
ಕಿರಣ ಭಟ್
ನವ್ಮೂರ ಯಕ್ಷಗಾನ ಮರಾಠೀ ರಂಗಭೂಮಿಯ ಹುಟ್ಟಿಗೆ ಪ್ರೇರಣೆಯಯಿತು ಎನ್ನುವದು ಸತ್ಯವಾಗಿದ್ದರೂ ಮರಾಠಿಯ ಜಾನಪದ ರಂಗಭೂಮಿ ಸಶಕ್ತವಾದದ್ದೂ ಪುರಾತನವೂ ಆಗಿದೆ. ಹಾಗೆ ನೋಡಿದರೆ ನಾವು ಮುಂಬೈ ಕರ್ನಾಟಕದವರಾಗಿದ್ದರೂ ಕನ್ನಡದ ಕರಾವಳಿಗೆ ಮರಾಠೀ ಜಾನಪದದ ಪರಿಚಯ ಕಡಿಮೆಯೇ. ‘ತಮಾಷಾ’ ದ ಬಗ್ಗೆಯಂತೂ ಕೇಳಿದ ಅಡಾ ಪಡಾ ಸುದ್ದಿಗಳೇ ಜಾಸ್ತಿ.
ಹೀಗೆ ಸೀಮಿತ ಜ್ಞಾನದೊಂದಿಗೆ ‘ತಮಾಷಾ’ ದ ಒಳಹೊಕ್ಕರೆ ಗಲಿಬಿಲಿಯಾಗುವದು ನಿಕ್ಕಿ. ಅದಕ್ಕೇ ಡಿ.ಎಸ್.ಚೌಗುಲೆಯವರು ಚಿಕ್ಕ ಚಿಕ್ಕ ಟಿಪ್ಪಣಿಗಳೊಂದಿಗೆ ಕೈ ಹಿಡಿದು ತಮಾಷೆ ತೋರಿಸಲು ಕರೆದೊಯ್ಯುತ್ತಾರೆ. ಹದಿನೇಳು ಹದಿನೆಂಟನೆಯ ಶತಮಾನದ ಈ ಕಲೆಯ ಇತಿಹಾಸ ಹೇಳುತ್ತ, ‘ತಮಾಷಾ’ ದ ಪ್ರಶ್ನೋತ್ತರದ ಲಾವಣಿ ಮತ್ತು ನಾಟ್ಯವನ್ನು ಆಧ್ಯಾತ್ಮಿಕತೆಯೊಂದಿಗೆ ಜೋಡಿಸಲಾಗಿದೆ’ ಎಂದು ಹೇಳಿ ಇದುವರೆಗೂ ನಾವು ‘ತಮಾಷಾ’ದ ಕುರಿತು ಅಂದುಕೊಂಡಿದ್ದನ್ನ ಬುಡಮೇಲು ಮಾಡಿಬಿಡುತ್ತಾರೆ. ಇಂಥ ಮೂರ್ನಾಲ್ಕು ಟಿಪ್ಪಣಿಗಳ ಜೊತೆಗೆ ಒಳಹೊಕ್ಕರೆ ‘ತಮಾಷೆ’ಯ ಮಜಾ ಸಿಗುತ್ತದೆ.
ಧಾರವಾಡ ದ ರಂಗಾಯಣಕ್ಕಾಗಿ ಬರೆದ ನಾಟಕ ಇದು. ಪಠ್ಠೆ ಬಾಪೂರಾವ್ ರ ಮೌಖಿಕ ಪಠ್ಯ ದ ಪರಿಷ್ಕೃತ ರೂಪ.
ನಾಟಕ ಎರಡು ಭಾಗಗಳಲ್ಲಿದೆ. ಪೂರ್ವರಂಗದಲ್ಲಿ ‘ತಮಾಷಾ’ ದ ಮೂಲ ನಾಟ್ಯ ಗುಣಗಳಿವೆ. ಚೌಗುಲೆಯವರ ಟಿಪ್ಪಣಿಗಳ ಲೆಕ್ಕದಲ್ಲಿ ಹೇಳುವದಾದರೆ ಇದೊಂದು ‘ಸಂಗೀತ ತಮಾಷಾ’. ಗೌಳಣ, ಮಾವಶಿ, ಪೇಂದ್ಯಾ, ಗೊಲ್ಲತಿಯರು, ಕೃಷ್ಣ ಎಲ್ಲ ಇಲ್ಲಿದ್ದಾರೆ. ಸಾಕಷ್ಟು ಹಾಡುಗಳಿವೆ.

ಗೊಲ್ಲತಿಯರು ಮಥುರೆಯ ಸಂತೆಗೆ ಹೊರಟಿದ್ದಾರೆ:
ಬೆಳಕು ಹರಿದು ಸೂರ್ಯ ನೆತ್ತಿಗೇರ್ಯಾನೋ
ಸಂತೀ ಸರಸರ ಮುಂದಕ ಹೋತೋ
ಗೊಲ್ಲ ಹಳ್ಳಿಗೆ ಹೋಗಿ ತಿಂಗಳಾಯ್ತು
ಕಿರಿ ಮೈದುನ ಹೊದಕೊಂಡ ಮಲಗಿ ಆತು
ಹಸಿದ ಕೂಸಿಗೆ ತೊಟ್ಟಿಲಾಗ ಹಾಕೇನಿ
ನಾನಂತೂ ಮಥುರೆಗೆ ಕುದುರೆ ಹತ್ತೀನಿ
ಸಂತೆಯ ಹಾದಿಯ ವಾತಾವರಣವನ್ನು ಹೂಬೇಹೂಬು ಕಟ್ಟಿಕೊಡಬಲ್ಲ ಹಾಡು. ಜೊತೆಗೆ ಹೆಣ್ಮಕ್ಕಳ ಪಾಡನ್ನೂ ಕೂಡ.
ಉದ್ದಕ್ಕೂ ತುಂಟ ತುಂಟ ಮಾತುಗಳು. ಕೆಲವೊಮ್ಮೆ ‘ಯಬ್ಬಾ’ ಅನ್ನುವಷ್ಟು. ಅದರ ಮಜಾ ನಾಟಕ ಓದೇ ತಿಳೀಬೇಕು. ಪೂರ್ವರಂಗದ ತುದಿಗೆ ಒಂದು ಚಿಕ್ಕ ಪ್ರಹಸನವಿದೆ. ಕೆಲವು ಎಡಬಿಡಂಗಿ ಪಾತ್ರಗಳು, ಈ ಪಾತ್ರಗಳು ನಿರರ್ಗಳವಾಗಿ ಕೆಲವೊಮ್ಮೆ ಅಸಂಗತವಾಗಿ ಹರಟುತ್ತವೆ. ಇವು ಜಾತ್ರೆಗೆ ‘ಮನರಂಜನೆ’ ಕಾರ್ಯಕ್ರಮ ಕ್ಕೆ ಬುಕ್ ಮಾಡೋದಕ್ಕೆ ನಾಯಕಿಣಿ ಮನೆಗೆ ಹೊರತಿದಾವೆೆ. ಅವಳ ಮೆಯಲ್ಲೂ ಮಾತು, ಮಾತು. ಈ ನಡುವೆ ‘ಹಗಲೆಲ್ಲಾ ಚಡ್ಡಿ ಕಳಿ: ಲಾಡಿ ಕಳಿ’ಯಂಥ ಪ್ರಹಸನವೂ ಬಂದು ಹೋಗುತ್ತದೆ ಎಂದ ಮೇಲೆ ಸನ್ನಿವೇಷ ಊಹಿಸಿಕೊಳ್ಳಿ. ಇವೆಲ್ಲವುಗಳ ಕೊನೆಯಲ್ಲಿ ಒಂದು ಚೆಂದದ ಮರಾಠೀ ಹಾಡಿದೆ. ಅದನ್ನ ಚೌಗುಲೆ ಅಷ್ಟೇ ಚೆಂದ ಅನುವಾದ ಮಾಡಿದ್ದಾರೆ.
ಹಾಡಿನ ಕೊನೆಯಲ್ಲಿ
ಪಠ್ಠೇ ಬಾಪುರಾವಜೀ ಕವೀ, ಜಡನ ಕೇಲೀ ನೀತನವೀ
ಸವಾಯಿ ಸವಾ ಲಾಕೀಗ
( ಪಠ್ಠೇ ಬಾಪುರಾವ ಹೊಸ ಕಾವ್ಯ ಮಾಲೆ ಕಟ್ಟಿದ
ಇದರ ಕಿಮ್ಮತ್ತ ಲಾಖ ಸವ್ವಾ ಲಾಖ)

ಹೌದು ನಿಜಕ್ಕೂ ಇವೆಲ್ಲ ಅಮೂಲ್ಯ ಕವನಗಳೇ.
ಪೂರ್ವಾರ್ಧ ಹೀಗಾದರೆ ಉತ್ತರಾರ್ಧದಲ್ಲಿ ಒಂದು ಕಿರು ನಾಟಕ. ಇದರಲ್ಲೂ ಎರಡು ಭಾಗ. ಸಿಪಾಯಿ, ರಾಜ, ರಾಣಿ, ರೈತ ಎಲ್ಲ ಇಲ್ಲಿದಾರೆ. ಇಲ್ಲಿ ನಾಟಕ ಸಮಕಾಲೀನತೆಯ ಟಚ್ ಪಡೆಯುತ್ತದೆ. ‘ರಾಜ’ನ ಐಷಾರಾಮ, ರೈತನ ಬವಣೆ ಯಂಥ ವಿಷಯಗಳೆಲ್ಲ ಬಂದು ಹೋಗುತ್ತವೆ. ಕೊನೆಯ ಸುಖಾಂತ್ಯದಲ್ಲಿ ಖಂಡೋಬಾ, ಬಾಣಾಯಿ ಯರ ಮದುವೆ. ರಾಜನೂ ಈಗ ಸಮಾನತೆಯ ಪ್ರತಿಜ್ಞೆ ಮಾಡುತ್ತಾನೆ.
ಕೊನೆಯಲ್ಲಿ ಕನಕದಾಸರ ‘ಕುಲ ಕುಲ ಕುಲವೆಂದು ಹೊಡೆದಾಡದಿರಿ’ ಹಾಡು.
ಮರಾಠಿಯ ನೆಲದ ಘಮವನ್ನು ಕನ್ನಡಕ್ಕೆ ತರುವ ಉತ್ತಮ ಪ್ರಯತ್ನವಿದು. ಗ್ರಾಮ್ಯದ ವಾತಾವರಣ ನಾಕದುದ್ದಕ್ಕೂ ಇದೆ. ನಾಲಿಗೆ ಹೊರಳಿಸುವ ಚಾಲಾಕಿನ ಮಾತುಗಳು, ಹಾಡುಗಳ ಸೊಗಡನ್ನು ಹಾಗೇ ಉಳಿಸಿಕೊಂಡು ಒಂದು ಜಾನಪದ ಸಂಭ್ರಮಕ್ಕೆ ಒಯ್ಯುತ್ತದೆ ಈ ನಾಟಕ. ಪೋಲಿತನವೂ ಇದರೊಡನೆ ಸೇರಿಕೊಂಡು ‘ತಮಾಷಾ’ಕ್ಕೆ ಕಳೆ ತರುತ್ತದೆ. ಮರಾಠಿ ಮಣ್ಣಿನ ಕನ್ನಡ ದ ಗಮ್ಮತ್ತು ಖುಷಿಕೊಡುತ್ತದೆ. ಆ ಕಾರಣಕ್ಕಾಗಿ ಚೌಗುಲೆ ಯವರಿಗೆ ಅಭಿನಂದನೆ ಮತ್ತು ಧನ್ಯವಾದಗಳು.






0 Comments