ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಿ ಎಸ್ ಗೊರುವರ ಪುಸ್ತಕದ ಪುಟಗಳಿ೦ದ

ಕನಸಾಗಿ ಕಾಡುವ ಗಂಧವತಿ

– ಟಿ ಎಸ್ ಗೊರುವರ

ಅವು ನನ್ನ ಹೈಸ್ಕೂಲಿನ ಉಡಾಳ ದಿನಗಳು. ಅಪ್ಪನಿಗೆ ಥಟಗೂ ಗೊತ್ತಾಗದಂತೆ ಸಾಲಿ ತಪ್ಪಿಸಿ ಚಡ್ಡಿದೋಸ್ತರೊಂದಿಗೆ ಅಂಡಲೆಯುತ್ತಿದ್ದ ಸಂಭ್ರಮದ ಕ್ಷಣಗಳವು. ಆಗ ನಮ್ಮ ಮನೆಯ ಮಗ್ಗುಲ ಹಂಚುಗಳೆಲ್ಲ ಬಿದ್ದು ಹೋಗಿದ್ದ ಸರಕಾರಿ ಮನೆಯಲ್ಲಿ ಸಾಮಾಜಿಕ ನಾಟಕವೊಂದರ ಭಜರ್ಿರಿ ತಾಲೀಮು ನಡೆದಿತ್ತು. ಅದನ್ನು ಕಣ್ತುಂಬಿಕೊಳ್ಳಲು ನಿತ್ಯ ಸಂಜೆ ಹೊತ್ತು ಅಲ್ಲಿಗೆ ಹಾಜರಿ ಹಾಕುತ್ತಿದ್ದೆ. ಒಂದೊಂದು ಸಲ ನಾಟಕ ಕಲಿಸುವ ಮಾಸ್ತರರಿಲ್ಲದಿದ್ದಾಗ ಮಾತು ಎತ್ತಿ ಕೊಡುವ ಜವಾಬ್ದಾರಿ ನನ್ನ ಹೆಗಲೇರುತ್ತಿತ್ತು. ಆ ನಾಟಕದಲ್ಲಿ ವಿದ್ಯಾವಂತನ ಪಾತ್ರವೊಂದಿತ್ತು. ಅಂವ ಧಾರವಾಡದಲ್ಲಿ ಕಲಿತು ಕಂಡಾಪಟಿ ಶಾಣ್ಯ ಆಗಿ ನೌಕರಿ ತಗೊಂಡಿದ್ದ. ನನಗೆ ಅವಾಗಿನಿಂದ ಧಾರವಾಡವೆಂದರೆ ಅದೇನೋ ಬೆರಗು. ಈಗ ನಮ್ಮ ಜಿಲ್ಲೆ ಗದಗ ಆಗಿದೆ. ಈ ಮೊದಲು ಧಾರವಾಡವಾಗಿದ್ದರೂ ಅದನ್ನು ನೋಡುವ ಭಾಗ್ಯ ಒಲಿದು ಬಂದಿರಲಿಲ್ಲ. ಕುತೂಹಲ ತಡಿಯದೆ ಅಪ್ಪ ನೋಡಿರಬಹುದೆಂದು ಕೇಳಿದೆ. ಆತನೂ ಆ ದೂರದ ಊರನ್ನು ನೋಡಿರಲಿಲ್ಲ. ಕೂಲಿ ಮಾಡುವುದರಲ್ಲೇ ಬದುಕು ಸವೆಸುತ್ತಿರುವ ಅಪ್ಪನಿಗೆ ದೂರದ ಧಾರವಾಡ ನನಗೆ ಹ್ಯಾಗೊ ಆತನಿಗೂ ಅಷ್ಟೇ ಕುತೂಹಲವಿತ್ತು. ಅಂದಿನಿಂದ ಧಾರವಾಡ ಮೋಹಕ ಹುಡುಗಿಯಂತೆ ತೀವ್ರವಾಗ ಕಾಡತೊಡಗಿತು. ಇದಕ್ಕಿಂತ ಮಿಗಿಲಾಗಿ ಧಾರವಾಡದಲ್ಲಿ ಎಲ್ಲಿ ನಿಂತು ಕಲ್ಲೆಸೆದರೂ ಅದು ಕವಿಗಳ ಮನೆ ಮ್ಯಾಲೆ ಬೀಳುತ್ತದೆ ಎನ್ನುವ ಮಾತುಗಳನ್ನು ಕೇಳಿದ್ದ ನನಗೆ ದಿನಗಳು ಕಾಲನ ಒಳಗೆ ಒಂದಾಗುತ್ತಾ ಹೋದಂತೆ ಆ ಮಾಯಕದ ಊರು ನೋಡುವ, ಕಣ್ತುಂಬಿಕೊಳ್ಳುವ ಹಂಬಲ ಬಲಗೊಳ್ಳುತ್ತಾ ಹೋಯಿತು. ಆ ಕನಸಿನೂರ ಸುತ್ತ ನಾನಾ ನಮೂನೆ ಕಲ್ಪನೆ ಕಟ್ಟುತ್ತಾ ಕಡು ಚಲುವೆಯಂತೆ ಮೋಹಿಸತೊಡಗಿದೆ. ಅದನ್ನು ನೋಡುವ, ಸಾಧ್ಯವಾದರೆ ಅಲ್ಲಿಯೇ ಕಲಿಯುವ ಕನಸುಗಳ ಮಹಾಪೂರ ನನ್ನೊಳಗೆ ಗುಪ್ತಗಾಮಿನಿಯಾಗಿ ಹರಿಯುತ್ತಲೇ ಇತ್ತು. **** ಬಿ.ಎ. ಪಾಸುಮಾಡಿಕೊಂಡ ತರುವಾಯ ನನ್ನೊಳಗೆ ಧ್ಯಾನಸ್ಥವಾಗಿದ್ದ ಧಾರವಾಡ ಕಣ್ದೆರೆಯಿತು. ಎಂ.ಎ. ಮಾಡುವ ಉಮೇದಿ ಅದಕ್ಕೆ ತುಪ್ಪ ಸುರಿಯಿತು. ಕನರ್ಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪ್ರವೇಶಾತಿಯೂ ದೊರೆಯಿತು. ಸ್ವರ್ಗ ಇನ್ನೇನು ಮೂರೇ ಗೇಣು ಅನಿಸತೊಡಗಿತು. ‘ಇದನ್ನು ಕಲಿತರೆ ಮಾಸ್ತರ ನೌಕರಿ ಸಿಗುತ್ತನು….’ ಅಂದ ಅಪ್ಪ. ಪತ್ರಕರ್ತನಾಗಬಹುದು ಅಂದೆ. ಅಪ್ಪ ಬೆಚ್ಚಿ ಬೆವರಿದ. ಆತ ನೋಡಿದ್ದ ಅದ್ಯಾವುದೋ ಸಿನೇಮಾದಲ್ಲಿ ಕೊಲೆಯಾದ ಪತ್ರಕರ್ತನನ್ನು ನೆಪ್ಪಿಸಿಕೊಂಡು ಸುತಾರಾಂ ನೀನು ಅದನ್ನು ಕಲಿಯುವುದು ಬೇಡ ಅಂದ. ಧಾರವಾಡದಲ್ಲಿ ಕಲಿಯುವ ಕನಸಿನ ಮ್ಯಾಲೆ ಬಿಸಿನೀರು ಚೆಲ್ಲಿದಂತಾಯಿತು. ಅಪ್ಪನ ಮಾತು ನನ್ನೊಳಗೆ ನೂರೆಂಟು ನೋವು ಹಡೆಯಿತು. ತಿಳಿಸಿ ಹೇಳಿದಾಗ ಕಲಿಸಲು ಮನಸು ಮಾಡಿದ. ಆದರೆ, ರೊಕ್ಕ ಕಡಿಮೆ ಬಿದ್ದು ಅಡ್ಡಗಾಲು ಒಗೆಯಿತು. ಅಪ್ಪ ಅಲ್ಲಿ ಇಲ್ಲಿ ಬಡ್ಡಿ ಸಾಲ ಮಾಡಿ ಕೊಟ್ಟ ರೊಕ್ಕ ತೆಗೆದುಕೊಂಡು ಅಂತೂ ಇಂತೂ ಕನಸಿನೂರು ಧಾರವಾಡ ಸೇರಿದೆ. *** ಬಯಲು ಸೀಮೆಯ ರಣ ರಣ ಸುರಿಯುವ ಬಿಸಿಲೂರಿಂದ ಬಂದ ನನಗೆ ಧಾರವಾಡದ ತಂಪೊತ್ತು ಹಾಯೆನಿಸಿತು. ನಮ್ಮೂರಲ್ಲಿ ಕುರಿ ಮೇಯಿಸಲು ಹೋದಾಗ ಹೀಗೆನಾದರೂ ತಂಪೊತ್ತು ಬಿದ್ದರೆ ಆಗ ಗಿಡದ ಎಲೆ ಹರಿದುಕೊಂಡು ಅದರಲ್ಲಿ ಉಗುಳಿ ತಂಪೊತ್ತು ಕಟ್ಟಿಕೊಂಡು ಬಕ್ಕಣದಲ್ಲಿ ಇಟ್ಟುಕೊಳ್ಳುತ್ತಿದ್ದೆವು. ಹೀಗೆ ಮಾಡಿದರೆ ಬಿದ್ದ ತಂಪೊತ್ತು ಹಾಗೇ ನಿಂತು ನಿರಂತರ ಮುಂದುವರೆಯುತ್ತದೆ ಎನ್ನುವ ನಂಬಿಕೆ ಇತ್ತು. ನಮ್ಮೂರು ಜಾಲಿಗಿಡಗಳ ಪೊದೆಗೆ ಸಾಟಿಯೇ ಇಲ್ಲ ಎಂದು ಬೀಗುತ್ತಿದ್ದ ನನಗೆ ಧಾರವಾಡದ ಹಸಿರು ಸೊಬಗು ನೋಡಿ ಹೀಗೂ ಉಂಟೆ ಅನಿಸಿತು. ಸಿನೇಮಾದಲ್ಲಿ ಬೆಂಗಳೂರು ನೋಡಿ ವಿಸ್ಮಯಗೊಂಡಿದ್ದ ನಾನು ಧಾರವಾಡದಲ್ಲೂ ಅಲ್ಲಿಯಂತೆಯೇ ಕಾಂಕ್ರಿಟ್ ಕಾಡಿನಂತೆ ತೋರುವ ಗಗನಚುಂಬಿ ಕಟ್ಟಡಗಳಿರಬಹುದು ಅಂತ ಭಾವಿಸಿದ್ದೆ. ನನ್ನ ಊಹೆ ತಲೆಕೆಳಗಾಗಿತ್ತು. ಇದು ಶಿಕ್ಷಣ ಕಾಶಿ ಎಂದು ಭಾವಿಸಿದ್ದ ನನಗೆ ಸಸ್ಯ ಕಾಶಿಯೂ ಹೌದೆನಿಸಿತು. ಇಲ್ಲಿ ಹೆಚ್ಚಾಗಿ ಚೆಂದಾಗಿ ತೋರುವಂತೆ ಹೆಂಚು ಹೊದೆಸಿದ ಮನೆಗಳಿವೆ. ಹಾಗಾಗಿ ಇದು ಪಟ್ಟಣ ಮತ್ತು ಹಳ್ಳಿಯನ್ನು ಕಲೆಸಿದಂತಿದೆ. ಮನೆಗಳಿಗೆ ಕಂಪೌಂಡ್, ಕೈ ತೋಟ ಇವೆ. ಅದರೊಳಗೆ ಹಚ್ಚಗೆ ತುಟಿ ತುಂಬಾ ನಗು ಚೆಲ್ಲಿ ನಿಂತಿರುವ ನಾನಾ ನಮೂನೆಯ ಗಿಡ-ಮರ, ಹೂವಿನ ಗಿಡಗಳು ಕಣ್ಣಿಗೆ ಹಬ್ಬವನ್ನುಂಟು ಮಾಡಿ ಮನಸು ರಸವಶವಾಗುವಂತೆ ಮಾಡುತ್ತವೆ. ಗಂಧವತಿ ಧಾರವಾಡದ ಮೈ ತುಂಬಾ ಬೆಳೆದು ಅರಳಿ ನಿಂತಿರುವ ಹೂ ಗಿಡಗಳು ಕಮ್ಮನೆಯ ಘಮ ಬೀರುತ್ತಾ ರಸಾನುಭವದಲ್ಲಿ ಮನ ಮಿಂದೇಳುವಂತೆ ಮಾಡುತ್ತವೆ. ಧಾರವಾಡದ ತುಂಬಾ ಇರುವ ಗುಲ್ಮೊಹರ್ ಗಿಡಗಳು ತಲೆ ತುಂಬಾ ಕಡುಗೆಂಪು ಹೂ ಮುಡಿದುಕೊಂಡು ಎದೆಯೊಳಗೆ ಹರೆಯ ತುಂಬಿಕೊಂಡ ಹುಡುಗಿಯರು ಪ್ರಿಯಕರನ ಕಣ್ಣ ಸನ್ನೆಗೆ ನಾಚಿ ನೆಲದ ಮ್ಯಾಲೆ ಕಾಲ ಹೆಬ್ಬೆರಳಿಂದ ಗೀರು ಎಳೆಯುತ್ತಾ ನಿಂತಿರುವಂತೆ ಮೋಹಕವಾಗಿ ಕಾಣುತ್ತವೆ. ನೆಲದ ಮ್ಯಾಲೆ ಚೆಲ್ಲಿ ಹೂವಿನ ಹಾಸಿಗೆಯಂತೆ ತೋರುವ ದೃಶ್ಯ ಪದಗಳ ಅಂಕೆಗೆ ನಿಲುಕದ ಕಾವ್ಯದಂತೆ ತೋರುತ್ತವೆ. ಧಾರವಾಡ ನಿಜಕ್ಕೂ ರೂಪವತಿ. ಗಂಧವತಿ. *** ಮೊದಲ ಮಳೆ ಅಂದ್ರೆ ಅದ್ಯಾಕೊ ಏನೊ ಎಲ್ಲರಿಗೂ ಜೀವಪ್ರೀತಿ. ಮಳೆಗೆ ಏಳುವ ಮಣ್ಣಿನ ಕಮ್ಮನೆ ಘಮದೊಂದಿಗೆ ನವಿರಾದ ನೂರೆಂಟು ನೆನಪುಗಳು ನಮ್ಮೊಳಗೆ ಸಾಲುಗಟ್ಟಿ ನಿಲ್ಲುತ್ತವೆ. ನಿಮಗೆ ಧಾರವಾಡದ ಮಳೆ ಬಗ್ಗೆ ಒಂದಿಷ್ಟು ಹೇಳಲೇಬೇಕು. ಇಲ್ಲಿ ಮಳೆಗಾಲ ಪಾದವೂರಿದ ಬಳಿಕ ಅದು ರೆಸ್ಟು ಮಾಡುವುದು ಬಹಳ ಅಪರೂಪ. ಅದಕ್ಕೆ ಗೈರು ಅಂದ್ರೆ ಮಹಾಬೋರು, ಅಲಜರ್ಿ. ಒಮ್ಮೊಮ್ಮೆ ಮನದುಂಬಿ ಧೋ ಧೋ ಎಂದು ಸುರಿದರೆ ಮತ್ತೊಮ್ಮೆ ಅಂಗಳಕ್ಕೆ ಚಳ ಹೊಡೆದಂತೆ ಜಿಟಿ ಜಿಟಿ ಸುರಿಯುತ್ತದೆ. ಮಗದೊಮ್ಮೆ ಬಿಸಿಲು, ಮಳೆ ಯಾವ ಭೇದ ಎಣಿಸಿದೆ ಎರಡೂ ಏಕತ್ರಗೊಂಡು ಹದವಾಗಿ ಸುರಿಯುತ್ತವೆ. ಈ ಮಳೆಯ ದೆಸೆಯಿಂದ ಧಾರವಾಡಿಗರ ಮತ್ತು ಕೊಡೆಯ ಅನನ್ಯ ಮೈತ್ರಿಗೆ ಅದ್ಯಾವತ್ತೂ ಶಾಪವಿಲ್ಲ. ಭಂಗವಿಲ್ಲ. ಮಳೆಗಾಲದಲ್ಲಿ ಯಾವ ಬೀದಿ ಕಡೆ ತಿರುಗಿ ನೋಡಿದರೂ ‘ಕೊಡ್ಯಾಧೀಶರ’ ಸಾಲು ಸಾಲು ಪಡೆ ಕಾಣುತ್ತವೆ. ಇದನ್ನು ಕಣ್ತುಂಬಿಕೊಳ್ಳುವುದೇ ಒಂದು ಚೆಂದ. ಹಸಿರು ಬಣ್ಣದ ಚೂಡಿ ಧರಿಸಿ ಶೃಂಗಾರಗೊಂಡು ಕಾಲೇಜಿಗೆ ಹೊರಟ ಹುಡುಗಿಯಂತೆ ತೋರುವ ಯುನಿವಸರ್ಿಟಿ ಕ್ಯಾಂಪಸ್ಸಿನ ಬೀದಿಗಳು ಕೊನೆಯಾಗುವವರೆಗೆ ಬೇಕಂತಲೇ ಕೊಡೆ ತ್ಯಜಿಸಿ ಮಳೆಗೆ ಮೈಯೊಡ್ಡಿ ಹಸಿರ ಸೊಬಗಿಗೆ ರಸವಶವಾಗುತ್ತ, ಸುರಿಯುವ ಮಳೆಗೆ ಆಹ್ಲಾದಗೊಳ್ಳುತ್ತ ಅದೆಷ್ಟೋ ಸಲ ನಡೆದದ್ದಿದೆ. ಮಳೆ ಉಸುರುವ ತಣ್ಣನೆ ಹವೆಗೆ ನೆಗಡಿಯಾದೀತೆಂಬ ಅಳುಕು ಒಳಗೊಳಗೆ ಇದ್ದರೂ ಹೀಗೆ ಮಳೆಗೆ ಮೈಯೊಡ್ಡಿ ನಡೆವಾಗ ನನ್ನೊಳಗಿನ ಕಲ್ಮಶತನವೆಲ್ಲಾ ಕೊಚ್ಚಿಕೊಂಡು ಹೋದಂತೆನಿಸಿ ಪದಗಳಿಗೆ ನಿಲುಕದಂತ ಅವರ್ಣನೀಯ ಖುಷಿಯಾಗುತ್ತಿತ್ತು. *** ಯುನಿವಸರ್ಿಟಿ ಕ್ಯಾಂಪಸ್ಸಿಗೆ ಹತ್ತಿಕೊಂಡೆ ನವೋದಯ ನಗರವಿದೆ. ಶಾಲ್ಮಲಾ ಹಾಸ್ಟೇಲಿನಿಂದ ಒಂದೆರಡು ಕಿಲೊ ಮೀಟರ್ ದೂರವಾಗಬಹುದು. ನಾವು ಇಲ್ಲಿಂದ ನವೋದಯ ನಗರದಲ್ಲಿ ಗುಡಿಸಲಿನಂತ ಹೋಟೆಲಿನಲ್ಲಿ ಊಟ ಮಾಡಲು ರಾತ್ರಿ ಒಂಬತ್ತರ ಹೊತ್ತಿಗೆ ಮುಖ ಮಾಡುತ್ತಿದ್ದೆವು. ಆ ಹೋಟೆಲಿನಲ್ಲಿ ಪ್ರತಿ ಬುಧವಾರಕ್ಕೊಮ್ಮೆ ಅಂಡಾಕರಿ ಮಾಡುತ್ತಿದ್ದರು. ನಾವು ಬ್ಯಾರೆ ಬ್ಯಾರೆ ದಿನ ಬ್ಯಾರೆ ಮೆಸ್ಗಳಲ್ಲಿ ಊಟ ಮಾಡಿದರೂ ಬುಧವಾರಕ್ಕೊಮ್ಮೆ ತತ್ತಿ ಊಟ ತಪ್ಪಿಸಿಕೊಳ್ಳುತ್ತಿರಲಿಲ್ಲ. ಒಂದಿನ ಗುಡಿಸಲ ಹೋಟಲಿಂದ ಊಟ ಮಾಡಿ ಹೊರ ಬರುವಾಗ ಅಚಾನಕ್ಕಾಗಿ ಹೋಟೆಲ್ ಎದುರಿನ ಮನೆ ಕಡೆ ಕಣ್ಣಾಯಿಸಿದೆ. ನನ್ನ ಕಣ್ಣು ನಂಬದೇ ಹೋದವು. ಆ ಮನೆಗ ಬಸವರಾಜ ಕಟ್ಟಿಮನಿ ಅಂತ ಬೋಡರ್ಿತ್ತು. ಖಾರ ಬರವಣಿಗೆಯ ಕಾದಂಬರಿಕಾರ ಕಟ್ಟಿಮನಿಯವರ ಮನೆ ಇರಬಹುದು ಅಂದೊಕೊಂಡು ಅಲ್ಲಿದ್ದ ಝರಾಕ್ಸ್ ಅಂಗಡಿಯಲ್ಲಿ ಕೇಳಿದೆ. ಅವರು ಹೌದೆಂದರು. ‘ಮೋಹದ ಬಲೆ’ ಕಾದಂಬರಿ ನೆನಪಾತು. ಅದ್ಯಾಕೊ ಭಾವುಕತೆ ಆವರಿಸಿತು. ಅವರಿದ್ದಿದ್ದರೆ ಮಾತಾಡಿಸಬಹುದಿತ್ತು ಅಂದುಕೊಂಡೆ. ಕಟ್ಟಿಮನಿಯವರ ಮನೆಯಿಂದ ಎರಡು ಮನೆ ದಾಟಿದರೆ ಅಲ್ಲಿ ಕಥೆಗಾರ ಗಿರಡ್ಡಿ ಗೋವಿಂದರಾಜರ ಮನೆ ಇದೆ. ಅವರು ನಾವು ನಿತ್ಯ ರಾತ್ರಿ ಊಟಕ್ಕೆ ಬರುವಾಗ ಕ್ಯಾಂಪಸ್ಸಿನ ಬೀದಿಯಲ್ಲಿ ಕಾಣುತ್ತಿದ್ದರು. ಬಹುಶಃ ಊಟ ಮಾಡಿದ ತರುವಾಯ ವಾಕ್ ಬರುತ್ತಿರಬಹುದು. ನಾನು ಅವರನ್ನು ಒಮ್ಮೆಯೂ ಮಾತಾಡಿಸಲಿಲ್ಲ. ಅವರನ್ನು ಮಾತಾಡಿಸಲು ಅದ್ಯಾಕೊ ಅಧೀರತೆ ಕಾಡುತ್ತಿತ್ತು. ಮೌನವೇ ಮೂತರ್ಿವೆತ್ತಂತೆ ಕಾಣುವ ಗಿರಡ್ಡಿಯವರು ಸಿಗರೇಟು ಸೇದಿ ಹೊಗೆ ಬಿಡುತ್ತಾ ತಮ್ಮ ಪಾಡಿಗೆ ತಾವು ಅದೇನನ್ನೊ ಧ್ಯಾನಿಸುತ್ತಾ ಹೆಜ್ಜೆ ಹಾಕುತ್ತಿದ್ದರು. ಅವರನ್ನು ದೂರದಿಂದ ನೋಡಿ ಸುಮ್ಮನೆ ಕಣ್ತುಂಬಿಕೊಳ್ಳುತ್ತಿದ್ದೆ. ಆಗಲೇ ಸಂಜೆ ಮುಗಿಲು ಕೆಂಪಾಗಿತ್ತು. ಅವೊತ್ತು ಭೀಮಾ ಹಾಸ್ಟೇಲಿನ ಹಿಂದುಗಡೆ ಇರುವ ಚಾದಂಗಡಿಯಲ್ಲಿ ಗೆಳೆಯರೆಲ್ಲಾ ಚಾ ಕುಡಿಯುತ್ತ, ಒಬ್ಬರನ್ನೊಬ್ಬರು ರೇಗಿಸುತ್ತಾ ಹರಟುತ್ತಾ ನಿಂತಿದ್ದೆವು. ಗೆಳೆಯನೊಬ್ಬ ಒಂದಿಷ್ಟು ದೂರದಲ್ಲಿ ಹೂವಿನ ಗಿಡದ ಬೇರು ಹಿಡಿದುಕೊಂಡು ಮೆಲ್ಲಗೆ ಹೊರಟಿದ್ದ ವೃದ್ದರ ಕಡೆ ಬೆರಳು ತೋರಿಸಿ ‘ಇವ್ರಿಗೆ ಯಾಕ ಬೇಕಿತ್ತು. ತಮ್ಮದ ತಮಗ ಜೋಲಿ ಸಾಲೂದಿಲ್ಲ. ವಾಕಿಂಗ್ ಮಾಡಿ ನೆಟ್ಟಗೆ ಮನಿಗೆ ಹೋಗೂದು ಬಿಟ್ಟು…’ ಅಂದ. ಆಕಸ್ಮಿಕವಾಗಿ ಅವರು ಹಿಂದಿರುಗಿ ನೋಡಿದರು. ನಮಗೆ ಶಾಕ್ ಹೊಡೆದಂತಾಯಿತು. ಕ್ಷಣ ಹೊತ್ತು ನಮ್ಮೊಳಗೆ ಪಾಪ ಪ್ರಜ್ಞೆ ಕಾಡಿತು. ಮನಸು ಒಳಗೊಳಗೆ ಶಾಂತಂ ಪಾಪಂ ಹೇಳಿತು. ನಮ್ಮ ಗೇಲಿತನಕ್ಕೆ ಪಿಚ್ಚೆನಿಸಿತು. ಅವರು ಚೆಂಬಳಕಿನ ಕವಿ ಚೆನ್ನವೀರ ಕಣವಿ ಆಗಿದ್ದರು. *** ನನ್ನ ಎಂ.ಎ.ದಿನಗಳಲ್ಲಿ ಶಾಲ್ಮಲಾ ಹಾಸ್ಟೇಲ್ ನನ್ನ ಅರಮನೆ. ಅಲ್ಲಿಯೇ ನನ್ನ ವಾಸ್ತವ್ಯ. ಅಲ್ಲಿಯ ನೆನಪುಗಳು ಮೊಗೆದಷ್ಟೂ ಖಾಲಿಯಾಗದ ನಮ್ಮೂರ ಹಳ್ಳದ ವತರ್ಿ ನೀರಂತೆ. ಹಾಸ್ಟೇಲಿನ ಅಣತಿ ದೂರದಲ್ಲಿ ಸಸ್ಯೋದ್ಯಾನವಿದೆ. ಇಲ್ಲಿ ಹುಬ್ಬಳ್ಳಿ-ಧಾರವಾಡದ ವಿವಿಧ ಏರಿಯಾಗಳಿಂದ ಆಗ ತಾನೆ ಕಣ್ತೆರೆದಿರುವ ‘ಲವ್ವರ್ ಬಡ್ಸರ್್’ ಗಳು ಹಾರಿಕೊಂಡು ವಲಸೆ ಬರುತ್ತವೆ. ಅದೇನೆನೊ ಪಿಸ ಪಿಸ ಮಾತಾಡಿಕೊಂಡು ರಸಗುಲ್ಲ ಸಿಹಿಯ ತುಟಿಮುತ್ತುಗಳನ್ನು ಅದಲು ಬದಲು ಮಾಡಿಕೊಂಡು ತಮ್ಮ ತಮ್ಮ ಗೂಡು ಸೇರುತ್ತವೆ. ಈ ಸಸ್ಯೋದ್ಯಾನದ ಅಕ್ರಮ ಕಾಲು ದಾರಿ ಬಳಸಿ ಹತ್ತಿರದಲ್ಲಿಯೇ ಇರುವ ನಮ್ಮ ಪತ್ರಿಕೋದ್ಯಮ ವಿಭಾಗಕ್ಕೆ ಹೋಗುತ್ತಿದ್ದೆವು. ಹಾಗೆ ಕಾಲು ದಾರಿ ಬಳಸಿಕೊಂಡು ಹೋಗುವಾಗ ಅಲ್ಲಿ ಬರುವ ಸ್ಮಶಾನದಲ್ಲಿ ‘ಮನುಜ ಮೂಳೆ ಮಾಂಸದ ತಡಿಕೆ…’ ಎಂದು ನೆನಪಿಸುವ ಸುಟ್ಟ ಶವಗಳ ಎಲಬುಗಳನ್ನು ದಾಟಿಕೊಂಡೇ ಹೋಗುತ್ತಿದ್ದೆವು. ಅದು ಸ್ಮಶಾನವಾಗಿದ್ದರೂ ಆ ರೌರವದ ಚಹರೆಗಳು ಇರಲಿಲ್ಲ. ಸೋಜಿಗವೆಂದರೆ ಆ ಸ್ಮಶಾನದ ಹಾಸುಗಲ್ಲ ಮ್ಯಾಲೆ ಕುಳಿತು ಓದಿಯೇ ನಾನು ಮತ್ತು ಕೆಲ ಗೆಳೆಯರು ಎಂ.ಎ. ಮುಗಿಸಿದ್ದು. ಸಂಜೆ ಹೊತ್ತು ಹಾಸುಗಲ್ಲ ಮ್ಯಾಲೆ ಕುಳಿತು ರಾಗರತಿಗೆ ರಂಗೇರುತ್ತಿರುವುದನ್ನು ಕಣ್ತುಂಬಿಕೊಳ್ಳುತ್ತಾ ಕುಳಿತಾಗ ಅಲ್ಲಿ ನಿತ್ಯ ಎಂಟತ್ತು ನವಿಲುಗಳು ಬರುತ್ತಿದ್ದವು. ಅವು ತಮ್ಮ ಪಾಡಿಗೆ ತಾವು ಮೈ ಮರೆತು ದಿನಚರಿಯಲ್ಲಿ ತೊಡಗಿಕೊಂಡಿರುವುದನ್ನು ನೋಡುವುದೇ ಒಂದು ಪರಮ ಭಾಗ್ಯ. ಒಂದಿನ ಹೀಗೆ ಕುಳಿತಾಗ ನಮ್ಮ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ನವಿಲ ಕುಣಿತದ ಬಗ್ಗೆ ಅಲ್ಲಿ ಇಲ್ಲಿ ಓದಿ ಬೆರಗುಗೊಂಡಿದ್ದ ನಾನು ಈವರೆಗೂ ನವಿಲು ಕುಣಿತ ನೋಡಿರಲಿಲ್ಲ. ಅವತ್ತು ನವಿಲು ಕುಣಿಯತೊಡಗಿತ್ತು. ನೋಡುತ್ತಿದ್ದ ನಮ್ಮೊಳಗೂ ಸಂಭ್ರಮ ಹುಚ್ಚೆದ್ದು ಕುಣಿಯಿತು. ಆ ಕುಣಿತವನ್ನು ಮನದಣಿಯೇ ನೋಡಿದೆ. ಆ ಕುಣಿತದ ಸೊಗಸನ್ನು ನನ್ನ ಕ್ಯಾಮೆರಾ ಕಣ್ಣುಗಳು ಅಚ್ಚಳಿಯದಂತೆ ಸೆರೆ ಹಿಡಿದವು. ಜೀವ ಧನ್ಯತಾ ಭಾವ ಅನುಭವಿಸಿತು. ಮನಸೊಳಗೆ ಅದೆಂತದೊ ಉಲ್ಲಾಸದ ಭಾವ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯಿತು. ಆ ಸ್ಮಶಾನದಲ್ಲಿ ಹೆಣ ಸುಟ್ಟೊ ಹೂಳಿಯೊ ಹೋಗುವಾಗ ಒಡೆದ ಟೆಂಗಿನ ಕಾಯಿಯ ಕೊಬ್ಬರಿ ಚೂರುಗಳು ಚಂದಿರನ ತುಣುಕುಗಳಂತೆ ಚೆಲ್ಲಿಕೊಂಡಿರುತ್ತಿದ್ದವು. ಅವು ನಮ್ಮ ಹಸಿದ ಹೊಟ್ಟೆ ಸೇರುತ್ತಿದ್ದವು. ಒಮ್ಮೊಮ್ಮೆ ಸತ್ತವರ ಬಯಕೆಗನುಸಾರವಾಗಿ ಸೇಬುಹಣ್ಣು, ಬಾಳೆ, ದ್ರಾಕ್ಷಿ, ಉತ್ತತ್ತಿ, ಬೇಯಿಸಿದ ತತ್ತಿ ಇಟ್ಟಿರುತ್ತಿದ್ದರು. ದೆವ್ವ ಮತ್ತು ದೇವರನ್ನು ನಂಬದ ನಾವು ಅದನ್ನು ಸಾಬೀತು ಪಡಿಸುವವರಂತೆ ಅವನ್ನೆಲ್ಲ ತಿಂದು ಸಂತೃಪ್ತಿಗೊಳ್ಳುತ್ತಿದ್ದೆವು. *** ಎಂ.ಎ.ಮುಗಿದ ನಂತರ ನಮ್ಮ ರೂಮು ಸಪ್ತಾಪುರ ಬಾವಿ ಹತ್ತಿರದ ನಾಯಕ ಕಂಪೌಂಡಿನಲ್ಲಿತ್ತು. ರಾತ್ರಿ ಒಂದು ಗಂಟೆಯಾಗಿರಬೇಕು. ಅದು ಇದು ಹರಟುತ್ತಾ ಕುಳಿತಿದ್ದ ಗೆಳೆಯರೆಲ್ಲಾ ಸಾಮೂಹಿಕ ಮೂತ್ರ ವಿಸರ್ಜನೆ ಮಾಡಲು ರೋಡಿಗೆ ಬಂದೆವು. ರಾತ್ರಿಯ ಕತ್ತಲು ಜಲ ಜಲ ಸುರಿಯತೊಡಗಿತ್ತು. ಅಲ್ಲೊಂದಿಲ್ಲೊಂದು ಬೀದಿ ದೀಪಗಳು ಪಿಳಿ ಪಿಳಿ ಕಣ್ಣು ಬಿಡತೊಡಗಿದ್ದವು. ತಂಡಿ ಗಾಳಿ ಸಣ್ಣಗೆ ಸೆರಗು ಬೀಸತೊಡಗಿತ್ತು. ಉಚ್ಚೆ ಹೊಯ್ದು ನಿರುಮ್ಮಳವಾದ ನಾವು ಇನ್ನೇನು ರೂಮಿನ ಕಡೆ ಪಾದ ಬೆಳೆಸಬೇಕು ಅನ್ನುವಷ್ಟರಲ್ಲೇ ಬಾವಿ ಹತ್ತಿರ ದೊಪ್ಪೆಂದು ಸಪ್ಪಳವಾಯಿತು. ನೋಡಿದರೆ ಅಷ್ಟು ದೂರದಲ್ಲಿ ಬೈಕ್ ಸವಾರ ಬಿದ್ದಿದ್ದ. ಗೆಳೆಯರೆಲ್ಲಾ ಅಲ್ಲಿಗೆ ದೌಡಾಯಿಸಿದೆವು. ನಾವು ಅಲ್ಲಿಗೆ ತಲುಪುವುದರೊಳಗೆ ಸುತ್ತಣ ಮನೆಯವರು ಬಿದ್ದ ಬೈಕ್ ಸವಾರನಿಗೆ ನೀರು ಚಿಮುಕಿಸಿ, ಗಾಳಿ ಹಾಕತೊಡಗಿದ್ದರು. ನನಗೆ ಅದ್ಯಾಕೊ ಬೆಂಗಳೂರಿನ ಮೆಜೆಸ್ಟಿಕ್, ಅಲ್ಲಿನ ಹಗಲು ದರೋಡೆ, ಆ ಊರಿನ ತೋರಿಕೆಯ ಕೃತಕ ಸಂಬಂಧಗಳು ನೆಪ್ಪಾದವು. ಧಾರವಾಡ ಆಪ್ತವೆನಿಸಿ ಮನಸ್ಸು ಒಳಗೊಳಗೆ ಸೆಲೂಟ್ ಹೊಡೆಯಿತು.   -ಟಿ.ಎಸ್.ಗೊರವರ  

ಪುಸ್ತಕಕ್ಕಾಗಿ ಪ್ರಕಾಶಕರಾದ ಪಲ್ಲವ ವೆಂಕಟೇಶ ಮೊ : 9480353507 ಸಂಪಕರ್ಿಸಬಹುದು.

 ]]>

‍ಲೇಖಕರು G

8 June, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading