ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಿ ಎನ್ ಸೀತಾರಾಂ ಉತ್ತರ: ನಾನು ಕೇವಲ showman ಅಷ್ಟೇ..

‘ಮುಕ್ತ.. ಮುಕ್ತ..’ ಮುಗಿಯುವ ಸೂಚನೆ ನೀಡಿದ ಟಿ ಎನ್ ಸೀತಾರಾಂ ಅವರು ಮುಂದೇನು ಮಾಡಬೇಕು ಹೇಳಿ ಎಂದು ವೀಕ್ಷಕ, ಓದುಗರನ್ನು ಕೇಳಿದ್ದರು. ಒಂದಿಷ್ಟು ಆಪ್ಷನ್ಸ್ ಮುಂದಿಟ್ಟಿದ್ದರು. ಅದು ಇಲ್ಲಿದೆ. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಹರಿದುಬಂದಿದೆ. ಫ್ರಾನ್ಸ್ ನಿಂದ ವಿದ್ಯಾಶಂಕರ ಹರಪನಹಳ್ಳಿ ಅವರು ಒಂದು ಗಂಭೀರ ಪತ್ರ ಬರೆದಿದ್ದರು ಅದು ಇಲ್ಲಿದೆ. ಅದಕ್ಕೆ ಟಿ ಎನ್  ಸೀತಾರಾಂ ಪ್ರತಿಕ್ರಿಯಿಸಿದ್ದಾರೆ. ಓದಿ. ನಿಮ್ಮ ಅಭಿಪ್ರಾಯವನ್ನೂ ತಿಳಿಸಿ.. ಮಾನ್ಯ ಶ್ರೀ ವಿದ್ಯಾಶಂಕರ್ ಅವರೇ, ನಮಸ್ಕಾರ, ನನಗೆ ಫ್ರಾನ್ಸ್ ನಿಂದ ಬಂದ ಮೊದಲ ಪತ್ರ ಎಂಬ ಕಾರಣಕ್ಕೆ ನನಗೆ ಸಂತೋಷವಾಗುತ್ತಿದೆ.. ನಾನು options ಕೊಟ್ಟಿದ್ದು ನಿಮಗೆ ತಮಾಷೆಯಾಗಿ ಕಂಡಿದೆ.. ಸಾವನ್ನೂ ಕೂಡ ತಮಾಷೆಯಾಗಿ ಕಂಡವರು ನನಗೆ ಬೇಕಾದಷ್ಟು ಜನ ಗೊತ್ತು.. ಹಾಗಾಗಿ ನಿಮ್ಮ sense of humour ನನಗೆ ಹೆಚ್ಚು ಕಾಡಿಸಲಿಲ್ಲ..! ಇದಿಷ್ಟು ತಮಾಷೆ ಆಯಿತು.. ಗಂಭೀರವಾಗಿ ಹೇಳುವುದಾದರೆ .. ನಿಮ್ಮದು ಉಡಾಫೆಯ ಪ್ರಶ್ನೆಗಳು ಅಲ್ಲ.. ನಿಮ್ಮ ಚಿಂತನೆ ಪ್ರೌಢವಾಗಿದೆ.. ಆದರೆ ತಮಗೆ ಕೆಲವು ತಪ್ಪು ಅಭಿಪ್ರಾಯಗಳು ಇದೆ ಅನಿಸುತ್ತೆ.. ನಾನು, ಲಂಕೇಶ್ ಆಗಲಿ, ಭೀಮಸೇನ ಜೋಷಿಯಾಗಲೀ, ಕೆ ಎಸ್.ನರಸಿಂಹಸ್ವಾಮಿಯಾಗಲೀ, ರಾಜಕುಮಾರ್ ಆಗಲೀ ಖಂಡಿತಾ ಅಲ್ಲ.. ಆಗಿರಬಹುದೆನ್ನುವ ಭ್ರಮೆಯೂ ನನಗಿಲ್ಲ. ಅವರೆಲ್ಲ ಅಗಾಧ ಜೀವದ್ರವದ ಮೂಲಕ ಅನುಭವ ಕಟ್ಟಿಕೊಟ್ಟವರು.. ಅದರಲ್ಲಿ ಕೆಲವರು ಆತ್ಮನಿರ್ದೇಶಿತರು.. ಆತ್ಮದ ಪಿಸುನುಡಿಗಳಿಗೆ ಹೃದಯದ ಕಿವಿ ತೆರೆದವರು.. ರಾಜಕುಮಾರ್ ಅವರನ್ನು ಬಿಟ್ಟು ಮಿಕ್ಕವರ ಕಲಾಪ್ರಾಕಾರಗಳು ಅತ್ಯಂತ ಖಾಸಗಿ ಸಂಭಾಷಣೆಗಳು.. ಅನೇಕ ಸಾವಿರ ಪಾತ್ರಗಳನ್ನು ಹೊತ್ತ ಏಕಪಾತ್ರಾಭಿನಯಕಾರರು.. ಅವರು ಬೇರೆಯವರ ಅಭಿಪ್ರಾಯ ಪಡೆಯುವ ಅವಶ್ಯಕತೆ ಇರಲಿಲ್ಲ.. ಕಾವ್ಯ ಪ್ರಜಾಪ್ರಭುತ್ವದ ಚುನಾವಣೆಗೆ ಸ್ಪರ್ಧಿಸುವುದಿಲ್ಲ .. ಆದರೆ ನಾನು ? ಕೇವಲ showman.. ಆತ್ಮದ ಪಿಸುಮಾತುಗಳೆಲ್ಲವೂ ನನ್ನ ಬದುಕಿನ ವಿಷಾದದ ಅಧ್ಯಾಯಗಳಲ್ಲಿ ಸತ್ತರೂ ಉಸಿರಾಡುತ್ತಾ ಕೂತಿವೆ.. ನನ್ನ ಶೋ ಮಧ್ಯೆ ಎಲ್ಲೋ ಒಂದು ಕಡೆ ಧ್ವನಿಸಿದರೆ ನನ್ನ ಪುಣ್ಯ.. ಅದು ಬಿಟ್ಟರೆ ನನಗೆ ಬೇಕಾದ್ದು ಜನದ ಮೆಚ್ಚುಗೆ.. ಮತ್ತು ಆ ಮೆಚ್ಚುಗೆ ಚಪ್ಪಾಳೆಯ ಸದ್ದಿಗಿಂತ ಸೂಕ್ಷ್ಮವಾಗಿರಬೇಕು ಅಷ್ಟೇ.. ಇದನ್ನು TRP ಎಂದು ಕರೆದರೆ ನನಗೆ ಕೋಪವಿಲ್ಲ..TRP ಅಂದರೆ ಮೆಚ್ಚುಗೆ ಅಷ್ಟೇ.. ನಾನು ಏನು ಕೊಡಬಲ್ಲೆ ಮತ್ತು ವೀಕ್ಷಕರ ಸಂತೋಷ ;ಇವುಗಳ ಸಮನ್ವಯತೆಯೇ ನನ್ನಂಥ showman ನ ಅಂತಿಮ ಉದ್ದೇಶ.. ಅದಕ್ಕಾಗಿ ನಾನು ವೀಕ್ಷಕರಿಗೆ ನಾನಾ ಸರಕುಗಳ ಬಗ್ಗೆ ಹೇಳುತ್ತೇನೆ.. ಅವರು ಮತ್ತು ನಾನು ಇಬ್ಬರೂ ಇಷ್ಟಪಡುವಂಥದ್ದನ್ನು ಮಾಡಲು ಯತ್ನಿಸುತ್ತೇನೆ.. ಹೀಗೆ ಮಾಡುವಾಗ ಮಾಧ್ಯಮದ ಮತ್ತು ವೀಕ್ಷಕರ ಘನತೆಗೆ ಧಕ್ಕೆ ತರುವುದಿಲ್ಲ .. ಇದಿಷ್ಟೇ ನನ್ನ agenda.. ಆತ್ಮದ ಪಿಸುಮಾತುಗಳಾಗಲಿ, ಆತ್ಮ ನಿರ್ದೇಶಿತ ಸಂಗತಿಗಳಾಗಲೀ ನನಗಿಂತ ತುಂಬಾ ಎತ್ತರದ್ದು.. ಅದರ ಹಂಗು ನನಗೆ ಇಲ್ಲ.. ನೀವು ನನ್ನನ್ನು ಇಟ್ಟಿರುವ ಸಾಲಿನಲ್ಲಿ ನಾನು ಇಲ್ಲ.. ಹಿಂದಿನ ಬೆಂಚಿನಲ್ಲಿ ಇದ್ದೇನೆ.. ನನಗೆ ವೀಕ್ಷಕರ ಅಭಿಪ್ರಾಯ ಖಂಡಿತಾ ಬೇಕು.. ಅದಕ್ಕಾಗಿಯೇ ಹಿಂದೆ ನಾನು ಸಂವಾದಗಳನ್ನೂ ಕೂಡಾ ನಡೆಸಿದ್ದೆ.. ಇನ್ನೂ ಹೇಳಬಹುದಾದ ಸಂಗತಿಗಳು ಸಾವಿರ ಇವೆ.. ಭಾಷಣ ಆಗಬಾರದು ಎಂದು ಹೇಳುತ್ತಿಲ್ಲ.. ಫ್ರಾನ್ಸ್ ವಾತಾವರಣ ಆಗಾಗ ಸೂಕ್ಸ್ಮತೆಯಿಂದ ಕೂಡಿರುತ್ತದೆ ಎಂದು ನಾನು ಬಲ್ಲೆ.. ವ್ಯಂಗ್ಯವಿಲ್ಲದೇ ಹೇಳುವುದಾದರೆ ರಂಜನೆ, ಭಾವ ಮತ್ತು ಸಂತೋಷಗಳನ್ನೂ ಕೊಡಬಲ್ಲ ಬಯಲು ನಾಟಕಧಾರಿ ನಾನು.. 10 ನಾಟಕ ನನಗೆ ಬರುತ್ತದೆ.. ಯಾವುದು ಬೇಕಾದರೂ ಆರಿಸಿಕೋ, ನಾನು ನಾಟಕ ಹಾಕುತ್ತೇನೆ ಎನ್ನುವ showman ನಾನು ಅಷ್ಟೇ.. ಇದೇ ‘ಅವಧಿ’ಯಲ್ಲಿ ನನ್ನ options ಗೆ ಜನ ಪ್ರೀತಿಯಿದ ಕೊಟ್ಟಿರುವ ಪ್ರತಿಕ್ರಿಯೆ ನೋಡಿ.. ನಮಗೆ ಕ್ರಿಯೆ ಮತ್ತು ಪ್ರತಿಕ್ರಿಯೆ ಎರಡೂ ಒಟ್ಟಿಗೆ ಹೋಗುತ್ತವೆ ನಿಮಗೆ ಗೊತ್ತಿಲ್ಲದೇ ಇರಬಹುದಾದ ಒಂದು ವಿಚಾರ ; TRP ನಮ್ಮ ಆತ್ಮ ಸಂತೋಷಕ್ಕೆ.. ಕಾಸು ಚಾನೆಲ್ ಗೆ.. ನಮಗೆ ಬರುವುದಿಲ್ಲ ಸ್ನೇಹದೊಂದಿಗೆ TNS , ಮದನಹಳ್ಳಿ, ಗೌರಿಬಿದನೂರ್]]>

‍ಲೇಖಕರು G

19 May, 2012

1 Comment

  1. ರಾಘವೇಂದ್ರ ಜೋಶಿ

    ಕಳೆದ ಕೆಲದಿನಗಳಿಂದ TN ಸೀತಾರಾಂ ಅವರ ‘ಆಯ್ಕೆಯ ಪ್ರಶ್ನೆಗಳು’ ಮತ್ತು ಅನೇಕರ ಅಭಿಪ್ರಾಯಗಳನ್ನು ನೋಡುತ್ತಲೇ ಇದ್ದೇನೆ.ಅದರಲ್ಲಿ ಮೊನ್ನೆ ಫ್ರಾನ್ಸ್ ನಿಂದ ಬಂದ,ಮಿತ್ರರಾದ ಶ್ರೀಯುತ ವಿದ್ಯಾಶಂಕರ್ ಅವರು ಬರೆದ ಪತ್ರ ಕೊಂಚ ಗಮನ ಸೆಳೆಯಿತು. ಬಹುಶಃ ಸೀತಾರಾಂ ಅವರ ಬಗ್ಗೆ ಒಂದು ತೆರನಾದ ಪ್ರೀತಿ ಇಟ್ಟುಕೊಂಡೇ ಬರೆದಿರುವ ಈ ಪತ್ರದಲ್ಲಿ ವಿದ್ಯಾಶಂಕರ್ ಅವರು ಕೆಲವೊಂದು ಗಂಭೀರ ಮತ್ತು ಅಷ್ಟೇ ಸೂಕ್ಷ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಾ,ಏನಾದರೂ ಮಾಡಿ ಆದರೆ ಆತ್ಮನಿರ್ದೇಶಿತರಾಗಿ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.ಈಗ ಮೂಲ ವಿಷಯಕ್ಕೆ ಬಂದರೆ:
    “ಏನು ಮಾಡಲಿ ಮುಂದೆ..?” ಅಂತ ಟಿಎನ್ನೆಸ್ ಕೊಟ್ಟಿರುವ ಐದಾರು option ಗಳಲ್ಲಿ ‘ಆತ್ಮಕತೆ’ಯೊಂದನ್ನು ಬಿಟ್ಟರೆ ಮತ್ಯಾವುದನ್ನೂ ಅವರು ಅತ್ಮನಿರ್ದೇಶಿತನಾಗಿ ಮಾಡುವ ಸಂಭವಗಳು ತೀರ ಕಡಿಮೆ.ಯಾಕೆಂದರೆ ಪ್ರಸ್ತುತ ದೃಶ್ಯ ಮಾಧ್ಯಮದಲ್ಲಿ ಈಗಾಗಲೇ ಯಶಸ್ಸಿನ ಹಾದಿಯಲ್ಲಿರುವ ಅವರು ಏನೆಲ್ಲ ಧಾರಾವಾಹಿಗಳನ್ನು ಮಾಡಿದ್ದರೂ ಅವೆಲ್ಲ ಪ್ರೇಕ್ಷಕರ ಅಭಿರುಚಿಕೆ ತಕ್ಕಂತೆ ಹೆಣೆದಿದ್ದರಿಂದ ಹಿಟ್ಟಾದವೇ ಹೊರತು ಬೇರೆ ಯಾವ ಕಾರಣಗಳೂ ಇರಲಿಕ್ಕಿಲ್ಲ. ಇವೆಲ್ಲ ಧಾರಾವಾಹಿಗಳಲ್ಲಿ ಸೀತಾರಾಂ ಅವರ ಒಳತುಡಿತಗಳು,ಮೌಲ್ಯಗಳು ಮಾತ್ರಗಳ ಮೂಲಕ ಅಥವಾ ಡೈಲಾಗ್ ಗಳ ಮೂಲಕ ಅಲ್ಲಲ್ಲಿ ಹೊರಬಂದಿರಲೂ ಸಾಕು.ಆದರೆ ಎಷ್ಟಾದರೂ ಅದು ಟೀವಿ. ಅದೊಂದು ಮಾರಾಟ. ಮತ್ತು ಅದೊಂದು ವ್ಯವಹಾರ.ಹೀಗಾಗಿ ಎಲ್ಲ ‘ಬೇಡ’ಗಳ ನಡುವೆಯೂ ‘ಬೇಕು’ಗಳನ್ನು ಸಂಭಾಳಿಸುತ್ತ ಹೋಗಲೇಬೇಕಾಗುತ್ತದೆ.
    ಹಿಂದೊಮ್ಮೆ ಅವರ ಸೀರಿಯಲ್ (ಬಹುಶಃ ‘ಮುಕ್ತ’ ಇರಬೇಕು) ನಲ್ಲಿ ರಾಜೀವ್ ದೀಕ್ಷಿತ್ ಅವರ ವಿಚಾರಧಾರೆಯಾದ ‘ಸ್ವದೇಶಿ ಚಳುವಳಿ’ಯನ್ನು ಬಿಂಬಿಸುವ ಪ್ರಯತ್ನ ಮಾಡಿದ್ದರು. ಆಗ ಕೆಲದಿನಗಳ ಮಟ್ಟಿಗೆ ಅವರ ಧಾರಾವಾಹಿಗೆ ಸ್ವಲ್ಪ ಮಟ್ಟಿಗೆ (ಜಾಸ್ತಿ ಇದ್ದರೂ ಇರಬಹುದು) ಜಾಹಿರಾತುಗಳ ಸಮಸ್ಯೆಯಾಗಿತ್ತು. ಯಾಕೆಂದರೆ ಅವರ ಧಾರಾವಾಹಿಗೆ ಜಾಹಿರಾತು ಬರುತ್ತಿದ್ದುದೇ ಮಲ್ಟಿನ್ಯಾಷನಲ್ ಕಂಪೆನಿಗಳಿಂದ! ನೀವು ನಿಮ್ಮ ಸೀರಿಯಲ್ ನಲ್ಲಿ ವಿದೇಶಿ ಕಂಪೆನಿಗಳ ಪ್ರಾಡಕ್ಟುಗಳನ್ನು ವಿರೋಧಿಸಿ ಅಂತ ಸಂದೇಶ ಕೊಡುತ್ತ ಹೋದಾಗ ಯಾವ ಮಲ್ಟಿನ್ಯಾಷನಲ್ ಕಂಪೆನಿ ನಿಮಗೆ ಜಾಹಿರಾತು ಕೊಟ್ಟು ಸ್ಪಾನ್ಸರ್ ಮಾಡುತ್ತೆ ಹೇಳಿ? ಹಾಗಂತ ಯಾವುದೋ ಒಂದು ಸಂವಾದದಲ್ಲಿ ಸೀತಾರಾಂ ಅವರು ಹೇಳಿದ್ದು ನನಗಿನ್ನೂ ನೆನಪಿದೆ. ಹೀಗಾಗಿ ಈ ಮಾಧ್ಯಮದಲ್ಲಿ ಆತ್ಮನಿರ್ದೇಶಿತನಾಗಿಯೋ,ಆತ್ಮಖುಷಿಗಾಗಿಯೋ ಕೆಲಸ ಮಾಡುತ್ತ ಹೋದರೆ ನಾಳೆಯೇ ಅವರು ಕೆಲಸಕ್ಕೆ ಗುಡ್ ಬೈ ಹೇಳುವ ಪ್ರಸಂಗ ಬರಬಹುದು.
    ನನಗೆ ತಿಳಿದಂತೆ,ಆತ್ಮನಿರ್ದೇಶಿತನಾಗಿ ಆತ್ಮಕತೆ ಬರೆಯಬಹುದು.ಆದರೆ ಆತ್ಮನಿರ್ದೇಶಿತನಾಗಿ ಅದನ್ನು ಪ್ರಿಂಟು ಮಾಡಲಾಗುವದಿಲ್ಲ. ಆತ್ಮಖುಶಿಗಾಗಿ ಕವಿತೆ ಹೆಣೆಯಬಹುದು;ಸಂಕಲಿಸಿ ಬಿಡುಗಡೆ ಮಾಡಲಾಗುವದಿಲ್ಲ.ಇವೆರಡನ್ನೂ ಯಾರಾದರೂ ಆತ್ಮನಿರ್ದೇಶಿತನಾಗಿ ಆತ್ಮಖುಶಿಯಿಂದ ಮಾಡಿದರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ.. 🙂
    -RJ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading