ಸುಮಾರು ದಿನಗಳ ನಂತರ ನಿನ್ನೆ ದಿನಸಿಕೊಳ್ಳಲು ಅಂಗಡಿಯಲ್ಲಿ ಸಿಕ್ಕ ನಾರಾಯಣ ಸ್ವಾಮಿಯವರು ಅದೇ ಎತ್ತರದ ನಿಲುವಿನಲ್ಲಿ ಶಿಸ್ತಿನ ಕಾಮ್ರೇಡ್ ತರಹ ಕಂಗೊಳಿಸಿದರು. ನೋಡಿದಾಕ್ಷಣ ಹಳೆಯದೆಲ್ಲ ನೆನಪಿಗೆ ಬರತೊಡಗಿದವು.

ನೆಂಪೆ ದೇವರಾಜ್
ಯಡೂರಿನ ದಿವಂಗತ ಡಾ. ವಿಷ್ಣು ಮೂರ್ತಿ ಮತ್ತು ಡಾ. ನಾರಾಯಣ ಸ್ವಾಮಿಯವರು ಗಳಸ್ಯ ಕಂಠಸ್ಯರು. ವಿಷ್ಣು ಮೂರ್ತಿಯವರ ಜೊತೆ ಪದೇ ಪದೇ ಗೋಪಾಲ ಗೌಡರು ಉಳಿದುಕೊಂಡಿದ್ದ ಬೆಂಗಳೂರಿನ ಮನೆಗೆ ಹೋಗುತ್ತಿದ್ದ ನಾರಾಯಣ ಸ್ವಾಮಿಯವರು ಗೌಡರ ವಿಚಾರಧಾರೆಗಳಿಂದ ಆಕರ್ಷಿತರಾಗುತ್ತಾ ಹೋಗುತ್ತಾರೆ. ಗೋಪಾಲ ಗೌಡರಾಗ ತೀರ್ಥಹಳ್ಳಿಯ ಶಾಸಕರು ಹಾಗೂ ವಿರೋಧ ಪಕ್ಷದ ನಾಯಕರು ಕೂಡಾ.
ಇತ್ತ ವೈದ್ಯಕೀಯ ಪದವಿ ಪೂರೈಸಿದ ವಿಷ್ಣು ಮೂರ್ತಿಯವರು ಒಂದಷ್ಟು ಕಾಲ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾ ಶಾಂತವೇರಿ ಗೋಪಾಲ ಗೌಡರ ಹೆಸರಲ್ಲಿ ಮೈಸೂರಿನಲ್ಲಿ ಶಾಂತವೇರಿ ಗೋಪಾಲ ಗೌಡ ಆಸ್ಪತ್ರೆಯನ್ನೇ ತೆರೆಯುತ್ತಾರೆ. ಈ ಸಂದರ್ಭದಲ್ಲಿ ನಾರಾಯಣ ಸ್ವಾಮಿಯವರಿಗೋ ಪಾರ್ಶ್ವವಾಯು ಪೀಡಿತ ತಮ್ಮ ತಾಯಿಯನ್ನು ನೋಡಿಕೊಳ್ಳುವ ಸಲುವಾಗಿ ಚಿಕ್ಕಬಳ್ಳಾಪುರದ ಹತ್ತಿರವೇ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ತವಕ. ಈ ಕಾರಣಕ್ಕಾಗಿ ಸ್ವತಃ ಗೋಪಾಲ ಗೌಡರೇ ಅಂದಿನ ವೈದ್ಯಕೀಯ ಇಲಾಖೆಯ ನಿರ್ದೇಶಕರಾದ ಶಾಮಯ್ಯ ಎಂಬುವರ ಹತ್ತಿರ ಕರೆದುಕೊಂಡು ಹೋಗುತ್ತಾರೆ.
ಹನ್ನೆರಡೂವರೆ ರೂಪಾಯಿಗಳ ಟ್ಯಾಕ್ಸಿ ಬಾಡಿಗೆಯನ್ನು ನಾರಾಯಣ ಸ್ವಾಮಿಯವರು ಕೊಡಲು ಹೋದಾಗ ‘ಏಯ್ ಹುಡುಗ ನೀನು ಕೊಡಬೇಡ. ನಿಂಗಿನ್ನೂ ಕೆಲ್ಸ ಸಿಕ್ಕಿಲ್ಲ’ ಎಂದು ಕೊಡಲು ಬಂದ ನಾರಾಯಣ ಸ್ವಾಮಿಯವರಿಗೆ ಹಣವನ್ನು ಕೊಡಲು ಬಿಡದೆ ವಾಪಾಸು ಜೇಬಿಗೇ ಹಾಕಿದ್ದನ್ನು ನೆನಪಿಸುತ್ತಾರೆ.

ಗೋಪಾಲ ಗೌಡರ ನಿಧನಾನಂತರ ಕೋಣಂದೂರು ಲಿಂಗಪ್ಪನವರ ಸಂಪರ್ಕಕ್ಕೆ ಬಂದಾಗ ಈ ಸಂದರ್ಭದಲ್ಲಿ ಸಾಗರ ಆಸ್ಪತ್ರೆಯಲ್ಲಿ ಖಾಲಿ ಇದ್ದ ವೈದ್ಯರ ಹುದ್ದೆಗೆ ಹೋಗಲು ಕೋಣಂದೂರು ಲಿಂಗಪ್ಪನವರ ಸಹಾಯ ಬಯಸಿದಾಗಲೇ ತೀರ್ಥಹಳ್ಳಿಯತ್ತ ನಾರಾಯಣ ಸ್ವಾಮಿಯವರು ಮುಖ ಮಾಡಲು ಕಾರಣವಾಯ್ತು. ‘ಸಾಗರವೇಕೆ ತೀರ್ಥಹಳ್ಳಿಗೇ ಹಾಕಿಸುತ್ತೇನೆ. ಅಲ್ಲಿಗೆ ಬನ್ನಿ’ ಎಂದು ನಲವತ್ತ ನಾಲ್ಕು ವರುಷಗಳ ಹಿಂದೆ ಕೋಣಂದೂರು ಲಿಂಗಪ್ಪನವರು ನಿರ್ಧಾರ ತೆಗೆದುಕೊಳ್ಳದಿದ್ದರೆ ಡಾಕ್ಟರ್ ನಾರಾಯಣ ಸ್ವಾಮಿ ಎಂಬ ಹೆಸರು ತೀರ್ಥಹಳ್ಳಿಯಾದ್ಯಂತ ಈ ಮಟ್ಟದಲ್ಲಿ ಪ್ರಜ್ವಲಿಸುತ್ತಿರಲಿಲ್ಲವೆಂದೇ ಹೇಳಬೇಕು.
ತೀರ್ಥಹಳ್ಳಿ ಜೇಸಿ ಆಸ್ಪತ್ರೆಯ ಮೊಟ್ಟ ಮೊದಲ ಫಿಸಿಷಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಾರಾಯಣ ಸ್ವಾಮಿಯವರು ಈ ಸರ್ಕಾರಿ ಸೇವೆಯ ಅವಿಭಾಜ್ಯ ಅಂಗವಾಗಿರುವ ವರ್ಗಾವಣೆಯ ತಲೆ ಬಿಸಿಗಳಿಗೆ ಮುಕ್ತಿ ಹಾಡಲು ಮತ್ತು ತೀರ್ಥಹಳ್ಳಿ ಜನರ ಪ್ರೀತಿ ವಿಶ್ವಾಸಗಳಿಗೆ ಮಾರು ಹೋಗುತ್ತಾ ತೀರ್ಥಹಳ್ಳಿಯಲ್ಲೇ ಉಳಿದರು. ಸ್ವಂತ ಕ್ಲಿನಿಕ್ ಆರಂಭಿಸಿದ ಆ ನಂತರವೇ ನಿಜವಾದ ವೈದ್ಯ ನಾರಾಯಣ ಸ್ವಾಮಿಯವರು ತೀರ್ಥಹಳ್ಳಿ ಜನರಿಗೆ ಪರಿಚಯವಾಗುತ್ತಾ ಹೋದರು. ವೈದ್ಯ ವೃತ್ತಿಯಲ್ಲಿ ಇವರು ಉಳಿಸಿಕೊಂಡ ನೈತಿಕತೆ ಕಿರಿಯ ವೈದ್ಯರಿಗೆ ಪಾಠವಾಗುತ್ತಾ ಹೋಯಿತು. ಹೃದಯ ಸಂಬಂಧೀ ಕಾಯಿಲೆಗಳಿಗೆ ನಾರಾಯಣ ಸ್ವಾಮಿಯವರು ನೀಡುತ್ತಿದ್ದ ಸಲಹೆ ಮತ್ತು ಪತ್ತೆ ಹಚ್ಚುವಿಕೆಯಲ್ಲಿ ಇವರು ತೋರಿಸುತ್ತಿದ್ದ ಮುನ್ನೋಟ ರೋಗಿಗಳ ಪಾಲಿನ ಮನೆ ಮಾತಾಗತೊಡಗಿತು.
ಚಿಕ್ಕಬಳ್ಳಾಪುರದ ಸಾದಲಿ ಎಂಬ ತೆಲುಗುಮಯವಾದ ಊರಿನಿಂದ ಬಂದ ನಾರಾಯಣ ಸ್ವಾಮಿಯವರದು ಮಾತೃಭಾಷೆ ತೆಲುಗು. ಆದರೆ ತೀರ್ಥಹಳ್ಳಿಯವರಾಗುವ ಜೊತೆ ಜೊತೆಗೆ ಸ್ವಚ್ಚ ಉಚ್ಚಾರಣೆಯ ಕನ್ನಡಿಗರೂ ಆದರೆಂಬುದು ಖುಷಿಯ ಸಂಗತಿಯಲ್ಲದೆ ಮತ್ತೇನು? ಆಂಧ್ರದ ಗಡಿಯಲ್ಲಿರುವ ಬಾಗೇಪಲ್ಲಿಯಂತಹ ಕಮ್ಯೂನಿಸ್ಟ್ ಕಟ್ಟಾಳುಗಳ ಪರಂಪರೆಯಲ್ಲಿ ಬೆಳೆದು ಬದುಕಿದ ನಾರಾಯಣ ಸ್ವಾಮಿಯವರಿಗೆ ರಾಜಕೀಯ ಪಕ್ಷಗಳು ಸೇವೆ ಮಾಡಲನುವಾಗುವ ಸೇತುವೆಗಳಾಗಬೇಕೆಂಬ ಮನಸ್ಥಿತಿಗೆ ತುಂಬಾ ಹತ್ತಿರದವರು.
ಕೃಷಿಯ ಜೊತೆಗಿನ ನಿಕಟ ಬಾಂದವ್ಯದ ಈ ಡಾಕ್ಟರ್, ವೈದ್ಯಕೀಯದ ತಮ್ಮ ಬಿಡುವಿಲ್ಲದ ಸಮಯದಲ್ಲೂ ಆರಗ ಸಮೀಪದ ತಮ್ಮ ತೋಟದ ಅಡಿಕೆ ಗಿಡಗಳ ಜೊತೆ ಮಾತಾಡದಿದ್ದರೆ ಇವರಿಗೆ ಸಮಾಧಾನವಿಲ್ಲ. ಪ್ರತಿದಿನವೂ ರೋಗಿಗಳನ್ನು ಹೇಗೆ ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಸುತ್ತಾ ಹೋಗುತ್ತಾರೋ, ಹಾಗೆಯೇ ತಮ್ಮ ತೋಟದ ಅಡಿಕೆ ಗಿಡಗಳನ್ನೂ ಕೂಡಾ ಪ್ರೀತಿಸುತ್ತಾ ಹೋಗುವುದು ಇವರ ನಿತ್ಯದ ಕಾಯಕ! ತೀರ್ಥಹಳ್ಳಿಯ ಪುರ ಪಂಚಾಯ್ತಿ ಸದಸ್ಯರಾದದ್ದು, ಉಪಾಧ್ಯಕ್ಷರಾದದ್ದು, ಆ ನಂತರ ಅಧ್ಯಕ್ಷರಾದದ್ದು ಇವೆಲ್ಲ ತೀರಾ ಇತ್ತೀಚಿನ ಘಟನೆಗಳು. ಇವರಾವ ಪಕ್ಷವನ್ನು ಪ್ರತಿನಿಧಿಸಿ ಪುರ ಪಂಚಾಯ್ತಿಯ ಸದಸ್ಯರಾದರಾದರು, ಉಪಾಧ್ಯಕ್ಷರಾದರು, ಅಧ್ಯಕ್ಷರಾದರು ಎಂಬುದನ್ನು ನೆನಪಿಸಿಕೊಳ್ಳಲು ಬಹಳ ಜನರಿಗೆ ಆಗುತ್ತಿಲ್ಲದಿರುವುದೂ ಕೂಡಾ ನಾರಾಯಣ ಸ್ವಾಮಿಯವರ ವ್ಯಕ್ತಿತ್ವದಲ್ಲಿ ಸೇರಿಕೊಂಡ ವಿಶೇಷ ಗುಣ.
ಸುಮಾರು ದಿನಗಳ ನಂತರ ನಿನ್ನೆ ದಿನಸಿಕೊಳ್ಳಲು ಅಂಗಡಿಯಲ್ಲಿ ಸಿಕ್ಕ ನಾರಾಯಣ ಸ್ವಾಮಿಯವರು ಅದೇ ಎತ್ತರದ ನಿಲುವಿನಲ್ಲಿ ಶಿಸ್ತಿನ ಕಾಮ್ರೇಡ್ ತರಹ ಕಂಗೊಳಿಸಿದರು. ನೋಡಿದಾಕ್ಷಣ ಹಳೆಯದೆಲ್ಲ ನೆನಪಿಗೆ ಬರತೊಡಗಿದವು. ಇನ್ನು ಮೂರು ವರುಷ ಕಳೆದರೆ ಎಂಭತ್ತಕ್ಕೆ ಹೋಗುವ ಉಮ್ಮಸ್ಸಿನಲ್ಲಿದ್ದರು. ತೀರ್ಥಹಳ್ಳಿಯ ನಲವತ್ತ ನಾಲ್ಕು ವರ್ಷಗಳ ಸೇವೆಯ ಬಗ್ಗೆ ಹೆಮ್ಮೆ ಹೊಂದಿದ್ದರು. ಇಲ್ಲಿಯವರೆಗೆ ರೋಗಿಗಳಿಗೆ ಒಂದೂ ಚುಚ್ಚು ಮದ್ದು ನೀಡದೆ ಸಾಂತ್ವಾನಗೊಳಿಸಿಕೊಂಡು ಬಂದಿರುವುದೂ ಒಂದು ಇವರ ವಿಶೇಷ.






0 Comments