ಟಿ ಎನ್ ಸೀತಾರಾಂ ಹೇಳಿದ ಸಿದ್ದಲಿಂಗಯ್ಯನವರ ಕಥೆಗಳು

 

ಟಿ ಎನ್ ಸೀತಾರಾಮ್

ಕವಿ ಸಿದ್ಧಲಿಂಗಯ್ಯ ನವರನ್ನು ನಾನು ಒಮ್ಮೆ ಜೀವರಾಜ್ ಆಳ್ವ ಅವರ ಬಳಿ ಕರೆದುಕೊಂಡು ಹೋಗಿದ್ದೆ… ಆಗ ಜೀವರಾಜ್ ಅವರು ನಗರಾಭಿವೃದ್ಧಿ ಸಚಿವರಾಗಿದ್ದರು… ಅತ್ಯಂತ ಸರಳ ಮತ್ತು ಅಪಾರ ಪ್ರಭಾವವಿದ್ದ ಮನುಷ್ಯ ಅವರು…

ಸಿದ್ಧಲಿಂಗಯ್ಯ ನವರು ಅವರನ್ನು ಕರೆದುಕೊಂಡು ಹೋಗಿ ಜೀವರಾಜ್ ಅವರಿಗೆ ಪರಿಚಯ ಮಾಡಿಸಲು ಕೇಳಿದ್ದರು… ನನಗೆ ನಗು ಬಂದಿತ್ತು… ಆ ವೇಳೆಗಾಗಲೇ ಸಿದ್ಧಲಿಂಗಯ್ಯ ನವರು ತಮ್ಮ ಕಾವ್ಯದಿಂದಾಗಿ ಇಡೀ ರಾಜ್ಯದಲ್ಲಿ ಬಹಳ ಪ್ರಸಿದ್ಧರಾಗಿದ್ದರು… ಅವರ ಕಾವ್ಯದ ಸಾಲುಗಳು ರಾಜ್ಯದ ಅನೇಕ ಚಳುವಳಿಗಳಿಗೆ ಮುನ್ನುಡಿಯಾಗಿತ್ತು…

೧೯೮೩ ರಲ್ಲಿ ರಲ್ಲಿ ಗುಂಡೂರಾಯರ ಕಾಂಗ್ರೆಸ್ ಸರಕಾರ ಧೂಳೀಪಟ ಆಗುವುದರ ಹಿಂದೆ ಸಿದ್ಧಲಿಂಗಯ್ಯನವರ ಕಾವ್ಯದ ಸಾಲುಗಳ ಪಾಲು ಕೂಡ ಒಂದಷ್ಟಿತ್ತು…ಅಂಥವರು ಜೀವರಾಜ್ ಅವರ ಮನೆಗೆ ಕರೆದುಕೊಂಡು ಹೋಗಿ ಪರಿಚಯ ಮಾಡಿಸಲು ಕೇಳಿದಾಗ ನನಗೆ ಸಹಜವಾಗಿಯೇ ನಗು ಬಂದಿತ್ತು…

” ಅಲ್ಲ ಕವಿಗಳೇ… ನೀವು ಎಷ್ಟು ಪ್ರಖ್ಯಾತರು… ನಿಮ್ಮ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ… ನಾನು ಏಕೆ ಬರಬೇಕು.. ” ಎಂದೆ…

“ನಾನು ಸ್ವಲ್ಪ ಫೇಮಸ್ ಇರಬಹುದು ಗುರುಗಳೇ… ಆದರೆ ಜೀವರಾಜ್ ಆಳ್ವ ಅವರನ್ನು ನಾನು ಇದುವರೆಗೆ ಭೇಟಿ ಆಗಿಲ್ಲ… ನಾನು ಸ್ವಲ್ಪ ಚಿಲ್ಟು ಥರ ಇದ್ದೇನೆ… ನಾನೇ ಕವಿ ಸಿದ್ಧಲಿಂಗಯ್ಯ ಅಂತ ನಾನು ಹೇಳಿಕೊಂಡರೆ ಅವರು ನಂಬದೆ ಇದ್ದರೆ ಏನು ಮಾಡೋದು…. ಲೇಯ್ ಇವನು ರೀಲ್ ಬಿಡ್ತಾ ಇದ್ದಾನೆ… ತಳ್ರೋ ಇವನ್ನ ಆಚೆಗೆ ಅಂತ ಅವರು ಅಂದರೆ ಏನು ಮಾಡೋದು ಗುರುಗಳೇ… ನೀವೇ ಕರಕೊಂಡು ಹೋಗಬೇಕು” ಅಂದರು….
ಸಿದ್ಧಲಿಂಗಯ್ಯನವರು ತಮ್ಮನ್ನು ತಾವೇ ತಮಾಷೆ ಮಾಡಿಕೊಳ್ಳುವುದರಲ್ಲಿ ನಿಸ್ಸೀಮ…

ನನಗೂ ಆಗ ಬೇರೆ ಉದ್ಯೋಗ ಮತ್ತು ಕೆಲಸ ಎರಡೂ ಇಲ್ಲದ್ದರಿಂದ ಕರೆದುಕೊಂಡು ಹೋದೆ…. ನಾನು ತುರ್ತುಪರಿಸ್ಥಿತಿಯಲ್ಲಿ ಇಂದಿರಾಗಾಂಧಿ ವಿರುದ್ಧ ಹೋರಾಟದ ಸಮಯದಲ್ಲಿ ಸ್ವಲ್ಪ ಆಕ್ಟಿವ್ ಆಗಿದ್ದುದರಿಂದ ನನಗೂ ಜೀವರಾಜ್ ಅವರಿಗೂ ಪರಿಚಯ ಆಗಿ ಸ್ನೇಹ ಬೆಳೆದಿತ್ತು… ಸಿದ್ಧಲಿಂಗಯ್ಯ ನವರನ್ನು ಪರಿಚಯ ಮಾಡಿಸಿದಾಗ ಅವರು ನಕ್ಕುಬಿಟ್ಟರು

” ಇಂಥಾ ಖ್ಯಾತ ಕವಿಯ ಪರಿಚಯ ಯಾರಿಗೆ ಇರಲ್ಲ… ಯಾಕೆ ಹೀಗೆ ಅವಮಾನ ಮಾಡ್ತೀರಿ ನನಗೆ ” ಎಂದರು…

ಆಮೇಲೆ ಅವರನ್ನು ಹೆಗಡೆಯವರು ವಿಧಾನ ಪರಿಷತ್ ಸದಸ್ಯರನ್ನಾಗಿ ಕೂಡ ನಾಮಕರಣ ಮಾಡಿಸಿದರು… ಅವರು ಪರಿಷತ್ ನಲ್ಲಿ ಸುಮ್ಮನೆ ಕೂಡಲಿಲ್ಲ… ಪ್ರತಿದಿನ ಸರಕಾರಕ್ಕೆ ಪ್ರಶ್ನೆಗಳನ್ನು ಹಾಕಿ ಇಕ್ಕಟ್ಟಿಗೆ ಸಿಕ್ಕಿಸುತ್ತಿದ್ದರು…

” ಸದನದಲ್ಲಿ ಸಿದ್ಧಲಿಂಗಯ್ಯ ” ಪುಸ್ತಕದಲ್ಲಿ ಅವರೆಷ್ಟು ಜನಪರ ಕೆಲಸಗಳನ್ನು ಮಾಡಿದರೆಂದು ವಿವರಗಳಿವೆ..
ನನಗೆ ಅತ್ಯಂತ ಆತ್ಮೀಯ ವ್ಯಕ್ತಿಗಳ ಪೈಕಿ ಕವಿಗಳು ಮುಖ್ಯರು…

ಇಷ್ಟು ತಮಾಷೆಯ ವ್ಯಕ್ತಿಯನ್ನು ನಾನು ಕಂಡೇ ಇಲ್ಲ.. ಎಷ್ಟು ಹೃದಯವಂತ ವ್ಯಕ್ತಿ ಎಂದರೆ… ನನ್ನ ಅನೇಕ ಕಷ್ಟಗಳಿಂದಾಗಿ ಒಮ್ಮೆ ನಾನು almost ಖಿನ್ನತೆಯನ್ನು ಅನುಭವಿಸಿದ್ದೆ… ಆಗ ಒಂದಷ್ಟು ದಿನ ಹಗಲೂ ರಾತ್ರಿ ನನ್ನ ಜತೆ ಇದ್ದು ವಿನೋದದ ವಾತಾವರಣ ಸೃಷ್ಟಿಸಿ ನನ್ನನ್ನು ಸರಿ ಮಾಡಿದ್ದರು…. ಅವರ ಜ್ಞಾನ, ಕಾಳಜಿ , ಎಲ್ಲರ ಬಗೆಗಿನ ಪ್ರೀತಿ…..

ಅವರು ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡಾಗ ಮೊದಲ ದಿನ ಅವರು ವಿಧಾನ ಸೌಧಕ್ಕೆ ಹೋಗಿ ಅಲ್ಲಿಂದ ನನಗೆ ತುರ್ತಾಗಿ ಅಲ್ಲಿಗೆ ಬರುವಂತೆ ಫೋನ್ ಮಾಡಿದರು… ಏನೋ ಪ್ರಾಬ್ಲಮ್ ಆಗಿದೆ ಎಂದು ಹೇಳಿದರು….. ನಾನು ಅಲ್ಲಿಗೆ ಆಟೋ ದಲ್ಲಿ ಹೋದಾಗ ಗೇಟ್ ಆಚೆ ನಿಂತಿದ್ದರು…. ಗೇಟ್ ನಲ್ಲಿದ್ದ ಪೋಲಿಸೆನವರು ಅವರನ್ನು ಒಳಗೆ ಬಿಟ್ಟಿರಲಿಲ್ಲ… !

” ನೋಡಿ ಗುರುಗಳೇ… ನಾನು MLC ಅಂದರೆ ಇವರು ನಂಬುತ್ತಾ ಇಲ್ಲ… ಇನ್ನೂ ಆದೇಶ ಕೈಗೆ ಸಿಕ್ಕಿಲ್ಲ… ಅದನ್ನು ಒಳಗೆ ಹೋಗಿ ತಗೋಬೇಕು… ಹೇಳಿದರೆ ಇವರು ನಂಬುತ್ತಾ ಇಲ್ಲ…ಒಳಗೆ ಬಿಡ್ತಾ ಇಲ್ಲ…. ನನಗೆ ಸೀಟ್ ಸಮಸ್ಯೆ ಇಲ್ಲ ಗುರುಗಳೇ… ಗೇಟ್ ಸಮಸ್ಯೆ…. ” ಎಂದರು… !
 
 

‍ಲೇಖಕರು G

June 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

 1. Dr.T.N.Venkata subba rao

  ಅದ್ಭುತ ಹಾಸ್ಯಪ್ರಜ್ಞೆ , ಸಿದ್ದಲಿಂಗಯ್ಯನವರ ವ್ಯಕ್ತಿತ್ವದ ಒಂದು ಬಹು ಮುಖ್ಯ ಭಾಗ ಅಂತ ಬಹಳ ಕೇಳಿದ್ದೆ ,ಅಲ್ಲಲ್ಲಿ ಓದಿದ್ದೆ. ಇಂಥದ್ದೇ, ತುಂಬಾ ನಗು ಬರುವಂಥ ಸಿದ್ದಲಿಂಗಯ್ಯನವರ ಅದ್ಯಾವುದೋ ಒಂದು ಕೋಡುಬಳೆ /ಚಕ್ಕುಲಿ ಪ್ರಕರಣ ಒಂದಿದೆ ವಿವರಗಳು ಸರಿಯಾಗಿ ನೆನಪಿಲ್ಲ . ಯಾರಿಗಾದರೂ ಗೊತ್ತಿದ್ದರೆ ಇಲ್ಲಿ ಶೇರ್ ಮಾಡಿದರೆ ಒಳ್ಳೇದು . Boy ! ,this man is humorous to the core . ಸೀತಾರಾಂ ,as always has narrated it so well . . .. .

  ಪ್ರತಿಕ್ರಿಯೆ
 2. ಲಲಿತಾ ಸಿದ್ಧಬಸವಯ್ಯ

  hahhha , seat samasye illa gate samasye !!!

  ಪ್ರತಿಕ್ರಿಯೆ
 3. ಅಕ್ಕಿಮಂಗಲ ಮಂಜುನಾಥ

  ಜನ ತುಂಬಿದ ಬಿ.ಟಿ.ಎಸ್.ಡ್ರೈವರ್ ನ ಮೇಲೆ ದೇವರು ಬಂದು ಬಿಟ್ಟರೆ ಎನ್ನುವ ಕತೆ ಓದಿದ್ದೆ. ಮೊನ್ನೆ ಮೊನ್ನೆ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮೈ ಮೇಲೆ ಬರುವಾತನ ಮನೆಯ ಕುರಿಯನ್ನು ಕತ್ತರಿಸಲು ಆತ ನಿರಾಕರಿಸುವ ತಮಾಷೆ ಕತೆ ಹೇಳಿದ್ದರು. ಈಗ ಅವರ ಗೆಳೆಯರಾದ ಟಿ.ಎನ್.ಸೀ.ಅವರ ಹಾಸ್ಯ ಪ್ರಜ್ಞೆಯನ್ನು ಮತ್ತಷ್ಟು ಹೇಳಿದ್ದಾರೆ.ಸಿದ್ದಲಿಂಗಯ್ಯನವರ ಲೇಖನಗಳಲ್ಲಿ ಹಾಸ್ಯ ಪ್ರಜ್ಞೆಯ ಜೊತೆಗೆ ಸಮಾಜದ ಅಂಕು ಡೊಂಕುಗಳ ವಿಡಂಬನೆಯೂ ಪ್ರಧಾನವಾಗಿ ಎತ್ತಿ ಕಾಣುತ್ತದೆ.

  ಪ್ರತಿಕ್ರಿಯೆ
 4. ತಿರುಪತಿ ಭಂಗಿ

  ಸಿದ್ದಲಿಂಗಯ್ಯನವರದು ತುಂಬಾ ವಿನೋದ ಹಾಸ್ಯ…ಊರು ಕೇರಿಯಲ್ಲಂತೂ ತಮ್ಮನ್ನು ತಾವೇ ಅದೆಷ್ಟೋ ಹಾಸ್ಯಕ್ಕೆ ತೊಡಕಿಸಿ ನಗಿಸಿದ್ದಾರೆ.

  ಪ್ರತಿಕ್ರಿಯೆ
 5. ಟಿ.ಕೆ.ಗಂಗಾಧರ ಪತ್ತಾರ.

  ಸಿದ್ಧಲಿಂಗಯ್ಯನವರಂಥವರನ್ನೂ ಬಿಡದ “ಗೇಟ್” ಸಮಸ್ಯೆಯ ಸುಳಿಯಲ್ಲಿ ನಾನೂ ಹಲವು ಬಾರಿ ನೋವು-ಬೇವು “ಸವಿ”ದಿದ್ದೇನೆ. ಏನೂ ಅಲ್ಲದ ಶಾಸಕರ ಚಮಚಾ ಪುಢಾರಿಗಳಿಗೂ ಡೊಗ್ಗು ಸಲಾಂ ಹೊಡೆದು ಮರ್ಯಾದೆಯಿಂದ ಒಳಗೆ ಬಿಡುವ ಆರಾಕ್ಷಸರು ಕ್ಷಮಿಸಿ ಆರಕ್ಷಕರು ಇತರರ ಯಾವ ಮಾತನ್ನೂ ಕಿವಿಗೆ ಹಾಕಿಕೊಳ್ಳುವಷ್ಟು ಸೌಜನ್ಯವನ್ನೂ ತೋರಲಾರರು. 1983ರಿಂದ2014ರ ವರೆಗೆ ಬಳ್ಳಾರಿ ಮೆಡಿಕಲ್ ಕಾಲೇಜಿನ ವೈದ್ಯಕೀಯ ಸ್ನಾತಕ-ಸ್ನಾತಕೋತ್ತರ ಪ್ರವೇಶಾತಿ ವಿಭಾಗದ ನೌಕರನಾಗಿದ್ದ ನಾನು, ಹಲವು ಬಾರಿ ಅಧಿಕೃತ ನಿಯೋಜನಾ ಆದೇಶದೊಂದಿಗೆ ಕಡತಗಳನ್ನು ತೆಗೆದುಕೊಂಡು ಹೋಗುತ್ತಿದ್ದೆ. ನಾನು ತೋರಿಸುತ್ತಿದ್ದ ಅಧಿಕೃತ ನಿಯೋಜನಾದೇಶವನ್ನು ಕಣ್ಣೆತ್ತಿ ನೋಡದೇ ವಿಧಾನ ಸೌಧ ನೋಡಬೇಕಂದ್ರೆ ಯಾವ್ಯಾವ್ದೋ ಲೆಟರ್ ಹಿಡಕೊಂಡು ಬಂದುಬಿಡ್ತಾರೆ ಬಡ್ಡೀಮಕ್ಳು ಎಂದು ದೂರ ತಳ್ಳುತ್ತಿದ್ದರು. ಹಾಗೆ ಹೋದಾಗ ಗೇಟ್ ಸಮಸ್ಯೆಯಲ್ಲಿ ನಲುಗುತ್ತಿದ್ದಾಗಲೇ ಒಮ್ಮೆ ಕಾರಿನಿಂದಿಳಿದು ಬಿ.ಟಿ.ಲಲಿತಾನಾಯಕ ಒಳಗೆ ಹೋದರು. ಅವರು 1978ರಿಂದಲೂ ಬಹಳ ಆತ್ಮೀಯರು. ಇವತ್ತಿಗೂ ನನ್ನನ್ನು “ಗಂಗೂ”ಎಂದು ಕರೆಯುವಷ್ಟು ಸಲಿಗೆ ಹೊಂದಿದ್ದಾರೆ. ನಾನೂ ಅವರನ್ನು “ಅಕ್ಕಾ”ಎಂದೇ ಕರೆಯುತ್ತೇನೆ. ಅವರ ಪುತ್ರ ರವೀಂದ್ರನಾಥ ನಮ್ಮ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್.ಓದುತ್ತಿದ್ದ ಸಮಯದಲ್ಲಿ ಮಗನನ್ನು ಕಾಣಲು ಬರುತ್ತಿದ್ದವರು ಸೀದಾ ನಮ್ಮ ಮನೆಗೇ ಬರುತ್ತಿದ್ದರು. ಅವರನ್ನು ಕೂಗಿದ್ದರೆ ಖಂಡಿತಾ ಅವರು ನನ್ನನ್ನು ನೋಡಿ ಜೊತೆಯಲ್ಲೇ ಕರೆದುಕೊಂಡು ಹೋಗುತ್ತಿದ್ದರು. ಆದರೆ ನನಗೇಕೋ ಅದು ಸರಿಯೆನಿಸಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಆಗ ಬೆಂಗಳೂರಿನಲ್ಲೇ ಡಿ.ವೈ.ಎಸ್.ಪಿ.ಆಗಿದ್ದ ನನಗೆ ಆತ್ಮೀಯರಾಗಿದ್ದ ಕೊಪ್ಪಳದ ಬಿ.ಎಸ್.ಪಾಟೀಲರವರು ಆಕಾಸ್ಮಾತ್ ನನ್ನನ್ನು ನೋಡಿ ಒಳಗೆ ಹೋಗುತ್ತಿದ್ದವರು ಬಳಿಬಂದು ವಿಚಾರಿಸಿ ಒಳಗೆ ಕರೆದುಕೊಂಡು ಹೋದರು. ಇನ್ನೊಂದು ಸಲ ಗೇಟ್ ಸಮಸ್ಯೆಯಲ್ಲಿದ್ದಾಗಲೇ ಶಾಸಕ ಬಸವರಾಜ ರಾಯರೆಡ್ಡಿ ಒಳಗೆ ಹೋಗುತ್ತಿದ್ದರು. ಅವರು ನಮ್ಮ ಸ್ವಗ್ರಾಮ ತಳಕಲ್ಲಿನವರು. ಕೆಲವು ದಿನ ಅವರ ಮನೆಗೇ ಹೋಗಿ ಟ್ಯೂಷನ್ ಹೇಳಿದ್ಳುದೇನೆ. ನೋಡಿದ್ದರೆ ಖಂಡಿತಾ ಜೊತೆ ಕರೆದುಕೊಂಡು ಹೋಗುತ್ತಿದ್ದರು. ಅವರನ್ನು ಕೇಳಲು ಮನಸ್ಸು ಒಪ್ಪಲಿಲ್ಲ. ಕೊನೆಗೆ ಒಬ್ಬರು ಯಾರೋ ಪುಣ್ಯಾತ್ಮ ಆರಕ್ಷಕಾಧಿಕಾರಿ ನನ್ನ ನಿಯೋಜನಾದೇಶ ಓದಿ “ದ್ವಾರಪಾಲಕ”ರಿಗೆ ಛೀಮಾರಿ ಹಾಕಿ ಒಳಗೆ ಬಿಟ್ಟರು. ಇನ್ನೊಂದು ಸಲ ವಿಧಾನಸೌಧದಲ್ಲಿ ಕರೆದಿದ್ದ ಮಾನ್ಯ ವೀರಪ್ಪ ಮೊಯಿಲಿಯವರ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮೀಟಿಂಗಿಗೆ ಕೆಲವು ಅತ್ಯಂತ ಮಹತ್ವದ ದಾಖಲೆಗಳನ್ನೊದಗಿಸಲು ನಿಯೋಜಿತನಾಗಿದ್ದೆ. ಸುಮಾರು ಒಂದು ಗಂಟೆ ಕಾಡಿಸಿದರು. ಮೀಟಿಂಗಿನಲ್ಲಿ ನಮ್ಮ ದಾಖಲೆ ಸಲ್ಲಿಸುವ ಸಮಯದಲ್ಲಿ ನಾನು ಹಾಜರಿರದಿದ್ದರೆ ಕರ್ತವ್ಯಚ್ಯುತಿಗಾಗಿ ನಾನು ಅಮಾನತ್ತು ಗೊಳ್ಳುವ ಸಾಧ್ಯತೆಯೂ ಇತ್ತು. ಆದರೆ ನನ್ನ ಯಾವ ಅಹವಾಲೂ ಒಳಗೆ ಬೀಳದಷ್ಟು ಅವರ ಕಿವಿಗಳ ಚರ್ಮ ದಪ್ಪವಾಗಿತ್ತು. ಕೊನೆಗೆ ಅಲ್ಲಿ ಬಂದ ಒಬ್ಬ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನನ್ನ ವಿಷಯ ಮನವರಿಕೆಯಾಗಿ ಅವರೂ ಅದೇ ಮೀಟಿಂಗಿಗಾಗಿ ಬಂದವರಾದ್ದರಿಂದ ಜೊತೆಗೇ ನನ್ನನ್ನು ಕರೆದುಕೊಂಡು ಹೋದರು. ಈ ಗೇಟ್ ಸಮಸ್ಯೆಯ ಅನುಭವ ಸಾಕಷ್ಟಿವೆ,

  ಪ್ರತಿಕ್ರಿಯೆ
 6. ಟಿ.ಕೆ.ಗಂಗಾಧರ ಪತ್ತಾರ.

  ಕೆಲವು ದಿನ ಅವರ ಮನೆಗೇ ಹೋಗಿ ಟ್ಯೂಷನ್ ಹೇಳಿದ್ದೇನೆ ಎಂಬಲ್ಲಿ “ಹೇಳಿದ್ಳುದೇನೆ” ಎಂಬುದು ಪ್ರಮಾದದಿಂದಾದ ಕೈತಪ್ಪು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: