ತಾಯಿಲ್ ಜೇಕಬ್ ಸೋನಿ ಜಾರ್ಜ್ಅವರಿಗೆ ಅಭಿನಂದನೆ.
ವಿಜಯೇಂದ್ರ ಎಂ ಎನ್
೧೯೮೦ ರ ದಿನಗಳು. ನಾನಾಗ ‘ಸಮಾಚಾರ್ ಭಾರತಿ’ ಸುದ್ದಿಸಂಸ್ಥೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ನಮ್ಮ ಕಚೇರಿ ಇದ್ದದ್ದು ಇನ್ಫ್ಯಾಂಟ್ರಿ ರಸ್ತೆಯ ಕಮಲಾ ಮ್ಯಾನ್ಷನ್ ನಲ್ಲಿ. ಎದುರುಗಡೆಯೇ ‘ಹಿಂದು’ ಪತ್ರಿಕೆಯ ಕಛೇರಿ.
ಒಂದುದಿನ ಮದ್ಯಾಹ್ನ ಕಚೇರಿಯಲ್ಲಿದ್ದೆ. ‘ಹಿಂದೂ’ ಪತ್ರಿಕೆ ಯ ಪ್ರಧಾನ ವರದಿಗಾರರು ನನ್ನ ಹಿತೈಷಿಗಳು ಆದ ಪಿ.ರಾಮಯ್ಯ ಅವರು ನನ್ನನ್ನು ಅರಸಿ ಕಚೇರಿಗೆ ಬಂದರು. ಅವರು ಪೋನ್ ಮಾಡಿ ನನ್ನನ್ನೆ ಅವರ ಬಳಿಗೆ ಕರೆಸಿಕೊಳ್ಳಬಹುದಿತ್ತು. ನನ್ನ ಕೆಲಸವಾಗುವ ನನ್ನೊಟ್ಟಿಗೆ ಕೂತಿದ್ದು ನಂತರ ‘ಒಲಂಪಸ್’ ಹೋಟೆಲ್ಗೆ ಕರೆದೊಯ್ದು ಕಾಪೀ ಕೊಡಿಸಿ ಹೇಳಿದ್ರು.
ಸಿಂಗಾಪುರದಿಂದ ಪ್ರಕಟಗೊಳ್ಳುತ್ತಿರುವ ‘ಏಷಿಯಾ ವೀಕ್’ ಸಂಪಾದಕರು ನಾಡಿನ ಖ್ಯಾತ ಪತ್ರಕರ್ತರು ಅದ ಟಿಜೆಎಸ್ ಜಾರ್ಜ್ ಬೆಂಗಳೂರಿನಿಂದ ಆಂಗ್ಲ ದಿಪತ್ರಿಕೆಯನ್ನು ಪ್ರಕಟಿಸುವ ಯೋಚನೆಯಲ್ಲಿದ್ದಾರೆ. ಸಿಬ್ಬಂದಿವರ್ಗವನ್ಮು ಅಯ್ಕೆ ಮಾಡಲು ಅವರೀಗ ಬಂದಿದ್ದಾರೆ. ನಾನು ಅವರಿಗೆ ನಿಮ್ಮ ಹೆಸರು ಹೇಳಿದ್ದೇನೆ. ಅವರು ನಿಮಗೆ ಕರೆಮಾಡುತ್ತಾರೆ. ಹೋಗಿ ಮಾತನಾಡಿ ಸಂಬಳ ಸಾರಿಗೆ ನಿಗದಿಪಡಿಸಿಕೊಳ್ಳಿ. ನಾನು ಏನು ಸಂಬಳ ಕೇಳಬೇಕು ಎಂದು ಅವರೇ ಸೂಚಿಸಿದರು.
ನಿರೀಕ್ಷಿಸಿದಂತೆ ಅಂದೇ ರಾತ್ರಿ ನನಗೆ ಕರೆ ಬಂತು. ಮರುದಿನ ಮಧ್ಯಾಹ್ನದ ಲಂಚ್ ಗೆ ಬರುವಂತೆ ನನಗೆ ಅಹ್ವಾನಬಂದಿತ್ತು. ಏಷಿಯಾವೀಕ್ ಬಗ್ಗೆ ನನಗೆ ಸೀಮಿತವಾಗಿ ತಿಳಿದಿತ್ತೇ ಹೊರತಾಗಿ ನಾನು ಜಾರ್ಜ್ ಅವರನ್ನು ಮುಖಃತ ಕಂಡೇ ಇರಲಿಲ್ಲ. ನಿಗದಿತ ಸಮಯಕ್ಕೆ ಅವರಿದ್ದ ಕೊಠಡಿಗೆ ಹೊರಟಾಗ ಹೋತದ ಗಡ್ಡದ ಎತ್ತರದ ನಿಲುವಿನ ಹಸನ್ಮುಖಿ ವ್ಯಕ್ತಿಯ ಭೇಟಿಯಾಯಿತು. ವಿಶ್ವ ಖ್ಯಾತ ಪರ್ತಕರ್ತರೊಬ್ನರ ಬಗ್ಗೆ ನನಗಿದ್ದ ಒಂದು ಕಲ್ಪನೆಗೆ ಹೊರತಾಗಿ ಅವರಿದ್ದರು. ನನಗೆ ಕಂಡ ಕೂಡಲೆ ಪ್ರಭಾವ ಬೀರುವ ಅಕರ್ಷಕ ವ್ಯಕ್ತಿತ್ವ. ನನಗೆ ಹೇಗೆ ಮೆಚ್ಚುಗೆಯಾದರೋ ಹಾಗೆಯೇ ಅವರಿಗೆ ನಾನುಮೆಚ್ಚಿಗೆಯಾಗಿ ಬಿಟ್ಡಿದ್ದೆ.
ರಾಮಯ್ಯನವರ ಸಮಜಾಯಿಷಿ ಎಷ್ಟರಮಟ್ಟಿಗೆ ಅವರ ಮೇಲಿತ್ತು ಎಂದರೆ ಅವರು ನನಗೆ ನೇಮಕಾತಿಗೆ ಬೇಕಾದ ಯಾವ ಫಾರ್ಮಲ್ ಇಂಟರ್ವ್ಯೂ ಮಾಡಲಿಲ್ಲ. ಬದಲಾಗಿ ತಾವು ತರಬೇಕೆಂದಿರುವ ಪತ್ರಿಕೆಯ ವಿವರಗಳನ್ನು ನೀಡಿ ಈ ಚೌಕಟ್ಟಿನಲ್ಲಿ ನೀನು ಹೇಗೆ ಫಿಟ್ ಆಗಬೇಕು ಎಂದು ವಿವರಿಸಿದರು. ನಾನು ರಾಮಯ್ಯ ಅವರು ಸೂಚಿಸಿದಂತೆ ಸಂಬಳ ಸಾರಿಗೆ ಬಗ್ಗೆ ಬಾಯಿಬಿಡುವ ಮೊದಲೇ ನಾನು ನಿರೀಕ್ಷಿಸದ ರೀತಿಯಲ್ಲಿ ಹೆಚ್ಚಿನ ಸಂಬಳ ಸವಲತ್ತನ್ನು ಕೊಡಮಾಡಿದರು. ಅಷ್ಟು ಹೊತ್ತಿಗೆ ನಮ್ಮ ಊಟವೂ ಮುಗಿದಿತ್ತು. ಬೀಳ್ಕೊಡುವ ಮುನ್ನ ನಾನು ಅಭಾರ ಮನ್ನಿಸುತ್ತಾ ಹೀಗೆ ಹೇಳೆದೆ Sir I shall be very happy to work under you. ತಕ್ಷಣವೇ ವ್ಯಗ್ರರಾದಂತೆ ಕಂಡುಬಂದ ಅವರು No No you are supposed to work with me.
ಹೀಗೆ ಮೊದಲ ಭೇಟಿಯಲ್ಲೇ ನನಗೆ ಇಂಗ್ಲೀಷ್ ಪಾಠ ಮಾಡಿದ್ದು ತಾಯಿಲ್ ಜೇಕಬ್ ಸೋನಿ ಜಾರ್ಜ್(ಟಿಜೆಎಸ್ ಜಾರ್ಜ್).
ಕೆಲವು ದಿನಗಳ ನಂತರ The Times of Deccan ಹೆಸರಿನ ಇಂಗ್ಲೀಷ್ ಪತ್ರಿಕೆ ಪ್ಯಾಲೆಸ್ ಗುಟ್ಟಹಳ್ಳಿಯ ಯಾರೋ ನಡೆಸಲಾಗದೆ ಮುಚ್ಚಿದ್ದ ಗಾರ್ಮೆಂಟ್ ಪ್ಯಾಕ್ಟರಿಯ ಆವರಣದಲ್ಲಿ ಆರಂಭವಾಯಿತು. ಜಾರ್ಜ್ ಅವರೆ ಅನಂತರದ ದಿನಗಳಲ್ಲಿ ಹೇಳಿಕೊಳ್ಳುತ್ತಿದ್ದಂತೆ ಕಾಂಗ್ರೆಸ್ ಪಕ್ಷದ motely crowded ರಾಜಕಾರಣಿಗಳ ಗುಂಪು ಈ ಪ್ರಯತ್ನದ ಹಿಂದೆ ಇತ್ತು. ಅವರಿಗೆ ಪತ್ರಿಕೆಯ ಸ್ವರೂಪವಾಗಲಿ ಹಿಂದಣ ಉದ್ದೇಶವಾಗಲೀ ಯಾವುದರಲ್ಲು ಸ್ಷಷ್ಟತೆ ಪರಿಕಲ್ಪನೆ ಇರಲಿಲ್ಲ. ಪತ್ರಿಕೋದ್ಯಮದಲ್ಲಿ ನುರಿತ, ಇನ್ನೂ ಟೈಪ್ ರೈಟರ್ ನೋಡದ ಪ್ರೆಷರ್ಸ್ ಗಳ ಸಂತುಲಿತ ತಂಡದಿಂದ ತಮ್ಮ ಕನಸಿನಪತ್ರಿಕೆ ಯನ್ನು ಹೊರತರಲು ಜಾರ್ಜ ಹಗಲು ರಾತ್ರಿ ಶ್ರಮಿಸಿದರು. ಅದೇ ಒಂದು ಇತಿಹಾಸ.
ಇದ್ದ ಅಪರಿಮಿತ ಸವಾಲುಗಳ ನಡುವೆ ನಮ್ಮನ್ನು ಒಗ್ಗೂಡಿಸಿ ಇತರ ಪತ್ರಿಕೆಗಳಿಗೆ ಸವಾಲಾಗಿ ಪತ್ರಿಕೆಯನ್ನು ತರಲು ಜಾರ್ಜ್ ಕೆಲಕಾಲ ಯಶಸ್ವಿಯಾದರು. ಅದರೆ ಮೊದಲೇ ಹೇಳಿದಂತೆ ದೂರದೃಷ್ಟಿಯಾಗಲಿ ವಿವೇಚನೆಯನ್ನಾಗಲಿ ಹೊಂದಿರದಿದ್ದ ಮ್ಯಾನೇಜ್ಮೆಂಟ್ ಇನ್ನಷ್ಟು ಪತ್ರಿಕೆಗಳನ್ನು ಹುಟ್ಟು ಹಾಕಿತು.
ಇತರ ಪತ್ರಿಕೆಗಳಲ್ಲಿ ಬರದೆ ಇದ್ದದ್ದು ನಮ್ಮಲ್ಲಿ ಬರಬೇಕು. ನಾವು ಯಾವುದರಲ್ಲೂ ಯಾವ ಪತ್ರಿಕೆಗೂ ಸರಿಸಾಟಿಯಾಗಿ ನಿಲ್ಲಬೇಕು ಎಂಬ ಛಲದಲ್ಲಿ ನಾವೆಲ್ಲರೂ ಶಕ್ತಿ ಮೀರಿ ದುಡಿದೆವು.
ಸರಿರಾತ್ರಿಯ ನಂತರವೂ ಪತ್ರಿಕೆ ಮುದ್ರಣಕ್ಕೆ ಹೋದ ನಂತರವೂ ನಾವು ಕಚೇರಿಯಲ್ಲಿ ಇರುತ್ತಿದ್ದೆವು. ಯಾವುದೇ ಸುದ್ದಿ ಮಿಸ್ ಆಗಬಾರದು ಎಂಬ ಕಾತರಕ್ಕಿಂತಲೂ ಜಾರ್ಜ್ ನಮ್ಮಈ ಶ್ರಮವನ್ನು ಗುರುತಿಸುತ್ತಿದ್ದ ವಿಧಾನ ನಮಗೆ ಇಷ್ಟವಾಗಿತ್ತು. ನಾವು ಒಳ್ಳೆಯ ಸುದ್ದಿ ತಂದಾಗ exclusive ಸುದ್ದಿ ತಂದಾಗ ಅವರೆ ಖುದ್ದು ಸ್ಟೋರಿ ಓದಿ ಅಗತ್ಯವಾದ ಕರೆಕ್ಷನ್ ಮಾಡಿ ಗ್ಯಾಲಿ ಪ್ರೂಪ್ ನೋಡುವ ತನಕ ಜತೆಯಲ್ಲಿದ್ದು ಅನಂತರ ತಮ್ಮಕೊಠಡಿಗೆ ಕರೆದೊಯ್ದು ಅಲ್ಲಿ ಕಪಾಟಿನಲ್ಲಿ ಇರುತಿದ್ದ ವಿದೇಶಿ ವಿಸ್ಕಿಯನ್ನೋ ರಮ್ ಅನ್ನೋ ಕೊಟ್ಟು ಸತ್ಕರಿಸುತ್ತಿದ್ದರು. ದೇಶವಿದೇಶ ಸುತ್ತಿಬಂದ ಸಂಪಾದಕರು ನಮ್ಮಂಥ ಕಬ್ ರಿಪೋರ್ಟರ್ ಗಳನ್ನು ಸರಿಸಮಾನವಾಗಿ ನಡೆಸಿಕೊಳ್ಳುತ್ತಿದ್ದರು.
ನಮ್ಮೆಲ್ಲರ ಶತ ಪ್ರಯತ್ನಗಳ ನಂತರವೂ ಪತ್ರಿಕೆ ಒದುಗರನ್ನು ಮುಟ್ಟಲು ಯಶಸ್ವಿಯಾಗಲಿಲ್ಲ ಎಂಬುದು ದುರಂತ. ಪತ್ರಿಕೆಯ ವಿತರಣೆ, ಜಾಹಿರಾತು ಇತ್ಯಾದಿ ವಿಭಾಗಗಳ ಮುಖ್ಯಸ್ಥರುಗಳು ಸಂಸ್ಥೆಯ ಹಿತಾಸಕ್ತಿಗಳಿಗೆ ವಿರುದ್ದವಾಗಿ ಕೆಲಸ ಮಾಡಿ ಸಂಸ್ಥೆ ನೆಲ ಕೆಚ್ಚಲು ನೆರವಾದರು. ತಾವು ಬೆಂಗಳೂರಿನ ಸದಾಶಿವನಗರದಲ್ಲಿ ಕೊಂಡಿದ್ದ ನಿವೇಶನದಲ್ಲಿ ಮನೆ ಕಟ್ಟಬೇಕೇಂಬ ಏಕೈಕ ಉದ್ದೇಶದಿಂದ ಜಾರ್ಜ್ ಬೆಂಗಳೂರಿಗೆ ಬಂದರು. ಪತ್ರಿಕೆ ಆರಂಭಿಸಿದರು ಎಂಬ ಗುಸುಗುಟ್ಟುತಿದ್ದ ಅರೋಪಗಳು ನಿಜವಾಗುವಂತೆ ಮನೆ ಕಟ್ಟಿ ಪೂರೈಸಿದ ಕೆಲವೇ ದಿನಗಳ ನಂತರ ಜಾರ್ಜ್ ‘ಟೈಂಸ್ ಆಫ್ ಡೆಕ್ಕನ್’ ತ್ಯಜಿಸಿ ‘ಇಂಡಿಯನ್ ಎಕ್ಸ್ಪ್ರೆಸ್’ ಸಮೂಹಕ್ಕೆ ಸೇರಿ ಬಿಟ್ಟರು.
ಇನ್ನೂರಕ್ಕೂ ಹೆಚ್ಚು ಪತ್ರಕರ್ತರು, ಇತರ ಮುದ್ರಣ ವಿಭಾಗದ ಸಿಬ್ಬಂದಿ ಮುಷ್ಕರ ಮತ್ತೊಂದು ನಡೆಸಿದರೂ ಪತ್ರಿಕಗಳನ್ನು ಪುನರಾರಂಭಿಸಲು ಮಾಲಿಕರು ಮನಸ್ಸು ಮಾಡಲೇ ಇಲ್ಲ.
ಪತ್ರಿಕೆ ವಿದಿವತ್ತಾಗಿ ಮುಚ್ಚಿದ ಬಳಿಕವೂ ನನ್ನ ಜಾರ್ಜ್ ನಡುವೆ ಲವ್ ಅಂಡ್ ಹೇಟ್ ರಿಲೇಷನ್ಷಿಪ್ ಮುಂದುವರಿದಿತ್ತು. ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಕಲಬುರಗಿ ವರದಿಗಾರನಾಗಲು ಜಾರ್ಜ್ ಅಹ್ವಾನ ನೀಡಿದರೂ ನಾನದನ್ನು ಒಪ್ಪಲಿಲ್ಲ. ಕಾರಣ ನಾನಗಲೇ ಅಂದಿನ ಕೇಂದ್ರ ಸಚಿವರಾದ ಶ್ರಿ ಎಸ್ ಎಮ್ ಕೃಷ್ಣ ಅವರ ಬಳಿ ಮಾಧ್ಯಮ ಅಧಿಕಾರಿಯ ಪ್ರತಿಷ್ಠಿತ ಹುದ್ದೆ ಲಭಿಸಿತ್ತು. ಎಷ್ಟೆ ಒಳ್ಳೆಯ ಕೆಲಸ ಮಾಡಿದರೂ ಅಸೂಯೆ ಚಾಡಿ ಮಾತುಗಳಿಂದ ನಮ್ಮಂತವರನ್ನು ಮೂಲೆಗುಂಪು ಮಾಡುತಿದ್ದ ಘನ ಪತ್ರಕರ್ತರಿಂದ ದೂರವಾಗಬೇಕಾದ್ದು ನನ್ನ ಮುಂದಿನ ಮಾನಸಿಕ ಆರೋಗ್ಯಕ್ಕೆ ಅಗತ್ಯವಾಗಿತ್ತು.
ನನ್ನ ಪ್ರಾತಃಸ್ಮರಣೀಯರಲ್ಲಿ ಒಬ್ಬರಾದ ತಾಯಿಲ್ ಜಾಕಬ್ ಸೋನಿ ಜಾರ್ಜ್ ಅವರ ಲೇಖನಿಯಿಂದ ಹರಿದು ಬರುವ ಪ್ರತಿ ಬರವಣಿಗೆಯನ್ನು ಈಗಲೂ ಗಮನವಿಟ್ಟು ಓದುತ್ತೇನೆ. ಅವರ ಅಪಾರ ಅನುಭವ ಜ್ನಾನವಂತಿಕೆಗಳಿಗೆ ಕನಿಷ್ಟ ಪದ್ಮಭೂಷಣ ಬರಬೇಕು. ಇದೀಗ ಒಂದು ಪ್ರಶಸ್ತಿ ಲಭಿಸಿರುವುದನ್ನು ಮನಸಾರೆ ಸ್ವಾಗತಿಸುತ್ತಾ ಮುಂದಿನ ದಿನಗಳಲ್ಲಿ ಇನ್ನೂ ಪ್ರತಿಷ್ಟಿತ ಪ್ರಶಸ್ತಿಗಳು ಲಭಿಸಲಿಎಂದು ಹಾರೈಸುತ್ತೇನೆ.
ಟಿಜೆಎಸ್ ಜಾರ್ಜ್ ಗೆ ಅಭಿನಂದನೆ.
ನಿಮಗೆ ಇವೂ ಇಷ್ಟವಾಗಬಹುದು…





0 Comments