ಪ್ರಸನ್ನ
ಸಂತೇಕಡೂರು
ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಭಾರತ ದೇಶದ ಕರ್ನಾಟಕದಲ್ಲೊಂದು ಶಿವಮೊಗ್ಗ. ಶಿವಮೊಗ್ಗದ ಹೃದಯದಲ್ಲಿರುವ ಸುಂದರವಾದ ಉದ್ಯಾನವನ. ತರಾವರಿ ಹೂ ಗಿಡಗಳು, ಮರಗಳಿಂದ ಕೂಡಿರುವ ಪಾರ್ಕಿನ ಮಧ್ಯದಲ್ಲಿ ಒಂದು ಮನಮೋಹಕ ಮಂಟಪ, ಅದರಲ್ಲಿ ಗಾಂಧಿ ತಾತನ ಭವ್ಯ ಪ್ರತಿಮೆ. ದಕ್ಷಿಣಕ್ಕೇ ಒಂದು ಕಾಲದಲ್ಲಿ ಇದ್ದ ಚಿಕ್ಕ ಪ್ರಾಣಿ ಸಂಗ್ರಹಾಲಯ. ಮತ್ತೊಂದು ಭಾಗವನ್ನ ಹಾವಿನಾಗೇ ಸುತ್ತುವರೆದು ಬರುವ ಇತ್ತೀಚೆಗೆ ಬಿಟ್ಟಿರುವ ಮಕ್ಕಳ ರೈಲು. ಸುತ್ತಲಿರುವ ಬೇರೆ ಬೇರೆ ಶಾಲೆಗಳ ಮಕ್ಕಳು, ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ ವಯಸ್ಸಾದವರು, ನಡುವಯಸ್ಸಿನವರು ಅದರಲ್ಲಿ ಇತ್ತೀಚೆಗೆ ಜಗತ್ತಿನ ಸಕ್ಕರೆ ಮತ್ತು ಕೊಬ್ಬನೆಲ್ಲಾ ತಮ್ಮ ದೇಹದಲ್ಲೇ ತುಂಬಿಕೊಂಡಿರುವವರು ಪಾರ್ಕಿಗೆ ಬಂದು ಸುತ್ತುವುದುಂಟು. ಮಧ್ಯಾಹ್ನದ ವೇಳೆ ವಿವಿಧ ಕಾಲೇಜಿನ ಪ್ರೇಮಿಗಳು ಹಕ್ಕಿಗಳ ಇಂಪಾದ ಸಂಗೀತದಲ್ಲಿ ತಾವು ಹಕ್ಕಿಗಳಾಗುವುದು. ಶನಿವಾರ ಮತ್ತು ಭಾನುವಾರ ತಂದೆ, ತಾಯಿಗಳು ಮಕ್ಕಳ ಜೊತೆ ಕುಟುಂಬದವರೆಲ್ಲಾ ಬಂದು ವಿಶ್ರಮಿಸುವುದು ಸಾಮಾನ್ಯ.
ರಾತ್ರೀ ಮಾತ್ರ ಗಾಂಧಿ ಪಾರ್ಕ್ ಕುಡುಕರು, ಸಲಿಂಗಿಗಳು, ರಹಸ್ಯ ಪ್ರೇಮಿಗಳು, ಭಗ್ನಪ್ರೇಮಿಗಳು, ಏಕಾಂಗಿಗಳು, ಮನೆ ಬಿಟ್ಟು ಬಂದವರ ವಿಚಿತ್ರ ಮನಸ್ಥಿತಿಯ ಒಂದು ನಿಗೂಢ ಪ್ರಪಂಚ. ಅಂತ ಪಾರ್ಕ್‌ನಲ್ಲಿ ತಂಪಾದ ಒಂದು ದಿನದ ಮುಸ್ಸಂಜೆ, ಕಾಲ ಕಳೆಯಲು ಗೆಳೆಯರು ಯಾರು ಸಿಗದ ಕಾರಣ ಗಾಂಧಿ ತಾತನ ಮಂಟಪದ ಬಲಭಾಗದಲ್ಲಿ ಒಂದು ಕಲ್ಲು ಬೆಂಚಿನ ಮೇಲೆ ಬಾಲ್ಯದ ಶಾಲಾ ದಿನಗಳನ್ನ ಮೆಲುಕು ಹಾಕುತ್ತಾ ಕುಳಿತ್ತಿದ್ದೆ. ಸೂರ್ಯ ಆಗಿನ್ನು ಪಡುವಣದಲ್ಲಿ ಮುಳುಗುತ್ತಿದ್ದ, ಆಗಸ ಕೆಂಬಣ್ಣದಿಂದ ಹೊಳೆಯುತ್ತಿತ್ತು, ಬಂಗಾರದ ಮೋಡಗಳು ತೇಲುತ್ತಿದ್ದವು, ಪಕ್ಷಿಗಳೆಲ್ಲಾ ಗೂಡಿನ ಕಡೆ ಮುಖ ಮಾಡಿದ್ದವು. ಆ ಸಮಯಕ್ಕೆ ನನ್ನ ತಲೆಮೇಲೆ ಬಾಗೆ ಮರದ ಮೇಲಿನಿಂದ ಯಾವುದೋ ಚಿಕ್ಕ ಕಾಯಿಯೊಂದು ತಲೆ ಮೇಲೆ ಬಿತ್ತು. ಮೇಲೆ ನೋಡಿದಾಗ ಬೂದ ಮಂಗಟ್ಟೆ ಹಕ್ಕಿಯೊಂದು (Grey Hornbill) ತನ್ನ ಕೊಕ್ಕಿನಲ್ಲಿ ಪೊಟರೆಯೊಳಗೆ ಬಂಧಿಯಾಗಿ ಮೊಟ್ಟೆಗಳಿಗೆ ಖಾವು ಕೊಡುತಿರುವ ಸಂಗಾತಿಗೆ ಗುಟುಕು ನೀಡುತಿತ್ತು. ಹೊರಗಡೆಯಿರುವ ಈ ಮಂಗಟ್ಟೆ ಹಕ್ಕಿಯನ್ನು ಯಾರಾದರೂ ಹಿಡಿದರೆ ಅಥವಾ ಕೊಂದರೆ, ಪೊಟರೆಯೊಳಗೆ ಬಂಧಿಯಾಗಿರುವ ಹಕ್ಕೀ ಆಹಾರ ವಿಲ್ಲದೇ ಒಲವೆ ಜೀವನ ಸಾಕ್ಷಾತ್ಕಾರವೆಂದು ಅಲ್ಲಿಯೇ ಸತ್ತುವೋಗುವುದೆಂದು ಎಲ್ಲಿಯೋ ಓದಿದ್ದೆ.
ಹಾಗೆಯೇ ಸ್ವಲ್ಪ ಹೊತ್ತು ಪಕ್ಷಿಗಳ ಬಗ್ಗೆ ಯೋಚಿಸುತ್ತಿರುವಾಗ ಪಾರ್ಕಿನೋಳಗೆಲ್ಲಾ ಕತ್ತಲಾವರಿಸಿತು, ಅಲ್ಲಲ್ಲಿ ವಿದ್ಯುತ್ ದೀಪಗಳು ಹಚ್ಚಲಾಯಿತು. ದೂರದಲ್ಲಿ ಒಬ್ಬರೋ, ಇಬ್ಬರೋ ನಿಗೂಡ ಮನುಷ್ಯರು ಓಡಾಡುವ ಮತ್ತೇ ಕೆಲವರು ಕುಳಿತು ಏನೋ ಮಾತನಾಡುವ ದೃಶ್ಯಗಳು ಮಬ್ಬಾಗಿ ಕಾಣಿಸುತ್ತಿದ್ದವು. ಅಷ್ಟರಲ್ಲಿ ಯಾರೋ ಒಬ್ಬ ಅಘೋರಿಗಳ ರೀತಿ ಗಡ್ಡ ಬಿಟ್ಟುಕೊಂಡ ವ್ಯಕ್ತಿ ತನ್ನ ಮನಸ್ಸಿನಲ್ಲಿ ಏನನ್ನೋ ಗಾಢಾವಾಗಿ ಯೋಚಿಸುತ್ತಾ, ಕುಂಟುತ್ತಾ ನನ್ನ ಕಡೆಯೇ ಬಂದ. ಹತ್ತಿರ ಬಂದವನೇ “ಬೆಂಕೀ ಪಟ್ಣಾ ಇದ್ಯಾ ಗುರು”? ಎಂದು ಕೇಳಿದ. ಆ ಧ್ವನಿ ಎಲ್ಲೋ ಕೇಳಿದಾಗಿತ್ತು. ಕತ್ತಲೆಯಲ್ಲಿ ಮುಖ ಸರಿಯಾಗಿ ಕಾಣಲಿಲ್ಲ. ಇಲ್ಲಾ, ನಾನು ಬೀಡಿ, ಸಿಗರೇಟು ಸೇದೋದಿಲ್ಲ ಅಂದೇ. ನನ್ನ ಧ್ವನಿಯನ್ನ ಕ್ಷಣ ಮಾತ್ರದಲ್ಲಿ ಕಂಡು ಹಿಡಿದ ಅವನು ಗೆಳೆಯ ನೀನಾ ಎಂದು ಅಪ್ಪೀಕೊಂಡ.
ಸ್ನಾನವನ್ನು ಕಾಣದ, ಗಾಯದ ಗುರುತುಗಳಿಂದ ತುಂಬಿರುವ ಕಪ್ಪಾದ ದೇಹ, ಎತ್ತರದ ನಿಲುವು, ಕೊಳೆಯಾದ ಬಟ್ಟೆಗಳು, ಹೂಗಿಡಗಳ ಸುವಾಸನೆಯಲ್ಲೂ ಪಸರಿಸುತ್ತಿದ್ದ ಬೆವರಿನ ದುರ್ವಾಸನೆ. ತನ್ನ ಹತ್ತನೇ ವರ್ಷಕ್ಕೇ ಶಾಲೆಯ ಚೀಲದಲ್ಲಿ ಚಾಕು, ಚೂರಿ ಇಡಿದು ಓಡಾಡುತ್ತಿದ್ದವನು, ಹನ್ನೆರಡನೇ ವರ್ಷಕ್ಕೇ ಜೇಬುಗಳ್ಳತನ ಕಲಿತವನು, ಇಪ್ಪತ್ತನೇ ವರ್ಷಕ್ಕೆ ಅವನು ಮಾಡಿದ ಕೊಲೆಗಳು, ಅರ್ಧಕೊಲೆಗಳು ಮತ್ತು ದರೋಡೆಗಳು ಅವನಿಗೆ ಲೆಕ್ಕವಿರಲಿಲ್ಲ. ಒಂದು ಕಾಲಕ್ಕೆ ಶಿವಮೊಗ್ಗದ ಜನ ಮಧ್ಯರಾತ್ರಿ ಯಲ್ಲಿ ಓಡಾಡುವಾಗ ಇವನ ಹೆಸರು ಕೇಳಿದರೆ ಭಯಬಿಳುತ್ತಿದ್ದರು. ಇಂತಹ ಭಯಾನಕ ಕಳ್ಳ ಮತ್ತು ಕೊಲೆಪಾತಕಿಯೊಬ್ಬ ಕತ್ತಲೆಯಲ್ಲಿ ನನ್ನ ತಬ್ಬಿಕೊಂಡಾಗ, ಒಮ್ಮೆಯೇ ಭಯಗೊಂಡ ನನ್ನ ದೇಹ, ಮನಸ್ಸುಗಳೆರಡು ನಡುಗಲಾರಂಭಿಸಿದವು. ಚಳಿಗಾಲದ ಚಳಿಯಲ್ಲೂ ಬೆವರಲಾರಂಭಿಸಿದೆ. ಆ ಸಮಯದಲ್ಲಿ ಎಂತಹ ಧೈರ್ಯವಂತನು ನಾಗರಹಾವಿನ ಹೆಡೆಯ ಮುಂದಿನ ಕಪ್ಪೆಯಂತಾಗುವುದು ಸಾಮಾನ್ಯ. ಇವನ ಜೊತೆಯಲ್ಲಿ ಮಾತನಾಡುವಾಗ ಯಾರಾದರೂ ಪರಿಚಯದವರು ಅಥವಾ ಪೋಲಿಸರೋ ನೋಡಿದರೆಂಬ ಇನ್ನೊಂದು ಭಯ. ಅವನಿಗೆ ಅದನ್ನ ತೋರಿಸದೆ ಮಾತನಾಡಲಾರಂಭಿಸಿದೆ.
ಅವನ ಬಾಯಿಯಿಂದ ಯಾವುದೇ ಕುಡಿದ ವಾಸನೇ ಬರುತ್ತಿರಲಿಲ್ಲ, ಸ್ವಲ್ಪ ಧೈರ್ಯ ಬಂತು. ಕುಡಿದಾಗ ಅವನು ಮೃಗವಾಗಿ ಬದಲಾಗುತ್ತಿದ್ದ. ಆಗತಾನೇ ಯಾವುದೋ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ರೀತಿ ಇತ್ತು ಅವನ ಚರ್ಯೆ. ಇಂತಹ ಹಿಂಸಾವಾದಿಯ ಜೊತೆ ನನ್ನ ಸ್ನೇಹಕ್ಕೆ ಇದು ಬೆಳ್ಳಿ ಮಹೋತ್ಸವದ ವರ್ಷ, ಅದಕ್ಕೇ ಸಾಕ್ಷೀ ನಮ್ಮ ಎದುರುಗಡೆ ಕತ್ತಲಲ್ಲೂ ಬೆಳಗುತ್ತಾ ಕೋಲಿಡಿದು ಮೌನವಾಗಿ ನಿಂತಿರುವ ಅಹಿಂಸಾವಾದಿ ಮಹಾತ್ಮ. ಹತ್ತು ವರ್ಷಗಳ ಹಿಂದೆ ಇದೆ ಜಾಗದಲ್ಲಿ ಭೇಟಿಯಾಗಿದ್ದ ನಾವು ಕಾಕತಾಳೀಯವಾಗಿ ಮತ್ತೇ ಸಿಗುತಿರುವುದು ಇಂದೇ.

ಸುಮಾರು ವರ್ಷಗಳ ಹಿಂದೆ ಇವನು ನನ್ನ ಬಾಲ್ಯದ ಸಹಪಾಠಿ. ನಮ್ಮದು ಗಾಂಧಿ ಪಾರ್ಕ್ ಶಾಲೆ. ಕೊನೆಯ ಬೆಂಚಿನ ಒಡೆಯರಾದ ನಾವು ಮಾಡದ ಚೇಷ್ಟೇಗಳಿರಲಿಲ್ಲ, ಟೀಚರ್ ಗಳಿಂದ ಬೆತ್ತದ ರುಚಿ ಸವಿಯದ ದಿನಗಳಿರಲಿಲ್ಲ. ಏನೆಲ್ಲಾ ತಲೆಹರಟೆ ಮಾಡಿದರು ಓದಿನಲ್ಲಿ ಮುಂದೆಯೇ ಇದ್ದ ಕಾರಣಕ್ಕೇ ಟೀಚರ್ ಗಳು ನನ್ನನ್ನೇ ವಿಭಾಗದ ಮಾನಿಟಾರ್‌ನಾಗಿ ಮಾಡುತ್ತಿದ್ದರು. ಈ ಸಹಪಾಠಿ ಮಾತ್ರ ಓದಿನಲ್ಲಿ ಸ್ವಲ್ಪ ಹಿಂದೆಯೇ ಇದ್ದ, ಬೇರೆಲ್ಲಾ ಕೆಲಸಗಳಲ್ಲಿ ಮುಂದೆ. ಚಿಕ್ಕಪರೀಕ್ಷೆ ಮತ್ತು ದೊಡ್ಡ ಪರೀಕ್ಷೆಗಳಲ್ಲಿ ನಾನಾ ಆಸೆಗಳನ್ನ ತೋರಿಸಿ ಅವನಿಗೆ ನಕಲು ಮಾಡಲು ಸಹಾಯ ಮಾಡಲು ಪ್ರೇರೇಪಿಸುತ್ತಿದ್ದ, ಆ ಪ್ರೇರಣೆಗೆ ನಾನು ಸೋಲುತ್ತಿದ್ದೆ. ಕೆಲವೊಮ್ಮೆ ಶಾಲಾ ಬಿಡುವಿನ ವೇಳೆಯಲ್ಲಿ ಮಲ್ಲಿಕಾರ್ಜುನ ಚಿತ್ರಮಂದಿರದ ಮುಂಭಾಗದಲ್ಲಿರುವ ಖಾಲಿ ಜಾಗದಲ್ಲಿರುವ ಸೀಬೆ ಮರದಲ್ಲಿ ಹಣ್ಣನ್ನು ಕೀಳಲು ಕರೆದೋಯುತ್ತಿದ್ದ. ಮತ್ತೋಮ್ಮೆ ತೋಟಗಾರಿಕೆ ಇಲಾಖೆಯ ತೋಟದಲ್ಲಿ ಮಾವಿನಕಾಯಿ ಕೀಳುತ್ತಿದ್ದೆವು. ಊಟದ ವೇಳೆಯಲ್ಲಿ ಮಾರುಕಟ್ಟೆಯಲ್ಲಿರುವ ಅವರ ಹೂವೀನಂಗಡಿಗೆ ಹೋಗುತ್ತಿದ್ದೆವು. ಸಂಜೆ ಶಾಲಾ ಆಟದ ವೇಳೆಯಲ್ಲಿ ಹಾರುವ ಬಣ್ಣ ಬಣ್ಣದ ಚಿಟ್ಟೆಗಳನ್ನ ಸ್ಲೇಟಿನ ಸಹಾಯದಿಂದ ಹಿಡಿಯುತ್ತಿದ್ದೆವು. ಮತ್ತೇ ಕೆಲವು ಸಲ ಲಗೋರಿ ಆಡುವಾಗ ಚೆಂಡು ಜಿಂಕೆಗಳಿದ್ದ ಬೇಲಿಯೊಳಗೆ ಬೀಳುತ್ತಿತ್ತು, ಅದನ್ನ ತರಲು ಸುಮಾರು ಹತ್ತು ಅಡಿಯ ತಂತಿ ಬೇಲಿಯನ್ನ ಜಿಂಕೆಗಳ ರೀತಿ ಚಂಗನೆಹಾರಿ ಚೆಂಡನ್ನು ತರುತ್ತಿದ್ದ.
ಇವನನ್ನ ನೋಡಿ ಜಿಂಕೆಗಳೇ ಭಯಬಿದ್ದು ಓಡುತ್ತಿದ್ದವು. ಬಣ್ಣ ಬಣ್ಣದ ಜೀರುಂಡೆಗಳನ್ನ ಬೆಂಕಿ ಪೊಟ್ಟಣದಲ್ಲಿ ಹಿಡಿದು ತಂದು ತರಗತಿಯಲ್ಲಿ ಚಿನ್ನ, ಬೆಳ್ಳಿಯ ರೀತಿ ತೋರಿಸುತ್ತಿದ್ದ. ಮಗದೂಮ್ಮೆ ಏರೋಪ್ಲೇನ್ ಚಿಟ್ಟೆಗೇ ದಾರ ಕಟ್ಟಿ ತರಗತಿಯಲ್ಲಿ ಹಾರಲು ಬಿಡುತ್ತಿದ್ದ. ಪಾರ್ಕಿನೊಳಗಿರುವ ರಸ್ತೆಯ ಪಕ್ಕದ ಅಶೋಕ ಮರಗಳನ್ನು ಏರುತ್ತಿದ್ದೆವು. ಗಾಂಧಿ ಪ್ರತಿಮೆಯ ಎಡ ಭಾಗದಲ್ಲಿದ್ದ ಕಾರಂಜಿ ಕೊಳದಲ್ಲಿ ಗೊಜ್ಜಮೊಟ್ಟೆಗಳನ್ನ ಊಟದ ಬಾಕ್ಸ್ ನಲ್ಲಿ ಹಿಡಿಯುತ್ತಿದ್ದೆವು. ಗೋಪಿ ಸರ್ಕಲ್ ನಲ್ಲಿರುವ ಉಲ್ಲಾಸ್ ಸ್ಪೋರ್ಟ್ಸ್ ಅಂಗಡಿಗೆ ಹೋಗಿ ಕ್ರಿಕೆಟ್ ಬ್ಯಾಟ್ ಮತ್ತು ಚೆಂಡನ್ನು ಕೊಳ್ಳುತ್ತಿದ್ದೆವು. ಅಲ್ಲಿರುವ ರವಿ ಶಾಸ್ತ್ರಿ, ಕಪಿಲ್ ದೇವ್, ಸಿಕ್ಸರ್ ಸಿದ್ದು ಮತ್ತು ಗವಾಸ್ಕರ್ ಫೋಟೋಗಳನ್ನ ನೋಡುವುದೇ ನಮಗೆ ಒಂದು ಆನಂದವಾಗುತ್ತಿತ್ತು. ಈ ರೀತಿ ನಮ್ಮ ಗೆಳೆತನ ಬೆಳೆಯುತ್ತಾ ಹೋಯಿತು.
ಏಚ್.ಪೀ.ಸೀ ಚಿತ್ರಮಂದಿರದ ಪಕ್ಕದಲ್ಲಿದ್ದ ಬೃಂದಾವನ ಹೋಟೆಲ್‌ನ ಮುಂಭಾಗಲ್ಲಿ ಗಾಂಧೀಜಿ ಮತ್ತು ಕಸ್ತೂರಬಾ ಗಾಂಧಿ ಶಿವಮೊಗ್ಗಕ್ಕೇ ಬಂದಾಗ ನೆಟ್ಟ ಎರಡು ಹಳೆಯ ತೆಂಗಿನ ಮರಗಳಿದ್ದವು. ಆ ತೆಂಗಿನ ಮರಗಳ ಬುಡವನ್ನು ಮುಟ್ಟುವುದೇ ಒಂದು ಆನಂದ. ಅದು ಗಾಂಧೀಜಿಯನ್ನ ಜೀವಂತವಾಗಿ ಮುಟ್ಟಿದಷ್ಟೇ ಸಂತೋಷ ಕೊಡುತ್ತಿತ್ತು ನಮಗೆ. ಶಾಲೆಗೆ ಬಂದು ನಮ್ಮ ಸಹಪಾಠಿಗಳೆಲ್ಲರಿಗೂ ಈ ಕೈ ಗಾಂಧೀಜಿ ನೆಟ್ಟ ತೆಂಗಿನ ಮರವನ್ನ ಮುಟ್ಟಿದೆ ಎಂದು ತೋರಿಸುತ್ತಿದ್ದೆವು. ಶನಿವಾರ ಬಂತೆಂದರೆ ಇನ್ನಿಬ್ಬರೂ ಗೆಳೆಯರೊಟ್ಟಿಗೆ ಮುದ್ದಣ್ಣನವರ ಗಾಡಿಯಲ್ಲಿ ಮಂಡಕ್ಕೀ ಮತ್ತು ಲಕ್ಷ್ಮಮ್ಮನ ಹತ್ತಿರ ಗಿಳಿಮೂತಿ ಮಾವಿನಕಾಯಿ ಕೊಂಡು ತಿನ್ನುತ್ತಾ ಪಾರ್ಕ್‌ನಲ್ಲಿದ್ದ ಪ್ರಾಣಿ ಸಂಗ್ರಹಾಲಯಕ್ಕೆ ಹೋಗುತ್ತಿದ್ದೆವು. ಅಲ್ಲಿದ್ದ ಗಿಳಿಯ ಕೊಠಡಿಯ ಪಂಜರದ ಹತ್ತಿರ ಹೋಗಿ ದೊಡ್ಡ ಮಾತನಾಡುವ ಗಂಡುಗಿಳಿ “ರಾಮ” ನನ್ನ ಮಾತನಾಡಿಸುತ್ತಿದ್ದೆವು. ಅಷ್ಟರಲ್ಲಿ ವಯಸ್ಸಾದ ಸ್ವಾತಂತ್ರ್ಯ ಹೋರಾಟಗಾರರು, ಗಾಂಧಿವಾದಿಗಳು ಆದ ಗಾಂಧಿ ಟೋಪಿಯ ವೃದ್ದರೊಬ್ಬರು ತಮ್ಮ ದಿನನಿತ್ಯದಂತೆ ಪ್ರಾಣಿಗಳಿಗೆ ಆಹಾರವನ್ನು ತಂದು ತಿನ್ನಿಸುತ್ತಿದ್ದರು.
ಅವರು ಕೊಟ್ಟ ಆಹಾರವನ್ನ ನಾವು ಕರಡಿಗೆ, ಮೊಲಗಳಿಗೆ, ನವಿಲುಗಳಿಗೆ ತಿನ್ನಿಸುತ್ತಿದ್ದೆವು. ಎರಡು ರೂಪಾಯಿಗಳನ್ನ ಕೊಟ್ಟು ಸಕ್ಕರೇಬೈಲಿನಿಂದ ಬರುತ್ತಿದ್ದ ಆನೆಯಮೇಲೆ ಗಾಂಧಿ ತಾತನ ಮಂಟಪದ ಸುತ್ತ ಮೂರು ಸುತ್ತು ಬರುತ್ತಿದ್ದೆವು. ಆ ರೀತಿ ಸುತ್ತುವಾಗ ಆನೆಯ, ಒಂಟೆಯ ಮತ್ತು ನವಿಲಿನ ರೀತಿ ಕತ್ತರಿಸಿದ ಸುಂದರವಾದ ಗಿಡಗಳನ್ನ ನೋಡಿ ಸಂತೋಷಪಡುತ್ತಿದ್ದೆವು. ಆನೆಯ ಮೇಲೇರಲು ಮರದ ಮೆಟ್ಟಿಲುಗಳಿದ್ದ ಒಂದು ಎತ್ತರವಾದ ಕೊಠಡಿಯಿತ್ತು. ಅಲ್ಲಿದ್ದ ಕರಡಿ ನೋಡಿ ಕೊಳ್ಳಲು ವಿಚಿತ್ರವಾದ ಒಬ್ಬ ಮನುಷ್ಯನನ್ನ ನೇಮಿಸಿದ್ದರು. ಅವನನ್ನ ಎಲ್ಲರೂ “ಜಾಂಬವಂತ” ಎಂದೂ ಕರೆಯುತ್ತಿದ್ದರು. ಅದಕ್ಕೇ ಕಾರಣ ಅವನ ಮೈಮೇಲಿದ್ದ ಉದ್ದವಾದ ರೋಮಗಳು, ಚೂಪಾದ ಮೂತಿ, ಚಪ್ಪಟೆ ಮೂಗು. ಯಾವಾಗಲು ಖಾಕಿ ಚಡ್ಡೀ, ಖಾಕಿ ಅಂಗಿಯಲ್ಲಿರುತ್ತಿದ್ದ. ಮಕ್ಕಳಿಗೆ ಅವನು ಒಂದು ಪ್ರಾಣಿಯ ರೀತಿ ಗೋಚರಿಸುತ್ತಿದ್ದ. ನನ್ನ ಗೆಳೆಯ ಅವನನ್ನ ಮಾತನಾಡಿಸಿದರೆ ಏನೋ ಸಂತಸಗೊಳ್ಳುತ್ತಿದ್ದ. ಕೆಲವು ಸಲ ಜಿಂಕೆಗಳಿಗೆ ಹುಲ್ಲು ಮತ್ತು ಗಿಡಗಳನ್ನ ತಿನ್ನಿಸುತ್ತಿದ್ದೆವು. ಜಿಂಕೆಯ ಚರ್ಮದ ಮೇಲಿರುವ ಬಿಳಿಯ ಚುಕ್ಕಿಗಳನ್ನ ಮುಟ್ಟಿದರೆ ಈ ಸಲ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತೇವೆ ಎಂದೂ ಎಲ್ಲರನ್ನೂ ತಂತಿ ಬೇಲಿಯ ಕಿಂಡಿಯಿಂದಲೇ ಮುಟ್ಟಿಸುತ್ತಿದ್ದ. ಭಾನುವಾರದಂದು ಮಕ್ಕಳ ಬಾಡಿಗೆ ಸೈಕಲ್ ಕೊಂಡು ಗಾಂಧಿ ಬಜಾರ್, ಗೋಪಿ ಸರ್ಕಲ್,ಜೈಲ್ ಸರ್ಕಲ್, ಮಿಶೆನ್ ಕಾಂಪೌಂಡ್, ಮೆಗ್ಗಾನ್ ಆಸ್ಪತ್ರೆ ಹತ್ತಿರ ಸುತ್ತುತಿದ್ವಿ.
ಕೆಲವೊಮ್ಮೆ ಟೀಚರ್ ಗಳು ಮಕ್ಕಳಿಗೆ “ಶಾಂತಿನಿಕೇತನ”ದ ಶೈಲಿಯಲ್ಲಿ ಪಾಠ ಮಾಡಬೇಕೆಂದು ಗಾಂಧಿ ಪಾರ್ಕ್‌ಗೆ ಕರೆತಂದು ಹುಡುಗ, ಹುಡುಗಿಯರನ್ನೆಲ್ಲಾ ಗಾಂಧಿ ತಾತನ ಪ್ರತಿಮೆ ಬಳಿ, ಮತ್ತೊಮ್ಮೆ ದೊಡ್ಡ ಮಂಟಪವಿರುವ ಬಳಿ, ಇನ್ನೊಮ್ಮೆ ದೊಡ್ಡ ಬಾಗೆ ಮರದ ಕೆಳಗೆ ಕೂರಿಸಿ ಪಾಠ ಮಾಡುತ್ತಿದ್ದರು. ಅಂತ ಒಂದು ದಿನ ಗಾಂಧೀಜಿಯ “ನನ್ನ ಕಥೆ” ಯನ್ನು ಪ್ರತಿಮೆಯ ಸುತ್ತ ಮಕ್ಕಳನ್ನು ಕೂರಿಸಿ ಪಾಠ ಮಾಡುತ್ತಿದ್ದರು. ಅದು ಸತ್ಯವನ್ನೇ ಹೇಳಬೇಕು, ಯಾರ ವಸ್ತುವನ್ನು ಕದಿಯಬಾರದು ಎಂದೆಲ್ಲಾ ಮತ್ತು ಗಾಂಧೀಜಿಯ ಆತ್ಮಕಥೆ “ನನ್ನಸತ್ಯ ಶೋಧನೆ” ಬಗ್ಗೆ ಹೇಳುತ್ತಿದ್ದರು. ಗಾಂಧೀಜಿಗೆ ಪ್ರಭಾವ ಬೀರಿದ್ದ ಸತ್ಯ ಹರಿಶ್ಚಂದ್ರ ಮತ್ತು ಶ್ರವಣ ಕುಮಾರನ ಕಥೆಗಳನ್ನ ಹೇಳುತ್ತಿರುವಾಗ ಗೊಂಬೆ ಅಂಗಡಿಯವರ ಮಗನಾದ ನಮ್ಮ ಸಹಪಾಠಿಯೊಬ್ಬನು ಎದ್ದುನಿಂತು ಅವನ ಫೋಟೋಗಳನ್ನ ಈ ನನ್ನ ಗೆಳೆಯ ಕದ್ದಿದ್ದಾನೆಂದು ಟೀಚರ್ ಗೆ ಹೇಳಿದ. ತಕ್ಷಣ ಟೀಚರ್ ಇವನನ್ನ ಎದ್ದು ನಿಲ್ಲಿಸಿ ಕದ್ದಿರುವುದು ನಿಜವಾ? ಎಂದು ಕೇಳಿದರು. ಆ ಫೋಟೋಗಳು ರೆಬೆಲ್ ಸ್ಟಾರ್ ಅಂಬರೀಶ್ ಚಿತ್ರದವು. ಅಂಬರೀಶ್ ನ ಪರಮ ಅಭಿಮಾನಿಯಾಗಿದ್ದ ನನಗೋಸ್ಕರ ಕದ್ದಿದ್ದ. ಆ ಕಳ್ಳತನವನ್ನ ಒಪ್ಪಿಕೊಂಡ ನಂತರ ಟೀಚರ್ ಇವನನ್ನ ಪ್ರತಿಮೆಯ ಮುಂದೆ ನಿಲ್ಲಿಸಿ ಗಾಂಧಿ ತಾತನ ಸನ್ನಿಧಿಯಲ್ಲಿ ಇನ್ನೂ ಮುಂದೆ ಕದಿಯುವುದಿಲ್ಲವೆಂದು ಆಣೆ ಮಾಡಿಸಿದರು. ಇವನು ತನ್ನ ಮನಸ್ಸಿನ ಅಂತರಾಳದಿಂದ ಹೃದಯಪೂರ್ವಕವಾಗಿ ಆಣೆ ಮಾಡಿದ್ದ. ಸುಮ್ಮನೇ ಕುಳಿತ್ತಿದ್ದ ನಾನು ಪ್ರತಿಮೆಯನ್ನ ಒಂದುಸಲ ನೋಡಿದೆ ನನಗೇಕೋ ಗಾಂಧಿ ತಾತ ಇವನನ್ನೇ ತನ್ನ ಕಣ್ಣು ತೆರೆದು ಜೀವಂತವಾಗಿ ನೋಡಿದಾಗಾಯಿತು.
ಅದೊಂದು ಸುಂದರವಾದ ದಿನ. ಶಾಲೆಯೊಳಗೆ ನೀತಿ ಪಾಠ ಮಾಡುವಾಗ ಟೀಚರ್ ಎರಡು ಅನಾಥ ಗಿಳಿ ಮರಿಗಳ ಕಥೆಯನ್ನು ಹೇಳಿದರು. ಕಾಡಿನಲ್ಲಿ ಅನಾಥವಾಗಿ ಇದ್ದ ಎರಡು ಗಿಳಿ ಮರಿಗಳಲ್ಲಿ ಒಂದನ್ನ ಕಟುಕನೊಬ್ಬನು ಹಿಡಿದು ಸಾಕುತ್ತಾನೆ ಮತ್ತೊಂದನ್ನ ಋಷಿಗಳೊಬ್ಬರು ತೆಗೆದುಕೊಂಡು ಸಾಕುತ್ತಾರೆ. ಸ್ವಲ್ಪ ದಿನಗಳ ನಂತರ ಕಟುಕನ ಮನೆಯ ಗಿಳಿ ಯಾರೇ ಅತಿಥಿಗಳು ಬಂದರು, ಹೊಡಿ,ಕಡಿ ಅನ್ನುತ್ತಿತ್ತು. ಋಷಿಗಳ ಗಿಳಿ ಬಂದ ಅತಿಥಿ ಗಳನ್ನ ಪ್ರೀತಿಯಿಂದ ಸತ್ಕರಿಸುತ್ತಿತ್ತು. ಸ್ವಲ್ಪ ದಿನಗಳ ಮೇಲೆ. ಈ ಕಥೆಯನ್ನ ಹೇಳಿದ ನಂತರ ಮನುಷ್ಯನಿಗೆ ಸಮಾಜ ಬೀರುವ ಪ್ರಭಾವದ ಬಗ್ಗೆ ಹೇಳಿದರು. ನಂತರ ಎಲ್ಲರೂ ಋಷಿಗಳ ಮನೆಯ ಗಿಳಿಯ ರೀತಿ ಇರಬೇಕು ಅಂದರು. ಹಾಗೆ ಸುಮ್ಮನೇ, ಯಾರು ಕಟುಕನ ಮನೆಯ ಗಿಳಿಯ ರೀತಿಯಾಗುತ್ತಿರಾ? ಎಂದು ಪ್ರಶ್ನೆಯನ್ನ ಕೇಳಿದರು. ಎಲ್ಲರೂ ಸುಮ್ಮನಿದ್ದಾಗ ಈ ಗೆಳೆಯ ಮಾತ್ರ ನಾನು ಅಂತ ಎದ್ದು ನಿಂತ, ನಾನು ಕಟುಕನ ಮನೆಯ ಗಿಳಿಯರೀತಿಯಾಗುತ್ತೇನೆ ಅಂದ! ಎಲ್ಲರಿಗೂ ಆಶ್ಚರ್ಯವಾಯಿತು. ಟೀಚರ್ ಇವನಿಗೆ ಬುದ್ದಿ ಹೇಳಿದರು. ಆದರೂ ಗೆಳೆಯಮಾತ್ರ ಬೇರೆಯವರನ್ನ ಹೊಡೆಯೋದು ನನಗೆ ಬಹಳ ಇಷ್ಟ ಟೀಚರ್ ಅನ್ನುತ್ತಾ ಕುಳಿತ.
ಇನ್ನೊಮ್ಮೆ “ಗೋವಿನ ಹಾಡು” ಪದ್ಯವನ್ನ ಮಾಡುತ್ತಿದ್ದಾಗ ನಾವೆಲ್ಲರೂ “ಪುಣ್ಯಕೋಟಿ” ಹಸುವನ್ನ ಇಷ್ಟಪಟ್ಟರೆ ಇವನು “ಅರ್ಭುತಾ” ವ್ಯಾಘ್ರನನ್ನ ಇಷ್ಟಪಡುತ್ತಿದ್ದ. ಮತ್ತೊಂದು ದಿನ ಟೀಚರ್ ಹತ್ತಿರ ಇವನ ಕಳ್ಳತನದ ಬಗ್ಗೆ ಹೇಳಿದ ಸಹಪಾಠಿ ಒಬ್ಬನೇ ಗಾಂಧಿ ಪಾರ್ಕ್‌ನಲ್ಲಿ ಸಿಕ್ಕಾಗ ಇವನು ತನ್ನ ಜೇಬಿನಿಂದ ಒಂದು ಚಿಕ್ಕ ಚಾಕು ತೆಗೆದು ಮತ್ತೊಂದು ಸಲ ಏನಾದ್ರೂ ಟೀಚರ್ ಗೆ ಹೇಳುದ್ರೇ ನಿನ್ನ ಗಿಳಿ ಮೂಗನ್ನ ಕತ್ತರಿಸುತ್ತೇನೆ ಅಂತ ಬೆದರಿಸಿದ. ಅದೊಂದು ಮಳೆಗಾಲದ ದಿನ ಎಂಬತ್ತರ ದಶಕದಲ್ಲಿದ್ದ ಬೆಂಗಳೂರಿನ ಭೂಗತ ಜಗತ್ತಿನ ರೌಡಿಗಳು ಏಚ್ ಪೀ ಸೀ ಚಿತ್ರಮಂದಿರದ ಹತ್ತಿರ ಶಿವಮೊಗ್ಗದ ಒಬ್ಬ ವ್ಯಕ್ತಿಯನ್ನ ಕೊಲೆ ಮಾಡಿದ್ದರು. ಆ ಕೊಲೆಯಾದ ಹೆಣವನ್ನ ನೋಡಲು ಹೋಗಿದ್ದ ಇವನು. “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬ ಗಾದೆ ಇಂದಿನ ಇವನನ್ನ ನೋಡಿದಾಗ ಚೆನ್ನಾಗಿ ಅರ್ಥವಾಗುತ್ತದೆ.
ನಂತರ ಒಂದು ದಿನ ಶಾಲೆಗೆ ಚಕ್ಕರ್ ಹಾಕಿ ಮಲ್ಲಿಕಾರ್ಜುನ ಚಿತ್ರಮಂದಿರಕ್ಕೆ ಬಂದಿದ್ದ ಚಲನಚಿತ್ರ “ದಾರಿ ತಪ್ಪಿದ ಮಗ” ನೋಡಲು ನನ್ನನು ಕರೆದುಕೊಂಡು ಹೋಗಿದ್ದ. ಚಿತ್ರಮಂದಿರದ ಹತ್ತಿರ ಹೋಗಿ ಭಯಗೊಂಡು ಶಾಲೆಗೆ ಹಿಂತಿರುಗಿ ಬಂದಿದ್ದೆ. ಅದರಲ್ಲಿನ ಕಳ್ಳನ ಪಾತ್ರದ ಬಗ್ಗೆ ಶಾಲೆಯಲ್ಲೆಲ್ಲಾ ಕಥೆ ಹೇಳುತ್ತಿದ್ದ. ಆ ಪಾತ್ರದಿಂದ ಬಹುವಾಗಿ ಪ್ರಭಾವಿತನಾಗಿದ್ದ. ಮತ್ತೊಂದು ದಿನ ಶನಿವಾರ ಶಾಲೆ ಬಿಟ್ಟ ನಂತರ ತುಂಗಾ ನದಿಗೆ ಸ್ನಾನ ಮಾಡಲು ಹೋಗಿದ್ದೆವು. ಹೊಳೆಯಿಂದ ಬರುವಾಗ ಶಿವಪ್ಪ ನಾಯಕ ಪ್ರತಿಮೆಯ ಹತ್ತಿರ ಕುರುಡು ಮುದುಕನೊಬ್ಬ ರಸ್ತೆ ದಾಟಲು ಪರದಾಡುತ್ತಿದ್ದ. ಅವನನ್ನ ಇಬ್ಬರು ಸೇರಿ ರಸ್ತೆ ದಾಟಿಸಿದೆವು. ಅಂಗವಿಕಲರು,ವಯಸ್ಸಾದವರು ಕಂಡರೆ ಬಹಳ ಕರುಣೆಯಿಂದ ನೋಡುತ್ತಿದ್ದ. ನಂತರದ ದಿನಗಳಲ್ಲಿ ನಮ್ಮ ಪರೀಕ್ಷೆ ಬಂತು, ಪರೀಕ್ಷೆಯನ್ನ ಚೆನ್ನಾಗಿ ಬರೆದೆವು, ಪರೀಕ್ಷೆಯಲ್ಲಿ ಉತ್ತೀರ್ಣರಾದೆವು. ಬೇಸಿಗೆ ರಜೆಯಲ್ಲಿ ಅಜ್ಜಿಯ ಜೊತೆ ಕುಣಿಗಲ್, ಬೆಂಗಳೂರು,ತುಮಕೂರು, ರಾಮನಗರಗಳನೆಲ್ಲಾ ನೋಡಿ ಬಂದೆ. ಕಾಲ ಮಿಂಚಿನ ವೇಗದಲ್ಲಿ ಓಡುತ್ತಿತ್ತು. ಬದುಕು ಬಹಳ ಬೇಗನೆ ಬದಲಾಯಿತು. ಐದನೇ ತರಗತಿಯು ಕೂಡ ಆರಂಭವಾಯಿತು, ಕೆಲವು ಜನ ಸಹಪಾಠಿಗಳು ಬೇರೆ ಶಾಲೆಗೆ ಸೇರಿದ್ದರು, ಮತ್ತೇ ಕೆಲವರು ನಮ್ಮ ಶಾಲೆಗೂ ಹೊಸದಾಗಿ ಸೇರಿದ್ದರು. ಹೊಸ ಹೊಸ ಗೆಳೆಯರಾದರು, ಆದರೆ ಈ ಹಳೆಯ ಗೆಳೆಯ ಶಾಲೆಗೆ ಸರಿಯಾಗಿ ಬರುವುದನ್ನ ನಿಲ್ಲಿಸಿದ. ಮೊದ ಮೊದಲು ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ, ನಂತರ ಪೂರ್ಣವಿರಾಮ ಹಾಕಿದ.
ಅಪರೂಪಕೊಮ್ಮೆ ಪಾರ್ಕ್‌ನ ಹತ್ತಿರ ಬಂದು ಮಾತನಾಡಿಸಿಕೊಂಡು ಹೋಗುತ್ತಿದ. ನನ್ನ ವಿದ್ಯಾಭ್ಯಾಸ ಮುಂದುವರಿಯಿತು. ನಾವಿಬ್ಬರೂ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವದಂತಾದೆವು. ಜೇಬುಗಳ್ಳತನದಲ್ಲಿ ಪರಿಣಿತನಾದ ಅವನು ಪೊಲೀಸರ ಕೈಗೆ ಸಿಗದೆ ಮಿಂಚಿನ ಓಟದಲ್ಲಿ ಮಾಯವಾಗುತ್ತಿದ್ದ. ಶಿವಮೊಗ್ಗವನ್ನು ಬಿಟ್ಟು,ಬೆಂಗಳೂರು, ಮಂಗಳೂರು ಮತ್ತು ಮೈಸೂರುಗಳಲ್ಲಿ ತನ್ನ ಕೈಚಳಕ ತೋರಿಸುತ್ತಿದ್ದ. ಹಲವು ಸಲ ಬಾಲ ಅಪರಾಧಿಗಳ ವಸತಿಗೃಹಗಳಲ್ಲಿ ಕಾಲ ಕಳೆದಿದ್ದ. ಯಾರು ತಡೆದರು ನಿಲ್ಲದೆ ಕಾಲ ಚಲಿಸಿತ್ತು. ಸುಮಾರು ಎಂಟು ವರ್ಷಗಳು ಅವನ ಸುದ್ದಿಯೇ ಇರಲಿಲ್ಲ. ಅವನು ಭೂಗತನಾಗಿ ಅಜ್ಞಾತವಾಸದಲ್ಲಿದ್ದ. ನಾನು ಆಗಿನ್ನು ಪದವಿಗೆ ಸೇರಿದ್ದೆ. ಆಕಸ್ಮಿಕವಾಗಿ ಒಂದು ದಿನ ಈ ನನ್ನ ಗೆಳೆಯನನ್ನ ಗೋಪಿ ಸರ್ಕಲ್‌ನಲ್ಲಿ ಭೇಟಿಯಾದೆ. ನನ್ನನ್ನ ಕಂಡದ್ದೇ ತಡ ಅತಿ ಸಂತೋಷಗೊಂಡು ಮಾತನಾಡಲಾರಂಭಿಸಿದ, ಅದು ಇದು ಮಾತಾಡುತ್ತಾ ಈಗ ನಾವು ಕುಳಿತಿರುವ ಜಾಗಕ್ಕೆ ಬಂದು ಕುಳಿತ್ತಿದ್ದೆವು. ತನ್ನ ಕುಖ್ಯಾತ ಕೆಲಸಗಳನ್ನೆಲ್ಲಾ ಒಂದು ಬಿಡದೆ ಹೇಳಿದ. ಇನ್ನೂ ಮುಂದೆ ಇದನ್ನೆಲ್ಲಾ ಬಿಟ್ಟು ಹೂವಿನ ವ್ಯಾಪಾರ ಮಾಡಿಕೊಂಡು ಜೀವನ ನಡೆಸುವೆ ಎಂದು ಗಾಂಧಿ ತಾತನ ಮೇಲೆ ಪ್ರಮಾಣ ಮಾಡಿದ್ದ. ಅಂದು ಮಾಯವಾಗಿದ್ದ ವ್ಯಕ್ತೀ ಇಂದೇ ಪ್ರತ್ಯಕ್ಷವಾಗಿರುವುದು.
ಆದರೇ ಈ ಹತ್ತು ವರ್ಷಗಳಲ್ಲಿ ಅವನು ಮಾಡದಿರುವ ಪಾತಕಗಳಿಗೆ ಮೀತಿಯೇ ಇಲ್ಲ. ಹಲವು ಭಾರಿ ಗಾಢಾಂಧಕಾರದಲ್ಲಿ ಒಬ್ಬನೇ ಕುಳಿತು ಏನನ್ನೋ ಯೋಚಿಸುವುದು, ಗೊತ್ತು ಗುರಿಯಿಲ್ಲದೆ ಮಧ್ಯರಾತ್ರಿ ಓಡಾಡುವುದು. ಶಿವಮೊಗ್ಗದಿಂದ ಭದ್ರಾವತಿಯವರೆಗೂ ರೈಲ್ವೇ ಹಳಿ ಮೇಲೆ ಕತ್ತಲಲ್ಲಿ ನೆಡೆದುಕೊಂಡು ಹೋಗಿ ಬರುವುದು ಮಾಡುತ್ತಿದ್ದನಂತೆ. ಚಿತಾಗಾರದ ಬಳಿ ತುಂಗಾ ನದಿಯಲ್ಲಿ ಇಳಿದು ಅಮಾವಸೆಯ ಕತ್ತಲ ರಾತ್ರಿಯಲ್ಲಿ ಸ್ನಾನ ಮಾಡಿ ಗುಡ್ಡೇಕಲ್ಲಿನ ಸ್ಮಶಾನವನ್ನ ದಾಟಿ ಗುಡ್ಡದ ಮೇಲೆ ಹೋಗಿ ಮಲಗುತ್ತಿದ್ದನಂತೆ. ಮಾನಸಿಕ ರೋಗಿಯಂತೆ ವರ್ತಿಸುತ್ತಿದ್ದ ಇವನು ನೂರಾರು ಜೇಬುಗಳ್ಳತನದಲ್ಲಿ ಭಾಗಿಯಾಗಿದ್ದ. ಗಾರ್ಡನ್ ಏರಿಯಾದಲ್ಲಿ ಒಬ್ಬವ್ಯಕ್ತಿಯನ್ನ ಅರ್ಧಜೀವಮಾಡಿ ಅವನ ದುಡ್ಡನ್ನ ದೋಚಿದ್ದ. ಗಾಡಿಕೊಪ್ಪದ ಸಮೀಪ ಒಬ್ಬ ವ್ಯಕ್ತಿಯನ್ನ ರಾತ್ರಿವೇಳೆ ದರೋಡೆ ಮಾಡಿ ಒಂದು ಕೈಯನ್ನ ಕತ್ತರಿಸಿದ್ದ. ಕೆಲವೇ ದಿನಗಳ ನಂತರ ಶಿವಮೊಗ್ಗದ ಬದಲಿ ರಸ್ತೆಯಲ್ಲಿ ದಂಪತಿಗಳಿಬ್ಬರನ್ನೂ ಅಡ್ಡಗಟ್ಟಿ ದರೋಡೆ ಮಾಡಲು ಹೋದಾಗ ಅವರು ಇವನಿಗೆ ಹಣವನ್ನು ಕೊಡದಿದ್ದಾಗ ಅವರನ್ನ ಮಾರಕಾಸ್ತ್ರದಿಂದ ಹೊಡೆದು ಕೊಂದಿದ್ದ. ಚಿತಾಗಾರದ ಸಮೀಪ ತುಂಗಾತೀರದ ಬಲಗಡೆಯಲ್ಲಿದ್ದ ಒಂದು ಹಾಳು ಮನೆಯಲ್ಲಿ ತಿಂಗಳುಗಟ್ಟಲೇ ಅಡಗಿ ಕುಳಿತಿದ್ದ. ಇದೇ ವಿಷಯದ ಕೇಸಿನಲ್ಲಿ ಬೆಳಗಾವಿ ಮತ್ತು ಬಳ್ಳಾರಿ ಜೈಲಿನಲ್ಲಿದ್ದನೆಂಬ ಸುದ್ದಿ ಎಲ್ಲಾ ಕಡೆ ಹರಡಿತ್ತು. ನಂತರ ಯಾವುದೋ ತರದಲ್ಲಿ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದದ್ದವನು ಪ್ರಖ್ಯಾತ ಹೋಟೆಲ್ ಮಾಲೀಕರೊಬ್ಬರನ್ನ ದರೋಡೆ ಮಾಡಿದ್ದ. ಪೊಲೀಸರಿಗೆ ಸುಳಿವುಸಿಕ್ಕಿ ಇವನನ್ನ ಹಿಡಿದು ಕೋರ್ಟ್‌ಗೆ ಕರೆದುಕೊಂಡು ಹೋಗುವಾಗ ಆ ಮಾಲೀಕನಿಗೆ ಮತ್ತೊಮ್ಮೆ ಹೆದರಿಸಿದ್ದ. ಈ ಘಟನೆ ನೆಡೆದ ನಂತರ ಅವನನ್ನ ಎನ್‌ಕೌಂಟರ್‌ನಲ್ಲಿ ಪೊಲೀಸರು ಕೊಂದಿರುವುದಾಗಿ ಸುದ್ದಿ ಹಬ್ಬಿತ್ತು. ಆದರೂ ಬದುಕಿ ನಮ್ಮ ಮುಂದೆ ಬಂದಿದ್ದಾನೆ.
ಶಿವಮೊಗ್ಗದಲ್ಲೇ ಹುಟ್ಟಿ ಬೆಳೆದ ಇವನಿಗೆ ತಂದೆ ಮತ್ತು ತಾಯಿಯೇ ಮಾರ್ಗದರ್ಶಕರು. ಅವನ ಇವತ್ತಿನ ಸ್ಥಿತಿಗೆ ಅವರೇ ಕಾರಣ. ಚಿಕ್ಕ ಚಿಕ್ಕ ವಸ್ತುಗಳನ್ನ ಕದಿಯುವಾಗ ಅವರೇ ಪ್ರೋತ್ಸಾಹ ಕೊಡುತ್ತಿದ್ದವರು. ಅವನ ಕ್ರೌರ್ಯಕ್ಕೆ ಅವನ ಬೀದಿಯ ರೌಡಿಗಳೆ ಕಾರಣ. ಆ ಬೀದಿ ನಲವತ್ತು ವರ್ಷಗಳಿಂದ ಇಂತಹ ಕೃತ್ಯಗಳಿಗೆ ಕುಖ್ಯಾತವಾಗಿತ್ತು. ಪ್ರತಿಯೊಬ್ಬ ವ್ಯಕ್ತಿಯು ಹುಟ್ಟುತ್ತಾ ಒಳ್ಳೆಯವನಾಗಿ ಹುಟ್ಟುತ್ತಾನೆ, ಅವನಿಗೆ ತನ್ನ ಮನೆ ಮತ್ತು ಸಮಾಜ ಹೇಗೆ ಬೆಳೆಸುತ್ತದೆ ಎಂಬುದು ಆ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ. ಬೆಳೆಯುವ ವಾತಾವರಣಕ್ಕೆ ತಕ್ಕ ಹಾಗೇ ಆ ವ್ಯಕ್ತಿಯ ವಂಶವಾಹಿನಿಗಳು(Genes) ಸ್ಪಂದಿಸುತ್ತವೆ. ಕೆಲವೊಮ್ಮೆ ದೇಹದೊಳಗಿನ ವಂಶವಾಹಿನಿಯಿಂದ ಬರುವ ಸಂದೇಶಕ್ಕಿಂತ ಸಮಾಜ ಬೀರುವ ಪ್ರಭಾವವೇ ಹೆಚ್ಚಾಗುತ್ತದೆ. ಈ ರೀತಿ ಪ್ರತಿಯೊಬ್ಬ ವ್ಯಕ್ತಿಯಹಾಗೇ ತನ್ನ ಸಮಾಜದಿಂದ ನಿರ್ಮಾಣವಾದವನು ನನ್ನ ಗೆಳೆಯ. ಈ ಗೆಳೆಯನ ನೆಡೆತೆಯನ್ನ ತಿದ್ದಲು ನಮ್ಮಿಂದ ಆಗಲಿಲ್ಲ. ಆ ಸಾಕ್ಷಾತ್ ಬುದ್ಧನೇ ಬರಬೇಕಿತ್ತು ಈ ಅಂಗುಲಿಮಾಲಾನನ್ನ ಉತ್ತಮ ದಾರಿಗೆ ತರಬೇಕಾದರೆ. ಇವನು ಈ ರೀತಿಯಾಗಲು ಸಮಾಜದ ಜೊತೆ ನನ್ನ ಕೊಡುಗೆಯು ಇರಬಹುದು ಅನ್ನಿಸುತ್ತದೆ. ಶ್ರಮ ಪಟ್ಟಿದ್ದರೆ ಇವನನ್ನ ಪರಿವರ್ತಿಸಬಹುದಿತ್ತೇನೋ?
ಶಾಂತವಾಗಿ ನನ್ನ ಪಕ್ಕದಲ್ಲಿ ಕುಳಿತಿರುವ ಈ ವ್ಯಕ್ತಿ ಇಷ್ಟೆಲ್ಲಾ ಪಾತಕಗಳನ್ನ ಮಾಡಿದ್ದಾನೆ ಅಂದರೆ ನಂಬಿಕೆಯೇ ಬರುವುದಿಲ್ಲ. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನ ಕೊಲ್ಲುವುದಾದರೂ ಏಕೆ? ದಬ್ಬಾಳಿಕೆ, ಶೋಷಣೆಗಳನ್ನ ಮಾಡುವುದಾದರೂ ಏಕೆ? ಭೂಮಂಡಲದ ಜನರೆಲ್ಲಾ ಬಡತನ, ಸಿರಿತನ, ಧರ್ಮದ, ದೇಶದ ಸರಹದ್ದುಗಳಿಲ್ಲದೇ ಎಲ್ಲರೂ ಸಹಬಾಳ್ವೆಯಿಂದ ಬದುಕುವುದು ಯಾವಾಗ? ಹಿಂಸೆಗೆ ಕೊನೆಯೆಂದು? ಬದುಕಿಗೆ ಸಂಗಾತಿ ಸಿಕ್ಕರೇ ಇವನು ಬದಲಾಗಬಹುದೆಂದು ಮದುವೆಯ ಬಗ್ಗೆ ಕೇಳಿದರೆ ಅದರಲ್ಲಿ ಇವನಿಗೆ ನಂಬಿಕೆಯೇ ಇಲ್ಲವಾಗಿದೆ. ಬದಲಿ ರಸ್ತೆಯಲ್ಲಿ ಇವನು ಕೊಂದಿದ್ದ ದಂಪತಿಗಳು ಕನಸಿನಲ್ಲಿ ಬಂದು ಇವನನ್ನ ಕಾಡುತ್ತಾರಂತೆ. ಏನಾದರೂ ತಪ್ಪು ಮಾಡಿದ ದಿನ ಗಾಂಧೀಜಿ ಕನಸಿನಲ್ಲಿ ಬಂದು ತಮ್ಮ ಕೋಲಿನಲ್ಲಿ ಹೊಡೆಯುತ್ತಾರಂತೆ. ಯಾವುದೋ ಪಾಪಪ್ರಜ್ಞೆಯಿಂದ ಬಳಲುವ ಇವನು ತನ್ನ ಮನಸ್ಸಿನ ಜೇಡರ ಬಲೆಯಲ್ಲಿ ಸಿಕ್ಕಿ ಹುಳುವಿನಂತೆ ಒದ್ದಾಡುತ್ತಿರುತ್ತಾನೆ. ಸರಿ, ತಪ್ಪು ಮತ್ತು ಪಾಪ, ಪುಣ್ಯಗಳ ನಡುವೆ ಕುದಿಯುತ್ತಿರುತ್ತಾನೆ. ಇವನು ಇಷ್ಟೆಲ್ಲಾ ಪಾತಕಗಳನ್ನ ಮಾಡಿದರು ಹಣವನ್ನ ಸ್ವಲ್ಪವೂ ಇಟ್ಟಿಲ್ಲಾ, ಎಲ್ಲಾ ಇವನ ಅಪ್ಪ,ಅಮ್ಮ ಮತ್ತು ಪೊಲೀಸರು ಇವನಿಂದ ದೋಚಿದ್ದಾರೆ. ಜೀವನದಲ್ಲಿ ಗುರಿ, ಕನಸು ಮತ್ತು ಆಸೆಗಳಿಲ್ಲದೆ ಕಲ್ಲಿನಂತೆ ಜೀವಿಸುತ್ತಿದ್ದಾನೆ. ಪಾತಕಲೋಕವೆಂಬ ಚಕ್ರವ್ಯೂಹದೊಳಗೆ ಸಿಲುಕಿ ಹೊರಬರಲು ತಿಳಿಯದೇ ಅಭಿಮನ್ಯುವಿನಂತಾಗಿದ್ದಾನೆ.
ಪಕ್ಕದಲ್ಲಿ ಕುಳಿತ್ತಿದ್ದ ಇವನು ಇದ್ದಕಿದ್ದಂತೇ ಅಳಲು ಆರಂಭಿಸಿದ. ಇಂತಹ ಮನುಷ್ಯನ ಕಣ್ಣಲ್ಲೂ ನೀರು ಬರಬಹುದು ಎಂದೂ ತೋರಿಸಿದ. ಅಸ್ತಿತ್ವವೇ ಇಲ್ಲದ ಇವನಿಗೆ ಅಸ್ತಿತ್ವ ಬೇಕಿತ್ತೂ. ಅವನನ್ನ ಪ್ರೀತಿಸಲೂ ಒಂದು ಜೀವ ಬೇಕಿತ್ತೂ. ನಾನು ಎಷ್ಟೂ ಬದಲಾಗಲು ಪ್ರಯತ್ನಿಸಿದಷ್ಟು ಸಾಧ್ಯವಾಗುತ್ತಿಲ್ಲವೆಂದೂ ಹೇಳಿದ. ಮತ್ತೇ ಗಾಂಧೀಜಿಯ ಪ್ರತಿಮೆಯನ್ನ ನೋಡಿದ. ಯಾವುದೇ ಹಿಂಸೆ, ಕೊಲೆ ಮತ್ತು ದರೋಡೆಗಳನ್ನ ಮಾಡುವುದಿಲ್ಲವೆಂದೂ ನನ್ನ ಮುಂದೆ ನವ ಜೀವನವನ್ನ ಆರಂಭಿಸುವುದಾಗಿ ಹೇಳಿ ಹೊರಟ. ಕತ್ತಲೆಯಲ್ಲಿ ಲೀನಾವಾಗುತ್ತಾ ಮರೆಯಾದ. ಶುಭವಾಗಲೀ ಗೆಳೆಯ ಎಂದೂ ಹಾರೈಸಿದ ನಾನು ಪಾರ್ಕಿನಿಂದ ಹೊರಟೆ. ಜೀವನ ನನ್ನನ್ನ ಬಹುದೂರ ಕರೆದುಕೊಂಡು ಹೋಗಿತ್ತು. ಒಂದು ವರ್ಷದ ನಂತರ ನನ್ನ ಇನ್ನೊಬ್ಬ ಗೆಳೆಯನಿಂದ ಮಿಂಚಂಚೆ (ಇ-ಮೈಲ್) ಒಂದು ಬಂತು. ಅದು ಹಿಂದಿನ ದಿನದ ಕನ್ನಡ ಪತ್ರಿಕೆಯಲ್ಲಿ ಮುದ್ರಿತವಾಗಿದ್ದ ಸುದ್ದಿಯದಾಗಿತ್ತು. ನನ್ನ ಗೆಳೆಯ ಇನ್ನೊಬ್ಬ ಮರಿ ರೌಡಿಯಿಂದ ಹತ್ಯೆಯಾಗಿದ್ದ. ಹತ್ಯೆಯಾದಾಗ ಇವನ ರಕ್ತವೆಲ್ಲಾ ಗುಂಡಿಯೊಂದನ್ನ ತುಂಬಿತ್ತು. ಮೆದುಳು ದೂರದಲ್ಲಿ ಬಿದ್ದು ಕ್ರೌರ್ಯದಿಂದ ರಾಕ್ಷಸ ರೂಪತಾಳಿ ಕುಣಿಯುತ್ತಿತ್ತು. ಆ ಮೆದುಳಿಗೇನಾದರೂ ಕೈಗಳಿದ್ದರೆ ಆಗಲೇ ಆ ಮರಿ ರೌಡಿಗೆ ಕತ್ತರಿಸುತ್ತಿತ್ತು. ಶಿವಮೊಗ್ಗದಲ್ಲಿ ಹಿಂಸೆಗೆ ಕೊನೆಯೆಂದೂ? ಪಾತಕಿಗಳ ರಕ್ತದಿಂದ ತಿಳಿನೀರಿನ ತುಂಗೆ ರಕ್ತವಾಹಿನಿಯಾಗಿ ಹರಿಯುತ್ತಿದ್ದಾಳೆ.
ಗೆಳೆಯ ಸತ್ತೂ ಎರಡು ವರ್ಷಗಳ ನಂತರ ಮತ್ತೇ ಗಾಂಧಿ ಪಾರ್ಕ್ ಗೆ ಹೋಗಿ ಕುಳಿತ್ತಿದ್ದೆ. ಅದೇ ಮುಸ್ಸಂಜೆ, ವಾತಾವರಣ ತಿಳಿಯಾಗಿತ್ತು ಮತ್ತೇ ಅದೇ ಕಾಡುವ ನೆನಪುಗಳು. ಸ್ವಲ್ಪ ಹೊತ್ತು ಹಾಗೆಯೇ ಕಲ್ಲಿಗೋರಗಿ ನಿದ್ರೆ ಮಾಡಿದೆ. ನಿದ್ರೆಯಲ್ಲಿ ಗಾಂಧೀಜಿಯ ಸುತ್ತ ಜನರೂ ” ”ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್” ಎನ್ನುತ್ತಾ ಭಾವ ಪರವಶವಾಗಿ ಭಜನೇ ಮಾಡುತ್ತಾ ಕುಳಿತ್ತಿದ್ದಾರೆ. ಇದ್ದಕಿದ್ದಂತೆ ಯಾರೋ ಗಾಂಧೀಜಿಗೆ ಕತ್ತಿಯಿಂದ ಇರಿದರು. ಗಾಂಧೀಜಿ ” ಹೇ ತುಳಸೀ ರಾಮ್” ಅನ್ನುತ್ತಾ ಕೆಳಗೆ ಕುಸಿದರು. ಗಾಂಧೀಜಿಯ ದೇಹದಿಂದ ಚಿಮ್ಮಿದ ರಕ್ತ ಶಿವಮೊಗ್ಗ, ಕರ್ನಾಟಕ, ಭಾರತದಿಂದ ಭೂಮಂಡಲವನ್ನೆಲ್ಲಾ ವ್ಯಾಪಿಸಿತು.






good attempt Prasanna!
ನಮ್ಮಪತ್ರಿಕೆ ಸಿಂಹ ನೋಟ ದಲ್ಲಿ ನಿಮ್ಮ ಬರಹ ಪ್ರಕಟಿಸಬಹುದ
Sure Sir, you can publish but put Avadhi reference. Thanks.
very nicely narrated good one sir
Very Well narrated.
nicely written,Prasanna….keep writing…
Thank you Babu.
Thank you Kiran.
Thank you so much Chaya.
Good one liked it
Thank you Friends.
Thank you so much friends.
hi prasanna,
great narration…. keep it up…
Super !
Very nice prasanna…..