ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ ವಿ ನಾಗರಾಜು ನೆನೆದು…

ಆರ್ ಜಿ ಹಳ್ಳಿ ನಾಗರಾಜ್ 

ಕೋಲಾರ ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿ. ನಾಗರಾಜ ಅವರು ಕಳೆದ ತಿಂಗಳು ನಿಧರಾದರು.

ಬಡತನದಲ್ಲಿ ಬೆಳೆದು ಶಿಕ್ಷಣ ಪಡೆದು ಸ್ನಾತಕೋತ್ತರ ಕೇಂದ್ರದ ಒಂದು ವಿಭಾಗವನ್ನು ಮುನ್ನಡೆಸುವಷ್ಟು ಮಟ್ಟಕ್ಜೆ ಬೆಳೆದಿದ್ದ ನಾಗರಾಜ್ ಗ್ರಾಮೀಣ ಪ್ರದೇಶದ ಅಪಾರ ಶಿಷ್ಯವರ್ಗಕ್ಕೆ ಮೆಚ್ಚಿನ ಮೇಷ್ಟ್ರು ಆಗಿದ್ದರು. ಬಡ ಹುಡುಗರಿಗೆ ಸಹಾಯ ಮಾಡುವುದರಲ್ಲೆ ಅವರಿಗೆ ಆತ್ಮತೃಪ್ತಿ ಇತ್ತು. ಕಷ್ಟವಾದರೂ ಹಣದ ಸಹಾಯ ಮಾಡುವುದು, ಊಟ ತಿಂಡಿ ಕೊಡಿಸುವುದು, ಹಾಸ್ಟಲ್ ವ್ಯವಸ್ಥೆ ಮಾಡಿಕೊಡುವುದು ಅವರಿಗೆ ಸಿದ್ದಿಸಿತ್ತು.

ಎರಡು ತಿಂಗಳ ಹಿಂದೆ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಕರ್ನಾಟಕ ಬಂಡಾಯ ಸಾಹಿತ್ಯ ಸಂಘಟನೆ ಮೀಸಲಾತಿಗೆ 100 ತುಂಬಿದ ಸಂದರ್ಭಕ್ಕೆ ವಿಚಾರ ಸಂಕಿರಣ ಏರ್ಪಡಿಸಿತ್ತು. ಸಾಹಿತಿಗಳು, ದಲಿತ ಹಾಗೂ ಹಲವು ಪ್ರಗತಿಪರ ಸಂಘಟನೆಗಳ ಸಂಗಾತಿಗಳು ಭಾಗವಹಿಸಿದ್ದರು.

ಆಗ ನಾಗರಾಜ ಅವರು ಸ್ವಂತ ದುಡ್ಡು ಖರ್ಚು ಮಾಡಿಕೊಂಡು ಕೋಲಾರದ ಸ್ನಾತಕ ವಿದ್ಯಾರ್ಥಿಗಳ ದಂಡನ್ನೇ ಕರೆತಂದು ವಿಚಾರ ಸಂಕಿರಣದಲ್ಲಿ ಭಾಗವಹಿಸುವಂತೆ ಮಾಡಿದ್ದರು. ಆ ಸಂದರ್ಭ “ಅನ್ವೇಷಣೆ ಪ್ರಕಾಶನ”ದ ಪುಸ್ತಕ, ಪತ್ರಿಕೆಗಳ ಮಾರಾಟ ವ್ಯವಸ್ಥೆ ಮಾಡಲಾಗಿತ್ತು. “ಅನ್ವೇಷಣೆ” ಸಾಹಿತ್ಯ ಪತ್ರಿಕೆಗೆ ಚಂದಾದಾರರಾಗಿ, ಹಳೆಯ ಪತ್ರಿಕೆಗಳನ್ನೂ ಕೊಂಡು ಒಂದೂವರೆ ಸಾವಿರ ರೂ.ಗಳ ‌ಇತರೆ ಪುಸ್ತಕ ಕೊಂಡು, ಅಲ್ಲೇ ಇದ್ದ ತಮ್ಮ ವಿದ್ಯಾಥಿ‍ಗಳಿಗೆಲ್ಲಾ ಹಂಚಿದ್ದರು. ನಮ್ಮ ಹೊಸ ಪ್ರಕಟಣೆ “ಬಂಡಾಯ: ಅರಿವು – ಅಂತರಂಗ” ಎಂಬ ಕೃತಿಯ 10 ಪ್ರತಿ ಬೇಕೆಂದರು. ಇದ್ದ 5-6 ಪ್ರತಿ ಅಷ್ಟನ್ನೇ‌ ಪಡೆದು, “ಸಾರ್ ಒಮ್ಮೆ ಪ್ರಗತಿಪರ ಹಾಗೂ ದಲಿತ – ಬಂಡಾಯದ ಪುಸ್ತಕ ತಗೊಂಡು ಕೋಲಾರಕ್ಕೆ ಬನ್ನಿ. ಹುಡುಗರಿಗೆ ಒಂದು ಉಪನ್ಯಾಸ ನೀಡಿ” ಎಂದು ಆಹ್ವಾನವನ್ನೂ ನೀಡಿ, ಕರೆತಂದಿದ್ದ ವಿದ್ಯಾರ್ಥಿ ಪಡೆ ಕಟ್ಟಿಕೊಂಡು ಹೊರಟರು.

ಒಂದು ವಾರದ ನಂತರ ಫೋನ್ ಮಾಡಿ, ಅನ್ವೇಷಣೆ ಪತ್ರಿಕೆಯ ಲೇಖನ, ವಿಮರ್ಶೆ, ಕವನಗಳ ಬಗ್ಗೆ ಅಪಾರ ಮೆಚ್ಚುಗೆ ಸೂಚಿಸಿ, “ಸಾರ್, ನಾನು ಈಚೆಗೆ ನಮ್ಮನ್ನಗಲಿದ ಬಂಡಾಯದ ಕವಿ ಚೆನ್ನಣ್ಣ ವಾಲೀಕಾರ ಅವರ “ವ್ಯೋಮ ವ್ಯೋಮ” ಮಹಾಕಾವ್ಯದ ಬಗ್ಗೆ ಅಧ್ಯಯನ ಮಾಡಿ “ಕಾಮ‌ – ಪ್ರೇಮ ಪರ್ವ ಹಾಗೂ ಜನನ – ಮರಣ ಪರ್ವ” ಎಂಬ ಕೃತಿ ರಚಿಸಿದ್ದೇನೆ. ಅದನ್ನು ತಮಗೆ ಗೌರವಪೂರ್ವಕವಾಗಿ ಕಳುಹಿಸುತ್ತಿದ್ದೇನೆ. ಚೆನ್ನಣ್ಣ ಅದರ ಬಗ್ಗೆ ಲೇಖನವನ್ನೂ ಬರೆದು ಕಳುಹಿಸುವೆ. ಅನ್ವೇಷಣೆಯಲ್ಲಿ ಪ್ರಕಟಿಸಬೇಕು” ಎಂದರು.

“ಆಯ್ತು ಮೇಷ್ಟ್ರೆ, ಆ ಬೃಹತ್‌ ಗ್ರಂಥ ಓದಿದವರೆ ಕಡಿಮೆ. ಅಂಥಾದ್ದರಲ್ಲಿ ನೀವು ಗಂಭೀರ ಅಧ್ಯಯನ ಮಾಡಿರುವುದರಿಂದ ಸಂತೋಷವಾಗಿದೆ. ಲೇಖನ ಕಳುಹಿಸಿ ಪ್ರಕಟಿಸೋಣ” ಎಂದೆ. ಫೋನ್ ಇಡುವ ಮುನ್ನ, “ಸಾರ್ ನಮ್ಮ ಪಿಜಿ ಗ್ರಂಥಾಲಯಕ್ಕೆ ಅನ್ವೇಷಣೆ ಪತ್ರಿಕೆ ತರಿಸಲು ಪತ್ರ ಬರೆದಿರುವೆ” ಎಂದಿದ್ದರು. ಅವರ ಕಾಳಜಿಗೆ ಮೆಚ್ಚುಗೆ ಸೂಚಿಸಿ ಫೋನ್ ಇಟ್ಟೆ. ಮುಂದಿನ ನಾಲ್ಕಾರು ದಿನಗಳಲ್ಲಿ 1/4 ಡೆಮ್ಮಿ ಆಕಾರದ 140 ಪುಟಗಳ ಆ ಕೃತಿ ನನ್ನ ಕೈ ಸೇರಿತು.

ನಾಗರಾಜ್ ಅವರ ಸಾಹಿತ್ಯ ಸೇವೆ, ಸಂಘಟನೆ ಪರಿಗಣಿಸಿ ಕೋಲಾರ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನ ಲಭಿಸಿತ್ತು. ನನ್ನ ಪತ್ನಿ ಕವಯಿತ್ರಿ ಡಾ. ಎಚ್.ಎಲ್. ಪುಷ್ಪಾ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದಳು ಅನ್ನುವುದೂ ಮುಖ್ಯ.

ಈ ನಡುವೆ ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ವಿ. ನಾಗರಾಜ ಅವರು ಕೋಲಾರ ಜಿಲ್ಲೆಯಿಂದ‌ ಆಯ್ಕೆ ಆಗಿದ್ದರು. ಅವರು ಅದೆಷ್ಟು ಸಂಭ್ರಮದಲ್ಲಿ ನನ್ನ ಜೊತೆ ವಿಚಾರ ಹಂಚಿಕೊಂಡರೆಂದರೆ, ಆ ಅವಕಾಶ ಜೀವಮಾನದ ದೊಡ್ಡ ಗೌರವವೆಂದು ಭಾವಿಸಿದಂತಿತ್ತು. ನಂತರ‌ face bookನಲ್ಲಿ ಹೆಮ್ಮೆಯಿಂದ ಬರೆದುಕೊಂಡಿದ್ದರು. ನಾನೂ ಅಭಿನಂದನೆ ಹೇಳಿದ್ದೆ.

ನಮ್ಮ “ಅನ್ವೇಷಣೆ ಪ್ರಕಾಶನ”ದ ಪ್ರಕಟಣೆ ಹಾಗೂ ಇತರ ಪುಸ್ತಕಗಳನ್ನು ಮಾರಾಟ ಮಾಡಲು ಕಲಬುರಗಿ ಸಾಹಿತ್ಯ ಸಮ್ಮೇಳನದಲ್ಲಿ‌ ಮಳಿಗೆ ಪಡೆದಿದ್ದೆ. ಅಲ್ಲಿ ನಮ್ಮ 107ನೇ ಪುಸ್ತಕ ಮಳಿಗೆ ಹುಡುಕಿ ಬಂದ ನಾಗರಾಜ್ ಭಾರೀ ಸಂತೋಷದಲ್ಲಿದ್ದರು. ಆಗಷ್ಟೇ ಬಂದಿದ್ದ “ಅನ್ವೇಷಣೆ” ‘ಕಲ್ಯಾಣ ಕರ್ನಾಟಕ ವಿಶೇಷಾಂಕ -೨೦೨೦’ ಕಂಡು ಖುಷಿ ಆದರು. ಅವರಿಗೆ ಪತ್ರಿಕೆ ಅಲ್ಲಿಯೇ ಕೊಟ್ಟೆ.

*”ಕವಿತೆ ವಾಚನ ಆಯ್ತು ಸಾರ್. ಅನೇಕ ಕವಿಗಳು ಮೆಚ್ಚುಗೆ ಸೂಚಿಸಿದರು. ನಾನು ಮೊದಲಬಾರಿ ಈ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದು” ಎಂದು ಹೇಳಿ, ಬರಗೂರು ರಾಮಚಂದ್ರಪ್ಪ ಅವರ “ಸೂರ್ಯ ಸಂಸ್ಕೃತಿ” ಹಾಗೂ ಇನ್ನೆರಡು ಪುಸ್ತಕ ಕೊಂಡು, ನನ್ನ ಜೊತೆ ಒಂದು ಫೋಟೋ ತೆಗೆಸಿಕೊಂಡು ಅಲ್ಲಿಂದ ಹೊರಟರು.

ಅದೇ ನನ್ನ ಹಾಗೂ ವಿ. ನಾಗರಾಜರ ಕೊನೆಯ ಭೇಟಿ ಎಂದು ಭಾವಿಸಿರಲಿಲ್ಲ. ಕಲಬುರಗಿ ಸಮ್ಮೇಳನ ಮುಗಿಸಿಕೊಂಡು ಕೋಲಾರಕ್ಕೆ ಬಂದ ನಾಲ್ಕಾರು ದಿನದಲ್ಲೇ ಅವರು ನಮ್ಮನ್ನು ಅಗಲಿದ ಸುದ್ದಿ ಬಂತು. ದುಃಖಿತನಾದೆ. ಸಹೃದಯಿ, ಮಾನವೀಯ ವ್ಯಕ್ತಿ, ಉತ್ಸಾಹದ ಚಿಲುಮೆ ನಾಗರಾಜರ ಸಾವು ನನ್ನ ಅಂತರಂಗ ಕಲಕಿಬಿಟ್ಟಿತು. ಅವರದ್ದು ಸಾಧನೆಯ ಮೆಟ್ಟಿಲೇರುವ ವಯಸ್ಸು. ಸಾಯುವ ವಯಸ್ಸಾಗಿರಲಿಲ್ಲ. ಸಾವು ಯಾರಿಗೆ ಯಾವಾಗ ಬರುತ್ತೋ ಬಲ್ಲವರಾರು? ಇದು ಕರೋನಾ ಎಂಬ ಸುನಾಮಿಯ ಸಾವಿನ ಕಾಲ!

ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಹೊರಟಿದ್ದ ಮಿತ್ರ ಡಾ. ರಾಜಪ್ಪ ದಳವಾಯಿ, ನಾಗರಾಜ ಬರೆದಿದ್ದ ಕಾದಂಬರಿಯ ನೆನಪಿಸಿದ. “ಅವನು ಆರೋಗ್ಯದ ಕಡೆ ಗಮನ ಹರಿಸಲಿಲ್ಲ. ಹಸಿದೇ ಇರುತ್ತಿದ್ದ. ಅವನಿಗದು ಅಭ್ಯಾಸ ಆಗಿತ್ತು. ಯಾವಾಗೆಂದರೆ ಆವಾಗ ಉಣ್ಣುತ್ತಿದ್ದ. ಇಲ್ಲಾ ಸಿಕ್ಕಷ್ಟನ್ನೆ ತಿಂದು‌ ಇದ್ದುಬಿಡುತ್ತಿದ್ದ. ಅವನು ಕೋಲಾರ ಸೀಮೆಯ ಭಾಷೆ, ವಸ್ತು ಇಟ್ಟುಕೊಂಡು ಕಾದಂಬರಿ ಒಂದನ್ನು ಬರೆದಿದ್ದ. ಬಹಳ ಒಳ್ಳೆಯ ಕಾದಂಬರಿ. ನಮ್ಮ ವಿಮರ್ಶಾ ಲೋಕ ಗೊತ್ತಲ್ಲ… ಉಪೇಕ್ಷೆ ಮಾಡ್ತು. ನಮ್ಮ ದಲಿತ ಲೇಖಕರೂ ಅನ್ಯಾಯ‌ ಮಾಡಿದರು. ಆದರೆ, ವಿಮರ್ಶಕ ಡಾ. ಕೆ. ಮರುಳಸಿದ್ಧಪ್ಪ ಬಹುವಾಗಿ ಮೆಚ್ಚಿಕೊಂಡಿದ್ದರು” ಎಂದು ಹೇಳಿದಾಗ ಅವನ ಮಾತು ಆಲಿಸುತ್ತಿದ್ದೆ.

ವಿ. ನಾಗರಾಜ ನಮ್ಮ ಜೊತೆ ಇಲ್ಲ. ಅವರು ಪ್ರೀತಿಯಿಂದ ಅನ್ವೇಷಣೆಗೆ ನೀಡಿದ ಚಂದಾ ಹಣ ಇನ್ನೂ ಇದೆ. ಅವರ ಅಪೇಕ್ಷೆಯಂತೆ ಅವರ ನೆನಪಿಗಾಗಿ, ವಿದ್ಯಾರ್ಥಿಗಳ, ಉಪನ್ಯಾಸಕರ, ಪ್ರಾಧ್ಯಾಪಕರ ಅಭ್ಯಾಸಕ್ಕಾಗಿ ಕೋಲಾರ ‌ಪಿಜಿ ಗ್ರಂಥಾಲಯಕ್ಕೆ “ಅನ್ವೇಷಣೆ” ಬರುವವರೆಗೆ ಕಳುಹಿಸುತ್ತಲೇ ‌ಇರುತ್ತೇನೆ.

‍ಲೇಖಕರು avadhi

30 March, 2020

1 Comment

  1. prathibha nandakumar

    ಅಯ್ಯಯ್ಯೋ…ಯಾಕೆ? ಮೊನ್ನೆ ಮೊನ್ನೆವರೆಗೆ ಚೆನ್ನಾಗೇ ಇದ್ರಲ್ಲಾ? ಪಿ ಎಚ್ ಡಿ ಗಾಗಿ ತೆಲುಗಿನ ಕೊಂಡೆಪೂಡಿ ನಿರ್ಮಲಾ ಮತ್ತು ನನ್ನ ಕವನಗಳ ತುಲನಾತ್ಮಕ ಅಧ್ಯಯನ ಮಾಡಿದ್ರು …. ಛೇ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading