ತೇಜಸ್ವಿಯನ್ನು ಹುಡುಕುತ್ತಾ : ’ತೇಜಸ್ವಿ ಅಂದ್ರೆ ನಾವೆಲ್ಲ ಹೆದರಿ ಸಾಯ್ತಿದ್ವಿ!’


ತೇಜಸ್ವಿಯವರೊಂದಿಗೆ ಸುಮಾರು ಮುವತ್ತು ವರುಷಗಳ ಒಡನಾಟವಿದ್ದ ರಾಘವೇಂದ್ರರವರು ನೇರ ಹಾಗೂ ಸಹಜ ಮಾತಿನ ಸಹೃದಯಿ.
ಔಪಚಾರಿಕವೆಂಬಂತೆ ಪರಸ್ಪರ ಪರಿಚಯ ಮಾಡಿಕೊಂಡ ನಂತರ ‘ಮಲೆನಾಡಿನ ಮನೆ’ಗೆ ಉದಾಹರಣೆ ಕೊಡಬಹುದಾದ ಅವರ ಮನೆಯೊಳಕ್ಕೆ ನಮ್ಮನ್ನು ಕರೆದುಕೊಂಡು ಹೋದರು. ಅಲ್ಲಿ ಮಳೆಗಾಲದಲ್ಲಿ ಮನೆಯೊಳಗೆ ದೊಡ್ಡ ಬುಟ್ಟಿಯ ಕೆಳಗೆ ಕೆಂಡ ಇಟ್ಟು ಆ ಬುಟ್ಟಿಯ ಮೇಲೆ ಬಟ್ಟೆ ಹರವಿ ಬಟ್ಟೆ ಒಣಗಿಸುವ ವಿಧಾನ, ಧಾರಾಕಾರವಾಗಿ ಸುರಿಯುವ ಮಳೆಯನ್ನು ಅಳೆಯುವ ಮಾಪಕ ಮುಂತಾದ ಮಲೆನಾಡಿನ ಭಾಗದಲ್ಲಿ ಮಾತ್ರ ಕಾಣಬಹುದಾದ ಕೆಲ ವಸ್ತುಗಳನ್ನು ತೋರಿಸಿ ನಮ್ಮ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸಿದರು. ಇದೆಲ್ಲಾ ತೇಜಸ್ವಿ ನೆನಪುಗಳನ್ನು ಹಂಚಿಕೊಳ್ಳಲು ಶುರುಮಾಡುವ ಮೊದಲು ನಮ್ಮ ಅವರ ಮಧ್ಯೆ ಇದ್ದ ಬಿಗುಮಾನ, ನಾಚಿಕೆಗಳು ಕಡಿಮೆಯಾಗಿ ಅವರು ಮುಕ್ತವಾಗಿ ನಮ್ಮೊಂದಿಗೆ ಮಾತನಾಡಲು ಸಹಕರಿಸಿದವು.
ನಂತರದ ಸ್ವಲ್ಪ ಹೊತ್ತಿನಲ್ಲಿ ರಾಘವೇಂದ್ರ ಅಲಿಯಾಸ್ ರಘುರವರು ತೇಜಸ್ವಿ ಕುರಿತ ತಮ್ಮ ಸ್ಮೃತಿ ಭಂಡಾರದಿಂದ ಒಂದೊಂದೇ ನೆನಪುಗಳನ್ನು ಹೆಕ್ಕಲಾರಂಭಿಸಿದರು.
“ತೇಜಸ್ವಿ ಮೊದಲು ಪರಿಚಯವಾದ ಬಗೆ ಹೇಗೆ?”ಎಂಬ ನನ್ನ ಮೊದಲ ಪ್ರಶ್ನೆಗೆ ರಘುರವರು ಅಗಸದ ಕಡೆ ನೋಡುತ್ತಾ ನಿಧಾನವಾಗಿ ಪ್ರಾರಂಭಿಸಿದರು, “ಅವರು ನನಗೆ ಮೊದಲಿಂದಲೇ ಗೊತ್ತಿತ್ತು. ಅವರು ಸಂಬಂಧಿ ಆಗ್ಬೇಕು…ಸಂಬಂಧದಲ್ಲಿ ಅವರು ನನಗೆ ಚಿಕ್ಕಪ್ಪ…ರಾಜೇಶ್ವರಿ ಇದಾರಲ್ಲ ಅವರ ಅಕ್ಕನ ಮಗ ನಾನು. ಹಾಗಾಗಿ ತೇಜಸ್ವಿ ಬಗ್ಗೆ ನನಗೆ ತುಂಬಾ ಚಿಕ್ಕಕ್ಕಿದಾಗಲೇ ಗೊತ್ತಿತ್ತು. ಅದ್ರೆ ಆಗೆಲ್ಲ ತೇಜಸ್ವಿ ಅಂದ್ರೆ ನಾವೆಲ್ಲ ಹೆದರಿ ಸಾಯ್ತಿದ್ವಿ. ಹಂಗಾಗಿ ಅವರ್ ಜೊತೆಗೆ ಮೊದಲು ಅಂತ ಒಡನಾಟ ಏನ್ ಇರ್ಲಿಲ್ಲ. ಆಗ ನಾನು ಬೆಂಗಳೂರಿನಲ್ಲಿ ಓದ್ತಿದ್ದೆ.
ಕೆಲವು ವರ್ಷ ಬಿಟ್ಟು ನಾನು ಬಿಎಸ್ಸಿ ಮುಗಿಸಿ ಊರಲ್ಲೇ ಇರ್ಬೇಕು ಅಂತ ಡಿಸೈಡ್ ಮಾಡ್ಕೊಂಡು ವಾಪಸ್ ನಮ್ಮೂರು ಜನ್ನಾಪುರಕ್ಕೆ ಬಂದೆ. ಆಗ್ಲೂ ನನಗೂ ತೇಜಸ್ವಿಗೂ ಅಂತ ಒಡನಾಟ ಇರಲಿಲ್ಲ. ಅಷ್ಟೊತ್ತಿಗಾಗಲೇ ಅವ್ರು ಇಲ್ಲಿ ಜನ್ನಾಪುರದ ಹತ್ತಿರದ ತೋಟ ಮಾರಿ ಹ್ಯಾಂಡ್ ಪೋಸ್ಟ್ ಹತ್ತಿರದ ನಿರುತ್ತರಕ್ಕೆ ಹೋಗಿದ್ರು. ನಾನು ನನ್ ಪಾಡಿಗೆ ಕೈಗೆ ಸಿಕ್ಕಿದ ಕೆಲ್ಸ ಮಾಡ್ಕೊಂಡ್ ಇದ್ದೆ. ಜೊತೆಗೆ ಟೈಂ ಸಿಕ್ದಾಗ್ಲೆಲ್ಲಾ ಇಲ್ಲಿ ಹತ್ತಿರದಲ್ಲಿ ಒಂದು ಕೆರೆ ಇತ್ತು, ಆ ಕೆರೆ ಹತ್ರ ಹೋಗಿ ಸಣ್ಣ ಪಣ್ಣ ಮೀನ್ ಹಿಡ್ಕೊಂಡ್ ಕೂತಿರ್ತಿದ್ದೆ. ಆಗ ನನ್ನತ್ರ ಗಾಳ, ರಾಡು, ರೀಲು ಅಂತಾವೇನೂ ಇರ್ಲಿಲ್ಲ. ಸುಮ್ನೆ ಒಂದು ಕಡ್ಡಿಗೆ ಗಾಳ ಕಟ್ಕೊಂಡು ನನ್ ಪಾಡಿಗೆ ನಾನು ಒಬ್ನೇ ಮೀನು ಹಿಡಿಯೋಕೆ ಟೈ ಮಾಡ್ತಾ ಕೂತಿರ್ತಿದ್ದೆ. ತೇಜಸ್ವಿ ಕೂಡ ಆಗ್ತಾನೆ ಫಿಶಿಂಗ್ ಶುರು ಮಾಡ್ಕೊಂಡಿದ್ರು. ಇಲ್ಲಿ ನಮ್ ಮನೆ ಹಿಂದೆ ಹೇಮಾವತಿ ನದಿ ಹರಿಯುತ್ತೆ. ಅಲ್ಲಿಗೆ ಪ್ರತಿದಿನ ಮೀನು ಹಿಡಿಯೋಕೆ ಅಂತ ಬರ್ತಿದ್ರು ಆಗ. ಆಗ್ಲೂ ನನಗೂ ಅವ್ರಿಗೂ ಅಂತ ಮಾತುಕತೆ ಏನ್ ಇರ್ಲಿಲ್ಲ.
ಆದ್ರೆ ಒಂದಿನ ನಾನು ಹಿಂಗೆ ಕೆರೆ ಹತ್ರ ಮೀನ್ ಹಿಡೀತಾ ಕೂತಿರೋದು ನೋಡಿ ’ಬಾರಯ್ಯ ರಘು’ ಅಂತ ನನ್ನನ್ನು ಅವರ ಜೊತೆ ಹೇಮಾವತಿ ನದೀಗೆ ಮೀನು ಹಿಡಿಯಕ್ಕೆ ಅಂತ ಸ್ಕೂಟ್ರು ಹತ್ತಿಸ್ಕೊಂಡ್ ಕರ್ಕೊಂಡ್ ಹೋದ್ರು. ಅಲ್ಲಿಂದ ಅವರ ಜೊತೆಗೆಒಡನಾಟ ಶುರು ಆಯ್ತು…” ಎಂದು ತೇಜಸ್ವಿಯವರೊಂದಿಗೆ ಒಡನಾಟ ಪ್ರಾರಂಭವಾದ ಘಟನೆಯನ್ನು ಹಂಚಿಕೊಂಡರು. “ಅವ್ರು ಯಾರುನ್ನು ಅಷ್ಟು ಸುಲಭವಾಗಿ ಹತ್ತಿರ ಬಿಟ್ಕೋತೀರ್ಲಿಲ್ಲ. ಆದ್ರೆ ನಾನು ಆಗ್ತಾನೇ ಡಿಗ್ರಿ ಮುಗ್ಸಿ ವಾಪಸ್ ಹಳ್ಳೀಗೆ ಬಂದಿದ್ದಕ್ಕೊ ಅಥವ ಅವರ ಥರಾನೇ ಮೀನ್ ಹಿಡ್ಕೊಂಡ್ ಕೂತಿರ್ತಿದ್ದಕ್ಕೊ ಏನೊ ಅಂತು ನಾನು ಅವ್ರಿಗೆ ಹತ್ತಿರ ಆದೆ. ಅಮೇಲೆ ಬೆಂಗಳೂರಿಗೆ ಹೋಗಿದ್ದಾಗ ಅವ್ರೇ ನನಗೊಂದು ಒಳ್ಳೆ ರಾಡು ರೀಲು ಎಲ್ಲಾ ತಂದುಕೊಟ್ರು. ಅವತ್ತಿಂದ ನಾವು ಆಲ್ಮೋಸ್ಟ್ ಪ್ರತಿದಿನ ಮೀನು ಹಿಡಿಯೋದನ್ನೇ ಕೆಲಸ ಮಾಡ್ಕೋಡಿದ್ವಿ…” ಎಂದು ರಘು ನಕ್ಕರು.
“ಪ್ರತಿದಿನ ಮೀನು ಹಿಡಿಯೋದನ್ನೇ ಕೆಲಸ ಮಾಡ್ಕೊಂಡಿದ್ವಿ ಅಂದ್ರಲ್ಲ ಬೇರೆ ಕೆಲಸ ಏನೂ ಮಾಡ್ತಿರ್ಲಿಲ್ವ?” ಎಂದು ಹೇಮಂತ ಅವರನ್ನು ಪ್ರಶ್ನಿಸಿದ.

ಅವರು ನಗುತ್ತಲೇ ಹೇಮಂತನ ಪ್ರಶ್ನೆಗೆ ಉತ್ತರಿಸಿದರು “ಫಿಶಿಂಗ್ ಅಂದ್ರೆ ನಾವು ಯಾವ್ ಮಟ್ಟಿಗೆ ಇದ್ವಿ ಅಂದ್ರೆ ಮನೆ, ಮಠ, ಹೆಂಡ್ತಿ ಮಕ್ಳು ಯಾವುದರ ಬಗ್ಗೇನೂ ಯೋಚ್ನೆನೇ ಮಾಡ್ತಿರ್ಲಿಲ್ಲ. ಏನೇನು ಕೆಲ್ಸ ಮಾಡ್ದೆ ಬರೀ ಮೀನ್ ಹಿಡಿಯೋದ್ರಲ್ಲೆ ಮುಳುಗ್ ಹೋಗಿದ್ವಿ. ಮಂಗಳೂರು ಸಮುದ್ರ ಅಂತೆ, ಜೋಗದ ಗುಂಡಿ ಅಂತೆ ಹಿಂಗೆ ವಾರಕ್ಕೆ ಏಳ್ ದಿನಾನೂ ಸ್ಕೂಟ್ರು ತಗೊಂಡ್ ಸುತ್ತಿಸುತ್ತಿ ಬರೀ ಮೀನ್ ಹಿಡಿಯೋದನ್ನೆ ವೃತ್ತಿ ಮಾಡ್ಕೊಂಡಿದ್ವಿ. ತೇಜಸ್ವಿಗಂತು ಅವ್ರ ಮನೇಲಿ ಯಾರು ಏನು ಹೇಳ್ತಿರ್ಲಿಲ್ಲ. ಆದ್ರೆ ನಮ್ಮಪ್ಪ “ನಿನಗೇನ್ ಮಾಡಕ್ ಕೆಲ್ಸ ಇಲ್ವ? ಆ ತೇಜಸ್ವಿಗಂತು ಯಾರೂ ಕೇಳೋರಿಲ್ಲ. ಅವರ ಜೊತೆ ಸೇರಿ ನೀನು ಹಾಳಾಗ್ ಹೋಗ್ತಿದ್ದೀಯ….” ಅಂತ ನನಗೆ ಬಾಯಿಗ್ ಬಂದಂಗ್ ಬೈಯೋಕೆ ಶುರು ಮಾಡಿದ್ರು, ಹಿಂಗೇ ನಡೀತಾ ಇತ್ತು ನಮ್ ಕಸುಬು…ಈ ಸುತ್ತಮುತ್ತ ನಾವು ಮೀನು ಹಿಡೀದೆ ಇದ್ದ ಜಾಗಾನೇ ಇರ್ಲಿಲ್ಲ ಹಂಗೆ ಅದು ಒಂಥರ ಅಡಿಕ್ಷನ್ನು ಅನ್ನೊ ಹಾಗೆ ನಡೀತಿತ್ತು ನಮ್ ಕೆಲ್ಸ…”
(ಅವರು ಹೀಗೆ ಮಾತನಾಡುತ್ತಿದ್ದಾಗ ನನಗೆ ತಕ್ಷಣ ನೆನಪಾಗಿದ್ದು ಜಗತ್ ಪ್ರಸಿದ್ಧ ಅಮೆರಿಕನ್ ಬರಹಗಾರ, ಪತ್ರಕರ್ತ ಅರ್ನೆಸ್ಟ್ ಹೆಮ್ಮಿಂಗ್ವೆ. ತೇಜಸ್ವಿಯವರ ಮೇಲೆ ನೋಬೆಲ್ ವಿಜೇತ ಸಾಹಿತ್ ಅರ್ನೆಸ್ಟ್ ಹೆಮ್ಮಿಂಗ್ವೇಯ ಪ್ರಭಾವ ಇದ್ದ ಬಗ್ಗೆ ಕೇಳಿದ್ದೆ. ರಘುರವರು ಈ ಮಾತು ಹೇಳುವಾಗ ನಾನು ಕೇಳಿದ ಆ ಮಾತಿಗೆ ಪುರಾವೆ ಸಿಗುತ್ತಾ ಹೋಯಿತು. ಅಮೆರಿಕನ್ ಸಾಹಿತಿ, ಪತ್ರಕರ್ತ ಅರ್ನೆಸ್ಟ್ ಹೆಮ್ಮಿಂಗ್ವೆ ಸಹ ಶಿಕಾರಿ ಹಾಗೂ ಫಿಶಿಂಗಿನಲ್ಲಿ ಅಪಾರ ಆಸಕ್ತಿ ಹೊಂದಿದ್ದ ಬರಹಗಾರ. ಸೂಕ್ಷ್ಮವಾಗಿ ಅವಲೋಕಿಸಿದರೆ ಹೆಮ್ಮಿಂಗ್ವೆ ಬದುಕಿನ ಹಲವು ಛಾಯೆಗಳನ್ನು ತೇಜಸ್ವಿಯವರ ಬದುಕಿನಲ್ಲೂ ಕಾಣಬಹುದು. ಹೆಮ್ಮಿಂಗ್ವೇಯ ಲೋಕಪ್ರಸಿದ್ದ ಕಾದಂಬರಿ “ದ ಓಲ್ಡ್ ಮ್ಯಾನ್ ಅಂಡ್ ದ ಸೀ” ತೇಜಸ್ವಿಯವರ ಅಚ್ಚುಮೆಚ್ಚಿನ ಕೃತಿಯಾಗಿತ್ತು ಎಂಬ ವಿಷಯ ಅವರ ಹಲವು ಒಡನಾಡಿಗಳಿಂದ ಕೇಳಿದ್ದೇನೆ.)

ರಘುರವರು ಮಾತು ಮುಂದುವರೆಸಿದರು, “ನಾವ್ ಹಿಂಗೇ ಊರೂರ್ ಅಲ್ಕೊಂಡು, ಫಿಶಿಂಗ್ ಮಾಡ್ಕೊಂಡ್ ಮನೆಕಡೆ ಅಷ್ಟು ಗಮನ ಕೊಡ್ತಿರ್ಲಿಲ್ಲ. ಹೇಳ್ಕೊಳ್ಳೊಕೆ ಮಾತ್ರ ಕಾಫಿ ತೋಟ ಮಾಡ್ತಿದ್ರೂ ಅದ್ರಲ್ಲಿ ಅಂತ ಆದಾಯ ಏನೂ ಇರಲಿಲ್ಲ. ಆಗ ಕಾಫಿಗೆ ಮುಕ್ತ ಮಾರುಕಟ್ಟೆ ಆಗ್ಬೇಕು ಅಂತ ತೇಜಸ್ವಿಯವ್ರು ಹೋರಾಟ ಮಾಡ್ತಿದ್ರು. ಆ ಗಲಾಟೆಗಳ ಮಧ್ಯೆ ಕಾಫಿಗೆ ಸರಿಯಾದ ಬೆಲೆ ಸಿಗದೇ ಎಕನಾಮಿಕಲಿ ನಾವು ತುಂಬಾ ಕುಗ್ಗಿ ಹೋಗಿದ್ವಿ. ಹಾಗಾಗಿ ಬೇರೆ ಏನಾದ್ರೂ ಮಾಡ್ಬೇಕಾದಂತ ಅನಿವಾರ್ಯತೆ ಬಂತು. ಅದೇ ಸಮಯಕ್ಕೆ ಸರಿಯಾಗಿ ಇವರ ’ಕರ್ವಾಲೋ’ ಪಿಯುಸಿ ಸ್ಟೂಡೆಂಟ್ಸಿಗೆ ಟೆಕ್ಸ್ಟ್ ಆಯ್ತು. ಆದ್ರೆ ನಮ್ಮ ದುರಾದೃಷ್ಟವೊ ಏನೊ ಅದನ್ನ ಪಬ್ಲಿಷ್ ಮಾಡೋಕೆ ಯಾರೂ ಮುಂದೆ ಬರಲೇ ಇಲ್ಲ. ಫಸ್ಟ್ ಇಯರ್ ಯಾವ್ದೊ ಡೆಲ್ಲಿ based ಪಬ್ಲಿಕೇಷನ್ ನವ್ರು ‘ಕರ್ವಾಲೋ’ ಪಬ್ಲಿಷ್ ಮಾಡಿದ್ರು. ಆದ್ರೆ ಎರಡನೇ ವರ್ಷದಿಂದ ಪುಸ್ತಕ ಪ್ರಿಂಟ್ ಮಾಡೋಕೆ ಯಾರೂ ಮುಂದೆ ಬರಲೇ ಇಲ್ಲ. ಆಗ ನೋಡ್ಬೇಕಿತ್ತು ವಾಚಕರ ವಾಣಿನಲ್ಲಿ, ಪೇಪರ್ ಗಳಲ್ಲಿ “ಸ್ಟೂಡೆಂಟ್ಸ್ ಗೆ ಕರ್ವಾಲೋ ಟೆಕ್ಸ್ಟ್ ಸಿಕ್ತಿಲ್ಲ. ಹೀಗಾದ್ರೆ ಅವರ ಭವಿಷ್ಯದ ಗತಿ ಏನು?” ಅಂತೆಲ್ಲ ಸುದ್ದಿ ಬರೋಕೆ ಶುರುವಾಯ್ತು. ಆಗ ಡಿಸೈಡ್ ಮಾಡಿದ್ವಿ ನಾವೇ ಒಂದು ಪ್ರಕಾಶನ ಪ್ರಾರಂಭ ಮಾಡ್ಬೇಕು ಅಂತ. ಆಗ ತೇಜಸ್ವಿ, ಶ್ರೀರಾಮ್, ಮತ್ತೆ ನಾನು ಎಲ್ರೂ ತಲಾ ಹತ್ತು ಸಾವಿರ ರೂಪಾಯಿ ಇನ್ವೆಸ್ಟ್ ಮಾಡಿ ಶುರುಮಾಡಿದ್ದೆ ’ಪುಸ್ತಕ ಪ್ರಕಾಶನ’. ತೇಜಸ್ವಿಗಂತೂ ಪ್ರಿಂಟಿಂಗ್ ಪ್ರೆಸ್ ಹಾಕಿ ಮೊದಲೇ ಅನುಭವ ಇತ್ತು. (ಮೂಡಿಗೆರೆಗೆ ಬಂದು ನೆಲೆಸುವ ಮೊದಲು ಮೈಸೂರಿನಲ್ಲಿ ಗೆಳೆಯ ಕಡಿದಾಳು ಶಾಮಣ್ಣರೊಂದಿಗೆ ಸೇರಿ ತೇಜಸ್ವಿ ಪ್ರಿಂಟಿಂಗ್ ಪ್ರೆಸ್ ನಡೆಸಿದ್ದರು).
ಹಾಗಾಗಿ ಆ ಧೈರ್ಯದ ಮೇಲೆ ಸ್ವಂತ ಪಬ್ಲಿಕೇಷನ್ ನಡಿಸೋದಕ್ಕೆ ಪ್ರಾರಂಭ ಮಾಡಿದ್ವಿ.
ನಾವು ಮೊದಲು ಪಬ್ಲಿಷ್ ಮಾಡಿದ್ದೆ ’ಪರಿಸರದ ಕತೆ’. ಈ ಪುಸ್ತಕ ಮೊದಲು ಪ್ರಿಂಟ್ ಆಗಿದ್ದು ಮೇಲುಕೋಟೆ ಹತ್ರದ ಒಂದು ಪ್ರಿಂಟಿಂಗ್ ಪ್ರೆಸ್ ನಲ್ಲಿ. ಆದರೆ ಆ ಪ್ರೆಸ್ ನವರು ಸರಿಯಾದ ಟೈಮಿಗೆ ಪುಸ್ತಕ ಪ್ರಿಂಟ್ ಮಾಡಿಕಳಿಸ್ತಿರ್ಲಿಲ್ಲ. ತೇಜಸ್ವಿ ಯಾವ್ ಥರ ಅಂದ್ರೆ ಏನಾದ್ರು ಕೆಲಸ ಹಿಡಿದ್ರು ಅಂದ್ರೆ ಅಂದುಕೊಂಡ ಹಾಗೆ ಅಂದುಕೊಂಡ ಟೈಮಿಗೆ ಕರೆಕ್ಟಾಗಿ ಆಗ್ಬಿಡ್ಬೇಕಿತ್ತು. ಹಂಗಾಗಿ ತೇಜಸ್ವಿ ’ರಘು ಇದೆಲ್ಲಾ ಆಗಲ್ಲ ಕಣಯ್ಯ. ತಗೊಂಡ್ ಬಾ ಇಲ್ಲೇ ಪ್ರಿಂಟ್ ಮಾಡ್ಸಣ’ ಅಂತ ಹೇಳಿದ್ರು. ಇಲ್ಲಿ ಮೂಡಿಗೆರೆನಲ್ಲಿ ಒಂದು ಪ್ರಿಂಟಿಂಗ್ ಪ್ರೆಸ್ ಇತ್ತು, ’ರಾಘವೇಂದ್ರ ಪ್ರೆಸ್’ ಅಂತ…” ಎಂದು ರಘುರವರು ಹೇಳುತ್ತಿದ್ದಂತೆ ತಕ್ಷಣ ನೆನಪಾದವನಂತೆ, “ಯಾರು ನಮ್ ರಮೇಶ್ ಅವರ ಪ್ರಿಂಟಿಂಗ್ ಪ್ರೆಸ್ಸ…?” ಎಂದು ಅವರ ಮಾತಿನ ಮಧ್ಯೆ ಬಾಯಿ ಹಾಕಿದೆ. ಅವರು “ಹೌದು ಹೌದು ರಮೇಶುನ್ ಪ್ರೆಸ್ಸೆ” ಎಂದುತ್ತರಿಸಿ
ಮಾತು ಮುಂದುವರೆಸಿದರು, “ಆ ರಮೇಶ್ ಪ್ರೆಸ್ ನಲ್ಲಿ ಪುಸ್ತಕ ಪ್ರಿಂಟ್ ಮಾಡ್ಸೋಕ್ ಶುರು ಮಾಡುದ್ವಿ. ಅವರ ಹತ್ರ ಮೊದಲು ಪ್ರಿಂಟ್ ಮಾಡ್ಸಿದ್ದು ’ಕಿರಗೂರಿನ ಗಯ್ಯಾಳಿಗಳು’. ಅಮೇಲೆ ಒಂದು ರೌಂಡು ’ಕರ್ವಾಲೋ’ನೂ ಪ್ರಿಂಟ್ ಮಾಡ್ಸಿದ್ವಿ. ಅಷ್ಟೊತ್ತಿಗೆ ಅವರ ಹತ್ರಾನೂ ಕೆಲಸ ಆಗಿ ಬರೋದಿಲ್ಲ ಅಂತ ಗೊತ್ತಾಯ್ತು…” “ಯಾಕೆ?” ನಾನು ಮತ್ತೆ ಮಧ್ಯೆ ಬಾಯಿ ಹಾಕಿದೆ. “ಯಾಕಂದ್ರೆ ಅವರು ಜಾಬ್ ವರ್ಕ್ ಮಾಡೋರು. ನಮ್ ಪುಸ್ತಕ ಒಂದೇ ಅಲ್ಲ ಅವ್ರು ಪ್ರಿಂಟ್ ಮಾಡ್ತಿದ್ದಿದ್ದು. ಮದುವೆ ಕಾರ್ಡು, ತಿಥಿ ಕಾರ್ಡು ಅಂತ ಎಲ್ಲಾನೂ ಪ್ರಿಂಟ್ ಮಾಡ್ತಿದ್ರು. ಹಂಗಾಗಿ ಪುಸ್ತಕ ಪ್ರಿಂಟ್ ಮಾಡ್ತಿದ್ದಾಗ ಯಾವ್ದಾದ್ರೂ ಕಾರ್ಡ್ ಪ್ರಿಂಟ್ ಮಾಡೋ ಕೆಲ್ಸ ಬಂದ್ರೆ ’ಸಾರ್ ಸ್ವಲ್ಪ ಹೊತ್ತು ನಿಲ್ಲುಸ್ತೀವಿ” ಅಂತ ಹೇಳಿ ಕೆಲಸ ನಿಲ್ಸೇ ಬಿಡೋರು. ಅದು ತೇಜಸ್ವಿಗೆ ಆಗಿ ಬರ್ತಿರ್ಲಿಲ್ಲ. ’ಏಯ್ ರಘು ಇದೂ ಆಗ್ಬರಲ್ಲ ಕಣಯ್ಯ. ಬಾ ನಾವೇ ಒಂದು ಪ್ರಿಂಟಿಂಗ್ ಪ್ರೆಸ್ ಹಾಕಣ…’ ಅಂತ ಡಿಸೈಡ್ ಮಾಡಿದ್ರು. ಸರಿ ನಾವೇ ಮಿಷಿನ್ ಹಾಕೋದು ಅಂತ ಡಿಸೈಡ್ ಆಯ್ತಲ್ಲ ಆಗ ಎಲ್ಲಾ ಕಡೇ ಹುಡುಕಾಡಿ ಕಡೇಗೆ ಚಿಕ್ಕಮಗಳೂರಿನಿಂದ ಬರೀ ಎರಡೇ ಪೇಜ್ ಪ್ರಿಂಟ್ ಆಗೋ ಅಂತದ್ದು ತುಂಬಾ ಓಲ್ಡ್ ಮಾಡ್ಲುದೊಂದು ಮಿಷಿನ್ ತಂದ್ವಿ. ಅದು ಗುಜರೀಗೆ ಹಾಕೋಕೆ ಅಂತ ಇಟ್ಟಿದ್ದ ಮಿಷಿನ್ನು. ಎಲ್ಲಾ ಹಾಳಾಗ್ ಹೋಗಿತ್ತು. ತಂದು ಸರಿಮಾಡ್ಕೊಂಡು ಅದರಲ್ಲೇ ಕೆಲ್ಸ ಶುರು ಮಾಡಿದ್ವಿ

ಚಿತ್ರ ಕೃಪೆ : ಪ್ರಕಾಶ್ ಶೆಟ್ಟಿ
ತೇಜಸ್ವಿಗೆ ಮೊದ್ಲೇ ಮೊಳೆ ಜೋಡ್ಸೋದು, ಪ್ರಿಂಟ್ ಮಾಡೋದು ಎಲ್ಲಾ ಅನುಭವ ಇತ್ತಲ್ಲ, ಆ ಅನುಭವದ ಆಧಾರದ ಮೇಲೆ ಕಷ್ಟಾನೋ ಸುಖಾನೋ ಹ್ಯಾಗೋ ಪ್ರಿಂಟಿಂಗ್ ನಡೀತಾ ಇತ್ತು. ಆಗಂತು ನಮಗೆ ಬೆಳಿಗ್ಗೆ ಎದ್ದು ಮೊಳೆ ಜೋಡ್ಸಕ್ ಕೂತ್ರೆ ಮಧ್ಯರಾತ್ರಿ ಆದ್ರೂ ಕೆಲಸ ಮುಗೀತಿರ್ಲಿಲ್ಲ. ಟಾರ್ಚರ್ ಅಂದ್ರೆ ಪರಮ ಟಾರ್ಚರ್ ಅದು. ನಾವು ಹಿಂಗೇ ಒದ್ದಾಡ್ಕೊಂಡು ಹಿಂಸೆ ಪಟ್ಕೊಂಡ್ ಪ್ರಿಂಟಿಂಗ್ ಮಾಡ್ತಿರ್ಬೇಕಾದ್ರೆ ಒಂದಿನ ಅಮೇರಿಕಾಗೆ ಹೈಯರ್ ಸ್ಟಡೀಸ್ ಗೆ ಅಂತ ಹೋಗಿದ್ದ ಪ್ರದೀಪ್ ಕೆಂಜಿಗೆ ಬಂದ. (ಪ್ರದೀಪ್ ಕೆಂಜಿಗೆಯವರ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ಬರೆದಿದ್ದೆ) ಬಂದವನು “ಏನ್ ಸಾರ್ ನೀವಿನ್ನೂ ಓಬಿರಾಯನ ಕಾಲದ ಮಿಷಿನ್ ಇಟ್ಕೊಂಡು ಹಿಂಗೇ ಮೊಳೆ ಜೋಡುಸ್ಕೊಂಡ್ ಸಾಯ್ತಾ ಇದೀರ. ಟೆಕ್ನಾಲಜಿ ಎಷ್ಟ್ ಡೆವಲಪ್ ಆಗಿದೆ. ಈಗ ಡಿಟಿಪಿ ಅಂತ ಒಂದು ಬಂದಿದೆ. ಬರ್ತಾ ಅಮೇರಿಕಾದಿಂದಅದನ್ನ ತಂದಿದೀನಿ. ತಂದುಕೊಡ್ತೀನಿ’ ಅಂದ. ನಮಗಾಗ್ಲಿ, ತೇಜಸ್ವಿಗಾಗ್ಲಿ ಅವನು ಏನ್ ಹೇಳ್ತಾ ಇದಾನೆ ಅನ್ನೊ ತಲೆಬುಡ್ ಅರ್ಥ ಆಗ್ದೇ ಇದ್ರೂ ’ಅದೆಂತದ್ದೊ ಮೊದ್ಲು ಅದನ್ನ ತಗೊಂಡ್ ಬಾ ಮಾರಾಯ ನೋಡಣ’ ಅಂತ ಹೇಳುದ್ವಿ. ಅವನು ಇಷ್ಟು ದೊಡ್ಡ ಬಾಕ್ಸ್ ಒಂದನ್ನ ಹೊತ್ಕೊಂಡ್ ಬಂದು ಇಟ್ಟ. ಅದೂವರ್ಗೂ ನಾವ್ಯಾರೂ ನಮ್ ಲೈಫಲ್ಲಿ ಅಂತ ಮಿಷಿನನ್ನೇ ನೋಡಿರ್ಲಿಲ್ಲ. ’ಇದೇನಯ್ಯ ಯಾವ್ದೊ ಡಿಟಿಪಿ ಅಂದೆ, ನೋಡುದ್ರೆ ಇದ್ಯಾವ್ದುನ್ನೊ ಡಬ್ಬಹೊತ್ಕೊಂಡ್ ಬಂದಿದೀಯ. ಹೋಗ್ಲಿ ಹೆಂಗಯ್ಯ ಇದನ್ನ ಬಳಸೋದು…?’ ಅಂತ ತೇಜಸ್ವಿ ಕೇಳಿದ್ರು.
ಅವನು ’ಅದ್ಯಂತದ್ದೊ ಸಾರ್. ಇದನ್ನ ಡಿಟಿಪಿ ಅಂತ ಕರೀತಾರೆ. ಇದ್ರಲ್ಲಿ ಅಕ್ಷರ ಜೋಡ್ಸೋ ಕೆಲಸ ಎಲ್ಲಾ ಈಸಿಯಾಗಿ ಮಾಡ್ಬಹುದಂತೆ ನನಗೂ ಸರೀಗ್ ಗೊತಿಲ್ಲ’ ಅಂತ ಸರಿಯಾಗಿಒಂದು ಬಾಂಬ್ ಹಾಕ್ದ. ಅವನಿಗೂ ಅದನ್ನ ಹೆಂಗ್ ಬಳಸ್ಬೇಕು ಅಂತ ಸರಿಯಾಗ್ ಗೊತ್ತಿರ್ಲಿಲ್ಲ. ಸರಿ ಅಮೇಲೆ ಇವರು ಎಲ್ರಿಗೂ ಕೇಳೋಕೆ ಶುರು ಮಾಡಿದ್ರು. “ಡಿಟಿಪಿ ಅಂದ್ರೆ ಏನು? ಎತ್ತ?” ಅಂತ. ಯಾರೂ ಅದರ ಬಗ್ಗೆ ಸರಿಯಾಗ್ ಹೇಳಲೇ ಇಲ್ಲ. ಕಡೇಗ್ ನಮಗೆ ಗೊತ್ತಾಗಿದ್ದು ಡಿಟಿಪಿ ಅಂದ್ರೆ ಅದೊಂದ್ ಸಾಫ್ಟ್ವೇರು, ಆ ಸಾಫ್ಟ್ವೇರ್ ತಗೊಂಡ್ ಬಂದು ಈ ಮಿಷಿನ್ನಿಗೆ ಹಾಕಿದ್ರೆ ಇದ್ರಲ್ಲಿ ಅಕ್ಷರ ಜೋಡ್ಸೊ ಕೆಲ್ಸ ಮಾಡ್ಬಹುದು ಅಂತ. ಮತ್ತೆ ಹುಡುಕಾಡಿ ಹುಡುಕಾಡಿ ಬೆಂಗಳೂರಿನಲ್ಲಿ ’ಎಸ್ ಆರ್ ಜಿ’ ಅಂತ ಒಂದು ಕಂಪನಿ ನಮಗೆ ಬೇಕಾಗಿರೊ ಸಾಫ್ಟ್ವೇರ್ ಕೊಡುತ್ತೆ ಅಂತ್ ಗೊತ್ತು ಮಾಡ್ಕೊಂಡು ಅವರಿಗೆ ಕೇಳ್ಕೊಂಡ್ವಿ. ಅವರು ಸಾಫ್ಟ್ವೇರ್ ಕೊಡೋಕೆ ಒಪ್ಕೊಂಡು ಅವರ ಕಡೆಯಿಂದ ಒಬ್ರುನ್ನ ಇಲ್ಲಿಗೆ ಕಳಿಸಿದ್ರು. ಆತ ಬಂದು ಅದೆಂತದ್ದೊ ಫ್ಲಾಪಿ ಅಂತೇಳಿ ಒಂದು ಕಪ್ಪು ತಟ್ಟೆ ತರದ್ದು ಒಂದು ತೆಗೆದು ಮಿಷಿನ್ ಒಳಗೆ ಹಾಕಿ ಅದೇನೇನೊ ಮಾಡಿ ’ಸಾಪ್ಟ್ವೇರ್ ಇನ್ಸ್ಟಾಲ್ ಆಯ್ತು’ ಅಂದ. ನಮಗೆ ಅದರ ಗಂಧ ಗಾಳಿನೇ ಇಲ್ದಿದ್ರಿಂದ ಅವನು ಏನ್ ಹೇಳ್ತಾ ಇದಾನೆ ಅಂತ ಒಂಚೂರು ಅರ್ಥ ಆಗ್ಲಿಲ. ಅಮೇಲೆ ಅವನು ಎರಡು ದಿನ ನಮ್ಮಲ್ಲೇ ಉಳ್ಕೊಂಡು ಇದು ಕಂಪ್ಯೂಟ್ರು, ಇದು ಹಾರ್ಡ್ ಡಿಸ್ಕು, ಇದು ಫ್ಲಾಪಿ, ಬಿ ಡೈವು, ಸಿ ಡ್ರೈವು ಅದು ಇದು ಅಂತ ಪಾಪ ತುಂಬಾ ತಾಳ್ಮೆ ತಗೊಂಡು ಎಲ್ಲಾ explainಮಾಡ್ದ. ನಾನು, ರಾಜೇಶ್ವರಿ ಮೇಡಮ್ಮು, ರೀತು ಅಂತ ಒಬ್ಬಿದ್ದ ಅವನು ಮತ್ತೆ ನಮ್ ಪ್ರದೀಪ ನಾವು ನಾಲ್ಕು ಜನ ಇದ್ವಿ ಆಗ.
ತೇಜಸ್ವಿ ಅಂತೂ ’ಥೂ ಮಾರಾಯ್ರ ನನ್ನ ಮಾತ್ರ ಆ ತರಲೆಗೆ ಕರೀಬೇಡಿ. ಅವೆಲ್ಲ ಒಂಥರ ಶನಿ ಇದ್ದಂಗೆ. ಹಿಡ್ಕೊಂಡ್ರೆ ಹಿಡ್ಕೊಂಡ್ ಬಿಡ್ತಾವೆ. ನೀವ್ ಏನ್ ಬೇಕಾದ್ರೂ ಮಾಡ್ಕೊಳಿ ಅಂತ ದೂರನೇ ಕೂತು ಅವರ ಪಾಡಿಗ್ ಅವ್ರು ಕೆಲ್ಸ ಮಾಡ್ಕೋತಿದ್ರು. ಆದ್ರೆ ಒಂದು ಕಣ್ಣಲ್ಲಿ ನಮ್ ಫಜೀತಿನೆಲ್ಲಾ ಗಮನಿಸ್ತಾನೇ ಇದ್ರು. ಎರಡು ದಿನ ದೂರ ಇದ್ದೋರು ಕಡೇಗೆ ನಮಗ್ಯಾರಿಗೂ ಅವರು ಆ ಮಿಷಿನ್ ಬಗ್ಗೆ ಹೇಳ್ತಾ ಇದಿದ್ದು ಏನೂ ಅರ್ಥ ಆಗ್ದೇ ಒದ್ದಾಡ್ತಾ ಇದ್ದಿದ್ದು ನೋಡಿ ’ಇನ್ನ ಇವ್ರನ್ನ ಕಟ್ಕೊಂಡ್ರೆ ಕೆಲ್ಸ ಆಗಲ್ಲ’ ಅಂತ ಅನ್ನಿಸ್ತೊ ಏನೋ ’ಎಲ್ರಯ್ಯ ಹೋಗ್ರಿ ಆ ಕಡೆ…ನಾನ್ ನೋಡ್ತೀನಿ…’ ಅಂತ ಬಂದು ಆ ಮಿಷಿನ್ ಮುಂದೆ ಕೂತ್ಕೊಂಡ್ರು. ಅಲ್ಲಿಗೆ ಹಿಡ್ಕೊಳ್ತು ಕಂಪ್ಯೂಟ್ರು ಅವ್ರಿಗೆ…ಕಡೆವರ್ಗೂ ಅವರ ಕೈ ಬಿಡ್ಲೇ ಇಲ್ಲ…ಹೆಹೆಹೆ…” ಎನ್ನುತ್ತ ತೇಜಸ್ವಿ ಮನೆಗೆ ಕಂಪ್ಯೂಟರ್ ಬಂದ ಘಟನೆಯನ್ನು ಅವರದ್ದೇ ಶೈಲಿಯಲ್ಲಿ ವಿವರಿಸಿದರು. .”..ಅಮೇಲ್ ಸರ್…?” ನಾನು ಕೇಳಿದೆ. “ಹಹ…ಅಮೇಲೆ ಬಿಡಿ ಅದೊಂದ್ ದೊಡ್ಡ ಕತೆ. ಆಗ ಕಂಪ್ಯೂಟ್ರು ಇಡೋದು ಅಂದ್ರೆ ಅವನು ದೊಡ್ಡ ಶ್ರೀಮಂತ ಆಂತ ಜನ ಮಾತಾಡ್ಕೋತಿದ್ರು. ಅದು ನಿಜ ಕೂಡ ಆಗಿತ್ತು. ನಮ್ ದೇಶದಲ್ಲಿ ಎಲ್ಲೂ ಕಂಪ್ಯೂಟ್ರು ಸಿಕ್ತಾ ಇರ್ಲಿಲ್ಲ. ಬೇಕು ಅಂದ್ರೆ ಫಾರಿನ್ ನಿಂದ ತರುಸ್ಕೋಬೇಕಿತ್ತು. ಜೊತೆಗೆ ಅದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಬೀಳ್ತಿತ್ತು. ಹಂಗಾಗಿ ಜನ ಎಲ್ಲಾ ’ತೇಜಸ್ವಿ ಮನೇಗೆ ಕಂಪ್ಯೂಟರ್ ಬಂದಿದ್ಯಂತೆ’ ಅಂತ ಮಾತಾಡ್ಕೊಂಡು, ಕೆಲವರು ಕುತೂಹಲಕ್ಕೆ ಬಂದು ನೋಡ್ಕೊಂಡ್ ಹೋಗ್ತಿದ್ರು. ನೀವ್ ನಂಬಲ್ಲ ಆ ಕಂಪ್ಯೂಟ್ರು ಹಾರ್ಡ್ ಡಿಸ್ಕ್ ಕ್ಯಪಾಸಿಟಿನೇ 20MB!!!. ಆಗ ಈಗಿನಂಗೆ ಪೆನ್ ಡ್ರೈವ್ ಇರ್ಲಿಲ್ಲ, ಸಿಡಿ ಇರ್ಲಿಲ್ಲ ಹೋಗ್ಲಿ ಮೌಸ್ ಕೂಡ ಇರ್ಲಿಲ್ಲ. ಫಸ್ಟ್ ಟೈಮ್ ಮೌಸ್ ಅಂತ ಒಂದು ಬಂದಿದೆ ಅಂತ ಕೇಳ್ದಾಗ ನಮಗೆ ನಂಬೋಕೆ ಆಗಿರ್ಲಿಲ್ಲ. ಹಂಗೆ ಅಮೇಲೆ ಡಾಸ್ ಬಂತು, 286 ಬಂತು, 386 ಬಂತು, ವಿಂಡೋಸ್ ಬಂತು…ಆ ಜಮಾನದವ್ರು ನಾವು…ಕೊನೆಗೆ ಏನೇನೊ ಸರ್ಕಸ್ ಮಾಡಿ ಡಿಟಿಪಿ ಕಲಿತ್ವಿ.
ಆಮೇಲೆ ಆಗಿನ ಕಾಲಕ್ಕೆ ಒಂದು ಕಾಲು ಲಕ್ಷ ಸಾಲ ಮಾಡಿ ಒಂದು ಲೇಸರ್ ಜೆಟ್ ಪ್ರಿಂಟರ್ ತಗೊಂಡ್ವಿ. ಅದೀಗ ಎಲ್ಲಾ ಸೇರಿ ಎಂಟು ಸಾವಿರಕ್ಕೆ ನಿಮಗೆ ಸಿಗುತ್ತೆ. ಹಾಗೆಟೆಕ್ನಾಲಜಿ ಬದಲಾದಂಗೆ ಕ್ರಮೇಣ ನಾವೂ update ಆಗ್ತಾ ಹೋದ್ವಿ. ದುಡ್ಡಿನ ಮುಖಾನೇ ನೋಡ್ಲಿಲ್ಲ. ಬರೋ ದುಡ್ಡು ಪ್ರಿಂಟಿಂಗ್ ಅಂತೆ, ಸಾಫ್ಟ್ವೇರ್ ಅಂತೆ, ಪ್ರಿಂಟರ್ ಅಂತೆ ಹಿಂಗೇ ವಾಪಸ್ ಹಾಕ್ಬೇಕಾಗಿತ್ತು. ಮೋರ್ ಓವರ್ ನಮಗೆ ಬೇರೆ option ಇರಲಿಲ್ಲ. ಒಂದೋ ಪ್ರಕಾಶನ ಮುಚ್ಚಿ ಈ ಫೀಲ್ಡೇ ಬಿಟ್ಟು ಹೋಗ್ಬೇಕಿತ್ತು. ಇಲ್ಲ ಉಳಿಬೇಕು ಅಂತಿದ್ರೆ update ಆಗ್ಲೇಬೇಕಿತ್ತು. ಹಾಗೆ ಟೆಕ್ನಾಲಜಿ ಜೊತೆ ಹೊಂದಿಕೊಂಡು ಹೋಗಿದ್ರಿಂದ ನಾವಿವತ್ತು ಒಬ್ಬರು ಪ್ರಕಾಶಕರು ಅಂತ ಉಳ್ಕೊಳೊಕ್ಕಾಯ್ತು. ಈ ಮಾತು ಸುಮ್ನೆ ಜಂಭಕ್ಕೆ ಹೇಳ್ಕೋತಿಲ್ಲ, ನೀವು ಯಾವ್ದೇ ಬುಕ್ ಶಾಪಿನವರಿಗೆ ಕೇಳಿ ತೇಜಸ್ವಿಯವರ ಪುಸ್ತಕ ಪ್ರಕಾಶನದವರು ಹೇಗೆ ಅಂತ, ’ಅವ್ರು ಬಿಡಿ ಸಾರ್ ವ್ಯವಹಾರ ಅಂದ್ರೆ ಹಾಗ್ ಮಾಡ್ಬೇಕು’ ಅಂತಾನೇ ಹೇಳ್ತಾರೆ. ಈ ಹಂತಕ್ಕೆ ತಂದು ನಿಲ್ಲಿಸೋದಕ್ಕೆ ತುಂಬಾ ಕಷ್ಟಪಟ್ಟಿದ್ದೀವಿ…ಆಗೆಲ್ಲಾ ನಾನು ಸೇಲ್ಸ್ ಡಿವಿಷನ್ ನಲ್ಲಿ ಕೆಲ್ಸ ಮಾಡ್ತಿದ್ದೆ. ಈಗ್ಲೂ ಮಾಡ್ತಿದ್ದೀನಿ. ಗುಲ್ಬರ್ಗಾ, ರಾಯಚೂರು, ಬೀದರ್ ಬಿಜಾಪುರದಿಂದ ಹಿಡಿದು ಕೋಲಾರದವರೆಗೂ ಪುಸ್ತಕಗಳನ್ನ ಹೊತ್ಕೊಂಡ್ ಹೋಗಿ ಸಾಹಿತ್ಯ ಸಮ್ಮೇಳನಗಳಲ್ಲಿ ಮಾರಾಟ ಮಾಡಿದ್ದೀವಿ. ಅದೆಲ್ಲಾ ಒಂಥರ Strong Foundation ಥರ ಆಯ್ತು ಪುಸ್ತಕ ಪ್ರಕಾಶನ ಬೆಳೆಯೋದಕ್ಕೆ. ಈಗ ತೇಜಸ್ವಿ ಹೋದ ನಂತರ ನಾನು, ಶ್ರೀರಾಮ್, ಮೇಡಂ ಸೇರಿ ಪುಸ್ತಕ ಪ್ರಕಾಶನ ನಡೆಸ್ಕೊಂಡ್ ಹೋಗ್ತಾ ಇದೀವಿ…” ರಘುರವರು ಅವರ ಸುದೀರ್ಘ ಮಾತಿಗೆ ವಿರಾಮ ತೆಗೆದುಕೊಂಡರು.
ಅಷ್ಟರಲ್ಲಿ ಎಲ್ಲೊ ಹೊರಗೆ ಹೋಗಿದ್ದ ಅವರ ಶ್ರೀಮತಿಯವರು ವಾಪಸ್ ಬಂದು ನಮಗೆಲ್ಲಾ ಕಾಫಿ ಬಿಸ್ಕೆಟ್ ಕೊಟ್ಟು ಅಕ್ಕರೆಯಿಂದ ಮಾತನಾಡಿಸಿದರು. ರಘುರವರು “ನಾನು ಇವತ್ತು ಈ ಮಟ್ಟಿಗೆ ಇರೋದಕ್ಕೆ ಮುಖ್ಯ ಕಾರಣ ಇವಳೇ. ಆಗೆಲ್ಲಾ ನಾನು ಮನೆ ಸೇರದೇ ಪುಸ್ತಕ ಮಾರಾಟ ಅದು ಇದು ಅಂತ ಬರೀ ಸುತ್ತೋದೇ ಮಾಡ್ತಾ ಮನೆಕಡೆ, ತೋಟದ ಕಡೆ ಸರಿಯಾಗ್ ಗಮನ ಕೊಡೋಕೆ ಆಗ್ತಿರ್ಲಿಲ್ಲ. ಆಗೆಲ್ಲಾ ತೋಟ ಮನೆ ಜವಬ್ದಾರಿ ತಗೊಂಡು ನಿಭಾಯಿಸಿದ್ದು ನಮ್ಮ ಮನೆಯವ್ರೇ…” ಎಂದು ಅವರ ಹೆಂಡತಿಯ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು. ಹಾಗೆ ಕಾಫಿ, ಬಿಸ್ಕೆಟ್ ಕೈಯಲ್ಲಿ ಹಿಡಿದು ರಘು ಮಾತು ಮುಂದುವರೆಸಿದರು, “ಅಮೇಲೆ ತೇಜಸ್ವಿ ಯಾವಾಗ್ಲೂ ಹೇಳ್ತಿದ್ದಿದ್ದು ಎನಂದ್ರೆ, ’ನಾವು ಪ್ರಶಸ್ತಿಗೋಸ್ಕರನೊ ಅಥವ ಯಾರೋ ವಿಮರ್ಶಕರನ್ನ ಮೆಚ್ಚಿಸೋದಕ್ಕೋಸ್ಕರಾನೋ ಬರೆಯೋದಲ್ಲ. ಜನರನ್ನ ಗೆಲ್ಲೋಕೋಸ್ಕರ, ಓದುಗರಿಗೋಸ್ಕರ ಬರೀಬೇಕು. ಯಾರು ದುಡ್ಡು ಖರ್ಚು ಮಾಡಿ ಪುಸ್ತಕ ಕೊಂಡ್ಕೋತಾನೆ. ಅಂತವ್ರು ನಮ್ಮ ಬರವಣಿಗೆಯ ನಿಜವಾದ ಗುರಿ ಆಗ್ಬೇಕು ಅಂತಿದ್ರು. ಅದಕ್ಕೆ ಸಂಬಂಧಪಟ್ಟ ಒಂದು ಘಟನೆ ಹೇಳ್ತೀನಿ, “ನಮ್ಮ ತಂದೆ ಇದ್ರು. ಅವರು ಲಾಸ್ಟ್ ಯಿಯರ್ ತೀರ್ಕೊಂಡ್ರು. ಅವರು ಅವರ ಜೀವಮಾನ ಪೂರ್ತಿ ಯಾವ ಪುಸ್ತಕಾನೂ ಓದಿದ್ದು ನಾನು ನೋಡೇ ಇರಲಿಲ್ಲ.
ಒಂದಿನ ನೋಡ್ತೀನಿ ಯಾವ್ದೋ ಪುಸ್ತಕ ಓದ್ತಾ ಇಲ್ಲೇ ಖುರ್ಚಿ ಮೇಲೆ ಕೂತಿದ್ರು. ನಾನು ’ಏನದು ಓದ್ತಾ ಇರೋದು?’ ಅಂತ ಕೇಳ್ದಾಗ ನಮ್ಮಪ್ಪ “ನೋಡು ಯಾವ್ದೊ ಕಾದಂಬರಿ ತುಂಬಾ ಚೆನ್ನಾಗಿದೆ. ಬಿಡೋಕೆ ಮನಸೇ ಬರ್ತಾ ಇಲ್ಲ.’ ಅಂದ್ರು. ನನಗೆ ‘ಎಂದೂ ಇಲ್ಲದ್ದು ಇವತ್ತು ಏನ್ ಓದ್ತಾ ಇದಾರೆ?’ ಅಂತ ಪುಸ್ತಕ ತಗೊಂಡ್ ನೋಡಿದ್ರೆ ’ಕರ್ವಾಲೋ’ ಓದ್ತಾ ಇದಾರೆ. ಅವರಿಗೆ ಗೊತ್ತಿರ್ಲಿಲ್ಲ ಅದು ತೇಜಸ್ವೀನೆ ಬರ್ದಿದ್ದು ಅಂತ. ಅಮೇಲೆ ನಾನು ಅದನ್ನ ತೇಜಸ್ವಿ ಹತ್ರ ಹೇಳ್ದೆ, ಹಿಂಗಿಂಗೆ ನಮ್ಮಪ್ಪ ಕರ್ವಾಲೋ ಓದ್ತಾ ಇದ್ರು. ತುಂಬಾ ಚೆನ್ನಾಗಿದೆ ಅಂತಿದ್ರು’ ಅಂತ. ’ಹೌದೇನಯ್ಯ? ನೀನ್ ಕೇಳ್ಬೇಕಿತ್ತು, ಯಾವ್ ಪಾಯಿಂಟ್ ಇಷ್ಟ ಆಯ್ತು. ಇಷ್ಟ ಆಗೋಕೆ ಏನ್ ಕಾರಣ ಅಂತ’ ಅಂತ ತೇಜಸ್ವಿ ಹೇಳಿದ್ರು. ನಾನು ‘ಅದೆಲ್ಲ ಕೇಳಕ್ಕೆ ಹೋಗ್ಲಿಲ್ಲ’ ಅಂದೆ. “ಥೂ…ಗೂಸ್ಲು ಕಣಯ್ಯ ನೀನು, ಸರಿಯಾಗಿ ಕೇಳ್ಬೇಕಿತ್ತು ಏನ್ ಇಷ್ಟ ಆಯ್ತು ಅಂತ. ಅಂತೋರ ಅಭಿಪ್ರಾಯ ಮುಖ್ಯ ಕಣಯ್ಯ ನಮಗೆ’ ಅಂತ ಹೇಳಿದ್ರು ಅವತ್ತು” ಎಂದು ತೇಜಸ್ವಿ ಓದುಗರನ್ನೇ ಶ್ರೇಷ್ಠ ವಿಮರ್ಶಕ ಎಂದು ನಂಬಿದ್ದ ವಿಷಯ ಕುರಿತು ಮಾತನಾಡಿದರು.
ಅಲ್ಲಿಗೆ ಬರವಣಿಗೆ,ಪುಸ್ತಕ ಪ್ರಕಾಶನಕ್ಕೆ ಸಂಬಂಧಪಟ್ಟ ವಿಷಯಗಳು ಸಾಕೆನ್ನಿಸಿದ್ದರಿಂದ ಆ ವಿಷಯಗಳ ಬಗ್ಗೆ ಮತ್ತೇನು ಪ್ರಶ್ನಿಸಲಿಲ್ಲ. ರಘುರವರಲ್ಲಿ ಕೇಳಲೇಬೇಕಿದ್ದ ಮತ್ತೊಂದು ಮುಖ್ಯವಾದ ವಿಷಯ ’ಫಿಶಿಂಗ್’. ಏಕೆಂದರೆ ತೇಜಸ್ವಿಯವರ ಫಿಶಿಂಗ್ ಸಾಹಸಗಳಲ್ಲಿ ಅವರ ಜೊತೆ ತೀರ ನಿಕಟ ಸಂಪರ್ಕ ಹೊಂದಿದ್ದವರು ಒಬ್ಬರು ಬಾಪು ದಿನೇಶ್ ಮತ್ತೊಬ್ಬರು ರಘು. ಹಾಗಾಗಿ ಸ್ವಲ್ಪ ಹೊತ್ತಿನ ನಂತರ ತೇಜಸ್ವಿಯವರೊಂದಿಗೆ ಮೀನು ಹಿಡಿಯುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳುವಂತೆ ಕೇಳಿಕೊಂಡೆ. ಅವರು ’ಹಾಗಾದ್ರೆ ಈ ಜಾಗ ಬೇಡ. ಹತ್ತಿರದಲ್ಲೇ ಹೇಮಾವತಿ ಹರಿಯುತ್ತೆ. ಅಲ್ಲಿ ನಾವು ಫಿಶಿಂಗ್ ತುಂಬಾ ಮಾಡಿದ್ದೀವಿ. ಅಲ್ಲಿಗೇ ಹೋಗೋಣ ಬನ್ನಿ. ಹೋಗ್ತಾ ಹೋಗ್ತಾ ಮಾತಾಡೋಣಂತೆ” ಎಂದು ನಮ್ಮನ್ನು ಹೇಮಾವತಿ ನದಿಯ ಕಡೆ ಕರೆದುಕೊಂಡು ಹೊರಟರು. ನನ್ನು ನಮ್ಮ ಮೂವರು ಹುಡುಗರು ರಘುರವರ ಜೊತೆಯಲ್ಲಿ ಅವರ ಮನೆಯ ಗೇಟು ದಾಟಿ ಟಾರ್ ರಸ್ತೆಗುಂಟ ನಡೆಯತೊಡಗಿದೆವು. ನಮ್ಮ ಜೊತೆಗೆ ಬಂದ ಮತ್ತೊಬ್ಬ ಅತಿಥಿ ರಘುರವರ ನಾಯಿ. ಬಹುಪಾಲು ಮಲೆನಾಡಿನವರಂತೆ ಅವರ ಮನೆಯಲ್ಲೂ ನಾಯಿ ಇತ್ತು. ಅದು ನಾವು ಗೇಟು ದಾಟುವ ಸೂಚನೆ ಸಿಕ್ಕಿದ ಕೂಡಲೇ ಖುಷಿಯಿಂದ ನೆಗೆದಾಟಿ ನಮ್ಮ ಹಿಂದೆ ಗತ್ತಿನಲ್ಲಿ ಬರತೊಡಗಿತು.
ರಘುರವರು ತೇಜಸ್ವಿಯೊಂದಿಗಿನ ಫಿಶಿಂಗ್ ಅನುಭವಗಳನ್ನು ಒಂದೊಂದಾಗಿ ಬಿಡಿಸಿಡಲು ಪ್ರಾರಂಭಿಸಿದರು, “ಇದೇ ದಾರಿನಲ್ಲಿ ಹೋಗ್ತಾ ಇದ್ವಿ. ಸಾಯಂಕಾಲ ಮೂರು ಮೂರೂವರೆ ಹೊತ್ತಿಗೆ ಅವ್ರು ಸ್ಕೂಟರ್ ನಲ್ಲಿ ನಮ್ ಮನೆ ಹತ್ರ ಬರ್ತಾ ಇದ್ರು. ಇಲ್ಲಿಂದ ಇಬ್ರೂ ಒಟ್ಟಿಗೆ ಹೋಗ್ತಾ ಇದ್ವಿ. ರಾತ್ರಿ ಏಳುವರೆವರೆಗೂ ಹೇಮಾವತಿಗೆ ಗಾಳ ಹಾಕ್ಕೊಂಡ್ ಕೂತಿರ್ತಿದ್ವು. ಈ ಫಿಶಿಂಗ್ ನ ಅಡ್ವಾಂಟೇಜ್ ಏನು ಅಂದ್ರೆ ನಿಮ್ಮ ಪಾಡಿಗೆ ನೀವು ಒಬ್ರೆ ಯಾರ ತಂಟೆ ತಕರಾರು ಇಲ್ದಂಗೆ ಕೂತುಬಿಡಬಹುದು. ಯಾರೂ ನಿಮ್ಮನ್ನ ಡಿಸ್ಟರ್ಬ್ ಮಾಡೋದಿಲ್ಲ. ಒಂಥರ ಋಷಿಗಳು ತಪಸ್ಸಿಗೆ ಕೂತ ಹಾಗೆ ಅದು. ಹಹ(ನಗು). ಅಮೇಲೆ ಫಿಶಿಂಗ್ ಅಂದ್ರೆ ಅದೇನೊ ತುಂಬಾ ಕೀಳು ಕೆಲಸ ಅಂತ ಮೂಗು ಮುರಿಯೋರೇ ಜಾಸ್ತಿ ನಮ್ಮಲ್ಲಿ. ಆದ್ರೆ ಅದೊಂದು ಸ್ಪೋರ್ಟ್ಸ್ ಅಂತ ನಮ್ಮ ಜನಕ್ಕೆ ಗೊತ್ತೇ ಇಲ್ಲ. ವಿದೇಶದಲೆಲ್ಲಾ ಫಿಶಿಂಗ್ ಅಂತಂದ್ರೆ ಅದೊಂದ್ ಸ್ಪೋರ್ಟ್ಸ್ ಅಂತ ಟ್ರೀಟ್ ಮಾಡ್ತಾರೆ. ಅದಕ್ಕೆ ಅಂತ ಜನ ಅಲ್ಲಿ ಟೈಂ ಮಾಡ್ಕೋತಾರೆ. ನಮ್ಮಲ್ಲಿ ಈಗೀಗ ಅದರ ಬಗ್ಗೆ ಸ್ವಲ್ಪ ಸ್ವಲ್ಪಾನೇ ಅವೇರ್ ನೆಸ್ ಕ್ರಿಯೇಟ್ ಆಗ್ತಿದೆ” ಎನ್ನುತ್ತಾ ಮಾತು ಮುಂದುವರೆಸಿದರು.
ನಾವು ಹೊರಟ ಜಾಗದಿಂದ ಹೇಮಾವತಿ ನದಿ ಸುಮಾರು ಒಂದು ಕಿಲೊಮೀಟರ್ ದೂರ. ಮಾತನಾಡುತ್ತಾ ಹೋದಂತೆ ಟಾರ್ ರಸ್ತೆಯಿಂದ ಎಡಕ್ಕೆ ಕಾಣುತ್ತಿದ್ದ ವಿಶಾಲವಾದ ಹಳ್ಳವೊಂದನ್ನು ಇಳಿಯಬೇಕೆಂದು ರಘು ಹೇಳಿದರು. ನಾವೆಲ್ಲರೂ ಅವರನ್ನು ಅನುಸರಿಸಿ ಆ ಹಳ್ಳ ಇಳಿದು ಹುಲ್ಲಿನ ನಡುವೆ ಜನ ಓಡಾಡಿ ಆಗಿದ್ದ ಕಾಲುದಾರಿಯಲ್ಲಿ ನಡೆಯುತ್ತಾ ಮುಂದೆ ಹೋಗುತ್ತಿದ್ದಂತೆ ಹೇಮಾವತಿ ನದಿ ನಮಗೆ ಕಾಣಿಸಿಕೊಂಡಿತು. ನದಿ ಕಾಣುವ ಸ್ವಲ್ಪ ದೂರ ಮೊದಲು ಸದ್ದು ಕೇಳುತ್ತದೆ ಎಂದು ನಾವೆಲ್ಲ ಊಹಿಸಿದ್ದೆವು. ಆದರೆ ಯಾವ ಸದ್ದೂ ಇಲ್ಲದೇ ಒಮ್ಮೆಗೆ ಹೇಮಾವತಿ ನದಿ ನಮೆದುರು ತೆರೆದುಕೊಂಡಿತು. ರಘುರವರು ಅದಕ್ಕೆ ಕಾರಣ ವಿವರಿಸಲು ಪ್ರಾರಂಭಿಸಿದರು ’ಈ ಹೇಮಾವತಿ ನದಿ ವಿಶೇಷ ಅಂದ್ರೆ ಅದು ತೆಳ್ಳಗೆ ಒಂದೇ ಸಮಕ್ಕೆ ಹರಿಯೋದು. ಈ ನದಿಗೆ ಎಲ್ಲೂ ಹಳ್ಳಕೊಳ್ಳಗಳಾಗಲೀ, ಝರಿಗಳಾಗಲೀ, ಫಾಲ್ಸ್ ಆಗಲೀ ಇಲ್ಲ. ಉಗಮ ಸ್ಥಾನದಿಂದ ಹಿಡಿದು ಎಂಡ್ ವರೆಗೂ ಒಂದೇ ಸಮನಾಗಿ ಅಬ್ಬರ ಇಲ್ಲದೇ ತೆಳ್ಳಗೆ ಹರಿಯುತ್ತೆ. ಅದಕ್ಕೆ ನಮಗೆ ನದಿ ಹರಿಯುವ ಸದ್ದು ಕೇಳೋದಿಲ್ಲ. ಇದು ತುಂಬಾ ವರ್ಷ ನಮ್ಮ ರೆಗ್ಯುಲರ್ ಫಿಶಿಂಗ್ ಸ್ಪಾಟ್ ಆಗಿತ್ತು. ಇಲ್ಲಿ ಜನಕಜ್ಜನ ಹೊಂಡ, ಗೌರಿ ಗುಂಡಿ, ಬಸವನ ಗುಂಡಿ, ಬೂದಿ ಗುಂಡಿ, ಅಂತ ತುಂಬಾ ದೊಡ್ಡ ದೊಡ್ಡ ಗುಂಡಿಗಳಿರ್ತಿದ್ವು. ಅಲ್ಲಿ ಎಂತೆಂತ ಮೀನುಗಳು ಇರತಿದ್ವು…” ಎಂದು ಅವರು ಹೇಳುತ್ತಿದ್ದಾಗ “ಗುಂಡಿಗಳು ಅಂದ್ರೆ…?” ಎಂದು ನಾನು ಅವರನ್ನು ಪ್ರಶ್ನಿಸಿದೆ.

ಅವರು ಉತ್ತರಿಸುತ್ತಾ ಹೋದರು “ಗುಂಡಿ ಅಂದ್ರೆ ನದಿ ಹರಿಯೊ ಜಾಗದಲ್ಲಿ ಅಂದ್ರೆ ನದಿ ಒಳಗೆ ನೀರು ಹರಿಯೊ ಫೊರ್ಸಿಗೆ ಹಳ್ಳಗಳು ಆಗಿರ್ತಾವೆ. ಅದನ್ನ ಗುಂಡಿಗಳು ಅಂತ ಕರಿತೀವಿ. ಆ ಗುಂಡಿಗಳೊಳಗೆ ಮೀನುಗಳು ಗುಂಪಾಗಿ ಬಂದು ಸೇರ್ಕೊಂಡಿರ್ತಿದ್ವು. ನಾವು ದಡದಲ್ಲಿ ಕೂತ್ಕೊಂಡು ಗಾಳ ಎಸೆದ್ರೆ ಅದು ತೇಲ್ಕೊಂಡು ಬಂದು ಆ ಗುಂಡಿ ಒಳಗೆ ಬೀಳ್ತದೆ. ಒಳಗಿದ್ದ ಮೀನುಗಳು ಗಾಳ ಬಿದ್ದ ಕೂಡ್ಲೇ ಯಾವ್ದೋ ಹುಳಾನೋ ಏನೋ ಬಿತ್ತು ಅಂದ್ಕೊಂಡು ಗಾಳಕ್ಕೆ ಬಾಯಿ ಹಾಕಿ ಸಿಕಾಕೋತಿದ್ವು. ನಾವು ಅದನ್ನ ಆಟ ಆಡ್ಸಿ ಎಳೆದು ಮೇಲೆಕ್ಕೆ ಹಾಕ್ಕೋತಾ ಇದ್ವಿ. ಇಲ್ಲಿ ಒಂದ್ಸಾರ್ತಿ ಸುಮಾರು 50 ಕೆಜಿ ಮೀನು ಗಾಳಕ್ಕೆ ಸಿಕ್ಕಿ ಎಸ್ಕೇಪ್ ಆಗಿತ್ತು” ಎಂದು ಹೇಳಿ ನಮ್ಮ ಕುತೂಹಲ ಕೆರಳಿಸಿದರು. ನಾವು ಕುತೂಹಲಭರಿತರಾಗಿ ಆ ಘಟನೆಯನ್ನು ವಿವರಿಸುವಂತೆ ಅವರನ್ನು ಕೇಳಿಕೊಂಡೆವು. ಅವರು ವಿವರಿಸುತ್ತಾ ಹೋದರು “ಒಂದ್ಸಾರಿ ನಾನು ತೇಜಸ್ವಿ ಮೀನು ಹಿಡಿಯೋಕೆ ಅಂತ ಬಂದ್ವಿ. ತೇಜಸ್ವಿ ಅವರ ಗಾಳ ರಾಡು ರೀಲು ಎಲ್ಲಾ ರೆಡಿ ಮಾಡ್ಕೊತಿದ್ರು. ನಾನು ನನ್ನ ಗಾಳ ರಾಡು ರೀಲು ಹೊರಗೆ ತೆಗೆದೆ.
ನಾರ್ಮಲಿ ನಾವು ಯೂಸ್ ಮಾಡೋದು 40MM ದಾರ. ಅದ್ರಲ್ಲೇ ಸುಮಾರು 30 ಕೆಜಿ ಮೀನಾದ್ರು ಹಿಡೀಬಹುದು. ಆದರೆ ಅವತ್ತು ನನ್ ತಲೆ ಕೆಟ್ಟೊತ್ತೊ ಏನೋ 60MM ದಾರ ತಗೊಂಡ್ ಹೋಗಿದ್ದೆ. ಆ ದಾರ ನೋಡಿದ್ದೇ ತೇಜಸ್ವಿ “ಏನಯ್ಯ ನೀನು ಇಷ್ಟು ದಪ್ಪ ದಾರ ತಂದಿದ್ದೀಯಲ್ಲ. ಒಳ್ಳೆ ಬಾವಿಹಗ್ಗ ಇದ್ದಂಗಿದೆ. ಥು, ನೀನ್ ನನ್ನತ್ರ ಮಾತ್ರ ಕೂರ್ಬೇಡ. ಅಮೇಲೆ ನನಗೂ ಮೀನು ಸಿಗಾದಿಲ್ಲ. ದೂರ ಹೋಗಿ ಕೂತ್ಕೊ” ಅಂತ ಬೈದ್ರು. ನಾನು ಎಲ್ಲಾ ಹೊತ್ಕೋಂಡ್ ಹೋಗಿ ದೂರ ಕೂತ್ಕೋಂಡ್ ಗಾಳ ನೀರಿಗೆ ಎಸೆದೆ ಅಷ್ಟೆ, ತೇಜಸ್ವಿ ಹೇಳಿದ ಹಾಗೆ ಆ ಬಾವಿ ನೀರು ಸೇದೋ ಹಗ್ಗ, ಗಾಳ ನೀರಿಗೆ ಬಿದ್ದ ಕೂಡ್ಲೇ ಕಬ್ಬಿಣದ ಥರ ಟೈಟ್ ಆಗೋಯ್ತು. ಈ ಫಿಶಿಂಗ್ ನಲ್ಲಿ ಒಂದು ಮೆಥಡ್ ಇದೆ. ಗಾಳಕ್ಕೆ ಮೀನು ಸಿಕ್ಕ ಕೂಡ್ಲೇ ದಾರ ಗಟ್ಟಿಯಾಗದಂಗೆ ರೀಲು ಲೂಸ್ ಮಾಡಿ ಬಿಡ್ಬೇಕು. ಹಾಗೆ ಬಿಟ್ಟು ಮೀನು ಸುಸ್ತಾದ ಮೇಲೆ ಅದನ್ನ ಸೋಲಿಸಿ ಏಳ್ಕೋಬೇಕು. ಆದ್ರೆ ಅವತ್ತು ನನ್ ಮೂಡ್ ಸರಿ ಇರ್ಲಿಲ್ಲ, ಹಂಗಾಗಿ ದಾರ ಗಟ್ಟಿ ಆದ್ರೂ ರೀಲ್ ಲೂಸ್ ಮಾಡೋದು ಮರೆತುಬಿಟ್ಟು ನೋಡ್ತಾ ಕೂತಿದ್ದೆ. ಬರ್ತಾ ಬರ್ತಾ ದಾರ ಸಿಕ್ಕಾಪಟ್ಟೆ ಟೈಟ್ ಆಗಿ ಆಗಿ ಒಂದು ಸಲ ತಪ್ ಅಂದು ಆ ದಾರ, ಸ್ಪ್ರಿಂಗು ಎಲ್ಲಾ ಬಂದು ಮುಖಕ್ಕೆ ರಪ್ ಅಂತ ಹೊಡೀತು. ಅದು ಮಿನಿಮಮ್ 50 ಕೆಜಿ ಆದ್ರೂ ಇರ್ಬೇಕು ಆ ಮೀನು. ಇಲ್ಲಾಂದ್ರೆ 60MM ದಾರ ಅಷ್ಟು ಸುಲಭವಾಗಿ ತುಂಡಾಗ್ತಿರ್ಲಿಲ್ಲ. ಅಮೇಲೆ ತೇಜಸ್ವಿ ಹತ್ರ ಅದಕ್ಕಷ್ಟು ಬೈಸಿಕೊಂಡೆ ಹಹ…” ಎಂದು ನಕ್ಕರು.
ಮತ್ತೊಂದು ಮರೆಯೊಕೆ ಸಾಧ್ಯನೇ ಆಗ್ದಿರೊ ಒಂದು ಘಟನೆ ಇದೆ. ಅವತ್ತಿನ ನನ್ನ ಪರಿಸ್ಥಿತಿ ನೆನೆಸ್ಕೊಂಡ್ರೆ ಈಗ್ಲೂ ನಗು ಬರುತ್ತೆ” ಎಂದು ಪೀಠಿಕೆ ಹಾಕಿ ಆ ಘಟನೆಯನ್ನು ವಿವರಿಸಲು ಪ್ರಾರಂಭಿಸಿದರು. “ಅವತ್ತು ನಾನು, ತೇಜಸ್ವಿ, ನಮ್ ಪ್ರದೀಪ, ಮತ್ತೆ ಮಂಜಪ್ಪ (ಫಿಶರೀಸ್ ಡಿಪಾರ್ಟ್ಮೆಂಟ್ ನವರು) ನಾಲ್ಕು ಜನ ಫಿಶಿಂಗಿಗೆ ಅಂತ ಈ ಜಾಗಕ್ಕೆ ಬಂದ್ವಿ. ಪ್ರದೀಪ್ ಆಗ್ತಾನೇ ಹೊಸದಾಗಿ ಫಿಶಿಂಗ್ ಕಲೀತಾ ಇದ್ರು. ಹಂಗಾಗಿ ಅವ್ರಿಗೆ ಪ್ರಾಬ್ಲಂ ಆದಾಗ ಹೇಗೆ ಹ್ಯಾಂಡಲ್ ಮಾಡ್ಬೇಕು ಅಂತ ಗೊತ್ತಾಗ್ತಿರ್ಲಿಲ್ಲ. ಏನಾದ್ರೂ ಸಮಸ್ಯೆ ಆದ್ರೆ ನಮ್ಮನ್ನ ಯಾರನಾದ್ರೂ ಕರೀತಿದ್ರು. ಹಾಗೇ ಅವತ್ತು ‘ಗಾಳಕ್ಕೆ ಏನೋ ಸಿಕಾಕೊಳ್ತು ಬಂದು ಬಿಡಿಸ್ರಿ’ ಅಂತ ನನ್ನನ್ನ ಕರೆದ್ರು. ನಾನು ಹೋದೆ. ಹೋಗುವಾಗ ನಾನು ಮಾಡಿದ ದೊಡ್ಡ ತಪ್ಪೇನು ಅಂದ್ರೆ ಗಾಳಾನ ನೀರಿಗೆ ಹಾಕಿ ಆ ರಾಡನ್ನ ಮರಳಿಗೆ ಚುಚ್ಚಿ ಹೋಗಿದ್ದು. ತೇಜಸ್ವಿ ಸಾವಿರ
ಸಲ ಹೇಳಿದ್ರು ’ಯಾವ್ದೇ ಕಾರಣಕ್ಕೂ ರಾಡನ್ನ ಹಾಗೆ ಮರಳಿಗೆ ಚುಚ್ಚಿ ಹೋಗ್ಬೇಡಿ’ ಅಂತ. ನಾವ್ಯಾರೂ ಅವರ ಮಾತು ಕಿವಿಗೆ ಹಾಕ್ಕೊಂಡೇ ಇರ್ಲಿಲ್ಲ. ನಾನು ಎದ್ದು ಪ್ರದೀಪ್ ಕರೆದ ಅಂತ ಆ ಕಡೆ ಹೋಗ್ತಾ ಇದೀನಿ ಈ ಕಡೆ ಮರಳಿಗೆ ಚುಚ್ಚಿದ್ದ ರಾಡಿಗೆ ಜೀವ ಬಂದಂಗೆ ನದಿ ಒಳಗಡೆಗೆ ಜಾರ್ಕೊಂಡ್ ಹೋಗ್ತಾ ಇದೆ. ಹಿಡ್ಕೊಳ್ಳೋಣ ಅಂತ ಓಡಿ ಬರೋವಷ್ಟರಲ್ಲಿ ಗಾಳ, ರಾಡು, ರೀಲು ಎಲ್ಲಾ ನದಿ ಪಾಲಾಗಿತ್ತು. ಆದ್ರೂ ಟ್ರೈ ಮಾಡೋಣ ಅಂತೇಳಿ ಬಟ್ಟೆ ಎಲ್ಲಾ ಬಿಚ್ಚಾಕಿ ನೀರೊಳಗಡೆ ಇಳಿದು ಸುತ್ತಾ ಕಾಲಲ್ಲಿ ತುಂಬಾ ಹೊತ್ತು ತಡಕಾಡಿದೆ. ಆದ್ರೆ ನನ್ನ ದುರಾದೃಷ್ಟ ಗಾಳ ಸಿಗಲೇ ಇಲ್ಲ. ಅಮೇಲೆ ನೀರಿಂದ ಮೇಲೆ ಬಂದು ಮರಳ ಮೇಲೆ ಮೈ ಒಣಗಿಸ್ತಾ ಕೂತಿದ್ದೆ. ಸ್ವಲ್ಪ ಹೊತ್ತಾದ್ಮೇಲೆ ತೇಜಸ್ವಿ ’ಏಯ್ ರಘು ಇದೆಂತದ್ದೊ ಸಿಕಾಕೊಂತು ಬಾ ನೋಡು’ಅಂತ ಕರೆದ್ರು. ಹೋಗಿ ನೋಡಿದ್ರೆ ಅವರ ಗಾಳಕ್ಕೆ ಕಳೆದುಹೋಗಿದ್ದ ನನ್ನ ಗಾಳ ರೀಲು ಎಲ್ಲಾ ಸಿಕಾಕೊಂಡಿತ್ತು. ನನಗೆ ನಿಧಿ ಸಿಕ್ಕಿದಷ್ಟೇ ಖುಷಿ ಆಗಿ ಎಲ್ಲಾ ಬಿಡಿಸಿ ತೆಕ್ಕೊಂಡೆ. ಆಗ ನೋಡ್ತೀನಿ ಗಾಳದ ತುದೀಲಿ ಒಂದು ದೊಡ್ಡ ಬಾಳೆ ಮೀನು!!! ನಾನು ಗಾಳ ಎಳೀತಿದ್ದಂಗೆ ಎಲ್ರೂ ಬೆಚ್ಚಿಬೀಳೋ ಹಾಗೆ ನೀರಿಂದ ಮೇಲಕ್ಕೆ ನೆಗೆದು ನೆಗೆದು ಸೀನ್ ಕ್ರಿಯೇಟ್ ಮಾಡ್ತಾ ಇತ್ತು. ತುಂಬಾ ದೊಡ್ಡ ಮೀನದು. ತೇಜಸ್ವಿ ಪ್ರದೀಪ್ ಮಂಜಪ್ಪ ಎಲ್ರೂ ‘ಬಿಡ್ಬೇಡ ಹಿಡಿ ಅದನ್ನ ಹಿಡಿ’ ಅಂತ ಕೂಗ್ತಿದ್ರು. ಆಮೇಲೆ ಅದನ್ನ ಸೆಣೆಸಿ ಸೋಲಿಸಿ ದಡಕ್ಕೆ ಎಳೆದು ಹಾಕ್ಕೊಂಡೆ. ಆಮೇಲೆ ನದೀಗಿಳಿದು ಗಾಳಹುಡುಕ್ತಿದ್ದಾಗ ನನ್ನದು ಒಂದು ಕಾಲಿನ ಚಪ್ಪಲೀನೂ ಕಳೆದುಹೋಗಿತ್ತು. ಅದು ಮಂಜಪ್ಪನವರ ಗಾಳಕ್ಕೆ ಸಿಕ್ಕಿ ಅದು ಸಿಕ್ತು. ಒಟ್ನಲ್ಲಿ ಅವತ್ತು ಎಲ್ಲ ಒಟ್ಟಿಗೆ ಕಳೆದುಹೋಗಿ ಎಲ್ಲಾ ಒಟ್ಟಿಗೇ ಸಿಕ್ತು. ಅದಂತೂ ನಾನು ಯಾವತ್ತೂ ಮರೆಯೋಕೆ ಸಾಧ್ಯನೇ ಇಲ್ಲ” ಎಂದು ಅಂದಿನ ಘಟನೆಯನ್ನು ಮೆಲುಕುಹಾಕುತ್ತಾ ಜೋರಾಗಿ ನಕ್ಕರು.
ನಂತರ ಅವರು ತೇಜಸ್ವಿಯವರ ’ಏರೋಪ್ಲೇನ್ ಚಿಟ್ಟೆ’ ಕಥಾಸಂಕಲನದಲ್ಲಿ ಬರುವ ‘ನಾವು ಕೊಂದ ಹಕ್ಕಿ’ ಎಂಬ ಕಥೆಗೆ ಸ್ಪೂರ್ತಿಯಾದ ಘಟನೆ ನಡೆದಿದ್ದೂ ಇದೇ ಜಾಗದಲ್ಲಿ ಎಂದು ಆ ಜಾಗವನ್ನು ತೋರಿಸಿದರು. ’ಈಗ ಫಿಶಿಂಗ್ ಮಾಡೋದಿಲ್ವ..?’ ನಾನು ಅವರನ್ನು ಪ್ರಶ್ನಿಸಿದೆ. ಅವರು ಮೆಲ್ಲಗೆ ನಗುತ್ತಾ ನಿಧಾನವಾಗಿ ಉತ್ತರಿಸಲು ಪ್ರಾರಂಭಿಸಿದರು, ’…ಮಾಡ್ಬೇಕು ಅಂತ ಆಸೆ ಇದೆ. ಆದ್ರೆ ಸರಿಯಾದ ಕಂಪನಿ ಇಲ್ಲ. ಮೊದ್ಲಾದ್ರೆ ತೇಜಸ್ವಿ ಇದ್ರು. ಈಗ….(ಮೌನ)ಬಾಪು ದಿನೇಶ್ ಇರೋದು ಬಣಕಲ್ ನಲ್ಲಿ, ನಾನು ಇಲ್ಲಿ. ಇನ್ನು ಪ್ರದೀಪು ಬ್ಯುಸಿ. ಒಳ್ಳೆ ಕಂಪನಿ ಇಲ್ಲ ಅಂದ್ರೆ ಈ ಹಾಬಿ ಒಂಥರ ಅನ್ಸುತ್ತೆ. ಅದಕ್ಕೆ ಸುಮ್ನಾಗ್ಬಿಟ್ಟಿದ್ದೀನಿ. ಅವತ್ತು ಬಳಸ್ತಾ ಇದ್ದ ಗಾಳ ರಾಡು ರೀಲು ಎಲ್ಲಾ ಮನೇಲಿ ಹಾಗೇ ಇಟ್ಟಿದ್ದೀನಿ. ಅಮೇಲೆ ಈಗೆಲ್ಲಾ ಮೊದಲಿನ ಥರ ಇಲ್ವೇ ಇಲ್ಲ ವಾತವರಣ. ಆಗಿದ್ದ ಗುಂಡಿಗಳೆಲ್ಲಾ ಈಗ ಒಂದು ಇಲ್ದಂಗೆ ಮುಚ್ಚಿಹೋಗಿವೆ. ಗೋರೂರು ಡ್ಯಾಂ ಎಫೆಕ್ಟ್ ಅದು. ಅಮೇಲೆ ಇಲ್ಲಿ ನಡೀತಿರೊ ಅನಾಚಾರಗಳು ಯಾವತರ ಇದೆ ಅಂದ್ರೆ ಹಬ್ಬ ಹರಿದಿನ ಬಂತು ಅಂದ್ರೆ ಮೈಲುತುತ್ತ ಹಾಕಿ ಮೀನು ಹಿಡಿಯೋರು, ಕಾರೆಕಾಯಿ ಹಾಕಿ ಮೀನು ಹಿಡಿಯೋರ ಕಾಟ ವಿಪರೀತ ಆಗ್ಬಿಡುತ್ತೆ. ಅವರಿಗೆ ಬೇಕಾಗಿರೋದು ಒಂದೋ ಎರಡೋ ಮೀನು. ಆದ್ರೆ ಮೈಲುತುತ್ತ ಹಾಕ್ತು ಅಂತಂದ್ರೆ ಇಲ್ಲಿಂದ ಹಿಡಿದು ಗೊರೂರು ಡ್ಯಾಂವರೆಗೂ ಮೀನುಗಳು ಸಾಯ್ತಾ ಹೋಗ್ತವೆ. ಯಾರೂ ಕೇಳೊರಿಲ್ದಂಗಾಗಿದೆ ಈಗ. ಇದನ್ನ ಬಿಡಿ ಅಲ್ಲಿ ಶಿರಾಡಿ ಹತ್ರ ಕೆಂಪುಹೊಳೆ ಇದೆಯಲ್ಲ ಅದಂತೂ ಒಂದು ಕಾಲಕ್ಕೆ ಮಹಶೀರ್ ಮೀನುಗಳ ಖಜಾನೆ ಆಗಿತ್ತು. ಅವು ಆ ಕೆಂಪುಹೊಳೆನಲ್ಲಿ ಯಥೇಚ್ಚವಾಗಿದಾವೆ ಅಂತ ಅಲ್ಲಿ ಕಾಫಿ ತೋಟ ಮಾಡಿದ್ದ ಯೂರೋಪಿಯನ್ಸ್ ಬರೆದಿಟ್ಟಿದ್ದಾರೆ. ಈಗ ಹೋಗಿ ನೋಡಿ….ಸ್ಯಾಂಪಲ್ ಗೆ ಬೇಕು ಅಂದ್ರು ಒಂದು ಮೀನು ಸಿಗೋದಿಲ್ಲ.
ಈ ಡೈನಾಮೈಟ್ ಲಾರಿಯವರು ಡೈನಾಮೈಟ್ ಹಾಕಿ ಸಾವಿರಾರು ಮೀನು ಸಾಯಿಸಿ ಹಾಳು ಮಾಡಿ ಇಟ್ಟಿದ್ದಾರೆ. ಅಲ್ಲೇ ಪಕ್ಕದಲ್ಲೇ ನಿರೋಧ್ ಪ್ಯಾಕೆಟ್ಟುಗಳು ರಾಶಿ ರಾಶಿ ಬಿದ್ದಿರ್ತಾವೆ. ಹೈವೇ ಕ್ವೀನ್ಸ್ ಪ್ರಭಾವ ಅದು. ಬಿಡಿ ಯಾರಿದಾರೆ ಕೇಳಕ್ಕೆ…..” ಎಂದು ಅವರು ತುಸು ಗಂಭೀರವಾದರು. ಪಶ್ಚಿಮದಲ್ಲಿ ಸೂರ್ಯ ಇನ್ನೇನು ಮುಳುಗುವ ಸೂಚನೆ ಕೊಡುತ್ತಿದ್ದ. ಸಮಯ ಹತ್ತಿರತ್ತಿರ 7 ಗಂಟೆ ಆಗಿತ್ತು. ಸದ್ದೇ ಆಗದಂತೆ ತಣ್ಣಗೆ ಹರಿಯುತ್ತಿದ್ದ ಹೇಮೆಯ ಪಾತ್ರದಿಂದ ಹೊರಬರುತ್ತಾ ದಾರಿಯಲ್ಲಿ ಹೇಮಂತ “ಸಾರ್ ನಮಗೂ ಫಿಶಿಂಗ್ ಮಾಡ್ಬೇಕು ಅಂತ ಆಸೆ ಇದೆ. ಆದ್ರೆ ಅದರ ಬಗ್ಗೆ ಎಬಿಸಿಡಿನೂ ಗೊತ್ತಿಲ್ಲ. ನಮಗೆ ಫಿಶಿಂಗ್ ಹೇಳ್ಕೊಡ್ತೀರ…? ಎಂದು ಅವರನ್ನು ಕೇಳಿದ. ಅವರು ಅಷ್ಟೇ ಖುಷಿಯಿಂದ ’ ಓಹೋ ಧಾರಾಳವಾಗಿ ಮಾರಾಯ್ರ… ನನಗ್ಗೊತ್ತಿರೋದನ್ನ ಹೇಳ್ಕೊಡ್ತೀನಿ. ಅದಕ್ಕೇನಂತೆ. ಫೋನ್ ಮಾಡಿ, ಬೆಂಗಳೂರಿಗೆ ಬಂದಾಗ ಚೆನ್ನಾಗಿರೋದು ರಾಡು ರೀಲು ಗಾಳ ಒಂದು ಸೆಟ್ ಕೊಡುಸ್ತೀನಿ. ಗೊತ್ತಿರೋರಿದಾರೆ. ಆಮೇಲೆ ಬನ್ನಿ ಹೇಮಾವತಿಗೆ. ಮಿಕ್ಕಿದ್ದು ನಾನು ನೋಡ್ಕೋತೀನಿ..” ಎಂದು ಅವನಿಗೆ ಭರವಸೆ ಕೊಟ್ಟರು. ಆದರೆ ಅದೆಲ್ಲಾ ಮುಗಿದು ಒಂದೂವರೆ ವರ್ಷವಾಗುತ್ತಾ ಬಂತು. ಹೇಮಂತನ ಬಳಿ ಇದೂವರೆಗೂ ಮೀನು ಹಿಡಿಯುವ ಯಾವ ಉಪಕರಣವನ್ನೂ ನಾನು ನೋಡಿಲ್ಲ. ಅವನು ಸಿಕ್ಕಿದಾಗಲೆಲ್ಲಾ ’ಫಿಶಿಂಗ್ ರಾಡ್ ಕೊಡ್ಸಿ ಮೀನ್ ಹಿಡಿಬೇಕು ಅಂತಿದ್ಯಲ್ಲೊ. ತೆಗೆಸ್ಕೊಂಡ್ಯ ರಘು ಸರ್ ಹತ್ರ’ ಎಂದು ಅವನ ಕಾಲೆಳೆದು ಮಜಾ ತೆಗೆದುಕೊಳ್ಳುತ್ತಿರುತ್ತೇನೆ. ’ಏಯ್ ಮುಚ್ಕೊಂಡಿರಪ್ಪ ಸಾಕು …ನಮ್ ಕಷ್ಟ ನಮಗೆ, ಕೆರ್ಕೊಳ್ಳಕ್ಕೂ ಪುರುಸೊತ್ತಿಲ್ಲ…ಅಂತಾದ್ರಲ್ಲಿ…” ಎಂದು ಅವನು ನನ್ನ ಬಾಯಿ ಮುಚ್ಚಿಸುತ್ತಲೇ ಬರುತ್ತಿದ್ದಾನೆ.
(ಮುಂದುವರೆಯುವುದು)
 
ಗಾಂಧಿನಗರ, ಜಯನಗರ ಹಾಗೂ ಕೋರಮಂಗಲದ ಸಪ್ನ ಪುಸ್ತಕ ಮಳಿಗೆಗಳಲ್ಲಿ, ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ರೇಸ್ ಕೋರ್ಸ್ ಬಳಿಯ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ “ಮತ್ತೆ ಮತ್ತೆ ತೇಜಸ್ವಿ” ಸಾಕ್ಷ್ಯಚಿತ್ರದ ಡಿವಿಡಿಗಳು ದೊರೆಯುತ್ತವೆ.
ಹೆಚ್ಚಿನ ಮಾಹಿತಿಗಾಗಿ ಟೋಟಲ್ ಕನ್ನಡದ ಲಕ್ಷ್ಮಿಕಾಂತ್ (ಡಿವಿಡಿ ವಿತರಣೆಯ ಹಕ್ಕುದಾರರು) ರವರನ್ನು ಸಂಪರ್ಕಿಸಿ. Mobile No: 9986222402

‍ಲೇಖಕರು G

October 27, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Ravi Kumara B.Gowda

    ಪರಮೇಶ್ವರ್ ಸೂಪೆರ್ ಬಿಡಪ್ಪಾ! ನಿಮ್ಮ ಬರವಣಿಗಾಶೈಲಿ ತೇಜಸ್ವಿಯವರನ್ನ ವಿಸುಲೈಸ್ ಮಾಡಿಸ್ಕೊಂಡು ಓದಿಸ್ಕೊಂಡ್ ಹೋಗ್ತಿದೆ, ಮುಂದುವರೆಸಿ….

    ಪ್ರತಿಕ್ರಿಯೆ
  2. g.n.nagaraj

    ಚೆನ್ನಾಗಿದೆ. ಅವರ ಪ್ರಿಂಟಿಂಗ್ ಸಾಹಸ,ಕಂಪ್ಯೂಟರ್ ಸಾಹಸ, ಫಿಶಿಂಗ್ ಸಾಹಸಗಳು ಇನ್ನೂ ವಿವರವಾಗಿ ಒಂದೊಂದು ವಾರದ ಸಂಚಿಕೆಯನ್ನೇ ಆವರಿಸಬಹುದಿತ್ತು ಎನಿಸುತ್ತಿದೆ.
    ಈ ಕಂಪ್ಯೂಟರ್ ನಲ್ಲಿ ಡಿಟಿಪಿ ಮಾಡಲು ನಾವು ಕೂಡ ಮಾಡಿದ ಮೊದಲ ಸಾಹಸಗಳು ನೆನಪಾಗುತ್ತಿವೆ. ನಾವು ಕೂಡ ಹೀಗೆ ಒಂದು ಎಕ್ಸ್ ಟಿ ವರ್ಷನ್ ನಿಂದ ಆರಂಭಿಸಿ 286, 386 ಹಂತಗಳನ್ನು ದಾಟಿ 20 ಎಮ್ ಬಿ, 40 ಎಂ ಬಿ ಹೀಗೆ ನೆನಪಿ ಶಕ್ತಿಯನ್ನು ದಾಟಿ ಬಂದದ್ದರ ಕನ್ನಡ ಲಿಪಿಯ ಸಾಫ್ಟ್ ವೇರ್ ಗಾಗಿ ಒದ್ದಾಡಿದ್ದರ ನೆನಪಾಗುತ್ತಿದೆ.

    ಪ್ರತಿಕ್ರಿಯೆ
  3. Parameshwar

    ನಾಗರಾಜ್ ಸರ್, ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು . ನೀವು ಹೇಳಿದ ಹಾಗೆ ವಿಷಯವನ್ನು ವಿಸ್ತರಿಸಬಹುದಿತ್ತು. ಆದರೆ ಅತಿಯಾಗಬಹುದೆನ್ನಿಸಿ ಸಂಕ್ಷಿಪ್ತಗೊಳಿಸಿದ್ದೇನೆ.
    ಮತ್ತು ಮುಂದೆ ಬರೆಯಬೇಕಾದ ವಿಷಯಗಳು ಇನ್ನೂ ತುಂಬಾ ಇದ್ದಾವೆ ಹಾಗಾಗಿ…

    ಪ್ರತಿಕ್ರಿಯೆ
  4. Parameshwar

    ರವಿಕುಮಾರ್ ರವರೇ ಧನ್ಯವಾದಗಳು ಓದಿ ಪ್ರತಿಕ್ರಿಯಿಸಿದ್ದಕ್ಕಾಗಿ

    ಪ್ರತಿಕ್ರಿಯೆ
  5. amardeep.p.s.

    ಪರಮೇಶ್ವರ್ ಸರ್, ತೇಜಸ್ವಿ ಅವರ ಕುರಿತ ಲೇಖನಗಳು ಸಾಕ್ಷ್ಯ ಚಿತ್ರದಷ್ಟೇ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ …. ಇಷ್ಟವಾಯಿತು … ಅಭಿನಂದನೆಗಳು ..

    ಪ್ರತಿಕ್ರಿಯೆ
  6. SAVITHA.V

    NIMMA BARAVANIGE CHENNAGIDE. NANU VIDEO NODIDAGA ADA ANUBHAVA NIMMA LEKHANA ODUVAGALU ADE BHAVANEYNFNU UNTU MADUTFTDE

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: