ಕನ್ನಡ ಯುವ ಬರಹಗಾರರಿಗೆ ಟಿ.ಎಫ್.ಎ ಪುರಸ್ಕಾರ

ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಕಳೆದ ಐದು ವರ್ಷಗಳಿಂದ ಕನ್ನಡಕ್ಕೂ ವಿಸ್ತಾರಗೊಂಡಿದೆ. ಈ ಪ್ರಶಸ್ತಿಯನ್ನು ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts) ಸಂಸ್ಥೆಯು ಸ್ಥಾಪಿಸಿ ನಿರ್ವಹಿಸುತ್ತಿದೆ. ಈ ಪ್ರಶಸ್ತಿಯು ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾಗಿದೆ. ಪುರಸ್ಕೃತರು ೩೦೦೦೦ ರೂಪಾಯಿಗಳ ನಗದು ಬಹುಮಾನವನ್ನು ಪಡೆಯುವರು.
೨೦೧೪ ನೇ ಸಾಲಿನ ಕನ್ನಡ ಟೊಟೊ ಪುರಸ್ಕಾರಕ್ಕಾಗಿ ಟಿ.ಎಫ್.ಎ ಸಂಸ್ಥೆಯು ಪ್ರವೇಶಗಳನ್ನು ಆಹ್ವಾನಿಸುತ್ತಿದೆ. ಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು ೧೮ ರಿಂದ ೨೯ ವರ್ಷ ವಯಸ್ಸಿನವರಾಗಿರಬೇಕು. ೧ ಜನವರಿ ೧೯೮೫ ರ ನಂತರ ಹುಟ್ಟಿದವರು ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಲು ಅರ್ಹರು. ಕಥೆ, ಕವಿತೆ ಮತ್ತು ನಾಟಕ ಈ ಮೂರರಲ್ಲಿ ಯಾವುದೇ ಪ್ರಕಾರದ ಕನ್ನಡ ರಚನೆಗಳನ್ನು ಪ್ರವೇಶಗಳಾಗಿ ಕಳಿಸಬಹುದು. ಪುರಸ್ಕಾರದ ಆಯ್ಕೆಯನ್ನು ಕನ್ನಡದ ಹಿರಿಯ ಬರಹಗಾರರ ಸಮಿತಿಯು ಮಾಡಲಿದೆ. ಪ್ರವೇಶಗಳನ್ನು ಕಳುಹಿಸಲು ಕೊನೆಯ ದಿನಾಂಕ: ೮ ಅಕ್ಟೋಬರ್ ೨೦೧೪.
ಟಿ.ಎಫ್.ಎ. ಸಂಸ್ಥೆಯು ಆಂಗಿರಸ ‘ಟೊಟೊ’ ವೆಲ್ಲಾನಿಯ ಸ್ಮರಣಾರ್ಥ ೨೦೦೪ ರಲ್ಲಿ ಸ್ಥಾಪಿತವಾಯಿತು. ಕಲೆಗಳ ಬಗ್ಗೆ ಗಾಢವಾದ ಆಸಕ್ತಿಯನ್ನಿರಿಸಿಕೊಂಡಿದ್ದ ಟೊಟೊರವರ ಅಕಾಲಿಕ ಮರಣವು ಅವರ ಕುಟುಂಬ ಮತ್ತು ಸ್ನೇಹಿತರನ್ನು ಈ ಸಂಸ್ಥೆಯ ಸ್ಥಾಪನೆಗೆ ಪ್ರೇರೇಪಿಸಿತು. ಈ ಮೂಲಕ ಯುವ ಪ್ರತಿಭೆಗಳಿಗೆ ತಮ್ಮ ಕಲಾತ್ಮಕ ಅಭಿವ್ಯಕ್ತಿಯನ್ನು ಕಂಡುಕೊಳ್ಳಲು ಉತ್ತೇಜನ ಸಿಗಲೆಂಬುದು ಇದರ ಆಶಯವಾಗಿದೆ.
ಟೊಟೊ ವಾರ್ಷಿಕ ಪ್ರಶಸ್ತಿಗಳನ್ನು ಛಾಯಾಚಿತ್ರ, ಸಂಗೀತ ಮತ್ತು ಸೃಜನಶೀಲ ಸಾಹಿತ್ಯ ಕ್ಷೇತ್ರಗಳಿಗೂ ಕೊಡಲಾಗುತ್ತದೆ. ಪ್ರಶಸ್ತಿಯ ಪ್ರವೇಶದ ವಿವರಗಳನ್ನು http://totofundsthearts.blogspot.com ಎಂಬ ಅಂತರ್ಜಾಲ ತಾಣದಿಂದ ಪಡೆಯಬಹುದು.





0 Comments