ಝಳವುಂಡ ಜೀವವ ನೆನೆಯುತ್ತಾ..

ಝಳವುಂಡ ಜೀವ

ರಹಮತ್ ತರೀಕೆರೆ 

ತಮ್ಮ ಜೀವನ ಸಂಗಾತಿ ಆಗಬಯಸುತ್ತಿದ್ದ ಸವಿತಾ ಅವರಿಗೆ ಬಾಬಾಸಾಹೇಬ್ ಅಂಬೇಡ್ಕರ್ ಬರೆದ ಚಿಕ್ಕದೊಂದು ಪತ್ರವಿದೆ. ಇದು ಜೀವನದ ಬಗ್ಗೆ ತನ್ನದೇ ಆದರ್ಶ ಇಟ್ಟುಕೊಂಡಿದ್ದ ತೇಜಸ್ವಿ, ಜೀವನಸಂಗಾತಿ ಆಗಲಿರುವ ರಾಜೇಶ್ವರಿಯವರಿಗೆ ಬರೆದ ಪತ್ರವನ್ನು ನೆನಪಿಸುವಂತಿದೆ. ಅಂಬೇಡ್ಕರ್ ಪತ್ರದಲ್ಲಿ ಎಚ್ಚರಿಕೆಯಂತೆಯೂ ವಿನಂತಿಯಂತೆಯೂ ತೋರುವ ಒಂದು ಸಾಲು ಹೀಗಿದೆ. “ನನ್ನ ಒಡನಾಡಿಗಳು ನನ್ನ ವೈರಾಗ್ಯ ಮತ್ತು ಉಗ್ರ ಸಂಯಮಗಳನ್ನು ಹೊರಬೇಕಾಗುವುದು. ಗ್ರಂಥಗಳೇ ನನ್ನ ಸಹವಂದಿಗರು; ಪತ್ನಿ ಪುತ್ರರಿಗಿಂತಲೂ ಇವು ನನಗೆ ಪ್ರಿಯವಾದವು’’.

ಅಂಬೇಡ್ಕರ್ ದಲಿತ ಸಮುದಾಯದ ವಿಮೋಚಕರೆಂದು ಖ್ಯಾತರಾಗಿದ್ದಾರೆ; ಅವರು ಭಾರತದ ಕಾನೂನು ಮಂತ್ರಿಯಾಗಿ ಸೇವೆ ಸಲ್ಲಿಸಿದ್ದನ್ನು ನೆನೆಯಲಾಗುತ್ತದೆ. ಧಮ್ಮದೀಕ್ಷೆ ಪಡೆದು ಬೌದ್ಧಧರ್ಮದ ಮರುಜನ್ಮಕ್ಕೆ ಕಾರಣರಾದವರೆಂದು ಆರಾಧಿಸಲಾಗುತ್ತದೆ. ಸಂವಿಧಾನ ರಚನ ಸಮಿತಿಯ ಅಧ್ಯಕ್ಷರಾಗಿದ್ದಾಗ ತೋರಿದ ಕಾನೂನುಪ್ರಜ್ಞೆಯನ್ನು ಉಲ್ಲೇಖಿಸಲಾಗುತ್ತದೆ. ಅವರ ಈ ಸಾಮಾಜಿಕ ರಾಜಕೀಯ ಧಾರ್ಮಿಕ ಸಾಧನೆಗಳ ಹಿನ್ನೆಲೆಯಲ್ಲಿ ಕೆಲಸ ಮಾಡಿದ ಸಂಗತಿಗಳಲ್ಲಿ ಅವರ ಆಳವಾದ ಅಧ್ಯಯನ ಮತ್ತು ಚಿಂತನೆಗಳೂ ಸೇರಿವೆ.

ನನ್ನ ಓದಿಗೆ ಮೊದಲು ಸಿಕ್ಕಿದ್ದು ಅಂಬೇಡ್ಕರ್ ಅವರ ‘ಅಸ್ಪೃಶ್ಯರು’ ‘ಹಿಂದೂ ಧರ್ಮದ ತತ್ವಜ್ಞಾನ’ ‘ಯಾರು ಶೂದ್ರರಾಗಿದ್ದರು’ ಮುಂತಾದ ಕೃತಿಗಳಲ್ಲಿ ಭಾರತದ ಜಾತಿ ಸಮಾಜವನ್ನು ವಿಶ್ಲೇಷಿಸುವ ವ್ಯಾಖ್ಯಾನಿಸುವ ಅವರ ಬೌದ್ಧಿಕ ಪ್ರಖರತೆಯಿದೆ. ‘ಭಾರತದ ವಿಭಜನೆ’ ಕೃತಿಯಲ್ಲಿ ಅವರು ಸಂಪ್ರದಾಯವಾದಿ ಮುಸ್ಲಿಮರ ಧೋರಣೆಗಳನ್ನು ಕಟುವಾಗಿ ಟೀಕಿಸುತ್ತಾರೆ. ಅವರ ಕೃತಿಗಳು ಭಾರತದ ಸಮಾಜ ರಾಜಕಾರಣ ಚರಿತ್ರೆ ಸಂಸ್ಕøತಿ ಧರ್ಮಗಳನ್ನು ಅಧ್ಯಯನ ಮಾಡುವವರಿಗೆ ಮಹತ್ವದ ಆಕರಗಳು. ಅಂಬೇಡ್ಕರ್ ಚಿಂತನೆಗಳನ್ನು ಒಪ್ಪದಿರುವವರೂ, ಅವರ ವಿದ್ವತ್ತು ಬದ್ಧತೆ ತೀಕ್ಷ್ಣತೆ ಹಾಗೂ ದಾರ್ಶನಿಕತೆಗಳನ್ನು ನಿರಾಕರಿಸಲಾರರು.

ಅವರು ವಿಭಿನ್ನ ಜ್ಞಾನಶಿಸ್ತಿಗೆ ಸಂಬಂಧಿಸಿದ ಸಾವಿರಾರು ಆಕರಗಳನ್ನು ಅಭ್ಯಾಸ ಮಾಡಿದ್ದರು. ಅವು ಜಾತಿ ಮತ್ತು ಜನಗಣತಿಯ ದಾಖಲೆಗಳಿಂದ ಹಿಡಿದು, ಮನುಸ್ಮೃತಿ, ವೇದ, ಉಪನಿಷತ್ತು, ಮಹಾಭಾರತ, ರಾಮಾಯಣ, ಕುರಾನ್, ಬೈಬಲುಗಳ ತನಕ ಹಬ್ಬಿಕೊಂಡಿವೆ. ಈ ಆಕರಗಳ ಓದನ್ನು ಅವರು ತಮ್ಮ ಸಾಮಾಜಿಕ ರಾಜಕೀಯ ವಾದಮಂಡನೆಯಲ್ಲಿ ಬಳಸಿಕೊಳ್ಳುವರು. ಅವರು ದೇಶಿಯ ವಿದೇಶೀಯ ವಿದ್ವಾಂಸರ ಕೃತಿಗಳ ಹೇಳಿಕೆಗಳ ಜತೆ ವಾಗ್ವಾದಕ್ಕೆ ಬೀಳುವಲ್ಲಿ ಅವರ ತರ್ಕಪ್ರಜ್ಞೆಯನ್ನು ನೋಡಬಹುದು.

ಒಂದು ಪ್ರಮೇಯ ಕಟ್ಟಲು ಅವರು ಬಳಸುವ ಸಾಕ್ಷ್ಯಾಧಾರ, ನಡೆಸುವ ವಿಶ್ಲೇಷಣೆ ಮತ್ತು ವ್ಯಾಖ್ಯಾನಗಳು ಅಪೂರ್ವ. ಇವು ಅವರ ನಿರಂಕುಶಮತಿಯನ್ನು ಮಾತ್ರವಲ್ಲ, ಸಮಾಜ ಕುರಿತ ಕಾಣ್ಕೆಯನ್ನೂ ಸೂಚಿಸುತ್ತವೆ. ಅವರ ಸಂಶೋಧನೆಯಲ್ಲಿರುವ ವಾದಮಂಡನೆಯ ಅಚ್ಚುಕಟ್ಟುತನಕ್ಕೆ ಅವರ ಕಾನೂನು ತಿಳುವಳಿಕೆಯೂ ವಕೀಲಿವೃತ್ತಿಯ ಅನುಭವವೂ ನೆರವಾಗಿವೆ. ದಲಿತರನ್ನು ಮಹಿಳೆಯರನ್ನು ದಮನಿಸಿರುವ ಸವರ್ಣೀಯ ಸಮಾಜಕ್ಕೆ ಪ್ರಶ್ನೆಹಾಕುವ ಮತ್ತು ಉತ್ತರಿಸುವ ಅವರ ವಿಧಾನವನ್ನು ಬಳಸುವರು. ಯಾವುದೇ ಚಿಂತನೆ ಕೇವಲ ವಿದ್ವತ್ತು ಇಲ್ಲವೇ ನಿಶಿತತರ್ಕ ಬುದ್ಧಿಯಿಂದ ಧೀಮಂತವಾಗಲಾರದು. ಅದರ ಉದ್ದೇಶಗಳು ಅದಕ್ಕೊಂದು ಘನತೆ ತಂದುಕೊಡುತ್ತವೆ. ಅಂಬೇಡ್ಕರ್ ಸಂಶೋಧನ ಪ್ರತಿಭೆ ಇರುವುದು ಸಮಾಜ ಬದಲಿಸುವ ಛಲದಲ್ಲಿ; ಹೊಸ ಮಾನವೀಯ ಸಮಾಜ ಕಟ್ಟುವ ಕನಸಿನಲ್ಲಿ. ಯಾವುದೇ ವಿದ್ವತ್ತಿಗೆ ಘನತೆ ತಂದುಕೊಡುವುದು ಈ ಕನಸು-ಕಾಣ್ಕೆಗಳೇ.

1936ರಲ್ಲಿ ಲಾಹೋರಿನ ‘ಜಾತ್ ಪಾತ್ ತೋಡಕ್’ ಸಂಘಟನೆ ಅಂಬೇಡ್ಕರ್ ಅವರನ್ನು ಉಪನ್ಯಾಸ ನೀಡಲು ಆಹ್ವಾನಿಸಿದಾಗ, ಅವರ ಆರೋಗ್ಯ ಚೆನ್ನಾಗಿರಲಿಲ್ಲ. ಈ ಕಷ್ಟದಲ್ಲೆ ಅವರು ಪ್ರಬಂಧ ಸಿದ್ಧಪಡಿಸಿ ಸಂಘಟಕರಿಗೆ ಕಳಿಸಿಕೊಡುತ್ತಾರೆ. ಸಂಘಟಕರು ಪ್ರಬಂಧದಲ್ಲಿ ಕೆಲವು ಶಬ್ದಗಳನ್ನು ತೆಗೆಯಬೇಕೆಂದೂ ಇಲ್ಲವಾದರೆ ಗಲಭೆಯೇಳುವ ಸಾಧ್ಯತೆಯಿದೆಯೆಂದೂ, ತಿದ್ದುಪಡಿಗೆ ಒಪ್ಪದಿದ್ದರೆ ಸಮ್ಮೇಳನ ರದ್ದು ಮಾಡಬೇಕಾಗುವುದೆಂದೂ ತಿಳಿಸುವರು. ಆಗ ಅಂಬೇಡ್ಕರ್ `ಇದರಲ್ಲಿರುವ ಒಂದು ಶಬ್ದವನ್ನೂ ತೆಗೆಯಲಾರೆ’ ಎಂದು ಉತ್ತರಿಸಿದರು. ಜತೆಗೆ ತಮ್ಮ ನಿಲುವನ್ನು ಕೇಳುಗರು ಒಪ್ಪಬೇಕಾಗಿರಲಿಲ್ಲವೆಂದೂ ಅವರು ತಮ್ಮ ಸಕಾರಣವಾದ ವಿರೋಧ ದಾಖಲಿಸಬಹುದಾಗಿತ್ತೆಂದೂ, ತಮ್ಮ ವಿಚಾರ ಪ್ರಕಟಿಸುವ ಮುಂಚೆಯೇ ತಿದ್ದುಪಡಿ ಸೂಚಿಸುವ ಕರಾರರನ್ನು ಒಪ್ಪಲು ಸಾಧ್ಯವಿಲ್ಲವೆಂದೂ ಸ್ಪಷ್ಟಪಡಿಸುವರು.

ಅವರಿಗೆ ಉಪನ್ಯಾಸ ನೀಡಲು ಲಾಹೋರಿಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ ಈ ಕಾರ್ಯಕ್ರಮ ರದ್ದುಪ್ರಕರಣವು, ಅವರಿಗೆ ತಮ್ಮ ವಾದಮಂಡನೆಯಲ್ಲಿದ್ದ ಶ್ರದ್ಧೆ ಮಾತ್ರವಲ್ಲ, ಅದಕ್ಕೆ ಭಿನ್ನಮತ ಆಹ್ವಾನಿಸಿ ವಾಗ್ವಾದ ಮಾಡುವ ಡೆಮಾಕ್ರಟಿಕ್ ನಮ್ರತೆಯನ್ನೂ ಸೂಚಿಸುತ್ತದೆ. ಚಿಂತನೆಯಲ್ಲಿ ಎದುರಾಳಿಗಳ ಬಗೆ ಕದಡುವಂತೆ ವೈಚಾರಿಕ ಅಲೆಗಳನ್ನು ಹುಟ್ಟಿಸುತ್ತಿದ್ದ ಅಂಬೇಡ್ಕರ್, ಪ್ರಶ್ನೆಯೆತ್ತುವ ವಿಧಾನವನ್ನು ಹೆಚ್ಚಾಗಿ ಅನುಸರಿಸುವರು. ಅವರ ಕೃತಿಗಳ ತಲೆಬರೆಹಗಳಲ್ಲೆ ಪ್ರಶ್ನಾರ್ಥಕ ವಿನ್ಯಾಸ ಇರುವುದನ್ನು ಗಮನಿಸಬಹುದು.

‘ಹಿಂದೂ ಧರ್ಮದ ಒಗಟುಗಳು’ ಕೃತಿಯನ್ನು ಒಳಗೊಂಡಂತೆ ಅವರ ಸಾಮಾಜಿಕ ಸಂಶೋಧನ ಕೃತಿಗಳ ಅಧ್ಯಾಯಗಳು ಪ್ರಶ್ನೆಗಳಿಂದಲೇ ಕೂಡಿವೆ. ಈ ಪ್ರಶ್ನೆಗಾರಿಕೆ ವೈಚಾರಿಕ ವಿದ್ವತ್ತಿನ ಜೀವಾಳ. ಇದನ್ನು ಶರಣರ ವಚನಗಳಲ್ಲೂ ಕಾಣಬಹುದು. ಅಂಬೇಡ್ಕರ್ ಚಿಂತನೆಯಲ್ಲಿ ಸೈದ್ಧಾಂತಿಕ ಎದುರಾಳಿಗಳಿಗೆ ಉತ್ತರಿಸುವ ಹಾಗೂ ತಮ್ಮ ಸಮುದಾಯಕ್ಕೆ ವಿಮೋಚನ ಪ್ರಜ್ಞೆ ತುಂಬುವ ಎರಡೂ ಆಯಾಮಗಳಿವೆ. ಅದೊಂದು ಇಬ್ಬಾಯ ಖಡ್ಗ. ಬಹುಶಃ ಧರ್ಮ ಮತ್ತು ರಾಜಕಾರಣ ಕುರಿತ ವಿಮರ್ಶೆ ಜಿಜ್ಞಾಸೆಗಳೇ ಅವರ ಚಿಂತನೆಯನ್ನು ತತ್ವಶಾಸ್ತ್ರೀಯ ಉನ್ನತಿಕೆಗೆ ಏರಿಸಿದವು.

ಅಂಬೇಡ್ಕರ್ ವಿದ್ವತ್ತಿನೊಳಗಿದ್ದ ಈ ನಿಷ್ಠುರತೆಯ ಕಸುವು ಅವರು ಬೌದ್ಧಧರ್ಮದ ಬಗ್ಗೆ ಬರೆದ ಕೃತಿಗಳಲ್ಲಿ ಮಂಕುಗೊಳ್ಳುತ್ತ, ಅವರು ‘ಬಂಗಾರದ ಕೋಳವೊಕ್ಕ ಮಹಾಬೌದ್ಧ ಬಿಕ್ಷು’ವಿನಂತೆ ತೋರುತ್ತಾರೆಂದು ನನಗೆ ಅನಿಸುತ್ತದೆ. ತಾತ್ವಿಕ ನಂಬಿಕೆಗಳು ಧಾರ್ಮಿಕ ಶ್ರದ್ಧೆಯಾಗಿ ಮಾರ್ಪಟ್ಟರೆ ಸಂಶೋಧನೆಯೊಳಗಿನ ವಿಮರ್ಶಾತ್ಮಕ ಪ್ರಜ್ಞೆ ಕ್ಷೀಣವಾಗುತ್ತದೆಯೇ? ಚಾರಿತ್ರಿಕವಾಗಿ ಅಂಬೇಡ್ಕರ್ ಸಂಶೋಧನೆ ಮತ್ತು ಚಿಂತನೆಗಳು ರೂಪುತಳೆದಿದ್ದೇ ಕಡುವಿರೋಧದ ನಡುವೆ. ಅವರ ಕಾಲದಲ್ಲಿ ಅವರ ವಾದಗಳನ್ನು ಕಟುವಾಗಿ ತಿರಸ್ಕರಿಸುವವರಿದ್ದರು. ಅವರನ್ನು ‘ಹುಸಿದೈವ’ವೆಂದು ಕರೆಯುವವರು ಈಗಲೂ ಇದ್ದಾರೆ. ಆದರೆ ಇಂತಹ ತಿರಸ್ಕಾರಜನ್ಯ ಪ್ರತಿಕ್ರಿಯೆಗಳು ಅಂಬೇಡ್ಕರ್ ಚಿಂತನೆಗಳನ್ನು ಮುಖಾಮುಖಿ ಮಾಡುವ ಮತ್ತು ವಾಗ್ವಾದಕ್ಕೆ ಒಳಪಡಿಸುವ ಉಮೇದನ್ನು ಹೆಚ್ಚಿಸಿದವೇ ಹೊರತು ಕ್ಷೀಣಗೊಳಿಸಲಿಲ್ಲ. ಇದು ಯಾವುದೇ ಚಿಂತನೆಯೊಳಗಿನ ಅಪ್ರತಿಹತ ಶಕ್ತಿ.

ಅಂಬೇಡ್ಕರ್ ಅವರನ್ನು ಜನ ಅಥವಾ ವ್ಯವಸ್ಥೆ, ಪ್ರತಿಮಾರಾಧನೆಯ ಮೂಲಕ ಗೌರವಿಸುವ ಜನಪ್ರಿಯ ವಿಧಾನವನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಈ ಭಾವುಕ ವಿಧಾನ ಚಿಂತನೆಯನ್ನು ಮುಖಾಮುಖಿ ಮಾಡುವ ಹಾದಿಯಿಂದ ಹೊರಸೆಳೆಯುವ ಅಪಾಯವೂ ಇದೆ. ಅಂಬೇಡ್ಕರ್ ಕುರಿತ ಬಹುತೇಕ ಜೀವನಚರಿತ್ರೆಗಳ ಸಮಸ್ಯೆಯಿದು. ತಮ್ಮನ್ನು ದಲಿತಪರವೆಂದು ಬಿಂಬಿಸಿಕೊಳ್ಳುವುದಕ್ಕಾಗಿ ಬಾಬಾಸಾಹೇಬರ ಚಿತ್ರಪಟ ಬಳಸುತ್ತ ದೈವೀಕರಿಸುತ್ತಿರುವ ಸನಾತನವಾದಿಗಳು, ಅವರ ಚಿಂತನೆಯೊಳಗಿನ ಸಿಡಿಮದ್ದಿಗೆ ನೀರು ಹೊಯ್ಯುತ್ತಿರುತ್ತಾರೆ. ಅವರ ಚಿಂತನೆಯನ್ನು ಪರವಿರೋಧವಿಲ್ಲದೆ ಬದಿಗೆ ಸರಿಸುವವರು ಅವರನ್ನು ಅಪ್ರಸ್ತುತಗೊಳಿಸಲು ಯತ್ನಿಸುತ್ತಿರುತ್ತಾರೆ. ಆದರೆ ಮುಗ್ಧಆರಾಧಕರು ಅವರ ವಿಚಾರಗಳಿಗೆ ಉತ್ತರಾಧಿಕಾರಿಗಳಾಗುವ ಅವಕಾಶವನ್ನು ಪ್ರತಿಮಾ ಸಂಸ್ಕøತಿಯ ಮೂಲಕ ತಪ್ಪಿಸಿಕೊಳ್ಳುತ್ತಿರುತ್ತಾರೆ. ಯಾವುದೇ ಚಿಂತನೆಯನ್ನು ಮುಖಾಮುಖಿ ಮಾಡುವುದು ಮತ್ತು ವಾಗ್ವಾದವಾಗಿ ಬೆಳೆಸುವುದು ಎಂದರೆ ಅದನ್ನು ಜೀವಂತವಾಗಿಡುವುದು ಎಂದರ್ಥ.

ಬಾಬಾಸಾಹೇಬರ ಈ ವಿದ್ವತ್ತಿನ ಗಹನತೆಯನ್ನು ಕುರಿತು ಚಿಂತಿಸುವಾಗೆಲ್ಲ ನನಗೆ ನೆನಪಾಗುವುದು ಅವರ ಇಬ್ಬರು ಪತ್ನಿಯರು; ಅದರಲ್ಲೂ ಅವರ `ವೈರಾಗ್ಯ ಮತ್ತು ಉಗ್ರ ಸಂಯಮ’ಗಳ ಝಳವನ್ನು ಉಣ್ಣಲು ಸಿದ್ಧವಾಗಿರಬೇಕೆಂಬ ಪೂರ್ವಶರತ್ತನ್ನು ಸ್ವೀಕರಿಸಿದ ಸವಿತಾತಾಯಿ. ಬಹುಶಃ ತಮ್ಮ ವಿದ್ವತ್ತಿನಿಂದ ಲೋಕಕ್ಕೆ ಬೆಳಕು ಕೊಟ್ಟ ಎಲ್ಲ ವಿದ್ವಾಂಸರ-ಚಿಂತಕರ ಹಿಂದೆ, ಅವರ `ಝಳ’ವನ್ನು ಅನುಭವಿಸಿದ ಕುಟುಂಬಗಳಿವೆ. ಬೌದ್ಧಧರ್ಮದ ಅಧ್ಯಯನಕ್ಕೆ ಧರ್ಮಾನಂದ ಕೋಸಾಂಬಿಯವರು ಪಟ್ಟಕಷ್ಟ ಭಾರತದ ಯಾವ ವಿದ್ವಾಂಸರೂ ಪಟ್ಟಿರಲಿಕ್ಕಿಲ್ಲ.

ಅವರು ಊರಿಂದ ಊರಿಗೆ ಹೋಗಲು ಬೀದಿಯಲ್ಲಿ ಭಿಕ್ಷೆಬೇಡುತ್ತಾರೆ. ಹಸಿದು ಕಂಗಾಲಾಗುತ್ತಾರೆ. ಹಿಮಪ್ರದೇಶದಲ್ಲಿ ಬರಿಗಾಲಲ್ಲಿ ನಡೆಯುತ್ತಾರೆ. ಅವರ ನಿವೇದನೆ ಆತ್ಮಕಥೆ ಓದುವಾಗ ಮೈಜುಂ ಎನ್ನುತ್ತದೆ. ಇದು ಸ್ವತಃ ಬುದ್ಧನು ಜ್ಞಾನೋದಯಕ್ಕಾಗಿ ಪಟ್ಟಪಾಡನ್ನೇ ನೆನಪಿಸುತ್ತದೆ. ಆದರೆ ಇಷ್ಟೇ ಮಹತ್ವದ್ದು ಗಂಡನ ಅಗಲಿಕೆಯನ್ನು ಸಹಿಸಿಕೊಂಡು, ಎಳೆಯ ಮಕ್ಕಳ ಜತೆ ತವರು ಮನೆಯಲ್ಲಿ ಇರಬೇಕಾದ ಇವರ ಮಡದಿಯರದು. ಅಣ್ಣನ ಹಿಂದೆ ಹೋದ ಲಕ್ಷ್ಮಣ ವಿರಹವನ್ನು ಊರ್ಮಿಳೆ ಹೇಗೆ ತಾಳಿಕೊಂಡಿರಬಹುದು ಎಂದು ಟಾಗೂರರು, ಅವರ ಅನಾಮಿಕತನದ ಚರಿತ್ರೆಯನ್ನು ಕುರಿತು ಚಿಂತಿಸಿದರು. ಕುವೆಂಪು `ರಾಮಾಯಣ ದರ್ಶನಂ’ನಲ್ಲಿ ಊರ್ಮಿಳಾ ಪ್ರಕರಣವನ್ನು ಬರೆದು ನ್ಯಾಯ ಸಲ್ಲಿಸಲು ಯತ್ನಿಸಿದರು. ಮಾಸ್ತಿ `ಯಶೋಧರೆ’ ನಾಟಕ ಬರೆದರು.

ಅಂಬೇಡ್ಕರ್ ಚಿಂತನೆಗಳಿಂದ ಎಚ್ಚರ, ಸ್ವಾಭಿಮಾನ, ಹೊಸಬದುಕು ಪಡೆದುಕೊಂಡ ಎಲ್ಲರೂ, ಅವರ `ಝಳ’ವನ್ನು ಸಹಿಸಿದ ಸವಿತಾ ತಾಯಿಯ ಋಣವನ್ನು ಹೊತ್ತಿದ್ದೇವೆ. ಅಂಬೇಡ್ಕರ್ ಅವರ ವಿದ್ವತ್ತು ಮತ್ತು ಕ್ರಿಯಾಶೀಲತೆಗಳ ಚಾರಿತ್ರಿಕ ಮಹತ್ವದ ಜತೆಗೇ ಚಿಂತಿಸಬೇಕಾದ ಸಂಗತಿಯಿದು. ಕಲ್ಲನ್ನು ಕಟೆದು ಮೂರ್ತಿಯಾಗಿಸುವ ಉಳಿ, ಸ್ವತಃ ಸುತ್ತಿಗೆಯ ಪೆಟ್ಟನ್ನು ತನ್ನ ನೆತ್ತಿಯ ಮೇಲೆ ಸತತ ತಿಂದಿರುತ್ತದೆ.

ಲೋಕವು ಸಾಮಾನ್ಯವಾಗಿ ಅದನ್ನು ಗಮನಿಸುವುದಿಲ್ಲ. ನಮ್ಮ ತಟ್ಟೆಗೆ ಅನ್ನವನ್ನು ಬಡಿಸುವ ಕೈಯಹಿಂದೆ ಉತ್ತವರ, ಬೆಳೆದವರ ಬೀಸಿದವರ ಕುಟ್ಟಿದವರ ಬೇಯಿಸಿದವರ ಅನಂತ ಕೈಗಳ ಶ್ರಮವಿರುತ್ತದೆ. ನೆಲ ಬೆಳೆಯನ್ನು ಕೊಡುತ್ತದೆ. ಆದರೆ ನೆಲದೊಳಗಿನ ಹಲವಾರು ಸೂಕ್ಷ್ಮಾಣು ಜೀವಿಗಳು ನೆಲವನ್ನು ಹದಗೊಳಿಸಿರುತ್ತವೆ. ಇದೊಂದು ಅದೃಶ್ಯ ಚರಿತ್ರೆ. ಲೋಕ ಮರೆಯಬಾರದ ಝಳವುಂಡ ಜೀವಗಳ ಕಥನ. ಬಾಬಾಸಾಹೇಬರನ್ನು ಓದುವಾಗೆಲ್ಲ ನನಗೆ ಸವಿತಾ ತಾಯಿ ನೆನಪಾಗುತ್ತಾರೆ. ನಾನು ಮೈಸೂರಿನಲ್ಲಿ ಓದುವಾಗ ಅಶೋಶಕಪುರಂಗೆ ಬಂದಿದ್ದ ಸವಿತಾ ತಾಯಿಯನ್ನು ನೋಡಿರುವೆ ಕೂಡ.

‍ಲೇಖಕರು avadhi

December 18, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: