ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಹೊಸ ಕಾದಂಬರಿ ಬರ್ತಿದೆ: ಅದು ಇಲ್ಲಿದೆ..

ಗುರುವಾಯನಕೆರೆಯ ಒಂದು ಅಧ್ಯಾಯ ಬಾಬಣ್ಣನ ಎತ್ತುಗಳನ್ನು ಕಳ್ಳರು ಕದಿಯಲು ಬಂದರು ಪ್ರತಿಯೊಂದು ಊರಲ್ಲೂ ವಿಚಿತ್ರ ಗುಣಗಳ, ಅನೂಹ್ಯ ವರ್ತನೆಯ ಮನುಷ್ಯರು ಇದ್ದೇ ಇರುತ್ತಾರೆ. ಅಂಥವರು ನಮ್ಮ ಮಧ್ಯೆ ಇರುವಾಗ ಅಷ್ಟೇನೂ ವಿಕ್ಷಿಪ್ತರಾಗಿ ಕಾಣದೇ ಹೋದರೂ ಕಾಲಾಂತರದಲ್ಲಿ, ನಮ್ಮ ಸ್ಮರಣೆಯಲ್ಲಿ ನಮ್ಮನ್ನು ಪುಳಕಿತರಾಗಿಸುತ್ತಾ ಇರುತ್ತಾರೆ. ಅದಕ್ಕೆ ಅವರ ಜೀವನ ಶೈಲಿ, ಧೋರಣೆ, ವರ್ತನೆಗಳೆಲ್ಲ ಕಾರಣವಾಗುವ ಹಾಗೆ, ಅವರಲ್ಲಿ ಥಟ್ಟನೆ ಗೋಚರಿಸುವ ವೈರುದ್ಧವೂ ಕಾರಣವಾಗಬಹುದು. ಆ ಕಾಲಕ್ಕೆ ನಮ್ಮೂರಲ್ಲಿದ್ದದ್ದು ಒಂದೇ ಒಂದು ಎತ್ತಿನಗಾಡಿ. ಅದರ ಮಾಲಿಕನ ಹೆಸರು ಬಾಬು. ಅವನನ್ನು ಎಲ್ಲರೂ ಗಾಡಿ ಬಾಬಣ್ಣ ಎಂದೇ ಕರೆಯುತ್ತಿದ್ದದ್ದು. ಎರಡು ಭೀಮಾಕಾರದ ಎತ್ತುಗಳನ್ನು ಸಾಕಿದ್ದ ಬಾಬು, ಚೆಂದದ ಗಾಡಿಯೊಂದನ್ನು ಇಟ್ಟುಕೊಂಡಿದ್ದ. ದಿನಾ ಅದನ್ನು ಒರೆಸಿ, ತೊಳೆದು ಸ್ವಚ್ಛವಾಗಿ ಇಟ್ಟುಕೊಳ್ಳುತ್ತಿದ್ದ. ಆ ಗಾಡಿಯದೇ ಒಂದು ವಿಶಿಷ್ಟ ಪರಿಮಳ. ಅದು ಎತ್ತಿನಿಂದ ಬರುತ್ತಿತ್ತೋ ಅವನ ಗಾಡಿಯಿಂದಲೇ ಬರುತ್ತಿತ್ತೋ ಅನ್ನುವುದು ನಮಗೆ ಗೊತ್ತೇ ಆಗುತ್ತಿರಲಿಲ್ಲ. ಬಾಬಣ್ಣನ ಗಾಡಿಯೆಂದರೆ ಆ ಕಾಲಕ್ಕೆ ಪ್ರಸಿದ್ಧಿ. ಅದನ್ನು ಮದುವೆ ದಿಬ್ಬಣಕ್ಕೆ ಮತ್ತು ಅಂಥ ದೊಡ್ಡ ಸಮಾರಂಭಗಳಿಗೆ ಮಾತ್ರ ಬಳಸುತ್ತಿದ್ದರು. ನಮ್ಮೂರಿನ ಶಾನುಭೋಗರಿಗೆ ಮಾತ್ರ ಅದರಲ್ಲಿ ಹೋಗುವ ಭಾಗ್ಯ ಎಂದು ನಾವೆಲ್ಲ ನಂಬಿದ್ದೆವು. ಹೀಗಾಗಿ ಗಾಡಿ ನಿಂತಿರುವ ಹೊತ್ತಲ್ಲಿ ಬಾಬಣ್ಣನ ಕಣ್ಣುತಪ್ಪಿಸಿ ನಾವೆಲ್ಲ ಗಾಡಿ ಹತ್ತಿ ಕೂರುತ್ತಿದ್ದೆವು. ಅದು ಬಾಬಣ್ಣನಿಗೆ ಹೇಗೋ ಗೊತ್ತಾಗಿ ನಮ್ಮನ್ನು ಬೆತ್ತ ಹಿಡಿದು ಅಟ್ಟಿಸಿಕೊಂಡು ಬರುತ್ತಿದ್ದ. ನಾವೆಲ್ಲ ಗಾಡಿಯಿಂದ ಜಿಗಿದು ಓಡಿ ಪರಾರಿಯಾಗುತ್ತಿದ್ದೆವು. ಗಾಡಿ ಬಾಬಣ್ಣನಿಗೆ ಇದೆಲ್ಲ ತಮಾಷೆಯ ಸಂಗತಿಯಾಗಿತ್ತೆಂದು ಆಮೇಲೆ ನಮಗೆ ಅನ್ನಿಸತೊಡಗಿತ್ತು. ನಾವೂ ಆ ತಮಾಷೆಯನ್ನು ಆನಂದಿಸಲು ಆರಂಭಿಸಿದ್ದೆವು. ಬಾಬಣ್ಣನಿಗೆ ಮಕ್ಕಳಿರಲಿಲ್ಲ. ಎತ್ತರದ ದನಿಯ, ಪೈಲ್ವಾನ್ ಮೈಕಟ್ಟಿನ ಬಾಬಣ್ಣ ಕಟ್ಟುಮಸ್ತು ಆಳು. ಅವನು ನಮ್ಮೂರಿನ ಡಾಂಬರು ರಸ್ತೆಯಲ್ಲಿ ಗಾಡಿ ಹೊಡೆದುಕೊಂಡು ಹೋಗುತ್ತಿದ್ದರೆ, ಗಾಡಿಯ ಚಕ್ರದಡಿಯಲ್ಲಿ ಮರಳು, ಜಲ್ಲಿಕಲ್ಲುಗಳು ಪುಡಿಪುಡಿಯಾಗುತ್ತಾ ಒಂಥರಾ ಸದ್ದು ಬರುತ್ತಿತ್ತು. ಆ ಸದ್ದು ಕೇಳಿದರೆ ನಾವೆಲ್ಲ ಹೊರಗೋಡಿ ಬಂದು ಗಾಡಿ ನೋಡುತ್ತಾ ನಿಂತುಬಿಡುತ್ತಿದ್ದೆವು. ಎರಡು ಬೆಳ್ಳಗಿನ ಎತ್ತುಗಳು ಗಾಡಿಯನ್ನು ಯಾವ ಆಯಾಸವೂ ಇಲ್ಲದಂತೆ ಎಳೆಯುತ್ತಿದ್ದವು. ಅವುಗಳ ಕಣ್ಣಲ್ಲಿ ಅನಿರ್ವಚನೀಯ ಮತ್ತು ಹಣಿಕಿಹಾಕುತ್ತಿತ್ತು. ಆ ಎತ್ತುಗಳನ್ನು ಬಾಬಣ್ಣ ಮಕ್ಕಳಂತೆ ಪ್ರೀತಿಸುತ್ತಿದ್ದ. ದಿನಾ ಅವುಗಳ ಮೈತೊಳೆಯುತ್ತಿದ್ದ. ಚಳಿಗಾಲದಲ್ಲಿ ಎಂದೂ ಹಸಿಹುಲ್ಲು ಕೊಟ್ಟವನಲ್ಲ. ಅದಕ್ಕೆಂದೇ ಮೂಡಿಗೆರೆ, ಚಿಕ್ಕಮಗಳೂರು ಕಡೆಯಿಂದ ಒಣಹುಲ್ಲು ತರಿಸುತ್ತಿದ್ದ. ನಮ್ಮೂರಿನಲ್ಲಿ ಅಷ್ಟು ಹೊತ್ತಿಗಾಗಲೇ ಹೊಸ ತಳಿಯ ಭತ್ತ ಬೆಳೆಯಲು ಆರಂಭಿಸಿದ್ದರು. ಗೇಣೆತ್ತರ ಬೆಳೆಯುತ್ತಿದ್ದ ಆ ತಳಿಯ ಹುಲ್ಲು ಎತ್ತುಗಳಿಗೆ ಒಳ್ಳೆಯದಲ್ಲ ಎಂದೂ, ಅವಕ್ಕೆ ಸಿಕ್ಕಾಪಟ್ಟೆ ಕ್ರಿಮಿನಾಶಕ ಹೊಡೆದಿರುತ್ತಾರೆಂದೂ ಯಾರೋ ಹೇಳಿಬಿಟ್ಟಿದ್ದರು. ಹೀಗಾಗಿ ಹೊಸತಳಿಯ ಒಣಹುಲ್ಲನ್ನು ಅವನು ಪುಕಸಟ್ಟೆ ಕೊಟ್ಟರೂ ಮುಟ್ಟುತ್ತಿರಲಿಲ್ಲ. ಯಾವತ್ತೂ ಗಾಡಿಯಲ್ಲಿ ಅವನು ಇಬ್ಬರಿಗಿಂತ ಜಾಸ್ತಿ ಜನರನ್ನು ಕೂರಿಸಿಕೊಂಡವನೂ ಅಲ್ಲ. ಮದುವೆ ದಿಬ್ಬಣವಾದರೆ ಗಂಡು ಹೆಣ್ಣು ಮತ್ತು ಇಬ್ಬರು ಪುಟ್ಟ ಮಕ್ಕಳು ಮಾತ್ರ ಕೂರುವುದಕ್ಕೆ ಬಿಡುತ್ತಿದ್ದ. ವಯಸ್ಸಾದ ಒಬ್ಬರನ್ನೋ ಇಬ್ಬರನ್ನೋ ಕೂರಿಸಬೇಕಾಗಿ ಬಂದರೆ ತಾನು ಗಾಡಿಯಿಂದ ಇಳಿದು ನಡೆದುಕೊಂಡು ಬರುತ್ತಿದ್ದ. ಆ ಎತ್ತುಗಳೂ ಅಷ್ಟೇ, ಅವನ ಆರೈಕೆಯಿಂದ ಮೈದುಂಬಿಕೊಂಡು ನೋಡುವುದಕ್ಕೆ ಕಣ್ತುಂಬುವಂತಿದ್ದವು. ಅವುಗಳ ಹಣೆಗೆ ದೃಷ್ಟಿಬೊಟ್ಟು ಇಟ್ಟೇ ಅವನು ಮನೆಯಿಂದ ಹೊರಡುತ್ತಿದ್ದದ್ದು. ಆ ಎತ್ತುಗಳ ಸಾಮರ್ಥ್ಯವನ್ನು ನೋಡಿದ ಉಪ್ಪಿನಂಗಡಿಯ ಶೆಟ್ಟರೊಬ್ಬರು ಅವುಗಳನ್ನು ಮಾರುವಂತೆ ಕೇಳಿಕೊಂಡು ಬಂದಿದ್ದರು. ಕಂಬಳಕ್ಕೆ ಒಳ್ಳೆಯ ಜೋಡಿಯಾಗುತ್ತೆ ಎಂದು ಒಳ್ಳೆಯ ಬೆಲೆ ಕೊಡುವುದಾಗಿ ಆಮಿಷ ಒಡ್ಡಿದ್ದರು. ಬಾಬಣ್ಣ ಮಾತ್ರ ಆ ಪ್ರಲೋಭನೆಗೆ ಕಿವಿಗೊಟ್ಟಿರಲಿಲ್ಲ. ಎಷ್ಟೇ ಕೊಟ್ಟರೂ ಎತ್ತುಗಳನ್ನು ಮಾರುವುದಿಲ್ಲ, ಅವು ನನ್ನ ಮಕ್ಕಳ ಹಾಗೆ ಅಂದುಬಿಟ್ಟಿದ್ದ. ನಮ್ಮೂರಿನ ಹಿರಿಯರ ಪರಿಚಯವಿದ್ದ ಅವರು ಒಂದಷ್ಟು ವಶೀಲಿಬಾಜಿ ಮಾಡಿ ಅವನ ಮನವೊಲಿಸಲು ಯತ್ನಿಸಿದ್ದರು. ಅಂಥ ಪರಿಸ್ಥಿತಿ ಬಂದರೆ ಎತ್ತುಗಳನ್ನು ಕೊಂದು ಹಾಕುತ್ತೇನೆಯೇ ಹೊರತು ಮಾರುವುದಿಲ್ಲ ಎಂದು ಬಾಬಣ್ಣ ಖಡಾಖಂಡಿತ ಹೇಳಿಬಿಟ್ಟಿದ್ದ. ಬಾಬಣ್ಣನ ಮನೆಯಿದ್ದದ್ದು ನಮ್ಮೂರ ಕೆರೆಯ ಸಮೀಪವೇ. ಮನೆಯ ಹೊರಗೇ ಒಂದು ಪುಟ್ಟ ಕೊಟ್ಟಿಗೆ ಕಟ್ಟಿ, ಅದರಲ್ಲಿ ಎತ್ತುಗಳನ್ನು ಕಟ್ಟಿದ್ದ. ಒಂದು ರಾತ್ರಿ ಆ ಎತ್ತುಗಳನ್ನು ಕದ್ದುಕೊಂಡು ಹೋಗಲು ಕಳ್ಳರು ಯತ್ನಿಸಿದ್ದರು. ನಮ್ಮೂರಿನ ಕಳ್ಳರಾಗಿದ್ದರೆ ಅಂಥ ಪ್ರಯತ್ನಕ್ಕೇ ಕೈ ಹಾಕುವ ಮೂರ್ಖತನ ಮಾಡುತ್ತಿರಲಿಲ್ಲ. ಅವರು ಪಕ್ಕದ ವೇಣೂರಿನವರೋ ಕೊಯ್ಯೂರಿನವರೋ ಆಗಿರಬೇಕು ಎಂಬುದು ಬಾಬಣ್ಣನ ವಾದ. ಹಗಲು ಹೊತ್ತು ಒಂದೆರಡು ಸಾರಿ ಬಾಬಣ್ಣನ ಮನೆಯ ಸಮೀಪದಲ್ಲೇ ಓಡಾಡಿ, ಎತ್ತುಗಳನ್ನು ನೋಡಿಕೊಂಡು ಹೋಗಿದ್ದರು ಆ ಕಳ್ಳರು. ಎತ್ತು ಸಾಧು ಸ್ವಭಾವದ್ದು ಎಂದು ಮುಟ್ಟಿ ಮೈದಡವಿ ಖಾತ್ರಿ ಮಾಡಿಕೊಂಡೇ ಅವರು ಆ ಕೆಲಸಕ್ಕೆ ಕೈ ಹಾಕಿದ್ದು. ಅವುಗಳ ಕಣ್ಣು ನೋಡುತ್ತಿದ್ದರೆ, ಅವು ಯಾವುದನ್ನೂ ಪ್ರತಿಭಟಿಸುವಂತೆ ಕಾಣಿಸುತ್ತಲೇ ಇರಲಿಲ್ಲ. ಈಗ ನೆನಪಿಸಿಕೊಂಡರೆ ಅವು ಸಿನಿಮಾ ನಟಿ ನೂತನ್‌ಳ ಕಣ್ಣುಗಳಂತೆ ಮೃದುವೂ ಮಮಕಾರಮಯವೂ ಆಗಿದ್ದವೆಂಬುದು ಹೊಳೆಯುತ್ತಿದೆ. ಬಾಬಣ್ಣ ಎಷ್ಟು ಹೊತ್ತಿಗೆ ಮಲಗುತ್ತಾನೆ. ಯಾವಾಗ ಎಷ್ಟು ಕುಡಿಯುತ್ತಾನೆ. ರಾತ್ರಿ ಎಷ್ಟು ಸಲ ಏಳುತ್ತಾನೆ ಅನ್ನುವುದನ್ನೂ ಆ ಕಳ್ಳರು ತಿಳಿದುಕೊಂಡಿದ್ದರೆಂದು ಕಾಣುತ್ತದೆ. ಆವತ್ತು ಶನಿವಾರ, ತಿಮ್ಮಣ್ಣವ ಸಾರಾಯಿ ಅಂಗಡಿಯಲ್ಲಿ ಒಂದಷ್ಟು ಹೆಚ್ಚೇ ಏರಿಸಿದ್ದ ಬಾಬಣ್ಣ ಹಾಡುತ್ತಾ ಮನೆಕಡೆ ಸಾಗಿದ್ದ. ಅವನು ಬರುವುದನ್ನೇ ಕಾಯುತ್ತಿದ್ದಂತೆ ಎತ್ತುಗಳೂ ಎಚ್ಚರವಾಗಿದ್ದವು. ಕಳ್ಳರೂ ಬಾಬಣ್ಣನನ್ನು ಹಿಂಬಾಲಿಸಿಕೊಂಡು ಬಂದಿದ್ದರು. ಬಾಬಣ್ಣ ಎತ್ತುಗಳ ಬೆನ್ನು ಸವರಿ ಅವುಗಳ ಜೊತೆ ನಾಲ್ಕು ಮಾತಾಡಿ ಮನೆಯೊಳಗೆ ಹೋಗುವುದನ್ನೆ ಕಾಯುತ್ತಾ ಕೂತರು. ಮನೆಯೊಳಗಿನ ಮಾತೂ ಬೆಳಕೂ ಕಣ್ಮುಚ್ಚುವ ತನಕ ಕಾದು ಕೂತರು. ಸದ್ದೆಲ್ಲ ಅಡಗಿದ ನಂತರವೂ ತುಂಬ ಹೊತ್ತು ಕಾದರು. ಆಮೇಲೆ ಧೈರ್ಯ ಮಾಡಿ ಒಬ್ಬ ಹಟ್ಟಿಯ ಬಳಿ ಹೋಗಿ ಒಂದು ಎತ್ತಿನ ಕಣ್ಣಿ ಬಿಚ್ಚಿದ. ಮತ್ತೊಬ್ಬ ಎತ್ತುಗಳಿಗೆ ಪ್ರಿಯವಾದ ಕಡ್ಲೆಕಾಯಿ ಗಿಡವನ್ನು ಎತ್ತಿನ ಬಾಯಿಗೆ ಕೊಡುತ್ತಾ ಬಂದ. ಇಬ್ಬರೂ ಸೇರಿ ಒಂದು ಎತ್ತನ್ನು ಹೇಗೋ ಮಾಡಿ ಗೇಟಿನ ಹೊರಗೆ ಎಳೆದುತಂದರು. ಗೇಟಿನ ಹೊರಗೆ ಬರುತ್ತಿದ್ದಂತೆ ಎತ್ತು ಹಗ್ಗವನ್ನು ಸಿಕ್ಕಾಪಟ್ಟೆ ಎಳೆದಾಡತೊಡಗಿತು. ಇಬ್ಬರೂ ಸೇರಿ ಮಿಣಿಯನ್ನು ಎತ್ತಿನ ಮೂಗುದಾರಕ್ಕೆ ಹಾಕಲು ಹವಣಿಸಿದರು. ಆಗಲೇ ಅವರಿಗೆ ಗೊತ್ತಾದದ್ದು, ಬಾಬಣ್ಣ ಎತ್ತುಗಳಿಗೆ ಮೂಗುದಾರ ಹಾಕಿಯೇ ಇರಲಿಲ್ಲ ಅನ್ನುವುದು. ಮೂಗುದಾರ ಹಾಕಿದ ಎತ್ತುಗಳನ್ನು ಹೇಗಾದರೂ ಹಿಡಿತಕ್ಕೆ ತರಬಹುದು. ಆದರೆ ಮೂಗುದಾರ ಇಲ್ಲದೇ ಹೋದರೆ ಅವುಗಳನ್ನು ಹಿಡಿದಿಡುವುದು ಕಷ್ಟವೇ. ಆ ಕಳ್ಳರೂ ಕಟ್ಟುಮಸ್ತು ಆಸಾಮಿಗಳೇ. ಒಬ್ಬ ಎತ್ತಿನ ಕೊಂಬು ಹಿಡಕೊಳ್ಳಲು ಯತ್ನಿಸಿದ. ಮತ್ತೊಬ್ಬ ಆಗಲೇ ಕನಸಿನಲ್ಲಿ ಎತ್ತು ಮಾರಿದ್ದರಿಂದ ಬರಬಹುದಾಗಿತ್ತು ದುಡ್ಡು ಎಣಿಸುತ್ತಿದ್ದನೆಂದು ಕಾಣುತ್ತದೆ. ಯಾವ ಕಾರಣಕ್ಕೂ ಎತ್ತು ಕೈ ತಪ್ಪಿಹೋಗಬಾರದು ಎಂದು ಅವನು ಎತ್ತಿನ ಕಣ್ಣಿಹಗ್ಗವನ್ನು ತನ್ನ ಸೊಂಟಕ್ಕೆ ಕಟ್ಟಿಕೊಂಡು ಮತ್ತೊಂದು ಕೈಯನ್ನು ಎತ್ತನ್ನು ಎಳೆಯತೊಡಗಿದ. ಮತ್ತೊಬ್ಬ ಬಾರುಕೋಲಿನಿಂದ ಎತ್ತಿನ ಬೆನ್ನಿಗೆ ಬಾರಿಸಿ ಅದನ್ನು ದಾರಿಗೆ ತರಲು ನೋಡಿದ. ಅವರಿಬ್ಬರೂ ಸುಮಾರು ನಾಲ್ಕು ಹೆಜ್ಜೆ ಹಾಕಿರಬಹುದು. ಹಿಂದೆ ಬರುತ್ತಿದ್ದವನಿಗೆ ಅದೇನಾಯಿತು ಅನ್ನುವುದೇ ತಿಳಿಯಲಿಲ್ಲ. ಇದ್ದಕ್ಕಿದ್ದ ಹಾಗೆ ತನ್ನ ಹಿಂದೇನೋ ಬಿದ್ದ ಸದ್ದು ಕೇಳಿಸಿತು ಅಷ್ಟೇ. ಬಾಬಣ್ಣ ಅಟ್ಟಿಸಿಕೊಂಡು ಬರುತ್ತಿದ್ದಾನೆ ಎಂದು ಹೆದರಿ ತಿರುಗಿ ನೋಡಿದರೆ ಅಲ್ಲಿ ತನ್ನ ಜೊತೆಗಾರ ಕಳ್ಳ ಕತ್ತು ಮುರಿದುಕೊಂಡು ಬಿದಿದ್ದ. ಸೊಂಟಕ್ಕೆ ಹಗ್ಗ ಕಟ್ಟಿಕೊಂಡ ಅವನನ್ನು ಎತ್ತು ಒಮ್ಮೆ ತಿರುವಿ ಎಸೆದ ರಭಸಕ್ಕೆ ಅವನು ಅಕಾಶಕ್ಕೆ ಹಾರಿ ಎತ್ತಿನ ಹಿಂದೆ ಹೋಗಿ ಬಿದ್ದಿದ್ದ. ಸಿಟ್ಟಿನಿಂದ ಹಿಂದಕ್ಕೆ ತಿರುಗಿದ ಎತ್ತು ಮತ್ತೊಬ್ಬನನ್ನು ಅಟ್ಟಿಸಿಕೊಂಡು ಹೋಗಿ ಬಾಬಣ್ಣನ ಮನೆಯ ಬಾಗಿಲ ಮುಂದೆ ನಿಲ್ಲಿಸಿತು. ಬಾಬಣ್ಣ ಬೆಳಗಾಗೆದ್ದು ಬಾಗಿಲು ತೆರೆದರೆ ರಾತ್ರಿಯಿಡೀ ಬಾಗಿಲ ಮುಂದೆ ನಡುಗಿಕೊಂಡು ನಿಂತಿದ್ದ, ನಿಂತಲ್ಲೇ ಒಂದು ಎರಡೂ ಮಾಡಿಕೊಂಡಿದ್ದ ಕಳ್ಳ ದೊಪ್ಪನೆ ಕುಸಿದು ಬಿದ್ದ. ಬಾಬಣ್ಣನ ಕೈಗೆ ಅವನನ್ನು ಒಪ್ಪಿಸಿದ ಎತ್ತು ಆಮೇಲೆ ತನ್ನ ಪಾಡಿಗೆ ಹೋಗಿ ಹಟ್ಟಿಯಲ್ಲಿ ನಿಂತುಕೊಂಡಿತು. ಬಾಬಣ್ಣ ಆ ಕಳ್ಳನನ್ನು ಕಟ್ಟಿಹಾಕಿ ಹೊರಗೆ ಬಂದು ನೋಡಿದರೆ ಸೊಂಟಕ್ಕೆ ಕಟ್ಟಿಕೊಂಡ ಹಗ್ಗದ ಸಮೇತ ಕೊರಳು ಮುರಕೊಂಡು ಬಿದ್ದಿದ್ದ ಕಳ್ಳ ನರಳಾಡುತ್ತಾ ಬಿದ್ದಿದ್ದ. ಎತ್ತು ಕತ್ತು ಕೊಡವಿದ ರಭಸಕ್ಕೆ, ಅದರ ಹೊರಜೆಗೆ ಕಟ್ಟಿದ ಹಗ್ಗ ತುಂಡಾಗಿ ಹೋಗಿತ್ತು.  ]]>

‍ಲೇಖಕರು G

23 January, 2012

2 Comments

  1. santhosh

    jogi at his best…super…:-)

  2. Sharadhi

    Awesome

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading