ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತರವಲ್ಲ ತಗಿ ನಿನ್ನ ತಂಬೂರಿ…

ಹೀಗೊಂದು ಲಹರಿ

ಗೋಪಾಲ ವಾಜಪೇಯಿ

ಮಾರ್ಚ್ 7 ಮತ್ತು ಡಿಸೆಂಬರ್ 29 ಇವೆರಡೂ ಕನ್ನಡದ ಸಾಹಿತ್ಯ ಮತ್ತು ಸಂಗೀತಪ್ರೇಮಿಗಳಿಗೆ ಅತಿ ಮಹತ್ವದ ದಿನಾಂಕಗಳು. ಯಾಕಂದರೆ, ಕನ್ನಡದ ಅನುಭಾವ ಸಾಹಿತ್ಯದ ಇಬ್ಬರು ವಿಭೂತಿ ಪುರುಷರು ಈ ದಿನಾಂಕಗಳಂದು ನಮಗೆ ನೆನಪಾಗುತ್ತಾರೆ.
ಅವರು ”ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೆ ಬಾರಿಸದಿರು ತಂಬೂರಿ…” ಅಂತ ಹಾಡುತ್ತಿದ್ದರೆ ಸೇರಿದ ಸಹಸ್ರಾವಧಿ ಜನ ದನಿಗೂಡಿಸುತ್ತಿದ್ದರು. ಮೈ ಮರೆತು ನಿಂತಲ್ಲೇ ಸೂಕ್ತ ಹೆಜ್ಜೆಗಳನ್ನು ಹಾಕತೊಡಗುತ್ತಿದ್ದರು.

ಹೌದು. ಸಿ. ಅಶ್ವಥ್ ರೀತಿಯೇ ಹಾಗೆ. ‘ಕನ್ನಡವೇ ಸತ್ಯ’ ಎಂಬುದನ್ನು ಸಾಧಿಸಿ ತೋರಿಸಿದ ಮಹಾನುಭಾವ ಆತ. ಅವರು ಸಂತ ಶಿಶುನಾಳ ಶರೀಫ ಸಾಹೇಬರ ಹಾಡುಗಳನ್ನು ಹಾಡುತ್ತಿದ್ದರೆ ಜನಕ್ಕೇನೋ ಆವೇಶ. ಗೀತೆ ಬರೆದ ಕವಿಯನ್ನೂ ಹಾಡಿದ ಗಾಯಕನನ್ನೂ ರಸಿಕರು ಹೀಗೆ ಏಕಕಾಲಕ್ಕೆ ತಮ್ಮ ಹೃದಯ ಸಿಂಹಾಸನದಲ್ಲಿ ಪ್ರತಿಸ್ಥಾಪಿಸಿಕೊಂಡ ಉದಾಹರಣೆಗಳು ತೀರ ಕಮ್ಮಿ.
ಅಂಥ ಗೌರವಕ್ಕೆ ಪಾತ್ರರಾದವರು ಶರೀಫರು ಮತ್ತು ಅಶ್ವಥ್.
ಇದಿಷ್ಟೇ ಇವರಿಬ್ಬರಲ್ಲಿಯ ಸಾಮ್ಯವಲ್ಲ. ಇನ್ನೂ ಅಚ್ಚರಿದಾಯಕವೆನಿಸುವಂಥ ಸಾಮ್ಯಗಳಿವೆ ಅವರಿಬ್ಬರಲ್ಲಿ.
ಅದೇನು ಅಂತ ನೀವೇ ಓದಿಕೊಳ್ಳಿ.
ಸಂತ ಶಿಶುನಾಳ ಶರೀಫ ಸಾಹೇಬರು1819ರ ಮಾರ್ಚ್ 7ರಂದು ಜನಿಸಿದವರು. ಬಾಲ್ಯದಲ್ಲೇ ಗುರು ಗೊವಿಂದ ಭಟ್ಟರ ಪದತಲದಲ್ಲಿ ಆಧ್ಯಾತ್ಮದ ಅರಿವು ಮೂಡಿಸಿಕೊಂಡರು. ಬದುಕಿಡೀ ತತ್ವಗೀತೆಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಸರಿಯಾಗಿ ತಮ್ಮ ಎಪ್ಪತ್ತನೆಯ ವಯಸ್ಸು ತುಂಬುವ ದಿನ ಅಂದರೆ 1889ರ ಮಾರ್ಚ್ 7ರಂದು ಅವರು ಇಹಲೋಕ ಯಾತ್ರೆ ಮುಗಿಸಿದರು.

ಶರೀಫರ ಅನುಭಾವ ಗೀತೆಗಳಿಗೆ ‘ದನಿ’ಯಾದವರು ನಮ್ಮ ಸಿ. ಅಶ್ವಥ್. ಅವರು ಸಂತ ಶಿಶುನಾಳ ಶರೀಫ ಸಾಹೇಬರ ಅಸಂಖ್ಯ ಗೀತೆಗಳಿಗೆ ರಾಗ ಸಂಯೋಜಿಸಿದರು. ಮನದಲ್ಲಿ ಗಟ್ಟಿಯಾಗಿ ಕೂಡುವ ಹಾಗೆ ಹಾಡಿದರು. ಕನ್ನಡಿಗರೆಲ್ಲರ ಮನೆಗಳಲ್ಲಿ ಶರೀಫ ಗೀತೆಗಳು ಅನುರಣಿಸುವಂತೆ ಮಾಡಿದರು.
ಸಿ. ಅಶ್ವಥ್ 1939ರ ಡಿಸೆಂಬರ್ 29 ರಂದು ಜನಿಸಿದರು. ನಾದದ ಬೆನ್ನು ಹತ್ತಿ ಹೊರಟರು. ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಒತ್ತಿದರು. ಸರಿಯಾಗಿ ತಮ್ಮ ಎಪ್ಪತ್ತನೆಯ ವಯಸ್ಸು ತುಂಬುವ ದಿನ ಅಂದರೆ 2009ರ ಡಿಸೆಂಬರ್ 29 ರಂದು ಇವರೂ ಇಹಲೋಕ ಯಾತ್ರೆ ಮುಗಿಸಿದರು.
ಇಬ್ಬರೂ ನಮ್ಮ ಪಾಲಿಗೆ ಚಿರಂಜೀವಿಗಳು. ಅಮರ ಜೀವಿಗಳು.
 

‍ಲೇಖಕರು avadhi

26 March, 2013

4 Comments

  1. Ishwara Bhat K

    ಹೌದು.. ಆಹಾ.. ಅಶ್ವತ್ಥರ ಗೀತೆಗಳನ್ನು ಕೇಳುತ್ತಿದ್ದರೆ ಮೈಝುಮ್ ಎನ್ನುತ್ತದೆ. ಒಳ್ಳೆಯ ಸಂಗೀತ, ಸಾಹಿತ್ಯ, ಕಂಠಸಿರಿ ಮೂರೂ ಇದ್ದಾಗ ಹಾಡುಗಳು ಉಳಿಯುವುದು ಸಾಧ್ಯ.
    ಸಾಮ್ಯ ಕೂಡಾ ಅಚ್ಚರಿಯದ್ದು. ಧನ್ಯವಾದ ಗೋವಾ ಸರ್.

  2. ಸುಗುಣಮಹೇಶ್

    ಅಬ್ಬಾ.. ಇಬ್ಬರಿಗೂ ಎಂಥಾ ಹೋಲಿಕೆ… ಸಿ. ಅಶ್ವಥ್ ಅವರು ಶರೀಫರ ಮರುಜನ್ಮವೇ ಎಂಬಂತನಿಸುತ್ತೆ. ಸಾಹಿತ್ಯದ ಜೊತೆ ಸಂಗೀತ ಇದ್ದರೇ ಜನರಲ್ಲಿ ಚಿರಕಾಲ ಉಳಿಯುವುದು.
    ಧನ್ಯವಾದಗಳು ಅಚ್ಚರಿಯ ವಿಷಯ ತಿಳಿಸಿದ್ದಕ್ಕೆ

  3. ಹರಿ

    ಮಗದೊಮ್ಮೆ ಮರುಕಳಿಸಲಿ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading