ತೆರೆದರಷ್ಟೇ ಬಾಗಿಲು ಈ ಕವಿತಾ ಸಂಕಲನದ ಸಮಯದಲ್ಲಿ
ಸಿ ವಿ ಶೇಷಾದ್ರಿ ಹೊಳವನಹಳ್ಳಿ.
ಪಂಪ ಭಾರತ, ಗದುಗಿನಭಾರತ, ಜೈಮಿನಿಭಾರತ ಇವು ಪ್ರಾಚೀನ ಕಾವ್ಯ ಪರಂಪರೆಯ ಪರ್ವತ ಶ್ರೇಣಿಗಳು. ಇದು ನನಗೆ ನೆನಪಾಗಿದ್ದು- ತೆರೆದ ಬಾಗಿಲು , ತೆರೆದಷ್ಟೇ ಬಾಗಿಲು ಹಾಗೂ ತೆರೆದರಷ್ಟೇ ಬಾಗಿಲು ಎಂಬ ಆಧುನಿಕ ಕಾವ್ಯ ಪರಂಪರೆಯ ಹೊಸ ಶೀರ್ಷಿಕೆಗಳನ್ನು ನೋಡಿದಾಗ.
ನೆಮ್ಮದಿಯ ಸಮಾಜದಲ್ಲಿ ಆದರ್ಶದ ದರ್ಶನ ನಮಗೆ ನಾಯಕನೊಬ್ಬನ ಆದ್ಯಂತ ಜೀವನದಿಂದ ಮೇಲ್ಕಂಡ ಭಾರತ ಸರಣಿಗಳಲ್ಲಾಗುತ್ತದೆ. ಬಾಗಿಲು ಮತ್ತು ತೆರೆಯುವ ಕ್ರಿಯೆ ಈ ಧ್ವನಿಯುಳ್ಳ ಹೊಸ ಶೀರ್ಷಿಕೆಗಳಲ್ಲಿ ನಾವೇ ನಾಯಕ ಅಥವಾ ರಚನೆಕಾರನೇ ನಾಯಕ.
ಡಿ ಎಸ್ ರಾಮಸ್ವಾಮಿಯವರ ತೆರೆದರಷ್ಟೇ ಬಾಗಿಲು ಈ ಕವಿತಾ ಸಂಕಲನದ ಸಮಯದಲ್ಲಿ ಮೊದಲು ನನಗಿಷ್ಟು ನೆನಪಾಯಿತು.
ಕವಿ ಇಲ್ಲಿ ಬದುಕಿನ ಪ್ರತಿ ಕ್ಷಣದ ಕ್ಷಿತಿಜವನ್ನು ಸಂಕೇತಗಳ ಸಂಗ್ರಹಾಲಯದ ಮೇಲೆ ನಿಂತು ನೋಡುತ್ತಿದ್ದಾನೆ. ಅವನಿಗೆ ಎಲ್ಲೆಲ್ಲೂ ಬಾಗಿಲು ಕಾಣುತ್ತಲೇ ಇಲ್ಲ. ಆದರೆ ಓದುಗನಿಗೆ ಮಾತ್ರ ಬಾಗಿಲು ತೆರೆದು ನೋಡು ಎನ್ನುತ್ತಾನೆ. ಇದೇ ಕಾವ್ಯ ವಿಸ್ಮಯ.
ಬಾಗಿಲೇ ಇಲ್ಲದ ಭಾವ ಬಾಂದಳದಲ್ಲಿರುವ ಈ ತರಂಗಾಂತರಗಳ ಬಿತ್ತನೆಯನ್ನು ಆಲಿಸಿದರಷ್ಟೇ ಕೇಳಿಸುತ್ತದೆ ಎಂದು ಆತ ಹೇಳುತ್ತಿದ್ದಾನೆ.ಕವಿಗೆ ಸ್ವತಃ ತನ್ನ ನೆರಳು, ಧರ್ಮದ ಹಕ್ಕಿ, ನವನೀತ, ಉರಿಯ ಉಯ್ಯಾಲೆ, ಸುಖ ಎಂಬ ಸಖ, ಸಾವಿನೂರಿನ ಸಂತೆ, ಮಗ ಬರೆದ ಚಿತ್ರ, ಬೆಸ್ತ, ಅಂಗಿ , ಗೋಡೆ, ವರ್ತಮಾನ, ಸ್ವರ್ಗ-ನರಕ, ವಿಕಲಚೇತನರು, ಪಶ್ಚಿಮವಾಹಿನಿ, ಕಾಲ, ಬೆಳಗು ಎಷ್ಟೊಂದು ಸಂಗತಿಗಳು ಗೋಚರಿಸುತ್ತವೆ..!
ಲೆಕ್ಕಕ್ಕೆ ಸಿಗದ ಅಷ್ಟೊಂದು ಅಂಗಿಗಳು ಇರುವಾಗಲೂ ತೊಟ್ಟು ಮೆರದದ್ದಕ್ಕಿಂತ ಅನ್ಯರ ಮೈಮೇಲಿರುವ ಅಂಗಿಗಳ ರಂಗು, ವಿನ್ಯಾಸ ಕಾಡುತ್ತಲೇ ಇರುತ್ತದೆ. ಈ ಸಾಲುಗಳಿಗೊರಗಿ ಓದುಗ ನಿಂತಾಗ , ಅಡಿಗರ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ..? ಎಂಬ ಸಾಲುಗಳು ಅಲ್ಲೇ ಹತ್ತಿರದಲ್ಲಿ ನಿಂತು ನಗುತ್ತಿರುತ್ತದೆ.
ಜೀವನ ಎಂಬುದು ವಾರ್ಡ್ ರೋಬು. ಅದರ ತುಂಬ ಆಸೆಗಳ ಅಂಗಿಗಳು.
ತನ್ನ ನೆರಳಿಗೆ ಹೆದರುವ ಇಲ್ಲಿನ ನಾಯಕ ( ನಾವೂ ಮತ್ತು ನೀವೂ ) ಸುಂದರ ಸಮಾಜದ ನಿರ್ಮಾಣ ಕಾರ್ಯದಲ್ಲಿ ಸೋತು ನಾವೆಲ್ಲ ಇದ್ದೂ ಸತ್ತಿದ್ದೇವೆ ಎಂದು ಘೋಷಿಸುತ್ತಿದ್ದಾನೆ. ಏಕೆಂದರೆ ಅವನಿಗೆ ಕಂಡ ಚಿನ್ನದ ಕತ್ತಿ ( ಹೊನ್ನ ಹರಿವಾಣದಲ್ಲಿರುವ) ನಮ್ಮೆಲ್ಲರ ಕಣ್ಣು ತಿವಿದಿದೆ. ಕಣ್ಣು ಮಂಜಾಗಿದೆ.
ಲಕ್ಷ ನಕ್ಷತ್ರಗಳ ಸಂತೆಯ ಆತಂಕಕ್ಕೆ ಕೂಡ ಕವಿ ಸಂಬಂಧಗಳ ಮದ್ದು ಕಂಡು ಹಿಡಿದಿದ್ದಾನೆ. ಆಕಾಶದ ಪ್ರತಿಮೆಯಲ್ಲಿ ಇದನ್ನು ಸೊಗಸಾಗಿ ನಿರೂಪಿಸಿದ್ದಾನೆ.ನನ್ನ ಮನೆಗೆ ನೀವೂ ಬನ್ನಿ ನಿಮ್ಮ ಮನೆಗೆ ನನ್ನ ಕರೆಯಿರಿ ಎನ್ನುತ್ತಾನೆ.
ಬಾಗಿಲು ತೆರೆದರಷ್ಟೇ ನಮಗೆ ಸಾವಿನೂರಿನ ಸಂತೆ ಕಾಣುತ್ತದೆ. ಒಂಚೂರೂ ಜನ ಸಂದಣಿಯಿಲ್ಲದ ಅಲ್ಲಿ ಕವಿ ಕೂತಿದ್ದಾನೆ. ಅವರವರ ಹಣತೆ ತೋರುತ್ತಿದ್ದಾನೆ. ಸಾಲ ತಂದ ಪ್ರಾಣ ಎಂಬ ತೈಲ ಒಣಗುವುದನ್ನು ವರ್ಣಿಸುತ್ತಿದ್ದಾನೆ. ನಮಗಿಲ್ಲಿ ಅಡಿಗ ಹಾಗೂ ಡಿವಿಜಿ ಕಾಣುತ್ತಾರೆ.( ಬೊಂಬು, ಬಲು ಹಗ್ಗ, ಮತ್ತು ಪದ ಕುಸಿಯೆ )
ನಾನು ಕೇಳಿದೆ- ಕವಿಯೇ ಚರಿತ್ರೆಯ ಹಾಳೆಗಳನ್ನೆಲ್ಕ ತಿರುವಿ ಉಳಿದ ಭಗ್ನಾವಶೇಷಗಳ ನಡುವೆ
ಏಕೆ ಬರೆಯುತ್ತಿರುವೆ . . ?
ಅದಕ್ಕೆ ಆತ ಹೇಳುತ್ತಾನೆ- ಕವಿಯಳಿದರೂ ಕವಿತೆ ಉಳಿಯುವುದು. ಆ ನಂಬಿಕೆ ಈಗಲೂ ಸ್ಥಿರವಾಗಿದ್ದಕ್ಕೆ ಬರೆಯುತ್ತಿದ್ದೇನೆ.
ಹೀಗೆ ಈ ಸಂಕಲನದ ಕವಿ ಬದಲಾಗುತ್ತಿರುವ ಮಾನವ ವಾಸನೆಗಳನ್ನು, ವಿಷದ ಬಟ್ಟಲಲ್ಲಿನ ನತ್ತುಗಳನ್ನು, ಸುಖ ಎಂಬ ಗಾಳಿಪಟವನ್ನು, ತಿಗರಿ ಮೇಲಿಟ್ಟ ಮಡಕೆಯನ್ನು, ಬಿಡದೇ ಕಾಡುವ ಪ್ರತಿಮೆಗಳನ್ನು ಹೊಸ ಬಟ್ಟೆ ಮೇಲೆ ಹೊಸ ದಾರದಿಂದ ಎದ್ದು ಕಾಣುವಂತೆ ನೇಯ್ದಿದ್ದಾನೆ. ಯಾರು ಬೇಕಾದರೂ ಹೊದ್ದುಕೊಳ್ಳಬಹುದು.







ಮನಮುಟ್ಟುವ ಅಸ್ತೆ ಘಮ್ಬೀರವಾಗಿ ಮನ ತಟ್ಟಿ ಒಂದಿಸ್ತು ಹೊಸ ಆಲೋಚನೆಯತ್ತ ಕೊಂಡಯ್ಯುವ ಚಿಂತನೆ ಇಲ್ಲಿ ಇದೆ.. ನಿಜಕ್ಕೂ ನನಗೆ ಓದುತಿದ್ದಂತೆ ಒಂದು ಅವ್ಯಕ್ತ ಆನಂದ, ಒಂದು ಹೊಸ ಥ್ರಿಲ್ ಉಂಟಾಯಿತು…. ಪುಸ್ತಿಕೆ ತರೆಸಿಕೊಳ್ಳುವೆ…
ರವಿ ವರ್ಮ ಹೊಸಪೇಟೆ
Hi canagati bariri