ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಿ ಪಿ ಅಶೋಕ್ ಮೆಚ್ಚಿ ಜಿ ಪಿ..

ಹಿರಿಯ ಪತ್ರಕರ್ತ, ಸಾಹಿತಿ ಜಿ ಪಿ ಬಸವರಾಜು ಅವರು ಟಿ ಪಿ ಅಶೋಕ ಅವರು ಬರೆದ ವಿಮರ್ಶೆಯೊಂದನ್ನು ಕಳಿಸಿಕೊಟ್ಟಿದ್ದಾರೆ. ಜಿ ಪಿ ಬಸವರಾಜು ಅವರು ಯಾವ ಕಾರಣಕ್ಕಾಗಿ ಈ ವಿಮರ್ಶೆಯನ್ನು ಮೆಚ್ಚಿದ್ದಾರೆ ಎಂಬ ಬಗ್ಗೆ ಅವರು ಬರೆದ ಪತ್ರವನ್ನೂ ಹಾಗೂ ಟಿ ಪಿ ಅಶೋಕ ಅವರ ವಿಮರ್ಶೆಯನ್ನೂ ಪ್ರಕಟಿಸುತ್ತಿದ್ದೇವೆ.

ಜಿ ಪಿ ಅವರಿಗೆ ಥ್ಯಾಂಕ್ಸ್

 

ಪ್ರಿಯ ಅಶೋಕ್,

ಬಹುದಿನಗಳ ನಂತರ ನಿಮ್ಮ ಬರಹ, ಮಾವಿನಕೆರೆ ಅವರ ಕಥೆ-ಪರ್ಜನ್ಯ ಕುರಿತದ್ದು, ಓದಿ ಸಂತೋಷಗೊಂಡು ಇದನ್ನು ಬರೆಯುತ್ತಿದ್ದೇನೆ. ನಿಮ್ಮ ಬರಹ ಎರಡು ಮುಖ್ಯ ಕಾರಣಗಳಿಗಾಗಿ ಗಮನ ಸೆಳೆಯುತ್ತದೆ. ಮೊದಲನೆಯದು, ನೀವು ಕಥೆಯನ್ನು ಗ್ರಹಿಸಿರುವ ರೀತಿ ಪ್ರಾಮಾಣಿಕವಾಗಿದೆ ಮತ್ತು ಹೆಚ್ಚು ನಿಖರವಾಗಿದೆ. ಕಥೆಯೊಂದನ್ನು ಓದುವ, ಗ್ರಹಿಸುವ, ಸೂಕ್ಷ್ಮವಾಗಿ ಸ್ಪಂದಿಸುವ ಮತ್ತು ಆ ಮೂಲಕ ಕಥೆಗಾರನಿಗೆ ಗೌರವವನ್ನು ಸೂಚಿಸುವ ರೀತಿ ನೀತಿಯನ್ನು ನಿಮ್ಮ ಬರಹ ತೋರಿಸಿಕೊಡುತ್ತದೆ. ಸೂಕ್ಷ್ಮ ಓದನ್ನು ಅಲಕ್ಷಿಸಿ, ಉಡಾಫೆಯ ಮಾತುಗಳನ್ನು ಆಡುವವರೇ ಅಧಿಕವಾಗಿ ಕಂಡುಬರುತ್ತಿರುವ ಈ ದಿನಗಳಲ್ಲಿ ನಿಮ್ಮ ಬರಹ ಪ್ರಾಮುಖ್ಯತೆಯನ್ನು ಗಳಿಸಿಕೊಳ್ಳುತ್ತದೆ.

ಎರಡನೆಯ ಕಾರಣ, ನಿಮ್ಮ ಪುಟ್ಟ ಬರಹ ನಮ್ಮ ವಿಮರ್ಶಾ ಪರಂಪರೆಯ ಲೋಪಗಳನ್ನು ಸ್ಪಷ್ಟವಾಗಿ ಮತ್ತು ದಿಟ್ಟವಾಗಿ ತೋರಿಸಿಕೊಡುತ್ತಲೇ ಅದನ್ನು ಸರಿಪಡಿಸಲು ನೋಡುತ್ತದೆ. ಇದು ಬಹಳ ಮುಖ್ಯವಾದ ಕೆಲಸ. ವಿಮರ್ಶೆಯನ್ನು ಮರುವಿಮರ್ಶೆಗೆ ಒಳಪಡಿಸುವ ಕೆಲಸ ನಿರಂತರವಾಗಿ ಮತ್ತು ಪ್ರಾಮಾಣಿಕವಾಗಿ ನಡೆದಾಗ ಸಾಹಿತ್ಯ ಚರಿತ್ರೆಯಲ್ಲಾದ ಅನೇಕ ಲೋಪಗಳನ್ನು ಸರಿಪಡಿಸಬಹುದು. ಯಾರದೂ ಅಂತಿಮ ಮಾತಲ್ಲ ಎಂಬುದು ನಿಜವಾದರೂ, ಗ್ರಹಿಕೆಯಲ್ಲಿಯೇ ದೋಷಗಳಿದ್ದರೆ ಅದನ್ನು ಅಗತ್ಯವಾಗಿ ಸರಿಪಡಿಸಬೇಕಾಗುತ್ತದೆ. ಆ ಕೆಲಸವನ್ನು ನಿಮ್ಮ ಬರಹ ತನ್ನ ಸೀಮಿತ ವ್ಯಾಪ್ತಿಯಲ್ಲಿಯೂ ಮಾಡಿದೆ.

ಅದಕ್ಕಾಗಿ ಅಭಿನಂದನೆಗಳು.

ನಿಮ್ಮ

ಜಿ.ಪಿ.ಬಸವರಾಜು

 

ಮಾವಿನಕೆರೆ ರಂಗನಾಥನ್ ಅವರ ‘ಪರ್ಜನ್ಯ’

ಟಿ ಪಿ ಅಶೋಕ

ಯು.ಆರ್.ಅನಂತಮೂರ್ತಿ ಅವರ ಸಂಸ್ಕಾರ (೧೯೬೫) ಕಾದಂಬರಿ ಪ್ರಕಟವಾದ ನಂತರ ಸಾವಿನ ಸಾಕ್ಷ್ಯದಲ್ಲಿ ಬದುಕನ್ನು ನಿಷ್ಠುರವಾಗಿ ಅವಲೋಕಿಸುವ ಮಹತ್ವಾಕಾಂಕ್ಷೆ ಇಟ್ಟುಕೊಂಡ ಹಲವು ಕಥೆ-ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾದವು. ಗಿರಡ್ಡಿ ಗೋವಿಂದರಾಜರ ಮಣ್ಣು, ಬಿ. ವಿ. ವೈಕುಂಠರಾಜು ಅವರ ಅಂತ್ಯ, ಟಿ.ಜಿ.ರಾಘವ ಅವರ ಶ್ರಾದ್ಧ, ರಾಜಶೇಖರ ನೀರಮಾನ್ವಿ ಅವರ ಹಂಗಿನರಮನೆಯ ಹೊರಗೆ ಮುಂತಾದ ಕೃತಿಗಳು ತತ್‌ಕ್ಷಣಕ್ಕೆ ನೆನಪಾಗುತ್ತವೆ. ಮಾವಿನಕೆರೆ ರಂಗನಾಥನ್ ಅವರ ಪರ್ಜನ್ಯ (೧೯೬೭), ಬಂದಳಿಕೆ (೧೯೭೩) ಎಂಬ ಕಥೆಗಳನ್ನೂ ಈ ಸಾಲಿಗೆ ಸೇರಿಸಬೇಕು. ಪರ್ಜನ್ಯ ಕಥೆಯು ಇದೇ ಹೆಸರಿನಲ್ಲಿ ೧೯೬೭ರಲ್ಲಿ ಪ್ರಕಟವಾದ ಮಾವಿನಕೆರೆ ರಂಗನಾಥನ್ ಅವರ ನಾಲ್ಕನೆಯ ಕಥಾಸಂಕಲನದಲ್ಲಿ ಸೇರಿದೆ. ಈ ಸಂಕಲನಕ್ಕೆ ೧೯೬೭ರ ಅತ್ಯುತ್ತಮ ಕಥಾಸಂಕಲನವೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿತೆಂಬುದನ್ನೂ ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬಹುದು.

ಪರ್ಜನ್ಯ ಕೇಶವನ ಪ್ರಜ್ಞೆಯಲ್ಲಿ ಒಂದು ಹಗಲಿನ ಸೀಮಿತ ಕಾಲಾವಧಿಯಲ್ಲಿ ದಟ್ಟವಾಗಿ, ಸಾಂದ್ರವಾಗಿ ಕಟ್ಟಿಕೊಳ್ಳುವ ಕಥೆ. ಅದು ಏಕಕಾಲದಲ್ಲಿ ಕೇಶವನ ಅಪ್ಪನ ಸಾವಿನ ವರ್ತಮಾನವನ್ನೂ ಅವನ ಭೂತವನ್ನೂ ಏಕತ್ರ ಗ್ರಹಿಸಲು ಹವಣಿಸುತ್ತದೆ. ತನ್ನ ಅಪ್ಪನ ಸಾವಿಗೆ ಕೇಶವನ ಪ್ರತಿಕ್ರಿಯೆಗಳನ್ನೂ, ಇತರರ ಪ್ರತಿಕ್ರಿಯೆಗಳು ಅವನ ಮನಸ್ಸಿನಲ್ಲಿ ಹುಟ್ಟಿಸುವ ಭಾವನೆಗಳನ್ನೂ ಕಥೆ ದಾಖಲಿಸುತ್ತದೆ. ಕಥೆಯ ಮೂರನೆಯ ಪ್ಯಾರಾದಲ್ಲೇ ಇದರ ಸೂಚನೆ ಸಿಗುವಂತಿದೆ: ಯಾರದು ಮಾಣಿ ಸಾವು?-ಎಂದಾಗ, ಅಪ್ಪನದು ಎಂದು ನಿರ್ವಿಕಾರವಾಗಿ ಉತ್ತರಿಸಿದ್ದಕ್ಕೆ, ಕೇಳಿದಜನ ಒಂದು ರೀತಿಯಲ್ಲಿ ತನ್ನನ್ನು ದೃಷ್ಟಿಸಿ ನೋಡಿ ಹೌದೆ?! ಎಂದಾಗ ಏನೂ ಆಗದವನಂತೆ ಹೌದು ಎಂದು ಹೇಳಿ ಎದ್ದು ಒಳ ಬಂದಿದ್ದ. ತನ್ನ ಅಪ್ಪ ಬದುಕಿದ್ದಾಗ ಅವನೊಂದಿಗೆ ಸುತ್ತಲವರು ನಡೆದುಕೊಳ್ಳುತ್ತಿದ್ದ ರೀತಿಗೂ ಈಗ ಅವನು ಸತ್ತು ಹೆಣವಾಗಿ ಮಲಗಿರುವಾಗ ಅವರು ವರ್ತಿಸುತ್ತಿರುವ ರೀತಿಗೂ ಇರುವ ವ್ಯತ್ಯಾಸ ಕೇಶವನಿಗೆ ಆಶ್ಚರ್ಯ, ಸಿಟ್ಟು, ನಗು ತರಿಸುತ್ತದೆ: ಅಪ್ಪನ ಸಾವಿನಿಂದ ಇವರಿಗೆ ನಷ್ಟವಾದದ್ದೇನು ಎಂದು ಯೋಚಿಸಿದ. ಎಲ್ಲ ಬೂಟಾಟಿಕೆಯ ಜನಗಳು ಎಂದುಕೊಂಡ. ಹದಿಮೂರನೆಯ ದಿನದ ವೈಕುಂಠ ಸಮಾರಾಧನೆಯ ಸಂತರ್ಪಣೆಗೆ ಕರೆಯಲು ಎಲ್ಲಾದರೂ ಮರೆತಾರೂ ಎಂಬ ಯೋಚನೆಯೇ ಈ ಮಂದಿಗೆ ಎನಿಸಿತು. ತನ್ನ ಅಪ್ಪನೊಂದಿಗೆ ಯಾವಾಗಲೂ ಜಗಳವಾಡುತ್ತಿದ್ದ, ಅವನ ಬಗ್ಗೆ ಒಳ್ಳೆಯ ಅಭಿಪ್ರಾಯವೇ ಇಲ್ಲದಿದ್ದ ತನ್ನ ಮಾವನ ಸದ್ಯದ ವರ್ತನೆ, ಮುಳುಮುಳು ಅಳುತ್ತಿದ್ದ ತನ್ನ ಅಮ್ಮ ಹತ್ತು ಜನ ಬಂದೊಡನೆ ತಲೆ ಗಟ್ಟಿಸಿಕೊಂಡು ಅಳಲು ಪ್ರಾರಂಭಿಸಿದ್ದು, ಮನೆಯವರ ಅಳುವಿನೊಂದಿಗೆ ಹೊರಗಿನಿಂದ ಬಂದವರ ಅಳುವೂ ಸೇರಿದ್ದು, ನಿಜವಾಗಿ ಊಟ ತಡವಾಗುವುದೆಂದು ಆದರೆ ಬಾಯಲ್ಲಿ ಚೆನ್ನಾಗಿ ಬಾಳಿ ಬದುಕಿದವರಪ್ಪ ಬಹಳ ಹೊತ್ತು ಕಾಯಿಸಬೇಡಿ ಎಂದು ಸಂಸ್ಕಾರಕ್ಕೆ ಚಡಪಡಿಸುತ್ತಿದ್ದ ಕೆಲವರ ವ್ಯಾವಹಾರಿಕ ಜಾಣತನ ಇವೆಲ್ಲ ಕೇಶವನಿಗೆ ಮೊದಮೊದಲು ತಮಾಷೆಯಾಗಿ ಕಾಣಿಸುತ್ತ ಕ್ರಮೇಣ ಬೋರ್ ಆಗತೊಡಗುತ್ತದೆ. ಇದ್ದು ನನ್ನ ಹೊಟ್ಟೆ ಯಾಕೆ ಉರಿಸುತ್ತಾರೋ ದೇವರೆ ಎಂದು ಬೊಬ್ಬೆ ಹಾಕುತ್ತಿದ್ದ ಅಮ್ಮನಿಗೆ ನಿಜವಾಗಿಯೂ ಈ ಸಾವಿನಿಂದ ದುಃಖವಾಗಿದೆಯೆ, ಬೇಕೆಂದಾಗ ಅಳುವುದು, ಬೇಡವಾದಾಗ ನಿಲ್ಲಿಸುವುದೂ ಒಂದು ಕಲೆಯಿರಬಹುದೆ ಎಂದು ವಿಸ್ಮಯವಾಗುತ್ತದೆ. ಅಂದರೆ ಕೇಶವನಲ್ಲಿ ಮನುಷ್ಯವರ್ತನೆಗಳ ಸತ್ಯಾಸತ್ಯತೆಗಳ ಬಗ್ಗೆಯೇ ಒಂದು ಜಿಜ್ಞಾಸೆ ಹುಟ್ಟಿಕೊಳ್ಳುತ್ತದೆ. ಕಥೆ ತಾನಾಗಿ ಈ ಜಿಜ್ಞಾಸೆಯನ್ನು ತತ್ವೀಕರಿಸಲು ಹೋಗುವುದಿಲ್ಲ. ತುಸು ಲಘುಧಾಟಿಯಲ್ಲೇ ಕೇಶವನ ಅಂತರಂಗವನ್ನು ತೆರೆದಿಡುತ್ತಾ ಹೋಗುತ್ತದೆ. ಹೊರಗಿನ ವಿದ್ಯಮಾನಗಳಿಗೂ ಕೇಶವನ ಅಂತರಂಗದಲ್ಲಿ ಮೂಡುತ್ತಿರುವ ಅನಿಸಿಕೆಗಳಿಗೂ ಇರುವ ವೈದೃಶ್ಯದಲ್ಲಿ ಕೇಶವನು ತುಸು ಕಾಮಿಕ್ ಆಗಿ, ಆ ಸಂದರ್ಭಕ್ಕೆ ಪರಕೀಯನಾಗಿ ಕಾಣುತ್ತಿದ್ದರೆ ಅದು ಕಥೆಯ ಯಶಸ್ಸೆಂದೇ ಹೇಳಬೇಕಾಗುತ್ತದೆ. ಕೇಶವನು ಇತರರ ಆ ಹೊತ್ತಿನ ವರ್ತನೆಗಳನ್ನು ಅನುಮಾನದಿಂದ ನೋಡುತ್ತ ತನ್ನ ಅಂತರಂಗದ ಪ್ರಾಮಾಣ್ಯವನ್ನು ಕಾಪಾಡಿಕೊಳ್ಳಲು ನಡೆಸುವ ಪ್ರಯತ್ನಗಳು ನಿಧಾನವಾಗಿ ಆ ಮೇಲ್ಪದರದ ವಿನೋದವನ್ನು ಸರಿಸುತ್ತ ಗಂಭೀರವಾಗುತ್ತ ಹೋಗುತ್ತವೆ. ಯಾರದರೂ ದುಃಖದ ಸಂಗತಿ ಹೇಳಿದಾಗ ಅಯ್ಯೋ ಪಾಪ ಎಂದೋ, ಇಲ್ಲವೇ ಛೇ ಛೇ ಬಹಳ ಅನ್ಯಾಯವಾಯಿತು ಎಂದು ಗುಣಿಸಿಯೋ, ಮತ್ತೇನಾದರೂ ಒಳೆಯ ಸುದ್ದಿ ಹೇಳಿದಾಗ ಒಳ್ಳೆಯದಾಯಿತು ಬಿಡಿ ಬಹಳ ಸಂತೋಷ ಎಂದು ತುದಿ ನಾಲಿಗೆಯಲ್ಲಿ ಹೊರಳಿಸಲು ತನಗೇಕೆ ಬರುವುದಿಲ್ಲ ಎಂದು ಅವನಿಗೇ ಅನೇಕ ಬಾರಿ ಅನ್ನಿಸಿದ್ದುದಿದೆ. ಅವನ ಮಿತ್ರನೊಬ್ಬನು ಇವನಿಗೆ ಫೀಲಿಂಗ್ಸ್ ಇಲ್ಲ, ಇವನೊಬ್ಬ ಪರ್ವರ್ಟ್ ಎಂದು ಹೇಳಿದ್ದು ನೆನಪಾಗುತ್ತದೆ. ಅಂದರೆ ಇತರರು ನಮ್ಮಿಂದ ನಿರೀಕ್ಷಿಸುವಂತೆ ನಡೆದುಕೊಳ್ಳುವವರು ಮಾತ್ರ ನಾರ್ಮಲ್; ಅದಕ್ಕಿಂತ ಭಿನ್ನವಾಗಿ ನಡೆದುಕೊಳ್ಳುವವರು ಪರ್ವರ್ಟ್ ಎಂಬ ಸಾಮಾನ್ಯ ಗೃಹೀತವನ್ನು ಕಥೆಯು ಕೇಶವನ ಮೂಲಕ ಅನೇಕ ಬಗೆಗಳಲ್ಲಿ ಪ್ರಶ್ನಿಸುತ್ತದೆ. ಮುಖವಾಡಗಳನ್ನು ಹಾಕಿಕೊಂಡು ಬದುಕುವುದೇ ನಾರ್ಮಲ್ ಅನ್ನಿಸುವಂಥ ವಾತಾವರಣದಲ್ಲಿ ಮುಖವಾಡಗಳನ್ನು ಸರಿಸಿ ನಿಜವಾದ ಮುಖಗಳನ್ನೇ ನೋಡಬಯಸುವವನು ಅನ್ಯನೂ, ಪರಕೀಯನೂ ಆಗಿ ಕಂಡುಬರುವುದು ಸಹಜವೇ ಆಗುತ್ತದೆ. ಆಲ್ಬರ್ಟ್ ಕಾಮುವಿನ ಕಾದಂಬರಿ ಔಟ್ ಸೈಡರ್ ನೆನಪಾಗುತ್ತದೆ. ಅಂದಹಾಗೆ ಈ ಫ್ರೆಂಚ್ ಕಾದಂಬರಿಯ ಅಮೆರಿಕನ್ ಅನುವಾದದ ಶೀರ್ಷಿಕೆ ಸ್ಟ್ರೇಂಜರ್.

ಮನೆಗೆ ಸಂಬಂಧಪಟ್ಟವರು, ಪಡದವರು ಅಳುತ್ತಿರಬೇಕಾದರೆ ಮಗನಾದ ತನಗೇಕೆ ಅಳುಬರುತ್ತಿಲ್ಲ ಎಂದು ಕೇಶವ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಾನೆ. ಕಳೆದ ತಿಂಗಳು ದುಡ್ಡಿಗಾಗಿ ಅಪ್ಪನಿಗೆ ಕಾಗದ ಹಾಕಿದಾಗ ಕಳುಹಿಸಿದ್ದರೆ ಸ್ವಲ್ಪವಾದರೂ ಫೀಲಿಂಗ್ ಬರುತ್ತಿತ್ತೇನೋ ಎಂಬ ಯೋಚನೆ ಬಂದು, ಹಾಗಿದ್ದರೂ ಅನುಮಾನವೇ ಎಂದು ತೀರ್ಮಾನಿಸುತ್ತಾನೆ. ಇದು ಕ್ರಮೇಣ ತನಗೂ ತನ್ನ ಅಪ್ಪನಿಗೂ ಇದ್ದ ಸಂಬಂಧದ ಸ್ವರೂಪದ ಆತ್ಮಾವಲೋಕನಕ್ಕೆ ಮುಂದುವರೆಯುತ್ತದೆ. ಇತರರು ಸಂಸ್ಕಾರದ ಬೇರೆಬೇರೆ ವಿಧಿಗಳಲ್ಲಿ ತೊಡಗಿರುವಾಗ ಕೇಶವನ ಮನಸ್ಸು ಅಂತರಂಗದ ಭಾವನೆ ಮತ್ತು ಬಹಿರಂಗದ ವರ್ತನೆಗಳಿಗಿರುವ ವ್ಯತ್ಯಾಸಗಳನ್ನು ಚಿಂತಿಸುತ್ತಿರುತ್ತದೆ. ಅಪ್ಪನ ಹೆಣ ಚಿತೆಯಲ್ಲಿ ಧಗಧಗ ಉರಿಯಲು ಪ್ರಾರಂಭಿಸಿದ ಮೇಲೂ ತನಗೇಕೆ ಇತರರಂತೆ ಅಳಲು ಆಗುತ್ತಿಲ್ಲ ಎಂದು ತನ್ನನ್ನು ತಾನು ಪ್ರಶ್ನಿಸಿಕೊಳ್ಳುತ್ತಾನೆ: ಅಳಲು ಕೂಡ ಬರುವುದಿಲ್ಲವೊ? ಇಲ್ಲ ಅಪ್ಪನ ಸಾವು ತನ್ನ ಮೇಲೆ ಪ್ರಭಾವ ಬೀರಲು ಸಾಕಷ್ಟು ಪ್ರಖರವಾಗಿಲ್ಲವೊ? ನಿಖರವಾಗಿ ತಿಳಿಯದೆ ಪೆಚ್ಚಾಗಿ ಉರಿಯುತ್ತಿರುವ ಅಗ್ನಿಕುಂಡ ನೋಡಿದ. ಬಾಳಿ ಬದುಕಿದ ಭವ್ಯತೆಗಳೆಲ್ಲಈ ಜ್ವಾಲೆಯಲ್ಲಿ ಕರಗಿ ಕರಗಿ ಹೋಗುವ ಆಳವನ್ನು ಕಂಡು ದಿಗ್ಮೂಢನಾದ. ಈ ಭಾವದಲ್ಲಿ ಕೇಶವನು ಸಾವಿನ ಬಗ್ಗೆ ತೀವ್ರವಾಗಿ ಯೋಚಿಸುತ್ತ ಹೋಗುತ್ತಾನೆ. ಊರ ಕಡೆಗೆ ಹೆಜ್ಜೆ ಹಾಕುತ್ತಿದ್ದಾಗ ಎಡವಿ ಕಾಲಿಗೆ ಪೆಟ್ಟು ಮಾಡಿಕೊಂಡಾಗ: ಫಕ್ಕನೆ ಹೊಳೆಯಿತು. ಗಬಕ್ಕನೆ ನಿಂತ. ಇದೇ ಸರಿ ಎಂದು ತೀರ್ಮಾನಿಸಿದ. ಜೀವನವೂ ಅಷ್ಟೆ; ಅನಿವಾರ್ಯವಾಗಿ ಎತ್ತಲೋ ನಡೆಯುತ್ತಿರುತ್ತದೆ. ಸಾವಿನ ಕಲ್ಲಿಗೆ ಎಡವಿ ಮುಗ್ಗರಿಸಿ ಬೀಳುತ್ತದೆ, ಮುರಿಯುತ್ತದೆ, ಹಾರುತ್ತದೆ. ಒಂದಲ್ಲ ಒಂದು ದಿನ ತನಗೂ ಸಾವು ಅಡರುತ್ತದೆ ಎಂಬ ಅರಿವು ಮೂಡುತ್ತಿದ್ದಂತೆ ಅದು ಕಾಮನ ಬಣ್ಣದಂತಿರುವ ಮೇರಿಯನ್ನೂ ಬಿಟ್ಟದ್ದಲ್ಲ; ಆ ದುಂಡಗಿನ ದೇಹವು ಒಂದು ದಿನ ಕೊರಡಿನ ಹಾಗೆ ಅಚಲವಾಗಿ ಮಲಗುತ್ತದೆ ಎಂಬ ಸತ್ಯವೂ ಹೊಳೆಯತೊಡಗುತ್ತದೆ. ಅಂದರೆ ತನ್ನ ಅಪ್ಪನ ಸಾವಿನಿಂದ ಕೇಶವನಿಗೆ ಬದುಕಿನ ಮಿತಿಗಳ, ಮನುಷ್ಯ ವರ್ತನೆಗಳಲ್ಲಿನ ವಿರೋಧಾಭಾಸಗಳ ಕಟುಸತ್ಯದ ದರ್ಶನವೇ ಅಗುತ್ತದೆ. ಈ ದರ್ಶನವಾದರೂ ಕಥೆಯ ಚೌಕಟ್ಟಿಗೆ ಭಾರವಾಗದ ಹಾಗೆ ಕೇಶವನ ಸೀಮಿತ ಅನುಭವ ಮತ್ತು ವ್ಯಕ್ತಿತ್ವಗಳಿಗೆ ಸಾಪೇಕ್ಷವಾಗಿಯೇ ಮೂಡಿ ಬರುತ್ತದೆ ಎಂಬುದು ಮುಖ್ಯ. ಬೆಳಗಿನಿಂದ ಸಂಜೆಯವರೆಗಿನ ದೈಹಿಕ ಬಳಲಿಕೆಯು ಈ ಹೊಸ ಅರಿವಿನ ಪ್ರಖರತೆಯೊಂದಿಗೆ ಸೇರಿ ಕೇಶವನು ಕಥೆಯ ಕೊನೆಯ ಘಟ್ಟಕ್ಕೆ ಬರುವಾಗ ಬಸವಳಿದಿರುತ್ತಾನೆ. ಹೊಕ್ಕಳಲ್ಲಿ ಏನೋ ಸರಿದಾಡಿದಂತಾಗುವುದು, ಹೊಕ್ಕಳ ನಾಭಿಗೆ ಹಗ್ಗ ಕಟ್ಟಿ ಅಡ್ಡಾದಿಡ್ಡಿ ಎಳೆದಂತಾಗುವುದು, ತಲೆ ಭಾರವಾಗಿ ಗಿರ್ರೆಂದು ಸುತ್ತುವುದು, ಅಜ್ಜಿಯ ಮಡಿಲಲ್ಲಿ ಮುಖ ಹುದುಗಿಸಿ ಅಳತೊಡಗುವುದು ಈ ಕಾರಣದಿಂದ ಎಂದು ಅನ್ನಿಸುತ್ತದೆ. ಅಂದರೆ ಕೇಶವ ಕೊನೆಗೂ ಅಳುವುದು ತನ್ನ ಅರಿವಿನ ಭಾರದಿಂದ ಮತ್ತು ದೈಹಿಕ ಬಳಲಿಕೆಯಿಂದ. ಸಾಮಾಜಿಕ ಸಭ್ಯತೆಯ ಮುಖವಾಡವನ್ನು ಧರಿಸಲೇಬೇಕಾದ ಅನಿವಾರ್ಯತೆಯಿಂದಲೂ ಅಲ್ಲ, ಇತರರ ಮುಂದೆ ತಾನೂ ನಾರ್ಮಲ್ ಎಂದು ಸ್ಥಾಪಿಸುವ ಅಭೀಪ್ಸೆಯಿಂದಲೂ ಅಲ್ಲ. ಇನ್ನು ಅವನಿಗೆ ಅವನ ಅಪ್ಪನ ಜೊತೆಗಿದ್ದ ಸಂಬಂಧದ ಸ್ವರೂಪವನ್ನು ಅವನ ಪ್ರಜ್ಞೆಯಲ್ಲೇ ಕಥೆ ಗಮನಿಸಿದೆ. ಈ ಹಿನ್ನೆಲೆಯಲ್ಲಿ ಈ ಕಥೆಯನ್ನು ಕುರಿತು ಈಗಾಗಲೇ ಬಂದಿರುವ ಕೆಲವು ವಿಮರ್ಶೆಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸಬೇಕಾದ ಅಗತ್ಯವಿದೆ ಅನ್ನಿಸುತ್ತದೆ. ತಂದೆಯ ವಿರುದ್ಧವಾಗಿ ಎಗರಾಡುವ, ಆದರೆ ತನಗೆ ಗೊತ್ತಿಲ್ಲದಂತೆಯೇ ತಂದೆಯನ್ನು ಆಳವಾಗಿ ಪ್ರೀತಿಸುತ್ತಿರುವ ತರುಣ ಮಗ ಎಂಬ ಗೋಪಾಲಕೃಷ್ಣ ಅಡಿಗರ ಅವಲೋಕನಕ್ಕೆ ಕಥೆಯಲ್ಲಿ ಆಧಾರವಿದೆ ಅನ್ನಿಸುವುದಿಲ್ಲ. ಹೊಕ್ಕಳ ನಾಭಿಯ ನಡುಕವನ್ನು ಕರುಳ ಸಂಬಂಧಕ್ಕೆ ಅನ್ವಯಸಿ ಕೊನೆಗೂ ಕರುಳ ಬಾಂಧವ್ಯ ಜಾಗೃತವಾಗುತ್ತದೆ; ಅದರಿಂದ ಅವನಿಗೆ ಅಳು ಬರುತ್ತದೆ ಎಂಬ ಅರ್ಥ ಬರುವ ಹಾ.ಮಾ.ನಾಯಕರ ವಿಶ್ಲೇಷಣೆಯೂ ಪ್ರಶ್ನಾರ್ಹವಾಗಿದೆ. ಈ ವಿಶ್ಲೇಷಣೆಯನ್ನು ಒಪ್ಪಿಕೊಂಡರೆ ಕೇಶವನ ಅರಿವಿಗೆ ಕಿಂಚಿತ್ ಘನತೆಯೂ ಪ್ರಾಪ್ತವಾಗುವುದಿಲ್ಲ. ಎಲ್.ಎಸ್.ಶೇಷಗಿರಿ ರಾವ್ ಅವರ ವಿಮರ್ಶೆಯೂ ಹಾ.ಮಾ.ನಾಯಕರ ವಿಮರ್ಶೆಯ ಧಾಟಿಯಲ್ಲೇ ಇದೆ: …ಹೆಣವನ್ನು ಬೆಂಕಿಗೊಪ್ಪಿಸಿ ತಂದೆ ಇಲ್ಲದ ಮನೆಗೆ ಬಂದಾಗ ಹೊಕ್ಕುಳ ಸಂಬಂಧ ತನ್ನ ಶಕ್ತಿಯನ್ನು ಪ್ರಕಟಿಸುವುದು… .ಶೇಷಗಿರಿರಾಯರ ವಿಶ್ಲೇಷಣೆಯೂ ಕಥೆಯ ಸಂಕೀರ್ಣತೆಯನ್ನು ಮುನ್ನೆಲೆಗೆ ತರಲು ವಿಫಲವಾಗಿದೆ ಎನಿಸುತ್ತದೆ. ತೀರಾ ಈಚಿಗಿನ ಸಿ.ಎನ್.ರಾಮಚಂದ್ರನ್ ಅವರ ವಿಮರ್ಶೆಯು ಕೇಶವನ ವ್ಯಕ್ತಿತ್ವದಲ್ಲಿರುವ ಪರಕೀಯ ಭಾವವನ್ನು ಗುರುತಿಸಿಯೂ, ಈ ಬಗೆಯ ಪರಕೀಯತೆಯಿಂದ ಹೊರಬಂದು, ತನ್ನ ಪರಂಪರೆಯೊಡನೆ ಯಾವುದಾದರೂ ಬಗೆಯ ಸಂಬಂಧವನ್ನು ಕಟ್ಟಿಕೊಳ್ಳಲು ಕೊನೆಗೆ ಅವನು ಅಜ್ಜಿಯ ಮಡಿಲಲ್ಲಿ ಮುಖ ಹುದುಗಿಸಿ ಮೌನವಾಗಿ ಅಳತೊಡಗಿದ ಎಂಬ ಅಭಿಪ್ರಾಯವನ್ನು ಮುಟ್ಟುವುದು ಆಶ್ಚರ್ಯ ಹುಟ್ಟಿಸುತ್ತದೆ. ಮಾವಿನಕೆರೆ ಅವರ ಕಥೆಯು ಒಂದು ಅಸ್ತಿತ್ವವಾದೀ ಆತಂಕದಲ್ಲಿ ಉಳಿಯಲು ತವಕಿಸುತ್ತಿದ್ದರೆ ವಿಮರ್ಶಕರು ಅದನ್ನು ರೌಂಡ್ ಆಫ್ ಮಾಡಿ ಅದಕ್ಕೊಂದು ಸಾಂಪ್ರದಾಯಕ ಮುಕ್ತಾಯವನ್ನು ಘೋಷಿಸುವ ಧಾವಂತದಲ್ಲಿರುವುದು ಸೋಜಿಗವೆನಿಸುತ್ತದೆ.

‍ಲೇಖಕರು G

5 July, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading