚೀಲ ಇರ್ತಾ ಇತ್ತೊ ಅದೇ ಚೀಲದಲ್ಲಿ ಅಹಿಂಸೆಗೆ ಸಂಬಂಧಪಟ್ತ ರಾಮಕೃಷ್ಣ ಪರಮಹಂಸರು ಇರ್ತಾ ಇದ್ರು. ಕುವೆಂಪುರವರು ಕಾಡಿನ ಮಧ್ಯದ ಯಾವುದೋ ಒಂದು ಮರದ ಬೊಡ್ಡೆಗೆ ಒರಗಿ ಕೂತು ಆ ಏಕಾಂತದಲ್ಲಿ ರಾಮಕೃಷ್ಣ ಪರಮಹಂಸರನ್ನ ಓದ್ತಾ ಇದ್ರು, ಶ್ರೀಮಾತಾ ಓದ್ತಾ ಇದ್ರು, ಸ್ವಾಮಿ ವಿವೇಕನಂದರನ್ನ ಓದ್ತಾ ಇದ್ರು. ಜೊತೆಗೆ ಅವರು ಅವರ ಅನೇಕ ಕವಿತೆಗಳನ್ನ ಬರೆದಿದ್ದೆ ಕಾಡಿನಲ್ಲಿ. ನೋಡಿ ಅವರು ಒರಗಿ ಕುಳಿತ ಮರದ ಬೊಡ್ಡೆಯಿಂದ ಮೇಲೇರಿದ ಬಳ್ಳಿ, ಅದರಲ್ಲಿ ಬಿಟ್ಟ ಹೂವು, ಮೇಲೆ ಕಾಣದಂತೆ ಕುಳಿತು ಹಾಡುವ ಹಕ್ಕಿ ಇವೆಲ್ಲಾ ಅಪ್ಪ ಕುವೆಂಪುರವರನ್ನ ಆಧ್ಯಾತ್ಮದ ರೀತಿಯ ಒಂದು ಅಲೌಕಿಕ ಆನಂದವನ್ನು ಕೊಟ್ಟರೇ ಅದೇ ಕಾಡು, ಅದೇ ಮರ ಅದೇ ಬಳ್ಳಿ ಅದೇ ಕೋಗಿಲೆಯ ದನಿ ಮಗ ತೇಜಸ್ವಿಗೆ ಹೊಸ ಕುತೂಹಲಕ್ಕೆ, ವಿಸ್ಮಯಕ್ಕೆ, ಅನ್ವೇಷಣೆಗೆ ದಾರಿ ಮಾಡಿ ಕೊಡ್ತಿತ್ತು.
ಅವರು ಎಲ್ಲೂ ಕೂಡ ಪ್ರಕೃತಿಯನ್ನ ಆಧ್ಯಾತ್ಮದ ನೆಲೆಯಲ್ಲಿ ನೋಡಲೇ ಇಲ್ಲ. ಬದಲಿಗೆ ನೆಲದಿಂದ ಬಗೆದು ಬಗೆದು ಪುಸ್ತಕದ ರೂಪದಲ್ಲಿ ನಮಗೆಲ್ಲಾ ಕೊಟ್ರು. ನನ್ನ ಪ್ರಕಾರ ಕನ್ನಡದ ಘನತೆಯನ್ನ ಹೆಚ್ಚಿಸಿದ ಬರಹಗಳವು’ ದೇರ್ಲರವರ ಸುದೀರ್ಘ ಮಾತಿಗೆ ಅಲ್ಪವಿರಾಮ ಬಿತ್ತು. ಈ ಅಲ್ಪವಿರಾಮದ ಸಮಯದಲ್ಲಿ ಆ ಶಾಲೆಯ ಮೈದಾನದ ಮೂಲೆಯ ಕಾಂಪೌಂಡ್ ಗೋಡೆಯ ಮೇಲೆ ಕಾಲು ಅಲ್ಲಾಡಿಸುತ್ತಾ ಕೂತು ಮೊಬೈಲಿನಲ್ಲಿ ಸಾಂಗ್ ಕೇಳುತ್ತಿದ್ದ ನಿತಿನ್ ನನ್ನು ಕರೆದು ತಿನ್ನಲು ಏನಾದರೂ ತಿಂಡಿ ತರುವಂತೆ ಹೇಳಿದೆ. ಅವನು ’ಓಕೆ’ ಎಂದು ಹೇಳಿ ಅಂಗಡಿಯ ಕಡೆ ಓಡಿದ. ಈ ಅಲ್ಪವಿರಾಮದಲ್ಲಿ ದೇರ್ಲ ಸರ್ ತೇಜಸ್ವಿಯವರು ಅವರಿಗೆ ಬರೆದಿದ್ದ ಹಲವು ಪತ್ರಗಳನ್ನು ನಮಗೆ ತೋರಿಸಿದರು. ಕೆಲವನ್ನು ಓದಿಕೊಂಡೆ ಮತ್ತೆ ಕೆಲವನ್ನು ಹಾಗೆ ತಿರುಗಿಸಿ ನೋಡಿ ಅವರಿಗೆ ವಾಪಸ್ ಕೊಟ್ಟೆ. ಬಾಪು ದಿನೇಶ್ ದೇರ್ಲರವರ ಹಳೆಯ ಪರಿಚಿತರಾದ್ದರಿಂದ ಅವರಿಬ್ಬರು ಒಂದಷ್ಟು ಹಳೆಯ ಘಟನೆಗಳನ್ನು ನೆನಪಿಸಿಕೊಂಡು ನಗುತ್ತಿದ್ದರು. ಹೇಮಂತ ಮತ್ತು ದರ್ಶನ್ ಅದ್ಯಾಕೊ ಸ್ಕೂಲಿನ ಗೋಡೆ ಕಡೆ ಹೋಗಿ ವಾಪಸ್ ಬರ್ತಿದ್ರು. ಎಲ್ಲರೂ ನಿತಿನ್ ತಂದ ಬಾಳೆಹಣ್ಣು, ಬಿಸ್ಕೆಟ್ ತಿಂದು ನೀರು ಕುಡಿದು ಮತ್ತೆ ದೇರ್ಲರವರ ಮಾತುಗಳನ್ನು ಚಿತ್ರೀಕರಿಸಿಕೊಳ್ಳಲು ಪ್ರಾರಂಭಿಸಿದೆವು.
“ಬರೋವಾಗ ಬರ್ಮುಡ ಚಡ್ಡಿ ಹಾಕ್ಕೊಂಡೇ ಬಂದಿದ್ರು”
ದೇರ್ಲ ಸರ್ ಮುಂದುವರೆಸಿದರು, ‘ತೇಜಸ್ವಿಯವರ ಮೌನದ ಹಾಗೆ ಅವರ ಮನಸ್ಸು ನನಗಿಷ್ಟ. ಯಾಕಂದ್ರೆ ಅವರ ನಡೆ ನುಡಿಯಲ್ಲಿ ಎಲ್ಲೂ ನಕಲಿತನ ಇಲ್ಲ, ಎಲ್ಲೂ ಮುಖವಾಡ ಇಲ್ಲ. ಇವತ್ತಿನ ವರ್ತಮಾನದ ಕನ್ನಡ ಸಾಹಿತ್ಯ ಎದುರಿಗಿಟ್ಟುಕೊಂಡು ನೋಡಿದ್ರೆ ಬಹುತೇಕ ಬರಹಗಾರರು, ಸಾಹಿತಿಗಳು ಮುಖವಾಡಗಳನ್ನಿಟ್ಟುಕೊಂಡು ವರ್ತಿಸ್ತಾರೆ ಮತ್ತು ಅವರ ಬರವಣಿಗೆಗಳಲ್ಲೂ ಅದು ಎದ್ದು ಕಾಣುತ್ತೆ. ಜೊತೆಗೆ ಬರೀ ಮಾತು ಮಾತು ಮಾತು….ಬರೀ ಒಣಗಿಹೋದ ಮಾತುಗಳನ್ನ ಸೃಷ್ಟಿಸ್ತಾ ಇದಾರೆ. ಈ ಮಾತುಗಳನ್ನ ಕಡಿಮೆ ಮಾಡಿ ಮೌನವನ್ನ ಸೃಷ್ಟಿ ಮಾಡುವ ಹಿನ್ನೆಲೆಯಲ್ಲಿ ನಮ ಬುದ್ದಿಜೀವಿಗಳು ಸ್ವಲ್ಪ ಯೋಚನೆ ಮಾಡ್ಬೇಕು. ಅದಕ್ಕೆ ತೇಜಸ್ವಿಯವರ ಮೌನ ಮತ್ತು ಅವರ ಮನಸ್ಸು ನನಗೆ ಬಹಳ ಇಷ್ಟ.
ಒಂದು ಘಟನೆ ಹೇಳ್ತೀನಿ, ಸುಮಾರು 25 ವರ್ಷಗಳ ಹಿಂದೆ ಕುಕ್ಕುಂಜಡ್ಕ ಅನ್ನುವ ಊರಿಗೆ ಒಂದು ಸಾವಯವ ಕೃಷಿ ಕುರಿತ ವಿಚಾರಗೋಷ್ಟಿಗೆ ತೇಜಸ್ವಿ ಬಂದಿದ್ರು. ಅವರು ವೇದಿಕೆಯ ಮೇಲೆ ಕೂತಿದಾರೆ, ಈ ಕಡೆ ಹಿರಿಯರೊಬ್ಬರು ಗಂಭೀರವಾಗಿ ವಿಚಾರ ಮಂಡಿಸ್ತಾ ಇದಾರೆ ಆಗ ತೇಜಸ್ವಿಯವರ ಎರಡೂ ಕಾಲುಗಳು ಎದುರಿನ ಟೀಪಾಯ್ ಮೇಲೆ ಬಂತು!!! ಇದೊಂದು ಸಭೆ, ಇದಕ್ಕೆ ಶಿಷ್ಟಾಚಾರ ಇದೆ, ಇಲ್ಲಿ ಜನ ಕೂತಿದ್ದಾರೆ, ಯಾರೋ ಗಂಭೀರವಾಗಿ ಮಾತಾಡ್ತಿದಾರೆ ಅನ್ನುವ ಯೋಚನೆಯೆಲ್ಲಾ ಬಿಟ್ಟು ತಮ್ಮ ಎರಡೂ ಕಾಲುಗಳನ್ನ ಎದುರಿಗಿನ ಟೀಪಾಯ್ ಮೇಲಿಟ್ಟು ಎದುರುಗಡೆ ದೂರದಲ್ಲಿ ಕಾಣ್ತಾ ಇದ್ದ ಬಂಟಮಲೆ ಅನ್ನುವ ಬೃಹತ್ ಅರಣ್ಯವನ್ನ ನೋಡ್ಲಿಕ್ಕೆ ಶುರು ಮಾಡಿದ್ರು. ಇದು ತೇಜಸ್ವಿ!!! ಎಲ್ಲಿಯೂ ನಕಲಿತನ ಇಲ್ಲ. ಒಳಗೆ ಅನ್ನಿಸ್ತಿರೋದೊಂದು, ಹೊರಗೆ ತೋರಿಸಿಕೊಳ್ದೊಂದು ಅಮೇಲೆ ಮಾತಾಡೋದೊಂದು ಇಂತ ನಾಟಕಗಳೆಲ್ಲಾ ಗೊತ್ತೆ ಇರಲಿಲ್ಲ ಅವರಿಗೆ.
ಮತ್ತೊಮ್ಮೆ ಪುತ್ತೂರಿಗೆ ನನ್ನ ಎರಡು ಪುಸ್ತಕಗಳ ಬಿಡುಗಡೆಗೆ ಬಂದಿದ್ರು ಅವರು, ಬರೋವಾಗ ಬರ್ಮುಡ ಚಡ್ಡಿ ಹಾಕ್ಕೊಂಡೇ ಬಂದಿದ್ರು!!! ಇದು ನಿಜವಾದ ತೇಜಸ್ವಿ. ಮತ್ತೊಮ್ಮೆ ಯಾರೊ ಸ್ಟೂಡೆಂಟ್ ಒಬ್ಬ ಬಂದು ’ತೇಜಸ್ವಿಯವ್ರನ್ನ ನೋಡ್ಬೇಕು’ ಅಂದಾಗ ’ನಾನೇ ತೇಜಸ್ವಿ, ನೋಡಿ ಚೆನ್ನಾಗೆ…!!!’ ಅಂತ ಹೇಳಿ ಎರಡು ಕೈ ಮೇಲೆತ್ತಿ ಮರಕ್ಕೆ ಒರಗಿ ನಿಂತರು. ಇದು ತೇಜಸ್ವಿ ಅಂದ್ರೆ. ಎಲ್ಲಿಯೂ ನಕಲಿತನ ಇಲ್ಲ. ಅನ್ನಿಸಿದ್ದು ನೇರವಾಗಿ ಹೇಳಿ ಆಗಿರ್ತಿತ್ತು.
ಇನ್ನೊಂದ್ ಹೇಳ್ಬೇಕು, ಮೂಡುಬಿದಿರೆಯಲ್ಲಿ ನಡೆಯುವ ಆಳ್ವಾಸ್ ನುಡಿಸಿರಿ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ರೆ ಸಾಕು ಅಂತ ಕಾಯುವ ಬುದ್ದಿಜೀವಿಗಳಿರುವ ಸಂದರ್ಭದಲ್ಲಿ ‘ಕಾರ್ಯಕ್ರಮದ ಉದ್ಘಾಟನೆ ಮಾಡ್ಬೇಕು ಸರ್’ ಅಂತ ನಾವು ಅವರಿಗೆ ಆಹ್ವಾನ ಕೊಟ್ಟಾಗ್ಲೂ ಅವ್ರು ’ನಾನು ಬರೋದಿಲ್ಲ’ ಅಂತ ನೇರವಾಗಿ ಹೇಳಿ ಕಳಿಸಿದ್ರು. ಹಾಗಾಗಿ ಅವರ ಮುಖವಾಡಗಳಿಲ್ಲದ, ನಕಲಿತನ ಇಲ್ಲದ ಅವರ ಮನಸ್ಸು ನನಗಿಷ್ಟ ಅಂತ ಹೇಳಿದ್ದು’ ಎಂದು ತೇಜಸ್ವಿಯವರ ನೇರ ನಡೆ ನುಡಿಯ ಬಗ್ಗೆ ಮಾತನಾಡುತ್ತಾ ಹೋದರು. ಹೀಗೆ ಕನ್ನಡ ಉಪನ್ಯಾಸಕರಾದ ನರೇಂದ್ರ ರೈ ದೇರ್ಲರವರು ತೇಜಸ್ವಿ ಕುರಿತ ಹಲವು ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ನಮ್ಮ ಸಾಕ್ಷ್ಯಚಿತ್ರಕ್ಕೆ ಹಲವಾರು ಮುಖ್ಯ ವಿಷಯಗಳು, ಮಾಹಿತಿಗಳು ದೇರ್ಲರವರಿಂದ ನಮಗೆ ಸಿಕ್ಕಿದ್ದವು.
“ಆಳಕ್ಕೆ ಬೇರು ಬಿಡುವ ಮನಸ್ಸುಗಳ ಅವಶ್ಯಕತೆ”
ಈ ಭಾಗದ ಚಿತ್ರೀಕರಣ ಮುಗಿಸುವ ಮೊದಲು ಅವರಿಗೆ ಕಡೆಯದೆಂಬಂತೆ ಪ್ರಶ್ನೆಯೊಂದನ್ನ ಕೇಳಿದೆ, ’ಒಬ್ಬ ಶಿಕ್ಷಕನಾಗಿ ಇವತ್ತಿನ ತಲೆಮಾರು ತೇಜಸ್ವಿಯವರ ಬದುಕಿನಿಂದ ತಮ್ಮ ಬದುಕಿಗೆ ಅಳವಡಿಸಿಕೊಳ್ಳಬೇಕು ಅಂತ ಹೇಳುವ ಅಂಶ ಯಾವುದು ಸರ್?. ಅವರು ಕ್ಷಣ ಕೂಡ ಯೋಚಿಸದೇ ನನ್ನ ಪ್ರಶ್ನೆಗೆ ಉತ್ತರಿಸಿದರು, ’ಮಣ್ಣಿನ ಕಡೆ ತಿರುಗಿ ನೋಡುವುದು!!! ವರ್ತಮಾನದ ಬಹುದೊಡ್ದ ಸಮಸ್ಯೆ ಏನು ಅಂದ್ರೆ ಎಲ್ಲಾ ಸುಖ ದುಡ್ಡಿನಲ್ಲಿದೆ, ಎಲ್ಲಾ ಸುಖ ನಗರದಲ್ಲಿದೆ ಅನ್ನುವ ಭ್ರಮೆಯಿಂದಾಗಿ ಒಂದು ದೊಡ್ಡ ವಲಸೆ ಆರಂಭವಾಗಿದೆ. ಹಳ್ಳಿಗಳು ಖಾಲಿ ಆಗ್ತಿದಾವೆ. ಮನೆಗಳು ವೃದ್ದಾಶ್ರಮ ಆಗ್ತಿದ್ದಾವೆ. ಪದವಿ ಪತ್ರಗಳು ಕೃಷಿಯ ಪಾಲಿಗೆ, ನೆಲದ ಪಾಲಿಗೆ ಮರಣ ಪತ್ರಗಳಾಗ್ತಾ ಇವೆ. ಈ ಸಂದರ್ಭದಲ್ಲಿ ತೇಜಸ್ವಿಯವರನ್ನ ಇಟ್ಟು ನೋಡಿದ್ರೆ ಅವರು ಸಹ ಬಹಳ ಸಲೀಸಾಗಿ ನಗರವನ್ನ, ಐಶಾರಮವನ್ನ ಆರಿಸ್ಕೊಳ್ಳಬಹುದಿತ್ತು. ಅಪ್ಪನ ಹೆಸರು, ಇದ್ದಂತ ಪದವಿಯ ಬಲದಿಂದಾಗಿ ಅವರು ಯಾವುದಾದರೂ ಅಕಾಡೆಮಿಗೊ, ವಿಶ್ವವಿದ್ಯಾಲಯದ ಪೀಠಕ್ಕೊ ಅಂಟಿಕೊಳ್ಳಬಹುದಿತ್ತು. ಆದ್ರೆ ಅವರು ಹಾಗೆ ಮಾಡ್ಲೇ ಇಲ್ಲ. ಮೈಸೂರಿನಂತಹ ನಗರದಲ್ಲಿ ಬೆಳೆದಂತಹ ತೇಜಸ್ವಿ ಮತ್ತೆ ಗ್ರಾಮದ ಕಡೆ, ಕೃಷಿಯ ಕಡೆ, ಮಣ್ಣಿನ ಕಡೆ ವಾಪಸ್ ಬರ್ತಾರೆ. ಇದು ಇವತ್ತಿನ ತಲೆಮಾರಿಗೆ ಬಹುದೊಡ್ಡ ಆದರ್ಶ ಅಂತ ನಾನು ಭಾವಿಸ್ತೇನೆ.
ಒಂದೇ ಒಂದು ವಿಷಯ ಹೇಳಿ ಮುಗಿಸ್ತೇನೆ, ತೇಜಸ್ವಿಯವರ ಕಥೆ ಒಂದರಲ್ಲಿ ಒಂದು ವಿವರಣೆ ಬರ್ತದ್ದೆ, ’ಒಬ್ಬ ಮನೆಯ ಯಜಮಾನ ತನ್ನ ಹಳ್ಳಿಯ ಮನೆಯ ಮಣ್ಣಿನ ನೆಲದ ಮೇಲೆ ಕೂತು ಅಲ್ಯುಮಿನಿಯಂ ತಟ್ಟೆನಲ್ಲಿ ಊಟ ಮಾಡ್ತಾ ಇರ್ತಾನೆ. ಆಗ ಇದ್ದಕ್ಕಿದ್ದಂತೆ ಮನೆಯ ಗೋಡೆಗಳು ಅಲುಗಾಡ್ಲಿಕ್ಕೆ ಪ್ರಾರಂಭ ಆಗ್ತದೆ, ತಟ್ಟೆ ಅಲುಗಾಡ್ಲಿಕ್ಕೆ ಪ್ರಾರಂಭ ಆಗ್ತದೆ. ಮನೆಯ ಯಜಮಾನ ಭೂಕಂಪವೇ ಆಗಿ ಹೋಯ್ತು ಅಂತ ಹೇಳಿ ತಟ್ಟೆ, ಅನ್ನ ಎಲ್ಲಾ ಬಿಟ್ಟು ಮನೆಯ ಹೊರಗೆ ಓಡಿ ಬರ್ತಾನೆ. ಹೊರಗೆ ಬಂದು ನೋಡೋವಾಗ ಭೂಮಿ ಅಲುಗಾಡಿದ್ದಕ್ಕೆ ಅವನಿಗ್ಯಾವ ಸಾಕ್ಷಿಯೂ ಸಿಗೋದಿಲ್ಲ. ಆದರೆ ದೂರದಲ್ಲಿ ನೋಡಿದಾಗ ಒಂದು ಭಾರಿ ಗಾತ್ರದ ಮರ ಬಿದ್ದಿರ್ತದೆ. ಆಗ ಅವನು ಯೋಚ್ನೆ ಮಾಡ್ತಾನೆ ’ಬೇರು ಸಮೇತ ಬಿದ್ದ ಮರದ ಬೇರುಗಳು ಭೂಮಿಯ ಒಳಗೆ ಬೆಳೆದು ಇವನ ಮನೆಯ ಒಳಗೂ ಸಹ ಬಂದಿದ್ವು. ಈಗ ಮರ ಬೇರು ಸಮೇತ ಮರ ಬಿದ್ದಾಗ ಭೂಮಿಯೊಳಗಿಂದ ಹೊರಟ ಬೇರುಗಳು ಇವನು ಊಟ ಮಾಡುತ್ತಿದ್ದ ಅಲ್ಯುಮಿನಿಯಂ ತಟ್ಟೆಗಳು ಅಲುಗಾಡುವ ಹಾಗೆ ಮಾಡಿವೆ, ಗೋಡೆ ಬಿರುಕು ಬಿಡುವ ಹಾಗೆ ಮಾಡಿವೆ. ಈ ಉರುಳುವ ಮರಕ್ಕೆ ಅಕ್ಷರ ಜೋಡಿಸುವ ಸಂತತನ ಇದೆಯಲ್ಲ ಅದು ನೆಲಕ್ಕೆ ಬೇರು ಬಿಟ್ಟಿಕೊಂಡು, ಮಣ್ಣಿನ ಪರವಾಗಿ ಆಲೋಚಿಸುವ ಮನಸ್ಸಿನೊಳಗಡೆ ಮಾತ್ರ ಸೃಷ್ಟಿಯಾಗೋದಕ್ಕೆ ಸಾಧ್ಯ. ಹಾಗಾಗಿ ಮಣ್ಣಿನ ಸಂಬಂಧ ಕಡಿದುಕೊಂಡು ವಲಸೆ ಹಕ್ಕಿಗಳಾಗದೇ ಆಳಕ್ಕೆ ಬೇರುಬಿಟ್ಟು ಬೆಳೆಯುವ ಮನಸ್ಸುಗಳು ರೂಪುಗೊಳ್ಳಬೇಕಾದ್ದು ಇವತ್ತಿನ ವರ್ತಮಾನದ ಬಹುಮುಖ್ಯ ಅವಶ್ಯಕತೆ…’ ಎಂದು ಹೇಳುವ ಮೂಲಕ ದೇರ್ಲ ಸರ್ ತೇಜಸ್ವಿಯವರ ಕುರಿತ ತಮ್ಮ ನೆನಪುಗಳಿಗೆ ಪೂರ್ಣ ವಿರಾಮ ಹಾಕಿದರು.
ಸಾಕ್ಷ್ಯಚಿತ್ರಕ್ಕೆ ಸಾಕಷ್ಟು ವಿಷಯಗಳು ನಮಗೆ ಸಿಕ್ಕಂತಾಗಿತ್ತು. ಸಮಯ ನೋಡಿಕೊಂಡೆ, ಮಧ್ಯಾಹ್ನ 12ಗಂಟೆಯ ಸುಮಾರು. ದೇರ್ಲ ಸರ್, ಬಾಪು ದಿನೇಶ್ ರ ಜೊತೆಗೆ ನಾನು ನಮ್ಮ ಹುಡುಗರೆಲ್ಲರೂ ಕೊಟ್ಟಿಗೆಹಾರದ ಹೋಟೆಲೊಂದರಲ್ಲಿ ಕಾಫಿ ಕುಡಿದೆವು. ದೇರ್ಲರವರು ಬಸ್ಸಿನಲ್ಲಿ ವಾಪಸ್ ತಮ್ಮ ಊರಾದ ಪುತ್ತೂರಿಗೆ ಹೋಗುತ್ತೇನೆಂದು ಹೇಳಿ ಹೊರಡಲುವಾದರು. ದೇರ್ಲರವರು ಪುತ್ತೂರಿನಿಂದ ಕೊಟ್ಟಿಗೆಹಾರದವರೆಗೂ ಬಂದು ಸಾಕ್ಷ್ಯಚಿತ್ರಕ್ಕಾಗಿ ತೇಜಸ್ವಿಯವರ ನೆನಪುಗಳನ್ನು ಹಂಚಿಕೊಂಡಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಿ ಅವರನ್ನು ಬೀಳ್ಕೊಟ್ಟೆವು.
ನಂತರ ಬಾಪು ದಿನೇಶ್ ’ಈಗ ಯಾವ ಕಡೆ ಪ್ರಯಾಣ?’ ಎಂದರು. ’ಕುಪ್ಪಳ್ಳಿ ಕಡೆ ಸಾರ್. ಅದಾದ್ಮೇಲೆ ತೀರ್ಥಹಳ್ಳಿ, ಶಿವಮೊಗ್ಗ’ ಎಂದೆ. ’ಇಲ್ಲಿದ್ದೆಲ್ಲಾ ಚೆನ್ನಾಗ್ ಆಯ್ತ ಶೂಟಿಂಗು? ಎಂದು ಮತ್ತೆ ಪ್ರಶ್ನಿಸಿದರು. ’ಸೂಪರ್ರಾಗಾಯ್ತು ಸಾರ್…’ ಹೇಮಂತ ಅವರಿಗೆ ಹೇಳಿದ. ಕಾಫಿಯ ನಂತರ ಬಾಪು ದಿನೇಶ್ ರಿಗೆ ಧನ್ಯವಾದ ಹೇಳಿ ಕೊಟ್ಟಿಗೆಹಾರ ಬಿಡಲು ತಯಾರಾದೆವು. ಹೊರಡುವ ಮೊದಲು ಬಾಪು ಸರ್ ’ಇಷ್ಟಕ್ಕೆ ನಮ್ಮೂರ್ ಮರೆತುಬಿಡ್ಬೇಡಿ ಪರಮೇಶ್ವರ್, ಬರ್ತಾ ಇರಿ ಈ ಕಡೆ. ನಾವಂತು ಆಲ್ವೇಸ್ ಫ್ರೀ….ನೋಡಿ ಹಿಂಗೆ ನಮ್ ಕತೆ. ಫೋನ್ ಮಾಡ್ತಿರಿ…ಟಚ್ಚಲ್ಲಿರಿ. ಎಲ್ಲಾ ರೆಡಿ ಆದ್ಮೇಲೆ ತಿಳಿಸಿ… ಆಯ್ತಾ?’ ಎಂದು ತಮ್ಮ ಸಹಜ ಮುಗ್ಧತೆಯಿಂದ ನಮ್ಮನ್ನು ಬೀಳ್ಕೊಟ್ಟರು. ಮಳೆ ’ಬಿಟ್ಟರೂ ಬಿಡದೀ ಮಾಯೇ…’ ಎಂಬಂತೆ ಸತತವಾಗಿ ಸುರಿಯುತ್ತಲೇ ಇತ್ತು. ನಿತಿನ್ ವ್ಯಾನ್ ಸ್ಟೀರಿಂಗ್ ಹಿಡಿದು ’ಯಾವ್ ಕಡೆ ಈಗ ದಾರಿ?’ ಎಂದ. ನಾನು ಕೈಲಿದ್ದ ಗೂಗಲ್ ಮ್ಯಾಪ್ ಪ್ರಿಂಟ್ ಔಟ್ ನೋಡುತ್ತಾ ‘ಕುಪ್ಪಳ್ಳಿ ವಯಾ ಬಾಳೆಹೊನ್ನೂರ್, ಕೊಪ್ಪ, ಅರೌಂಡ್ ೮೦ ಕಿಲೊಮೀಟರ್ಸು. ಬಿಡು ಗಾಡಿ’ ಎಂದೆ. ಗಾಡಿ ಹೊರಟಿತ್ತು. ಕೊಟ್ಟಿಗೆಹಾರ, ಮೂಡಿಗೆರೆ ದೂರವಾಗುತ್ತಿತ್ತು.
(ಮುಂದುವರೆಯುವುದು…)
ಗಾಂಧಿನಗರ, ಜಯನಗರ ಹಾಗೂ ಕೋರಮಂಗಲದ ಸಪ್ನ ಪುಸ್ತಕ ಮಳಿಗೆಗಳಲ್ಲಿ, ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ರೇಸ್ ಕೋರ್ಸ್ ಬಳಿಯ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ “ಮತ್ತೆ ಮತ್ತೆ ತೇಜಸ್ವಿ” ಸಾಕ್ಷ್ಯಚಿತ್ರದ ಡಿವಿಡಿಗಳು ದೊರೆಯುತ್ತವೆ.
ಹೆಚ್ಚಿನ ಮಾಹಿತಿಗಾಗಿ ಟೋಟಲ್ ಕನ್ನಡದ ಲಕ್ಷ್ಮಿಕಾಂತ್ (ಡಿವಿಡಿ ವಿತರಣೆಯ ಹಕ್ಕುದಾರರು) ರವರನ್ನು ಸಂಪರ್ಕಿಸಿ. Mobile No: 9986222402
ಜಿ ಎಚ್ ನಾಯಕ ನೆನಪು: ನನ್ನೊಳಗಿನ ತೇಜಸ್ವಿ..
0 ಪ್ರತಿಕ್ರಿಯೆಗಳು
Trackbacks/Pingbacks