ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ ಖಾಡೆ ಹಾಗೂ ಡಾ ತಿಮ್ಮಾಪುರ ಅವರ ಕೃತಿಗಳ ಬಿಡುಗಡೆ…

ಆಪ್ತವಾಗುವ ದೇಸಿ ಭಾಷೆಯ ಸೊಗಡಿನ ಕಥೆ ಮತ್ತು ಕಾವ್ಯ

ಕನ್ನಡ ಸಾಹಿತ್ಯದಲ್ಲಿ ದೇಸಿ ಭಾಷೆಯ ಕಾವ್ಯ ಮತ್ತು ಕಥೆಗಳು ತುಂಬಾ ಆಪ್ತವಾಗಿವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಅವರು ಹೇಳಿದರು. ನಗರದ ಪ್ರಾರ್ಥನಾ ಕಾಲೇಜು ಸಭಾಂಗಣದಲ್ಲಿ ನಗರದ ಹೆಸರಾಂತ ಸಾಹಿತಿಗಳಾದ ಡಾ.ಪ್ರಕಾಶ ಖಾಡೆ ಅವರ ‘ಚೆಲುವಿ ಚಂದ್ರಿ’ ಕಥಾ ಸಂಕಲನ, ಡಾ.ಉಮೇಶ ತಿಮ್ಮಾಪುರ ಅವರ ‘ಹೆಜ್ಜೆ ಊರದ ಬಯಲು’ ಕವನ ಸಂಕಲನಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಸಂಸ್ಕೃತಿಯ ಬೇರುಗಳು ಗ್ರಾಮೀಣ ಮಟ್ಟದಲ್ಲಿ ಇನ್ನೂ ತಾಜಾತನದಿಂದ ಉಳಿದುಕೊಂಡು ಬಂದಿವೆ, ಅವುಗಳನ್ನು ಯಥಾವತ್ತಾಗಿ ಕಟ್ಟಿಕೊಡುವ ಮೂಲಕ ಈ ಲೇಖಕರು ಕನ್ನಡ ಸಾಹಿತ್ಯಕ್ಕೆ ಅತ್ಯಂತ ಶ್ರೇಷ್ಟವಾದ ಕೃತಿಗಳನ್ನು ನೀಡಿದ್ದಾರೆ ಎಂದು ಡಾ.ದಳವಾಯಿ ಹೇಳಿದರು.
ಖ್ಯಾತ ಸಾಹಿತಿ ಡಾ.ಎಚ್.ಎಸ್.ಸತ್ಯನಾರಾಯಣ ಅವರು ಚೆಲುವಿ ಚಂದ್ರಿ ಕೃತಿ ಕುರಿತು ಮಾತನಾಡಿ ನಗರ ಕೇಂದ್ರಿತವಾದ ಮನಸ್ಥಿತಿಗಳು ಪಾರಂಪರಿಕ ಜ್ಞಾನ ಶಿಸ್ತುಗಳಿಗೆ ವಿಮುಖವಾಗಿರುವ ಈ ಸಂದರ್ಭದಲ್ಲಿ ಗ್ರಾಮೀಣ ಪರಿಸರದ ಭಿನ್ನ ಭಿನ್ನ ನೆಲೆಗಳನ್ನು ತಾಜಾತನದಿಂದ ಕಟ್ಟಿಕೊಡುವ ಮೂಲಕ ಸುಸ್ಥಿರವಾದ ಮೌಲ್ಯಗಳ ಸಾಧ್ಯತೆಗಳನ್ನು ತಮ್ಮ ಕಥೆಗಳಲ್ಲಿ ಡಾ.ಪ್ರಕಾಶ ಖಾಡೆ ಅಭಿವ್ಯಕ್ತಿಸಿದ್ದಾರೆಂದು ಹೇಳಿದರು.
ಡಾ.ಉಮೇಶ ತಿಮ್ಮಾಪುರ ಅವರ ಹೆಜ್ಜೆ ಊರದ ಬಯಲು ಕವನ ಸಂಕಲನ ಕುರಿತು ಮಾತನಾಡಿದ ಕುಷ್ಟಗಿಯ ಕವಿ ಪ್ರಮೋದ ತುರ್ವಿಹಾಳ ಅವರು ‘ಅನುಭವ ಜನ್ಯ ವಿದ್ಯಮಾನಗಳನ್ನು ಕಾವ್ಯವಾಗಿಸುವುದರ ಮೂಲಕ ಕಾವ್ಯಾನುಭದ ಮೂಲಕವೇ ಹೊಸ ಅನುಭವಗಳನ್ನು ಸಶಕ್ತವಾಗಿ ರೂಪಿಸಿರುವ ಕವಿ ಕನ್ನಡ ಕಾವ್ಯ ಕ್ಷೇತ್ರಕ್ಕೆ ಹೊಸ ಬೆಳೆ ನೀಡಿದ್ದಾರೆಂದರು.

ಅಧ್ಯಕ್ಷತೆ ವಹಿಸಿದ್ದ ಗದುಗಿನ ಸಾಹಿತಿ ಡಾ.ಅರ್ಜುನ ಗೊಳಸಂಗಿ ಮಾತನಾಡಿ ಬಾಗಲಕೋಟೆ ಪರಿಸರವು ಕನ್ನಡ ಸೃಜನಶೀಲ ಸಾಹಿತ್ಯ ಪ್ರಕಾರಕ್ಕೆ ತುಂಬಾ ಮೌಲಿಕವಾದ ಕೊಡುಗೆ ಕೊಟ್ಟಿದ್ದು ಈ ದಿನ ಬಿಡುಗಡೆಯಾದ ಕೃತಿಗಳು ಇದಕ್ಕೆ ಸಾಕ್ಷಿ ಒದಗಿಸುತ್ತವೆ ಎಂದರು. ಪ್ರಾ.ಅಶೋಕ ಕಂದಗಲ್ಲ ಆಶಯ ನುಡಿ ಹೇಳಿದರು

ಸಮಾರಂಭದಲ್ಲಿ ನಿಸರ್ಗ ಎಜ್ಯೂಕೇಷನ್ ಅಕಾಡೆಮಿಯ ಉಪಾಧ್ಯಕ್ಷರಾದ ವೆಂಕಟೇಶ ನಡುಮನಿ, ಆರ್.ಡಿ.ಹೊಸಮನಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಂ.ಆರ್.ಹೊಸಮನಿ, ಸಹೃದಯ ಸಾಹಿತ್ಯ ವೇದಿಕೆಯ ಸಂಚಾಲಕರಾದ ಮಹಾಬಳೇಶ್ವರ ಗುಡಗುಂಟಿ ಹಾಗೂ ಹಿರಿಯ ಸಾಹಿತಿ ಎಸ್.ಜಿ.ಕೋಟಿ, ಡಾ.ಮೈನುದ್ದೀನ ರೇವಡಿಗಾರ, ಪ್ರಕಾಶ ಡಂಗಿ, ವೆಂಕಟೇಶ ಇನಾಮದಾರ, ರವಿ ಕಂಗಳ, ತಿರುಪತಿ ಭಂಗಿ, ಲಕ್ಷ್ಮಣ ಬದಾಮಿ, ಕಿರಣ ಗಣಾಚಾರಿ, ಎನ್.ಆರ್.ಠಕ್ಕಾಯಿ, ಪ್ರಿಯಾ ಕಟ್ಟಿ, ಈರಮ್ಮ ಹಂಪಿಹೊಳಿ. ಅನಿಲ ಗುನ್ನಾಪುರ, ಅಲ್ಲಮಪ್ರಭು ಅಂಬಿ ಮೊದಲಾದವರು ಪಾಲ್ಗೊಂಡಿದ್ದರು. ಡಾ.ಪ್ರಕಾಶ ಖಾಡೆ ಸ್ವಾಗತಿಸಿದರು, ಡಾ.ಉಮೇಶ ತಿಮ್ಮಾಪುರ ವಂದಿಸಿದರು.

‍ಲೇಖಕರು Admin

8 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading