ಸಂಗನಗೌಡ ಹಿರೇಗೌಡ
ನಾಥಪಂಥದ ಆಚರಣೆಯ ಕುರಿತು ರಹಮತ್ ತರೀಕೆರೆ ಅವರು “ನಾಥಪಂಥದಲ್ಲಿ ಕುರಿಯ ಉಣ್ಣೆಗೆ ಬಹಳ ಮಹತ್ವವಿದೆ. ನಾಥರು ದೀಕ್ಷೆಯಲ್ಲಿ ಹಾಕಿಕೊಳ್ಳುವ ಶೈಲಿ ‘ಕುರುಬದಾರ’ ದಿಂದಲೇ ಮಾಡಬೇಕು. ಶಿವನು ಬ್ರಹ್ಮಹತ್ಯೆಯ ದೋಷದಿಂದ ಪಾರಾಗಲು ಕೂದಲು ಜನಿವಾರ ಹಾಗೂ ಕಪಾಲ ಮಾಲೆ ಧರಿಸಿ ತೀರ್ಥಯಾತ್ರೆ ಮಾಡಬೇಕಾಯಿತು ಎಂದು ಹೇಳಲಾಗುತ್ತದೆ. ಈಗಲೂ ಕಾಶಿಯಲ್ಲಿ ಕಪಾಲ ಮೋಚನ ಮೈದೊಳೆದು ಕಪ್ಪನೆಯ ಕಾಶಿದಾರ ತರುವ ಸಂಪ್ರದಾಯವಿದೆ. ಇದು ನಾಥರ ಶೈಲಿಯ ಅವಶೇಷ ರೂಪ” (ಕರ್ನಾಟಕದ ನಾಥಪಂಥ) ನಾಥಪಂಥದ ಸಾಂಸ್ಕೃತಿಕ ನುಡಿಗಟ್ಟುಗಳಿಗೆ ತೀರಾ ಸಾಮಿಪ್ಯವಿರುವ ಒಂದಷ್ಟು ತತ್ವಪದಗಳಲ್ಲಿ ದ್ಯಾಗಾಯಿ ಗುಂಡಪ್ಪನವರ ತತ್ವಪದ
ಇಲ್ಲೇ ಇಟ್ಟಿದ ಕಳದು ಹೋಯಿತು ಧಾರಾ
ಎಲ್ಲಿ ಹೋಯಿತು ಧಾರಾ
ಸೋಲಾಪೂರದ ಮೂಲವಲ್ಲದ ಧಾರಾ
ಅಲ್ಲಮಪ್ರಭುನ ಬಲ್ಲಿದ್ದ ಧಾರಾ
ಇದು ಬಲಿಷ್ಠ ಬಲಿಷ್ಠ ಧಾರಾ
ಕೋಲಾಪೂರ ಮಾಯಿ ತುರುಬಿನ ಧಾರಾ
ಸಾಂಬ ಸದಾಶಿವ ನೆಂಬಿದ ಧಾರಾ
ಬಿಂಬಾದರ ಕುಬಸ ಹೊಲಿಸಿದ ಧಾರಾ
ಮುಂಬಯಿ ಪ್ಯಾಟೆಂದು ತರಸಿದ ಧಾರಾ
ಅಂಬಾಬಾಯಿ ಧಾರಾ
ರಂಬೆಕ್ಕನ ಕೊಳ್ಳಂದು ಧಾರಾ
ಕಾಶಿ ಉಂಚಿ ರೇಶಿಮೆ ಧಾರಾ (ಪ್ರಭು ಖಾನಾಪುರೆ) ಸಿದ್ಧರಾಮ ಮತ್ತು ರೇವಣಸಿದ್ಧ ಅಲ್ಲಮರಂಥ ಅನುಭಾವಿಗಳು ನಾಥಪಂಥಕ್ಕೆ ಸೇರಿದವರಾಗಿದ್ದು, ಮತ್ತು ದ್ಯಾಗಾಯಿ ಪರಿಸರದಲ್ಲಿ ಈ ಅನುಭಾವಿಗಳ ಚಾರಣವಂತು ಆಗಿರಲೇ ಬೇಕು. ಹಾಗಾಗಿ ಗುಂಡಪ್ಪ ತನ್ನ ಸಾಧನಾ ಮಾರ್ಗ ಹೇಳುವಾಗ ಈ ತರಹದ ನುಡಿಗಟ್ಟುಗಳು ತರುತ್ತಾನೆ.
“ಮೀನಿಗೆ ಸಂಬಂಧಿಸಿ ಇವರಲ್ಲಿ ವಿಶೇಷ ಟಾಬುಗಳಿವೆ ಮತ್ಸೆಂದ್ರನು ಮೀನಿನಿಂದ ಜನ್ಮವೆತ್ತಿರುವನೆಂಬ ನಂಬಿಕೆ ಇರುವುದರಿಂದ ಇವರಲ್ಲಿಯೂ ಯೋಗಿಗಳಿದ್ದಾರೆ” (ಬಸವರಾಜ ತೂಲಹಳ್ಳಿ, ಲೋಕಾಯತ-ಶಾಕ್ತ-ಶೈವ) ಈ ಮಾತಿಗೆ ಹೋಲುವ ಕೈವಾರ ನಾರೇಯಣನ...

ಹೊಸದೊಂದು ಮೀನೇ ಬಂದು
ತುಂಬಿದಾ ಕೆರೆ ನೀರನೆಲ್ಲಾ ನುಂಗಿ
ಬಟ್ಟಬಯಲು ಮಾಡಿತೋ| ಓ ಶಿಷ್ಯಾಗ್ರ
ತನಯಾ ಮುತ್ತಿನಷ್ಟಿತ್ತು ಮೀನು (ಪದ್ಮಾಲಯ ನಾಗರಾಜು) ಅಚಲ ಮಾರ್ಗಕ್ಕೆ ಅತಿ ಹೆಚ್ಚು ಟ್ಯಾಗ್ ಆಗುವ ಪಿಪೀಲಿಕ-ವಿಹಂಗ ಮಾರ್ಗವು. ಗುರುಪಂಥದ ಸಾಧನಾ ಮಾರ್ಗಗಳಾಗಿದ್ದಾವೆ..
“ದೀಕ್ಷೆಯ ಕೊನೆಯಲ್ಲಿ ಗುರುವು ಶಿಷ್ಯನ ಕಿವಿಯ ಕೆಳ ಭಾಗವನ್ನು ಸೀಳಿ ಮುದ್ರಾ ತೊಡಿಸುತ್ತಾನೆ. ಆಗ ನಾಡಿಯೊಂದು ಹರಿದು ಅವನಿಗೆ ಯೌಗಿಕ ಶಕ್ತಿ ಗಳಿಸಿಕೊಳ್ಳಲು ಸಹಾಯಕವಾಗುತ್ತದೆ” (ಬಸವರಾಜ ತೂಲಹಳ್ಳಿ, ಲೋಕಾಯತ-ಶಾಕ್ತ-ಶೈವ)
ಮಹಿಪತಿರಾಯರ..
ಮುತ್ತು ಕೊಳ್ಳಿರೋ ಉತ್ತಮರೆಲ್ಲಾ
ಜ್ಞಾನ ಸಮುದ್ರದಲ್ಲಿನ್ನು ಧ್ಯಾನವೆಂಬ ಸಿಂಪಿಯೊಳು
ಘನಗುರು ಕರುಣದ ಮಳೆಯಾದ ಮುತ್ತು ಕೊಳ್ಳಿರೋ (ಜಿ.ವಿ ಆನಂದಮೂರ್ತಿ)
ಕನಕದಾಸರ..
ಮುತ್ತು ಬಂದಿದೆ ಕೇರಿಗೆ ಜನರು ಕೇಳಿ
ಭಕ್ತಿಯುಳ್ಳವರೆಲ್ಲ ಕಟ್ಟಿಕೊಳ್ಳಿ ಸೆರಗಿನಲ್ಲಿ (ಜಿ.ವಿ ಆನಂದಮೂರ್ತಿ)
ನಾಥರು ನೆಪಾಳ, ಬಂಗಾಳಕ್ಕೆ ಸಂಬಂಧಿಸಿದವರಾಗಿದ್ದು ಸಿದ್ಧರಿಗೂ ಮತ್ತು ನಾಥರಿಗೂ ಸಂಘರ್ಷಗಳಾಗಿರುವುದನ್ನು ವಿದ್ವಾಂಸರು ಗುರುತಿಸುತ್ತಾರೆ.
ಮಡಿವಾಳಪ್ಪನ…
ಹಸುತೃಷೆ ಅಜಮಿತ ವಿಚಿತ್ರ ಗೊಂಬಿ ಮಾಟವೆ ತಾಟಮ್ಮ
ಆಕ್ರಳ ವಿಕ್ರಳ ಕೂಟಮ್ಮ ಬಹು ಬಹು ಬಂಗಾಲಿ ಆಟಮ್ಮ
ಅಸಮ ಮಾಂತನ ಕಾಣಗೊಡದ ದುಳ್ ದುಂಬಿ
ಬುಕಿಟ ಗಾಟಮ್ಮ (ಮೀನಾಕ್ಷಿ ಬಾಳಿ)

ಖೈನೂರು ಕೃಷ್ಣಪ್ಪನ..
ಬಂಗಾಲಿ ಸಂತಿ ಭಾಳ ಗಡಿಬಿಡಿ
ಸುಳ್ಳೇ ಭ್ರಾಂತಿಗೆಟ್ಟು ತಿರಗಬ್ಯಾಡೇಲೋ ಖೋಡಿ
ನಾಲ್ಕು ಬಾಜಾರೆಲ್ಲ ಹುಡುಕ್ಯಾಡಿ ನೀ
ಬೇಕಾದ್ದು ಕೊಂಡುಕೊ ತಿಳಿದು ನೋಡಿ (ಮೀನಾಕ್ಷಿ ಬಾಳಿ)
ತಿಪ್ಪೆಯಲ್ಲಿ ಜನಸಿದ ಮತ್ಸೆಂದ್ರನಾಥನ ಶಿಷ್ಯ ಗೋರಕ್ಷನಾಥನಿಗೆ ಸಂಬಂಧಿಸಿದಂತೆ, ಶ್ರೀಶೈಲದಿಂದ ಜಂಗಮರು ತಂದುಕೊಟ್ಟ ಲಿಂಗವನ್ನು ತಿಪ್ಪೆಯಲ್ಲಿಟ್ಟು ಕುರಿಯ ಹಾಲನ್ನು ಸುರಿದು ತಂದೆಯ ರುಂಡವನ್ನು ಹಾರಿಸಿದನೆನ್ನಲಾದ ಗೊಲ್ಲಾಳನಿಗೆ ಸಂಬಂಧಿಸಿದ ಮಿತ್‍ಗಳು.
ಷರೀಫರ..
‘ಬಿದಿರು ನಾನಾರಿಗಲ್ಲದವಳು’ ಎನ್ನುವ ಮೂಲಕ ಮುಂದೊರೆವ ತತ್ವಪದ ‘ತಿಪ್ಪೆಯ ಕೆಳಗಿದ್ದೆ ಅದರುದ್ದ ಬೆಳೆದಿದ್ದೆ’ ಎಂದು ಪಲ್ಲವಿ ಮೂಲಕ ನಿರ್ಧಾರ ತಾಳಿ, ಚರಣಗಳ ಮೂಲಕ ನಿದರ್ಶನಗಳು ಹೇಳಿ, ಮುಕ್ತಾಯದಲ್ಲಿ ‘ಸಿದ್ಧರಾಮೇಶ್ವರಗೆ ನಂದಿಯ ಕೋಲಾದೆ’ ಎನ್ನುವ ತತ್ವಪದ ಏನನ್ನು ದ್ವನಿಸುತ್ತದೆ.?
ನಾಥಪಂಥದ ಯೌಗಿಕ ಮಾರ್ಗದಲ್ಲಿ ‘ಚಿಗರಿ ಕೊಂಬಿಗೂ’ ವಿಶೇಷವಾದ ಸ್ಥಾನವಿರುವುದು ವಿದ್ವಾಂಸರು, ಗುರುತಿಸಿದ್ದಾರೆ. ಡಿಗ್ಗಿ ಸಂಗಮನಾಥನಿಗೆ ಆತನ ಸ್ನೇಹಿತನಾದ ಗೋಗಿ ಚಂದಾಹುಸೇನಿ ‘ನಿನ್ನ ನೆತ್ತಿಮ್ಯಾಲ ಚಿಗರಿ ಕೊಂಬಿನಷ್ಟು ಜಾಗಕೊಡು’ ಎನ್ನುವ ರೂಪಕ ಭಾಷೆಯ, ‘ಮಿತ್’ ನಮ್ಮಲ್ಲಿ ಈ ಹೊತ್ತಿಗೂ ಹಿರಿಯರು ಹೇಳುತ್ತಿರುವುದನ್ನು ಗಮನಿಸಿದರೆ ಇಂಥವೆಲ್ಲವು ನೆನಪಾಗುತ್ತವೆ..






0 Comments