ಶ್ರೀಪಾದರಾಯಣ ಸಂಬಂಧ!
-ಜೋಗಿ
ಶ್ರೀಪಾದ ಭಟ್ ಸ್ಮರಿಸಿಕೊಂಡಾಗೆಲ್ಲ ನೆನಪಾಗುವುದು ಚಿರಸ್ಮರಣೆ. ಚಿರಸ್ಮರಣೆ ನೆನಪಾದಾಗೆಲ್ಲ ಕಣ್ಮುಂದೆ ಬರುವುದು ಕತೆಗಾರ ನಿರಂಜನ. ಅವರಿಗೂ ಇವರಿಗೂ ಎಂಥಾ ಬಾದರಾಯಣ ಸಂಬಂಧ ಎಂದು ಹುಡುಕುತ್ತಾ ಹೊರಟರೆ, ನಿರಂಜನರಿಗೆ ರವೀಂದ್ರನಾಥ್ ಟಾಗೋರ್ ಮತ್ತ ಮಾಂಟೋ ಮೆಚ್ಚಿನ ಲೇಖಕರಾಗಿದ್ದರು ಅನ್ನುವುದು ತಿಳಿಯುತ್ತದೆ.
ರವೀಂದ್ರನಾಥ್ ಟಾಗೋರ್,ಮಾಂಟೋ ಮತ್ತು ಶ್ರೀಪಾದರಿಗೆ ಎಂಥಾ ಪಾದರಾಯಣ ಸಂಬಂಧ ಅಂತ ಹುಡುಕಾಡಿದರೆ, ಜೂನ್ ೧೫,೧೬,೧೭ರಂದು ರಂಗಶಂಕರದಲ್ಲಿ ‘ಅವಧಿ’ಯ ಸಹಯೋಗದೊಂದಿಗೆ ಮಾಂಟೋ ಮತ್ತು ಟಾಗೋರ್ ಕತೆಗಳನ್ನು ಆಧರಿಸಿದ ಶ್ರೀಪಾದಭಟ್ ನಿರ್ದೇಶಿಸಿದ ಮೂರು ನಾಟಕಗಳ ಪ್ರದರ್ಶನ ಇರುವುದು ಗೊತ್ತಾಗುತ್ತದೆ.
ಭೀಮಾಯಣದಂಥ ನಾಟಕ ಕೊಟ್ಟ ಶ್ರೀಪಾದ ಭಟ್ ಅವರಿಗೆ ನಾಟಕೋತ್ಸವ ಎಷ್ಟೊಳ್ಳೇ ಗೌರವ ಅಲ್ವೇ!
‘ನಾನು ಕರ್ನಾಟಕದ ರಂಗಭೂಮಿಯ ಪರಿಧಿಯಲ್ಲೇ ಕೆಲಸ ಮಾಡಿಕೊಂಡು ಬಂದವನು. ಹೊಸ ತಂಡಗಳಿಗೆ, ಅಪ್ಪಟ ಹವ್ಯಾಸಿಗಳಿಗೆ ರಂಗಪಾಠ ಹೇಳುತ್ತಾ ಬಂದೆ. ಕೃಷಿಕೂಲಿ ಕಾರ್ಮಿಕರಿಗೆ,ಶಿಕ್ಷಕರಿಗೆ ವೈದ್ಯರಿಗೆ- ರಂಗದ ಖುಷಿ ಮನಗಾಣಿಸಲು ಯತ್ನಿಸಿದೆ. ಕಂಪಿನ ಕರೆಗಿಂತ ಕಾಲದ ಕರೆಗೆ ಓಗೊಟ್ಟವನು ನಾನು. ಈಗ ಅಪ್ಪಟ ಹವ್ಯಾಸಿಯೋರ್ವನ ಅರೆಬರೆಗಳನ್ನು ಒಪ್ಪವಾಗಿಸಿ ಉತ್ಸವದ ಘನತೆ ನೀಡುತ್ತಿರುವ ಜಿ ಎನ್ ಮೋಹನ್ ತಂಡಕ್ಕೆ ನಮನ’ ಎನ್ನುತ್ತಾರೆ ಶ್ರೀಪಾದ ಭಟ್.
ಅವರು ಸಿರ್ಸಿಯವರು, ಹೈಸ್ಕೂಲ್ ಅಧ್ಯಾಪಕರು. ಮಕ್ಕಳ ರಂಗಭೂಮಿಯಿಂದ ಹೊರಟು ಚಿಂತನ, ಸಮುದಾಯಗಳೊಂದಿಗೆ ಇದ್ದವರು. ತುಳು ನಾಟಕಗಳನ್ನೂ ನಿರ್ದೇಶಿಸಿದವರು. ಕನ್ನಡ ಕಾವ್ಯವನ್ನು ರಂಗದ ಮೇಲೆ ತಂದವರು. ಶೇಷಗಿರಿ ಎಂಬ ಹಳ್ಳಿಯಲ್ಲಿ ರೈತರ ಮಕ್ಕಳಿಗೆ ನಾಟಕ ಕಲಿಸಿ ತಂಡ ಕಟ್ಟಿದವರು. ಅದೇ ತಂಡವೇ ಗಣೇಶ್ ನಿರ್ದೇಶನದಲ್ಲಿ ವಾಲಿವಧೆ ನಾಟಕ ಪ್ರದರ್ಶಿಸಿದ್ದು.
ನಾಟಕ ನೋಡುತ್ತಾ ಭಟ್ಟರನ್ನು ಅರಿಯೋಣ.
ಟಿಕೆಟ್ ಗಾಗಿ ಇಲ್ಲಿ ಕ್ಲಿಕ್ಕಿಸಿ







0 Comments