ಲೆಕ್ಕಾಚಾರ ತೀರಾ ಸರಳವಾಗಿದೆ. ಅಮೆರಿಕದಲ್ಲಿರುವ ನಿರುದ್ಯೋಗಿಗಳ ಸಂಖ್ಯೆ 74 ಲಕ್ಷ. ಅದೇ ವೇಳೆಗೆ ಅಮೆರಿಕವು ಭಾರತ, ಚೀನಾದಂತಹ ದೇಶಗಳಿಗೆ “ಔಟ್ ಸೋರ್ಸ್” ಮಾಡುತ್ತಿರುವ ಉದ್ಯೋಗಗಳ ಸಂಖ್ಯೆ 1.40 ಕೋಟಿ. ಅಂದರೆ, ಒಂದುವೇಳೆ ಈಗ “ಔಟ್ ಸೋರ್ಸ್” ಆಗಿರುವ ಉದ್ಯೋಗಗಳನ್ನೆಲ್ಲ ವಾಪಸ್ ಕಸಿದುಕೊಂಡು ಅಮೆರಿಕದ ನಿರುದ್ಯೋಗಿಗಳಿಗೆ ಕೊಟ್ಟರೂ, ಆ ಮೇಲೆ 66 ಲಕ್ಷ ಉದ್ಯೋಗಗಳು ಮಿಕ್ಕಿರುತ್ತವೆ!
ಮೊನ್ನೆ ಕೆಪಿಟೋಲ್ ನ ಉಪ್ಪರಿಗೆಯ ಪಶ್ಚಿಮ ಭಾಗದದ ಅಟ್ಟಣಿಗೆಯ ಮೇಲೆ ಅಮೆರಿಕದ 45ನೇ ಅಧ್ಯಕ್ಷರಾಗಿ ಅಧಿಕಾರದ ಪ್ರಮಾಣವಚನ ಸ್ವೀಕರಿಸಿದ ಟ್ರಂಪ್ ದೊರೆ, ತನ್ನ ಕರಾರವಿಂದಗಳಲ್ಲಿ ಚಿನ್ಮುದ್ರೆ ಹೊತ್ತು ಮಾಡಿದ ಒಂದು ಘೋಷಣೆ, ಸ್ವತಃ ಚಿನ್ಮುದ್ರೆಯ ಪೇಟೆಂಟು ಹೊಂದಿರುವ ಭಾರತೀಯ ಸಂಸ್ಕ್ರತಿಯ ನವಸರದಾರರುಗಳ ಬೆನ್ನುಹುರಿಯಲ್ಲಿ ಸಣ್ಣದೊಂದು ಸೆಳಕು ಮೂಡಿಸಿದ್ದು ಸುಳ್ಳಲ್ಲ. “Buy American, Hire American” ಎಂಬ ನಾಲ್ಕೇ ನಾಲ್ಕು ಶಬ್ದಗಳ ಘೋಷಣೆ ಅದು.
ಈವತ್ತು ಅಮೆರಿಕದಲ್ಲಿ ಭಾರತೀಯ ಮೂಲದ ಮಾಹಿತಿ ತಂತ್ರಜ್ಞಾನ ಕಂಪನಿಗಳು 15.3 ಬಿಲಿಯನ್ ಡಾಲರ್ ಗಳ ಹೂಡಿಕೆ ಹೊಂದಿದ್ದು, 91,000 ಉದ್ಯೋಗಗಳನ್ನು ಸ್ರಷ್ಟಿಸಿವೆ. ಸುಮಾರು 100ಕ್ಕೂ ಮಿಕ್ಕಿ ಭಾರತೀಯ ಕಂಪನಿಗಳು ಅಲ್ಲಿನ 35 ರಾಜ್ಯಗಳಲ್ಲಿ ಹರಡಿ ಬೆಳೆಯುತ್ತಿವೆ. ನ್ಯೂಜರ್ಸಿ, ಕೆಲಿಫೋರ್ನಿಯಾ, ಟೆಕ್ಸಸ್, ಇಲಿನಾಯ್ಸ್ ಮತ್ತು ನ್ಯೂಯಾರ್ಕ್ ಇವುಗಳಲ್ಲಿ ಪ್ರಮುಖ ರಾಜ್ಯಗಳು ಎಂದು NASSCOM ವರದಿಯೊಂದು ವಿವರಿಸುತ್ತದೆ.
ರಿಯಲ್ ಎಸ್ಟೇಟು ಏಜಂಟನೊಬ್ಬ ಏಕಾಏಕಿ ಅಮೆರಿಕದ ಗದ್ದುಗೆ ಏರಿ ಕುಳಿತದ್ದನ್ನು ಅರಗಿಸಿಕೊಳ್ಳುವುದಕ್ಕೆ ಆಗದೆ ಸ್ವತಃ ಅಮೆರಿಕ ಇನ್ನೂ ಏದುಸಿರು ಬಿಡುತ್ತಿದೆ. ಜಾಗತೀಕರಣದ ಭಾಂಗ್ ನ್ನು ಜಗತ್ತಿಗೆ ಉಣಿಸಿ ಲೋಲುಪತೆಗೆ ಕಾಯುತ್ತಿದ್ದ ಅಮೆರಿಕಕ್ಕೆ ಒಂದು ಸರಿಬೆಳಗು ಹೊತ್ತಿನಲ್ಲಿ ಶುದ್ಧ ರಾಷ್ಟ್ರಾಭಿಮಾನದ ಬೆಲ್ಲ ತಿನ್ನಿಸಿದ ಡೊನಾಲ್ಡ್ ಟ್ರಂಪ್, AMERICA FIRST ಎಂಬ ಬೀಜಮಂತ್ರದೊಂದಿಗೆ ಯಾರೂ ಎಣಿಸದ ರೀತಿಯಲ್ಲಿ ಟ್ರಂಪ್ ಟವರಿನ ತನ್ನ ಕ್ಯಾಬಿನ್ನಿನಿಂದ ಶ್ವೇತಭವನದ ಓವಲ್ ಆಫೀಸಿನೊಳಗೆ ನೆಗೆದುಬಿಟ್ಟಿದ್ದ. ಪಠಿಸುತ್ತಿದ್ದ ಮಂತ್ರ ಈಗ ತಿನ್ನೋದಕ್ಕೆ ಬದನೇಕಾಯಿಯಾಗಿ ಎದುರು ಬಂದು ನಿಂತಿದೆ.
ಈಗ ಕೆಲವು ಅಂಕಿಸಂಖ್ಯೆಗಳನ್ನು ಗಮನಿಸಿ:
* ಅಮೆರಿಕಕ್ಕೆ “ಆಫ್ ಶೋರಿಂಗ್” ಯಾಕೆ ಒಗ್ಗಿಹೋಯಿತೆಂಬುದಕ್ಕೆ ಉತ್ತರ ಸರಳ. ಅಮೆರಿಕದ ಪ್ರಜೆಗಳ ಮಧ್ಯಮ ವರ್ಗದ ವಾರ್ಷಿಕ ಸಂಬಳ 35,000 – 75,000 ಡಾಲರ್ ಗಳಷ್ಟಿರುತ್ತದೆ. ಅದೇ ವೇಳೆಗೆ, ಭಾರತದಲ್ಲಿ ಆ ಮೊತ್ತ, ವರ್ಷಕ್ಕೆ 8400ಡಾಲರ್; ಚೀನಾದಲ್ಲಿ 7000 ಡಾಲರ್. ಮೂರು ಕಾಸಿನ ಬೆಲೆಯಲ್ಲಿ ಕೆಲಸಗಾರರು ಸಿಗುವುದಿದ್ದರೆ ಯಾರಿಗೆ ಬೇಡ ಹೇಳಿ? ಅಮೆರಿಕದ ಸಂಸತ್ತು ವರ್ಷಕ್ಕೆ 60,000ದಷ್ಟು H1B ವೀಸಾ (ಅಮೆರಿಕದಲ್ಲಿ ಉದ್ಯೋಗಕ್ಕೆ 3 ವರ್ಷಗಳ ಅವಧಿಗೆ ಅವಕಾಶ ಮಾಡಿಕೊಡುವ ವೀಸಾ ಇದು.)ಕ್ಕೆ ಅವಕಾಶ ನೀಡುತ್ತಿದ್ದು, ಈ ಒಂದು ಬಾಬ್ತಿನಲ್ಲೇ ಅಮೆರಿಕದ ಕಂಪನಿಗಳು ಕೋಟ್ಯಂತರ ರೂಪಾಯಿಗಳ ಲಾಭವನ್ನು ಉಳಿಸಿಕೊಳ್ಳುತ್ತಿವೆ.
* ಅಮೆರಿಕದ ಕಂಪನಿಗಳ ಕಾಲ್ ಸೆಂಟರ್ ವ್ಯವಹಾರಗಳು ಭಾರತಕ್ಕೂ, ಫಿಲಿಪೈನ್ಸ್ ದೇಶಕ್ಕೂ ಹಂಚಿಹೋಗುತ್ತಿವೆ. ಯಾಕೆಂದರೆ, ಅಮೆರಿಕದಲ್ಲಿ ಕಾಲ್ ಸೆಂಟರ್ ಕೆಲಸದ ಬೆಲೆ ಗಂಟೆಗೆ 20 ಡಾಲರ್ ಗಳಾದರೆ, ಭಾರತ/ಫಿಲಿಪೈನ್ಸ್ ಗಳಲ್ಲಿ ಈ ಸೇವೆ ಗಂಟೆಗೆ 12 ಡಾಲರ್ ಗಳೊಳಗೇ ಲಭ್ಯ. ಹಾಗಾಗಿ, ಅಮೆರಿಕದ 2,50,000 ಕಾಲ್ ಸೆಂಟರ್ ಉದ್ಯೋಗಗಳು ಆಫ್ ಶೋರ್ ಆಗಿವೆ.
* ಮೇಲ್ಕರ್ಚುಗಳು ಹೆಚ್ಚಿರುವ ಅಮೆರಿಕದಲ್ಲಿ ಸಣ್ಣ ಕಂಪನಿಗಳಿಗೆ ತಮ್ಮಲ್ಲಿನ ಕಾರುಕೂನಿಕೆ ಕೆಲಸಗಳು ದೊಡ್ಡ ಹೊರೆ. ಹಾಗಾಗಿ ಅಲ್ಲಿನ 85% ಸಣ್ಣ ಕಂಪನಿಗಳು ತಮ್ಮ ಬ್ಯಾಕ್ ಆಫೀಸ್ ಕೆಲಸಗಳನ್ನು ಶೇರುಗಾರಿಕೆ ಮಾಡುವ ಐಟಿ ಕಂಪನಿಗಳಿಗೆ ವಹಿಸಿಕೊಡುತ್ತವೆ. ಇದರಿಂದ ಅಮೆರಿಕದ ಸಣ್ಣ ಕಂಪನಿಗಳಿಗೆ 25% ವೆಚ್ಚ ಉಳಿತಾಯ ಆಗುತ್ತದಂತೆ.
ವಾಸ್ತವ ಏನು?
ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣೆಯ ವೇಳೆ ಅಮೆರಿಕದ ಕಾರ್ಪೋರೇಟ್ ತೆರಿಗೆಯನ್ನು 35% ನಿಂದ 15%ಗೆ ಇಳಿಸುತ್ತೇನೆಂಬ ಆಶ್ವಾಸನೆ ನೀಡಿದ್ದರು. ಇದು ಜಾರಿಗೆ ಬಂದರೆ, ಫೋರ್ಡ್, ಮೈಕ್ರೋಸಾಫ್ಟ್, GE ಯಂತಹ ಅಮೆರಿಕದ ದೊಡ್ಡ ಕಂಪನಿಗಳು ಮರಳಿ ಅಮೆರಿಕದ ನೆಲೆಯಿಂದಲೇ ತಮ್ಮ ವ್ಯವಹಾರವನ್ನು ಆರಂಭಿಸಲಿವೆ ಎಂಬ ನಿರೀಕ್ಷೆ ಇದೆ. ಜೊತೆಗೆ ಅಮೆರಿಕದಲ್ಲಿ ಕನಿಷ್ಟ ವೇತನವನ್ನು ವಾರ್ಷಿಕ 1,00,000 ಡಾಲರ್ ಗಳಿಗೆ ಏರಿಸಲಾಗುವುದೆಂಬ ಆಶ್ವಾಸನೆಯೂ ಇತ್ತು. ಇವೆಲ್ಲವೂ ಕಾರ್ಯರೂಪಕ್ಕೆ ಯಾವಾಗ ಮತ್ತು ಹೇಗೆ ಬರಲಿವೆ ಎಂಬ ಪ್ರಶ್ನೆಗಳ ನಡುವೆಯೇ ಕೆಲವು ವಿರೋಧಾಭಾಸಗಳೂ ಎದ್ದು ಕಾಣುತ್ತಿವೆ.
ಅಮೆರಿಕದಲ್ಲಿ ಬಹು ಬೇಡಿಕೆಯ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಅಗತ್ಯವಿರುವ ಕಂಪ್ಯೂಟರ್ ಪರಿಣತರು ಎಷ್ಟಿದ್ದಾರೆ?
1981 ರಲ್ಲಿ2.2%ರಷ್ಟಿದ್ದ ಅಮೆರಿಕದ ಕಂಪ್ಯೂಟರ್ ಪದವೀಧರರ ಸಂಖ್ಯೆ 2011 ರ ಹೊತ್ತಿಗೆ 2.76%ಆಗಿದೆ. ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ವಿದೇಶೀ ವಿದ್ಯಾರ್ಥಿಗಳಲ್ಲಿ ಮೊದಲ ಸ್ಥಾನದಲ್ಲಿರುವುದು ಚೀನಾ ಮತ್ತು ಎರಡನೇ ಸ್ಥಾನದಲ್ಲಿರುವುದು ಭಾರತ. ಅಮೆರಿಕದಲ್ಲಿ ಕಲಿಯುತ್ತಿರುವ ಚೀನಾದ ವಿದ್ಯಾರ್ಥಿಗಳಲ್ಲಿ 28% ಬಿಸಿನೆಸ್ ಮ್ಯಾನೇಜ್ಮೆಂಟ್ ಮತ್ತು 20% ಕಂಪ್ಯೂಟರ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು. ಅಮೆರಿಕದಲ್ಲಿ ಕಲಿಯುತ್ತಿರುವ ಭಾರತದ ವಿದ್ಯಾರ್ಥಿಗಳಲ್ಲಿ 38% ಇಂಜಿನಿಯರಿಂಗ್ ಮತ್ತು 26% ಗಣಿತ, ಕಂಪ್ಯೂಟರ್ ವಿಜ್ಞಾನದ ವಿದ್ಯಾರ್ಥಿಗಳು. ಅಮೆರಿಕದ ವಿವಿಗಳಲ್ಲಿ ಡಾಕ್ಟೋರಲ್ ವಿದ್ಯಾಭ್ಯಾಸ ಮಾಡುತ್ತಿರುವವರಲ್ಲಿ 11.6% (2012-13) ವಿದೇಶೀಯರಾಗಿದ್ದು, ಅವರಲ್ಲಿ 57% ಇಂಜಿನಿಯರಿಂಗ್, 53% ಕಂಪ್ಯೂಟರ್ ಮತ್ತು 50% ಗಣಿತ, ಸ್ಟಾಟಿಸ್ಟಿಕ್ಸ್ ವಿದ್ಯಾರ್ಥಿಗಳು ವಿದೇಶೀಯರು.
ಹಾಗಾಗಿ ಟ್ರಂಪ್ ಘೋಷಣೆ ಬರಿಯ ಬಾಯಿಪಟಾಕಿ ಆಗಿ ಉಳಿಯುವ ಸಾಧ್ಯತೆಗಳೇ ಜಾಸ್ತಿ ಎಂದು ವಿಶ್ಲೇಷಿಸಲಾಗುತ್ತಿದೆ. ಒಬಾಮಾ ಕೂಡ ಎಂಟು ವರ್ಷಗಳ ಹಿಂದೆ ತನ್ನ ಚುನಾವಣೆಯ ವೇಳೆ ಇದೇ ಧ್ವನಿಯಲ್ಲಿ ಮಾತನಾಡಿದ್ದರಾದರೂ ಏನೂ ಬದಲಾಗಲಿಲ್ಲ ಎಂಬ ವಾಸ್ತವವೂ ಈ ವಾದದ ಬೆಂಬಲಕ್ಕಿದೆ.





0 Comments