ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜ ನಾ ತೇಜಶ್ರೀ ಅನುವಾದಿತ ಕವಿತೆಗಳು- ಪ್ರತಿಮೆ ಮತ್ತು ಇರುವೆಗಳು…

ಜ ನಾ ತೇಜಶ್ರಿ

ಜ.ನಾ.ತೇಜಶ್ರೀ ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಸಾಹಿತ್ಯದಲ್ಲಿ ಎಂ.ಎ ಮತ್ತು ಭಾಷಾಂತರದಲ್ಲಿ ಡಿಪ್ಲೊಮೊ ಪದವಿ ಪಡೆದಿದ್ದಾರೆ. ಹಾಸನದ ಸಂತಫಿಲೋಮಿನಾ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂದಿರಾಗಾಂದಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ʼಟ್ಯಾಗೋರ್‌ ಪೀಠʼದಲ್ಲಿ ಸಂಶೋಧನಾ ಸಹಾಯಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯು ಸಂಶೋಧನೆಗಾಗಿ ನೀಡುವ ಜೂನಿಯರ್‌ ಫೆಲೋಶಿಪ್‌ ಪಡೆದಿದ್ದಾರೆ.

ಲಯ, ತಿಳಿಗೋಳ, ಕತ್ತಲೆಯ ಬೆಳಗು, ಉಸ್ರುಬಂಡೆ, ಅವನರಿವಲ್ಲಿ, ಮಾಗಿಕಾಲದ ಸಾಲುಗಳು, ಕ್ಯಾಪ್ಟನ್‌ ಕವಿತೆಗಳು, ಯಕ್ಷಿಣಿ ಕನ್ನಡಿ – ಪ್ರಕಟಿತ ಕವನಸಂಕಲನಗಳು. ಬೆಳ್ಳಿಮೈ ಹುಳ ಕಥಾಸಂಕಲನ, ಕವಿ ರವೀಂದ್ರ, ಬೆಟ್ಟದ ಮೇಲಿನ ಬೆಳಕು ಇತ್ಯಾದಿ ಸಂಪಾದಿತ ಕೃತಿಗಳು, ಚೀನಿ ತತ್ವಶಾಸ್ತ್ರದ ಕತೆ, ಕಡಲ ತಡಿಯ ಗುಡಾರ, ರೆಕ್ಕೆಯೊಡೆದ ಮುಗಿಲು, ಚಕ್ರವರ್ತಿ ಬಾಬರನ ಪ್ರಾರ್ಥನೆ ಮತ್ತು ಇತರ ಕವಿತೆಗಳು ಇತ್ಯಾದಿ ಅನುವಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಯು. ಆರ್‌. ಅನಂತಮೂರ್ತಿಯವರ ಆತ್ಮಕತೆ ಸುರಗಿ ಯ ನಿರೂಪಣೆ ಮತ್ತು ಸಂಯೋಜನೆ ಮಾಡಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಟಿ.ಎಸ್‌. ರಂಗರಾವ್‌ ದತ್ತಿ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ದತ್ತಿ, ವಸುದೇವಭೂಪಾಲಂ ದತ್ತಿ, ಬೇಂದ್ರೆ ಗ್ರಂಥ ಬಹುಮಾನ, ಜಿ.ಎಸ್‌.ಎಸ್‌ ಕಾವ್ಯ ಪ್ರಶಸ್ತಿ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ – ಹೀಗೆ ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ.

ಈ ಸಂಚಿಕೆಗಾಗಿ ತಮಿಳು ಕವಿಯತ್ರಿ ಸಲ್ಮಾ ಅವರ ಕವನವನ್ನು ಇಂಗ್ಲಿಷಿನಿಂದ ಮತ್ತು ಹಿಂದಿ ಕವಯತ್ರಿ ಗಗನ್‌ಗಿಲ್‌ ಅವರ ಕವಿತೆಯನ್ನು ಹಿಂದಿಯಿಂದ ಅನುವಾದಿಸಿದ್ದಾರೆ.

1. ಪ್ರತಿಮೆ
ಮೂಲ : ಸಲ್ಮಾ

ಸಲ್ಮಾ ಅವರ ಮೂಲ ಹೆಸರು ರಕ್ಕಯ್ಯಾ. ಹೊಸಕಾಲದ ತಮಿಳು ಭಾಷೆಯ ಪ್ರಮುಖ ಕಾವ್ಯದನಿ ಇವರದ್ದು. ರಾಜಕಾರಣದಲ್ಲಿ ಸಕ್ರಿಯರಾಗಿ ಇರುವ ಸಲ್ಮಾ ಸಾಮಾಜಿಕ ಕಾರ್ಯಕರ್ತೆಯೂ ಹೌದು. ’ಸಲ್ಮಾ’ ಇವರ ಕಾವ್ಯನಾಮ. ಹಲವಾರು ಕವಿತೆಗಳು ಹತ್ತಾರು ಭಾಷೆಗೆ ಅನುವಾದಗೊಂಡಿವೆ. ಹತ್ತಾರು ಗೌರವ ಪುರಸ್ಕಾರಗಳಿಗೂ ಇವರು ಭಾಜನರಾಗಿದ್ದಾರೆ.

ಕತ್ತಲಲ್ಲಿ ಇಟ್ಟ ಹೆಜ್ಜೆಗೆ
ಅಪ್ಪಚ್ಚಿಯಾಯಿತು ಜಿರಲೆ.
ರಾತ್ರಿಯಿಡೀ ನಡೆದಿದೆ ಅದರ ಮೇಲೆ
ಇರುವೆಗಳ ಸೈನ್ಯದ ಆಕ್ರಮಣ,
ಬೆಳಗ್ಗೆ ಹೊತ್ತಿಗೆ ಉಳಿದಿತ್ತು
ಜಿರಲೆಯ ಅಸ್ಥಿಪಂಜರ ನನಗಾಗಿ,
ಹಾರಲೆಂದು ಏಳಲಾರದ ಜಿರಲೆಯ ರೆಕ್ಕೆಗಳು
ಯಾವ ಉಪಯೋಗಕ್ಕೂ ಬಾರದ ಕಡ್ಡಿಕಾಲುಗಳು
ತೋರಿದವು ನನಗೆ
ನನ್ನದೇ ಹೊಸದೊಂದು ರೂಪವನ್ನು.

2. ಇರುವೆಗಳು
ಮೂಲ : ಗಗನ್ ಗಿಲ್

ಗಗನ್ ಗಿಲ್ ಹಿಂದಿ ಭಾಷೆಯ ಪ್ರಮುಖ ಕವಯಿತ್ರಿ. ದೆಹಲಿಯವರು. ಪತ್ರಕರ್ತೆಯಾಗಿ ಕೆಲಸ ನಿರ್ವಹಿಸಿದ್ದಾರೆ. ಹಲವಾರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಗೌರವ ಪುರಸ್ಕಾರಗಳಿಗೂ ಭಾಜನರಾಗಿದ್ದಾರೆ.

ಮನೆಯ ಹಾದಿ ಕಳೆದುಕೊಂಡಿದ್ದವು
ಇರುವೆಗಳು.

ನಡೆದವು ಅವು ಎಳೆಯುತ್ತ ಸಾಲುಗೆರೆಗಳನ್ನು
ನಮ್ಮ ನಿದ್ರೆ ಮತ್ತು ದೇಹಗಳ ನಡುವೆ.
ಯಾರೋ ಯಾವಾಗಲೋ ಎಲ್ಲಿಯೋ
ಚೆಲ್ಲಿದ ಹಿಟ್ಟು,
ಹರಡಿಕೊಂಡಿದೆ ಅವುಗಳ ನೆನಪಿನ ತುಂಬ
ಕಣ್ಣಿಗೆ ಕಾಣಿಸದಂತ ನುಣುಪು ಹಿಟ್ಟು.
ಹುಡುಕುತ್ತ ತಡಕುತ್ತ ಅಲೆದವು ಅವು
ಭೂಮಿಯ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ.

ಹಲ್ಲೂರಿದವು ಬದುಕಿದ್ದ, ಸತ್ತಿದ್ದ ಎಲ್ಲವುಗಳ ಮೇಲೆ,
ಅವುಗಳ ಈ ಪಯಣದಿಂದ ಹಗುರಾಯಿತು
ಭೂಮಿಯ ಎಷ್ಟೋ ದುಃಖಗಳು,
ದಿಕ್ಕುದಿಕ್ಕುಗಳು ತಿರುಗಿದವು ದಿಕ್ಕುಗಾಣದೆ,
ಅದಲುಬದಲಾದವು ಧ್ರುವಗಳು. ಆದರೆ
ತಿಳಿಯಲಿಲ್ಲ ಯಾರಿಗೂ ಇರುವೆಗಳ ಅಳಲು.

ಒಂದಾನೊಂದು ಕಾಲದಲ್ಲಿ ಈ ಇರುವೆಗಳು
ಹೆಣ್ಣಾಗಿದ್ದಿವೇನೋ…

ನಾನೇಕೆ ಅನುವಾದಿಸುತ್ತೇನೆ..

ಆಯಾ ಕಾಲಘಟ್ಟದ ಬೇರೆಬೇರೆ ಕಾರಣ ಮತ್ತು ಒತ್ತಡಗಳಿಂದಾಗಿ ಸಾಧ್ಯವಾಗಿರುವ ಭಾಷಾಂತರ ಕೆಲಸದಲ್ಲಿ ನನಗೆ ಮುಖ್ಯವಾಗಿ ಕಾಣುವುದು, ಭಾಷಾಂತರದ ಮೂಲಕ ಒಂದು ಭಾಷೆ ಮತ್ತು ಸಂಸ್ಕೃತಿಯ ದೇಹಕ್ಕೆ ತುಂಬಿಕೊಳ್ಳುವ ಹೊಸಸಂವೇದನೆಗಳು. ಭಾಷಾಂತರವೇ ಇಲ್ಲದೇ ಹೋಗಿದ್ದಲ್ಲಿ ನಮ್ಮ ಜ್ಞಾನ ಮತ್ತು ಪ್ರಜ್ಞೆಯ ವಿಸ್ತರಣೆಯ ಸಾಧ್ಯತೆಗಳು ಎಷ್ಟು ಕಡಿಮೆಯಾಗಿರುತ್ತಿತ್ತು ಎಂದು ಆಗಾಗ ಯೋಚಿಸುತ್ತೇನೆ.

ಮೂಲ ಭಾಷೆಯ ಪರಿಚಯವಿಲ್ಲದೆ ಹೋದಾಗ ಸಹಜವಾಗಿಯೆ ಅದರ ಪದಕೋಶ ಮತ್ತು ಲಯವಿನ್ಯಾಸ ಎರಡೂ ನಮಗೆ ತಿಳಿಯುವುದು ಸಾಧ್ಯವಿಲ್ಲ. ಇಂಗ್ಲಿಷ್ ಭಾಷೆಯ ಛಂದೋರಚನೆಯ ಮೂಲಮಾನಗಳೇ ಬೇರೆಯಾಗಿರುತ್ತವೆ. ಇಂತಹ ಸಂದರ್ಭದಲ್ಲಿ ಕನ್ನಡದ ಶಬ್ದಕೋಶ ಮತ್ತು ಲಯವಿನ್ಯಾಸಗಳನ್ನು ಬಳಸದೆ ಭಾಷಾಂತರಕಾರರಿಗೆ ಬೇರೆ ದಾರಿಯಿಲ್ಲ. ಹೀಗೆ ಮಾಡುವಾಗ ಮೂಲದ ಲಯವನ್ನು ಅದರ ವಸ್ತು ಮತ್ತು ’ಭಾವಸ್ಥಿತಿ’ಗಳಿಂದ ಕಂಡುಕೊಳ್ಳುವುದು ನಮಗೆ ತೆರೆದಿರುವ ಒಂದು ಬಗೆ.

ಕೆಲವೊಮ್ಮೆ ಒಂದೇ ಕವಿತೆಯಲ್ಲಿ ಭಾವಸ್ಥಿತಿಗಳು ಮತ್ತು ಲಯಗಳು ಬದಲಾಗುತ್ತವೆ. ಆಗ ನಾವು ಅವುಗಳಿಗೆ ಪೂರಕವಾದ ಹೊಸ ಲಯವಿನ್ಯಾಸಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಅಲ್ಲದೆ, ಮೂಲ ಕವಿತೆಯನ್ನು ರಚಿಸಿದ ಕಾಲ ಬೇರೆ ಮತ್ತು ಭಾಷಾಂತರಿಸುತ್ತಿರುವ ಕಾಲ ಬೇರೆಯಾದಾಗ, ನಾವು ಆ ಕಾಲದ ಕನ್ನಡ ಕವಿತೆಯ ಲಯವನ್ನು ಅನುಸರಿಸಬೇಕೋ ಅಥವಾ ನಮ್ಮ ಕಾಲದ ಕವಿತೆಯನ್ನೋ ಎನ್ನುವುದು ಭಾಷಾಂತರದ ಮತ್ತೊಂದು ಪ್ರಶ್ನೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಕವಿತೆಯು ತನಗಾಗಿ ಬಯಸುವ ಲಯಗಳನ್ನು ಕಟ್ಟುವುದು ಭಾಷಾಂತರಕಾರನ ಕರ್ತವ್ಯ ಮತ್ತು ಸವಾಲು. ಕೊನೆಗೂ ಭಾಷಾಂತರವೆನ್ನುವುದು ಈ ಎಲ್ಲ ಅಂಶಗಳ ಸಂಕೀರ್ಣ ಹೆಣಿಗೆಯಾಗಿರುತ್ತದೆ.

‍ಲೇಖಕರು Admin

29 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading