ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತುಕಾರಾಮನ ಕಾಣಲು ಬಂದ ಶೇಕ್ಸ್‌ಪಿಯರ…

ಗಿರೀಶ ಜಕಾಪುರೆ

ಗಿರೀಶ ಜಕಾಪುರೆಯವರು ಮಹಾರಾಷ್ಟ್ರದ ಮೈಂದರ್ಗಿಯವರು. ಕೋಗನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದಾರೆ. ಕಥೆ, ಕಾವ್ಯ, ಕಾದಂಬರಿ, ಜೀವನಕಥನ, ಅನುವಾದ, ಮಕ್ಕಳಸಾಹಿತ್ಯ, ಗಜಲ್ ಸೇರಿದಂತೆ ೩೬ ಕೃತಿಗಳನ್ನು ಪ್ರಕಟಿಸಿದ್ದಾರೆ. ಮಾಸ್ತಿ ಕಾದಂಬರಿ ಪ್ರಶಸ್ತಿ, ಕನ್ನಡ ಪುಸ್ತಕ ಸೊಗಸು ಬಹುಮಾನ, ಬೇಂದ್ರೆ ಬಹುಮಾನ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಈ ಅನುವಾದ ಸಂಚಿಕೆಗಾಗಿ ಮರಾಠಿಯಿಂದ ವಿಂದಾ ಕರಂದೀಕರ್‌ ಅವರ ಕವನವೊಂದನ್ನು ಅನುವಾದಿಸಿದ್ದಾರೆ.

ಆಧುನಿಕ ಮರಾಠಿ ಕವಿಗಳಲ್ಲಿ ವಿಂದಾ ಕರಂದೀಕರ್‌ ಬಹುಮುಖ್ಯ ಕವಿ. ಅರಿಸ್ಟಾಟಲನ ಗ್ರೀಕ್‌ ಕಾವ್ಯಗಳನ್ನು ಮರಾಠಿಗೆ ಅನುವಾದಿಸಿದ್ದಾರೆ. ತಮ್ಮದೇ ಕವನಗಳನ್ನು ಇಂಗ್ಲೀಷಿಗೆ ಭಾಷಾಂತರಿಸಿದ್ದಾರೆ. ಧ್ಯಾನೇಶ್ವರಿ, ಅಮೃತಾನುಭವ್‌ನಂತಹ ಹಳೆಯ ಮರಾಠಿ ಸಾಹಿತ್ಯ ಕೃತಿಗಳಿಗೆ ಹೊಸ ರೂಪ ನೀಡಿದ್ದಾರೆ. ಇವರಿಗೆ ೨೦೦೩ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

ತುಕಾರಾಮನ ಕಾಣಲು ಬಂದ ಶೇಕ್ಸ್‌ಪಿಯರ

ತುಕಾರಾಮನ ಕಾಣಲು ಬಂದ ಶೇಕ್ಸ್‌ಪಿಯರ
ಗೂಡಂಗಡಿಯೊಂದರಲ್ಲಿ ಮಿಲನದ ಸಡಗರ

ಬಿಗಿದಪ್ಪಿದರು ಒಬ್ಬರನೊಬ್ಬರು ಉತ್ಸಾಹದಿಂದ
ಹರಿದವು ಭಾವಗಳು ನೇರ ಎದೆಯಿಂದ ಎದೆಗೆ

ತುಕಾ ಹೇಳಿದ ’ವಿಲ್ಯಾ, ನಿನ್ನ ಕೃತಿಗಳೆಲ್ಲ ಮಹಾನ
ಸೃಷ್ಟಿಸಿದೆ ಅಕ್ಷರಗಳಲ್ಲಿ ಇಡೀ ವಿಶ್ವದ ಜಡ-ಚೇತನ

ಶೇಕ್ಸ್‌ಪಿಯರ ನುಡಿದ ’ಅ? ಮಾತ್ರ ಉಳಿಯಿತು,
ನೀನು ಇಟ್ಟಿಗೆಯ ಮೇಲೆ ಕಂಡೆಯಲ್ಲ..!? ಅದು..’

ತುಕಾ ಹೇಳಿದ ’ಮಿತ್ರ, ಒಳ್ಳೆಯದೇ ಆಯ್ತು ಬಿಡು
ಉಂಟುಮಾಡಿದೆ ಅದೇ ನನ್ನ ಸಂಸಾರದಲಿ ಬಿರುಕು’

ವಿಠಲ..!, ಅಚಲ ಅವನು, ಅವನ ಮಾತೇ ಬೇರೆ
ಬರೆದರೂ ಖಾಲಿ ಉಳಿಯಿತು ನನ್ನಯ ಹಲಗೆ

ಶೇಕ್ಸ್‌ಪಿಯರ್ ನುಡಿದ ’ತುಕಾ, ನಿನ್ನ ಶಬ್ದಮೋಡಿಗೆ
ಹುಡಿಮಣ್ಣಿನಲಿ ಕುಣಿದಾಡಿದನು ಆ ಶಬ್ದಾತೀತನೂ’

ತುಕಾ ಹೇಳಿದ ’ಶಬ್ದಗಳ ಆಟವೆಲ್ಲ ವ್ಯರ್ಥ ಕಣೋ
ಹೋಗಬೇಕು ಎಲ್ಲರೂ ತಮ್ಮ ದಾರಿಗೆ, ಬಂದ ಊರಿಗೆ’

ತರತರಹದ ಮುಳ್ಳುಗಳಿವೆ, ತರತರಹದ ದಾರಿಗಳಲಿ
ಮುಳ್ಳಿರಲಿ ಕಲ್ಲಿರಲಿ ಮತ್ತೆ ಅವನನ್ನು ಕಾಣುವಂತಾಗಲಿ

ತುಕಾ ಹೇಳಿದ ’ಕೇಳು, ಮಂದಿರದ ಘಂಟಾನಾದ, ಕೇಳಲ್ಲಿ
ಹೊರಡುವೆ, ಕಾಯ್ತಿದಾಳೆ ದಾರಿ, ಆ ಬಜಾರಿ, ಮನೆಯಲ್ಲಿ

ಹೋದರು ಇಬ್ಬರೂ ಬೇರೆ ದಾರಿ, ಬೇರೆಯೇ ದಿಕ್ಕು
ಕೊನೆಗೊಳ್ಳುತ್ತಿಲ್ಲ ಕುತೂಹಲದ ಮುಗಿಲಿನ ದಿಗಿಲು

ನಾನೇಕೆ ಅನುವಾದಿಸುತ್ತೇನೆ?

ಕನ್ನಡದಂತೆಯೇ ಇತರೆ ಭಾಷೆಗಳಲ್ಲೂ ಸಮೃದ್ಧವಾದ ಸಾಹಿತ್ಯವಿದೆ. ನಾವು ಅದನ್ನೂ ಆಸ್ವಾದಿಸಬೇಕು. ಆದರೆ ಆ ಭಾಷೆಗಳನ್ನು ಓದಲು ಬರದೇ ಇರುವುದು ನಮ್ಮ ಮುಖ್ಯ ತೊಡಕು. ಹೆಚ್ಚು ಭಾಷೆಗಳ ಜ್ಞಾನ ಹೊಂದಿರುವುದು ಹೆಚ್ಚಿನ ಸಾಹಿತ್ಯ ಸವಿಯಲು ಅವಕಾಶ ಒದಗಿಸುತ್ತದೆ. ಅನುವಾದಕರು ಈ ವಿಷಯದಲ್ಲಿ ಅದೃಷ್ಟವಂತರು. ಅವರು ಬೇರೆ ಭಾಷೆಗಳಲ್ಲಿನ ಸಾಹಿತ್ಯವನ್ನೂ ಆಸಕ್ತಿಯಿಂದ ಓದುತ್ತಾರೆ. ತಮಗಿಷ್ಟವಾಗಿದ್ದನ್ನು ಇತರೆ ಸಹೃದಯರಿಗೂ ಓದಿಸಲು ಬಯಸುತ್ತಾರೆ. ನಾನೊಬ್ಬ ಅನುವಾದಕನಾಗಿ ಇತರೆ ಭಾಷೆಗಳಲ್ಲಿರುವ ಉತ್ಕೃಷ್ಟ ಸಾಹಿತ್ಯವನ್ನು ಹೆಕ್ಕಿ ತಂದು ಕನ್ನಡದ ಓದುಗರಿಗೆ ನೀಡಲು ಯತ್ನಿಸುತ್ತೇನೆ.

ಕನ್ನಡದಲ್ಲಿ ಕಥೆ, ಕಾವ್ಯಗಳಲ್ಲಿ ಇದುವರೆಗೂ ಕಾಣದ ವಿಷಯ-ವಸ್ತುಗಳು, ಪ್ರಯೋಗಗಳು ಇತರೆ ಭಾಷೆಯ ಸಾಹಿತ್ಯದಲ್ಲಿ ಕಂಡಾಗ, ಅದು ನಮ್ಮ ಭಾಷೆಯಲ್ಲೂ ಬರಬೇಕು ಎಂಬ ಸುಪ್ತಪ್ರಜ್ಞೆಯೊಂದು ಪ್ರತಿಯೊಂದು ಅನುವಾದದ ಹಿನ್ನೆಲೆಯಲ್ಲಿ ಇದ್ದೇ ಇರುತ್ತದೆ. ಅಷ್ಟೇ ಅಲ್ಲದೇ, ನಾನು ಕನ್ನಡ ಸಾಹಿತ್ಯದಲ್ಲಿನ ಉತ್ತಮ ಕೃತಿಗಳನ್ನು ಇತರ ಭಾಷೆಗಳಿಗೂ ಅನುವಾದಿಸುವ ಮೂಲಕ ಕನ್ನಡ ಸಾಹಿತ್ಯದ ಸಮೃದ್ಧಿಯನ್ನು ಭಾಷೆಗಳ ಮಿತಿಯಿಂದಾಚೆಗೆ ತಲುಪಿಸಲು ಯತ್ನಿಸುತ್ತೇನೆ. ಹೀಗಾಗಿ ಅನುವಾದ ನನ್ನ ಇಷ್ಟ ಕರ್ಮ.

‍ಲೇಖಕರು Admin

29 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading