ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಜ್ಯಾತಿ ಕುಲಿಮ್ಯಾಗ ಬೆಂದ ಪ್ರೀತಿ’

ತಿರುಪತಿ ಭಂಗಿ

ಆಂದ ಊರ ಮಂದಿ ಬಾಯಾಗ ಕುರಬರ ಭೀಮನ ಮಾತೋ ಮಾತ. ಅಗಸಿ ಕಟ್ಟಿಗಿ ಕುಂತ ಗಣೇಶ ಬೀಡಿ ಸೇದಕೊಂಂತ ಕುಂತಿದ ದೇಸಾಯಾರ ರುದ್ರಪ್ಪಗೌಡ್ರು ಬಾಳ ಬಿರಸಾಗಿ ಮಾತಾಡ್ತಿದ್ರು, ರುದ್ರಪ್ಪಗೌಡ್ರ ಸುತ್ತ ಮುತ್ತ ಮಂದಿ ಕೈ ಕಟ್ಟಿ ನಿಂತ್ಕೋಂದಿದ್ರು.. ಅಶ್ವಮೇದ ಯಾಗಾ ಮಾಡಾಕ ಹೋದ ರಾಜಾ ಸೋತ ಹಣಿಗೆ ಕೈ ಹಚ್ಚಗೊಂಡ ಕುಂತಾಂಗ ಕೆಲವು ಮಂದಿ ಕುಂತಿದ್ರ.
ಅಲ್ಲಲ್ಲಿ ಕಟ್ಟಿಮ್ಯಾಗ ನಾಲ್ಕಾರ ಜನ ಸೇರಿ ಗುಸುಗುಸು ಮಾತ್ತಾಡ್ತಿದ್ರು, ಆಟಾ ಆಡತಿದ್ದ ಚಿಕ್ಕ ಮಕ್ಕಳು ಇಂದ ಮಂದಿ ಇಷ್ಟ್ಯಾಕ ಕೂಡ್ಯಾರ, ಇವತ್ತ ಊರಾಗ ಸರಕ್ಕಸ ಗಿರಕಸ್ ಎನಾದ್ರೂ ಬರ್ತೈತೋ ಏನೋ, ಅಂತ ಕುಷಿಯಾಗಿದ್ರು.
ಕೆಲವು ಕುರಬರ ಯುವಕರು ಹಗ್ಗಾ ಹರಕೊಂಡ ಹೋರಿ ಹಂಗ ಆಕಡೆಗೊಮ್ಮೆ ಇಕಡೆಗೊಮ್ಮೆ ದುಡುದುಡು ಅಡ್ಯಾಡ್ತಿದ್ರ.. ಈ ಯುವಕರ ಚಲನ ವಲನ ನೋಡತಿದ್ರ ಕೆಲವವ್ರು ಗಾಬ್ರಿ ಅಕ್ಕಿದ್ರು, ಮತ್ತಷ್ಟ ಮಂದಿಗೆ ಏನೂ ಅಥರ್ಾನ ಅಕ್ಕಿರಲಿಲ್ಲ, ಬರಬರುತ್ತ ರುದ್ರಗೌಡ್ರ ಹತ್ತಿರ ಮಂದಿ ಬಾಳ ಜಾಮಾ ಆತು. ಇವತ್ತ ಎರಡ್ರಾಗ ಒಂದ ಆಗಾಕ ಬೇಕು, ಅಂತ ಜನರ ಮದ್ಯದಿಂದ ಒಂದು ಕೂಗು ಹರದು ಬಂತು, ತಡಿರಿ ತಡಿರಿ, ದುಡುಕುದ ಬ್ಯಾಡರಿ, “ತಾಳಿದಾಂವ ಬಾಳ್ಯಾನ’ ಅಂತ ಗಾದೆ ಮಾತೈತಿ ಮನಸ್ಯಾಗ ಸಮಾದಾನ ಇರ್ಬೇಕ,ಸಮಾದಾನ ತಗೋರಿ ಅಂತ ರುದ್ರಗೊಡ ಜನರಿಗೆ ಸಾಂತ್ವನ ಹೇಳಿದಂಗ ಡೌಲ ಮಾಡತಿದ್ದರು.

ಗೌಡ್ರ ಹಿಂಗ ಸಮಾಧಾನ, ಶಾಂತಿ ಅಂತ ಕೂಡಾಕ ಇದು ಗಾಂಧಿಯುಗಾ ಅಲ್ಲರೀ, ನವ್ಯಾರೂ ಗಾಂದಿ ಅನಿವ್ಯಾಯಿ ಅಲ್ಲ, ಈಗೇನಿದ್ರು “ಏಕ ಮಾರ್ ದೋ ತುಕಡಾ’ ನೇತಾಜಿ ಹಂಗಿದ್ರ ಏನಾರ ನಮಗ ಸ್ವಲ್ಪ ಕಿಮ್ಮತ್ ಸಿಗತೈತಿ, ಇಲ್ಲಂದ್ರ ಮುಗಿತಿ, ನಮ್ಮ ಗತಿ ಗೋವಿಂದಾನ ಅಕ್ಕೈತಿ. ಅಂತ ಗುಂಪಿನಲ್ಲಿರುವ ಒಬ್ಬ ಮುಖಂಡ ಗೌಡರ ಮಾತಿಗೆ ಸರಿಸಾಟಿ ಮಾತಾಡಿದ.
ಹಂಗಾದ್ರ ನಿಮ್ಮಿಚ್ಚೆಯಂಗ ಆಗ್ಲಿ, ಯಾಕಂದ್ರ ಇದರಾಗ ನಮ್ಮೂರ ಮರ್ಯಾದಿ ಐತಿ, ಯಾರ ಜೀವಾ ಹ್ವಾದ್ರು ಲಿಕ್ಕಿಸಬ್ಯಾಡ್ರಿ, ಇಂದ ಕುರಬರ್ನ ಹೋಡದಾರ ನಾಳೆ, ರಡ್ಡ್ಯಾರ್ನ ಹೋಡಿತಾರ, ಅಚಿನಾಡ್ದ ಲಿಂಗಾಯಿತ್ರರ್ನ.. ಮುಂದ ಮುತ್ಯಾರ್ನೋ ಹೇಳಾಕಾಗಲ್ಲ.
ನಮ್ಮ ಹೋರಾಟ ಸ್ವಲ್ಪ ಬಿರಸಾಗಿನ ಆಗ್ಲಿ .ಗಟ್ಟಿಮುಟ್ಟಿ ಹೆಂಗಸರು ಬರ್ತಿನಂದ್ರ ಅವರೂ ಬರ್ಲಿ . ಅವರ ಕೈಯಾಗ ಒಂದ ಕುಡಗೋಲರಾ, ಕೊಡ್ಲಿಯರಾ ಕೊಡ್ರಿ.. ನೀವ ಇವಕ್ರು ಹುರಪಾಗಿರ್ರೀ.
ಮುದಕ ಮನಸ್ಯಾರು, ಮಕ್ಳು ಮನ್ಯಾಗ ಇರ್ಲಿ, ಇಂದ ರಾತ್ರಿನ ಯುದ್ದ ಪ್ರಾರಂಬಾಗ್ಲಿ, ನಮ್ಮ ಶಕ್ತಿ ಎಷ್ಟೈತಿ ಅಂತ ಆ ಸೂ.. ಮ..ಗೆ ತೊರ್ಸೂನು, ಹಿಂಗ ರುದ್ರಗೌಡ ಊರ ಮಂದಿಗೆ ತರಬೇತಿ ಕೊಟ್ಟ. ತನ್ನ ಬ್ಯಾಳಿ ಬೇಸಕೊಳ್ಳಾಕ ಇದ ಸರಿಯಾದ ಸಮಯ ಅಂತ ಅಂದಕೊಂಡ. ಉರಿವು ಬೆಂಕ್ಯಾಗ ತುಪ್ಪಾ ಸುರದಂಗ ಮಾತಾಡಿ ಕುರಬರನೆಲ್ಲ ಎತ್ತ ಕಟ್ಟಿ , ಬಡಪಾಯಿ ಮುಸಲ ಮಂದಿ ಮ್ಯಾಲ ಚೂ ಬಿಟ್ಟ. ಮೋಜನೋಡ್ತಿದ್ದ.
ಅಕ್ಷರದ ಅರಿವಿಲ್ಲ ಕುರಬ ಹುಮ್ಮ ಮಂದಿಗೆ ಆವೇಶ ಹೆಚ್ಚಾತು. ಜೀವದ ಹಂಗು ತೊರೆದು, ಭಾರತ ಸ್ವತಂತ್ರ ಸಂಗ್ರಾಮದಾಗ ಬ್ರಟಿಷರ ವಿರುದ್ದ ಭಾರತೀಯರು ಹೊರಾಟಕ್ಕೆ ಸಜ್ಜಾದಂಗ, ಕುರುಬರ ಹಳ್ಳಿ ಜನರು ಊರಾಗಿರೋ ‘ಮುಸಲ್’ ಮಂದಿ ಹೊಡ್ಯಾಕ ಪ್ಲ್ಯಾನ ಮಾಡಕ್ಕೊಂಡ್ರು. ರುದ್ರಗೌಡನ ಹಕ್ಕಿಕ್ಕತ್ತ ಯಾರಿಗೂ ಅರ್ತನೇ ಆಗಲಿಲ್ಲ.

*****

ರಾತ್ರಿ ಹತ್ತಾಗಿತ್ತು. ಕುರಬರ ಭೀಮ ಸೈಕಲ್ ತಗೊಂಡ ಸಿನಮಾ ನೋಡಾಕ ಹೋಗಿದ್ದ. ಕುರಬರ ಹಳ್ಳಿಯಿಂದ ನಗರಕ್ಕ ಹೋಗಬೇಕಾದ್ರ ಬರಬ್ಬೊರಿ ಒಂದ ತಾಸ ಬೇಕಿತ್ತು. ಬಿರಬಿರನ ಸೈಕಲ್ ಹೊಡಕೊಂಡ ಟಾಕಿಜ ಮುಟ್ಟಿದಾಗ ಭೀಮನ ಮಯ್ಯಲ್ಲಾ ನೀರ ಹರಿತ್ತಿತ್ತು. ಏದುಸಿರ ಬಿಡ್ತಿದ್ದ. ಸೈಕಲ್ ಕತ್ತಲದಾಗ ಒಂದ ಮೂಲ್ಯಾಗ ವತ್ತಿ, ಹಣಿಮ್ಯಾಲ ಬೊರ್ಗರಿತ್ತಿದ್ದ ಬೆವರಾ ಹಂಗ ಅಂಗೈಯಿಂದ, ಮುಂಡಿ ತುದಿಯಿಂದ ತಿಕ್ಕೋಂತ ಟಿಕೀಟ ಕೊಡು ಕೌಂಟರ ಕಡಿ ಕತ್ತಲದಾಗ ನಡಿದ. ಲಗೂನ ವಂದ ಟಿಕೀಟ ಕೊಡ್ರಿ, ಅಂತ ಹತ್ತರೂಪಾಯಿ ಕೊಟ್ಟ, ಮೂರೂಪಾಯಿ ಚಿಲ್ಲ್ರಾಕೊಡು, ಹಿಂಗ ಎಲ್ಲಾರು ಗಟ್ಟಿ ನೋಟ ಕ್ವಟ್ಟರ ಚಿಲ್ಲರಾ ನಾ ಎಲ್ಲಿಂದ ತರ್ಲಿ ಅಂತ ಟಿಕಿಟ ಕೊಡಾಂವ ವಟಗುಡಿದಾ. ನನ್ನ ಹಂತ್ಯಾಕ ಹತ್ತರೂಪಾಯಿ ಐತಿ, ಚಿಲ್ಲ್ರಾ ಇಲ್ಲ ರೀ ಹ್ಯಾಂಗಾರ ಮಾಡಿ ದೌಡ ಕೊಡ್ರಿ, ಸಿನಿಮಾ ಬ್ಯಾರೆ ಹತ್ತೈತಿ, ಅಂತ ಬೀಮಾ ತರಾತುರಿ ಕುಣಿತಿದ್ದ, ಚಿಲ್ಲ್ರಾನ ಇಲ್ಲ ಅಂತ ಟಿಕಿಟ ಕೊಡುವಂವ ಕಡಾಕಂಡಿತವಾಗಿ ಹೇಳಿದಾಗ, ಹತ್ತ ರೂಪಾಯಿ ಪೂರಾ ನೀನ ಇಟಗೋ ನನಗ ಮೊದಲ ಟಿಕೀಟ ಕ್ವಡ ಅಂತ ಟಿಕೀಟ ಇಸ್ಕೊಂಡ ಓಡಿದ,
ಬಾಗಿಲದಾಗ ನಿಂತಿದ್ದ ಒಬ್ಬ ಅಜ್ಜ ಬೀಮನ ಕೈಯಾಗಿಂದ ಟಿಕೀಟ ಇಸ್ಕೋಂದ ‘ಚರಕ್’ ಅಂತ ಹರದ .ಒಂದ ತುಂಡ ಬೀಮಗ ಕೊಟ್ಟು, ತಮ್ಮಾ ಆ ಕಡೆ ಹೋಗ ಅಂತ ಬ್ಯಾಟ್ರೀ ಬೆಳಕ ತೋರಿಸಿದ, ಭೀಮ ಕೆಲವ್ರಗೆ ಕಾಲ ಬಡಸ್ಕೊಂತ, ತಪ್ಪಾತ್ರಿ ,ಕತ್ತಲ್ಲದಾಗ ಇವ್ನನೌನ ಸರಿಯ್ಯಾಗಿ ಕಾಣ್ತಿಲ್ಲ ಅಂತ ಹಂಗ ಮುಂದ ಕಾಲ ಇಟಗೊಂತ ಪ್ರಾಯಾಸ ಪಟ್ಟ ಕುಚರ್ಿ ಹಿಡದ ಕುಂತ ಉಪ್! ಅಂತ ಉಸರ ಬಿಟ್ಟ. ಅಸ್ಟೋತ್ತಿಗೆ ಸ್ಕ್ರೀನ್ ಮ್ಯಾಲ ‘ಮದ್ಯಂತರ’ ಅಂತ ಹೆಸರು ಬಂತು.
ಇವ್ನನೌನ ಅರ್ಧ ಮುಗದ ಹೋತ, ಎಷ್ಟ ಅಂವಂಸ್ರಾ ಮಾಮೊದಲಿಂದ ನೋಡಾಕ ಆಗ್ಲಿಲ್ಲ, ಎಷ್ಟ ಪೈಟು ಮುಗದಾವೋ,ಎಷ್ಟ ಹಾಡ ಮುಗ್ದಾವೋ ಏನೋ ಅಂತ ಹಳಹಳಿ ಮಾಡಕೊಂಡ. ಅಷ್ಟೋತ್ತಿಗೆ “ಭೀಮಣ್ಣಾ ಏ.. ದೋಸ್ತ ಸೀನಮಾ ನೋಡಕಾ ಬಂದಿಯಾ’ ಅಂತ ಚಿತ್ರ ಮಂದಿರದಾಗಿಂದ ಒಂದ ದ್ವನಿ ಓಡೊಡಿ ಬಂದ ಭೀಮನ ಕಿವಿ ಹೊಕ್ಕಾಗ ಭೀಮ ಹಿಂತುರಿಗಿ ನೋಡಿದ. ಪಿಂಜಾರ ರಪ್ಯಾ ಅರ್ದಮರ್ದ ಕತ್ತಲದಾಗ ಕೈ ಬೀಸಿದ. ರಪ್ಯಾಂದ ಕೂನಸಿಗೂದು ಭೀಮಗ ಸ್ವಲ್ಪ ಕಷ್ಟ ಆತು. ಕತ್ತಲದಾಗ ರಪ್ಯಾನ ಭೀಮದ್ದಲ್ಲಿಗೆ ಬಂದ. ಏನಪಾ ಸಾಹೇಬಾ ಸಿನಮಾ ನೋಡಾಕ ಬಂದಿರ್ಯಾ ಅಂದ. ಬೀಮ ಆಗ ಹೌದ್ಲೆ, ನೀ ಯಾವಾಗ ಬಂದೀ, ಎಲ್ಲಿ ಕುಂತೀ. ನೀ ಒಬ್ಬ ಬಂದಿಯೋ ನಿನ್ನ ಜೋಡಿ ಮತ್ತ್ಯಾರ ಬಂದಾರೋ ಅಂತ ಭೀಮ ಚೌಕಾಸಿ ಮಾಡಿದ. ನಾ ಒಬ್ನ ಬಂದಿನಪಾ. ನನ್ನ ಜೋಡಿ ಮತ್ತ್ಯಾರು ಇಲ್ಲ. ಸಿನಮಾ ಮುಗದ ಮ್ಯಾಲ ಊರ್ಗೆ ಹ್ಯಾಂಗ ಹೋಗುದು, ಒಬ್ನ ಬ್ಯಾರೆ ಅದಿನಿ, ಅಂತ ಅಂಜಿಕ ಬಂದಿತ್ತು. ರಾತ್ರಿ ಹೊತ್ತು ಹಳ್ಳಿಗೆ ಹ್ಯಾಂಗ ಹೋಗೂದು ಅನಕೊಂತ ಚಿಂತಸ್ತಿದ್ದೆ. ಅಲ್ಲಾನ ಕುರುಣಿ ಐತಿ. ನೀ ಜೊತಿಗಾದಿ. ಅಂತ ರಪ್ಯಾ ಬಾಳ ಹುರಪಾದ. ಆದ್ರ ಭೀಮಗ ರಾತ್ರಿ, ಕತ್ಲ ಅಂಜಕೆ ಇದರ ಭಯಾ ಇದ್ದಿರಲಿಲ್ಲ. ಸಿಕ್ಕಾಪಟಿ ಧ್ಯೆರ್ಯ ಇತ್ತ ಭೀಮಗ. ರಾತ್ರಿ ಹಗಲಿ ಕುರಿಜೋಡಿನ ಭೀಮನ ಬದುಕ, ಹಿಂಗ ಇರಬೇಕಾದ್ರ ಭೀಮ ಕತ್ತಲ ಕಂಡ್ರ ಹೆದರ್ತಿದ್ದಿಲ್ಲ. ಆದ್ರ ರಪ್ಯಾಗ ಕತ್ಲ ಕಂಡ್ರ ಸಾಕು ‘ಹರೇ ಅಲ್ಲಾ’ ಅಂತಿದ್ದ.
‘ಟ್ರಿಂಗ್ ಟ್ರಿಂಗ್’ ಅಂತ ಸೀನಮಾ ಟಾಕೀಜನ್ಯಾಗ ಒಂದ ಗಂಟಿ ಶಬ್ದ ಕೇಳ್ತಿ. ಹೊರಗ ಹ್ವಾದ ಮಂದಿ ಗಾಬರಿಗೆಟ್ಟ ಒಳಗ ಬರಕತ್ತಿದ್ರ. ಬಂದ ತಮ್ಮ ತಮ್ಮ ಜಾಗಾ ಅಜ್ಮಾಸ ಲೆಕ್ಕಾಚಾರ ಹಾಕಿ ಹಿಡಕೊಂದ ಕುಂತ್ರ.
ಬೀಮನ ಚಿತ್ತ ಪೂತರ್ಿ ಬಿಳಿ ಅರವಿ ಮ್ಯಾಲಿರೋ ಚಿತ್ರದ ಮ್ಯಾಲಿತ್ತು. ಶಿವರಾಜಕುಮಾರ ರೌಡಿಗಳ್ನ ಅಟ್ಟಸ್ಕೊಂಡ ಹೋಗಿ ಹಿಗ್ಗಾಮುಗ್ಗಾ ತಳಸಿದ್ದ. ಟಾಕೀಜನ್ಯಾಗಿನ ಮಂದಿ ಸೀಟಿ ಹಾಕ್ಕೊಂತ, ಕೇ…. ಹೋ ಹೋ…. ಅಂತ ಕೂಗಿ ‘ ಹಾಕ ಶಿವಣ್ಣ ಆ ಸುಳಿಮಗಂದ ವಿಲನಂದು ಸೊಕ್ಕ ಬಾಳಾಗೇತಿ’ ಅಂತ ಮಂದಿ ಶಿವಣ್ಣ ಪ್ಯೆಟ ನೋಡಿ ಎಂಜೈಯ್ ಮಾಡ್ತಿದ್ರು. ಶಿವಣ್ಣನ ಪೈಟ ಮುಗಿದ ಮ್ಯಾಲ ಎಲ್ಲ ಮಂದಿ ರಿಲ್ಯಾಕ್ಸ ಆಕ್ಕಿದ್ರು.
ಭೀಮಗ ಶಿವಣ್ಣನ ಸಿನಮಾ ಅಂದ್ರ ಪಂಚ ಪ್ರಾಣ. ಟಾಕೀಜಗ ಅವನ ಸಿನಮಾ ಹತ್ತಿದ್ರ ಸಾಕ ಎಲ್ಲಿದ್ದಲ್ಲಿ ಬೀಮ ಹಾಜರಾಗ್ತಿದ್ದ. ಶಿವಣ್ಣ ಸಿನಮಾ ನೋಡಿ ನೋಡಿ ಅವನಗತೇನ ತೆಲ್ಯಾಗಿನ “ಹಿಪ್ಪಕಟ್’ ಕೂದ್ಲಾ ಬಿಟ್ಟಿದ್ದ, ಟಿಪ್ಪು ಸುಲ್ತಾನಗತೆ ಚಂದಾಗಿರುವ ಮೀಸಿ ಬೋಳಸ್ಕೊಂಡ ನಾನು ಶಿವಣ್ಣತರಾ ಅಂತ ಭೀಮ ಆಗಾಗ ಭಾವುಕ ಅಕ್ಕಿದ್ದ. ನಾಲ್ಕಾರ ವಾರಿಗೆ ಹುಡುಗ್ರ ಸೇರಿದ್ರ ಸಾಕ ಭೀಮ ಶಿವರಾಜಕುಮಾರ್ನ ಡೈಲಾಗ ಹೇಳ್ತಿದ್ದ, ಇವ್ನ ಡೈಲಾಗ ಕೆಳ್ಕೋತ ಹುಡುಗ್ರು ‘ವಾರ್ರೇ ವಾವ್ ಕುರಬರ ಹುಲಿಯ’ ಅಂತಚ್ಪ್ಪಾಳೆ ತಟ್ಟತಿದ್ರು.
ಕೆಲವು ಹುಡುಗರು ಕುರುಬರ ಭೀಮಗ ಶಿವರಾಜಕುಮಾರ, ಶಿವಣ್ಣ, ಅಂತ ಕರಿತಿದ್ರು. ಹಂಗ ಕರದಾವ್ರ ಮ್ಯಾಲ ಭೀಮಗ ಎಲ್ಲಿಲ್ಲದ ಪ್ರೀತಿ, ಮಕಾ ಅರಳಿಸಿ ನಗತ್ತಿದ್ದ. ಕುರುಬರ ಹಳ್ಳಿ ಜನರ ಮನಸನ್ಯಾಗ ಭೀಮ ಶಿವರಾಜಕುಮಾರಾಗಿ ಉಳದಿದ್ದ.
ಸಿನಮಾ ಮುಗದ ಮ್ಯಾಲ ಭೀಮಣ್ಣ ಎಲ್ಲದಿಯೋ ಕತ್ತಲದಾಗ ಕಾಣ್ವಲ್ದ ನಿನ್ನ ಮಕಾ ಅಂತ ರಪ್ಯಾ ತಡಕಾಡಿದ. ರಪ್ಯಾ ‘ನಾ ಇಲ್ಲದ್ದಿನಿ ಅಪೋ’ ಇತ್ತಾಗ ಬಾ ಅಂತ ರಪ್ಯಾನಕಡೆ ಭೀಮ ಕೈ ಬೀಸಿದ..
ದಾರಿ ಉದ್ದಕ್ಕೂ ಶಿವರಾಜಕುಮಾರನ ಸಿನಿಮಾ, ಅಂವ್ನ ನಟನೆ, ಅಂವ ಆಡಿದ ಪೈಟು, ಡೈಲಗಳ ಇಚಾರ ಮೇಲಕು ಹಾಕ್ಕೋಂತ ಬಂದ್ರು. ಅಷ್ಟೋತ್ತಿಗೆ ಕುರುಬರಹಳ್ಳಿ ಬಂದಿತ್ತು. ಇಡೀ ಊರಿಗೆ ಊರೆ ನಿದ್ರೆ ಮಾಡ್ತಿತ್ತು. ಇವ್ರ ಮುಂದ ಬೇದಿಗೆ ಬಂದ ಹೆಣ್ಣಾಯಿನ ಅಟ್ಟಸಕೊಂಡು ಹತ್ತೆಂಟು ನಾಯಿಗಳ ಮರೆಯಾದವು. ತಮ್ಮ ತಿಂಡಿ ತಿರಸ್ಕೊಳ್ಳು ಅಬ್ಬರದಲ್ಲಿ ಅವ್ರ ಕಡೆ ತಿರುಗೆ ನೋಡದೆ ಕತ್ತಲದೊಳಗೆ ಕಳಿದು ಹೋದು.
ಗೊಸ್ಕ ಗೊಸ್ಕ ಕೆಮ್ಕೋತ ರಪ್ಯಾರ ಎದರ ಮನ್ಯಾಗ ಇರು ಮುತ್ಯಾ.ಇವರ್ನ ಮಾತಾಡ್ಸು ತ್ರಾಣ ಇಲ್ದ ಕೊಮ್ಮಕೊಂತ ರಗ್ಗ ಹೋತಕೊಂಡ. ‘ಭೀಮಾ ನೀ ನಿದಾನ್ಕ ಹೋಗು, ಕತ್ತಲದಾಗ ಜ್ವಾಕಿ’ ಅಂತ ರಪ್ಯಾ ಹೇಳುವಾಗ ಭೀಮನ ಕಣ್ಣು ಅಷ್ಟ ಕತ್ತಲದಾಗೂ ಏನೋ ನೋಡುವ ಕಾತುರದಲ್ಲಿ ತಡಕ್ಯಾಡಿದ. ಭೀಮ ಸೈಕಲ್ ಗಂಟಿ ಉದ್ದೇಸ ಇಲ್ದ ಬಾರಸಿದ, ಆಗೋಂದು ದೀಪ ರಪ್ಯಾರ ಮನ್ಯಾಗ ಹತ್ಗೊಂತು.ನಾಳೆ ಕಾಲಿ ಇದ್ರ ಕುರಿ ದಡ್ಡಿ ಕಡೆ ಬರ್ತೀನಿ ಅಂತ ಹೇಳಿ ರಪ್ಯಾ ಮನ್ಯಾಗ ಹ್ವಾದ.ಪತಿಮಾ ನಿದಾನ್ಕ ಕದಾ ಮುಚ್ಚಿದ್ಳು. ಮುಚ್ಚುವಾಗ ಭೀಮನ್ನ ಕಳ್ಳಗಣ್ನೀಲೆ ಒಮ್ಮೆ ನೋಡಿದ್ಳು. ಭೀಮಗ ಅಕೀನ ನೋಡಿ ಹೊಟ್ಟಿ ತುಂಬಿದಂಗ ಆತು.ಸೈಕಲ್ಲ ಹತ್ತಿ ದಡ್ಡಿ ಕಡಿ ಹುರಿಪಿಗೆದ್ದ ಹುಚ್ಚನಂಗ ನಡದ.
ದಡ್ಡಿ ಸಮೀಪ ಬಂದ್ರು ಅವನ ಸಾಕಿದ ಎರಡ ನಾಯಿವಳಗ ಒಂದ ನಾಯಿನೂ ಬೊಗಳ್ಳಿಲ್ಲ.. ‘ಇವ್ನನೌನ ದಿನ ಒಂದೊಂದ ಚರಿಗೆ ಸಂಜಲೆ ಮುಂಜಾಲೆ ಹಾಲ ಮಸ್ತ ಕುಡಿತಾವ., ಆದ್ರ ಮಂದಿ ಗಿಂದಿ ಬಂದ್ರೂ ಮೂಕ ದೇವ್ರಗತೆ ಹಂಗ ಅದಾವ ನೋಡ’ ಅಂತ ನಾಯಿಗೊಳ ಮ್ಯಾಲ ಸಿಟ್ಟಿಮಾಡಿದ.
‘ ಕುರ್ರೇ.. ಕುರ್ರೇ, ಬಾ.. ಬಾ..’ ಅಂತ ಕರದ್ರು ನಾಯಿಗಳು ಬರಲಿಲ್ಲ ಎಲ್ಲಿ ಹೋಗಿರ್ಬೇಕ ಇವು? ಕುರಿದಡಿ ಬಿಟ್ಟಿ ಹೋಗುವಲ್ಲ. ಬಾಳ ನಿಯತ್ಯ ಉಳಸ್ಕೊಂಡ ಬಂದಿದ್ದು ಇಂದ್ಯಾಕ ಕಣ್ಮರಿಯಾಗ್ಯಾವೋ ಅಂತ ಶಪಿಸಿದ.ಅಷ್ಟೋತಿಗೆ ದೂರದಾಗ ನಾಯಿಗಳು ಬಗಳೋ ಶಬ್ದ ಕವಿಗೆ ಅಪ್ಪಳಿಸಿತು. ನಾಯಿ ಬೆರೆಲ್ಲು ಹೋಗಿಲ್ಲ. ಇವು ಬೆದೆನಾಯಿಗೆ ಗಂಟ ಬಿದ್ದಾವ ಹಿಂಗಾದ್ರ ಇವತುರ ತಟ್ಟಬೀಜಾನ ತಗುಬೇಕ ಅಂತ ಇಚಾರ್ಸಿದ. ಅವ್ಕ ಎಷ್ಟಾರಾ ತಿಂಡಿ ನೋಡ, ಹಲಕ್ಕಟ್ಟಗೊಳಗೆ. ಒಂದ ನಾಯಿಗೆ ಎಂಟತ್ತ ಗಂಟಬಿದ್ರ ಅದರ ಗತಿ ಏನಾಗಬಾರ್ದು, ಅದ ಮನಸ್ಯಾರಾದ್ರ..! ಒಬ್ಬರಕ್ಕಿಂತ ಸಂಖ್ಯೆ ಹೆಚ್ಚಾದ್ರ ಅತ್ಯಾಚಾರ ಅಂತಾರ, ರೇಪ ಅಂತಾರ. ನಾಯಿ ಚ್ಯಾತ್ಯಾಗ ಹಿಂತಾದೇನು ಇಲ್ಲನೋಡ. ಒಂದ ರೀತಿ ನೋಡಿದ್ರ ಪ್ರಾಣಿಗಳ ಜೀವನಾನ ಚಲೋ, ನಮ್ಮ ತರ ತುಡಗ ಬಡಗ ಕತ್ತಲದಾಗ, ಕೆರಿದಂಡಿ, ಬಣವಿ ಹಿಂದ, ಹಿತ್ತಲದಾಗ ಕದ್ದು ಮುಚ್ಚಿ ತಿನಕ್ಯಾಡಿ ಮಾಡುದ್ರೋಳಗ ತಳಗಧರ್ಾ ಒಳಗಧರ್ಾ ಆಗಿರ್ತೈತಿ. ಅಂತ ನಾಯಿಗಳ ದಾಂಪತ್ಯ ಅವುಗಳ ಮಿಲನದ ವಿಷಯ ತೆಲ್ಯಾಗ ತಗೊಂಡ ಹಾಸಗಿ ಹಾಸಿದ್ರ, ಪಟ್ಟಂತ ಪಿಂಜಾರ ಪಾತಿಮಾ ಕಣ್ಣೆದುರಿಗೆ ಬಂದಾಂಗಾತ. ಇಷ್ಟೋತ್ತಿನವರಿಗೂ ನೋಡಿ ಬಂದ ಸಿನಿಮಾದ ನೆನಪಿಗಿಂತ, ನಾಯಿಗಳ ಅನೈತಿಕ ಸಂಬಂಧಕ್ಕಿಂತ, ಪಾತಿಮಾಳ ನೆನಪು ಭೀಮನ ಎದೆಯಾಗ ಬಾಳ ಗಚ್ಚೆಂಗ ಸದ್ದು ಮಾಡಾಕ ಹತ್ತು. ಹಾಸಗಿ ತುಂಬ ಹೊರಳಾಡಿದ್ರೂ ನಿದ್ದೆ ಬರಲಿಲ್ಲ. ಇಡೀ ರಾತ್ರಿ ಪಾತಿಮಾಳ ಎದೆಯ ಉಬ್ಬುತಗ್ಗುಗಳು ಭೀಮನ ನಿದ್ದೆಗೆಡಸಿದವು.

*****

ಪಿಂಜಾರ ಪಾತಿಮಾ ಆಗಷ್ಟ ದೊಡ್ಡಾಕ್ಯಾಗಿ ನಾಕ ತಿಂಗಳ ಆಗಿತ್ತು. ನೋಡಾಕ ಅವಳಂಗ ಚಲ್ವ್ಯಾರು ಕುರುಬರ ಹಳ್ಯಾಗಷ್ಟ ಅಲ್ಲ ಸುತ್ತ ಮುತ್ತಲಿನ ಊರಾಗು ಪತಿಮಾಳಂಗ ಚಂದ ಹುಡುಗ್ಯಾರು ಇರಲಿಲ್ಲ. ‘ಪಾತಿಮಾಳ ಗಿಂಡಿ ನಾ ಬಾರಸಬೇಕು ನಾ ಬಾರಸಬೇಕು’ ಅಂತ ಚಿಗರ ಮೀಸಿ ಹುಡುಗ್ರು ಸ್ಪಧರ್ೆ ನಡಿಸಿದ್ವು.
ಕೆಲವಂದಿಷ್ಟ ಪಿಂಚಾರ ಬೆರಕಿ ಕುಳಗೊಳು ತಡಿತಿದ್ರು. ‘ಅವಳು ನಮ್ಮ ಜ್ಯಾತ್ಯಾಗ ಅರಳಿರೋ ಹೂ, ಅದ ನಮಗ ಸೇರ್ಬೇಕ. ಇನ್ನೊಬ್ರು ಯಾರು ಅದನ ಬಿಲ್ಲಕುಲ್ಲ್ ಮುಟ್ಟಬಾರು’್ದ ಅಂತ ಎಚ್ಚರಿಕೆ ಕೊಡತಿದ್ರು.
ಹೋಗರ್ಲೆ ‘ಹೆಣ್ಣಂದ್ರ ಯಾವ ಜಾತಿದಾದ್ರೇನ’, ವಲದ ಬಂದ್ರ ಯಾರರ ವಲ್ಲೆಂತಾರೇನ’ ಅಂತ ಕೆಲವು ಕುರಬರ ಹುಡುಗ್ರು ಪಿಂಜಾರ ಹುಡಗ್ರನ ಕೆನಕತ್ತಿದ್ರು. ನಿಮ್ಮದ ಸ್ವಕ್ಕ ಬಾಳ ಆಗೇತ ಮಕ್ಳ ಒಂದ ಕೈ ತೋರಸ್ಬೇಕಾಕತಿ ಹುಷಾರ ಇರ್ರೀ, ಅಂತ ಪಿಂಜಾರ ಹುಡುಗ್ರು ಎಚ್ಚರಿಕೆ ಕೊಟ್ಟಿದ್ರು, ಆದ್ರ ಕುರುಬ್ರ ಹುಡುಗ್ರ ಆ ಮಾತ ಬಾಳ ತೆಲ್ಯಾಗ ತಗೂಂಡಿರಲಿಲ್ಲ.
ಮೊಹರಮ್ಮ ಹಬ್ಬ ಇತ್ತು. ಕುರಬರಹಳ್ಳಿ ಜನರಿಗೆ ಸಂತೋಷವೆ ಸಂತೋಷ. ಜ್ಯಾತಿ ಕುಲಾ ಯಾವ ಬೇದಭಾವನೂ ಇರ್ತಿರಲಿಲ್ಲ. ದೇವ್ರು ಕೂಡಿಸಿ ದೂಪಾ ಹಾಕಿ. ಎಷ್ಟೋ ಕುರಬ್ರು, ರಡ್ಡ್ಯಾರು, ಲಿಂಗಾಯಿತ್ರು ಬೆಂಕಿ ಕ್ವಂಡದಾಗ ‘ದೂಲಾ ದೂಲಾ’ ಜಿಗಿತಿದ್ರ. ಕೈಯಾಗ ಲಾಡಿ ಕಟಗೊಂಡ. ಪಕಿರಾಕ್ಕಿದ್ರು. ನಾಲ್ಕಾರ ಮನಿಗೆ ಹೋಗಿ “ಬಮ್ಮರಾಯಿ ಬೊಮ್ ದೀನ್’ ಅಂತಿದ್ರ, ಹಿಂಗಂದ್ರ “ಭವತೀ ಬಿಕ್ಷಾಂದೇಹಿ’ ಅಂದಾಂಗ. ಯಾರ್ದಾರ ಮನೆಮುಂದ ನಿಂತ ‘ಬಮ್ಮರಾಯಿಬೊಮ್ ದೀನ್’ ಅಂದ್ರ ಸಾಕು ಜೋಳಿಗಿದೆ ಏನಾದ್ರು ತಂದ ಹಾಕಿತ್ತಿದ್ರು, ಕತಾಲ ರಾತ್ರಿ, ಗಂಧರಾತ್ರಿ, ಅಂತ ಮಸೂತಿ ಮುಂದಿರು ಬೆಂಕಿ ಹೊಂಡದಾಗ “ದೂಲಾ ದೂಲಾ’ ಅಂತ ಕುಣಿತಿದ್ರು, ಇದನ ಕಂಡ ಊರ ಜನರಿಗೆ ದೇವ್ರ ಮ್ಯಾಲ ಭಕ್ತಿ ಹೆಚ್ಚಾಕ್ಕಿತ್ತು. ಆದರ ರುದ್ರಗೌಡನ ಹೊಟ್ಯಾಗ ಕೆಂಡಾ ಸುರದಂಗ ಅಕ್ಕಿತ್ತು.
ಒಂದ ಸಲ ಕುರಬರ ಹನಮಗ ಮೈಯಾಗ ದೇವ್ರ ಬಂದಿತ್ತು. ಇಡೀ ಊರ ಮುಂದಿನ ಅವನ ಕಾಲ ಮುಗದ ನಮಸ್ಕಾರ ಮಾಡಿದ್ದರು, ಅಂವಾ ಸುಳ್ಳ ಮಂದಿನ ನಂಬಸಾಕ ಹಂಗ ಮಾಡಿದ್ದು ಗೋತ್ತಾತು. ಇಡೀ ಊರ ಮಂದಿ ಕೂಡಿ ಹನುಮಗ ಶಾಪಾ ಹಾಕಿದ್ರು. ಒಂದ ವರ್ಷ ತುಂಬುದ್ರಾಗ ಹನುಮನ ಕಾಲ ಮುರಿತು. ಇಡೀ ಊರ ಜನ್ರು ‘ಈಗ ಉಣ್ಣ ಮಗ್ನ. ಇದು ನಿನ್ನ ಕರ್ಮ ಐತಿ, ದೇವ್ರಗೆ ಚಾಷ್ಠಿ ಮಾಡಿದ್ರ ಹಿಂಗ ಆಗೂದ’ ಅಂತ ಮಂದಿ ಮಾತಾಡ್ತಿದ್ರು.
ಭಾವಕ್ಯತೆಯಿಂದ ಕೂಡಿದ ಕುರುಬರ ಹಳ್ಳಿ ಪಾತಿಮಾಳ ಸಲುವಾಗಿ ಒಂದು ದೊಡ್ಡ ಸಮರನ ಅಕ್ಕೆತಿ ಅಂತ ಯಾರೂ ಕಂಡಿರಲಿಲ್ಲ.
ಚಿಗುರ ಮೀಸೆ ಹುಡಗ್ರೆಲ್ ತೆಲೆಗುದ್ಲಾ ನೀಟಂಗ ಹಿಕ್ಕೊಂದ ಎಡಕ ಬಲಕ ಬೇತಾಲಿ ತಕ್ಕೊಂಡು, ಕೆಲವು ಹುಡುಗ್ರು ಕುದಲಿಗೆ ಮೆಹಂದಿ ಜಲ್ ಹಚ್ಚಕೊಂಡ, ಥೇಟ್ ಸಿನಿಮಾದಾಗ ಮಾಡೋ ಮಂದಿ ತರಾ ತೈಯಾರಾಗಿ ಪಾತಿಮಾಗ ತೋರಸೋ ಅಬ್ಬರದಲ್ಲಿರುತ್ತಿದ್ರು.
ಪಾತಿಮಾ ಆಗಷ್ಟ ಹತ್ತನೇ ತರಗತಿಗೆ ಕಾಲಿಟ್ಟಿದ್ಳು, ನೀಲಿ ಪ್ರಾಕ್ ಅದರ ಮ್ಯಾಲೊಂದು ಬಿಳಿ ಬ್ಲೋಜ ಹಾಕ್ಕೊಂಡ ಸ್ಕೂಲ ಹಾದಿ ಹಿಡದ್ರ ಸಾಕು ಅವಳ ಹಿಂದ ಮುಂದ ಬೆದೆನಾಯಿಗೆ ಗಂಟಿ ಬಿದ್ದ ನಾಯಿತರ ಕುರಬರ ಹಳ್ಳಿ ಹೈದರ ಹಿಂಡು ಇರ್ತಿತ್ತು.
ಕುರಬರ ರೇಣವ್ವ ಪಾತಿಮಾ ದಿನಾ ಕೂಡಿ ಸಾಲಿಗೆ ಹ್ವಕ್ಕಿದ್ರು, ಮೇಲಾಗಿ ಇಬ್ರು ಗೆಳತ್ಯಾರು. ಪಾತಿಮಾ ‘ಅವ್ರು ಅವ್ರ ನಿನ್ನ ನೋಡಿ ದಿನ ಜೊಲ್ಲ ಸುರಸ್ತಾರ’ ನಿಂದೂ ನಮ್ಮೂರಗ ದೊಡ್ಡ ಹವಾ ಆತ ಬಿಡು, ಸಿನಮಾದಾಗ ಹಿರೊನ್ಯಾರ್ನ ಕಳ್ಳಗಣ್ಣತಿ ನೋಡೋ ಹಿರೋನಂಗ ನಿನ್ನ ಎಷ್ಟು ಹಿರೋಗೋಳ ನೋಡಾಕತ್ತ್ಯಾರ ನೋಡ, ಅಲ್ಲಿ ಅಂತ ರೇನಿ ಪಾತಿಮಾಳ್ನ ಹುರದುಂಬಿಸುವಂಗ ಅಂದ್ಳು. ಅಷ್ಟಕ್ಕ ಪತಿಮಳ ಮಕ ಅಡ್ಡಾಲಾತು.ಮಂದಸ್ಮಿತ ನಗು ಮಕದ ತುಂಬ ತುಂಬಕೊಂತು., ‘ಇಷ್ಟ ಮಂದ್ಯಾಗ ಯಾವ ಹಿರೋನ ಅಕ್ಕೊಂತಿ ಹೇಳವ್ವ ಚಲ್ವಿ’ ಅಂತ ರೇನಿ ಪಾತಿಮಾಗ ಪೀಡಸ್ತಿದ್ಳು. ಹೋಗೇ.. ಹೋಗು.. ನೀ.. ಬ್ಯಾರೆ.., ಹಂಗೇನೂ ಇಲ್ಲಾ, ಸುಮ್ನೆ, ಅವ್ರು ನನ್ನ ನೋಡ್ತಾರ. ಅದಕ್ಕೆ ನಾನು ನೋಡ್ತಿನಿ ಅಷ್ಷೇ. ಆದ್ರೆ ನಂಗೆ ಇವ್ರನ್ನ ನೋಡಿದ್ರೆ ಯಾರ್ನ ಪ್ರೀತಿಸ್ಬೇಕು ಗೊತ್ತಾಗ್ತಿಲ್ಲ. ‘ಯಾಂವ ದೈಯ್ಯರ್ಾ ಮಾಡಿ ಮುಂದ ಬರ್ತಾನ ಅಂವ್ಗ ನಾ ವಿಸಲ’ ಅಂದ ಬಿಟ್ಳು. ರೇನಿ ಪಾತಿಮಾಳಗಿಂತ ಮೊದಲ ಮೈನೆರ್ತಿದ್ಳು. ಮೂರ್ಮಾಲ್ಕ ಹುಡಗ್ರ ತಾಕತ್ ಅನುಭವಿಸಿದ್ಳು. ಆದ್ರ ಅವರಲ್ಲಿ ಯಾರೂ ಅವಳಿಗಿ ತಕ್ಕಾಗುವಷ್ಟು ಸುಖ ಕೊಟ್ಟಿರ್ಲಿಲ್ಲ. ನನ್ನ ಮೈ ಹಣ್ಣ ಹಣ್ಣ ಮಾಡುವ ಗಂಡ್ಸ ಯಾವಾಗ ಸಿಗ್ತಾನೋ ನೋಡ್ಬೇಕ ಅಂತ ಪಾತಿಮಾಳೊಂದಿಗೆ ಮೆಹಂದಿ ಹಚ್ಚಿಗೊಂತ ಅವ್ಳ ಮನ್ಯಾಗ ಕುಂತಗೊಂಡ ತರ್ಕ ಮಾಡ್ತಿದ್ಳು.
ಪಾತಿಮಾಳ ಅಣ್ಣ ಪೀರ್ಯಾ ಸೈಕಲ್ ಇಳದಾಂವ್ನ ಮನಿವಳಗ ಬಂದ. ತಂಗಿಯೊಂದಿಗೆ ಇದ್ದ ರೇನಿ ನೋಡಿದ. ‘ಯಲಾ ಇವ್ಳ ,ನಮ್ಮನಿಗಿ ಬಂದಾಳಲ್ಲ’ ಅಂತ ರೇನಿ ನೋಡಿ ರಪ್ಯಾ ಹಿರಿಹಿರಿ ಹಿಗ್ಗಿ ಹಿರಿಕಾಯ್ ಗತೆ ಆದ. ‘ಏನ ರೇನವ್ವ ಇತ್ತ ಕಡೆ ಬಂದಿ’, ಅಂತ ಸೋಗಿನ ಮಾತ ಮಾತಾಡಿದ. ಪಾತಿಮಾ ಮೆಹಂದಿ ಹಚ್ಚತ್ತಿನಂದ್ಳು ಅದಕ್ಕ ಬಂದಿದ್ಯಾ, ರೇನಿ ಮಾತ ಕೇಳಿದ ರಪ್ಯಾಗ ಸಂತೋಷ ಆತ. ನನ್ನ ತಂಗಿ ಜೋಡಿ ಹಿಂಗ ಏನಾರ ನ್ಯಾವಮಾಡ್ಕೊಂಡ ಮನಿಗೆ ಬರ್ಲಿ, ಒಂದ ದಿನಾ ಏನ ಆದದ್ದ ಆಗ್ಲಿ, ರೇನಿ ಮುಂದ ತನ್ನ ಮನಸನ್ಯಾಗ ಇದ್ದ ಇಸ್ಯಾ ಹೇಳಿದ್ರಾತ. ಒಪ್ಪುದು ಬೀಡು ಅವಳ್ಗೆ ಬಿಟ್ಟಿದ್ದು ಅಂತ ರಪ್ಯಾ ನಿರ್ಧಾರ ಮಾಡ್ಕೊಂಡ.

*****

ಹಸೇನ ಆಗ ಸಂಜಿ ಎಂಟರ ನಮಾಜ ಮುಗಿಸಿ ಬಂದ. ‘ಬೇಟಿ.. ಬೇಟಿ, ಪಾತಿಮಾ ಬೇಟಿ’ ಅಂತ ಮನಿ ಅಂಗಳದಾಗಿ ನಿಂತ ಕೂಗಿದ. ಒಳಗಿಂದ ಯಾವ ದನಿ ವಾಪಸಾಗಲಿಲ್ಲ. ಬೇಟಾ.. ಬೇಟಾ ಅಂತ ರಪ್ಯಾನ ಕೂಗಿದ್ರು ರಫಿ ಕೂಡ ಓಗೊಡಲಿಲ್ಲ. ಇಬ್ರು ಇಲ್ಲಿ ಹ್ವಾದ್ರು ಯಾರೂ ಓ ಅಂತಿಲ್ಲ ಅಂತ ಮನಿ ವಳಗೆ ಹೋಗಿ ನೋಡಿದ. ಮಕ್ಕಳು ಮನ್ಯಾಗ ಇಲ್ಲಂತ ತಿಳಕೊಂಡ. ತೆಲಿಮ್ಯಾಲಿಟ ಟೋಪಿ ತಗದ ಗೂಟಕ್ಕ ಹಾಕಿ, ಮನಿಮುಂದಿರೋ ಸಣ್ಣ ಕಟ್ಟಿಮ್ಯಾಲ ಕುಂತ. ‘ಹರೇ ಅಲ್ಲಾ’ ಅಂತ ಉಸಿರ ಬಿಟ್ಟ. ಆಗ ಹಸಿನಾನ ನೆನಪು ಕಣ್ಣುಂದ ಬಂದು ಹೋತು.
ಹಸೀನಾ ಸತ್ತು ಇಂದಿಗೆ ಬರೊಬ್ಬರೆ ಆರ ವರ್ಷ ಆತು. ಪಾತಿಮಾ ಆರನೇತ್ತೇ ಒತ್ತದ್ಳು ಆಗ ಸತ್ತಾಳ. ಈಗ ಪಾತಿಮಾ ಬುರು ಬುರು ಬೆಳ್ದ ಅವ್ರ ಅವ್ವನ ಗತೇನ ಆಗ್ಯಾಳ, ಅಕೀ ಇದ್ದಿದ್ರ ಮಗಳ ನೋಡಿ ಕುಷಿ ಪಡ್ತಿದ್ಳು. ಇಗ ಮೈನೆದ ಕುಂತಾಳ, ಯಷ್ಟ ಆಗ್ಲಿ ತಾಯಿ ಹಂಗ ನನಗ ಅವ್ಳ ನೋವಾ ಕೇಳಾಕ ಆಗುದಿಲ್ಲ. ಅಕಿಗೊಂದ ದೌಡ್ನ ಒಂದ ಗಂಡ ಹುಡುಕಿ ಮದ್ವಿ ಮಾಡಿದ್ರ ತಲಿಮ್ಯಲಿಂದ ಬಾರ ಕಮ್ಮೀ ಅಕ್ಕೈತಿ. ರಪ್ಯಾ ಎನ ಗಂಡ್ಸ ಅದಾನ
ಅವ್ನ ಚಿಂತೇನ ನನಗಿಲ್ಲ ಅಂತ ಹೆಂತಿ ನೆನಸ್ಕೊಂಡ ಹುಸೇನ ಕಣ್ನ ವದ್ದಿಮಾಡ್ಕೋಡ.
ಪಾತಿಮಾ ಹೊರಗಿಂದ ಗುಣಗುಣ ಹಾಡಾ ಹಾಡ್ಕೊಂತ ಬಂದ್ಳು. ತಂದಿ ಇದ್ದಾನ ಅನ್ನೂ ಪರುವ ಇಲ್ದ ‘ ಜೀವನ್ ಮೇ ಜಾನೆ ಜಾನಾ, ಪ್ಯಾರ ಹೋತಾ ಹೈ’ ಅಂತ ಹಾಡಾ ಹಾಡ್ಕೋತ ಜಿಕ್ಕೊಂತ ಮನ್ಯಾಗ ಬಂದ್ಳು. ಅಯ್ಯೋ! ಬಾಬಾ ಅದಾನ ಅಂತ ಅರತ ಅಂಜಿಕಿ ಬಂದಾಂಗ ಆತ. ‘ಮನಿ ಬಗ್ಲಾ ತಗದ ಅಡ್ಯಾಡ ಬ್ಯಾಡ್ರೀ, ಈಗ ಮಂದಿ ಸುಮಾರ ಇರ್ತಾರ’. ಅಂತ ಹೇಳ್ಕೊತ ‘ಎಲ್ಲಿಗಿ ಹೋಗಿದ್ದಿ ಇಷ್ಡೋತ್ತನ್ಯಾಗ,ಅಂದ. ರೇನಿ ಮನಿಗೆ ಹೋಗಿದ್ದೆ. ಸಮಾಜ ಪೇರ್ ಬುಕ್ ಬೇಕಾಗಿತ್ತು, ಅದನ್ನ ಇಸ್ಕೊಂಡ ಬರಾಕ ಹೋಗಿದ್ದೆ, ಅಂತ ಪಾತಿಮಾ ತಂದಿಗೆ ಉತ್ತರಾ ಕೊಟ್ಳು. ಇಷ್ಟದಿನಾ ನೀ ಸಣ್ನಾಕಿ ಇದ್ದಿ, ಈಗ ನೀ ದ್ವಡ್ಡಾಕಿ ಆಗಿ. ಒಬ್ಬಾಕೀನ ಎಲ್ಲಿ ಹೋಗಬ್ಯಾಡ. ಯಾಕಂದ್ರ. ಮಳ್ಳ ಹುಡಗುರ ಏನಾರಾ ಕಿತಬಿ ಮಾಡ್ತಾವ. ತನ್ನ ಅನುಬವದ ಮಾತ ಹುಸೇನ ಹೇಳುವಾಗ ಪಾತಿಮಾ ಮಬ್ಬಗತ್ತಲದಾಗ ಕುಂತ ಹುಂ.. ಅಂದ್ಳು. ‘ತಂದಿ ತಾಯಿಗೊಳ ಹಿಂಗ ಇವ್ರ. ನಮ್ಮ ಆಸೆಗಳ್ನ ಅಥರ್ಾನ ಮಾಡ್ಕೋಳಂಗಿಲ’್ಲ. ಅಲ್ಲಿ ಹೊಗಬ್ಯಾಡ,ಇಲ್ಲಿ ಹೋಗಬ್ಯಾಡ ಅಂತ ಕರಾರ ಮಾಡ್ತಾರ. ಹೆಚ್ಚುಕಮ್ಮಿ ಅವ್ರ ಮನಸ ಕೆಟ್ರ ಸಾಲಿ ಕಲೂದ ಬ್ಯಾಡ ಅಂತ ಕಡಾಕಂಡಿತಾಗಿ ಹೇಳ್ಬಿಡ್ತಾರ. ಅಂತ ಪಾತಿಮಾ ಹೆತ್ತವ್ರ ಮಾಡು ಮಂಕಬುದ್ದಿ ಮಾತ ನೆನಸ್ಕೊಂಡ್ಳ. ಹೊರಗ ಹ್ವಾದ ರಪ್ಯಾನು ಬಂದ. ಎಲ್ಲರೂ ಕುಡ್ಕೊಂಡು ಊಟಕ್ಕ ಕುಂತ್ರು. ಹುಸೇನನ ಮುಖದಲ್ಲಿ ಸತ್ತ ಹೆಂಡತಿ ನೆನಪು ಇತ್ತು. ರಪ್ಯಾನ ಮನಸನ್ಯಾಗ ರೇನಿ ಗುಂಗು. ಪತಿಮಾಳ ಕಣ್ಣೆದರೂ ಪಡ್ಡೆ ಹುಡಗ್ರಗ್ಯಾಂಗು. ಊಟ ಮುಗಿದ ಮೇಲೆ ಎಷ್ಟೋತ್ತಿನ ವರೆಗೂ ಪಾತಿಮಾಗ ನಿದ್ದಿ ಬರಲಿಲ್ಲ. ಕುರಬ ಭೀಮ ಇತ್ತಿತ್ತಲಾಗ ಒಂತಾರನ ತನ್ನ ನೋಡೂದು, ಸುಮ್ನ ನಗುದು ನೆನಸ್ಕೊಂಡಾಗ ಅವಳ ಎದ್ಯಾಗ ಹೆಂಗೆಂಗೋ ಆದಾಂಗ ಅನಸ್ತಿ. ಕಟ್ಟಿಮ್ಯಾಲ ಅಪ್ಪನ ಗೊರಕಿ ಶಬ್ದಕ್ಕ ನಗು ಬಂದ ಪಾತಿಮಾ ಹಾಸ್ಗಿ ವಳ್ಗ ನಕ್ಳು ಸುಮ್ನಾದ್ಳು.

*****

ದಿನದಿಂದ ದಿನಕ ಪಾತಿಮಾ ನಾಜೂಕ ಆಗ್ತಾ ಇದ್ದಳು, ನಡಿಗೆಯಲ್ಲಿ ಬದಲಾವಣೆ, ಮಾತಿನಲ್ಲಿ ಬದಲಾವಣೆ, ಬಟ್ಟೆ ತೊಡುದ್ರಲ್ಲಿ ವಿಪರೀತಿ ಬದಲಾದದ್ದು ಕಂಡ ರಪ್ಯಾಗ ತಂಗಿ ಮ್ಯಾಲ ಸ್ವಲ್ಪ ಸಂಶ್ಯಾ ಬಂತು. ಪಾತಿಮಾಗ ಕಾಳ ಹಾಕು ಹುಡುಗುರ್ಗೆ ಹೆಚ್ಚು ಕುಷಿಯೋ ಕುಷಿ. ‘ಹ್ಯಾಂಗಾರ ಮಾಡಿ ಈ ಹಕ್ಕಿನ ಬುಟ್ಟಿಗೆ ಕೆಡಕೊಳ್ಳಬೇಕು’ ಅಂತ ಕುರಬರಹಳ್ಳಿ ಹುಂಬ ಹುಡುಗ್ರು ತಮ್ಮ ಹ್ವಾರೆ ಬಿಟ್ಟ ಪಣಾ ತೊಟ್ಟರು.
ಒಂದಿನ ಸಾಲಿ ಮುಗಸ್ಕೊಂಡ ಪಾತಿಮಾ ಬರಬೇಕಾದ್ರ, ನಡುದಾರ್ಯಾಗ ಕುರಬರ ಸಿದ್ದ, ಕಲ್ಲ್ಯಾ ,ರಾಯಾ, ಹುಚ್ಚಮಲ್ಲ ಪಾತಿಮಾನ ತಡದ ನಿಲ್ಲಿಸ್ಬಿಟು.್ರ ‘ಹುಲಿಕಂಡ ಹೆದ್ರಿದ ಜಿಂಕಿಯಂಗ’ ಪಾತಿಮಾ ನಿಂತನಿಂತಲ್ಲಿ ಕಂಪಿಸಿದ್ಳು. ‘ಇವತ್ತ ನೀ ನಮಗ ಎರಡ್ರಾಗ ಒಂದ ಹೇಳಾಕ ಬೇಕ’ ಅಂತ ಹುಚ್ಚಮಲ್ಲ ಪಾತಿಮಾಳ ತುಂಬಿದ ಎದಿ ನೋಡ್ಕೊಂತ ಕೇಳಿದ. ಪಾತಿಮಾ ಸುಮ್ನ ಆಕಡಿ ಇಕಡೆ ನೋಡ್ಕೋತ ನಿಂತ್ಳು. ಪ್ಯಾಲಿಸಿದ್ದ ಮಾತಾಡಿದ್ದಕ್ಕ ಕಲ್ಲ್ಯಾ ಸಿಟ್ಟಾಗಿ, ಬೋಳಿ ಮಕ್ಳು ಏನೇನರಾ ಕೇಳಿ ನಮ್ಮ ಡಿಮಾಂಡ ಹಾಳ ಮಾಡಬ್ಯಾಡ್ರಿ’. ಸಿನ್ಮಾದಾಗ ಹಿರೋಗೊಳ ಕೇಳ್ತಿರಲ್ಲ ಹಂಗ ಕೇಳ್ಬೇಕು. ವಾರದಾಗ ಮೂರ ಸಿನ್ಮಾ ನೋಡ್ತಿರಿ ಅಷ್ಟುಗೊತ್ತಾಗಂಗಿಲ್ಲೇನ ಅಂತ ಕಲ್ಲ್ಯಾ ಕಾರಬಾರ ಮಾಡಿದ.
ನಾಲ್ಕು ಹುಡುಗುರ ಮದ್ಯ ನಿಂತಕೊಂಡ ಹುಡುಗಿಗೆ ಇವರ ಕೇಳು ಮಾತು ಹಾಗಿಲ್ಲದ್ದು. ನಾಳೆ ಇವ್ರ ತರಾ ಹುಚಪ್ಯಾಲಿಗತೆ ಭೀಮನೂ ಕೇಳಬಹುದಾ? ಅಂತ ಅಂದಕೊಂಡಳು. ಅಂವ್ನ ಅವರಿಗೆ ಹೋಲ್ಸುದ ಸರಿ ಅಲ್ಲಂತ ತಿಳಕೊಂಡ್ಳು. ನಂಗ ನಿಮ್ಯಾಲ ಮನಸಿಲ್ಲ, ಅಂತ ಪಾತಿಮಾ ಜಾಡಿಸಿ ಎದಿಗಿ ವದ್ದಾಂಗ ನಾಕು ಹುಡಗುರ್ಗೆ ಹೇಳಿದಾಗ ಮುಕಾ ವನಗುಸ್ಕೊಂಡ ಪಡಗುನಪಾಟಾದ್ರ.
“ಅಡಕಿ ಹುಡಕಿ ಬಿಡಬಾರ್ದು ಹುಡುಗಿ ಕೇಳಿ ಬಿಡಬಾರ್ದು’ ಅನ್ನು ನೀತಿ ಪಾತಿಮಾನ ಅಡ್ಡಗಟ್ಟಿ ಮಾತಾಡ್ಸಿ ಅವಮಾನ ಹುಡಗುರ್ಗೆ ಗೊತ್ತಿರ್ಲಿಕ್ಕಿಲ್ಲ. ಪಾತಿಮಾಳ ಮುಂದ ಕಲರ್ ಕಲರ್ ಬಟ್ಟೆ ಹಾಕಿದ್ದು, ತೆಲೆಗುದಲಕ್ಕ ಶಾಂಪು ಹಾಕಿ, ಎಣ್ಣೆ ಹಚ್ಚಿ ಎಡಕ ಬೈತಾಲಿ ಕೊರದದ್ದು , ಇದ್ದ ಹ್ವಾರೆ ಬಿಟ್ಟ ಅವ್ಳ ಹಿಂದ ಮುಂದ ಅಲದದ್ದು, ಎಲ್ಲಾ ಹೊಳ್ಯಾಗ ಹುಂಚಿ ಹಣ್ಣ ತೊಳದಂಗಾತ ಅಂತ ಅಂದ್ಕೊಂಡ ಕುರಬರ ಹಳ್ಳಿ ಹುಡಗುರು ಆಕೀ ಬಾಳ ಬೇರಕಿ ಅದಾಳ ದೌಡ ಬಲಿಗೆ ಬಿಳು ಹಕ್ಕಿ ಅಲ್ಲ ಅದು ಅಂತ ಹುಚ್ಚಮಲ್ಲ ನಡದ ಕತಿ ವಾರಗೆ ಹುಡಗೂರ ಮುಂದ ಮಾತಾಡ್ತಿದ್ದ.

*******

ಸಿನಮಾ ಟಾಕೀಜನ್ಯಾಗ ಕೂಡಿ ರಾತ್ರೋ ರಾತ್ರಿ ಊರ ಸೇರ್ಕೊಂಡ ರಪ್ಯಾ, ಭೀಮಗ ಹತ್ತಾರ ದಿನವಾದ್ರೂ ಮತ್ತ ಬೇಟಿನ ಆಗಿರಲಿಲ್ಲ. ನಾ ಪಾತಿಮಾಳ ಮ್ಯಾಲ ಮನಸ ಮಾಡಿದ್ದ ಇಂವ್ಗ ಏನಾರ.. .. ಅದ್ಯಾಂಗ ಸಾದ್ಯ.
ಅದ್ರಾಗ ಅಕೀ ನನ್ನ ವಪ್ಪಬೆಕಲ್ಲ, ಅದ ಆಗದ ಮಾತ.ಆಕೀ ಸಾಲಿ ಕಲತಾಕಿ, ನಾ ಇದ್ರ ಕುರಿಕಾಯೋ ಕುರಬ. ಅಕಿ ಉಸಬರೀನ ಬ್ಯಾಡ ಬಿಡು, ಅಂತ ದೇಸಾಯರ ಹೋಲದಾಗ ಜ್ವಾಳದ ಹಕ್ಕಲಾ ಮೇಸ್ಕೋತ ಭೀಮ ಆಗದ ನಿದರ್ಾರ ಮಾಡಿದ.
ರಪ್ಯಾ ಮುಸಲ್ಲ್ರ ಜ್ಯಾತ್ರ್ಯಾಗ ಹುಟ್ಟಿದ್ರ ಹುಟ್ಟವಲ್ಲಕ ಆದ್ರ ಬಾಳ ನಿಯತ್ತಿನ ಮನಸ್ಯಾ. ಅಂತ ರಷ್ಯಾನ ಕ್ಯಾರಕ್ಟರ ಬಗ್ಗೆ ಮೆಲಕ ಹಾಕ್ಕೊಂತ ಕುರಿಗೆ ಟೂರ್ರ.. ಬ್ಯಾ.. ಆನಕೋಂತ ಗೆಳ್ಯಾನ ನಿನಪಿಸ್ಕೊಂಡ. ಹ್ಯಾಂಗಾರ ಮಾಡಿ ಇಂದ ರಪ್ಯಾನ ಬೇಟಿ ಆಗ್ಬೇಕು ಅಂತ ಭೀಮಗ ಬಾಳ ಅನಸ್ತಿ. ಹ್ಯಾಂಗಾದ್ರು ಇಂದ ಕುರಿಗಳು ದೇಸಾಯರ ಜ್ವಾಳದ ಹಕ್ಕಲಾ ಮೇದಾವ. ಒಂದ ತಾಸ ಲಗೂನ ದಡ್ಡಿಗೆ ಹ್ವಾದ್ರಾತು. ಅವ್ವ ಇಷ್ಟ್ಯಾಕ ದೌಡ ಬಂದಿ? ಅಂತ ಕೇಳಿದ್ರ ಎನಾರ ಒಂದ ನೆವಾ ಹೇಳಿದ್ರಾತ. ಅಂತ ಒಂತಾಸ ಮೊದಲ ಕುರಿ ದಡ್ಡಿಗೆ ತಂದ ಹಾಕಿದ. ದಡ್ಡಿ ಒಳಗಿನ ಮರಿಗಳು ‘ಅವ್ವ ಬಂದ್ಳೋ….ಅವ್ವ ಬಂದ್ಳೋ..’.ಅಂತ ಸಣ್ಣ ಮಕ್ಕಳು ಊರಿಂದ ಬರುವ ಅವ್ವನ ನೋಡಿ ಕುನಿಕಣಿದ ಸಂತಸ ಪಡ್ತಾವಲ್ಲ, ಹಂಗ ಹಳ್ಳಿಮಕ್ಳು. ಕುರಿಮರಿಗಳು ತಮ್ಮ ತಮ್ಮ ತಾಯಿ ಕಂಡೊಡನೆ ದಡ್ಡಿ ಒಳಗ ಜಿಗದಾಡಿ ತಮ್ಮ ತಮ್ಮ ತಾಯಿ ಹುಡುಕಿ ‘ಈಗ ವಬಂದ್ಯಾ ಯವ್ವಾ’ ಅನ್ನುವಾಂಗ ಮೂಖ ಭಾಷೆ ಮಾತಾಡಿ ಹಾಲು ಕುಡ್ಯಾಕ ಹತ್ತಿದ್ದು.
ತಂಬಾಕ ಸುಣ್ಣಾ ಅಂಗ್ಯೆಯ್ಯಾಗ ಹಾಕಿ ಗಸಗಸ ತಿಕ್ಕಿ ಉಪ್! ಅಂತ ಅದರಾಗಿಂದ ದುಸಾ ದೂಳಾ ಹೊಡದ ಬಾಯಿಗೆ ತುಂಬಿ, ಪಿಚಕ್ ಪಿಚಕ್ ಅಂತ ಉಗಳ್ಕೋಂತ ರಪ್ಯಾನ ಮನಿಕಡೆ ನಡದ.
ರಪ್ಯಾನ ಮನಿಯಂಗಳಾದಾಗ ನಿಂತಕೊಂಡ. ಆಗ ಪೂತರ್ಿ ಕತ್ತಲಾಗಿತ್ತು ಒಬ್ಬರ ಮೊಕಾ ಒಬ್ಬರಿಗೆ ಕಾಣ್ತಿರಲಿಲ್ಲ. ಮನ್ಯಾಗ ಇರ್ತಾನೋ ಇಲ್ಲೋ ಅಂತ ತಳಮಳಿಸಿ ಕೂಗಿದಾ.
ರಪ್ಯಾನ ಮನಿಯಂಗಳದಲ್ಲಿನ ಮೂರು ಮೇಕೆ ಮರಿ ಬ್ಯಾ.. ಬ್ಯಾ .. ಅಂತ ಒದರಿ ಸುಮ್ಮಾದವು. ಮನಿ ಬಾಗಾಲಾದ್ರ ತಗದೈತಿ. ಪುನ್ಯಾತ್ಮ ನಮಾಜ ಗಿಮಾಜ ಮಾಡಾಕ ಎನಾರ ಹೋಗಿರಬೇಕು ಅಂತ ತಿಳಕೊಂಡ. ಮುಂಜಾನೆ ಬಂದ್ರಾತು. ಅಂತ ಮರುಳುವಷ್ಟರಲ್ಲಿ ಮನೆಯೊಳಗಿಂದ ಹೆಣ್ಣು ದನಿಯೊಂದು ಹರಿದು ಬಂತು. ಒಳಗ ಬರ್ರೀ ಬಯ್ಯಾ ಮಲಗ್ಯಾನ ಆಂವಗ ನಿದ್ದಿ ಹತ್ತ್ಯೆತ್ತಿ
ಅಂತ ಪಾತಿಮಾ ಬಾಗಲದಾಗ ಬಂದ ನಿಂತ್ಲು. ಭೀಮಗ ಆಗ ಸ್ವಗರ್ಾನುಭವ.
ಒಳ್ಯಾಕ ಬರ್ರಿ ನಮ್ದ ಚಿಕ್ಕಮನಿ. ಕತ್ತಲ ಐತಿ ಸ್ವಲ್ಪ ನೆಲಾನೋಡ್ಕೋಂಡ ಹೆಜ್ಜೆ ಇಡ್ರಿ, ಕತ್ತಾಲದಾಗ ಎನಾರ ತುಳಿದ ಗಿಳಿದಿರಿ
ಅಂತ ಪಾತಿಮಾ ಭೀಮಗ ತನ್ನ ಎದಿವಳಗ ಸ್ವಾಗತ ಮಾಡಿದಾಂಗ ಅಂದ ಭೀಮಗ ಸ್ವಾಗತ ಮಾಡಿದ್ಲು
ಏನಾಗೇತಿ ರಪ್ಯಾಗ ?
ಭೀಮ ಅಂದಾಗ.ಜ್ವರಾ ಹತ್ತ್ಯಾವ ಅಂತ ಸಡನ್ನಾಗಿ ಉತ್ತರಾ ಕಟ್ಟಳು ಪಾತಿಮಾ. ಓ.. ಹೋ.. ಅದಕ್ಕ ಆಸಾಮಿ ಹತ್ತಹನ್ನೆರಡು ದಿನಾ ಆತು ನಂಗ ಮುಖದರ್ಶನ ಮಾಡಿಲ್ಲ. ಅಂದ ಅಷ್ಟೊತ್ತಗೆ ಪಾತಿಮಾ ಚಿಮನಿ ಬುಡ್ಡಿ ಮೊಕ್ಕಕ ಒಂದ ಕಡ್ಡಿಗಿರಿ ಇಟ್ಳು.. ನಿದಾನವಾಗಿ ಮನೆಯಲ್ಲಿ ಕತ್ತಲು ಕಳೆಯಿತು. ಮಂದ ಬೆಳಕ್ಕಲ್ಲಿ ಪಾತಿಮಾಳ ಪಾರಿವಾಳದಂತಹ ಬಟ್ಟೆ,ಉಬ್ಬಿಕೊಂಡ ಎದೆ, ಆಸೆ ತುಂಬಿದ ಕಣ್ಣು , ಅವಳ ಬೆನ್ನಹಿಂದೆ ನೇತಾಡುವ ಎರಡು ಜೆಡೆ ಅವಳ ಕುಂಡಿಗಳ ಮೇಲೆ ನರ್ತನ ಮಾಡುವ ನೋಟವನ್ನು ಭೀಮ ಆ ಚಿಮಿನಿ ಬೇಳಕಲ್ಲಿ ಕಣ್ಣುತುಂಬಿಕೊಂಡ.
ಅಬ್ಬಾ! ಎನು ಚಲ್ವಿ ಅದಾಳಪ್ಪಾ ಇಕಿ. ಹೆಂಡ್ತಿ ಆದ್ರ ಹಿಂತಾಕಿನ ಆಗಬೇಕ. ಇಲ್ಲಂದ್ರ ನಮ್ಮೂರ ಗೌಡ್ರು, ದೇಸಾಯಿರು ಇಟ್ಟಿಗೋತಾರಲ್ಲಾ ತಮ್ಮ ಹೆಂಡ್ತಿ ಇದ್ರು ಮತ್ತೋಬ್ಬಳ್ನ ಹಂಗ ಹಿಂತಾಕಿನ ಇಟಗೊಂದ್ರ ರಗಡ ಸುಕಾ ಆಕೈತ್ತಿ. ಅಂತ ಭೀಮ ಇಚಾರಿಸಿದ .
ಪಾತಿಮಾ ರಪ್ಯಾನ ಕಡೆ ಹೋಗಿ ‘ಬಯ್ಯಾ ನಿಮ್ಮ ದೋಸ್ತ ಬಂದಾರು’ ರಪ್ಯಾನ ಹಾಸಗಿ ನಿದಾನ್ಕ ತೆಗೆದ್ಲು.
ರಪ್ಯಾನ ಮೈಮಾಲ ಭೀಮ ಕೈ ಇಟ್ಟಾಗ ಕೆಂಡದಮ್ಯಾಲ ಇಟ್ಟಾಂಗ ಆತು.ಮೈ ಬೆವೆತ ಹೋಗಿತ್ತು. ಒಂದ ರೀತಿ ಮೈಯಾಗ ವಾಸ್ನಿ ಬಂತು. ಅಯ್ಯೋ..! ದೇವ್ರಾ ಜ್ವರಾ ಜಾಸ್ತಿ ಆದಾವ, ತೊರಸ್ಕೊಂಡಿಯೋ ಇಲ್ಲೊ. ನಡಿ ನಡಿ ಮದಲ ದವಾಖನಿಗೆ ಹೊಗೂನೂ ಅಂತ ಭೀಮ ದಡಬಡಿಸಿದ.
ಹಿಂಗ ಇವ್ನನೌನ ಈ ಜ್ವರ. ಹೊತ್ತ ತಪ್ಪತಪ್ಪಸಿ ಬರಕತ್ತಾವ . ಮನ್ನೆ ಕೆರ್ರ ಬಜ್ಯಾರ್ಕ ಹೋಗಿದ್ದಾಗ, ಯಾಕೋ ಮೈಗೆ ಚಳಿ ಬಂದಾಂಗಾತ . ಅಲ್ಲೆ ಒಂದ ಗುಳಗಿ ನುಂಗಿದೆ. ಆಗ ಕಡಿಮೆ ಆದಾಂಗ ಆತು. ಮತ್ತ ಒಂದ ತಾಸನ್ಯಾಗ ಮೈ ಬೆಂಕಿ.
ನಮ್ಮ ಅಪ್ಪ ಊರಾಗಿರೋ ಪತ್ತಾರ ಡಾಕ್ಟರ್ನ ಕರಕೊಂಡ ಬಂದಿದ್ದ, ಅಂವಾ ಆ ಕಡೆ ಕುಂಡಿಗೆ ಈ ಕಡೆ ಕಂಡಿಗೆ ಒಂದ ಚೂಜಿ ಚೂಚ್ಚಿ ಐವತ್ತರುಪಾಯಿ ಕಿಸೇಕ ತುರ್ಕೊಂಡ ಹ್ವಾದ. ಆದ್ರೂ ಜ್ವರಾ ಕಡಿಮಿ ಆಗವಲ್ದು. ಅದಕ್ಕ ನಾಳೆದ್ದವ್ನ ಪ್ಯಾಟಿಗೆ ಹೋಗಿ ಚಲೋ ಡಾಕ್ಟರ್ನ ತೋರಸ್ಕೋಂಡ ಬರಬೇಕು ಅಂತ ಮಾಡಿನಿ. ರಪ್ಯಾ ಜ್ವರದ ಹೊಡೆತೆಕ್ಕ ಸೋತ ಮೆತ್ತಗ ಮಾತಾಡಿದ.
‘ಏನ ಅನಾವತ ಅದಿ ಲೇ ಮಾರಾಯ ನೀ’. ಮೈಯ್ಯಾಗ ಹಿಂತಾ ಕೆಂಡದಂತ ಜ್ವರ ಇಟಗಕೊಂಡ .ನಾಳೆ ಹ್ವಾದ್ರಾತು ನಾಡ್ದ ಹ್ವಾದ್ರಾತು ಶಕುನಾ ನುಡದಂಗ ನುಡ್ಯಾಕ ಹತ್ತಿಯಲ್ಲ. ಹಿಂಗ ಅನಕೊತ ಕುಂತ್ರ ಕಡಿಮ್ಯಾದಾಂಗಲ್ಲ ಬಿಟ್ಟಾಂಗಲ್ಲ. ಸಣ್ಣ ಡಾಕ್ಟರ್ನ ತೋರಸುದ ಬಿಟ್ಟ ಮೊದಲ ಯಾಂವ್ಗರಾ ದೊಡ್ಡ ಡಾಕ್ಟರ್ಗ ತೋರಸೀದ್ರ ಇಟೋತಿಗಾಗಲೆ ಜ್ವರ ಮಂಗಮಾಯ ಆಕ್ಕಿದ್ವು. ಅಂತ ಭೀಮ ಉಪದೇಶಿಸಿದ.
ಎಲ್ಲ ಡಾಕ್ಟರ ಹನಿಬರಾನು ಅಷ್ಟ ಐತಿ. ಈಗ ಅವ್ರ ದುಡ್ಡಿಗಿ ನಿಂತಾರ. ಚಿಕ್ಕಪುಟ್ಟ ಡಾಕ್ಟರಗೋಳ ಒಂದವ್ಯಾಳಕ ಬೇಸಿ. ದೊಡ್ಡವ್ರ ಅಂತಿಯಲ್ಲಿ ಅವ್ರು ನಮ್ಗ ದೊಡ್ಡ ಗುಟಾನ ಇಡ್ತಾರ ಅಂತ ರಪ್ಯಾ ಭೀಮಗ ತಿಳಿಹೇಳದ. ನೀ ದಿನಾ ಪ್ಯಾಟಿ ಸುತ್ತು ಆಸಾಮಿ, ನನಗಿಂತ ನಿನಗ ಯಾರ ಹ್ಯಾಂಗ ಆದಾರ ಅಂತ ಬಾಳ ಗೊತ್ತಿರತೈತಿ ಅಂದ. ಅಣ್ಣನ ಮ್ಯಾಲ ಬೀಮಗಿರು ಕಾಳ್ಜಿ ಮೆಚ್ಚಿ ಪಾತಿಮಾಗ ಬೀಮನ ಮ್ಯಾಲ ಪ್ರೀತಿ ಉಕ್ಕಿ ಹರಿತಿ
ಭೀಮನ ಕಳ್ಳಗಣ್ಣಿಲೆ ನೊಡ್ಕೊತ ಪಾತಿಮಾ ಚಾ ಮಾಡಕತ್ತಿದ್ಳು. ಭೀಮನ ರೂಪಾ ನೋಡಿ, ಅಂವ್ನ ತೆಲ್ಯಾಗಿರೋ ಹಿಪ್ಪಿಕಟ್ಟ ನೋಡಿ, ಪಾತಿಮಾಗ ಹುಚ್ಚ ಹಿಡದಾಂಗ ಆತು. ಅಕಿನ ಕಳ್ಳನೊಟಾ ಭೀಮ ಕ್ಯಾಚಿ ಹಿಡದ ಎದಾಗ ಹಕ್ಕೊಂಡಾಂಗ ಮಾಡತಿದ್ದ. ಹಂತಾ ಮಬ್ಬ ಗತ್ತಲದಾಗ ಭೀಮಾ ಹರಸಹಾಸ ಮಾಡಿ ಒಮ್ಮೆ ಕಣ್ಣೂ ಹೊಡದಾ. ಅಷ್ಟಕ್ಕ ಪಾತಿಮಾಗ ಗಲ್ಲಾ ಕಡದಷ್ಟ ಆನಂದ ಆತು, ಈ ಗಂಡಸ ಬಲು ಬೆರಕಿ ಅಂತ ಹಿಗ್ಗಿದಳು.
ಭೀಮಗ ಬಟ್ಟಲದಾಗ ಚಾ ಹಾಕಿ ಕೊಡಬೇಕು ಅಂತ ಪಾತಿಮಾನ ಮನಸು ಅವಳಿಗೆ ಗೈಡ ಮಾಡಾಕ ಹತಿ.್ತ ಎರಡ ಕಪ್ಪನ್ಯಾಗ ಚಾ ತಗೊಂಡು ನಾಜೂಕಾಗಿ ಭೀಮನ ಕೈಗೆ ಕೊಟ್ಳು. ಕೊಡುವಾಗ ಅವಳ ಕೈ ಸ್ವಲ್ಪ ಕಂಪಿಸಿದವು. ಅದು ಭೀಮನ ಗಮನಕ್ಕು ಬಂತು. ಮತ್ತೊಂದ ರಪ್ಪಾಗ ಕೊಟ್ಟ ಒಲಿ ಕಡೆ ಹ್ವಾದ್ಳು. ನನ್ನ ತಂಗಿ ಈಗ ಹತ್ತನೆತ್ತಿ ಅದಾಳ. ನಮ್ಮಪ್ಪ ಅವಳಿಗೆ ಇದ ವರ್ಷ ಮದುವಿ ಮಾಡಾಕ ನಿಂತಾನ ಅಂತ ರಪ್ಯಾ ಹೇಳ್ತಿದ್ದಾಂಗ ಭೀಮನ ಕೈ ನಡಗಿದು . ಒಲಿಮುಂದ ಕುಂತ ಪಾತಿಮಾನ ಸಂಪಿಗಿ ಹೂವಿನಂತಾ ಮಕಾ ರಪ್ಯಾನ ಮಾತ ಕೇಳಿದ ಕ್ಷನದಾಗ ಬಾಡಿಹೊತ. ನಾ ಇನ್ನ ಬರ್ತನಿ ಅಂತ ಭೀಮಾ ಎದ್ದ ಹ್ವಾದ.
ಆಪ್ಪ ನನಗ ಹೆಂತವ್ನ ತಂದ ಕಟ್ಟತಾನೋ ಆ ‘ಅಲಾ’್ಲಗ ಗೋತ್ತು. ಭೀಮನ ಮ್ಯಾಲ ನನಗ ಮನಸ ಇದ್ದದ್ದ ಹೇಳಿದ್ರ ನನ್ನ ಇವ್ರ ಕಡದ ಹೆಡಗಿ ತುಂಬತಾರ. ಉಟಾ ಮಾಡ್ದ ಕಣ್ಣೀರ ಹಕ್ಕೋತ ಪಾತಿಮಾ ಇಡೀ ರಾತ್ರಿ ಭೀಮನ ನೆನಪನ್ಯಾಗ ಹಾಸಗಿತುಂಬ ಹೊಳ್ಯಾಡಿದ್ಳು. ಭೀಮ ಕಣ್ಣಹೊಡದದ್ದು ನೆನಸ್ಕೋಡ. ಪಾತಿಮಾ ‘ಏನಾದ್ರೂ ನಾ ನಿನ್ಗ ಮೀಸಲ’ ಅಂತ ತನಗೆ ತಾನೆ ಸಮಾದಾನ ತಗೊಂಡಳು ಮಲಗಿದ್ಳು.
‘ಅಂವಾ ಬ್ಯಾರೆ ಜಾತ್ಯಾಂವ, ನಾ ಬ್ಯಾರೆ ಜ್ಯಾತ್ಯಾಕಿ’, ನಮ್ಮ ಪ್ರೀತಿ ಸಮಾಜ ಒಪ್ಪಾಕ ಸಾದ್ಯನ ಇಲ್ಲಾ ಹಿಂಗಂತ ಭೀಮನ ಚಿಂತಿ ಮಾಡತಾ ಪಾತಿಮಾ ಕೈಯ್ಯಾಗ ಪುಸ್ತಾಕ ಹಿಡಕೊಂದ ಕುಂತಿದ್ದಳ.
ಪಾತಿಮಾಳ ಕಣ್ಣಮಾಲ ಕೈ ಇಟ್ಟ ಯರೋ ಮುಚ್ಚಿದ್ರು.
ಅಯ್ಯೋ.. ದೇವ್ರ, ಯಾರ ನೀಂವ ಅಂತ ಪಾತಿಮಾ ಅನ್ನುದ್ರಾಗ ಕಣ್ಣಿನ ಮ್ಯಾಲಿನ ಒತ್ತಡ ಹೆಚ್ಚಾಗಿ ಹೋತ. ತಾಳಲಾರ್ದ ಯಾರದಿರೀ ಕೈ ಬಿಡ್ರಿ, ಇಲ್ಲಾಂದ ನಾ ಹೊಲಸ ಹೊಲಸ ಏನಾರ ಬೈಗಳ ಬೈತಿನಿ ಅಂತ ಅಂಜಕಿ ಹಾಕಿದ್ಳ. , ಆದ್ರೂ ಕೈ ಸರದಾಡಲಿಲ್ಲ. ನಾ ಜೋರಾಗಿ ಚೀರ್ತೀನಿ ಅಂದ್ರೂ ಅವಳ ಕಣ್ಣ ಮ್ಯಾಲಿನ ಕೈ ಹಂಗ ಇದ್ದು. ಕೂನಾ ಹಿಡ್ಯಾಕ ಪಾತಿಮಾಳ ಬಾಳ ಪ್ರಾಯಾಸ ಪಟ್ಲು. ಪಾತಿಮಾಳ ಕಣ್ಣ ಮೇಲೆ ಕೈಇಟ್ಟವ್ರ ಯದಿಗೆ ಮನಕೈ ತಾಕಿದಾಗ ಮೆತ್ತಗ ಇರು ರೆನಿ ಮಲಿ ಅಂತ ಗೊತ್ತ ಮಾಡಕೊಂಡ್ಳ. ಆಗ ಇಬ್ಬರೂ ನಕ್ಕರು
. ರೇನಿ ಪಾತಿಮಾಳೊದಿಗೆ ಬಾಳ ಸಲಗಿಯಿಂದ ಇದ್ಲು. ರಪ್ಯಾ ರೇನಿನ ಒಂದ ರೀತಿ ಪಳಗಿಸಿದ್ದ. ಇಂತ ಇಸ್ಯಾದಾಗ ಅನುಭವ ರೆನಿಗೆ ಬಾಳ ಇತ್ತ. ದೇಸಾಯ ಬನಮಿ ಹಿಂದ ರೆನಿ ರಪ್ಯಾ ತಬ್ಬಕೊಂಡ ಬಿದುದ ದೇಸಾಯಾರ ಆಳಮನಸ್ಯಾ ನೋಡದ್ದ. ಅವತ್ತಿಂದ ಊರಾಗ ರಪ್ಯಾ ರೆನಿ ‘ಡಿಂಗಡಾಂಗ’ ಮಾಡ್ಯಾರ ಅನ್ನು ಸುದ್ದಿ ಊರತುಂಬ ಹರಡ್ತಿ.
ಮುಸಲ್ರ ಮಂದಿಗೆ ಈ ಇಸ್ಯಾ ಕೇಳಿ ರಪ್ಯಾನ ಬಗ್ಗೆ ಹೆಮ್ಮೆ ಅನಸ್ತಿ. ನಮ್ಮ ಮಂದ್ಯಾಗ ಒಬ್ಬಾಂವ ಸೂರ ಅದಾನ ಬಿಡ ಅಂತ ಮಾತಡಿದ್ರ. ಕುರಬರ ಹಳ್ಳಿ ಕುರಬ್ರು ಕೆಂಡದಂತಾ ಮಂದಿ. ಹಂತಾವ್ರ ಜ್ಯಾತ್ಯಾಂದ ಹುಡಗಿ ಪಟಾಯಿಸಿದ್ದು ಕೆಲವಬ್ರಿಗೆ ಭಯಾ ಇತ್ತು.
ಕುರಬರ ಹಳ್ಯಾಗ ಬರಿ ಹದನಾಲ್ಕ ಮುಸಲರ ಮನಿಯೊಳಗ ರಪ್ಯಾಂದು ಅದರಾಗ ಒಂದು. ಮುಸಲರ ಮಂದಿಗೆ ತ್ವಾಟ ಪಟ್ಟಿ ಏನೂ ಇದ್ದಿದ್ದಿಲ್ಲ. ವ್ಯಾಪಾರ, ದಲಾಲಿ, ಹಮಾಲಿ ಮಾಡ್ಕೊಂತ ಬದುಕ ಸಾಗಸತ್ತಿದ್ರು. ಹೆಂಗಸರು ಗೌಡರ, ದೇಸಾಯರ ತ್ವಾಟಕ್ಕೆ ಕೂಲಿ ಕೆಲಸಕ್ಕ ಹೊಕ್ಕಿದ್ರು. ಅಣ್ಣಾ ತಮ್ಮರಂಗ ಇದ್ದರು. ಈಗಂತು ಕುರಬರ ಹಳ್ಳಿ ತುಂಬ ಬರೀ ಹಾದರದ ಮಾತು ಕೇಳತಿತ್ತು.
ಪಾತಿಮಾ ಒಂದಿನ ಬಾಳ ಧೈಯ್ಯರ್ಾ ಮಾಡಿ ವಗ್ಯಾನ ಬುಟ್ಟಿ ಹೊತಗೊಂಡ ದೆಸಾಯಾರ ತ್ವಾಟಕ್ಕಡಿ ನಡದ್ಳು. ಬಿಸಲು ಮ್ಯಾಲ ಸುರಿತಿತ್ತು. ದಾರ್ಯಾಗ ಹೊಗುವಾಗ ಯಾರೂ ಎದರ ಆಗಲಿಲ್ಲ. ಎದ್ಯಾಗ ಭಯಾ ಹೆಚ್ಚಿಗಾತು., ಹೆಜ್ಜಿ ದೊಡ್ಡು ಇಟಗೊಂತ ನಡಿತ್ತಿದ್ಳು. ದೂರದಲ್ಲಿ ಭೀಮನ ಕುರಿ ಮೈಯಾಕತ್ತಿದ್ದು.ಭೀಮ ಸೀಟಿ ಹಾಕೊಂತ ಬೆಳ್ಯಾಗ ಹೋಗು ಕುರಿಮರಿಗೆ ತಪ್ಪಗಲ್ಲ ವಗದ ‘ಹುಸ್ಯಾ. ಹುಸ್ಯಾ. ಅಂತಿದ್ದ. ಹೆಂಗಾರಾ ಮಾಡಿ ನನ್ನ ಮನಸನ್ಯಾಂದ ಇಸ್ಯಾ ಭೀಮಗ ಹೇಳಬೇಕಂತ ಪಾತಿಮಾ ನಿಧರ್ಾರ ಮಾಡಿ ಬಂದಿದ್ಳು.
ಭೀಮಗ ಕಾಣುವಂಗ ಪಾತಿಮಾ ಹತ್ತಿರ್ಕ ಹ್ವಾದ್ಳು. ಅವಳ್ನ ನೋಡಿದ ಭೀಮಗ ‘ಬ್ಯಾಸಗ್ಯಾಗ ಮಳಿ ಬಂದಂಗ’ ಆತು. ಸುತ್ತಮುತ್ತ ಪಾತಿಮಾ ಗಮನಿಸಿ ಯಾರು ಇಲ್ಲದ್ದು ಅರಿತು ಭೀಮನ ಗಟ್ಟೆಂಗ ತಬ್ಬಿ ನಾ ನಿನ್ನ ಇಷ್ಟಾಪಟ್ಟಿನಿ, ನಿನ್ನೊಂದಿಗೆ ಬಾಳು ಆಸೆ ಆಗೆತಿ, ಅಂತ ಕಣ್ಣೀರ ಹಾಕಿದಗ ಬೀಮಗ ‘ಬೆಣ್ಣೆ ರೊಟ್ಟಿ ಬಾಯಾಗ ಬಿದ್ದಾಂಗ’ ಆತು.
ಪರೂರಾಗ ಬಸವಣ್ಣ ದೇವ್ರ ಜ್ಯಾತ್ರಿ ಇತ್ತು. ಭಿಮಾ ಅಂದ ಅವ್ರ ಅವ್ವಗ ಕುರಿ ಮೇಸು ಜವಾಬ್ದರಿ ಒಪ್ಪಿಸಿ ಜಾತ್ರಿಗೆ ಹೋಗಿದ್ದ. ಪಾತಿಮಾಳೂ ರೆನಿ ಜೋಡಿ ಜ್ಯಾತ್ರಿಗೆ ಹೋಗಾಕ ಅದು ಇದು ಹೇಳಿ ಅವರಪ್ಪನ ಒಪ್ಪಗಿ ತಗೊಂಡ ಬಂದಿದ್ಳು. ಭೀಮಾ ಚಲೋ ಒಂದ ಡಜನ್ ಬಳಿ ತಗೊಂಡ. ಟಿಕಳಾ, ಉಗರ ಪಾಲಿಸ್, ಕರಿದಿ ಮಾಡಿ ಹಂತೆಕ ಇಟಗೊಂಡ. ಭೀಮಗಂತ ತೈತಾ, ಬಿಸಲಾಗ ಯಾವಾಗು ಇರ್ತಾನ ಅಂತ ಒಂದ ಟೊಪಗಿ ತಗೊಂಡಳು. ಜ್ಯಾತ್ರಿವಳಗ ಇಬ್ಬರು ಕೂಡಿ ತ್ವಟ್ಟಲದಾಗ ಕುಂತಾಗ ರೇನಿ ಇವ್ರ ಕಳ್ಳ ಪ್ರೀತಿ ನೋಡಿ ಲಕ್ಕ ಕಾಕಿದ್ಳು. ಇಬ್ಬರೂ ಕೈ ಮ್ಯಾಲ ಪಾತಿಮಾ ಭೀಮಾ ಅಂತ ಲವ್ ಚಿನ್ಹೆ ವಳಗ ಅಚ್ಚ ಹಾಕಿಸಿಕೊಂಡಾಗ ರೆನಿ ‘ಪಾತಿಮಾ ಎಷ್ಟ ಸ್ಪೀಡ ಅದಾಳ ಯವ್ವಾ’ ಅಂತ ಬಾಯ್ ಮ್ಯಾಲ ಕೈ ಇಟಗೊಂದಳು.
ಹಿಂಗಾಗಿ ರಪ್ಯಾಗ ಪಾತಿಮಾಳ ಲವ್ ಸ್ಟೋರಿ ತಿಳ್ಕೋಳಾಕ ಬಾಳ ತಡಾ ಆಗಲಿಲ್ಲ. ರೇನಿ ಜಾತ್ರಿ ವಳಗ ನಡದದ್ದ ಇದ್ಕಿದ್ದಾಂಗ ರಪ್ಯನ ಮುಂದ ಹೇಳಿದ್ಳು. ಮನಿಗೆ ಬಂದ ರಪ್ಯಾ ತಂಗಿ ಕೈಗೆ ಬರಿ ಕ್ವಟ್ಟ, ಜಾಡಿಸಿ ವದ್ದ,ಕುದಲಾ ಹಿಡದ ಕಪಾಳ ಕಪಾಳ ಬಡದಿದ್ದ. ಅಂವ್ನ ಕಣ್ಣ ಎತ್ತಿ ನೋಡಿದ್ರ ಕಣ್ಣ ಕಿಳ್ತಿನಿ ಅಂತ ಎಚ್ಚರಿಕಿ ಕೊಟ್ಟಿದ್ದ. ಹಲಕಟ್ಟ ಸುಳಿ ಮಗಗ ಒಂದ ಗತಿ ಕಾಣಸ್ತಿನಿ ಅಂತ ಶಪತಾ ಮಾಡಿದ್ದ. ರಪ್ಯಾನ ಮಾತ ಕೇಳಿ ಪಾತಿಮಾ ತೋದ ಕೋಳಿಗತೆ ಮೂಲ್ಯಾಗ ಬಿಕ್ಕಿ ಬಿಕ್ಕಿ ಅಳಾಕತ್ತಿದ್ಳು.
ರೆನಿ ಮದ್ವಿ ಅವರ ಮನ್ಯಾಗ ನೇಮಸಿದರು. ರೆನಿ ರಪ್ಯಾ ಮನಸ್ನಿಂದ ಕಿತ್ತವಗದ ಕೈ ಹಿಡದ ಗಂಡನ ಕಡಿ ಚಿತ್ತ ಹರಸಿದ್ಳು.ರಪ್ಯಾಗ ಇವ್ಳ ಪ್ರೀತಿ ಆಗ ಕಪಾಳ್ಕ ಹೊಡದಾಂಗ ಆತು.
ರಪ್ಯಾಗ ಬೀಮನ ಮ್ಯಾಲ ಕೋಪ ಉಕ್ಕಿ ಹರಿತಿತ್ತ. ‘ಉಂಡ ಮನಿ ಗಳಾ ಎಣಿಸಿದ’ ಬೋಳಿ ಮಗಾ ಅಂತ ಅವ್ನ ಮೊಸದ ಬುದ್ದಿ ನೆನಸ್ಕೊಂಡ ತಮ್ಮ ಜ್ಯಾತಿ ಹುಡಗರ್ನ ಗ್ವಾಳಿ ಮಾಡಿ ಇದ್ದ ಇಸ್ಯಾ ಹೇಳಿದ. ಬಕ್ರಿ ಹಬ್ಬದಾಗ ಎಲಬ ಕಡದಾಂಗ ರಪ್ಯಾನ ಮಾತ ಕೇಳಿ ಅವ್ರ ಜ್ಯಾತಿ ಮಂದಿ ಕಟಾ ಕಟಾ ಅಂತ ಹಲ್ಲ ಕಡದ್ರು. ಕುರಬರ ಹಳ್ಯಾಗ ಸಣ್ಣಂಗ ಶೀತಲ ಯುದ್ಧಾ ಪ್ರಾರಂಬ ಆತು.
ಜ್ಯಾತ್ರಿ ವಳಗ ಬೆಟ್ಟಿ ಆದವ್ರ ಮತ್ತ ಬೀಮಾ ಪಾತಿಮಾಗ ಬೆಟ್ಟಿ ಆಗಿರಲಿಲ್ಲ. ಹೆಂಗ ಬೆಟ್ಟಿ ಆಗಬೇಕು ಅಂತ ಚಡಪಡಿಸಿದ. ರಪ್ಯಾ ತನ್ನ ಮ್ಯಾಲ ದೇಷಾ ಕಾರಾಕತ್ಯಾನ ಅನ್ನುದು ಬೀಮ ತಿಳಕೊಂಡಿದ್ದಾ. ಪಾತಿಮಾ ಬೀಮನ ಚಿಂತ್ಯಾಗ ಕೊರಗಿ ಸೊರಗಿ ಹೊಗಿದ್ಳು. ಮತ್ತೊಂದು ದಿನಾ ಮಧ್ಯಾನ ವಗ್ಯಾನ ಬುಟ್ಟಿ ಹಿಡಕೊಂಡು ಪಾತಿಮಾ ಬೀಮ ಇದ್ದಲ್ಲಿಗೆ ನಡದ ಹ್ವಾದ್ಳು. ದೇಸಾರ ಹೊಲದಾಗ ಕುರಿಬಿಟ್ಟಿದ್ದ ಭೀಮಗ ಪಾತಿಮಾನ ನೋಡಿ ‘ಹ್ವಾದ ಜೀವ ಹೊಳ್ಲಿ ಬಂದಾಂಗ ಆತು’. ತಮ್ಮ ಪ್ರೀತಿ ಒಪ್ಪದ ಜನರ ಕುರಿತು ಮಾತಾಡಿ .ಒಬ್ಬರಿಗೊಬ್ಬರು ಅಪ್ಪಿಕೊಂಡಿ ಅತ್ತರು. ಸೈಕಲ್ಲ ಹತ್ತಿ ಹೋಗುತ್ತಿದ್ದ ಹುಚ್ಚಮಲ್ಲ ಇರನ್ನ ನೋಡಿ ‘ ಕೇ ಹೋ.. ಕೇ ಹೋ.. ಅಂತ ಕೆಕೆ ಹಾಕಿ ಮರೆಯಾದ.
ರಪ್ಯಾ ತನ್ನ ಬಡದದ್ದು, ಕೈಮ್ಯಾಲ ಅಚ್ಚ ಹಾಕಿಸದ್ಕ ಬರಿ ಹಚ್ಚಿದ್ದು ಹೇಳಿ ಪಾತಿಮಾ ಭೀಮನ ಮುಂದ ಬಿಕ್ಕಳಸಿದ್ಳು, ‘ನಿನ್ನ ಹೊಡಸಾಕ ಸಿದ್ದಾಗ್ಯಾನ ನಮ್ಮಣ್ಣ’ ಅಂತ ಹುಸ್ಯಾರಾಗುರು ಅಂತ ಬೀಮಗ ಹೇಳಿ ಕೆನ್ನಿ ತುಂಬಾ ತನ್ನ ಮೃದುವಾದ ಕೈ ಸವರಿ. ‘ನಾಂವ ಓಡಿ ಬೋಗೋಣ’ ಎಲ್ಲ್ಯಾದ್ರು ಸುಖದಿಂದ ಇರೋಣ ಅಂತ ಪಾತಿಮಾ ಭೀಮನ ಕಣ್ಣಾಗ ಕಣ್ಣಿಟ್ಟ ಕೇಳಿದ್ಳು.
ನಮ್ಮವ್ವ ವಂದ ಅಕ್ಕೈತಿ, ಚಿಕ್ಕಾಂವ ಇದ್ದಾಗ ಅಪ್ಪ ಸತ್ತಾ. ನನ್ನವ್ವ ನನಗಾಗಿ ಬದಕ್ಯಾಳ ಅದ್ಕ ನಂಗ ನೀನು ಬೇಕು, ನಮ್ಮ ಅವ್ವಾನೂ ಬೇಕು. ಓಡಿ ಹೋಗುದ ಇಚಾರ ಮಾಡಬ್ಯಾಡ ನೀ ಓದಿದಾಕಿ, ಕಲತಾಕಿ, ನೀನ ಹಿಂತವ್ರ ನೋಡಿ ಹೆದರಬೇಕಾಗಿಲ್ಲ. ಸಿನಮಾದಾಗ ಎಷ್ಟೊಕೊಂದ ಹಿರೊಗೊಳು ಬ್ಯಾರೆ ಜಾತಿ ಹುಡಗೀನ ಮದವಿ ಆಗಿ ಚಮದಂಗ ಸಂಸಾರ ಮಾಡಿದ್ದು ನಾ ರಗಡ ಸಿನಮಾ ನೋಡಿನಿ. ನಾಮವು ಹಂಗ ಇಲ್ಲೆ ಕುರಬರ ಹಳ್ಯಾಗಿದ್ದ ಬದುಕಿ ತೊರ್ಸೋನು, ಅಂತ ಭೀಮ ಹೇಳಿದಾಗ ಅವ್ನ ಪ್ರೀತಿಮ್ಯಾಲ ಪೂರಾ ಭರವಸೆ ಬಂತು. ನಾ ಇನ್ನ ಹೊಕ್ಕಿನಿ ಬಾಳ ತಡಾ ಆತ ಅಂತ ಬೀಮನ ಕೆನ್ನಿಗೊಂದ ಮುತ್ತ ಕೊಟ್ಟ ಪಾತಿಮಾ ಮನಿಗೆ ಹ್ವಾದ್ಳು.
ಇಡೀ ಊರಗೆ ಕುರಬರ ಭೀಮನ ಪ್ರೀತಿ ಡಂಗರಾ ಸಾರಿ ಸಾರಿ ಹುಚ್ಚಮಲ್ಲ ಹೇಳಿದ್ದ. ಆಗಂತು ಮುಸಲರ ಮಂದಿಗೆ ಹೊಟ್ಯಾಗ ಬೆಂಕಿ ಹಾಕಿದಾಂಗ ಆತು.
ರಪ್ಯಾಗಂತೂ ಪಾತಿಮಾನ ಕ್ವಂದ ಬಿಡಬೇಕ ಅಂತ ಅನಸ್ತಿ. ತಂಗಿನ್ಯಾಕ ಕೊಲ್ಲುದ, ಬ್ಯಾಡಾ, ಅಂವ್ನ ಮುಗಸ್ಬೆಕ ಅಂತ ಇಚ್ಯಾರ ಮಾಡಕೊಂಡ. ಊರಾಗ ಕುರಬರ ಮನಿನ ಬಾಳ ಅದಾವ, ಮೇಲಾಗಿ ಅವರ್ದ ವರ್ಚಸ್  ಐತಿ. ನಮ್ಮ ಜ್ಯಾತ್ಯಾರು ಹದ್ನೈದ ಮಾತ್ರ, ಅದರಾಗ ನಮ್ಮ ಮಂದಿ ಜಗಳಕ್ಕ ಹಿಂಜೆರಿತಾರ ಅನುವಷ್ಟ್ರಾಗ ನಾಕಾರ ಮುಸಲ್ರ ಹೈದರು ಬಂದರು.ಗುಸು ಗುಸು ಮಾತಾಡ್ಕೊಂಡ ನಡದ್ರು.
ನಡುಮದ್ಯಾನ ಪಾತಿಮಾನ ಬಲಗನ್ನ ಹರಾಕತ್ತಿ, ಇಂದೇನ ಕಾದೈತೊ ಅಂತ ಚರಗಿ ತುಂಕೊಂಡ ದೆಸಾಯಾರ ದಡ್ಡಿಕಡೆ ಹ್ವಾದ್ಳು. ಬೀಮಾ ಅರು ತಪ್ಪಿ
ದೇಸಾಯಾರ ಹೊಲದ ಬದುನ್ಯಾಗ ಬಿದ್ದಿದ್ದ. ವಿಚಾರ ಹುಚ್ಚ ಮಲ್ಲ ಕೇಕೇ ಹಾಕೊಂತ ಹೇಳಿದಾಗ ಪಾತಿಮಾನ ಉಸಿರ ನಿಂತ ಹೋದಂಗ ಆತು. ಆಳ ಮನಸ್ಯಾ ನೋಡಿ ಗಾಬ್ರಿಯಾಗಿ ಬಾಯಿಗೆ ನೀರ ಹಾಕಿ, ಭಿಮಣ್ಣಾ ಅಂತ ಮುರ್ನಾಲ್ಕ ಸಾರಿ ವದರಿದ. ಬೀಮನ ಮುಗನ್ಯಾಗ, ಕಿವ್ಯಾಗ ರಗತ ಹರ್ಯಾಕತ್ತಿತ್ತು. ಕೂಗ ಹ್ವಡದ ಸುತ್ತ ಮುತ್ತ ಇರೊ ಮಂದಿ ಕೂಡಿಸಿ. ದೇಸಾಯಾರ ಬಂಡಿ ಹೂಡಿ ದವಾಕಾನಿಗೆ ಓದ್ರ.
ಭೀಮನ ಅವ್ವ ಮಗಗ ಹಂಗಾ ಆದದ್ಕ ತಲಿ ಬ್ರಾಂತಿ ಆದಾಂಗ ಆಗಿ ಕಲ್ಲ ಬಂಡಿ ಗತೆ ಸುಮ್ನ ಕುಂತ್ಳು. ಊರ ಮಂದಿ ಕೂನ ಇಲ್ಲದಾಂಗ ಮಾಡುದ ನೋಡಿ ಇಕಿಗೂ ಹುಚ್ಚ ಹಿಡಿತಿ ಅಂತ ಜನಾ ಗಾಬರಿಯಾದ್ರು.
ಊರಾನ ಮಂದಿ ಜಮಾ ಆದ್ರು ರಪ್ಯಾನ ಹುಡಕಾಕ ಸುರೂ ಮಾಡಿದ್ರು.ಅಂವ ತಲೆಮರಿಸಿಕೊಂಡ ಅನ್ನು ವಿಷ್ಯಾ ಕಿವಿಮುಟ್ಟಿತು. ಎಲ್ಲಾ ಹುಮ್ಮ ಕುರಬರು ಕೂಡಿ ಓಕಳಿ ಆಡಿದಾಂಗ ಮುಸಲರ ಮನಿ ಹೋಕ್ಕ ಹರೇದ ಹುಡಗರ್ನ ಹಿಗ್ಗಾಮುಗ್ಗಾ ತಳಸಿದ್ರು. ಅಮಾಯಕ ಮುಸಲರು ಕುರುಬರ ಕೈತುತ್ತ ಆದ್ರು. ಕುಸು ಕುನ್ನಿಗಳ ಆಕಂದ್ರ ಮುಗಿಲು ಮುಟ್ಟಿತ. ಅನೇಕ ಕುರಬರೂ ಜಗಳದಲ್ಲಿ ಪೆಟ್ಟ ತಿಂದ ಮೆತ್ತಗ ಆಗಿದ್ರು.
ಆದ್ರ ದೇಸಾಯ ರುದ್ರಗೌಡನ ಪ್ರಚೋದನೆಗೆ ಸಿಕ್ಕು ಹನಾ ಹನಿ ಗುದ್ದಾಡಿ ಮೂಲಿಗುಂಪಾದ್ರು.
ಊರಾಗ ಹಿಂತಾ ಗಲಾಟಿ ಆದದ್ದು ಅರಿತು ಮಠದ ಸ್ವಾಮಿಜಿ ಹನುಮಂತಪ್ಪನವರು
ಮಮ್ಮಲ ಮರುಗಿದರು. ಸೂಕ್ಷ್ಮವಾಗಿ ಅವಲೋಕಿಸಿ, ಇದರಾಗ ದೇಸಾಯಿ ಹಕ್ಕಿಕ್ಕತ್ತ ಇರೋದು ಕಾತ್ರಿ ಮಾಡಕೊಂಡು ಬಡಪಾಯಿ ಮುಸಲರ ವೇದನೆ, ಕುರಬರ ಬುದ್ದಿಹೀನ ಕೃತ್ಯ ನನೆದು ಬೇಸರಗೊಂಡರು.
ಪೆಟ್ಟುತಿಂದು ಹೈರಾನಾದ ಮುಸಲರು, ಅದಕ್ಕೆ ಕಾರಣರಾದ ಕುರಬರನ್ನ ಒಗ್ಗೂಡಿಸಿ, ತಿಳುವಳಿಕೆ ಹೇಳಿ, ಎಲ್ಲರೂ ಒಂದಾಗಿ, ಚಂದಾಗಿ ಇರುವಂತೆ ಮಾಡುವಲ್ಲಿ ಸ್ವಾಮಿಜಿ ಮಾಡಿದ ಕೆಲಸ ಮತ್ತೆ ಊರ ಮಂದಿಗೆ ನೆಮ್ಮದಿ ತಂದಿತು. ಊರಾಗಿರೋ ಇಲ್ಲಾ ಮಂದಿ ತಮ್ಮ ತಮ್ಮ ಕೆಸದಲ್ಲಿ ತೊಡಗಿದರು.
ಗಾಯಗೊಂಡ ಭೀಮ ಹಾಸಿಗೆ ಹಿಡದಿದ್ದ. ಅವನ ಚಿಂತೆಯಲ್ಲಿ ಕೊರಗಿ, ಸೋರಗಿ ಕಣ್ಣೀರಿಡುತಿದ್ದಳು. ಲೋಕವೆಲ್ಲ ಇವರ ಕಡೆ ಓಗಡೆ ಮತ್ತೆ ತಮ್ಮ ಜಂಜಾಡದಲ್ಲಿಯೇ ಮೂಳಗಿತ್ತು.
 

‍ಲೇಖಕರು G

17 June, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading