ಇಂದು ರಾಜೀವ ತಾರಾನಾಥರ ಹುಟ್ಟುಹಬ್ಬ
ಖ್ಯಾತ ಸಾಹಿತಿ ಬೊಳುವಾರು ಅವರ ಒಂದು ನೆನಪಿನ ತುಣುಕು ಇಲ್ಲಿದೆ-
ಬೊಳುವಾರು
ತುಂಡಾದ ತಂತಿ…!
ದೆಹಲಿ ಕರ್ನಾಟಕ ಸಂಘದ ಸೆಕ್ರೆಟರಿ ಗೆಳೆಯ ಸರವು ಕೃಷ್ಣಭಟ್ಟರ ಕೃಪೆಯಿಂದ ಐದು ಪಾಸುಗಳು ಸಿಕ್ಕಿದ್ದವು. ರೋಷನ್ ಅಲೀ ಮತ್ತು ಚಾಂದಚ್ಚನವರು ಸಂಜೆ ಐದಕ್ಕೆ ಮುನಾವರ್ ಖಾನರ ಕಾರಿನಲ್ಲೇ ಹೊರಡಲಿದ್ದು, ಮಕ್ಕಳಿಬ್ಬರನ್ನು ಮನೆಯಲ್ಲೇ ಬಿಟ್ಟು ಇವನು ಹೆಂಡತಿಯನ್ನು ಕರೆದುಕೊಂಡು ಮಧ್ಯಾಹ್ನ ಮೂರಕ್ಕೇ ಮನೆಬಿಟ್ಟಿದ್ದ. ಸಂಗೀತ ಕಚೇರಿಗೂ ಮೊದಲು ರಾಜೀವ ತಾರಾನಾಥರನ್ನು ಕಂಡು ಸ್ವಲ್ಪ ಹೊತ್ತು ಮಾತನಾಡುವ ಪ್ಲಾನು ಇವನದ್ದು.
ಸಭಾಂಗಣದಲ್ಲಿ ಕಂಡಾಬಟ್ಟೆ ಜನ. ಕನ್ನಡಿಗರಿಗಿಂತಲೂ ಕನ್ನಡೇತರರೇ ಸೀಟುಗಳನ್ನೆಲ್ಲ ಆಕ್ರಮಿಸಿಕೊಂಡುಬಿಟ್ಟಿದ್ದರು. ಸಂಘದ ಅಧ್ಯಕ್ಷ ಕುಮ್ಟಾಕರರಿಂದ ಔಪಚಾರಿಕ ಸ್ವಾಗತ ಭಾಷಣ ಮುಗಿದು, ’ಗೊಂಯ್’ ಎಂದು ತಂತಿ ಮೀಟಿದ ಸ್ವರ ಕೇಳಿಸಿದ್ದೇ ತಡ, ಸಭಾಂಗಣದಲ್ಲಿ ಮಿಂಚಿನ ಸಂಚಾರವಾಗಿತ್ತು! ಗುಸು ಗುಸು ಮಾತನಾಡುತ್ತಿದ್ದವರೆಲ್ಲ ಉಸಿರು ಬಿಗಿದು ನೇರವಾಗಿ ಕುಳಿತುಬಿಟ್ಟಿದ್ದರು. ಉಸಿರಾಟದ ಸದ್ದಿನಿಂದ ಸಂಗೀತಕ್ಕೆ ಎಲ್ಲಿ ಅಪಚಾರವಾದೀತೋ ಎಂಬ ಅಳುಕು ಎಲ್ಲರಿಗೂ. ಕುರ್ಚಿಯಲ್ಲಿ ಹಿಂದೆ ಮುಂದೆ ಜರುಗಿದರೆ, ಅದರ ಸದ್ದಿನಿಂದ ರಸಭಂಗವಾದೀತೇನೋ ಎಂಬ ಅಳುಕು.
ಯಾವಾಗ ಸಂಗೀತ ಶುರುವಾಯಿತು, ಅವರು ಯಾವ ರಾಗ ನುಡಿಸುತ್ತಿದ್ದಾರೆ, ಅವರು ಯಾವಾಗ ರಾಗ ಬದಲಾಯಿಸುತ್ತಿದ್ದಾರೆ ಎಂಬಿತ್ಯಾದಿಗಳ ಪರಿವೆಯೇ ಇಲ್ಲದೆ ಸುಮಾರು ಎರಡು ತಾಸುಗಳ ಕಾಲ ಸಂಮೋಹನಗೊಂಡವರಂತೆ ಕುಳಿತಿದ್ದ ಜನರೆಲ್ಲ ಬೆಚ್ಚಿ ಬಿದ್ದು ಎದ್ದು ನಿಂತದ್ದು, ’ಟಣ್… ಟಣ್ಣನ್.., ಟಿನ್…’ ಎಂಬ ಅಪರೂಪದ ಅಪಸ್ವರಕ್ಕೆ!
ಪಂಡಿತ ರಾಜೀವ ತಾರಾನಾಥರ ಕಚೇರಿಯಲ್ಲಿ ಅಪಸ್ವರ..! ಅವರ ಕೈ ಬೆರಳುಗಳ ಸ್ಪರ್ಷಕ್ಕೆ ಹೂವಿನಂತೆ ಅರಳುತ್ತಿದ್ದ ಸರೋದ್ ತಂತಿಗಳೆಲ್ಲ ತುಂಡು ತುಂಡಾಗಿ, ವೇದಿಕೆಯ ಮೇಲೆ ಬೀಳುತ್ತಿದ್ದ ಸ್ಪಾಟ್ ಲೈಟ್’ಗಳ ಬೆಳಕಿನಲ್ಲಿ ಕನ್ನಡಿ ಹಾವುಗಳಂತೆ ಹೊಳೆಯುತ್ತಿದ್ದವು!
ಅಷ್ಟಾಗುವಾಗ, ಸಭಾಂಗಣದ ಹಿಂದೆ ಇದ್ದ ಯಾವನೋ ಒಬ್ಬ ಪಿಸುಗುಟ್ಟಿದ್ದ,
’ಬಾಬರಿ ಮಸೀದಿ ಬಿತ್ತಂತೆ!’
ಹೌದಾ..!
ಬಿತ್ತಾ…?
ನಿಜವಾಗ್ಲೂ ಬಿತ್ತಾ..!?
ಎಲ್ಲರ ತಲೆಯ ಮೇಲೆ ಆಕಾಶವೇ ಕಳಚಿಬಿದ್ದತಾಗಿತ್ತು!
ಅದುವರೆಗೆ ಸಭಾಂಗಣದ ಶ್ರೋತೃಗಳನ್ನೆಲ್ಲ ತಮ್ಮ ಪ್ರೀತಿಯ ತಂತಿಯಲ್ಲಿ ಬಂದಿಸಿದ್ದ ಸರೋದ್ ಮಾಂತ್ರಿಕ ಪಂಡಿತ ರಾಜೀವ ತಾರಾನಾಥರು, ತಲೆ ತಗ್ಗಿಸಿ, ಕಡಿದು ಹೋಗಿರುವ ತಂತಿಗಳನ್ನೇ ದಿಟ್ಟಿಸುತ್ತಾ ಬಿಕ್ಕಳಿಸಲಾರಂಭಿಸಿದ್ದರು; ಎಲ್ಲ ತಪ್ಪುಗಳಿಗೂ ತಾವೊಬ್ಬರೇ ಹೊಣೆಗಾರರೆಂಬಂತೆ!
[ಸ್ವಾತಂತ್ಯ್ರದ ಓಟ: 933-934]






sooo nice
Tumbaa sogasaagide varnane.