ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್: ಚಿಲಿಯ ಕಲಿಗಳು

ಮಾನವೀಯತೆಯ ಕಿರೀಟಕ್ಕೆ ಮತ್ತೊಂದು ಗರಿ

-ದೊಡ್ಡಿಪಾಳ್ಯ ನರಸಿಂಹಮೂರ್ತಿ

ಕೃಪೆ: ದಿ ಸಂಡೇ ಇಂಡಿಯನ್

ಪ್ರತಿಯೊಂದನ್ನೂ ರೋಚಕವಾಗಿಯೇ ಚಿತ್ರಿಸುವುದನ್ನು ತನ್ನ ಸಿದ್ಧಾಂತವನ್ನಾಗಿರಿಸಿಕೊಂಡಿರುವ ಮಾಧ್ಯಮ ಲೋಕ ಕಳೆದ ವರ್ಷದ ಆಗಸ್ಟ್ 5ರಿಂದ ಅಕ್ಟೋಬರ್ 13ರವರೆಗೆ 69 ದಿನಗಳ ಕಾಲ ಒಂದು ಕಾರ್ಯಾಚರಣೆಯನ್ನು ಜಗತ್ತಿನಾದ್ಯಂತ ಬಿತ್ತರಿಸಿತು. ಈ ನೇರ ವರದಿಗಾಗಿ ಜಗತ್ತಿನ ಎಲ್ಲಾ ಮೂಲೆಗಳಿಂದ ಸುಮಾರು 300 ಕ್ಕೂ ಅಧಿಕ ಮಾಧ್ಯಮ ವರದಿಗಾರರು ತಮ್ಮ ಎಲ್ಲಾ ಅತ್ಯಾಧುನಿಕ ಸಲಕರಣೆಗಳೊಂದಿಗೆ ಬಿಡಾರ ಹೂಡಿದ್ದರು. ಆ ಸ್ಥಳ ಬಡದೇಶವಾದ ಚಿಲಿಯ ಅಟಕಾಮ ಎಂಬ ಮರುಭೂಮಿಯಾಗಿತ್ತು. ಮಾಧ್ಯಮಗಳ ಪಾಲಿಗೆ ಅದು ತಮ್ಮ ರೇಟಿಂಗ್ ಹೆಚ್ಚಿಸುವ ಮಾಮೂಲಿ ಕಾಯಕವಷ್ಟೇ. ಆದರೆ, ನಮ್ಮ ಪಾಲಿಗೆ ಆ ಕಾರ್ಯಾಚರಣೆ ಮಾನವೀಯತೆಯ ಕಿರೀಟಕ್ಕೆ ಸಿಕ್ಕಿಸಿದ ಮತ್ತೊಂದು ಗರಿಯಾಗಿದೆ.

ಬಡಪಾಯಿ ಜೀವಗಳಿಗೆ ಬೆಲೆಯೇ ಇಲ್ಲದಾಗಿರುವ ಈ ದಿನಗಳಲ್ಲಿ 2300 ಅಡಿ ಆಳದಲ್ಲಿ ಸಿಲುಕಿಕೊಂಡ 33 ಬಡಪಾಯಿ ಕಾರ್ಮಿಕರನ್ನು ರಕ್ಷಿಸಲೆಂದು ಜಗತ್ತಿನ ಇತಿಹಾಸದಲ್ಲೇ ಅದ್ವಿತೀಯವಾದ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿದ್ದು ಚಿಲಿ ಸರ್ಕಾರ. ಈ ಅಮೋಘ ಕಾರ್ಯಾಚರಣೆಯೇ ಈ ಕೃತಿಯ ಕಥಾವಸ್ತು. ಗಣಿ ಕುಸಿತದ ಸಂದರ್ಭದಲ್ಲಿ ಚಿಲಿಯ ಅಧ್ಯಕ್ಷ ಸೆಬಾಸ್ಟಿಯನ್ ಪಿನಾರೆ ಕೊಲಂಬಿಯ ಪ್ರವಾಸದಲ್ಲಿದ್ದರು. ಸುದ್ದಿ ತಿಳಿದ ಕೂಡಲೇ ಪ್ರವಾಸ ಮೊಟುಕುಗೊಳಿಸಿ ತಾಯ್ನಾಡಿಗೆ ಮರಳಿದ ಅವರು ಮರುಕ್ಷಣದಿಂದಲೇ ಕಾರ್ಮಿಕರ ರಕ್ಷಣೆಗೆಂದು ಕಾರ್ಯಪಡೆಯೊಂದನ್ನು ರಚಿಸಿದರು. ಈ ಕಾರ್ಯಪಡೆಯ ನಾಯಕತ್ವವನ್ನು ಆಂಡ್ರೆ ಸುಗಾರೆಗೆ ವಹಿಸಿದರು. 69 ದಿನಗಳ ಕಾಲ ನಡೆದ ಈ ಕಾರ್ಯಾಚರಣೆಗೆ ಸುಮಾರು ನೂರು ಕೋಟಿ ರೂಪಾಯಿ ಖರ್ಚು ಮಾಡಿದೆ.

17 ದಿನಗಳ ಸತತ ಪ್ರಯತ್ನದ ನಂತರ ಭೂಗರ್ಭದೊಳಗಿದ್ದ ಕಾರ್ಮಿಕರು ಜೀವಂತವಾಗಿದ್ದಾರೆಂಬುದು ಗೊತ್ತಾಗುತ್ತದೆ. ಆದರೆ, ಕಾರ್ಮಿಕರನ್ನು ಹೊರತೆಗೆಯಲು ಅಗತ್ಯವಿರುವಷ್ಟು ಅಗಲವಾದ ರಂಧ್ರ ಕೊರೆಯುವುದಕ್ಕೆ ತಿಂಗಳುಗಟ್ಟಲೆ ಸಮಯ ಬೇಕು. ಅದುವರೆಗೆ ಆ ಪಾತಾಳ ಜೀವಿಗಳಿಗೆ ಮುಷ್ಠಿ ಗಾತ್ರದ ರಂಧ್ರದ ಮೂಲಕ ಆಹಾರ, ಔಷಧಿ ರವಾನೆಯಾಗುತ್ತದೆ. ಅಷ್ಟೇ ಏಕೆ, ಮನರಂಜನೆಗಾಗಿ ಪುಟ್ಟ ವೀಡಿಯೋ ಪ್ರೊಜೆಕ್ಟರ್ ಕೂಡ ಪಾತಾಳ ಸೇರಿತೆಂದರೆ ಆಶ್ಚರ್ಯವೆನಿಸುತ್ತದೆ.

ಈ ಕಾರ್ಯಾಚರಣೆ ಪ್ರಪಂಚದಲ್ಲಿ ಲಭ್ಯವಿರುವ ಅತೀ ಆಧುನಿಕವಾದ ಯಂತ್ರಗಳನ್ನು, ತಂತ್ರಜ್ಞರನ್ನು ತೊಡಗಿಸಲಾಯಿತು. 66 ಸೆಂ.ಮೀ. ಅಗಲದ ರಂಧ್ರದಲ್ಲಿ ರಾಕೆಟ್ ಮಾದರಿಯ ಲಿಫ್ಟ್ ಒಂದನ್ನು ಇಳಿಸಿ ಒಬ್ಬೊಬ್ಬರನ್ನಾಗಿ ಎಲ್ಲರನ್ನೂ ಮೇಲಕ್ಕೆತ್ತಿದ ಈ ಕಾರ್ಯಾಚರಣೆಯ ನೇರಪ್ರಸಾರವನ್ನು ಜಗತ್ತಿನಾದ್ಯಂತ 100 ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. “ನಾನು ಭೂಖಂಡದ ಇನ್ನೊಂದು ಬದಿಯಲ್ಲಿದ್ದರೂ ನನ್ನ ಹೃದಯ, ಮನಸ್ಸುಗಳು ಚಿಲಿ ಕಾರ್ಮಿಕರ ಜೊತೆಗಿವೆ. ಇಲ್ಲಿ ನನಗೆ ಮಾನವೀಯತೆಯ ಅಸಾಮಾನ್ಯ ಮುಖದ ದರ್ಶನವಾಗುತ್ತಿದೆ” ಎಂದು ತೈವಾನ್ ದೇಶದ ಪ್ರಜೆಯೊಬ್ಬ ಕಳಿಸಿದ ಸಂದೇಶ ಓದುಗರ ಮನದಾಳದ ಸಂದೇಶದಂತೆಯೇ ತೋರುತ್ತದೆ.

ವಿಶೇಷವಾಗಿ ಗಮನ ಸೆಳೆವ ಹಲವಾರು ಘಟನೆಗಳು ಈ ಕೃತಿಯಲ್ಲಿ ಕಾಣಸಿಗುತ್ತವೆ. ಪಾತಾಳದಡಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಕಾರ್ಮಿಕರು ಒಮ್ಮೆ ಕಳಿಸಿದ್ದ ಹಣ್ಣುಗಳನ್ನು ವಾಪಾಸು ಕಳಿಸಿ ಪ್ರತಿಭಟಿಸುತ್ತಾರೆ. ಆಗ ಎಲ್ಲೆಡೆ ಆತಂಕ. ಕೂಡಲೇ ಮನೋವಿಜ್ಞಾನಿಗಳ ರಂಗಪ್ರವೇಶವಾಗುತ್ತದೆ. ನಾಸಾದ ತಜ್ಞರು, “ಇದು ಆರೋಗ್ಯಪೂರ್ಣ ಮನಸ್ಥಿತಿಯ ಲಕ್ಷಣ. ಎಲ್ಲಾ ಆದೇಶಗಳನ್ನು ಅಕ್ಷರಶಃ ಪಾಲಿಸುವುದೆಂದರೆ ತಮ್ಮತನವನ್ನು ಪೂರ್ಣ ಕಳೆದುಕೊಂಡ ಶರಣಾಗತಿ ಮನಸ್ಥಿತಿಯ ಲಕ್ಷಣ. ಆದ್ದರಿಂದ ಈ ಬಗ್ಗೆ ಚಿಂತೆ ಬೇಡ” ಎಂದು ಸಲಹೆ ಕೊಡುತ್ತಾರೆ.

ಮತ್ತೊಂದು ಘಟನೆ ಮಾಧ್ಯಮಗಳಿಗೆ ಬಿಸಿ ಮುಟ್ಟಿಸುವಂತಹದ್ದು. ತನ್ನ ಕಾರ್ಯದಕ್ಷತೆಗೆ ಹೆಸರಾದ ಕೆನಡಾ ದೇಶದ ಡ್ರಿಲರ್ ಗ್ಲೆನ್ ಫಾಲನ್ ಕಾರ್ಮಿಕರನ್ನು ರಕ್ಷಿಸಲು ಪಣತೊಟ್ಟು ಹಗಲಿರುಳು ಬೆವರಿಳಿಸುತ್ತಿದ್ದರೆ ರೋಚಕತೆಯನ್ನು ಬೆನ್ನುಹತ್ತಿದ ಕ್ಯಾಮರಾಮನ್ ಒಬ್ಬ ಯಂತ್ರದ ಬಳಿ ನುಸುಳುತ್ತಿರುತ್ತಾನೆ. ಡ್ರಿಲರ್ ಆತನನ್ನು ಅಲ್ಲಿಂದ ಒದ್ದು ಓಡಿಸಿದ್ದು ಸಂವೇದನಾರಹಿತ ಮಾಧ್ಯಮಗಳಿಗೆ ಶ್ರಮಜೀವಿಯೊಬ್ಬ ಕೊಟ್ಟ ಸಾಂಕೇತಿಕ ಒದೆತವಾಗಿ ಭಾಸವಾಗುತ್ತದೆ.

ಹಾಗೆ ನೋಡಿದರೆ ಈ ಕಥಾವಸ್ತು ಓದುಗರಿಗೆ ಬೋರ್ ಹೊಡೆಸುವಂತಹದ್ದು. ಆದರೆ, ಲೇಖಕಿಯ ನಿರೂಪಣಾ ಕೌಶಲ್ಯದ ಕಾರಣಕ್ಕೆ ರೋಚಕ ಪತ್ತೆದಾರಿ ಸಿನಿಮಾ ನೋಡಿದಷ್ಟು ಆನಂದವನ್ನು ಕೊಡುತ್ತದೆ. ಹಾಗೆಯೇ ಅಲ್ಲಲ್ಲಿ ವಿಶ್ಲೇಷಣೆಗೆ ತೊಡಗಿ ಸಮಗ್ರ ಮಾಹಿತಿಯನ್ನೂ ಕೊಡುತ್ತದೆ. ಕೃತಿಯಲ್ಲಿ ಮತ್ತೆ ಮತ್ತೆ ಎದುರಾಗುವ ಪ್ರಮುಖ ಪಾತ್ರದಾರಿಗಳ ಸುತ್ತ ಹೆಣೆದ ಕಾದಂಬರಿಯಂತೆಯೂ ಕಾಣುತ್ತದೆ. ಹೀಗೆ ಎಲ್ಲರೂ ಓದಬಹುದಾದ ಸದಭಿರುಚಿಯ ಕೃತಿ ಇದೆಂದು ಗಟ್ಟಿದನಿಯಲ್ಲಿ ಹೇಳಬಹುದು. ಇಂಥ ಕೃತಿಯನ್ನು ನೀಡಿದ ಭೌತಶಾಸ್ತ್ರ ಉಪನ್ಯಾಸಕಿ-ಲೇಖಕಿ ಸರೋಜಾ ಪ್ರಕಾಶರೂ ಹಾಗೂ ಅವರಿಗೆ ಪ್ರೇರಣೆಯಾಗಿ ನಿಂತ ಅವರ ಅಣ್ಣ ನಾಗೇಶ ಹೆಗಡೆಯವರೂ ಅಭಿನಂದನಾರ್ಹರು.

ಲೇಖಕರು: ಸರೋಜಾ ಪ್ರಕಾಶ

ಬೆಲೆ: 100 ರೂಪಾಯಿ

ಪುಟಗಳು: viii + 156

ಪ್ರಕಾಶಕರು: ಭೂಮಿ ಬುಕ್ಸ್, ಬೆಂಗಳೂರು-೨೦

ಫೋನ್: 080-23565885

 

‍ಲೇಖಕರು G

20 June, 2011

2 Comments

  1. ಸುಮ

    ನಿಜ “ಚಿಲಿಯ ಕಲಿಗಳು” ಚೆನ್ನಾಗಿದೆ. ಸರ್ಕಾರವೊಂದರ ಇಚ್ಛಾಶಕ್ತಿ ಏನೆಲ್ಲ ಸಾಧಿಸಬಹುದೆಂಬುದನ್ನು ಸುಂದರವಾಗಿ ನಿರೂಪಿಸಿದ್ದಾರೆ ಸರೋಜ ಅವರು.

  2. ಅಜಯ

    ಕಥಾವಸ್ತು ಓದುಗರಿಗೆ ಬೋರ್ ಹೊಡೆಸುವಂತಹದ್ದು ಎಂಬುದು ತಪ್ಪು ಮಾಹಿತಿ. ಆ ಘಟನೆ ಬಗ್ಗೆ ನಿಮ್ಮ ಬರಹ ಓದಿದರೇ ಮೈನವಿರೇಳುತ್ತದೆ, ಅಂದಮೇಲೆ ಬೋರ್ ಹೊಡೆಸುವಂತದ್ದು ಅಂದರೆ ಸರಿಯಾಗದು. ಅಂತಹ ಬೋರ್ ಹೊಡೆಸುವುದಾಗಿದ್ದರೆ ಈ ಬರಹವೂ ಬರುತ್ತಿರಲಿಲ್ಲ ಅಥವಾ ಬೋರ್ ಆಗಿರುತ್ತಿತ್ತು 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading