ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಣ್ಣನ ಅಂಗಳದಲ್ಲಿ ಗಣಪತಿ ಹಬ್ಬ ..

ನೆನಪು 18

ಅಣ್ಣನ ಚೌತಿ ಹಬ್ಬ

ಎಂದೂ ದೇವರನ್ನು ನಂಬದ, ಪೂಜಿಸದ, ಕೈ ಮುಗಿಯದ ಅಣ್ಣನಿಗೆ ಹೇಗಾದರೂ ತೊಂದರೆ ಕೊಡಬೇಕೆಂದು ಊರಲ್ಲಿ ಕೆಲವು ಮೂರ್ಖರು ಪಿತೂರಿ ಮಾಡಿದ್ದರು. ಪಿತೂರಿ ಮಾಡಿದ್ದು ಬೆರಳೆಣಿಕೆಯ ಬ್ರಾಹ್ಮಣರು; ತಾವು ರೂಪಿಸಿದ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಧೈರ್ಯ ಇಲ್ಲದಿರುವುದರಿಂದ ಅವರ ಕಾಲಾಳುಗಳಾದವರು ಬೆರಳೆಣಿಕೆಯ ಶೂದ್ರರು. ‘ಊರು ಸುಟ್ಟರೂ ಹನುಮಪ್ಪ ಹೊರಗೆ’ ಎಂಬ ಮಾತು ಇವರಿಗಾಗಿಯೇ ಹುಟ್ಟಿರಬೇಕು.

ಪ್ರತಿವರ್ಷ ಚೌತಿ ಬಂತೆಂದರೆ “ಈ ಸಲ ಭಂಡಾರಿ ಮಾಸ್ತರರ ಮನೆಯಲ್ಲಿ ಗಣಪತಿ ಮೂರ್ತಿಯನ್ನು ರಾತ್ರಿ ಇಟ್ಟು ಬರ್ತಾರಂತೆ. ಒಮ್ಮೆ ಮನೆಯ ಮುಂದಿನ ತುಳಸಿಕಟ್ಟೆಯ ಎದುರು ಇಟ್ಟು ಬಂದರೆ ಪೂಜೆ ಮಾಡದೆ ಅವರಿಗೆ ಗತಿ ಇಲ್ಲ. ಒಂದು ವರ್ಷ ಇಟ್ಟರೆ ಕನಿಷ್ಠ ಮೂರು ವರ್ಷವಾದರೂ ಅವರು ಗಣಪತಿ ಮೂರ್ತಿಯನ್ನು ಪೂಜಿಸಬೇಕು” ಎಂದು ಗುಸು ಗುಸು ಶುರು ಆಗುತ್ತಿತ್ತು.

“ಇಟ್ಟರೆ ಇಡ್ತಾರೆ. ಬೆಳಿಗ್ಗೆ ಎದ್ದು ಅದನ್ನು ಬಾವಿಯಲ್ಲಿ ಹಾಕಿದರಾಯ್ತು” ತಣ್ಣನೆ ಎನ್ನುತ್ತಿದ್ದ ಅಣ್ಣ.

“ಹಾಗೆ ಪೂಜಿಸದೇ ಹಾಕಿದರೆ ‘ಪಾಪ’ ಬರ್ತದೆ ಅಂತ ಎಲ್ಲರೂ ಹೇಳ್ತಾರೆ” ಅಂತ ಅಕ್ಕ. ಯಾಕೆಂದರೆ ಅಕ್ಕ ದೇವರಲ್ಲಿ ನಂಬಿಕೆ ಉಳ್ಳವಳು.

“ಪಾಪ ಬಂದರೆ ಇಟ್ಟವರಿಗೇ ಬರಬೇಕು. ನಾವು ಚೌತಿ ಹಬ್ಬ ಮಾಡುವವರಲ್ಲ ಎಂದು ಗೊತ್ತಿದ್ಮೇಲೂ ತೊಂದರೆ ಕೊಡೋದಕ್ಕೆ ಇಡ್ತಾರೆ ಎಂದ ಮೇಲೆ ನಾನು ಪೂಜಿಸದೆ ಹಾಗೆ ಒಗೆದರೆ ಇಟ್ಟವರಿಗೆ ತಾನೆ ಪಾಪ ಬರೋದು” ಅಂತ ಅಣ್ಣನ ಪ್ರತ್ಯುತ್ತರ.

ಈ ಮಾತನ್ನು ಮನೆಗೆ ಬಂದವರ ಹತ್ತಿರ ಅಣ್ಣ ಹೇಳಿರುವುದರಿಂದ ಕೆಲವರು “ಈ ಮಾಸ್ತರು ಪೂಜೆ ಮಾಡ್ದೇ ಒಗೆದರೆ ನಮಗೆ ಪಾಪ ತಟ್ಟಿದರೆ?” ಎಂಬ ಭಯದಿಂದ ಇಡೋದಕ್ಕೆ ಮುಂದೆ ಬರಲಿಲ್ಲ. ಆದ್ರೂ ಅಕ್ಕ ಚೌತಿ ಹಬ್ಬಕ್ಕೆ ಅಜ್ಜನ ಮನೆಗೆ ಹೋಗುವಾಗ “ಯಾರಾದ್ರೂ ಗಣಪತಿ ಇಟ್ಟರೆ ಹಾಗೆ ಒಗೆಯಬೇಡಿ. ನನಗೆ ಹೇಳಿ ಕಳಿಸಿ. ನನ್ನ ತಮ್ಮನನ್ನಾದರೂ ಕಳಿಸಿ ಸಣ್ಣ ಪೂಜೆ ನೈವೇದ್ಯ ಮಾಡಿ ಮುಳುಗಿಸೋಣ” ಅಂತ ಹೇಳಿ ಹೋಗ್ತಿದ್ದಳು.

ಅಕ್ಕ ದೇವರ ಮಹಾ ಭಕ್ತೆ ಅಲ್ಲದಿದ್ದರೂ ವಿರೋಧಿಸುವವಳಾಗಿರಲಿಲ್ಲ. ಒಂದು ಹದದಲ್ಲಿ ಭಕ್ತಿ ಮಾಡ್ತಿದ್ದಳು. ಮತ್ತೇನಿಲ್ಲ…… ‘ಹೀಗೆನಾದ್ರೂ ಆದ್ರೆ ಊರಲ್ಲೆಲ್ಲ ಗೌಜಿ ಬೀಳ್ತದೆ; ಮತ್ತೆ ಮಕ್ಕಳಿಗೆ ಏನಾದರೂ ತೊಂದರೆ ಆದ್ರೆ’ ಎಂದು ಭಯ ಅವಳಿಗೆ. ನನ್ನ ಅಜ್ಜಿಗೂ ಅಷ್ಟೇ. ಭೀಮ ಭಕ್ತಿ ಅಂತಾರಲ್ಲ ಹಾಗೆ.

ಇಷ್ಟೆಲ್ಲಾ ಹೇಳಿದ ಮೇಲೂ ಅಣ್ಣನಿಗೆ ಗೊಂದಲ ಇದ್ದೇ ಇತ್ತು. ಹಾಗೆ ಯಾರಾದ್ರೂ ರಾತ್ರಿ ಇಟ್ಟು ಹೋಗಿ, ನಾನು ಬೆಳಿಗ್ಗೆ ಎದ್ದು ಪೂಜೆ ಮಾಡಿದ್ರೆ! “ಹೇಗೆ? ಭಂಡಾರಿ ಮಾಸ್ತರು ಕೊನೆಗೂ ಪೂಜೆ ಮಾಡಿದ್ರಲ್ಲಾ” ಅಂತ ತಮಾಷೆ ಮಾಡ್ತಾರೆ. ಹಾಗೆ ಒಗೆದರೆ ಹೆಂಡತಿಗೂ, ತಾಯಿಗೂ ಬೇಸರ ಆಗ್ತದೆ. ಏನ್ಮಾಡೋದು ಅಂತ ರಾತ್ರಿ ಇಡೀ ಬ್ಯಾಟ್ರಿ ಇಟ್ಕೊಂಡು ಕಾಯ್ತಿದ್ದ. ಸಣ್ಣ ಸಪ್ಪಳ ಆದ್ರೂ ಬಾಗಿಲು ತೆಗೆದು ಬಂದು ನೋಡಿ ಹೋಗ್ತಿದ್ದ.

ನನಗಂತೂ ಸಣ್ಣವನಿರುವಾಗ ಗಣಪತಿ ಮೂರ್ತಿ ಇಟ್ಟರೆ ಒಳ್ಳೆದಾಗ್ತಿತ್ತು ಅಂತಿತ್ತು. ಯಾಕೆಂದರೆ ಗಣಪತಿ ಜೊತೆ ಇರುವ ಮಣ್ಣನು ಸಣ್ಣ ಇಲಿಬುರ್ಕಾ ಮತ್ತು ಹಾವು ಆಟ ಆಡಲು ಸಿಗ್ತದಲ್ಲಾ ಅಂತ. ಚೌತಿ ಮುಗಿದ ಮೇಲೆ ಎಲ್ಲರ ಮನೆಯಂತೆ ನಮ್ಮನೆ ಕೊಟ್ಟಿಗೆಯಲ್ಲೂ ಒಂದು ಮೂರ್ತಿ ಇರ್ತಿತ್ತಲಾ ಅಂತ ಆಸೆ. ಮತ್ತೆ ಗಣಪತಿ ನೋಡಲು ನಮ್ಮನೆಗೂ ಜನ ಬರ್ತಾರೆ, ಮತ್ತೊಂದಿಷ್ಟು ಹಬ್ಬದ ತಿಂಡಿ ಸಿಗ್ತದೆ ಅಂತ. ಆದರೆ ಕೊನೆಗೂ ಯಾರೂ ಇಡಲೇ ಇಲ್ಲ. ಇಟ್ಟ ಹಾಗೆ ಕನಸು ಕಂಡಿದ್ದಷ್ಟೇ ಬಂತು!

ಹಬ್ಬದ ದಿನ ಹೂ ಕಾಯುವ ಅಣ್ಣ

ಆದ್ರೆ ಊರಲ್ಲಿ ಗಣೇಶನ ಮೂರ್ತಿ ಇಟ್ಟು ಪೂಜಿಸುವವರು ಬೆಳಿಗ್ಗೆ ಎದ್ದು ಮಧ್ಯಾಹ್ನದ ಪೂಜೆಗೆ ಹೂ ಕೊಯ್ಯಲು ಬರ್ತಿದ್ದರು. ಕೆಲವರಂತೂ ಇದ್ದ ಎಲ್ಲ ಹೂವನ್ನು, ತುಳಸಿಯನ್ನು ಕೊಯ್ಕೊಂಡು ಹೋಗ್ತಿದ್ದರು. ಒಬ್ಬೊಬ್ಬರು ಬೆಳಿಗ್ಗೆ 4-5 ಗಂಟೆಗೇ ಎದ್ದು ಗಿಡಾನ ಬೋಳಿಸ್ಕೊಂಡು ಹೋಗ್ತಿದ್ದರು. ಗಿಡದಲ್ಲಿಯ ಹೂವನ್ನೂ, ತೋರಣಕ್ಕೆ ಮಾವಿನ ಗಿಡವನ್ನು ಕಡಿಯೋದು ಅಣ್ಣನಿಗೆ ಯಾವಾಗಲೂ ಇಷ್ಟ ಇರಲಿಲ್ಲ.
ಆಗ ನಮ್ಮನೆಯಲ್ಲಿ ತುಳಸಿ ಗಿಡ ಮತ್ತು ವಿವಿಧ ರೀತಿಯ ಹೂಗಳು ತುಂಬಿರ್ತಿದ್ವು. ವಿವಿಧ ಬಣ್ಣದ ಗುಲಾಬಿ, ಗೊಂಡೆ, ಡೇರೆ, ದಾಸವಾಳ, ಅಬ್ಬಲಿ (ಕನಕಾಂಬರ), ಮಲ್ಲಿಗೆ……ಹೀಗೆ ತರಾವರಿ ಹೂವು. ನಮ್ಮ ಮನೆಯಲ್ಲಿ ಇಲ್ಲದಿರುವ ಹೂವೇ ಇಲ್ಲ ಅನ್ನುವಷ್ಟು. ತಾಯಿಯವರಿಗಂತೂ ಹೂ ಗಿಡ ಬೆಳೆಸೋದು ಅಂದ್ರೆ ಪಂಚಪ್ರಾಣ. ಮದ್ವೆ, ಜಾತ್ರೆಗೆ ಹೋಗುವಾಗ ಜಡೆಗೋ, ಮುಡಿಗೋ ಹೂದಂಡೆ ಮುಡಿದೇ ಹೋಗ್ತಿದ್ದಳು. ಕೇರಿಗೆಲ್ಲಾ ಹಂಚ್ತಿದ್ದಳು.

ಅಣ್ಣನಿಗೂ ಹೂವುಗಳೆಂದರೆ ಪಂಚಪ್ರಾಣ. ಆ ಹೂಗಳಿಗೆ ಬೆಳಿಗ್ಗೆ ಬರುವ ಗಿಳಿ, ದುಂಬಿಯನ್ನೂ ಒಳಗೊಂಡಂತೆ ಬರುವ ಹಲವು ಹಕ್ಕಿಗಳನ್ನು ನೋಡುವುದು ಅವನ ದಿನಚರಿಯಲ್ಲೊಂದು. ಅವನು ಬರೆದ ಮಕ್ಕಳ ಕತೆಗಳ ಸಂಕಲನಕ್ಕೆ “ಹೂಗಳೊಂದಿಗೆ ಮಾತುಕತೆ” ಅಂತ್ಲೇ ಹೆಸರಿಟ್ಟಿದ್ದ.

ಮಳೆಗಾಲದ ಕುರಿತು, ಪ್ರಕೃತಿ ಸೌಂದರ್ಯವನ್ನು ವರ್ಣಿಸುವ ಕುವೆಂಪು, ಬೇಂದ್ರೆ ಮುಂತಾದವರ ಕವಿತೆಯನ್ನು, ಮಲೆನಾಡಿನ ಚಿತ್ರಗಳಂತ ಪ್ರಬಂಧಗಳನ್ನು ಆತ ಆಗೆಲ್ಲಾ ನಮಗೆ ಓದಿ ಹೇಳಿದ್ದಿದೆ. ಇದರೊಂದಿಗೆ ಈ ಹೂವನ್ನು ಬೆಳೆದ ಅಕ್ಕನ ಶ್ರಮದ ಕುರಿತು ಆತನಿಗೆ ಅಪಾರ ಗೌರವ. ಹಾಗಾಗಿ ಯಾರಾದ್ರೂ ರಾತ್ರಿನೇ ಬಂದು ಹೂ ಕೊಯ್ಕೊಂಡು ಹೋಗ್ಬಿಡಬಹುದೆಂದು ಆತ ಮನೆಯಲ್ಲಿಯೇ ಇದ್ದು ಕಾಯ್ತಿದ್ದ.

ಕೆಲವು ಸಂದರ್ಭದಲ್ಲಿ ಹೀಗೆ ಹೂ ಕೊಯ್ಯೋಕೆ ಬಂದವರು ಓಡಿ ಹೋಗಿದ್ದು ಇದೆ. ಭಂಡಾರಿ ಮಾಸ್ತರರು ರಾತ್ರಿಯೆಲ್ಲಾ ಕಾಯ್ತಾರೆ ಅಂತ ಗೊತ್ತಾದ್ಮೇಲೆ ಹೀಗೆ ಹೂ ಕಿಳೋರು ಕಡಿಮೆ ಆದ್ರು. ಆದ್ರೂ ಹೂ ಕಳುವವರ ಭಯ ಇದ್ದೇ ಇತ್ತು. ಹಾಗಂತ ಬಂದವರನ್ನು ವಾಪಾಸೂ ಕಳಿಸ್ತಿರಲಿಲ್ಲ. ತೀರಾ ಪರಿಚಯದವರು ಬಂದ್ರೆ ಅಲ್ಲೇ ನಿಂತು ಮೂರೋ ನಾಲ್ಕೋ ಕೊಯ್ದುಕೊಂಡು ಹೋಗಲು ಹೇಳ್ತಿದ್ದ. ಹಾಗೆ ಹೂವು ಗಿಡದಲ್ಲಿದ್ದರೆ ಎಷ್ಟು ಚೆಂದ ನೋಡಿ ಅಂತ ಅವರಿಗೆ ಒಮ್ಮೆ ನೋಡಲೂ ಹೇಳ್ತಿದ್ದ. ಅದಕ್ಕಾಗೇ ಇರಬೇಕು ನನಗೆ ಈಗಲೂ ಗಿಡದ ಹೂವುಗಳನ್ನು ಕೊಯ್ಯೋರನ್ನು ಕಂಡರೆ ಆಗದು. ನಿಮ್ಮ ದೇವರನ್ನು ಹೂವಿನ ಹಿಡದ ಹತ್ತಿರವೇ ಇಟ್ಟು ಪೂಜಿಸಿ ಅಂತೇನೆ.

ಚೌತಿ ಹಬ್ಬದ ಹೆಗಡೆ ಪಯಣ

ಅವನ ಆರೋಗ್ಯ ಚೆನ್ನಾಗಿ ಇರುವವರೆಗೂ ಆತ ಚೌತಿ ಹಬ್ಬಕ್ಕೆ ತನ್ನ ಮೂಲ ಮನೆ ಕುಮಟಾದ ಹೆಗಡೆಗೆ ಹೋಗಿ ಬರುತ್ತಿದ್ದ. ಸಾಮಾನ್ಯವಾಗಿ ತಪ್ಪಿಸಿದ್ದಿಲ್ಲ. ಹಿಂದೆ ಚವತಿಯ ದಿನ ಸಂಜೆ ಅಥವಾ ಮರುದಿನ ‘ಇಲಿಪಂಚಮಿ’ ದಿನ ಊರ ಕಡೆ ತಾಳಮದ್ದಲೆ ಇರುತ್ತಿತ್ತು. ಅದರಲ್ಲಿ ಈತ ಒಬ್ಬ ಅಥರ್ಧಾರಿ. ಹೀಗಿದ್ದರೂ ಆತ ಮಧ್ಯಾಹ್ನ ಹೋಗಿ ಸಂಜೆಗೆ ಬಂದು ಮುಟ್ಟಿಕೊಳ್ಳುತ್ತಿದ್ದ.

ಮೂಲ ಮನೆಗೆ ಚೌತಿ ಹಬ್ಬಕ್ಕೆ ಹೋಗುವಾಗ ಒಂದು ಅಡಿಕೆ ಕೊನೆ, ಒಂದು ಅಡಿಕೆ ಸಿಂಗಾರದ ಕೊನೆ, ಒಂದಿಷ್ಟು ವೀಳ್ಯದೆಲೆ, ಕಾಯಿ, ಫಲಾವಳಿಗೆ ಕಟ್ಟಲು ‘ಕೋಡನ ಗೆಜ್ಜೆ’ ‘ಗಂಗಾಮನ ಕಾಳು’ ‘ಬಸವನ ತರಡು’ (ಇದೆಲ್ಲಾ ನಮ್ಮೂರ ಕಾಡಿನಲ್ಲಿ ಸಿಗುವ ವಸ್ತುಗಳು. ಇದನ್ನು ಗಣಪತಿ ಕೂಡ್ರಿಸುವ ಸ್ಥಳದೆದುರು ಕಟ್ಟುತ್ತಾರೆ) ಹೀಗೆ ಒಂದಿಷ್ಟು ಸಾಮಾನುಗಳನ್ನು ಒಂದು ಚೀಲದಲ್ಲಿ ಒಯ್ಯುತ್ತಿದ್ದ. ಇದ್ಯಾವುದೂ ನಮ್ಮ ಮನೆಯಲ್ಲಿ ಇರಲಿಲ್ಲ. ಅಕ್ಕ ಮತ್ತು ಆಯಿ ನೆಂಟರ ಕೇರಿಯಿಂದ ಸಂಗ್ರಹಿಸಿ ಕೊಡುತ್ತಿದ್ದರು. ಈತ ಹೀಗೆ ಚೀಲ ಹಿಡಿದು ಹೊರಟಿದ್ದು ನೋಡಿದರೆ ಯಾರಾದರೂ ಈತ ಮಹಾಭಕ್ತ ಎಂದುಕೊಳ್ಳಬೇಕು. ಇವೆಲ್ಲವನ್ನೂ ಅಲ್ಲಿ ಕೊಟ್ಟು, ಊಟ ಮಾಡಿ ಬರುತ್ತಿದ್ದ. ಅಲ್ಲಿಯವರಿಗಂತೂ ಈತ ಬಂದು ಹೋಗಿದ್ದು ದೇವರು ಬಂದಿದ್ದಕ್ಕಿಂತ ಹೆಚ್ಚಿನ ಸಂಭ್ರಮ.

ಅಜ್ಜನ ಮನೆಗೆ….

ಹಾಗೆ ಮರುದಿನ ನನ್ನ ಅಜ್ಜನ ಮನೆ (ಅವನ ಮಾವನ ಮನೆ)ಗೆ 12.30 ರಿಂದ 1.30ರ ಒಳಗೆ ಬರುತ್ತಿದ್ದ. ಸಾಮಾನ್ಯವಾಗಿ ಪೂಜೆ ಮುಗಿಸಿ ಊಟದ ಹೊತ್ತು ಅದು. ಒಮ್ಮೆ ಪೂಜೆ ನಡೆಯುತ್ತಿದ್ದರೂ ಅಲ್ಲಿಯ ಬಹುತೇಕ ಆಡಂಬರಗಳೆಲ್ಲ ಬಂದ್ ಆಗುತ್ತಿದ್ದವು. ಹೂವಿನ ಪ್ರಸಾದ ಕೊಟ್ಟರೆ ಹಾಗೆ ಕೈಯಲ್ಲಿ ಪಡೆದು ಪಕ್ಕಕ್ಕೆ ಇಡುತ್ತಿದ್ದ. ಕಾಯಿಕಡಿಯೊಂದಿಗೆ ಕೊಟ್ಟರೆ ತೆಗೆದುಕೊಂಡು ಅಕ್ಕನಿಗೆ ಕೊಡುತ್ತಿದ್ದ. ತಿನ್ನುವ ಪ್ರಸಾದ ಕೊಟ್ಟರೆ ಸ್ವಲ್ಪ ಬಾಯಿಗೆ ಹಾಕಿ ಉಳಿದದ್ದನ್ನು ನಮಗೆ ಕೊಡುತ್ತಿದ್ದ.

ಆತ ಇರುವಷ್ಟು ಹೊತ್ತು ಯಾರದೂ ವಿಶೇಷ ತಮಾಷೆಯಾಗಲಿ, ಅನಗತ್ಯ ಮಾತಾಗಲೀ ಇರುತ್ತಿರಲಿಲ್ಲ. ಅವನ ಕಂಡರೆ ಅಷ್ಟೊಂದು ಗೌರವ ಎಲ್ಲರಿಗೆ. ಹಾಕಿದ್ದನ್ನು ಯಾವ ತಕರಾರೂ ಇಲ್ಲದೆ ಊಟ ಮಾಡಿ ಹೊರಟು ಬಿಡುತ್ತಿದ್ದ. ನಮ್ಮ ಕೇರಿಯಲ್ಲಿ ಗಣಪತಿ ಮೂರ್ತಿ ಇರುವ ನಾಗತ್ತೆ ಮನೆ, ಅಪ್ಪಚ್ಚಿ ಮನೆ, ಅತ್ತೆ ಮನೆ, ಕುಪ್ಪನ ಮನೆ, ಸಣ್ಣತ್ತೆ ಮನೆ – ಹೀಗೆ ಎಲ್ಲರ ಮನೆಯನ್ನೂ ಒಮ್ಮೆ ಹೊಕ್ಕಿ; 5 ನಿಮಿಷ ಕುಳಿತುಕೊಂಡು ಹೋಗುತ್ತಿದ್ದ. ವರ್ಷಕ್ಕೊಮ್ಮೆ ಮಾತ್ರ ಎಲ್ಲರ ಮನೆಯ ಪ್ರವೇಶ ಆತನದು.

ಹಾಗೆ ಮುಗಿಸಿ 3-4 ಗಂಟೆಯೊಳಗೆ ಮನೆ ಸೇರಿ ಓದಿ, ಬರೆಯುವ ಕಾಯಕ ಆತನದು. “ಯಾಕೆ ನೀನು ಇಷ್ಟು ಬೇಗ ಮನೆಗೆ ಹೋಗ್ತೀಯಾ” ಎಂದು ಕೇಳಿದರೆ “ಹಬ್ಬದ ದಿನ ಇದು. ಅವರವರ ಮನೆಯಲ್ಲಿ ಸಂಭ್ರಮದಿಂದ ಮಾತು-ಕತೆ ನಡೆಯುತ್ತದೆ. ನಾನಿದ್ದರೆ ಮಾತನಾಡಲು ಅವರು ಮುಜುಗರ ಪಡುತ್ತಾರೆ. ಪಾಪ ಖುಷಿ ಪಡಲು ಅವರಿಗೆ ಯಾಕೆ ತೊಂದರೆ ಮಾಡಬೇಕು?” ಎನ್ನುತ್ತಿದ್ದ.

ಪಂಚಕಜ್ಜಾಯ ಹಂಚುವ ಕೆಲಸ

ಹೀಗೆ ಮನೆಗೆ ಬೇಗ ಓಡಿ ಬರಲು ಇನ್ನೊಂದು ಕಾರಣವೂ ಇತ್ತು. ಆಗ ಚವತಿ ಹಬ್ಬದ ಮರುದಿನ ಊರಲ್ಲಿ ಹಲವರು ಮನೆ ಮನೆಗೆ ಹೋಗಿ ಗಣಪತಿ ನೋಡಿ ಪಂಚಕಜ್ಜಾಯ ತಿಂದು ಬರುವುದು ಒಂದು ಕ್ರಮ. ಕೆಲವರು ಗಣಪತಿ ನೋಡಲು ಹೋಗುವವರು ಒಂದು ಪ್ಲಾಸ್ಟಿಕ್ ಕೊಟ್ಟೆಯನ್ನೇ ತೆಗೆದುಕೊಂಡು ಹೋಗುತ್ತಿದ್ದರು. ಕೊಟ್ಟ ಪಂಚಕಜ್ಜಾಯವನ್ನು ಪ್ಲಾಸ್ಟಿಕ್‍ನಲ್ಲಿ ಹಾಕಿಕೊಂಡು ಬರುತ್ತಿದ್ದರು. ನಾವೂ ಬಾಲ್ಯದಲ್ಲಿ ಇದೇ ಕೆಲಸ ಮಾಡಿದ್ದೆವು.

ಕನಿಷ್ಠ 100-125 ಮನೆಗೆ ಹೋಗಿ ಗಣಪತಿ ನೋಡುತ್ತಿದ್ದೆವು. ನಮ್ಮ ಗೆಳೆಯರ ನಡುವೆ ಅತಿ ಹೆಚ್ಚು ಗಣಪತಿ ನೋಡುವ ಸ್ಪರ್ಧೆಯೇ ನಡೆಯುತ್ತಿತ್ತು. ಹಾಗೆಯೇ ಒಂದಿಷ್ಟು ಪಂಚಕಜ್ಜಾಯವನ್ನು ಚಡ್ಡಿ ಕಿಸೆಯಲ್ಲಿ ತುಂಬಿಕೊಳ್ಳುತ್ತಿದ್ದೆವು. 4-6 ಮನೆಯಲ್ಲಿ ಕೊಟ್ಟ ಈ ಪಂಚಕಜ್ಜಾಯವನ್ನು ತಿಂದು ಮುಗಿಸಿದ ಮೇಲೆ ಮತ್ತೆ ತಿನ್ನಲು ಆಗುತ್ತಿರಲಿಲ್ಲ. ಗಣಪತಿ ನೋಡಿದ ಮೇಲೆ ಪಂಚಕಜ್ಜಾಯ ತಿನ್ನದೇ ಬರಲು ಮನಸ್ಸು ಬರುತ್ತಿರಲಿಲ್ಲ. ಹಾಗಾಗಿ ಚಡ್ಡಿ ಕಿಸೆಯಲ್ಲಿ ಸಾಧ್ಯವಾದಷ್ಟು ತುಂಬಿಕೊಂಡು, ಉಳಿದಿದ್ದನ್ನು ಪ್ಲಾಸ್ಟಿಕ್ ಕೊಟ್ಟೆಯಲ್ಲಿ ತುಂಬಿಕೊಳ್ಳುತ್ತಿದ್ದೆವು.

ನಮ್ಮ ಹಾಗೆ ಹಲವರು ಹೀಗೆ ಪಂಚಕಜ್ಜಾಯ ಬೇಡಲು ನಮ್ಮ ಮನೆಗೂ ಬರುತ್ತಿದ್ದರು. ಆದರೆ ನಮ್ಮ ಮನೆಯಲ್ಲಿ ಗಣಪತಿ ಪೂಜೆ ಇಲ್ಲದ್ದರಿಂದ ಕೊಡಲು ಏನೂ ಇರುತ್ತಿರಲಿಲ್ಲ. ಹಾಗಾಗಿ ಬಂದವರಿಗೆ ವಾಪಾಸು ಕಳಿಸಬೇಕು. ಬೇಡಲು ಬರುವರು ಬಡವರಾದ್ದರಿಂದ ಬರಿಗೈಯಲ್ಲಿ ಹಾಗೆ ಕಳುಹಿಸುವುದು ಅಣ್ಣನಿಗೆ ಸರಿ ಕಾಣಲಿಲ್ಲ. ಹಾಗಾಗಿ ಅಕ್ಕನಿಗೆ ಹೇಳಿ ಒಂದಿಷ್ಟು ಪಂಚಕಜ್ಜಾಯ ಮಾಡಿಸಿಟ್ಟುಕೊಳ್ಳುತ್ತಿದ್ದ. ಮತ್ತು ಬಂದವರಿಗೆ 4-6 ಚಮಚ ಹಾಕಿ ಕಳುಹಿಸುತ್ತಿದ್ದ.

ಊರ ಹಲವರಿಗೆ ಆಶ್ಚರ್ಯ. ‘ಭಂಡಾರಿ ಮಾಸ್ತರರು ಪಂಚಕಜ್ಜಾಯ ಹಂಚುತ್ತಿದ್ದಾರೆ. ಇತ್ತೀಚೆಗೆ ದೇವರ ಬಗ್ಗೆ ನಂಬಿಕೆ ಬಂದಿರಬೇಕು’ ಎಂದೇ ತಿಳಿದಿದ್ದರು. ಆದರೆ ಎಂದೂ ದೇವರಿಗೆ ಕೈ ಮುಗಿಯದ, ಹರಕೆ ಹೊತ್ತುಕೊಳ್ಳದ ಅಣ್ಣ ಇನ್ನೊಬ್ಬರ ನಂಬಿಕೆಯ ಮೇಲೆ ತನ್ನ ನಂಬಿಕೆಯನ್ನು ಎಂದೂ ಹೇರುತ್ತಿರಲಿಲ್ಲ. ಮತ್ತು ಪೂಜೆ ಮಾಡದಿದ್ದರೇನಂತೆ ಬಡತನದಿಂದ ಮನೆಯೆದುರು ಬೇಡಲು ಬಂದವರಿಗೆ ಏನೂ ಕೊಡದೆ ವಾಪಸು ಕಳಿಸುವುದು ಒಂದು ಅಪರಾಧ ಎಂದೇ ಆತ ತಿಳಿದಿದ್ದ.

‍ಲೇಖಕರು Avadhi

21 July, 2018

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. ಶ್ರೀರಂಗ ಯಲಹಂಕ

    ಯಾವುದೇ ಒಂದು ವಿಷಯದ ಮೇಲೆ ನಮ್ಮ ಆಚರಣೆ ಗಳು, ನಂಬಿಕೆಗಳು ಏನೇ ಇರಲಿ ತೀರಾ ವಾಚ್ಯವಾದರೆ, ಕಠೋರವಾದರೆ ಅದು ಪ್ರದರ್ಶನಪ್ರಿಯತೆಯ ಮಟ್ಟಕ್ಕೆ ಇಳಿದುಬಿಡುವ; ಅದರಲ್ಲೇ ಸುಖಕಾಣುವ ಒಂಟಿತನದ ದಂತಗೋಪುರದಲ್ಲಿ ನಮ್ಮನ್ನು ಕೂರಿಸಿ
    ಕ್ರಮೇಣ ಇತರರಿಗೆ ಉಪದೇಶ ಮಾಡುವ ಚಪಲದ ಹುನ್ನಾರದ ತಳಕಾಣದ ಬಾವಿಗೆ ತಳ್ಳುತ್ತವೆ. ಇಂತಹ ಪ್ರದರ್ಶನಗಳು ನಮ್ಮನ್ನು ಅಹಂಕಾರದ ಪರಮಾವಧಿಗೆ ಇಳಿಸಿಬಿಡಬಹುದು. ಜತೆಗೆ ಮಾನವ ಪ್ರೀತಿಯ ಮೃದುತ್ವವನ್ನು ನಮ್ಮಿಂದ ಕಸಿದುಕೊಂಡು ಜಡ ವಸ್ತುಗಳನ್ನಾಗಿಸಿಬಿಡಬಹುದು.

  2. Kkn Keerthikumar(Preeti)

    ಎಂತಹ ಸಂಧರ್ಭದಲ್ಲೂ ತಮ್ಮ ಕಾಯಕಕ್ಕೆ ಧಕ್ಕೆ ಬರದಂತೆ ಸಮಯ ಪಾಲನೆ ಮಾಡುವುದು ಅದ್ಭುತವಾದ ಸಂಗತಿ. ಯಾಕೆಂದರೆ , ಅದು ಎಲ್ಲರಿಂದಲೂ ಸಾಧ್ಯವಿಲ್ಲ. ನಾವಾದರೆ , ಹಬ್ಬದ ದಿವಸವೇನು, ಹಬ್ಬದ ಮುಂದಿನ 3ದಿನಗಳ ವರೆಗೆ ನಮ್ಮ ಪುಸ್ತಕಗಳು ಯಾರವೊ ಎಂಬಂತೆ ಬಿದ್ದಿರುವುದನ್ನು ನೆನಪಿಸಿಕೊಂಡರೆ, ನಾಚಿಕೆ ಆಗುತ್ತದೆ. ಊರೆಲ್ಲಾ ಸಂಭ್ರಮದಲ್ಲಿ ಮುಳುಗಿದರೂ ತಂದೆಯವರು ತಮ್ಮ ಓದುವಿಕೆಯಲ್ಲಿ ಮುಳುಗಿರುತ್ತಿದ್ದರು.ಯಾಕೆಂದರೆ ,ಅವರ ಸಂಭ್ರಮ ಇರುವುದು ಅದರಲ್ಲಿಯೇ ಅಲ್ಲವೇ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading