ಶ್ರೀವತ್ಸ ದೇಸಾಯಿ
ಜ್ಯೋತ್ಸ್ನಾಕಾಮತ್ ಅವರಿಗೆ ನಾನು ಗುರುಭಾಯಿ; ನನಗೆ ಅವರು ಜ್ಯೋತ್ಸ್ನಾ ಬೆಹೆನ್. ನಮ್ಮ ಮೊದಲ ಭೇಟ್ 2008 ರಲ್ಲಿರ ಬೇಕು. ನನ್ನ ಮಿತ್ರ ಡಾ ಖಾರದ್ ಅವರ ಒತ್ತಾಯದ ಮೇಲೆ ’ಶಶಿಕಿರಣ್’ ಕಟ್ಟಡದ ಅವರ ಮೊದಲಂತಸ್ತಿನಲ್ಲಿದ್ದ ಫ್ಲ್ಯಾಟ್ ಗೆ ಹೋಗಿದ್ದೆ. ಅದೆಷ್ಟು ಆದರ ಮತ್ತು ಆತ್ಮೀಯತೆಯಿಂದ ಸ್ವಾಗತಿಸಿದ್ದರು! ಅವರ ನಗುಮುಖದ ಮೇಲೆ ಈಗಾಗಲೇ ಪುಂಖಾನು ಪುಂಖವಾಗಿ ಬರೆಯಲಾಗಿದೆ. ಆ ಮೊದಲೇ ಪತ್ರವ್ಯವಹಾರ ಆಗಿ ನನ್ನ ಸ್ವಲ್ಪ ಪರಿಚಯವಾಗಿತ್ತು.
ಖಾರದ್ ಮತ್ತು ನಾನು ಕೃಷ್ಣಾನಂದರ ಮೊದಲ ಪುಸ್ತಕ ಮನೋಹರ ಗ್ರಂಥ ಮಾಲೆ ತನ್ನ ಮೂವತ್ತೆರಡನೆಯ ವರ್ಷದ ಪ್ರಥಮ ಕುಸುಮವಾಗಿ 1969ರಲ್ಲಿ ಪ್ರಕಟಿಸಿದಾಗ ನಾವು ಹುಬ್ಬಳ್ಳಿಯ ಕಾಲೇಜಿನಲ್ಲಿ ಓದುತ್ತಿದ್ದೆವು. ಎಲ್ಲ ಕಾಲೇಜು ಯುವಕರಂತೆ ಪರದೇಶಕ್ಕೆ ಹೋಗು ಕನಸಿನ ಪ್ರೇರಣೆಯಿಂದಲೋ ಏನೋ! ನಮ್ಮ ಮೇಲೆ ಗಾಢ ಪರಿಣಾಮ ಬೀರಿತ್ತು. ತದ ನಂತರ ಅಲ್ಲೆ ಧಾರವಾಡದ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಜ್ಯೋತ್ಸ್ನಾ ಬುರ್ಡೆ, ಹೆಚ್ ಕೆ ರಂಗನಾಥರನ್ನು ಮದುವೆಯಾದ ಶಾಂತಾ ಶಾನಭೋಗ್, ಮತ್ತು ನನ್ನ ಶಾಲೆಯ ಲಂಗೋಟಿ ಗೆಳೆಯನ ಅಕ್ಕ ಸುಶೀಲಾ ಕುಲಕರ್ಣಿ (ಆಕಾಶವಾಣಿಯ ’ಗಿಳಿವಿಂಡಿ’ನ ಅಕ್ಕವ್ವ) -ಈ ಮೂವರ ಹೆಸರುಗಳು ಕೂಡೆಯೇ ಕೇಳಬರುತ್ತಿದ್ದವು.
ಈ ಮೂವರು ಗಾಢ ಸ್ನೇಹಿತೆಯರು,. ನಾವು ’ಕಾಮತರ’ (ಜ್ಯೋತ್ಸ್ನಾ ಅವರು ಕೃಷ್ಣಾನಂದರನ್ನು ಯಾವಾಗಲು ಹಾಗೆಯೇ ಕರೆಯುತ್ತಿದ್ದರು) ಎಲ್ಲ ಪುಸ್ತಕಗಳನ್ನು ಓದುತ್ತ ಅವರ ಕರಿಯರ್ ಅನ್ನು ಕಂಡವರು. ನಾವು ಶಾಲಾ ಕಾಲೇಜಿನಲ್ಲಿದ್ದಾಗಲೇ ಜ್ಯೋತ್ಸ್ನಾ ಅವರ ಅನೇಕ ಲೇಖನಗಳ ಮತ್ತು ರೇಡಿಯೋ ಕಾರ್ಯಕ್ರಮಗಳ ಅಷ್ಟಿಷ್ಟು ಪರಿಚಯವಿತ್ತು.. ಆದರೆ ಅವರು ಎಂಎ ಮಾಡಿ ಕರ್ನಾಟಕ ವಿಶ್ವವಿದ್ಯಾಲಯದ ಜಿ ಎಸ್ ದೀಕ್ಷಿತ್ ಅವರ ಕೆಳಗೆ ಪಿ ಹೆಚ್ ಡಿ ಮಾಡಿದ್ದು ಗೊತ್ತಿದ್ದರೂ, ಅದೇ ಇತಿಹಾಸ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದ ನನ್ನ ತಂದೆ ದೇಸಾಯಿ ಪಾಂಡುರಂಗ ರಾಯರ ವಿದ್ಯಾರ್ಥಿನಿ ಸಹ ಆಗಿದ್ದರೆಂದು ಗೊತ್ತಾದುದು ಅವರನ್ನು ಆ ದಿನ ಕಂಡಾಗಲೇ!

ಅವರ ಮನೆಗೆ ಹೋದ ಕೂಡಲೇ ಟೇಬಲ್ ಮೇಲೆ ನನ್ನ ಅವಗಾಹನೆಗೆ ನೆನಪಿಲೆ ತೆಗೆದಿಟ್ಟ ನನ್ನ ತಂದೆಯ ಪತ್ರ ನೋಡಿ ಅಚ್ಚರಿಯಾಯಿತು, ಅವರಿಬ್ಬರ ನಿಕಟ ಸಂಪರ್ಕ ಆವಾಗಲೇ ಗೊತ್ತಾಯಿತು. ಆ ಗುರುಭಕ್ತಿಯೇ ನನ್ನನ್ನು ಅಷ್ಟು ಹತ್ತಿರದವರನ್ನಾಗಿ ಮಾಡಿಕೊಂಡು ತಮ್ಮ ಗುರುಪುತ್ರನನ್ನು ”ಗುರುಭಾಯಿ’’ಯಾಗಿ ಮುಂದಿನ ಎಲ್ಲ ಪತ್ರ ವ್ಯವಹಾರದಲ್ಲಿ ಸಂಬೋಧಿಸುತ್ತಿದ್ದರು. ಮನೆ ತುಂಬ ’ಕಾಮತರ’ ಕುರುಹುಗಳು- ಟೈಪ್ ರೈಟರ್, ಕಾಮ್ತರು ತೆಗೆದ ಫೋಟೋಗಳು, ಆಗಿನ ಮಲ್ಲೇಶ್ವರಂ ದ ಒಂದು ಅದ್ಭುತ ಪೇಂಟಿಂಗ್ ಚಿತ್ರ ಬಹಳ ಹಿಡಿಸಿತು. ಆಗ ತಾನೆ ’ಅವರ ಮಗ ವಿಕಾಸ್ ಕಾಮತ್ ತಾನು ಸ್ಥಾಪಿಸಿದ www.kamat.com ದಲ್ಲಿ ಕಾಮತ್ ಪಪೋರಿಯಲ್ಲಿ (Kamat’s Potpourri) ”ಕಾಮತ್ ಪೋರಿ ಮತ್ತು ನನ್ನ ಪ್ರೇಮ ಸಂಬಂಧ’ಎನ್ನುವ ಲೇಖನವನ್ನು ಸಹ 2008ರಲ್ಲಿ ಪ್ರಕಟಿಸಿದ್ದ.
ಆನಂತರ ಅದರಲ್ಲೇ Amma’s Column ಶುರು ಮಾಡು ಅಮ್ಮನ ವಿಪುಲವಾದ ಸಾಹಿತ್ಯ ಸಂಶೋಧನ ಲೇಖನಗಳಿಗೆ ಜಾಗ ಮಾಡಿಕೊಟ್ಟ. ಅವರ ಸಾಚಾ ಸಾಹಿತ್ಯಿಕ ಸಂಶೋಧನೆ ದೋಷರಹಿತ ಎಂತಲೇ ನನಗೆ ಕರ್ನಾಟಕದ ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕಾದಾಗೆಲ್ಲ ಅದಕ್ಕೇ ಲಗ್ಗೆ ಹಾಗುತ್ತಿದ್ದೆ. ”ನಾವೊಬ್ಬರೇ ಕುಟುಂಬದವರು ಅದನ್ನು ನಡೆಸುವದು ಕಠಿನದ ಕೆಲಸವಾಗಿದೆ. ಅಷ್ಟೇ ಅಲ್ಲ ಕೃತಿಚೌರ್ಯನೂ ಬಹಳ. ಕದ್ದವರು ಯಾರೂ ’ಇವರಿಂದ ಕೃಪೆ’ ಅಂತ ಹಾಕದೆ ತಮ್ಮದೇ ಅಂತ ಪ್ರಕಟಿಸುವುದು ಹೆಚ್ಚಾಗಿದೆ’ ಅಂತ ವಿಷಾದ ಪ್ರಕಟಿಸಿದರು. ತಮ್ಮ ನಿಕಟವರ್ತಿಯಾದ ಮತ್ತು ನನ್ನ ತಂದೆಯವರಿಗೂ ಬೇಕಾದ ಶ್ರೀನಿವಾಸ್ ಹಾವನೂರ್ ಅವರಿಗೆ ಫೋನು ಹಚ್ಚಿ ಕೊಟ್ಟು ಮಾತಾಡಿಸಿದರು. ಆದಿನದ ಸುದೀರ್ಘ ಮಾತುಕತೆ ನನ್ನನ್ನು ಒಂದು ಬೇರೆ ಲೋಕಕ್ಕೆ ಒಯ್ದಿತ್ತು. ಆಗ ಆರೋಗ್ಯವಂತರಾಗಿದ್ದರು. ಫೋಟೊ ತೆಗೆಸಿಕೊಂಡು ಬಂದೆ.
ಇದೇ ವರ್ಷ ಜೂನ್ ತಿಂಗಳಲ್ಲಿ ನಾನು ಅವರ ಕೊನೆಯ ಭೇಟಿಗಾಗಿ ’ಶಶಿಕಿರಣ್’ಕ್ಕೆ ಹೋಗಿದ್ದಾಗ ಅಲ್ಲೆ ಇದ್ದ ಅವರ ಮಗ ವಿಕಾಸರ ಮೊದಲ ಭೇಟಿ. ಪರೋಕ್ಷವಾಗಿ ನನ್ನ ಛಲೋ ಪರಿಚಯವಾಗಿದ್ದ ಅವರು ನನ್ನನ್ನು ಕರೆದುಕೊಂಡು ಅವರ ತಾಯಿ ಹಾಸಿಗೆ ಹಿಡಿದಿದ್ದ ಕೋಣೆಗೆ ಕರೆದುಕೊಂಡು ಹೋದರು. ಅವರು ಮಾತಾಡುವ ಸ್ಠಿತಿಯಲ್ಲಿಲ್ಲ ಅಂತ ಎಚ್ಚರಿಸಿದರು.

ಆಶ್ಚರ್ಯವೆಂಬಂತೆ ನನ್ನ ಹೆಸರು ಕೇಳಿ ಕಣ್ಣು ತೆರೆದು ತಮ್ಮ ಕೊನೆಯ ಪುಸ್ತಕವನ್ನು ನನಗೆ ಕೊಡಲು ಮರೆಯ ಬೇಡ ಅಂತ ನೆನಪಿಸಿದರು. ಅದೇ ನನ್ನ ಅಂತ್ಯ ದರ್ಶನ. ಅವೇ ನಾನು ಕೊನೆಯ ಸಲ ಕೇಳಿದ ಅವರ ಧ್ವನಿ. ಅಷ್ಟಾದರೂ ಆಯಿತಲ್ಲ ಅಂತ ಸಮಾಧಾನ ಕನಸಿನ ಬೆನ್ನು ಹತ್ತಿ ಪರದೇಶಕ್ಕೆ ಬಂದು ನಾನು 1975ರಿಂದಲೂ ಇಂಗ್ಲೆಂಡಿನಲ್ಲಿ ವಾಸಿಸುತ್ತಿದ್ದೇನೆ. ಆದರೆ ನನ್ನ ವಾರ್ಷಿಕ ಭಾರತದ ಪ್ರವಾಸ ಅವರ ಭೆಟ್ಟಿಯಿಲ್ಲದೆ ಮುಗಿಯುತ್ತಿದ್ದಿಲ್ಲ. ಪ್ರತಿ ಸಲವೂ ಅದೇ ಪ್ರೀತಿ, ಅದೇ ಆತ್ಮೀಯತೆ, ಅದೇ ಸ್ಪಷ್ಟ ಮಾತು, ಅನಾಡಂಬರ ಮಾತು, ಹರಟೆ, ಅದೇ ನಗು ಮುಖ,. ಅವರ ಕೊನೆಯ ಪುಸ್ತಕ ಬರೆಯುತ್ತಿದ್ದಾಗ ರೋಸ್ ಐಯಿಲ್ಮರ್ ಸಮಾಧಿಯ ಬಗ್ಗೆಯ ಮಾಹಿತಿ ಕಳಿಸಿ ಕೊಟ್ಟಿದ್ದೆ.
ಮೇ ದಲ್ಲಿ ”ಕಲಕತ್ತಾ ದಿನಗಳು’ ಬುಕ್ ಬ್ರಹ್ಮ ಆನ್ ಲೈನ್ ಲೋಕಾರ್ಪಣೆಯಾದಾಗ ಆಸ್ಥೆಯಿಂದ ನೋಡಿದ್ದೆ. ಅ ಸಂದರ್ಭದಲ್ಲಿ ಲೇಖಕಿ ನೇಮಿಚಂದ್ರರ ಉಲ್ಲೇಖದಿಂದ ಮೈತ್ರೇಯಿ ದೇವಿ (ದಾಸಗುಪ್ತಾ) ಅವರ ಬಗ್ಗೆ ತಿಳಿಯಿತು. ಆಕೆ ಬರೆದ ಆಕೆಡೆಮಿಯಿಂದ ಪುರಸ್ಕೃತವಾದ ಆತ್ಮಕಥೆ-ಕಾದಂಬರಿ ’ನ ಹನ್ಯತೆ’. ಆವರ ಪುಸ್ತಕವನ್ನು ಹಸ್ತಾಕ್ಷರ ಹಾಕಿ ಜ್ಯೋತ್ಸ್ನಾಅವರಿಗೆ ಕೊಟ್ಟಿದ್ದರಂತೆ. ಅವರನ್ನು ಎರಡು ಬಾರಿ ಭೇಟಿಯಾದ ವಿಷಯವನ್ನು ತಮ್ಮ ಹಿಂದಿನ ಲೇಖನಗಳಲ್ಲಿ ಮತ್ತು ಈ ಪುಸ್ತಕದಲ್ಲಿ ಸುಂದರವಾಗಿ ವಿವರಿಸುತ್ತಾರೆ. ಮೈತ್ರೇಯಿ ಅವರ ಪುಸ್ತಕದ ಶೀರ್ಷಿಕೆ ಸಾರುವಂತೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ ದೇಹಾಂತವಾದರೂ ಆತ್ಮ ಎಂದೂ ನಾಶವಾಗುವದಿಲ್ಲ -ನ ಹನ್ಯತೆ. ಅದೇ ರೀತಿಯಲ್ಲಿ ನನ್ನ ಪಾಲಿಗೆ ಜ್ಯೋತ್ಸ್ನಾ ಬೆಹೆನ್ ಅವರ ನೆನಪು ಎಂದೂ ಮರೆಯುವದಿಲ್ಲ- ನ ವಿಸ್ಮರ್ಯತೆ.






0 Comments