ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಬ್ಬಿಂಗ್ ಎನ್ನುವುದು ಬರ್ಗರ್‍ನಲ್ಲಿ ರಾಗಿಮುದ್ದೆ ಇರಿಸಿದ ಹಾಗೆ..

“ದೃಶ್ಯೋದ್ಯಮದಲ್ಲಿನ ಮನಾಪಲಿ ವ್ಯವಸ್ಥೆಗಳನ್ನು ಎದುರಿಸುತ್ತಾ ಈಸುವ ಬಗೆ ಹೇಗೆ?”

ಇಂದಿನ ಚಿಂತೆ! , ಚಲನಚಿತ್ರ , ಟೆಲಿವಿಷನ್

b sursh

ಬಿ.ಸುರೇಶ

ನಾನಿಲ್ಲಿ ಆಕಸ್ಮಿಕವಾಗಿ ಬಂದವನು. ಈ ಹೊತ್ತಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇರಬೇಕಿದ್ದವನು ಕಾರ್ಮಿಕರ ಹೋರಾಟದ ಸಲುವಾಗಿ ಮರಳಿ ರಾಜಧಾನಿಗೆ ಹಿಂದಿರುಗಿದೆ. ನಿನ್ನೆ ಹದಿನೈದು ಸಾವಿರ ಕಾರ್ಮಿಕರು ರಾಜಧಾನಿಯಲ್ಲಿ ಸೇರಿದ್ದರು, ಕನಿಷ್ಟ ವೇತನ ಮತ್ತು ಕಾರ್ಮಿಕರ ಹಕ್ಕುಗಳ ಬೇಡಿಕೆಯೊಂದಿಗೆ. ಈ ವಿಷಯ ನಮ್ಮ ವಾಹಿನಿಗಳಲ್ಲಿ ಸುದ್ದಿಯಾಗಲಿಲ್ಲ. ಆದರೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆದ ಸುದ್ದಿ ಮಾತ್ರ ದಿನವೆಲ್ಲಾ ಬರುತ್ತಿತ್ತು. ಇಂತಹ ಸಂದರ್ಭದಲ್ಲಿ ನಾವು “ಡಬ್ಬಿಂಗ್” ಎಂಬ ವಿಷಯದ ಬಗ್ಗೆ ಮಾತಾಡುತ್ತಾ ಇರುವುದು ಸಹ ಪ್ರಾಯಶಃ ಕಾರ್ಮಿಕರ ಮತ್ತು ಕ್ರಿಯಾಶೀಲ ಕೆಲಸಗಾರರ ನೆಲೆಯಿಂದ ಅತ್ಯಂತ ಸಮಯೋಚಿತ ಎಂದು ಭಾವಿಸುತ್ತೇನೆ.

ನಿನ್ನೆ ಹಗಲಿನ ಆರಂಭಕ್ಕೆ ಗುರುಗಳಾದ ಚಂಪಾ ಅವರು ಕರೆ ಮಾಡಿದರು, “ಈ ಗೋಷ್ಟಿಯ ಒಬ್ಬ ಭಾಷಣಕಾರರು ಸಂಪರ್ಕಕ್ಕೆ ಸಿಗುತ್ತಿಲ್ಲ, ನೀನು ಸ್ಥಾನ ತುಂಬು” ಎಂದು ಆಜ್ಞಾಪಿಸಿದರು. ನಾನು ಗುರುಗಳ ಮಾತು ಮೀರಲಾಗದೆ ಬಂದು ಮಾತಿಗೆ ನಿಂತಿದ್ದೇನೆ. ನಮ್ಮ ಗುರುಗಳ ಇಂತಹ ಪ್ರೀತಿಪೂರ್ವಕ ಆಗ್ರಹಗಳನ್ನು ನಾನು ಯಾವಾಗಲೂ ಇಷ್ಟಪಡುತ್ತೇನೆ. ಅಂತಹ ಪ್ರೀತಿಯಿಂದಲೇ ನಮ್ಮ ಜಗತ್ತು ಮತ್ತಷ್ಟು ಸುಂದರವಾಗುವುದು ಸಾಧ್ಯ ಎಂದು ನಂಬುತ್ತೇನೆ. ಈ ಹಾದಿಯಲ್ಲಿ ನನ್ನ ಪ್ರೀತಿಯ ಗುರುಗಳಾದ ಚಂಪಾ, ಸಿದ್ಧಲಿಂಗ ಪಟ್ಟಣಶೆಟ್ಟಿ ಮತ್ತು ಗಿರಡ್ಡಿ ಗೋವಿಂದರಾಜ ಅವರು, ಹೀಗೆಯೇ ಅನೇಕರಿಗೆ ತೋರಿದ ಪ್ರೀತಿಯ ಬೆಳಕೇ ಕಾರಣವಾಗಿ “ಸಂಕ್ರಮಣ” ಪತ್ರಿಕೆ ಐವತ್ತನೆಯ ವಸಂತಕ್ಕೆ ಕಾಲಿರಿಸಿದೆ.

ಇದು ಸಣ್ಣ ಸಾಧನೆಯಲ್ಲ. ಇಂತಹ ಸಾಹಿತ್ಯ ಪತ್ರಿಕೆಗಳಲ್ಲಿ ಲಾಭವಿಲ್ಲ. ಕೇವಲ ಚಂದಾದಾರರು ನೀಡುವ ಹಣ ಮಾತ್ರದಿಂದಲೇ ಈ ಪತ್ರಿಕೆ ಐವತ್ತು ಮುಟ್ಟಿದೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ (ಕಳೆದ ಹತ್ತು ವರ್ಷಗಳಿಂದ ಚಂದಾದಾರನಾದ ನನ್ನನ್ನೂ ಸೇರಿದಂತೆ) ಎಲ್ಲರಿಗೂ ಅಭಿನಂದನೆಗಳು. ನಿಮ್ಮ ಪ್ರೀತಿಯ ಪ್ರವಾಹವೂ ಈ ನಾಡಿನ ಸಾಕ್ಷಿ ಪ್ರಜ್ಞೆಯಾದ ಸಂಕ್ರಮಣ ಪತ್ರಿಕೆಯನ್ನು ಶತಮಾನದಾಚೆಗೂ ಸಾಗುವಂತೆ ಮಾಡಲಿ ಎಂದು ಹಾರೈಸುತ್ತೇನೆ.

discussionಇನ್ನು ಇವತ್ತಿನ ವಿಷಯದ ಕಡೆಗೆ ಸಾಗೋಣ. ಈ ಡಬ್ಬಿಂಗ್ ಎಂಬ ವಿಕೃತಿಯ ಬಗ್ಗೆ ನಾನು ಕಳೆದ ಐದಾರು ವರ್ಷಗಳಲ್ಲಿ ಅದೆಷ್ಟು ಮಾತಾಡಿದ್ದೇನೆ ಎಂದರೆ ಅದಷ್ಟೂ ಮಾತುಗಳನ್ನು ಸೇರಿಸಿದರೆ ಒಂದಿಡೀ ವರ್ಷ ನಡೆಸಬಹುದಾದ ದೈನಿಕ ಧಾರಾವಾಹಿ ಆದೀತು. ಇಂದು ಸಹ ಈ ಗೋಷ್ಟಿಯಲ್ಲಿ ಅದೇ ವಿಷಯ ಮಾತಾಡುವುದಿದೆ. ಆದರೆ ನನಗಿಂತ ಮುಂಚಿತವಾಗಿ ಪ್ರಬಂಧ ಮಂಡಿಸಿರುವ ಪ್ರೊ. ಸಿ.ಎನ್.ರಾಮಚಂದ್ರನ್ ಅವರು ಸವಿವರವಾಗಿ ಮತ್ತು ಅತ್ಯಂತ ಅಕೆಡೆಮಿಕ್ ಶಿಸ್ತಿನಿಂದ ಡಬ್ಬಿಂಗ್ ಯಾಕೆ ಬೇಡ ಎಂದು ತಿಳಿಸಿದ್ದಾರೆ. ಅವರು ಆಡಿರುವ ಪ್ರತೀ ಮಾತಿಗೂ ನನ್ನ ಸಹಮತವಿದೆ. ಹಾಗಾಗಿ ಪ್ರೊ.ಸಿಎನ್‍ಆರ್ ಅವರಾಡಿದ ಮಾತುಗಳನ್ನು ಬಿಟ್ಟು ಬೇರೆಯ, ಆದರೆ ಅದೇ ನಿಲುವಿನ ಕೆಲವು ಮಾತುಗಳನ್ನು ನಿಮ್ಮೆದುರು ಮಂಡಿಸುತ್ತೇನೆ.
ಕೇವಲ ಚಲನಚಿತ್ರ ಎನ್ನಬಹುದೇ?

ಮೊದಲಿಗೆ ನನಗೆ ಈ ಗೋಷ್ಟಿಗೆ ನೀಡಿರುವ ಹೆಸರಿನ ಕುರಿತು ಎರಡು ವಿಷಯಕ್ಕೆ ಭಿನ್ನಾಭಿಪ್ರಾಯವಿದೆ. ಮೊದಲಿಗೆ ‘ಕನ್ನಡ ಚಲನಚಿತ್ರೋದ್ಯಮ’ ಎಂಬುದು. ಇದು ಚಲನಚಿತ್ರ ಹಾಗೂ ಟಿವಿ ಮಾಧ್ಯಮ ಎಂದಾಗಬೇಕಿತ್ತು. ಏಕೆಂದರೆ ಚಲನಚಿತ್ರ ಅಲಿಯಾಸ್ ಸಿನಿಮಾ ಎನ್ನುವ ಮಾಧ್ಯಮ ಮತ್ತು ಟೆಲಿವಿಷನ್ ಮಾಧ್ಯಮಗಳಲ್ಲಿ ಬೃಹತ್ತಾದ ವ್ಯತ್ಯಾಸವಿದೆ.

anti_dubing_rally_ಎರಡೂ ಚಲಿಸುವ ಚಿತ್ರಗಳನ್ನೇ ಉಳ್ಳದ್ದು ಎಂಬುದು ಮಾತ್ರ ಇವುಗಳಿಗಿರುವ ಸಾಮ್ಯ. ಉಳಿದಂತೆ ಕಥನ ಕ್ರಮ ಮತ್ತು ಕಥನ ವಿನ್ಯಾಸದಲ್ಲಿ ಇವೆರಡೂ ಮಾಧ್ಯಮಗಳೂ ಬೇರೆಯದೇ. ಒಂದು ಸಿನಿಮಾವನ್ನು ಟಿವಿಯಲ್ಲಿಯೂ ನೂರಾರು ತುಂಡುಗಳನ್ನಾಗಿ ಮಾಡಿ ಪ್ರಸಾರ ಮಾಡಬಹುದು. ಆದರೆ ಧಾರಾವಾಹಿ ಅಥವಾ ಟಿವಿಗಾಗಿಯೇ ತಯಾರಾದ ಕಾರ್ಯಕ್ರಮವನ್ನು ಸಿನಿಮಾ ಮಂದಿರದಲ್ಲಿ ಪ್ರದರ್ಶಿಸಲು ಸಾಧ್ಯವಿಲ್ಲ. ಅಕಸ್ಮಾತ್ ಪ್ರದರ್ಶಿಸಿದರೂ ಅದನ್ನು ನೋಡುವವರಿಗೆ ‘ಸಿನಿಮಾ’ ನೀಡುವ ಅನುಭೂತಿಯನ್ನು ಟಿವಿ ಕಾರ್ಯಕ್ರಮ ನೀಡುವುದಿಲ್ಲ. ಇದಕ್ಕೆ ಇವೆರಡೂ ಮಾಧ್ಯಮಗಳ ನಿರೂಪಣಾ ವಿನ್ಯಾಸ ಕಥನ ಕಟ್ಟಡದ ವಿನ್ಯಾಸದಲ್ಲಿ ಇರುವ ವ್ಯತ್ಯಯಗಳೇ ಪ್ರಧಾನ ಕಾರಣ.

ಇದಲ್ಲದೆ, ಸರಿಸುಮಾರು 1995ರ ಆಚೆಗೆ ಕನ್ನಡಿಗರಿಗೆ ದೊರಕಿದ ಟೆಲಿವಿಷನ್ ಮಾಧ್ಯಮವು ತನ್ನ ಎರಡು ದಶಕದ ಹಾದಿಯಲ್ಲಿ ಮಾಡಿದ ಮೊದಲ ಕೆಲಸ ಸಹಸ್ರಾರು ಕನ್ನಡ ಕತೆಗಾರರಿಗೆ, ತಂತ್ರಜ್ಞರಿಗೆ ಹಾಗೂ ಕಾರ್ಮಿಕರಿಗೆ ಆರ್ಥಿಕ ಸುಭದ್ರತೆಯನ್ನು ಕೊಟ್ಟಿದೆ. ನಾವು ಕೇವಲ ಸಿನಿಮಾ ಎಂದು ಯೋಚಿಸುವುದಾದರೆ, ಆ ಮಾಧ್ಯಮ/ಉದ್ಯಮವು ಟೆಲಿವಿಷನ್ನಿನ ಹಾಗೆ ಸುಭದ್ರತೆ ಹಾಗೂ ಬದುಕು ಕಟ್ಟಿಕೊಳ್ಳುವ ಆತ್ಮವಿಶ್ವಾಸವನ್ನು ಇಂದಿಗೂ ನೀಡಲಾಗಿಲ್ಲ. ಸಿನಿಮಾ ಮಾತ್ರ ನೆಚ್ಚಿಕೊಂಡು ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ ಎಂಬುದಕ್ಕಾಗಿಯೇ ಬಹುತೇಕ ಸಿನಿಮಾ ನಟರು ಸಹ ಇಂದು ಟೆಲಿವಿಷನ್ನಿನ ರಿಯಾಲಿಟಿ ಷೋಗಳಲ್ಲಿ ಹಾಗೂ ದೈನಿಕ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ ಎಂಬುದು ಸಹ ಗಮನಿಸಬೇಕಾದ ವಿಷಯವಾಗಿದೆ.

ಹೀಗಾಗಿ ಟೆಲಿವಿಷನ್ ಎಂಬುದು ‘ಸೋಷಿಯೋ – ಡೆಮಾಕ್ರೆಟಿಕ್ ಸ್ಪೇಸ್’ ಎಂತಲೂ ಸಿನಿಮಾವನ್ನು ‘ಹೆಗಮಾನಿಕಲ್-ಫ್ಯೂಡಲಿಸ್ಟಿಕ್ ಸ್ಪೇಸ್’ ಎಂತಲೂ ಗುರುತಿಸಬಹುದು. ಈ ಮಾತಿಗೆ ಟೆಲಿವಿಷನ್ನಿನಲ್ಲಿ ಕಲಾವಿದರು ತಮ್ಮ ಪ್ರತಿಭೆಯಿಂದ ಮಾತ್ರ ಗುರುತಿಸಿಕೊಳ್ಳುತ್ತಾರೆ ಮತ್ತು ನೆಲೆ ಕಂಡುಕೊಳ್ಳುತ್ತಾರೆ ಎಂಬುದು, ಸಿನಿಮಾದಲ್ಲಿ ಆಯಾ ವ್ಯಕ್ತಿ ಯಾವ ನಟನ ನೆಚ್ಚಿನ ವ್ಯಕ್ತಿ ಅಥವಾ ಯಾರ ಮಕ್ಕಳು ಎಂಬ ನೆಲೆಯಲ್ಲಿ ಅವಕಾಶ ಪಡೆಯುತ್ತಾರೆ ಎಂಬುದನ್ನು ಸಹ ಸಿನಿಮಾ ಇತಿಹಾಸ ಬಲ್ಲವರು ಗುರುತಿಸಬಹುದು. ಈ ವ್ಯತ್ಯಾಸದ ಕಾರಣವಾಗಿಯೇ ಟಿವಿ ಮತ್ತು ಸಿನಿಮಾಗಳನ್ನು ಬೇರೆ ಬೇರೆಯಾಗಿಯೇ ನೋಡಬೇಕಾದ ಅಗತ್ಯವಿದೆ.

ಇದಲ್ಲದೆ ಇವೆರಡೂ ಮಾಧ್ಯಮಗಳ ವ್ಯಾಪಾರದ ಕ್ರಮ ಮತ್ತು ಜನಪ್ರಿಯತೆಯ ಮೌಲ್ಯಮಾಪನ ಕ್ರಮಗಳು ಸಹ ಸಂಪೂರ್ಣ ಭಿನ್ನವಾದುದು. ಈ ಹಿನ್ನೆಲೆಯಲ್ಲಿ ಇಂದು ಚರ್ಚಿತವಾಗುತ್ತಾ ಇರುವ ವಿಷಯವನ್ನು ಕೇವಲ ‘ಸಿನಿಮಾ’ ಎಂದು ಗಮನಿಸದೆ ‘ಟಿವಿ’ ಎಂದು ಸಹ ಗುರುತಿಸಿ, ವ್ಯತ್ಯಯಗಳ ಹಿನ್ನೆಲೆಯಲ್ಲಿ ಮಾತಾಡಬೇಕಾಗುತ್ತದೆ. ಅದಕ್ಕಾಗಿ ಈ ಗೋಷ್ಟಿಯ ವಿಷಯವನ್ನು “ಕನ್ನಡ ಚಲನಚಿತ್ರ ಹಾಗೂ ಟಿವಿ ಮಾಧ್ಯಮ” ಎಂದು ಹೆಸರಿಸಿಕೊಳ್ಳಬೇಕಾಗುತ್ತದೆ.

discussion

 

 

 

 

ವಿಕೃತಿಯನ್ನು ಸಂಸ್ಕೃತಿ ಎನ್ನಲಾದೀತೇ?

ಇನ್ನು ಎರಡನೆಯ ವಿಷಯ “ಡಬ್ಬಿಂಗ್ ಸಂಸ್ಕೃತಿ” ಎಂಬುದು. ಡಬ್ಬಿಂಗನ್ನು ಸಂಸ್ಕೃತಿ ಎನ್ನುವುದೇ ಬಹುದೊಡ್ಡ ಅಪಾಯ. ಅದು ಯಾವತ್ತಿಗೂ ಸಂಸ್ಕೃತಿಯಾಗುವುದಿಲ್ಲ, ಅದು ಕೇವಲ ವಿಕೃತಿ. ಅದಾಗಲೇ ಒಂದು ಸಂಸ್ಕತಿಯಲ್ಲಿ ಹುಟ್ಟುಪಡೆದ ಕಲಾಕೃತಿಗೆ ಮತ್ತೊಂದು ಭಾಷೆಯ ಪೋಷಾಕು ತೊಡಿಸುವ ಕೆಲಸವನ್ನು ಡಬ್ಬಿಂಗ್ ಎನ್ನುತ್ತೇವೆ. ಅಂದರೆ ಕೇವಲ ಮಾತಿನ ಮರುಲೇಪನ ಮಾಡುವುದನ್ನು ಡಬ್ಬಿಂಗ್ ಎನ್ನುತ್ತೇವೆ. ಇಂಗ್ಲೀಷ್ ಭಾಷೆಯಲ್ಲಿಯೂ ಯಾವುದಾದರೂ ವಿಷಯವನ್ನು ಕುರಿತು ಆರೋಪಿಸುವ ಸಂದರ್ಭದಲ್ಲಿ “ಇಟ್ ಇಸ್ ಡಬ್ಡ್ ಆಸ್ ಸೋ ಅಂಡ್ ಸೋ…” ಎನ್ನುತ್ತಾರೆ.

ಅಂದರೆ ಅಲೆಜ್ಡ್ ಅಥವಾ ಆರೋಪಿತ ಎನ್ನುವ ಪದಕ್ಕೆ ಸಂವಾದಿಯಾಗಿ ಡಬ್ಡ್ ಎನ್ನುವ ಪದ ಇಂಗ್ಲೀಷ್ ಭಾಷೆಯಲ್ಲಿ ಬಳಕೆಯಲ್ಲಿದೆ. ಅಂದರೆ ಯಾವುದೇ ಡಬ್ಡ್ ಎನ್ನುವುದು ಆರೋಪಿತವಾದದ್ದು ಮಾತ್ರ. ಅಂದರೆ ಡಬ್ಬಿಂಗ್ ಆಗಿ ಬಂದದ್ದು ಸ್ವತಂತ್ರ ಕೃತಿಯಲ್ಲ. ಅದು ಬರ್ಗರ್‍ನಲ್ಲಿ ರಾಗಿಮುದ್ದೆ ಇರಿಸಿದ ಹಾಗೆ ಹೈಬ್ರಿಡ್ ಮತ್ತು ಕೃತಕ ಪೋಷಾಕಿನ ವಿಕೃತಿ. ಹಾಗಾಗಿಯೇ ಇದನ್ನು ಸಂಸ್ಕೃತಿ ಎಂದು ಕರೆಯಲಾಗದು. ಕರೆಯುವುದಾದರೆ `ಸಂಸ್ಕೃತಿ ಎಂದು ಆರೋಪಿತವಾದದ್ದು’ ಎಂದು ಕರೆಯಬಹುದು. ಹೀಗಾಗಿ ಈ ಗೋಷ್ಟಿಯ ಹೆಸರಲ್ಲಿ ಇರುವ `ಡಬ್ಬಿಂಗ್ ಸಂಸ್ಕೃತಿ’ ಎಂಬುದನ್ನು ‘ಆಧುನಿಕ ವಿಕೃತಿ’ ಎಂದು ಗುರುತಿಸಬಹುದು.

discussion

 

 

 

 

ಇದು ಉದ್ಯಮವೆ… ಆದರೆ…?

ಇನ್ನು ಇಲ್ಲಿ ಉದ್ಯಮ ಎಂದು ಕರೆಯಲಾಗಿರುವ ಕನ್ನಡದ ದೃಶ್ಯ ಮಾಧ್ಯಮ ಕುರಿತು ಗಮನಿಸೋಣ. ಸಿನಿಮಾ ಅಂತೂ ಈಗ ಉದ್ಯಮವೇ ಆಗಿದೆ. 2016ರ ಜನವರಿಯಿಂದ ಈ ಗೋಷ್ಟಿ ನಡೆಯುತ್ತಾ ಇರುವ ಕಾಲಕ್ಕೆ 47 ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ. ಒಂಬತ್ತು ವಾರಕ್ಕೆ 47 ಅಂದರೆ ಪ್ರತಿ ವಾರ ಸರಾಸರಿ ಐದು ಚಿತ್ರಗಳು. ಇದು ಈ ವರ್ಷಾಂತ್ಯಕ್ಕೆ 200ರ ಗಡಿ ದಾಟಬಹುದು. ಆದರೆ ಇವುಗಳಲ್ಲಿ ಯಶಸ್ಸು ಪಡೆದ ಸಿನಿಮಾಗಳ ಸಂಖ್ಯೆ ಮಾತ್ರ 2ರ ಗಡಿ ದಾಟುವುದಿಲ್ಲ. ಶಿವರಾಜಕುಮಾರ್ ಅವರ ಅಭಿನಯದ ‘ಕಿಲ್ಲಿಂಗ್ ವೀರಪ್ಪನ್’, ‘ಶಿವಲಿಂಗ’ ಹೊರತು ಪಡಿಸಿ ಇನ್ನಾವುದೇ ಸಿನಿಮಾ ಬಾಕ್ಸ್ ಆಫೀಸಿನಲ್ಲ್ಲಿ ಲಾಭ ಗಳಿಸಿಲ್ಲ.

ಇನ್ನೊಂದೆರಡು ಸಿನಿಮಾಗಳು ಕೇವಲ ಬಂಡವಾಳ ಹಿಂದಿರುಗಿಸಿವೆ. (ಈ ಪಟ್ಟಿಯಲ್ಲಿ ನನ್ನ ನಿರ್ದೇಶನದ ‘ದೇವರ ನಾಡಲ್ಲಿ’ ಸಿನಿಮಾ ಸಹ ಇದೆ.) ಅಂದರೆ ಒಂದು ಸಿನಿಮಾಕ್ಕೆ ಅಂದಾಜು ವೆಚ್ಚ 2 ಕೋಟಿ ಎಂದು ನಿಗದಿ ಪಡಿಸಿದರೆ ಕನ್ನಡ ಸಿನಿಮಾಕ್ಕೆ ಈವರೆಗೆ ಹೂಡಿದ ಬಂಡವಾಳ 100 ಕೋಟಿಯಾದರೆ ಹಿಂದಿರುಗಿರುವ ಹಣ ಶೇಕಡಾ 25ರಷ್ಟೂ ಇಲ್ಲ. ಹೀಗಾಗಿಯೇ ಈ 47 ಚಿತ್ರಗಳಲ್ಲಿ ಒಬ್ಬ ನಿರ್ಮಾಪಕರು ಹೃದಯಾಘಾತದಿಂದ ತೀರಿಕೊಂಡಿದ್ದಾರೆ. ಮತ್ತೊಬ್ಬರು ಆತ್ಮಹತ್ಯೆಯ ಪ್ರಯತ್ನ ಮಾಡಿದ್ದಾರೆ. ಇನ್ನಿಬ್ಬರು ನಿರ್ಮಾಪಕರ ಆರೋಗ್ಯ ನಾಜೂಕಾಗಿದೆ. ಈ ವಿವರಗಳು ನಮ್ಮ ಉದ್ಯಮದ ಸಧ್ಯದ ವ್ಯಾವಹಾರಿಕ ಆರೋಗ್ಯವನ್ನು ತಿಳಿಸುತ್ತವೆ.

ಸಮಾನಂತರವಾಗಿ ಕನ್ನಡದ ಟೆಲಿವಿಷನ್ ಮಾಧ್ಯಮವಂತೂ ಈಗ ವಾರ್ಷಿಕವಾಗಿ ಹದಿನಾರು ಸಾವಿರ ಕೋಟಿಯಷ್ಟು ವಹಿವಾಟನ್ನು ನಡೆಸುವ ಹಂತಕ್ಕೆ ಬೆಳೆದಿದೆ. (ಇದು ವಾರ್ಷಿಕವಾಗಿ ಕರ್ನಾಟಕದ ಮಾರುಕಟ್ಟೆಗೆ ಟೆಲಿವಿಷನ್ ಮೂಲಕ ಬಿಡುಗಡೆಯಾದ ಜಾಹೀರಾತಿನ ಹಣದ ಲೆಕ್ಕವನ್ನು ಆಧರಿಸಿದ್ದು. ವಾಸ್ತವದ ಲೆಕ್ಕಗಳನ್ನು ಗಮನಿಸದರೆ ಈ ಸಂಖ್ಯೆ ಇನ್ನೂ ಹೆಚ್ಚೇ ಇರಬಹುದು.) ಹೀಗಾಗಿ ಅನೇಕ ಹೊಸ ವಾಹಿನಿಗಳನ್ನು ಆರಂಭಿಸಲಾಗುತ್ತಿದೆ. 1995ರಲ್ಲಿ ಒಂದೇ ಒಂದು ವಾಹಿನಿಯಿದ್ದ ಕಾಲದಿಂದ 2016ರ ಕಾಲಕ್ಕೆ ಏಳು ಕನ್ನಡ ಸುದ್ದಿ ವಾಹಿನಿಗಳು, ಐದು ಕನ್ನಡ ಮನರಂಜನಾ ವಾಹಿನಿಗಳು ಮತ್ತು ಹಲವಾರು ಸ್ಥಳೀಯ ಕೇಬಲ್ ವಾಹಿನಿಗಳ ವರೆಗೆ ಬೆಳೆದಿದ್ದೇವೆ. ಇದು ಕಳೆದೆರಡು ದಶಕದಲ್ಲಿ ಆದ ಬೃಹತ್ ಲಂಘನ.

censor dubbingಮುಂಬರುವ ದಿನಗಳಲ್ಲಿ ತುಳು, ಕೊಂಕಣಿ, ಕೊಡವ ಭಾಷೆಗಳ ಮನರಂಜನಾ ವಾಹಿನಿಗಳು ಸಹ ಆರಂಭವಾಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಇವೆಲ್ಲವೂ ನಮ್ಮಲ್ಲಿನ ಅನೇಕ ಪ್ರಾದೇಶಿಕ ಭಾಷೆಗಳಿಗೆ ಸಿಗುತ್ತಾ ಇರುವ ಅವಕಾಶಗಳ ಸಾಗರ ಎಂದೇ ನಾನು ಭಾವಿಸುತ್ತೇನೆ. ಆದರೆ ಈ ಅವಕಾಶಗಳ ಸಾಗರದಲ್ಲಿ ಆಗುತ್ತಾ ಇರುವುದೇನು ಎಂದು ಗಮನಿಸಿ.

ಸರಿಸುಮಾರು 60 ರಿಂದ 65 ದೈನಿಕ ಧಾರಾವಾಹಿಗಳು ಆರು ಮನರಂಜನಾ ಉಪಗ್ರಹ ವಾಹಿನಿಗಳಲ್ಲಿ ತಯಾರಾಗುತ್ತಾ ಇವೆ. ಇವುಗಳಲ್ಲಿ ಎಂಟು ಧಾರಾವಾಹಿಗಳನ್ನು ಹೊರತು ಪಡಿಸಿ ಉಳಿದುದೆಲ್ಲ ರಿಮೇಕ್ ಅಥವಾ ಪರಭಾಷೆಯ ನಕಲು ಮಾಡಿದ ಧಾರಾವಾಹಿಗಳು. ಇದಕ್ಕೆ ಆಯಾ ಖಾಸಗಿ ವಾಹಿನಿಗಳಲ್ಲಿ ಕುಳಿತ ಅಧಿಕಾರಸ್ಥರು (ಪ್ರೋಗ್ರಾಮಿಂಗ್ ಹೆಡ್) ಪ್ರಧಾನ ಕಾರಣ. ಅವರಿಗೆ ಸ್ವತಂತ್ರ ಕೃತಿಗಳನ್ನು ಕಟ್ಟಿ ಗೆಲ್ಲುವ ಛಾತಿಯೇ ಇಲ್ಲ. ಬದಲಿಗೆ ನೆರೆಯ ಭಾಷೆಯಲ್ಲಿ ಯಶಸ್ವಿಯಾದುದರ ನಕಲುಗಳನ್ನು ಮಾಡಿ ‘ನಾವು ಗೆದ್ದೆವು’ ಎಂದು ಬೀಗುವ ‘ಅರೆ’ಗನ್ನಡ ಮನಸ್ಥಿತಿ ಇದೆ.

ಇಷ್ಟಕ್ಕೂ ಇಂತಹ ಖಾಸಗಿ ವಾಹಿನಿಗಳ ಅಧಿಕಾರಸ್ಥರಲ್ಲಿ ಕನ್ನಡಿಗರು ಎನ್ನುವ ಜನ ಸಿಗುವುದೇ ಕಡಿಮೆ. ಅಕಸ್ಮಾತ್ ಕನ್ನಡ ಮಾತೃಭಾಷಿಕರು ಸಿಕ್ಕರೂ ಅವರು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತವರಾಗಿರುತ್ತಾರೆ. ಅವರು ಆರಿಸಿಕೊಳ್ಳುವ ಮಾದರಿಗಳೆಲ್ಲಾ ಪಾಶ್ಚಾತ್ಯವಾದುದಾಗಿರುತ್ತದೆ ಅಥವಾ ಹಿಂದಿ ಭಾಷೆಯಿಂದ ಬಂದುದಾಗಿರುತ್ತದೆ. ಈ ಮನಸ್ಥಿತಿಯ ಜನರಿಗೆ ನಮ್ಮ ನೆಲದ ಜೊತೆಗೆ ಸೃಜನಶೀಲ ಕೃತಿ ಕಟ್ಟಬೇಕೆಂಬ ಆಲೋಚನೆಯು ಬರುವುದೇ ದುರ್ಲಭ. ಹೀಗಾಗಿ ಇಂದು ಸ್ವತಂತ್ರ ಕೃತಿಗಳನ್ನು ಬರೆಯಬಲ್ಲ ಬರಹಗಾರರು ಹಾಗೂ ನಿರ್ದೇಶಕರ ಕೊರತೆಯೂ ಇದೆ.

ಇನ್ನು ಪ್ರಸಾರವಾಗುತ್ತಾ ಇರುವ ಬಹುತೇಕ ಧಾರಾವಾಹಿಗಳಲ್ಲಿ ಬಳಸಲಾಗುವ ಕನ್ನಡವೂ ಸಹ ದುರ್ಬಲವಾದುದೇ. ಯಾಕೆಂದರೆ ಇಂದು ಕಲಾವಿದರಾಗಲು ಬರುವ ಬಹುತೇಕರಲ್ಲಿ ಕನ್ನಡವನ್ನು ‘ಸರಿಯಾಗಿ’ ಮಾತಾಡ ಬಲ್ಲವರು ಕೆಲವರೇ. (ಸರಿಯಾಗಿ ಮಾತಾಡುವುದು ಎಂಬುದು ಚರ್ಚಾಸ್ಪದ ವಿಷಯ. ನಾನಿಲ್ಲಿ ಗುರುತಿಸುತ್ತಾ ಇರುವುದು ‘ಕನ್ನಡದ ಬಹುಬಗೆಯ ಸೊಗಡುಗಳನ್ನು ಸರಿಯಾಗಿ ಮಾತಾಡುವುದು’ ಎಂಬರ್ಥದಲ್ಲಿ ಮಾತ್ರ.) ಈ ಮಾತಿಗೆ ಅಪವಾದ ಎಂಬಂತೆ ಕೆಲವು ಅದ್ಭುತ ಆಂಗಿಕ ಮಾತು ವಾಚಿಕಾಭಿನಯ ಬಲ್ಲ ಕಲಾವಿದರೂ ಸಹ ನಮ್ಮಲ್ಲಿದ್ದಾರೆ. ಅಂತಹವರ ಸಂಖ್ಯೆ ಕಿರಿದು.

ಇಂತಹ ಸಂದರ್ಭದಲ್ಲಿ ನಾವು, ಕೆಲವು ಕನ್ನಡಿಗರು ಬಯಸಿದ್ದಾರೆ ಎಂದು ಡಬ್ಬಿಂಗ್ ಎಂಬ ವಿಕೃತಿಯನ್ನು ಬಳಕೆಗೆ ತಂದರೆ ಕನ್ನಡಕ್ಕೆ ಒಳಿತಾಗುವ ಬದಲು ಕೆಡುಕುಗಳು ಹೆಚ್ಚಾಗುವ ಸಾಧ್ಯತೆಯೇ ಹೆಚ್ಚು. ಅದು ಯಾಕೆ ಮತ್ತು ಹೇಗೆ ಎಂಬುದನ್ನು ಗಮನಿಸೋಣ.

discussion

 

 

 

 

ಸಂಖ್ಯೆಗಳ ಜಗತ್ತಿನಲ್ಲಿ ಹೃದಯಕ್ಕೆ ಜಾಗವಿಲ್ಲ

ಇದು ನಂಬರುಗಳ ಯುಗ. ಟೆಲಿವಿಷನ್ ಕಾರ್ಯಕ್ರಮವೇ ಇರಲಿ, ಸಿನಿಮಾವೇ ಇರಲಿ; ಆಯಾ ಮಾಧ್ಯಮಗಳಲ್ಲಿ ಅವು ಗಳಿಸಿದ ನಂಬರುಗಳನ್ನಾಧರಿಸಿಯೇ ಆಯಾ ಕಾರ್ಯಕ್ರಮಗಳು ನಾಳೆಗೆ ಉಳಿಯುವುದು. ಸಿನಿಮಾವೊಂದು ಆಯಾ ಪ್ರದರ್ಶನ ಮಂದಿರದಲ್ಲಿ ಶೇಕಡಾ 40ಕ್ಕಿಂತ ಹೆಚ್ಚು ಹಣ ಗಳಿಸದೆ ಇದ್ದರೆ ಮುಂದಿನ ವಾರಕ್ಕೆ ಪ್ರದರ್ಶನ ಇರುವುದಿಲ್ಲ. ಮಲ್ಟಿಪ್ಲೆಕ್ಸ್ ಎಂಬುದರಲ್ಲಂತೂ ಪ್ರತಿ ಪ್ರದರ್ಶನಕ್ಕೆ ಕನಿಷ್ಟ ಒಂದು ಲಕ್ಷ ರೂಪಾಯಿಯಷ್ಟು ಹಣ ಗಳಿಸದೆ ಇದ್ದರೆ ಮುಂದಿನ ಪ್ರದರ್ಶನ ಸಹ ಇರುವುದಿಲ್ಲ. (ಈ ಮಲ್ಟಿಪ್ಲೆಕ್ಸ್‍ಗಳಲ್ಲಿ ಇರುವ ಕೆಲವು ಕನ್ನಡ ಪ್ರೀತಿಯ ಹುಡುಗರಿಂದ ಕೆಲವೊಮ್ಮೆ ಕಡಿಮೆ ಹಣ ಗಳಿಸಿದಾಗಲೂ ಮುಂದಿನ ವಾರಕ್ಕೆ ಸಿನಿಮಾ ಉಳಿದಿರುವುದುಂಟು. ಅಂತಹ ಹುಡುಗರ ಸಂಖ್ಯೆ ಹೆಚ್ಚಲಿ ಎಂದು ಆಶಿಸೋಣ.)

ಇಂತಲ್ಲಿ ಕೆಲವು ಪ್ರಸಿದ್ಧ ಕಂಪೆನಿಗಳ/ನಟರ ಸಿನಿಮಾಗಳು ಗಳಿಕೆಯಿಲ್ಲದಿದ್ದರೂ ಕೈಯಿಂದ ಬೇಕಾದ ಹಣ ತುಂಬಿಸಿ ಕೆಲಕಾಲ ನಡೆದ ಅಪವಾದ/ ಆರೋಪಗಳೂ ಇವೆ. ಆದರೆ ಅಂತಹ ಅಪವಾದ/ಆರೋಪಗಳಿಗೆ ಸಿಗಬಹುದಾದ ಸಿನಿಮಾಗಳು ತೀರಾ ವಿರಳ. ಹೀಗಾಗಿ ಇವುಗಳನ್ನು ಸ್ಪರ್ಧೆಯ ಆಚೆಗೆ ಇಟ್ಟೇ ನೋಡುವುದು ಒಳಿತು.

ಇನ್ನು ಟೆಲಿವಿಷನ್ನಿನ ಕಾರ್ಯಕ್ರಮಗಳಂತೂ ಟಿಆರ್‍ಪಿ ಎಂದು ಹೆಸರಿಸಲಾದ ಟ್ಯಾಮ್ ಮತ್ತು ಬಾರ್ಕ್ ಎಂಬ ಸಂಸ್ಥೆಗಳು ನೀಡುವ ಸಂಖ್ಯೆಗಳನ್ನಾಧರಿಸಿಯೇ ಬದುಕುವುದು. (ಈ ಸಂಖ್ಯೆಗಳನ್ನು ನೀಡುವ ಪದ್ಧತಿಯ ಬಗ್ಗೆಯೂ ಭಿನ್ನಾಭಿಪ್ರಾಯವಿದೆಯಾದರೂ ಸಧ್ಯಕ್ಕೆ ಇರುವ ಸಂಖ್ಯೆಗಳನ್ನು ಆಧರಿಸಿಯೇ ವ್ಯಾಪಾರ ನಡೆಯುತ್ತಾ ಇದೆ.) ಯಾವುದೇ ಧಾರಾವಾಹಿಯು ತನ್ನ ಮೇಲೆ ಹೂಡಿದ ಬಂಡವಾಳಕ್ಕಿಂತ ಹೆಚ್ಚು ಹಣ ಹಿಂತರಬಲ್ಲ ಸಂಖ್ಯೆಯ ವೀಕ್ಷಕರನ್ನು ಪಡೆಯದೆ ಹೋದರೆ ಆ ಕಾರ್ಯಕ್ರಮ ಮುಂದಿನ ವಾರಕ್ಕೆ ಸಹ ಉಳಿಯುವುದು ಕಷ್ಟ.

speakersಇಲ್ಲಿ ಕನಿಷ್ಟ 4 ರಿಂದ 6ರಷ್ಟು ಜನರಲ್ ಕೆಟಗರಿಯ ಟಿಆರ್‍ಪಿ/ಟಿವಿಆರ್ ಇದ್ದರೆ ಮಾತ್ರ ಉಳಿಗಾಲ. ಅದಕ್ಕಿಂತ ಕಡಿಮೆ ಇದ್ದರೆ ಆ ಕಾರ್ಯಕ್ರಮ ತಯಾರಕರು ಬಾಗಿಲು ಹಾಕಿಕೊಳ್ಳಲು ಸಿದ್ಧರಾಗಿರಬೇಕು. ಪ್ರಕಾಶ್ ಬೆಳವಾಡಿ ನಿರ್ದೇಶನದ ‘ಗರ್ವ’ ಧಾರಾವಾಹಿಯು ನಾನು ಮಾತ್ರವಲ್ಲ ಅನೇಕರು ಮೆಚ್ಚುವ ಧಾರಾವಾಹಿಯಲ್ಲಿ ಒಂದಾಗಿತ್ತು. ಆದರೆ ಅದಕ್ಕೆ ವಾರಾಂತ್ಯದಲ್ಲಿ ಸಿಕ್ಕ ಸಂಖ್ಯೆಗಳು ಕಡಿಮೆ ಇದ್ದುದರಿಂದ ಆ ಧಾರಾವಾಹಿಯು ಅರ್ಧ ದಾರಿಯಲ್ಲೇ ನಿಲ್ಲಬೇಕಾಯಿತು. ಹೀಗೆ ಗರ್ಭಪಾತಕ್ಕೊಳಗಾದ ಕಾರ್ಯಕ್ರಮಗಳ ಸಂಖ್ಯೆ ದೊಡ್ಡದು. ಈ ಸಂಖ್ಯಾ ಲೆಕ್ಕಾಚಾರದಲ್ಲಿಯೇ ಇಂದು ಜಗತ್ತಿನ ಬಹುತೇಕ ವಹಿವಾಟು ನಡೆಯುತ್ತಾ ಇರುವುದು. ಇದು ಹೃದಯಹೀನ ಜಗತ್ತು ಎಂಬುದನ್ನು ಮತ್ತೆ ಹೇಳಬೇಕಾಗಿಲ್ಲ. ಹೀಗಾಗಿಯೇ ಇಲ್ಲಿ ಗೆದ್ದವರಿಗಿಂತ ಸೋತವರ ಕತೆಗಳೇ ಹೆಚ್ಚು.

ಇಂತಹ ಸಂಖ್ಯೆಗಳ ಜಗತ್ತಲ್ಲಿ ನನಗಿಂತ ಮುಂಚಿತವಾಗಿ ಮಾತಾಡಿದ ಗೆಳೆಯರ ಮಾತಿನಂತೆ ಡಬ್ಬಿಂಗ್ ಎಂಬ ವಿಕೃತಿಯು ಬಳಕೆಗೆ ಬಂದಿತು ಎಂದುಕೊಳ್ಳುವ, ಆಗ ಮೊದಲ ಹೊಡೆತ ಬೀಳುವುದು ಸಿನಿಮಾಕ್ಕಲ್ಲ, ಟೆಲಿವಿಷನ್ನಿಗೆ. ಅದು ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಈಗಿರುವ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಪುನರವತರಣಿಕೆಗಳ ಚಿತ್ರೀಕರಣವಾಗುತ್ತಾ ಇದೆ. ಆದರೂ ಒಂದು ಧಾರಾವಾಹಿಯ ತಯಾರಿಕೆಯಲ್ಲಿ ಅನೇಕ ಸ್ಥಳೀಯರು ಅವಕಾಶ ಪಡೆಯುತ್ತಾ ಇದ್ದಾರೆ. ಜೊತೆಗೆ ಪ್ರತಿ ಪ್ರಕರಣಕ್ಕೆ ಕನಿಷ್ಟ 70-80 ಸಾವಿರ ತಯಾರಿಕಾ ವೆಚ್ಚ, 30-40 ಸಾವಿರ ಪ್ರಸಾರ ವೆಚ್ಚ, 20-30 ಸಾವಿರ ಮಾರುಕಟ್ಟೆ ವೆಚ್ಚ ಎಂಬಂತೆ ಸರಿಸುಮಾರು 1.60-1.80 ಲಕ್ಷ ರೂ. ವರೆಗಿನ ಖರ್ಚು ರಾಯಧನದ ಕಾರ್ಯಕ್ರಮಗಳಿಗೆ, 2.30-2.50 ಲಕ್ಷ ರೂ.ವರೆಗಿನ ಖರ್ಚು ಪ್ರಾಯೋಜಿತ ಕಾರ್ಯಕ್ರಮಗಳಿಗೆ ಆಗುತ್ತಾ ಇದೆ.

ಹೀಗೆ ಹೂಡಿದ ಹಣವನ್ನು ಹಿಂಪಡೆಯುವಲ್ಲಿ 6ಕ್ಕಿಂತ ಹೆಚ್ಚು ಟಿವಿಆರ್ ಇದ್ದಾರೆ ಸಾಧ್ಯವಾದೀತು. ಅದಕ್ಕಿಂತ ಕಡಿಮೆ ಸಂಖ್ಯೆ ಇದ್ದರೆ ಬರುವ ಆದಾಯ ಕಡಿಮೆಯಾಗುತ್ತಾ ಹೋಗುತ್ತದೆ. ಇಂತ ಸಂದರ್ಭದಲ್ಲಿ ‘ಡಬ್ಬಿಂಗ್ ಧಾರಾವಾಹಿಗಳು’ ಬರಲು ಶುರುವಾದರೆ ಆ ಕಾರ್ಯಕ್ರಮಗಳ ತಯಾರಿಕೆಗೆ ತಗಲುವ ವೆಚ್ಚ ಕೇವಲ ಏಳೆಂಟು ಸಾವಿರ ರೂ.ಗಳು ಮಾತ್ರ. ಹೀಗಾಗಿ ಅಂತಹ ಕಾರ್ಯಕ್ರಮದ ಒಟ್ಟು ಖರ್ಚು 50 ಸಾವಿರ ರೂ. ದಾಟುವುದಿಲ್ಲ. ಇಂತಹ ಕಾರ್ಯಕ್ರಮಗಳು ಚೆನ್ನಾಗಿರಲಿ ಬಿಡಲಿ ಅವುಗಳಿಗೆ ಕೇವಲ ಒಂದು ಟಿವಿಆರ್‍ನಷ್ಟು ಸಂಖ್ಯೆ ಇದ್ದರೂ ಸಾಕು, ಆಯಾ ವಾಹಿನಿಯ ಮಾರುಕಟ್ಟೆಯ ಅಧಿಕಾರಿಗಳು ಕಡಿಮೆ ಹಣಕ್ಕೆ ಮಾರಿ ಲಾಭ ತಂದುಕೊಡುತ್ತಾರೆ.

ಖಾಸಗಿ ವಾಹಿನಿಗೆ ಹಣ ಹೂಡಿರುವ ಮಾಲೀಕನಿಗೆ ಬೇಕಾಗಿರುವುದು ಸಹ ಲಾಭವೇ ಆಗಿರುವುದರಿಂದ ಅಂತಹ ಕಾರ್ಯಕ್ರಮಗಳು ಇಡಿಯಾಗಿ ಟೆಲಿವಿಷನ್ ಅನ್ನು ಆವರಿಸಿಕೊಳ್ಳುತ್ತವೆ. ಆ ಮೂಲಕ ಎಂಬ ಟೆಲಿವಿಷನ್ ಮಾಧ್ಯಮಕ್ಕೆ ಇರುವ ‘ಸೋಷಿಯೋ-ಡೆಮಾಕ್ರಟಿಕ್ ಫ್ಯಾಬ್ರಿಕ್’ನ್ನು ಹಾಗೂ ‘ಎಲ್ಲರಿಗೂ ಸಮಾನ ಅವಕಾಶ’ ಎಂಬ ತೆರಪನ್ನು ಹರಿದೊಗೆಯುತ್ತವೆ. ಇಷ್ಟಲ್ಲದೆ ಸ್ಥಳೀಯ ಸಂಸ್ಕೃತಿ ಇರಲಿ ಸ್ಥಳೀಯ ಭಾಷೆಯ ಮೇಲೂ ಈ ಡಬ್ಬಿಂಗ್ ವಿಕೃತಿಯು ತನ್ನ ಪರಿಣಾಮವನ್ನು ಬೀರುತ್ತಾ ಸಾಗುತ್ತದೆ.

ತಮಿಳರು ಡಬ್ಬಿಂಗ್ ಕಾರ್ಯಕ್ರಮಗಳನ್ನು ನೋಡುತ್ತಾ ವಣಕ್ಕಂ ಎಂಬ ತಮಿಳಿನ ಮೂಲ ಶಬ್ದವನ್ನು ಮರೆತಿದ್ದಾರೆ ಎಂದು ಹಿರಿಯ ತಮಿಳು ಕವಿಗಳಾದ ವೈರಮುತ್ತು ಅವರು ಸಂದರ್ಶನವೊಂದರಲ್ಲಿ ಹೇಳಿರುವ ಹಾಗೆ ನಾವೂ ಸಹ ಗೊಣಗುತ್ತಾ – ಹಲುಬುತ್ತಾ ಕೂರಬೇಕಾಗುತ್ತದೆ. (ತಮಿಳಿನಲ್ಲಿ ಬಹುತೇಕ ಮನರಂಜನಾ ವಾಹಿನಿಗಳು ಡಬ್ಬಿಂಗ್ ಆದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಹೀಗೆ ಪರಭಾಷೆಯಿಂದ ಬರುವ ಕಾರ್ಯಕ್ರಮಗಳಲ್ಲಿ ‘ನಮಸ್ಕಾರ್/ನಮಸ್ಕಾರಮ್/ನಮಸ್ಕಾರ’ ಎಂಬ ಪದ ಬಳಸಿದ್ದರೆ ಅದಕ್ಕೆ ಸಂವಾದಿಯಾದ ತಮಿಳಿನ ‘ವಣಕ್ಕಂ’ ಪದದ ಬದಲಿಗೆ ತುಟಿ ಚಲನೆಗೆ ಮಾತು ಕೂಡಿಸುವವರು “ನಮಸ್ಕಾರಂ” ಎಂದು ಡಬ್ ಮಾಡುತ್ತಾರೆ. ಇದರಿಂದಾಗಿ ‘ವಣಕ್ಕಂ’ ಪದದ ಬಳಕೆ ಕಡಿಮೆಯಾಗುತ್ತಾ ಇದೆ ಎಂಬುದು ವೈರಮುತ್ತು ಅವರ ಹೇಳಿಕೆಗೆ ಕಾರಣ.)

theatreಇನ್ನು ಟೆಲಿವಿಷನ್ನಿನಲ್ಲಿ ಪ್ರಸಾರವಾಗುವ ಸಿನಿಮಾಗಳ ವಿಷಯಕ್ಕೆ ಬಂದರೆ ಈಗ ಕೋಟ್ಯಾಂತರ ರೂ.ಗಳನ್ನು ಕೊಟ್ಟು ಮೂಲ ಚಿತ್ರ ಕೊಳ್ಳುತ್ತಾ ಇರುವ ವಾಹಿನಿಗಳಿದ್ದಾವೆ. (ಆ ಮಾರುಕಟ್ಟೆಗೂ ಇತ್ತೀಚಿನ ದಿನಗಳಲ್ಲಿ ಭಾರಿ ಹೊಡೆತ ತಿಂದಿದೆ. ಆ ಬಗ್ಗೆ ಇಲ್ಲಿ ಮತ್ತಷ್ಟು ವಿಸ್ತರಿಸುವುದು ಅನಗತ್ಯ.) ಆ ವಾಹಿನಿಗಳವರು ಅತ್ಯಂತ ಕಡಿಮೆ ದುಡ್ಡಿಗೆ ಡಬ್ ಆದ ಚಿತ್ರಗಳನ್ನು ಕೊಂಡು ಪ್ರಸಾರದ ಸಮಯವನ್ನು ತುಂಬಿಸಿಕೊಳ್ಳುತ್ತವೆ. ಅದಕ್ಕಾಗಿ ತೊಡಗಿಸಿದ ಸಣ್ಣ ಹಣವನ್ನು ಮೂಲ ಸಿನಿಮಾದಲ್ಲಿ ಇರುವ ಪರಭಾಷೆಯ ಸ್ಟಾರ್‍ಗಳ ಹೆಸರಲ್ಲಿ ಎತ್ತುವುದು ಸಹ ಸಾಧ್ಯವಾಗುತ್ತದೆ. ಅಂತಹ ಸಿನಿಮಾಗಳಲ್ಲಿ ಸಣ್ಣ ಲಾಭ ಬಂದರೂ ಸ್ಥಳೀಯ ಸಿನಿಮಾಗಳನ್ನು ಟೆಲಿವಿಷನ್ನಿಗಾಗಿ ಕೊಳ್ಳುವ ಮಾರುಕಟ್ಟೆಯು ಕೇವಲ ಸ್ಟಾರ್ ಸಿನಿಮಾಗಳಿಗೆ ಮಾತ್ರ ಉಳಿದು, ಸಣ್ಣ ಸಿನಿಮಾ ತಯಾರಕರ ಪಾಲಿಗೆ ಇಲ್ಲವಾಗಿ ಹೋಗುತ್ತದೆ. ಆ ಮೂಲಕ ಸಣ್ಣ ಸಿನಿಮಾ ತಯಾರಕರಿಗೆ ದೊರಕುತ್ತಿದ್ದ ಸಣ್ಣ ಉಸಿರಾಟದ ಅವಕಾಶವೂ ಕರಗಿ, ಹೊಸ ಪ್ರಯೋಗ ಎಂಬುದು ನಾಪತ್ತೆಯಾಗುತ್ತದೆ.

ಈ ಮಾತನ್ನಾಡಿದ ಕೂಡಲೇ ‘ನೆರೆಯ ರಾಜ್ಯಗಳಲ್ಲಿ ಹಾಗಾಗಿಲ್ಲವಲ್ಲ. ಅಲ್ಲಿ ಭಾಷೆಗಾಗಲೀ ಸಂಸ್ಕೃತಿಗಾಗಲಿ ತೊಂದರೆಯಾಗಿಲ್ಲವಲ್ಲ’ ಎಂದು ಡಬ್ಬಿಂಗ್ ಪರವಾಗಿರುವವರು ಮರುಪ್ರಶ್ನೆ ಹಾಕುತ್ತಾರೆ. ಇಲ್ಲಿ ನಾವು ಗಮನಿಸಬೇಕಾದ್ದು ಕರ್ನಾಟಕದ ಪರಿಸ್ಥಿತಿಯು ಬೇರೆಲ್ಲಾ ಭಾಷಾವಾರು ಪ್ರಾಂತ್ಯಕ್ಕಿಂತ ಭಿನ್ನ. ನಮ್ಮ ರಾಜ್ಯದಲ್ಲಿ ಇರುವ 29 ಜಿಲ್ಲೆಗಳಲ್ಲಿ ಕನ್ನಡ ಭಾಷಿಕರು ಬಹುಸಂಖ್ಯಾತರಾಗಿರುವ ಜಿಲ್ಲೆಗಳ ಸಂಖ್ಯೆ 10ನ್ನು ಮೀರುವುದಿಲ್ಲ. ಉಳಿದ ಜಿಲ್ಲೆಗಳಲ್ಲಿ ನೆರೆಯ ಸೋದರ ಭಾಷೆಗಳು ಪ್ರಾಬಲ್ಯ ಹೊಂದಿವೆ. (ಈ ಜನರನ್ನು ಕರ್ನಾಟಕ ಎಂಬ ಒಂದು ಪ್ರಾಂತ್ಯದೊಳಗಡೆಗೆ ತರುವುದಕ್ಕೆ ಆದ ಏಕೀಕರಣ ಚಳುವಳಿಯ ವಿವರಗಳನ್ನು ಗಮನಿಸಿದರೆ ಅಚ್ಚರಿ ಮೂಡಿಸುವ ವಿವರಗಳು ದೊರೆಯುತ್ತವೆ.)

ಹೀಗಾಗಿ ಕರ್ನಾಟಕದಲ್ಲಿ ಡಬ್ಬಿಂಗ್ ಜಾರಿಗೆ ತಂದು ಕನ್ನಡ ಸಿನಿಮಾಗಳನ್ನು ಮಾತ್ರ ಬಿಡುಗಡೆ ಮಾಡುತ್ತೇವೆ ಎಂಬಂತಹ ಪರಿಸ್ಥಿತಿ ತರುವುದಸಾಧ್ಯ. ಹೀಗಾಗಿ ಈ ಡಬ್ಬಿಂಗ್ ಎಂಬ ಆರೋಪಿತ ಕನ್ನಡ ಸಿನಿಮಾಗಳು ಮೂಲ ಸಿನಿಮಾಗಳ ಮಾರುಕಟ್ಟೆಯಲ್ಲಿ ತುಂಬಿಕೊಳ್ಳುತ್ತವೆ. ಇಲ್ಲಿಯೂ ಸ್ಟಾರ್ ಸಿನಿಮಾಗಳು ಉಳಿದುಕೊಂಡು ಸಣ್ಣ ಸಿನಿಮಾಗಳು ಬಹುತೇಕ ನಾಪತ್ತೆಯಾಗುತ್ತವೆ. ಒಟ್ಟಾರೆಯಾಗಿ ಅಪದ್ಧಗಳನ್ನು ಬೇಡುತ್ತಾ ಇರುವ ಕೆಲವು ಕನ್ನಡಿಗ ಸಹೋದರರ ಬೇಡಿಕೆಯ ಹಿನ್ನೆಲೆಯಲ್ಲಿ ನಿನ್ನೆ ಬೆಂಗಳೂರಿನಲ್ಲಿ ಆದಂತಹ ಕಾರ್ಮಿಕ ಚಳುವಳಿಯಂತಹವನ್ನು ಸಿನಿಮಾ ಮತ್ತು ಟಿವಿ ಕಾರ್ಮಿಕರು ಸಹ ಮಾಡಬೇಕಾದ ಪರಿಸ್ಥಿತಿ ಬರುತ್ತದೆ.

ಈ ಮಾತಾಡಿದಾಗ ಡಬ್ಬಿಂಗ್ ಬಯಸುವ ಗೆಳೆಯರು ಹೇಳುತ್ತಾರೆ, ‘ಆಟೋ ಬಂತೆಂದು ಜಟಕಾ ಗಾಡಿಯವರು ಮುಷ್ಕರ ಮಾಡಿದಂತಾಯಿತು’ ಎಂದು. ಆ ಮಾತನ್ನು ಒಪ್ಪೋಣ. ಬದಲಾದ ಪರಿಸ್ಥಿತಿಗೆ ಹೊಂದಿಕೊಂಡು ಹೊಸ ಬದುಕು ಕಟ್ಟಿಕೊಳ್ಳುವುದು ಮನುಷ್ಯ ಸಹಜ ಗುಣವೇ… ಆದರೆ ಇದು ಯಾವ ಬೆಲೆ ತೆತ್ತು ಮಾಡಿಕೊಳ್ಳಬೇಕಾದ ಹೊಂದಾಣಿಕೆ ಎಂಬುದು ನೆನಪಲ್ಲಿರಬೇಕು. ಕೆಲವರ ಅಗತ್ಯಕ್ಕಾಗಿ ಸುಮಾರು ಆರು ಸಾವಿರ ಕಾರ್ಮಿಕರು ಇರುವ ಚಲನಚಿತ್ರ ಉದ್ಯಮವನ್ನು ಮತ್ತು ಹದಿನೈದು ಸಾವಿರ ಕಾರ್ಮಿಕರನ್ನೊಳಗೊಂಡ ಟೆಲಿವಿಷನ್ ಉದ್ಯಮವನ್ನು ಮುಳಗಿಸುವುದೇ ಉದ್ದೇಶವಾಗಬಾರದು.

ಕಳೆದ ಮೂರು ದಶಕಗಳಿಂದ ಭಾರತದಲ್ಲಿ ಬಂದಿರುವ ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಮತ್ತು ಜಾಗತೀಕರಣಗಳು ಅದಾಗಲೇ ಸೋಷಿಯಲ್ ಸೆಕ್ಯುರಿಟಿ ಎಂಬುದನ್ನು ನುಂಗಿಕೊಂಡಿದೆ. ಅದರ ಜೊತೆಗೆ ‘ಡಬ್ಬಿಂಗ್’ನಂತಹದು ಬಂದರೆ ರೈತರ ಆತ್ಮಹತ್ಯೆಯ ಪಟ್ಟಿಗೆ ಸಮಾನಂತರವಾಗಿ ದೃಶ್ಯೋದ್ಯಮದ ಕೃಷಿಕರ ಆತ್ಮಹತ್ಯೆಯ ಪಟ್ಟಿಯನ್ನು ಸಹ ಪ್ರಕಟಿಸಬೇಕಾಗುತ್ತದೆ.

discussion

 

 

 

 

ಜೊತೆಯಲ್ಲಿಯೇ ಹೇಳಬೇಕಾದ ಕೆಲವು ವಿವರಗಳು

ಈ ಹಿಂದೆಯೂ ನಾನು ಆಡಿರುವ ಅನೇಕ ಮಾತುಗಳಲ್ಲಿ/ಲೇಖನಗಳಲ್ಲಿ ‘ಡಬ್ಬಿಂಗ್ ಯಾಕೆ ಅಪದ್ಧ’ ಎಂಬುದನ್ನು ತಿಳಿಸಿದ್ದೇನೆ. ಆಸಕ್ತರು ಈ ವಿಷಯ ಕುರಿತು ನಾನು ಬರೆದಿರುವ ಅನೇಕ ಲೇಖನಗಳನ್ನು ನನ್ನ ಬ್ಲಾಗಿನಲ್ಲಿ ಗಮನಿಸಬಹುದು. ಅವುಗಳಲ್ಲಿ ಅತಿ ಮುಖ್ಯವಾದುದು ಡಬ್ಬಿಂಗ್ ಎಂಬುದು ತುಟಿ ಚಲನೆಗೆ ಮಾತು ಹೊಂದಿಸುವ ಆರೋಪಿತ ಭಾಷಾ ಪ್ರಯೋಗ ಎಂಬುದು ಮುಖ್ಯವಾದುದು. ಈ ಪ್ರಯೋಗದಿಂದ ಅದಾಗಲೇ ಕನ್ನಡದ್ದು ಎಂದು ಕಾಣಿಸಿಕೊಳ್ಳುತ್ತಾ ಇರುವ ಬಹುತೇಕ ಜಾಹೀರಾತುಗಳಲ್ಲಿ ಕನ್ನಡ ವಾಕ್ಯ ಕಟ್ಟುವ ಜಾಯಮಾನವು ಪಲ್ಲಟವಾಗಿವೆ.

ಇದಕ್ಕೆ ಉದಾಹರಣೆಯಾಗಿ ‘ಮಮ್ಮೀಕೋ ದೇಖೋ! ಹೆಲ್ತ್ ಕೋ ದೇಖೋ!’ ಎಂಬುದು ‘ಮಮ್ಮಿಗೇ ನೋಡು, ಹೆಲ್ತ್‍ಗೆ ನೋಡು’ ಎಂದು ಡಬ್ ಆಗಿ ಪ್ರಸಾರವಾಗುತ್ತಾ ಇರುವುದನ್ನು ಗಮನಿಸಬಹುದು. ಈ ಕನ್ನಡ ಎಂದು ಕರೆಸಿಕೊಳ್ಳುವ ವಾಕ್ಯದಲ್ಲಿ ‘ಮಮ್ಮಿಗೆ ನೋಡು’ ಎನ್ನುವಾಗಲೇ ಕನ್ನಡ ವಾಕ್ಯ ರಚನಾ ಜಾಯಮಾನ ನಾಪತ್ತೆಯಾಗಿದೆ. ಇಂತಹ ಉದಾಹರಣೆಯ ಅಡಿಗೆ ನಿತ್ಯ ಪ್ರಸಾರವಾಗುತ್ತಾ ಇರುವ ಅನೇಕ ಜಾಹೀರಾತುಗಳನ್ನು ಗಮನಿಸಬಹುದು. ಈ ವಿಷಯ ತಿಳಿಸಿದ ಕೂಡಲೇ ಕೆಲವು ಡಬ್ಬಿಂಗ್ ಪರ ನಿಂತಿರುವವರು, “ಜಾಹೀರಾತಿನಲ್ಲಿ ಡಬ್ಬಿಂಗ್ ಬಿಟ್ಟು, ಬೇರೆಯದನ್ನು ಯಾಕೆ ತಡೆದಿದ್ದೀರಿ” ಎಂದು ಕೇಳುತ್ತಾರೆ.

ಮೊದಲಿಗೆ ಆ ಜನ ಅರಿಯಬೇಕಾದ್ದು ಇಲ್ಲಿ ಯಾವುದನ್ನೂ ಯಾರೂ ತಡೆದಿಲ್ಲ. ಇಲ್ಲಿ ಯಾವುದೇ ನಿಷೇಧಗಳಿಲ್ಲ. ಅ.ನ.ಕೃ. ಮುಂತಾದ ಕನ್ನಡದ ಸಾಹಿತಿಗಳು ನೀಡಿದ ಕರೆಗೆ ಕನ್ನಡ ಸಂಘಟನೆಗಳು ಓಗೊಟ್ಟು 1061ರಿಂದ 1965ರ ವರೆಗೆ ನಡೆಸಿದ ‘ಡಬ್ಬಿಂಗ್ ವಿರೋಧಿ ಚಳುವಳಿ’ ಕಾರಣವಾಗಿ 1965ರಲ್ಲಿ ಸಿನಿಮಾ ಪ್ರದರ್ಶನ ಮಂದಿರದ ಮಾಲೀಕರು ಮೌಖಿಕವಾಗಿ ‘ನಾವು ಡಬ್ ಸಿನಿಮಾಗಳನ್ನು ಪ್ರರ್ಶಿಸುವುದಿಲ್ಲ’ ಎಂದು ತಿಳಿಸಿದರಷ್ಟೆ. ಇದು ಲಿಖಿತ ಒಪ್ಪಂದವೂ ಅಲ್ಲ. ಕೇವಲ ಮೌಖಿಕ ಒಪ್ಪಂದ.

ಹಾಗಾಗಿ ಮನರಂಜನಾ ಸಿನಿಮಾಗಳು ಡಬ್ ಆಗಿ ಬಾರದಂತೆ ನಮ್ಮಲ್ಲಿ ಒಂದು ಸಾಮಾಜಿಕ ಕಟ್ಟುಪಾಡು ಇದೆಯಷ್ಟೆ. ದೂರದರ್ಶನ ಹಾಗೂ ಖಾಸಗಿ ವಾಹಿನಿಗಳವರು ಸಿನಿಮೋದ್ಯಮದವರ ಜೊತೆಗೆ ಮಾಡಿಕೊಂಡ ಒಪ್ಪಂದದಂತೆ ಜಾಹೀರಾತುಗಳನ್ನು ಡಬ್ ಮಾಡಬಹುದು ಎಂಬಂತೆ ಕಟ್ಟುಪಾಡುಗಳನ್ನು ಸಡಿಲಗೊಳಿಸಲಾಯಿತು. ಇನ್ನೂ ಟೆಲಿವಿಷನ್ನಿನಲ್ಲಿ ಬರುವ ಡಬ್ ಆದ ಜಾಹೀರಾತುಗಳಲ್ಲಿ ಕನ್ನಡವನ್ನು ನಿಯಂತ್ರಿಸುವ ವ್ಯವಸ್ಥೆಯು ಈ ಹಿಂದೆ ದೂರದರ್ಶನ ಎಂಬ ಒಂದೇ ವಾಹಿನಿ ಇದ್ದಾಗ ಜಾರಿಯಲ್ಲಿತ್ತು. ಆ ಸಂಸ್ಥೆಯಲ್ಲಿದ್ದ ಅಧಿಕಾರಿಗಳು ಪ್ರತಿ ಜಾಹೀರಾತನ್ನೂ ಗಮನಿಸಿ ಪ್ರಸಾರ ಯೋಗ್ಯವಾದರೆ ಮಾತ್ರ ಬಿಡುತ್ತಾ ಇದ್ದರು. ಖಾಸಗಿ ವಾಹಿನಿಗಳ ಸಂಖ್ಯೆ ಹೆಚ್ಚಾದಂತೆ ದೂರದರ್ಶನದ ಪರವಾನಗಿಯು ಇಲ್ಲದೆ ಜಾಹೀರಾತುಗಳ ಪ್ರಸಾರ ಆರಂಭವಾಯಿತು. ಈ ಖಾಸಗಿ ವಾಹಿನಿಗಳಲ್ಲಿ, ಅದಾಗಲೇ ತಿಳಿಸಿದ ಹಾಗೆ ‘ಕನ್ನಡಿಗರು’ ಎನ್ನುವವರೇ ಅಲ್ಪಸಂಖ್ಯಾತರಾಗಿರುವುದರಿಂದ ಆದಾಯ ಬಂದರೆ ಸಾಕು ಎಂದು ಜಾಹೀರಾತುಗಳ ಪ್ರಸಾರ ಆರಂಭವಾಯಿತು. ಇದರಿಂದಾಗಿ ಜಾಹೀರಾತುಗಳಲ್ಲಿ ಬಳಕೆಯಾಗುವ ಕನ್ನಡದ ಮೇಲೆ ನಿಯಂತ್ರಣ ತಪ್ಪಿತು. ಹೀಗಾಗಿ ಇಂದು ನಾವು ನೋಡುತ್ತಿರುವ ವೈರುಧ್ಯಗಳು ಹಾಗೂ ಅಪದ್ಧಗಳು ಉಳಿದುಕೊಂಡಿವೆ.

ಇಂತಹ ಕೆಲವು ವಿವರಗಳಲ್ಲದೆ ಕೆಲ ಹೊತ್ತಿಗೆ ಮುಂಚೆ ಪ್ರೊ. ಸಿಎನ್‍ಆರ್ ಅವರು ಅತ್ಯಂತ ಅಕೆಡೆಮಿಕ್ ಆದ ವಿವರಗಳ ಜೊತೆಗೆ ಡಬ್ಬಿಂಗ್ ಯಾಕೆ ಬೇಡ ಎಂಬುದನ್ನು ತಿಳಿಸಿದ್ದಾರೆ ಮತ್ತು ಕೆಲವು ಮಾಹಿತಿ ಪೂರ್ಣ ವಿಷಯಗಳು ಡಬ್ ಆಗಬಹುದು ಎಂದಿದ್ದಾರೆ. ಅವರಾಡಿದ ಬಗೆಯಲ್ಲಿಯೇ ಇಂದು ನಮ್ಮ ನಾಡಿನಲ್ಲಿ ಡಬ್ಬಿಂಗ್ ಎಂಬುದು ಚಾಲ್ತಿಯಲ್ಲಿದೆ. ಮನರಂಜನಾತ್ಮಕವಾದ ಕಥಾನಕಗಳನ್ನು ಉಳಿದು ಸಾಕ್ಷ್ಯ ಚಿತ್ರಗಳು ಮತ್ತು ಇನ್ನಿತರ ಮಾಹಿತಿ ಪೂರ್ಣ ವಿವರಗಳು ಡಬ್ ಆಗಿ ಬರುತ್ತಾ ಇವೆ. ಅವುಗಳನ್ನು ಯಾರೂ ಕಳೆದ ಐವತ್ತು ವರ್ಷಗಳಿಂದ ಬೇಡವೆಂದಿಲ್ಲ. ಆದರೆ ನನಗಿಂತ ಮುಂಚಿತವಾಗಿ ಮಾತಾಡಿದ ಗೆಳೆಯರು ಬಯಸಿದ ಮನರಂಜನೆಗಾಗಿಯೇ ತಯಾರಾದ ಕೃತಿಗಳನ್ನು ಡಬ್ ಮಾಡುವುದು ಯಾವತ್ತಿಗೂ ಅಪಾಯ ಮತ್ತು ಯಾವ ಮನಾಪಲಿ ವ್ಯಾಪಾರೀ ವ್ಯವಸ್ಥೆಯನ್ನು ತಪ್ಪಿಸಲೆಂದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರೂಪಿಸಿದ್ದೇವೋ ಆ ಉದ್ದೇಶವೇ ಸೋಲುತ್ತದೆ.

discussion

 

 

 

 

ಕಾನೂನು ಎಂಬ ಹಳವಂಡ

ಈ ಮಧ್ಯೆ ಕೆಲವು ಕನ್ನಡ ಪ್ರಿಯ ಡಬ್ಬಿಂಗ್ ಪರ ಇರುವ ಗೆಳೆಯರು ಸ್ಪರ್ಧಾತ್ಮಕ ಆಯೋಗಕ್ಕೆ ದೂರು ನೀಡಿ, ಆ ಆಯೋಗವು ಒಂದು ವರದಿಯನ್ನು ನೀಡಿದೆ. ಕೆಲ ಸಂಸ್ಥೆಗಳಿಗೆ ದಂಡ ಹಾಕಿ ಸ್ಪರ್ಧಾತ್ಮಕ ವ್ಯಾಪಾರಕ್ಕೆ ಚ್ಯುತಿ ಉಂಟು ಮಾಡಿದ್ದೀರಿ ಎಂದಿದೆ. ಇದು ವ್ಯಾಪಾರೀ ಧೋರಣೆಯ ಆಯೋಗ ಹೇಳಬೇಕಾದ ಮಾತೇ. ಅದರಲ್ಲಿಯೂ ಮುಕ್ತ ಮಾರುಕಟ್ಟೆ ಒಪ್ಪಂದವನ್ನು ಭಾರತ ಸರ್ಕಾರವು ವಿಶ್ವಬ್ಯಾಂಕ್ ಜೊತೆಗೆ ಮಾಡಿಕೊಂಡ ನಂತರ ಆರಂಭವಾದ ಅದೇ ಧೋರಣೆಯ ಆಯೋಗಕ್ಕೆ ನಮ್ಮ ಸಮಾಜವಾದಿ ನಿಲುವನ್ನು ಅರ್ಥೈಸಿಕೊಳ್ಳುವ ಹೃದಯವಾದರೂ ಎಲ್ಲಿರುತ್ತದೆ ಹೇಳಿ. ಇನ್ನೂ ಆ ಆಯೋಗದಲ್ಲಿರುವ ಸದಸ್ಯರಾದರೂ ಈ ಹಿಂದೆ ಬೃಹತ್ ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಈಗ ಬಹುತೇಕ ವಾಹಿನಿಗಳನ್ನು ನಿಯಂತ್ರಿಸುತ್ತಾ ಇರುವ ಕಂಪೆನಿಗಳಲ್ಲಿ ದುಡಿದು ಬಂದವರು. ಅವರ ಆಲೋಚನಾ ಕ್ರಮಕ್ಕೆ ನಾವು ಡಬ್ಬಿಂಗ್ ಅನ್ನುವುದು ನಮ್ಮ ಸಾಂಸ್ಕøತಿಕ ಲೋಕದ ಮೇಲೆ ಆಗುವ ಧಾಳಿ ಎಂದು ಹೇಳಿದರೂ ಅದು ವ್ಯಾಪಾರಕ್ಕೆ ಸಂಬಂಧಿಸಿದ ವಿಷಯವಲ್ಲ ಮತ್ತು ಹೈಪಾಥೆಟಿಕಲ್ ಆಲೋಚನೆ ಎಂದು ದೂರ ತಳ್ಳಿಬಿಡುತ್ತಾರೆ.

ಹೀಗಿರುವಾಗ ಒಂದು ಸಾಮಾಜಿಕ ಕಟ್ಟುಪಾಡಿಗೆ ಕಾನೂನಿನ ಬೇಲಿಯನ್ನು ಹಾಕುವುದೆಂದರೆ ಮೂಢನಂಬಿಕೆ ಪ್ರತಿಬಂಧಕ ಕಾಯಿದೆ ಜಾರಿಗೆ ತರಲು ಕರ್ನಾಟಕ ಸರ್ಕಾರ ಕಳೆದ ಮೂರು ವರ್ಷದಿಂದ ಮಾಡುತ್ತಾ ಇರುವ ಪ್ರಯತ್ನದ ಹಾಗೆಯೇ ಆಗುತ್ತದೆ. ಈ ಮಾನಪಲಿ ಮಾರುಕಟ್ಟೆಯ ಶಕ್ತಿಗಳು ನಮ್ಮ ಕನ್ನಡದ ಜನರನ್ನೇ ಒಡೆದು ಎದುರಾಬದುರಾ ನಿಲ್ಲಿಸಿವೆ. ಎರಡೂ ಬಣಗಳೂ ಕನ್ನಡದ ಉಳಿವಿಗಾಗಿ ಎನ್ನುತ್ತಾ ತಮ್ಮ ತಮ್ಮ ವಾದ ಮಂಡಿಸುತ್ತಿವೆ. ಇದರಿಂದ ನಾವು ನಾವು ಕಿತ್ತಾಡುತ್ತಾ ಇದ್ದೇವೆ. ನಮ್ಮಲ್ಲಿನ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಾ ಇವೆ. ಒಂದು ಬಣ ಮತ್ತೊಂದನ್ನು ವೈರಿ ಎಂಬಂತೆ ನೋಡುತ್ತಾ ಇದೆ. ಈ ಒಡಕು ಸೃಷ್ಟಿಸಿದ ಶಕ್ತಿಗಳು ಮಾತ್ರ ಈ ಜಗಳದಲ್ಲಿ ತಮಗೆ ಸಿಗಬಹುದಾದ ಲಾಭವೇನು ಎಂದು ನೋಡುತ್ತಾ ಇವೆ.

ಇಂತಹ ಸಂದರ್ಭದಲ್ಲಿ ಡಬ್ಬಿಂಗ್ ಪರ ಅಥವಾ ವಿರುದ್ಧದ ನಿಲುವಿಗೆ ಕಾನೂನಿನ ಮೂಲಕ ಬೇಲಿ ಸೃಷ್ಟಿಸುವುದು ಸಹ ಬೃಹತ್ ಹಳವಂಡವೇ ಆಗಿದೆ. ಹೀಗಾಗಿ ನಾವು ಈ ಸಮಸ್ಯೆಗೆ ಕಾನೂನು ಏನು ಹೇಳುತ್ತದೆ ಎಂದು ನೋಡುವುದಕ್ಕಿಂತ 2001ರ ವಿಶ್ವಸಂಸ್ಥೆಯ ಪ್ರಾದೇಶಿಕ ಭಾಷಾ ರಕ್ಷಣೆಯ ಘೋಷಣೆಯ ಅಡಿಯಲ್ಲಿ ಯೋಚಿಸಬೇಕಾಗುತ್ತದೆ. (ಡಬ್ಬಿಂಗ್ ಪರವಾಗಿ ನಿಂತ ಬಣದವರು 1996ರ ವಿಶ್ವಸಂಸ್ಥೆಯ ಯೂನಿವರ್ಸಲ್ ಲ್ಯಾಂಗ್ವೇಜ್ ಡಿಕ್ಲರೇಷನ್ ಹಿಡಿದು ಮಾತಾಡುತ್ತಾ ಇದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.) 2001ರ ಪ್ರಾದೇಶಿಕ ಭಾಷಾ ಘೋಷಣೆಯು ತೀರಾ ಸ್ಪಷ್ಟ ಮಾತುಗಳಲ್ಲಿ “ಡಬ್ಬಿಂಗ್” ತಂತ್ರಜ್ಞಾನಕ್ಕೆ ಬದಲಾಗಿ ಅನುವಾದ, ಸಬ್ ಟೈಟಲಿಂಗ್ ತರಹದ ಇತರ ತಂತ್ರಜ್ಞಾನ ಬಳಸಬೇಕೆಂದು ತಿಳಿಸುತ್ತದೆ. ಈ ವಾದಕ್ಕೆ ಅದು ಫ್ರಾನ್ಸ್ ದೇಶದ ತಜ್ಞರ ಅನುಭವಾಧಾರಿತ ವಿಶ್ಲೇಷಣೆಯನ್ನು ಬಳಸಿಕೊಳ್ಳುತ್ತದೆ. ಈ ವಾದದ ಅಡಿಯಲ್ಲಿ ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿಕೊಂಡು ಸಮಸ್ಯೆಗೆ ಪರಿಹಾರ ಹುಡುಕಬೇಕಾಗಿದೆ.

ಈ ವಿಷಯವಾಗಿ ಮತ್ತಷ್ಟು ಮಾತಾಡಬಹುದು. ಆದರೆ ಸಮಯದ ದೃಷ್ಟಿಯಿಂದ ಅದು ಸಾಧುವಲ್ಲ. ನಿಮ್ಮೊಂದಿಗಿನ ಸಂವಾದದಲ್ಲಿ ಮತ್ತಷ್ಟು ನನ್ನ ಮಾತನ್ನು ಮತ್ತಷ್ಟು ವಿಸ್ತರಿಸುವ ಅವಕಾಶ ಸಿಗಬಹುದೆಂದು ಭಾವಿಸಿ, ನನ್ನನ್ನು ಇಲ್ಲಿಗೆ ಬರಮಾಡಿಕೊಂಡ ಗುರುಗಳಿಗೆ ನಮಿಸಿ, ಇವೆಲ್ಲಾ ಹೋರಾಟ – ಸಂಕಟಗಳ ನಡುವೆ ಕನ್ನಡಕ್ಕೆ ಜಯವಾಗಲಿ, ಕನ್ನಡಿಗರಿಗೆ ಹಿತವಾಗಲಿ. ದೇಶ ಭಕ್ತಿಗಿಂತ ನನಗೆ ಭಾಷಾ ಭಕ್ತಿಯೇ ದೊಡ್ಡದು ಎನ್ನುತ್ತಾ ನನ್ನ ಮಾತು ಮುಗಿಸುತ್ತೇನೆ.

 

ಸಂಕ್ರಮಣ ಸಾಹಿತ್ಯ ಪತ್ರಿಕೆಯ ಬಂಗಾರದ ಹಬ್ಬದ ಪ್ರಯುಕ್ತ ನಡೆದ ವಿಚಾರ ಸಂಕಿರಣದಲ್ಲಿ “ಕನ್ನಡ ಚಲನಚಿತ್ರ ಮತ್ತು ಡಬ್ಬಿಂಗ್ ಸಂಸ್ಕೃತಿ” ಕುರಿತ ಗೋಷ್ಟಿಯಲ್ಲಿ ಆಡಿದ ಮಾತುಗಳ ಲೇಖನ ರೂಪ

ಮೂಲ ಭಾಷಣದ ರೆಕಾರ್ಡೆಡ್ ಪ್ರತಿ ಇರಲಿಲ್ಲ. ಹೀಗಾಗಿ ನೆನಪಿಗೆ ಬಂದಂತೆ ಲೇಖನ ಬರೆಯಲಾಗಿದೆ. ಇಲ್ಲಿ ಬರೆದ ಕೆಲವು ಮಾತುಗಳು ಗೋಷ್ಟಿಯಲ್ಲಿ ಆಡಿಲ್ಲದ ಮಾತು ಸಹ ಆಗಿರಬಹುದು.

‍ಲೇಖಕರು admin

28 April, 2016

1 Comment

  1. Guruprasad

    When author speaks so veraciously against Dubbing , he should have also spoke about below points
    1. the remake happening in Kannada film industry and how few genuine movies are releasing and how they are being treated poorly by not giving enough theater for release by the film distribution mafia .
    2. how Government is failing uni-formalize the Ticket pricing of Multiplex screen in Karnataka , due to which other language films are getting priority over Kannada .
    3. How Kannada film makers searching for talents outside Karnataka ,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading