ಭಾಗ ೦೩
(ಭಾಗ ೨ ಓದಲು ಇಲ್ಲಿ ಕ್ಲಿಕ್ಕಿಸಿ)
ಜೂನ್ ೨೩, ೨೦೧೨ ಶನಿವಾರ, ಬೆಳಗಿನ ಜಾವ ೪ ಗಂಟೆ- ನಿದ್ರೆ ಮಂಪರಿನಲ್ಲಿದ್ದೆ. ಯಾರೋ ಒಂದಷ್ಟು ಜನ ನನ್ನ ಸುತ್ತ ಸೇರಿಕೊಂಡು ಎನನ್ನೋ ಎಳೆದಾಡುತ್ತಾ ಗಿಜಿ ಗಿಜಿ ಸದ್ದು ಮಾಡುತ್ತಿರುವಂತೆ ನನಗೆ ಭಾಸವಾಗುತ್ತಿತ್ತು. ಬಹುಶಃ ಕನಸಿರಬಹುದೆಂದುಕೊಂಡಿದ್ದೆ. ಅಷ್ಟರಲ್ಲಿ ಯಾವುದೋ ಗಡಸು ಧ್ವನಿಯೊಂದು “ಮೂಡಿಗೆರೆ, ಮೂಡಿಗೆರೆ…ಇಳ್ಕೊಳ್ರಿ…ಮೂಡಿಗೆರೆ…” ಎಂದು ತೀರ ನನ್ನ ಹತ್ತಿರದಲ್ಲೇ ಕಿರುಚಿದಂತಾಯಿತು. ನಿದ್ರೆಯ ಮಂಪರಿನಿಂದ ಝಗ್ಗನೆದ್ದು ಅಷ್ಟು ಕರ್ಕಶವಾಗಿ ಕಿರುಚಿ ಸಕ್ಕರೆ ನಿದ್ರೆ ಹಾಳು ಮಾಡಿದ ಬಸ್ ಕಂಡಕ್ಟರನನ್ನು ಮನಸ್ಸಿನಲ್ಲೇ ಬಾಯಿಗೆ ಬಂದ ಹಾಗೆ ಬೈದುಕೊಂಡು ಆಕಳಿಸುತ್ತಾ ಸುತ್ತಲೂ ಒಮ್ಮೆ ನೋಡಿದೆ. ಮೂಡಿಗೆರೆಯ ಪೆಟ್ರೋಲ್ ಬಂಕ್ ಎದುರಿಗಿನ ಸರ್ಕಲ್ ನಲ್ಲಿಬಸ್ಸು ನಿಂತಿತ್ತು!!
ಬಸ್ಸಿನಲ್ಲಿದ್ದ ಕೆಲವರು ತಮ್ಮ ತಮ್ಮ ಬ್ಯಾಗು, ಚೀಲ ಇನ್ನಿತರೆ ಲಗೇಜುಗಳೊಂದಿಗೆ ಬಸ್ಸಿನಿಂದ ಇಳಿಯಲು ಅವಸರಿಸುತ್ತಿದ್ದರೆ ಮತ್ತು ಕೆಲವರು ತಾವು ಕುಳಿತಿದ್ದ ಸೀಟುಗಳ ಅಡಿ ತೂರಿ ದೂರ ಸರಿದು ಹೋಗಿದ್ದ ತಮ್ಮ ತಮ್ಮ ಪಾದರಕ್ಷೆಗಳನ್ನು ಹುಡುಕಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದರು. ಅಲ್ಲಿಯವರೆಗೂ ಅಸ್ಪಷ್ಟವಾಗಿ, ಎಲ್ಲೋ ದೂರದಲ್ಲಿ ಎಂಬಂತೆ ಕೇಳಿಸುತ್ತಿದ್ದ ಗುಂಪಿನ ಧ್ವನಿ “ಕನಸಿನಲ್ಲಿ ಕೇಳಿದ್ದಲ್ಲ” ಎಂದು ನನಗಾಗ ಖಾತ್ರಿಯಾಯಿತು. ಬಲಕ್ಕೆ ಹೊರಳಿ ನೋಡಿದೆ. ಹೇಮಂತ ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತಿದ್ದವನು ಹಾಗೆ ಮುಂದಿನ ಸೀಟಿಗೆ ತಲೆಕೊಟ್ಟು ಅಷ್ಟು ಚಿಕ್ಕ ಜಾಗದಲ್ಲಿ ತುಂಬಾ ಕಂಫ಼ರ್ಟಬಲ್ಲಾಗಿ ಮಲಗಿ ನಿದ್ರೆ ಹೊಡೀತಿದ್ದ. “ಹೆವಿ ಟ್ಯಾಲೆಂಟೆಡ್ ಇವನು” ಎಂದುಕೊಳ್ಳುತ್ತಾ ನನ್ನ ಬ್ಯಾಗು ಕೈಗೆ ತೆಗೆದುಕೊಂಡು ಅವನನ್ನು ಎಬ್ಬಿಸಿದೆ.
ಹೇಮಂತ ಕಣ್ಣು ಬಿಟ್ಟವನೆ ಸುತ್ತಾ ನೋಡಿ “ಎನೋ ಬಸ್ಸೆಲ್ಲಾ ಖಾಲಿ, ಯಾರು ಇಲ್ಲ” ಎಂದು ಪ್ರಶ್ನಿಸಿದ. “ಇದೇ ಲಾಸ್ಟ್ ಸ್ಟಾಪು, ಎಲ್ಲಾ ಇಳಿದು ಹೋದ್ರು, ನಾವೇಲಾಸ್ಟು, ಇಳಿಬೇಕು ಬಾ” ಎಂದೆ. “ಅಂದ್ರೆ ಮೂಡಿಗೆರೆ ಬಂದು ಬಿಡ್ತಾ?” ಎಂದು ಮತ್ತೊಂದು ಪ್ರಶ್ನೆ ಹಾಕಿದ. “ಹೌದು, ಇದೇ ಮೂಡಿಗೆರೆ, ಬಾ ಇಳಿಯೋಣ” ಎಂದು ಹೇಳಿ ಕೈಲಿದ್ದ ಬ್ಯಾಗನ್ನು ಹೆಗಲಿಗೇರಿಸಿ ಬಸ್ಸಿಳಿದೆ. ನಿದ್ರೆಗಣ್ಣಿನಲ್ಲಿದ್ದ ಅವನು ತಡಬಡಾಯಿಸಿಕೊಂಡು ಬ್ಯಾಗು ಎತ್ತಿಕೊಂಡು ಕುಡಿದವನ ಹಾಗೆ ಸಣ್ಣಗೆ ತೂರಾಡಿಕೊಂಡು ನನ್ನ ಹಿಂದೆಯೇ ಬಸ್ ಇಳಿದ.
ಮೂಡಿಗೆರೆ ಊರಿನ ಮಧ್ಯದ ಸರ್ಕಲ್ ನ ಮಧ್ಯದಲ್ಲಿರುವ ದೊಡ್ಡ ಬೀದಿ ದೀಪದ ಕೆಳಗೆ ನಾವು ಬೆಂಗಳೂರಿನಿಂದ ಪ್ರಯಾಣಿಸಿದ್ದ ಕೆ ಎಸ್ ಅರ್ ಟಿ ಸಿ ಬಸ್ಸು ನಿಂತಿತ್ತು. ಸುತ್ತಲೂ ದಟ್ಟವಾಗಿ ಮಂಜು ಮುಸುಕಿದ್ದರಿಂದ ಒಂದು ನೂರು ಮೀಟರಿನ ಸುತ್ತಲಿನ ಮೂಡಿಗೆರೆಯಷ್ಟೇ ನಮಗೆ ಕಾಣಿಸುತ್ತಿತ್ತು. “ಜೂನ್ ತಿಂಗಳು ಎಂದರೆ ಮಳೆಗಾಲದ ಸಮಯ. ಆದರೆ ಇಲ್ಲಿ ಮಳೆಗಾಲದ ಸಮಯದಲ್ಲಿ ಹೀಗೆ ಚಳಿಗಾಲದ ಹಾಗೆ ಮಂಜು ಕೌಚಿಕೊಂಡಿದೆಯಲ್ಲ! ಯಾಕಿರಬಹುದು?” ಎಂಬ ಪ್ರಶ್ನೆ ಆ ಕ್ಷಣದಲ್ಲಿ ನನ್ನ ಮನಸಿನಲ್ಲಿ ಹಾಯ್ದು ಹೋಯಿತು. ಜೊತೆಗೆ ಮೈಕೊರೆಯುವ ಚಳಿ ಬೇರೆ.
ನಾವಿಬ್ಬರು ನಮ್ಮ ನಮ್ಮ ಜರ್ಕಿನ್ನುಗಳನ್ನು ಎಷ್ಟು ಸಾಧ್ಯವೋ ಅಷ್ಟು ಬಿಗಿ ಮಾಡಿಕೊಳ್ಳುತ್ತಿರಬೇಕಾದರೆ ಆ ಸರ್ಕಲ್ ನ ಬೀದಿ ದೀಪದ ಪಕ್ಕಕಿದ್ದ ಪುಟ್ಟ ಹೋಟೆಲೊಂದು ಕಾಣಿಸಿತು. ನಾವು ಟೀ ಕುಡಿಯಬೇಕು ಎಂದುಕೊಳ್ಳುವಷ್ಟರಲ್ಲೆ ನಮ್ಮಿಬ್ಬರ ಕಾಲುಗಳು ತಾವೇ ಸ್ವಯಂ ನಿರ್ಧರಿಸಿದವಂತೆ ಆ ಹೋಟೆಲಿನೆಡೆಗೆ ಹೆಜ್ಜೆ ಹಾಕತೊಡಗಿದವು. ಬೇರೆ ದಾರಿ ಕಾಣದೆ ನಮ್ಮ ನಮ್ಮ ಕಾಲುಗಳ ಬಯಕೆಯಂತೆ ಹೋಟೆಲ್ ತಲುಪಿ “ಎರಡು ಖಡಕ್ ಚಾಯ್” ಆರ್ಡರ್ ಮಾಡಿ ಅಲ್ಲಿದ್ದ ಮರದ ಬಾಕ್ಸ್ ಮೇಲೆ ಕುಳಿತೆವು.ಅದೇ ಬಸ್ಸಿನಲ್ಲಿ ಬಂದ ಹಲವು ಪ್ರಯಾಣಿಕರು ಅದಾಗಲೇ ಆ ಹೋಟೆಲ್ ಸೇರಿ ಬಿಸಿ ಬಿಸಿ ಚಹಾ ಹೀರುತ್ತಾ ಚಳಿಯಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. 
ಅಷ್ಟರಲ್ಲಿ ನಮ್ಮ ಎದುರಿನಿಂದ ಒಂದು ಪರಿಚಿತ ಧ್ವನಿಯೊಂದು ನಮ್ಮನ್ನುದ್ದೇಶಿಸಿ ಮಾತನಾಡತೊಡಗಿತು, “ಇಲ್ಲಿಂದ ಈ ರೋಡ್ ಹೋದ ಹಾಗೆ ಮುಂದೆ ಹೋಗ್ತಾ ಇದ್ರೆ ಹ್ಯಾಂಡ್ ಪೋಸ್ಟ್ ಸಿಗುತ್ತೆ. ಹ್ಯಾಂಡ್ ಪೋಸ್ಟ್ ಪಕ್ಕದ್ದೇ ಅವರ ಮನೆ, ಒಂದು ಕಿಲೋಮೀಟರ್ ಆಗಬಹುದು ಅಷ್ಟೆ”!!. ಅದು ನಾವು ಬೆಂಗಳೂರಿನಿಂದ ಮೂಡಿಗೆರೆಗೆ ಪ್ರಯಾಣ ಮಾಡಿದ ಕೆ ಎಸ್ ಅರ್ ಟಿ ಸಿ ಬಸ್ಸಿನ ಕಂಡಕ್ಟರ್ ರ ಧ್ವನಿ. ಆ ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರು ನಾವು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್ಸು ಹತ್ತುವ ಮೊದಲೇ ನಮಗೆ ಆತ್ಮೀಯರಾಗಿಬಿಟ್ಟಿದ್ದರು. ಅದಕ್ಕೆ ಕಾರಣ ತೇಜಸ್ವಿ!!!
ಹೌದು..! ಅದು ನಡೆದದ್ದು ಹೀಗೆ, ಶುಕ್ರವಾರ ರಾತ್ರಿ ಸುಮಾರು ೮ ಗಂಟೆಗೆ ನಾವಿಬ್ಬರು ಮೆಜೆಸ್ಟಿಕ್ ನ ಕೆ ಎಸ್ ಅರ್ ಟಿ ಸಿ ಬಸ್ ನಿಲ್ದಾಣದ ಮೂಡಿಗೆರೆ ಕಡೆ ಹೋಗುವ ಬಸ್ಸಿನ ಪ್ಲಾಟ್ ಫ಼ಾರ್ಮ್ ತಲುಪಿಕೊಂಡಿದ್ದೆವು. ಪ್ಲಾಟ್ ಫ಼ಾರ್ಮಿನಲ್ಲಿ ಮೂಡಿಗೆರೆ ಬೋರ್ಡ್ ಇದ್ದ ಬಸ್ಸೊಂದು ನಿಂತಿತ್ತು, ಆದರೆ ಸೀಟುಗಳೆಲ್ಲ ಖಾಲಿಯಿದ್ದವು. ಒಮ್ಮೆ ಕೇಳಿ ಕನ್ಫ಼ರ್ಮ್ ಮಾಡಿಕೊಳ್ಳೊಣವೆಂದುಕೊಂಡು ನಾವಿಬ್ಬರು ಹೋಗಿ ಬಸ್ಸಿನ ಬಳಿಯೇ ನಿಂತಿದ್ದ ಕಂಡಕ್ಟರ್ ರನ್ನು “ಇದು ಮೂಡಿಗೆರೆಗೆ ಹೋಗುವ ಬಸ್ಸಾ? ಎಷ್ಟೊತ್ತಿಗೆ ಹೊರಡುತ್ತದೆ? ಎಂದೆಲ್ಲ ಪ್ರಶ್ನಿಸಿ ಮೂಡಿಗೆರೆಗೆ ಹೋಗುವ ಬಸ್ಸು ಇದೇ ಎಂದು ಖಚಿತಪಡಿಸಿಕೊಂಡೆವು. ಬಸ್ಸು ೧೦.೩೦ ಕ್ಕೆ ಹೊರಡಲಿತ್ತು. ಅಲ್ಲಿಯವರೆಗೂ ಏನು ಮಾಡುವುದೆಂದು ತೋಚದೆ ಕಂಡಕ್ಟರ್ ಸಾಹೇಬರ ಬಳಿ ಮೂಡಿಗೆರೆಯ ಬಗ್ಗೆ ವಿಚಾರಿಸುತ್ತಾ ನಿಂತಿದ್ದೆವು. ತೆಳ್ಳಗೆ ಕಟ್ಟುಮಸ್ತಾಗಿದ್ದ ಮಧ್ಯ ವಯಸ್ಸಿನ ಆ ಕಂಡಕ್ಟರ್ ಸಾಹೇಬರು ನಮ್ಮೆಲ್ಲ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುತ್ತಿದ್ದರು. ನಾವು ಅಷ್ಟೆಲ್ಲಾ ಪ್ರಶ್ನೆ ಕೇಳುತ್ತಿದ್ದರಿಂದ ಸಹಜವಾಗಿಯೇ ಅವರು ನಮ್ಮನ್ನು ಮೂಡಿಗೆರೆಗೆ ಹೋಗುತ್ತಿರುವ ಉದ್ದೇಶ ಕೇಳಿದರು. ನಾನು “ಪೂರ್ಣಚಂದ್ರ ತೇಜಸ್ವಿ ಅಂತ ಆ ಊರಿನಲ್ಲಿ ಒಬ್ಬರು ಇದ್ದರಲ್ಲ ಅವರ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡ್ತಿದ್ದೀವಿ. ಅದರ ರಿಸರ್ಚ್ ವರ್ಕಿಗೆ ಹೋಗ್ತಿದ್ದೀವಿ” ಎಂದು ಹೇಳಿದೆ. ಕಂಡಕ್ಟರ್ ಸಾಹೇಬ್ರು ತಕ್ಷಣ “ಯಾರು ತೇಜಸ್ವಿಯ? ಗೊತ್ತು ನಂಗೆಅವರು” ಎಂದರು. “ಅವ್ರು ಗೊತ್ತ ನಿಮ್ಗೆ” ಹ್ಯಾಗೆ? ಹೇಮಂತ ಆಶ್ಚರ್ಯಭರಿತನಾಗಿ ಕೇಳಿದ. “ನಾನು ಮೂಡಿಗೆರೆಯವನೆ, ಅವ್ರು ಚೆನ್ನಾಗಿ ಗೊತ್ತು ನನಗೆ. ದಿನಾ ಪೇಟೆಗೆ ಸ್ಕೂಟ್ರಲ್ಲಿ ಬರೋರು. ನಾನೇನಾದ್ರು ಕಾಣಿಸಿದರೆ ದೂರದಿಂದಲೇ ಹಿಂಗೆ ಕೈಎತ್ತಿ ಹಲೊ ಹೇಳೋರು. ಆದ್ರೆ ಮಾತು ತುಂಬಾ ಕಡಿಮೆ ಮಾರಾಯ್ರೆ”! ಎಂದು ಕೈ ಎತ್ತಿ ಅಭಿನಯಿಸಿ ತೋರಿಸಿ ಹೇಳಿದರು. ಜೊತೆಗೆ ಅಲ್ಲೇ ಇದ್ದ ಡ್ರೈವರ್ ಸಾಹೇಬರನ್ನು ಕರೆದು ನಮ್ಮ ಬಗ್ಗೆ ಹೇಳಿಯೇಬಿಟ್ಟರು. ಡ್ರೈವರ್ ಸಾಹೇಬರು ಹೆಚ್ಚೇನು ಪ್ರತಿಕ್ರಿಯಿಸದೆ “ಅಲ್ಲೇ ಹ್ಯಾಂಡ್ ಪೋಸ್ಟ್ ನಲ್ಲೇ ಇರೋದು” ಎಂದಷ್ಟೇ ಹೇಳಿ ಸುಮ್ಮನಾದರು.

ನಮ್ಮಿಬ್ಬರಿಗೂ ಆಶ್ಚರ್ಯ ಜೊತೆಗೆ ಖುಷಿ! ಮೂಡಿಗೆರೆಯಿಂದ ಶುರುವಾಗಬೇಕಿದ್ದ ತೇಜಸ್ವಿ ಬಗೆಗಿನ ನಮ್ಮ ಬೆಂಗಳೂರಿನಿಂದಲೇ ಶುರುವಾಯಿತಲ್ಲ ಎಂದು. ಹೀಗೆ ಪ್ರಯಾಣಕ್ಕೆ ಮೊದಲೇ ಪ್ರಾರಂಭವಾಯಿತು ತೇಜಸ್ವಿ ಕುರಿತ ನಮ್ಮ ರಿಸರ್ಚ್ ವರ್ಕು. ಹಾಗೆ ಬಸ್ಸು ಹತ್ತುವ ಮೊದಲೇ ಆ ಬಸ್ಸಿನ ಕಂಡಕ್ಟರ್ ಮತ್ತು ಡ್ರೈವರ್ ಇಬ್ಬರನ್ನು ನಮಗೆ ಹತ್ತಿರದವರನ್ನಾಗಿ ಮಾಡಿದ್ದು ತೇಜಸ್ವಿ! ಹಾಗಾಗಿ ಮೂಡಿಗೆರೆಯ ಆ ಪುಟ್ಟ ಹೋಟೆಲಿನಲ್ಲಿ ಕುಳಿತು ಚಹಾ ಕುಡಿಯುತ್ತಿದ್ದ ನಮಗೆ ಆ ಕಂಡಕ್ಟರ್ ಸಾಹೇಬ್ರು ತೇಜಸ್ವಿಯವರ “ನಿರುತ್ತರ” ತೋಟದ ದಾರಿ ನಾವು ಕೇಳದಿದ್ದರೂ ಹೇಳಿದ್ದು.
ಆದರೆ ಅವರು ಹಾಗೆ ತೇಜಸ್ವಿಯ “ನಿರುತ್ತರ”ದ ದಾರಿ ಹೇಳಿದರು ಎಂಬ ಕಾರಣಕ್ಕೆ ಬೆಳಗಿನ ಜಾವ ನಾಲ್ಕು ಗಂಟೆಗೆ ಅಲ್ಲಿಗೆ ಹೋಗಲಾಗುತ್ತದೆಯೆ? ಜೊತೆಗೆ ನಮ್ಮಿಬ್ಬರಿಗೂ ಪ್ರಯಾಣದ ಆಯಾಸ, ನಿದ್ರಾಹೀನತೆ ಎಲ್ಲ ಸೇರಿ ಎಲ್ಲಾದರೂ ಸ್ವಲ್ಪ ಹೊತ್ತು ಮಲಗಬೇಕು ಎನ್ನಿಸುತ್ತಿತ್ತು.ಹಾಗಾಗಿ ಯಾವುದಾದರು ಹೋಟೆಲಿನಲ್ಲಿ ರೂಮು ತೆಗೆದುಕೊಂಡು ವಿಶ್ರಾಂತಿ ಪಡೆದು ಬೆಳಗಾದ ನಂತರ ಮುಂದಿನ ಕೆಲಸ ನೋಡೋಣ ಎಂದು ಯೋಚಿಸಿ ಆ ಕಂಡಕ್ಟರ್ ರನ್ನೆ “ಇಲ್ಲಿ ಊಳ್ಕೊಳ್ಳೋಕೆ ಹೋಟೆಲ್ ಯಾವುದಾದರು ಇದೆಯೇ?” ಎಂದು ವಿಚಾರಿಸಿದೆವು. ಅವರು, “ಇಲ್ಲಿ ಅಂತ ಒಳ್ಳೆ ಹೋಟೆಲ್ ಯಾವುದು ಇಲ್ಲ, ಹೂಂ….ಹತ್ತಿರದಲ್ಲೇ ಒಂದು ಹೋಟೆಲ್ ಇದೆ. ಆದರೆ ಅಲ್ಲಿ ಅಂತ Facilityಇಲ್ಲ….ಯಾವುದಕ್ಕು ಒಂದ್ಸಲ ನೋಡಿ” ಎಂದರು. ಆದರೆ ಆಗ ನಮಗಾಗಿದ್ದ ಆಯಾಸದಲ್ಲಿ ಅಲ್ಲಿ ಯಾವ Facilityಇದೆ, ಯಾವ Facilityಇಲ್ಲ ಎಂದೆಲ್ಲ ನೋಡ್ತಾ ಕೂರುವ ತಾಳ್ಮೆ, ಸಮಾಧಾನಗಳಿರಲಿಲ್ಲ. ಸ್ವಲ್ಪ ಹೊತ್ತು ಕಣ್ಮುಚ್ಚಿನಿದ್ರೆ ಮಾಡಲು ಜಾಗ ಸಿಕ್ಕರೆ ಸಾಕಿತ್ತು. ಹಾಗಾಗಿ ಆ ಹೋಟೆಲಿನ ಹೆಸರು ಕೇಳಿಕೊಂಡು ಅವರಿಬ್ಬರಿಗೂ ಥ್ಯಾಂಕ್ಸ್ ಹೇಳಿ ಚಹಾದ ದುಡ್ಡು ಕೊಟ್ಟು ಅಲ್ಲಿಂದ ಅವರು ಹೇಳಿದ ಹೋಟೆಲಿನ ಕಡೆ ಹೆಜ್ಜೆ ಹಾಕತೊಡಗಿದೆವು.
ಆ ಕಂಡಕ್ಟರ್ ಸಾಹೇಬ್ರು ಹೇಳಿದ್ದ ಲ್ಯಾಂಡ್ ಮಾರ್ಕುಗಳನೆಲ್ಲಾ ದಾಟುತ್ತಾ ಮೂರ್ನಾಲ್ಕು ನಿಮಿಷ ನಡೆಯುವಷ್ಟರಲ್ಲಿ ಅವರು ಹೇಳಿದ್ದ ಆ ಹೋಟೆಲಿನ ಬೋರ್ಡು ನಮ್ಮ ಬಲಗಡೆಗೆ ಕಾಣಿಸಿಕೊಂಡಿತ್ತು. “ಹೋಟೆಲ್ ಅತಿಥಿ ಲಾಡ್ಜ್” ಹೇಮಂತ ಗಟ್ಟಿಯಾಗಿ ಓದಿಕೊಂಡ. “ಆ ಕಂಡೆಕ್ಟ್ರು ಸುಳ್ಳು ಹೇಳಿದ ಅನ್ಸುತ್ತೆ ಲೇಯ್. ಹೋಟೆಲ್ ಹೆಸರೇ ಇಷ್ಟು ಚೆನ್ನಾಗಿದೆ, ಅತಿಥಿ ಲಾಡ್ಜ್ ಅಂತ. ಹೋಟೆಲ್ಲು ಚೆನ್ನಾಗೆ ಇರುತ್ತೆ ಹಾಗಾದ್ರೆ. ಎನಂತೀಯ? ಎಂದು ನನ್ನ ಕಡೆ ತಿರುಗಿ ಕೇಳಿದ. ನಾನೇನು ಅನ್ನಲಿಲ್ಲ. ಅಲ್ಲ ಹೆಸರು ಚೆನ್ನಾಗಿದ್ದ ಮಾತ್ರಕ್ಕೆ ಹೋಟೆಲ್ಲೂ ಚೆನ್ನಾಗಿಯೇ ಇರುತ್ತದೆ ಎಂದು ಅದು ಯಾವ ಲಾಜಿಕ್ ಅಪ್ಲೈ ಮಾಡಿ ಹೇಳಿದನೋ ನಾನಂತು ಇದುವರೆಗೂ ಕೇಳೋಕೆ ಹೋಗಿಲ್ಲ. ರಸ್ತೆ ದಾಟಿ ಹೋಟೆಲ್ ಬಾಗಿಲಿನ ಮುಂದೆ ಬಂದು ನಿಂತ ನಮಗೆ ದೊಡ್ಡ ಶಾಕ್! ಹೋಟೆಲ್ ಬಾಗಿಲು ಹಾಕಿಬಿಟ್ಟಿತ್ತು. “ಅದು ಎಷ್ಟೇ ದರಿದ್ರದ ಹೋಟೆಲ್ ಆಗ್ಲಿ ರೂಮ್ ತಗೊಂಡು ಮೊದಲು ಮಲ್ಕೊಂಡುಬಿಡಬೇಕು” ಎಂದು ಇಬ್ಬರೂ ನಿಶ್ಚಯಿಸಿ ನಿದ್ರಿಸಲು ಮಾನಸಿಕವಾಗಿ ಸಿದ್ದರಾಗಿ ಬಂದಿದ್ದ ನಮಗೆ “ಅತಿಥಿ ಲಾಡ್ಜಿನ” ಬಾಗಿಲು ಮುಚ್ಚಿರುವುದು ಕಂಡು ತುಂಬಾನಿರಾಸೆಯಾಯಿತು. “ಎನೋ ಇದು ನಿನ್ನ ದಿ ಗ್ರೇಟ್ ಅತಿಥಿ ಲಾಡ್ಜಿಗೆ ಬೀಗ ಹಾಕಿಬಿಟ್ಟಿದಾರಲ್ಲೊ” ಎಂದು ಹೇಮಂತನ ಕಾಲು ಎಳೆಯಲು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡೆ. “ಯಾವನಿಗೊತ್ತೊ” ಎಂದು ನಿರಾಸೆಯ ಸ್ವರದಲ್ಲಿ ಅವನು ಹೇಳಿದ.

ತಕ್ಷಣ ಜ್ನಾನೋದಯವಾದಂತೆ ಇರು ನೋಡೋಣ ಹೋಟೆಲ್ ನವರು ಬಾಗ್ಲಾಕ್ಕೊಂಡು ಒಳಗೆ ಮಲಗಿರಬಹುದು” ಎಂದು ಹೇಳಿದವನೇ ಹೋಟೆಲ್ ನ ರೋಲಿಂಗ್ ಷಟರನ್ನು ದಬ ದಬ ಬಾರಿಸುತ್ತಾ “ಸಾರ್….ಸಾರ್…ಎಂದು ಕೂಗತೊಡಗಿದ. ಹೀಗೆ ಹತ್ತಾರು “ಸಾರ್”ಗಳಾದರು ಒಳಗಿನಿಂದ ಏನೂ ಉತ್ತರ ಬರದಿದ್ದಾಗ ಒಳಗೆ ಯಾರೂ ಇಲ್ಲವೆಂಬುದು ಖಾತ್ರಿಯಾಯಿತು. ಅಷ್ಟರಲ್ಲಿ ನಾನು “ಈ ಹೋಟೆಲ್ ರೂಂ ಸಿಗದಿದ್ದರೆ ಬಸ್ ಸ್ಟಾಂಡಿನ ಯಾವ ಕಟ್ಟೆ ಮಲಗಲು ಸೂಕ್ತ” ಎಂದು ಲೆಕ್ಕಾಚಾರ ಹಾಕಲು ಪ್ರಾರಂಭಿಸಿದ್ದೆ. ಹೇಮಂತ ಕುಟ್ಟುವ ಕಾರ್ಯವನ್ನು ಮುಂದುವರೆಸಿದ್ದ. ಕಡೆಗೆ ಅವನಿಗೆ “ಯಾರು ಇಲ್ಲ ಅನ್ಸುತ್ತೆ ಒಳಗೆ. ಸುಮ್ನೆ ಟೈಂ ವೇಸ್ಟ್, ನಡಿ ಹೋಗೋಣ” ಎಂದು ಹೇಳಬೇಕು ಅಷ್ಟರಲ್ಲಿ ಥೇಟ್ ಸಿನಿಮ್ಯಾಟಿಕ್ ಸೀನು,ಒಳಗಿನಿಂದ”ಯಾರ್ರಿ ಅದು” ಎಂದು ಉತ್ತರ ಬಂತು.
ಆ ಕ್ಷಣದಲ್ಲಿ ನಮಗಾದ ಸಂತೋಷವನ್ನು ಪದಗಳಲ್ಲಿ ವಿವರಿಸುವುದು ಕಷ್ಟ. ಅಲ್ಲೆಲ್ಲೋ ಉತ್ತರಖಂಡದ ಪ್ರವಾಹದಲ್ಲಿ ಸಿಕ್ಕಿಕೊಂಡು “ಇನ್ನು ಪ್ರಾಣ ಉಳಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ” ಎಂದುಕೊಂಡು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ವ್ಯಕ್ತಿಗೆ ಇದ್ದಕ್ಕಿದ್ದ ಹಾಗೆ ಗಟ್ಟಿಯಾದ ದಡ ಸಿಕ್ಕಿ ಸಾವಿನಿಂದ ಪಾರಾದರೆ ಎಷ್ಟು ಸಂತೋಷ ಆಗಬಹುದೋ ಅದಕ್ಕಿಂತಲೂ ಹೆಚ್ಚಿನ ಸಂತೋಷ ಒಳಗಿನಿಂದ ಬಂದ ಆ ಅನಾಮಿಕ ಧ್ವನಿ ಕೇಳಿ ನಮ್ಮಿಬ್ಬರಿಗೂ ಆಯಿತು. ಮತ್ತೆ ಅದೇ ಧ್ವನಿ, “ಯಾರ್ರಿ ಅದು ಇಷ್ಟೊತ್ನಲ್ಲಿ?” “ಸಾರ್ ನಾವು ಬೆಂಗಳೂರಿನಿಂದ ಬಂದಿದ್ದೀವಿ. ರೂಂ ಬೇಕಿತ್ತು…ಅದಕ್ಕೆ ಬಂದ್ವಿ” ಈ ಕಡೆಯಿಂದ ನಾನು ಗಟ್ಟಿಯಾಗಿ ಕೂಗಿ ಹೇಳಿದೆ. ಮೈನ್ ಡೋರ್ ಬೀಗ ಹಾಕಿದೆ. ಅಲ್ಲೇ ಪಕ್ಕದಲ್ಲಿ ಒಂದು ಚಿಕ್ಕ ಬಾಗಿಲಿದೆ. ಅದರ ಮುಂದೆ ಬನ್ನಿ” ಆ ಕಡೆಯಿಂದ ಆ ಅಶರೀರ ವಾಣಿ ಹೇಳಿತು. ಅದರಂತೆ ನಮ್ಮ ಎಡಕ್ಕೆ ಕೊಂಚ ಮುಂದಕ್ಕಿದ್ದ ಆ ಚಿಕ್ಕ ಬಾಗಿಲ ಮುಂದೆ ಹೋಗಿ ನಿಂತೆವು. ಆದರೆ ಅದಕ್ಕೂ ಬೀಗ ಹಾಕಲಾಗಿತ್ತು. ಇಬ್ಬರು ಪರಸ್ಪರ ಮುಖ ನೋಡಿಕೊಂಡೆವು. “ಸಾರ್…” ಎಂದು ನಾನು ಮತ್ತೆ ಬಾಯಿ ತೆಗೆಯಬೇಕು ಅಷ್ಟರಲ್ಲಿ ಮೆಟ್ಟಿಲ ಮೇಲೆ ಯಾರೊ ಇಳಿದು ಬರುತ್ತಿರುವ ಸಪ್ಪಳ ಕೇಳಿಸಿ ಸುಮ್ಮನಾದೆ.
ಕತ್ತಲಿನಲ್ಲಿ ಮೆಟ್ಟಿಲ ಮೇಲಿನಿಂದ ಇಳಿದು ಬರುತ್ತಿದ್ದ ವ್ಯಕ್ತಿ ಇಳಿಯುತ್ತಾ ಬಂದಂತೆ ಕ್ರಮೇಣ ಬೀದಿ ದೀಪದ ಬೆಳಕು ಆ ಆಕೃತಿಯ ಮೇಲೆ ಬಿದ್ದು ಮುಖ ಕಾಣಿಸಿಕೊಂಡಿತು. ಒಂದು ಕಾಲದಲ್ಲಿ ಅಪ್ಪಟ ಬಿಳಿ ಬಣ್ಣದಾಗಿದ್ದು ಸದ್ಯಕ್ಕೆ ಅಪ್ಪಟ ಮಣ್ಣಿನ ಬಣ್ಣಕ್ಕೆ ರೂಪಾಂತರ ಹೊಂದಿರುವ ನೆಟ್ ಬನಿಯನ್ನು, ಇಂಥದ್ದೇ ಎಂದು ಎಂತಹ ಪಂಡಿತನಿಗೂ ನಿಖರವಾಗಿ ಹೇಳಲು ಅಸಾಧ್ಯವಾಗಿದ್ದ ಬಣ್ಣದ್ದೊಂದು ಲುಂಗಿ ತೊಟ್ಟಿದ್ದ ೪೦ರ ಅಸುಪಾಸಿನ ಆ ಆಕೃತಿ ಎಡಗೈಯಲ್ಲಿ ಬೀಗದ ಗೊಂಚಲೊಂದನ್ನು ಹಿಡಿದು ಬಲಗೈಯಲ್ಲಿ ಎಡಕಂಕುಳನ್ನು ಮಜವಾಗಿ ಕೆರೆದುಕೊಳ್ಳುತ್ತಾ ಕೆಳಗಿಳಿದು ಬಂದು ನಮ್ಮ ಮುಂದೆ ನಿಂತು ಇಬ್ಬರನ್ನು ದುರುಗುಟ್ಟಿಕೊಂಡು ನೋಡಿತು. ಯಾರು? ಏನು? ಎತ್ತ? ಯಾಕೆ? ಎಂದೆಲ್ಲ ಪ್ರಶ್ನಿಸಿ ತೃಪ್ತಿಯಾದ ಮೇಲೆ ಗೇಟ್ ಬೀಗ ತೆಗೆಯುವ ಮನಸ್ಸು ಮಾಡಿತು. ನಾವು ಆ ಆಕೃತಿಯನ್ನೇ ಹಿಂಬಾಲಿಸಿ ಮೆಟ್ಟಿಲು ಹತ್ತಿ ಮೇಲೆ ಹೋದೆವು. ಆದರೆ ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ಮೇಲೆ ನಿಜಕ್ಕೂಚೆನ್ನಾಗಿಯೇ ಇತ್ತು. ಇದರಿಂದ ನಮಗೆ ಸ್ವಲ್ಪ ಸಮಾಧಾನವಾಯಿತು. ಆ ಆಕೃತಿ ಅವರನ್ನು ಆ ಹೋಟೆಲಿನ ಮ್ಯಾನೇಜರ್ ಎಂದು ಪರಿಚಯಿಸಿಕೊಂಡರು. ನಾವು ಸಹ ನಮ್ಮ ಪುರಾಣವನೆಲ್ಲಾ ಅವರಿಗೆ ವಿವರಿಸಿದೆವು. ಕಡೆಗೆ ರಿಜಿಸ್ಟರಿಗೆ ಸಹಿ ಮಾಡಿ, ಕೊಡಬೇಕಿದ್ದ ಅಡ್ವಾನ್ಸ್ ಅವರಿಗೆ ಕೊಟ್ಟು, ರೂಮಿನ ಕೀ ಪಡೆದು ನಮಗೆ ಕೊಟ್ಟಿದ್ದ ರೂಂ ಸೇರಿಕೊಂಡೆವು.
ಆ ಹೋಟೆಲಿನ ನಿಜವಾದ ಮುಖ ನಮಗೀಗ ಗೊತ್ತಗುವುದರಲ್ಲಿತ್ತು. ಬ್ಯಾಗುಗಳನ್ನು ಅಲ್ಲೇ ಒಂದುಕಡೆ ಇಟ್ಟು ಲೈಟ್ ಹಾಕೋಣ ಎಂದು ಸ್ವಿಚ್ ಹಾಕಿದರೆ ಲೈಟ್ ಹತ್ತಲೇ ಇಲ್ಲ. ಇದ್ದ ಸ್ವಿಚ್ಚುಗಳನ್ನೆಲ್ಲ ಹಾಕಿದರೂ ಯಾವೊಂದು ಲೈಟು ಹತ್ತದೇ ಇದ್ದಾಗ ಆ ಮ್ಯಾನೇಜರ್ ರವರನ್ನು ಕರೆದು ವಿಷಯ ತಿಳಿಸಿದೆವು. ಅವರು ತುಂಬಾ ಕೂಲಾಗಿ “ಅದು ಈ ರೂಮಿಗೆ ಯಾಕೋ ಒಂದು ವಾರದಿಂದ ಪವರ್ ಸಪ್ಲೈ ಆಗ್ತಿಲ್ಲ. ಇವತ್ತು ಹೇಗಾದ್ರು ಮ್ಯಾನೇಜ್ ಮಾಡ್ಕೊಳ್ಳಿ. ನಾಳೆಗೆ ಬೇಕಾದ್ರೆ ಬೇರೆ ರೂಂ ಕೊಡ್ತೀನಿ. ಸದ್ಯಕ್ಕೆ ಬೇರೆ ಯಾವ್ ರೂಮು ಖಾಲಿ ಇಲ್ಲ.” ಎಂದು ಹೇಳಿ ನಮ್ಮ ಪ್ರತಿಕ್ರಿಯೆಗೂ ಕಾಯದೆ ಹೊರಟೇ ಹೋದರು. “ಹೆಸರು ಚೆನ್ನಾಗಿದ್ರೆ ಹೋಟೆಲ್ಲು ಚೆನ್ನಾಗಿರುತ್ತೆ ಅಂದ್ಯಲ್ಲೋ, ಇಲ್ಲಿ ನೋಡಿದ್ರೆ ಬೆಳಕೆ ಇಲ್ಲ” ಎಂದು ಕತ್ತಲಲ್ಲಿ ಹೇಮಂತನ ಕಡೆ ತಿರುಗಿ ಹೇಳಿದೆ.”ನಿದ್ದೆ ಮಾಡಕ್ಕೆ ಬೆಳಕ್ಯಾಕೆ ಬೇಕಪ್ಪ. ಸುಮ್ನೆ ಮಲ್ಕೊ” ಎಂದು ಹೇಳಿ ಮೊಬೈಲ್ ಬೆಳಕಿನಲ್ಲಿ ಜಾಗ ಹುಡುಕಿಕೊಂಡು ಮಲಗಿಬಿಟ್ಟ. ನನಗೂ ಸಹ ವಿಪರೀತ ನಿದ್ರೆ ಬರ್ತಿತ್ತು. ಹಾಗಾಗಿ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಕ್ಕೆ ಆಗಲಿಲ್ಲ. ಬೆಳಿಗ್ಗೆ ಎದ್ದ ಕೂಡಲೇ ‘ರಾಜೇಶ್ವರಿ ಅಮ್ಮನಿಗೆ’ ಫೋನ್ ಮಾಡಿ ನಾವು ಬಂದಿರುವ ವಿಷಯ ತಿಳಿಸಬೇಕು ಎಂದುಕೊಂಡು ೭ ಗಂಟೆಗೆ ಮೊಬೈಲಿನಲ್ಲಿ ಅಲಾರಂ ಇಟ್ಟು ಅದೇ ಹಾಸಿಗೆಯ ಮೇಲೆ ಉರುಳಿಕೊಂಡೆ. ದೇಹಕ್ಕೆ ಮೂಡಿಗೆರೆಯ ಹಿತವಾದ ಚಳಿ, ಮನಸ್ಸಿಗೆ ತೇಜಸ್ವಿಯ ಊರಿನಲ್ಲಿದ್ದೇನೆ ಎಂಬ ಪುಳಕಇವುಗಳ ಮಧ್ಯದಲ್ಲಿಅದ್ಯಾವಾಗ ನಿದ್ರೆ ಬಂತೊ ಗೊತ್ತಾಗಲಿಲ್ಲ.
(ಮುಂದುವರೆಯುವುದು…)



ಪರಮೇಶ್ವರ್ ಅವರೆ,
ಕೆಲಸದ ಸಲುವಾಗಿ ಮೂಡಿಗೆರೆಯಲ್ಲಿ ೩ ತಿಂಗಳು ಕಳೆಯುವ ಅವಕಾಶ ಸಿಕ್ಕಿತ್ತು ನನಗೆ.ಆದರೆ ನಿರುತ್ತರ ವನ್ನು ನೋಡುವ ಭಾಗ್ಯ ಒದಗಿ ಬರಲಿಲ್ಲ. ಅಚ್ಚರಿ ಅಂದರೆ ಅಲ್ಲಿ ಹೆಚ್ಚಿನ ಜನರಿಗೆ ತೇಜಸ್ವಿ ಅವರ ಬಗ್ಗೆ, ಅವರ ವಿಚಾರ- ವಿಹಾರಗಳ ಬಗ್ಗೆ, ನಿರುತ್ತರದ ಬಗ್ಗೆ ಆಸ್ಥೆ ಅಥವ ಕುತೂಹಲ ಇಲ್ಲವೇ ಇಲ್ಲ. ಬಹುಶ ತೀರಾ ಹತ್ತಿರ ಇರುವ ವಸ್ತುಗಳ ಬಗ್ಗೆ, ದಿನಾಲೂ ನೋಡುವ ಜನರ ಬಗ್ಗೆ ಕೌತುಕ ಮಾಯವಾಗಿರುತ್ತದೆ.ಆದರೆ ಮೂಡಿಗೆರೆಯ ಪ್ರಕ್ರತಿ ಸೌಂದರ್ಯ ಮಾತ್ರ ಅದ್ಭುತ. ಮುಂಜಾನೆಯ ಚುಮು ಚುಮು ಚಳಿಯಲ್ಲಿ ಮೂಡಿಗೆರೆ ಮುದ್ದಾಗಿ ಕಾಣುತ್ತದೆ.
ಪರಿಚಿತರಾರೂ ಇಲ್ಲದ ಕಾರಣ ನಾವೂ ಸಹ ಅತಿಥಿ ಲಾಡ್ಜ್ ನಲ್ಲೇ ೩ ದಿನ ಉಳಿದುಕೊಂಡಿದ್ದೆವು. ಲಾಡ್ಜ್ ಮಾತ್ರ ಅವ್ಯವಸ್ಥೆಯ ಆಗರ. ಈ ಲಾಡ್ಜ್ ಈಗ ಮೊದಲಿಗಿಂತ ಸುಧಾರಣೆಯಾಗಿದೆ ಅಂತ ಹಿರಿಯರೊಬ್ಬರು ಹೇಳಿದಾಗ ಮೊದಲಿನ ಸ್ಥಿತಿ ಊಹಿಸಲೂ ಹೆದರಿ ಸುಮ್ಮನಾಗಿದ್ದೆ.ಬಾಗಿಲು ಮುಚ್ಚಿಕೊಂಡಿರುವುದು ಹೋಟೆಲ್. ಲಾಡ್ಜ್ ಗೆ ಎಂಟ್ರಿ ಕೊಡಬೇಕಾದರೆ ಪಕ್ಕದ ಮೆಟ್ಟಿಲುಗಳನ್ನೇರಿಯೇ ಹೋಗಬೇಕು.
ನಿಮ್ಮ ಬರಹ ಓದಿ ಎಲ್ಲ ನೆನಪುಗಳು ಮತ್ತೊಮ್ಮೆ ಬೆಚ್ಚಗಾದವು. ಆಪ್ತ, ಸುಂದರ ನಿರೂಪಣೆ. ಮತ್ತೆ ನೆನಪುಗಳನ್ನು ಕಣ್ಣೆದುರು ತಂದುದಕ್ಕೆ ಧನ್ಯವಾದಗಳು.
ಈ ಲೇಖಕರು ಟಿವಿಗಳ ಮೆಗಾ ಸೀರಿಯಲ್ ಗಾಗಿ ಕೆಲಸ ಮಾಡಿದವರು ಎಂಬುದು ಈ ಬರವಣಿಗೆಯನ್ನು ಎಳೆಯುತ್ತಿರುವುದರಲ್ಲೂ ಎದ್ದು ಕಾಣುತ್ತಿದೆ.
ಧನ್ಯವಾದಗಳು ರೇಶ್ಮಾರವರೆ…ನಿಮ್ಮ ಮಾತು ನಿಜ. ಹತ್ತಿರವಿರುವ ಅಥವ ಕೈಯಳತೆಯಲ್ಲಿರುವ ವಜ್ರಕ್ಕೆ ಬೆಲೆ ಕಡಿಮೆಯೆನ್ನುವ ಹಾಗೆ ಮೂಡಿಗೆರೆಯ ಜನಸಾಮಾನ್ಯರಿಗೆ ತೇಜಸ್ವಿಯೆಂಬ ವಜ್ರದ ಬಗ್ಗೆ ಆಸಕ್ತಿ, ಕುತೂಹಲ ಇಲ್ಲದಿರುವುದು ಸಹ. ಆದರೆ ಮೂಡಿಗೆರೆ ಹಾಗೂ ಅದರ ಸುತ್ತಮುತ್ತ ತೇಜಸ್ವಿಯೆಂದರೆ ಕುತೂಹಲ ಇಟ್ಟುಕೊಂಡಿರುವ ಒಂದು ಯುವ ಸಮುದಾಯವೇ ಇದೆ. ಆ ಯುವಕರಿಗೆ ತೇಜಸ್ವಿ ಎನುವುದು ಕೇವಲ ಒಂದು ಹೆಸರಲ್ಲ ಅದೊಂದು ಆಪ್ಪಟ ಆದರ್ಶ. ಮೂಡಿಗೆರೆ ಹಾಗೂ ಅದರ ಸುತ್ತಮುತ್ತಲಿನ ತೇಜಸ್ವಿಯ ಯುವ ಗೆಳೆಯರ ಬಗ್ಗೆ ಇದೇ ಲೇಖನ ಮಾಲಿಕೆಯಲ್ಲಿ ಬರೆಯಲಿದ್ದೇನೆ. ಪ್ರತಿಕ್ರಿಯೆಗೆ ಧನ್ಯವಾದಗಳು.