ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ ಕೆ ಎಸ್ ಚೈತ್ರಾ ಹೊಸ ಅಂಕಣ – ‘ದಂತ’ ಕಥೆಗಳು

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

3

ಅನಾಟಮಿಯ ದೊಡ್ಡ ಟೀಚರ್!

ದಂತವೈದ್ಯಕೀಯ ಶಿಕ್ಷಣದ ಮೊದಲ ವರ್ಷದಲ್ಲಿ ಅನಾಟಮಿ ಅಂದರೆ  ಅಂಗರಚನಾಶಾಸ್ತ್ರ ಮುಖ್ಯ ವಿಷಯ. ಆದರೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇಡೀ ದೇಹದ ಬಗ್ಗೆ ಕಲಿಕೆ ಇದ್ದರೆ ನಮಗೆ ತಲೆ ಮತ್ತು ಕತ್ತಿಗೆ ಮಾತ್ರ ಸೀಮಿತ. ಅಂಗರಚನೆಯನ್ನು ಕಲಿಯಲು ಕಳೇಬರಗಳು ಅವಶ್ಯಕ. ಕಾಲೇಜಿಗೆ ಸೇರುವ ಮೊದಲೇ ‘ಹೆಣ ಕೊಯ್ಯೋದು ಮಾಡೋಕೆ ಆಗುತ್ತಾ?’ ಎಂಬ ಪ್ರಶ್ನೆಗಳು ಎದುರಾಗಿದ್ದವು. ಆದರೆ ನಾನು ಅದಕ್ಕೇನೂ ಹೆಚ್ಚಿಗೆ ತಲೆ ಕೆಡಿಸಿಕೊಂಡಿರಲಿಲ್ಲ; ಏಕೆಂದರೆ ನಮ್ಮ ಕುಟುಂಬದ ಪ್ರಥಮ ವೈದ್ಯರಾದ ಅಪ್ಪ, ಸಾಗರದ ಸಂಪ್ರದಾಯಸ್ಥ ಮನೆತನಕ್ಕೆ ಸೇರಿದವರು. ಅಂಥವರು ಬೆಂಗಳೂರಿನಲ್ಲಿ ಮೆಡಿಕಲ್ ಸೇರಿದಾಗ ‘ಅಡಿಕೆ ತೋಟ, ಪೂಜೆ-ಪುನಸ್ಕಾರ ಮಾಡೋದು ಬಿಟ್ಟು ಹೆಣ ಕುಯ್ಯೋ ಕೆಲಸ ಯಾಕೆ?’ ಎಂಬ ಪ್ರಶ್ನೆಯನ್ನು ಅರವತ್ತರ ದಶಕದಲ್ಲಿ ಎದುರಿಸಿಯೂ ಹಠ ಬಿಡದೆ ಗುರಿ ಸಾಧಿಸಿದವರು. ಹಾಗಿರುವಾಗ ನಾನು ಹಿಂಜರಿಯುವ ಪ್ರಶ್ನೆ ಇರಲಿಲ್ಲ. ಆದರೆ ಸ್ವಲ್ಪ ಅಳುಕು ಇದ್ದದ್ದು ನಿಜ; ಕಾರಣ ಜಿರಳೆ!

ಅದೇನೋ ಗೊತ್ತಿಲ್ಲ ಜಿರಳೆ-ಹಲ್ಲಿ ಕಂಡರೆ ಎಲ್ಲಿಲ್ಲದ ಹೆದರಿಕೆ ನನಗೆ. ಪಾಪ ಅವುಗಳ ತಪ್ಪೇನೂ ಇಲ್ಲ, ನಾನೇ ಸರಿಯಿಲ್ಲ ಎನ್ನುವುದೇ ಸೂಕ್ತ. ಜಿರಳೆಯನ್ನು ಕಂಡರೆ ಹೆದರುವುದೇನೋ ಹೌದು, ಆದರೆ ಯಾರಾದರೂ ಅದನ್ನು ಕೊಂದರೆ ಮತ್ತಷ್ಟು ದುಃಖ. ಹೈಸ್ಕೂಲ್, ಕಾಲೇಜಿನಲ್ಲಿ ಇರುವಾಗ ಸ್ನಾನಕ್ಕೆ ಹೋಗುವ ಮುಂಚೆ ತಂಗಿಯರಿಗೆ ಬಚ್ಚಲು ಮನೆಗೆ ಕಳಿಸುತ್ತಿದ್ದೆ. ಅಲ್ಲಿ ಏನಾದರೂ ಜಿರಳೆ ಕಂಡರೆ ಅದನ್ನು ಸಾಯಿಸಿ ಅಲ್ಲ ಹೊರಗೆ ಓಡಿಸುವ ಜವಾಬ್ದಾರಿ ಅವರಿಗೆ ನೀಡಿದ್ದೆ. ಪಾಪ ವಿಧೇಯ ತಂಗಿಯರು, ಪ್ರೀತಿ/ ಹೆದರಿಕೆ/ ಕನಿಕರ ಅಂತೂ ಈ ಕೆಲಸ ಮಾಡುತ್ತಿದ್ದರು. ಅಪ್ಪ-ಅಮ್ಮ, ಒಂದೇ ಜಿರಳೆ ದಿನಾ ಒಳಗೆ -ಹೊರಗೆ ಓಡಾಡುತ್ತೆ ಎನ್ನುತ್ತಿದ್ದರು! ಹೀಗೆ ಪುಟ್ಟ ಜಿರಳೆ ಕಂಡು ಓಡುವ- ಅದನ್ನು ಸಾಯಿಸಿದರೆ ಹೆದರುವ ಹುಡುಗಿ ನಾನಾಗಿದ್ದೆ. ಈ ವಿಷಯ ಗೊತ್ತಿದ್ದ ನನ್ನ ಗೆಳತಿಯರು, ಸಂಬಂಧಿಕರು ಎಲ್ಲರಿಗೂ ನಾನು ಹೇಗೆ ಅನಾಟಮಿ ಕಲಿಯುತ್ತೇನೆ ಎಂಬ ಕುತೂಹಲ ಇದ್ದದ್ದು ಸಹಜವೇ, (ನನಗೂ!). ಅದಕ್ಕೆ ಸರಿಯಾಗಿ ಸೀನಿಯರ್ಸ್ ಅನಾಟಮಿ ಸಬ್ಜೆಕ್ಟ್ ಕಲಿಯಲು ಕಷ್ಟ, ಆದರೆ ಲ್ಯಾಬ್ ಎಲ್ಲಕ್ಕಿಂತ ಕಷ್ಟ ಎಂದು ಹೇಳಿದ್ದರು. ಹೀಗಾಗಿ ಮೊದಲ ದಿನ ಬಿಳಿ ಕೋಟ್ ಧರಿಸಿ ಬ್ಯಾಚ್‌ಗಳಲ್ಲಿ ಡಿಸೆಕ್ಷನ್ ಹಾಲ್‌ಗೆ ಹೋಗುವಾಗ ತಲೆ ತಗ್ಗಿಸಿ ಬಿಳಿಕುರಿಗಳ ಹಾಗೆ ಸಾಲಾಗಿ ನಡೆದಿದ್ದೆವು.

ದೊಡ್ಡ ಹಾಲ್, ಅಲ್ಲಲ್ಲಿ ಜೋಡಿಸಿಟ್ಟ ಉದ್ದ ಟೇಬಲ್‌ಗಳು, ಸುತ್ತ ಸ್ಟೂಲುಗಳು, ಅಲ್ಲಲ್ಲಿ ನೇತಾಡುತ್ತಿದ್ದ ಅಸ್ಥಿಪಂಜರ ಎಲ್ಲಕ್ಕಿಂತ ಮೂಗಿಗೆ ಬಡಿಯುತ್ತಿದ್ದ ಘಾಟು ವಾಸನೆ. ನಮಗೆ ನೀಡಿದ್ದ ಟೇಬಲ್ ಬಳಿ ಆಗಲೇ ಕಳೇಬರ ಇಡಲಾಗಿತ್ತು. ಅದೇ ಮೊದಲ ಬಾರಿ ಮನುಷ್ಯದೇಹವನ್ನು ಹೀಗೆ ನೋಡಿದ್ದು.ಅಪರಿಚಿತ ವಾತಾವರಣ, ನೋಟ-ವಾಸನೆ ಹೀಗೆ ಎಲ್ಲರೂ ತಬ್ಬಿಬ್ಬಾಗಿ ನಿಂತಿದ್ದೆವು. ಅಷ್ಟರಲ್ಲಿ ಧಪ್ ಎಂಬ ಸದ್ದು! ಗಾಬರಿಯಿಂದ ತಿರುಗಿದರೆ ನಮ್ಮ ಗುಂಪಿನಲ್ಲೇ ಎತ್ತರ ಮತ್ತು ದಪ್ಪದ ಹುಡುಗ ತಲೆ ತಿರುಗಿ ಸ್ಟೂಲಿನ ಮೇಲೆ ಕುಸಿದಿದ್ದ.ಒಂದೆರಡು ಹುಡುಗಿಯರು ಹೊಟ್ಟೆ ತೊಳಸಿದಂತಾಗಿ ವಾಂತಿ ಮಾಡುವ ಹಂತದಲ್ಲಿದ್ದರು.ಈ ಕ್ಲಾಸ್ ಇರದಿದ್ದರೆ ಎಷ್ಟು ಒಳ್ಳೆಯದಿತ್ತು ಎಂಬ ಯೋಚನೆ ಎಲ್ಲರ ಮನಸ್ಸಲ್ಲೂ ಮೂಡಿತ್ತು. ಅಷ್ಟರಲ್ಲಿ ಪ್ರೊಫೆಸರ್ ನಮ್ಮ ಟೇಬಲ್ ಬಳಿ ಬಂದಿದ್ದರು. ‘ವೆಲ್ಕಮ್ ಟು ಡಿಸೆಕ್ಷನ್ ಹಾಲ್! ನಿಮಗೆ ಈಗ ಹೆದರಿಕೆ, ಆತಂಕ ಎಲ್ಲಾ ಅನ್ನಿಸ್ತಾ ಇರಬಹುದು, ಇದೆಲ್ಲಾ ಏಕೆ ಎಂಬ ಪ್ರಶ್ನೆಯೂ ಮೂಡಿರಬಹುದು. ಆದರೆ ನೆನಪಿರಲಿ ಅನಾಟಮಿ ತುಂಬಾ ಮುಖ್ಯ.

ದೇಹದ ಮೇಲಿರುವುದನ್ನು ಸುಲಭವಾಗಿ ನೋಡಬಹುದು. ಒಳಗಿದನ್ನು ನೋಡಬೇಕು, ತಿಳಿಯಬೇಕು, ಹೇಗೆ ಕೆಲಸ ಮಾಡುತ್ತೆ ಕಲಿಯಬೇಕು. ಆಗ ಮಾತ್ರ ಉತ್ತಮ ವೈದ್ಯರಾಗಲು ಸಾಧ್ಯ. ಈ ದೇಹ ಅನ್ನುವುದು ಪ್ರಕೃತಿಯ ಅದ್ಭುತ ಸೃಷ್ಟಿ. ಸಾವಿರಾರು ಸಣ್ಣ ಪುಟ್ಟ ಭಾಗಗಳು ಪರಸ್ಪರ ಹೊಂದಿಕೊಂಡು ಏಕಕಾಲಕ್ಕೆ ಕೆಲಸ ಮಾಡುವುದು ನಿಜಕ್ಕೂ ವಿಸ್ಮಯ. ಅವುಗಳ ಬಗ್ಗೆ ಕೂಲಂಕಷವಾಗಿ ತಿಳಿಯುವುದು ಅಗತ್ಯ ಕಾರು ಚೆನ್ನಾಗಿ ಓಡುತ್ತೆ ನಿಜ. ಆದರೆ ಕೆಟ್ಟು ನಿಂತಾಗ ನೂರು ಕಾರಣ ಗಳಿರಬಹುದು. ಕಾರಣ ಯಾವುದು ಎಂದು ತಿಳಿದು ಅದನ್ನು ಸರಿಪಡಿಸಬೇಕು ಎಂದರೆ ಕಾರಿನ ಪ್ರತಿ ಬಿಡಿ ಭಾಗದ ಬಗ್ಗೆ ಜ್ಞಾನವಿರಬೇಕು. ಹಾಗೆಯೇ ಇದು! ಈ ಕಳೇಬರ, ಅವುಗಳನ್ನು ಇಟ್ಟಿರುವ ಫಾರ್ಮಾಲಿನ್ ವಾಸನೆ ಎಲ್ಲವೂ ಅಭ್ಯಾಸವಾಗುತ್ತದೆ ; ನೀವು ಇದನ್ನು ಶಿಕ್ಷಣ ಎಂದು ಭಾವಿಸಿದಾಗ ಮಾತ್ರ.. ಅಡಿಗೆ ಕಲಿಯುವಾಗ ಇಂಗು-ಬೆಳ್ಳುಳ್ಳಿ-ಮೀನಿನ ವಾಸನೆಯ ಹಾಗೆ ಇದೂ ಕೂಡಾ. ಇದರೊಂದಿಗೇ ನಿಮಗೆ ಕಲಿಯುವ ಅವಕಾಶ ನೀಡಿದ ಈ ಕಳೇಬರದ ಬಗ್ಗೆ ಸಂಪೂರ್ಣ ಗೌರವ ಮತ್ತು ಕೃತಜ್ಞತೆ ಇರಲಿ….. ’ ಎಂದು ಎಚ್ಚರಿಸಿದ್ದರು. ಅಲ್ಲಿಯವರೆಗೆ ಒಂಥರಾ ಗಾಬರಿಯಲ್ಲಿ ಇದ್ದ ನಮಗೆ ಅವರು ಹೇಳಿದ್ದು ಪೂರ್ತಿ ಅರ್ಥವಾಗದಿದ್ದರೂ ಸ್ವಲ್ಪ ಧೈರ್ಯ ಮೂಡಿತ್ತು.

ಡಿಸೆಕ್ಷನ್ ಆರಂಭಿಸುವ ಮೊದಲು ಕೆಲವರು ‘ಡೆಡ್‌ಬಾಡಿ’ ಎಂದು ಹೆದರಿಕೆ/ತಿರಸ್ಕಾರ ತೋರಿಸಿದ್ದರು, ಮುಟ್ಟಲು ಹಿಂಜರಿದಿದ್ದರು. ಒಬ್ಬ ಹುಡುಗ ಏನೋ ತಮಾಷೆಯನ್ನೂ ಮಾಡಿ ನಕ್ಕಿದ್ದ. ಅಷ್ಟೇ, ಅಲ್ಲಲ್ಲಿ ಓಡಾಡುತ್ತಿದ್ದ ಸೀನಿಯರ್‌ಗಳಿಂದ ಸರಿಯಾಗಿ ‘ಕ್ಲಾಸ್’ ಸಿಕ್ಕಿತ್ತು. ಅಲ್ಲಿಯವರೆಗೆ ನಮ್ಮೊಂದಿಗೆ ತಮಾಷೆಯಾಗಿ ಮಾತನಾಡುತ್ತಿದ್ದ ಸೀನಿಯರ್‌ಗಳು ಇದ್ದಕ್ಕಿದ್ದಂತೆ ಸೀರಿಯಸ್ ಆಗಿಬಿಟ್ಟಿದ್ದರು. ನಮ್ಮನ್ನೆಲ್ಲಾ ಕರೆದು ‘ನಿಮಗೆ ಇಲ್ಲಿ ಅನಾಟಮಿ ಕಲಿಸುವ ಎಲ್ಲಕ್ಕಿಂತ ದೊಡ್ಡ ಟೀಚರ್ ಯಾರು ಗೊತ್ತೇ? ಈ ಕಳೇಬರ! ಒಂದು ಕಳೇಬರ ಸಿಗುವುದು ಎಷ್ಟು ಕಷ್ಟ ಎನ್ನುವುದರ ಅರಿವು ನಿಮಗಿಲ್ಲ.

ನಮ್ಮಂಥ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಅನೇಕರು ದೇಹದಾನ ಮಾಡುತ್ತಾರೆ. ಅವರ ಕುಟುಂಬದವರು ಅದಕ್ಕೆ ಸಮ್ಮತಿಸುತ್ತಾರೆ. ಎಂಥ ಕಠಿಣ ನಿರ್ಧಾರ ಅದು ಎಂಬುದು ನಿಮಗೆ ಊಹಿಸಲೂ ಸಾಧ್ಯವಿಲ್ಲ. ಹಾಗೆಯೇ ಯಾರೂ ಇಲ್ಲದ ಕೆಲವು ದೇಹಗಳನ್ನು ಕಾನೂನುಬದ್ಧವಾಗಿ ಇಲ್ಲಿಗೆ ತರಲಾಗುತ್ತದೆ. ಏನೇ ಇರಲಿ, ಹೇಗೇ ಇರಲಿ, ಈಗ ಇಲ್ಲಿರುವುದು ಒಂದು ಕಾಲದಲ್ಲಿ ನಮ್ಮ ಹಾಗೆಯೇ ಬದುಕಿ ಬಾಳಿದ್ದ ಜೀವ. ಸುಮ್ಮನೇ ಮಣ್ಣಾಗುವುದರ ಬದಲು ನಮ್ಮ ಕಲಿಕೆಗೆ ಆ ಮೂಲಕ ಜನರ ಚಿಕಿತ್ಸೆಗೆ ನೆರವಾಗುತ್ತಿದೆ. ಎಂಥ ಸಾರ್ಥಕ ಕೆಲಸ! ಹೀಗಿರುವಾಗ ತಮಾಷೆ ಮಾಡುವುದಲ್ಲ ನಿಜವಾಗಿ ನೋಡಿದರೆ ಕೈ ಮುಗಿದು ಕಲಿಯಬೇಕು.ಅವರ ದಾನ ಅಪಾತ್ರರಿಗೆ ಸಲ್ಲಬಾರದು.. ನೀವು ಹೀಗೆ ಮಾಡಿದ ವಿಷಯ ಪ್ರೊಫೆಸರ್‌ಗೆ ಗೊತ್ತಾದರೆ ನೀವು ಅನಾಟಮಿ ಕಲಿತಂತೆಯೇ…’ ಎಂದು ಖಡಕ್ ವಾರ್ನಿಂಗ್ ಸಿಕ್ಕಿತ್ತು. ಆವತ್ತಿನಿಂದ ಕೆಡಾವರ್, ನಮ್ಮ ಮೋಸ್ಟ್ ರೆಸ್ಪೆಕ್ಟೆಡ್ ಟೀಚರ್! 

ನೋಡನೋಡುತ್ತಲೇ ಒಂದು ವರ್ಷ ಕಳೆದುಹೋಗಿತ್ತು. ಆರಂಭದಲ್ಲಿ ಒಣಗಿದ, ಗಟ್ಟಿ ಚರ್ಮವನ್ನು ಕತ್ತರಿಸಲು ನಡುಗುತ್ತಿದ್ದ ಕೈಗಳು ನಂತರ ನಾಜೂಕಾಗಿ ಕತ್ತರಿಸುವಷ್ಟು ಪಳಗಿದವು. ಪುಸ್ತಕದಲ್ಲಿ, ಚಿತ್ರದಲ್ಲಿ ಎಷ್ಟೇ ನೋಡಿದರೂ ಅರ್ಥವಾಗದ್ದು ಇಲ್ಲಿ ಕಳೇಬರದಲ್ಲಿ ಒಮ್ಮೆ ನೋಡಿದರೆ ಸ್ಪಷ್ಟವಾಗುತ್ತಿತ್ತು. ಮಂತ್ರವಾದಿಗಳು, ಕಾಪಾಲಿಕರು ಮಾತ್ರ ಉಪಯೋಗಿಸುತ್ತಾರೆ ಎಂದು ತಲೆಬುರುಡೆ (ಸ್ಕಲ್) ಚಿತ್ರ ಕಂಡರೂ ಹೆದರಿಕೆಯಾಗಿ ನಿದ್ದೆ ನಿದ್ದೆಯಲ್ಲಿ ಬೆಚ್ಚಿ ಬೀಳುವ ದಿನಗಳು ಮಾಯವಾದವು. ಬದಲಿಗೆ ತಲೆಬುರುಡೆ ಗಟ್ಟಿ ಹಿಡಿದು ಒಂದೇ ಭಾಗ ನೋಡುತ್ತಾ ಅದರ ಬಗ್ಗೆ ಕಲಿಯುವುದು ಅಭ್ಯಾಸವಾಯಿತು, ಅನಿವಾರ್ಯವೂ ಆಗಿತ್ತು. ಕೆಲವೊಮ್ಮೆ ತಡರಾತ್ರಿ ಅನಾಟಮಿ ಓದುತ್ತಾ ಹಾಗೇ ಮಲಗಿದಾಗ ತಲೆಬುರುಡೆಯೂ ನಮ್ಮೊಂದಿಗೆ ಹಾಸಿಗೆಯಲ್ಲಿ ಇರುತ್ತಿತ್ತು. ಎಷ್ಟೋ ಬಾರಿ ಬುರುಡೆ ಎಲ್ಲೆಲ್ಲೋ ಇಟ್ಟು ‘ನನ್ನ ಬುರುಡೆ ಎಲ್ಲಿದೆ?’ ಎಂದು ಹುಡುಕಾಡಿದ್ದೂ ಇದೆ ! ತನ್ನಿಂತಾನೇ ಬಿಳಿಕೋಟು, ಡಿಸೆಕ್ಷನ್ ಬಾಕ್ಸ್, ಫಾರ್ಮಾಲಿನ್ ವಾಸನೆ ಎಲ್ಲವೂ ಅಭ್ಯಾಸವಾಗಿತ್ತು. ಜಿರಳೆ ಕಂಡರೆ ಹೆದರುತ್ತಿದ್ದ ನಾನು ಕಳೇಬರದ ಪಕ್ಕ ಒಬ್ಬಳೇ ಕುಳಿತು, ಎಲ್ಲವನ್ನೂ ಸೂಕ್ಷ್ಮವಾಗಿ ನೋಡಿ ಡಿಸೆಕ್ಷೆನ್ ನೋಟ್ಸ್ ತಯಾರಿಸುತ್ತಿದ್ದೆ. ಇವೆಲ್ಲದರ ಪರಿಣಾಮ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ಒಳ್ಳೆಯ ಅಂಕಗಳು ಬಂದವು.

ಎರಡನೇ ವರ್ಷಕ್ಕೆ ಕಾಲಿಡುವ ಮೊದಲು ಅನಾಟಮಿ ಹಾಲಿನಲ್ಲಿ ಕಳೇಬರ ಬಿಟ್ಟು ಬರುವಾಗ ಮನಸ್ಸಿನಲ್ಲಿ ಸ್ವಲ್ಪ ಬೇಸರ. ನಾವು ಉಪಯೋಗಿಸಿದ್ದ  ತಲೆಬುರುಡೆ ಜ್ಯೂನಿಯರ್‌ಗಳಿಗೆ ಕೊಡುವಾಗ ‘ ನನ್ನದು, ಹುಷಾರಾಗಿ ನೋಡಿಕೋ’ ಎನ್ನುವ ಎಚ್ಚರಿಕೆ ತನ್ನಿಂತಾನೇ ಬಂದಿತ್ತು. ಎಲ್ಲವೂ ಇಷ್ಟು ದಿನ ನಮ್ಮದಾಗಿತ್ತು ಎಂಬ ಮೋಹ! ಅದರ ಜತೆ ಕಳೇಬರದ ಉಳಿದ ಮೂಳೆಗಳನ್ನು ಇನ್ನೊಂದು ಬ್ಯಾಚಿನ ವಿದ್ಯಾರ್ಥಿಗಳಿಗೆ ಕಲಿಸಲು ಉಪಯೋಗಿಸುತ್ತಾರೆ ಎಂದು ಸಮಾಧಾನ. ಕಡೆಗೊಮ್ಮೆ ಆ ವರ್ಷವಿಡೀ ನಮ್ಮದಾಗಿದ್ದ ಟೇಬಲ್ ಮುಂದೆ ನಿಂತು ಅಪರಿಚಿತ ವ್ಯಕ್ತಿಯ ಕಳೇಬರಕ್ಕೆ ವಂದನೆ ಸಲ್ಲಿಸುವಾಗ ನಿಜಕ್ಕೂ ದೇಹದಾನದ ಮಹತ್ವ ಅರಿವಾಗಿತ್ತು!

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

10 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading