ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಹೊಸ ಕಾದಂಬರಿ ಇಲ್ಲಿದೆ..

ನಾನು ಬರೆಯುತ್ತಿರುವ ಕಾದಂಬರಿಯ ಒಂದು ಅಧ್ಯಾಯ

ಅವರು ಗಂಭೀರವಾಗಿ ಚಕ್ಕಳ ಮಕ್ಕಳ ಹಾಕಿಕೊಂಡು ಕುರ್ಚಿಯಲ್ಲಿ ಕೂತರು. ಆ ಕುರ್ಚಿಗೆ ಜಿಂಕೆ ಚರ್ಮವನ್ನೋ ಹುಲಿ ಚರ್ಮವನ್ನೋ ಹಾಸಿದ್ದರು. ಅದು ಹಳೆಯದಾಗಿ ಯಾವ ಪ್ರಾಣಿಯ ಚರ್ಮ ಅನ್ನುವುದೂ ಗೊತ್ತಾಗುತ್ತಿರಲಿಲ್ಲ.

ಈಗ ನನ್ನ ಕಣ್ಣನ್ನೇ ನೋಡುತ್ತಿರಿ. ಮನುಷ್ಯನ ಮನಸ್ಸಿಗೆ ಎಂಥ ಶಕ್ತಿಯಿದೆ ಎಂದು ತೋರಿಸುತ್ತೇನೆ. ಇದು ಪವಾಡ ಅಲ್ಲ. ಕೇವಲ ಇಚ್ಛಾಶಕ್ತಿ. ವಿಲ್ ಪವರ್ ಅಂತ ವಿಜ್ಞಾನ ಏನನ್ನು ಕರೆಯುತ್ತದೆಯೋ ಅದು. ನಿಮಗೆ ತುಂಬ ಸುಸ್ತಾಗಿರುತ್ತೆ. ಒಂದು ಹೆಜ್ಜೆಯಿಡುವುದಕ್ಕೂ ಶಕ್ತಿ ಇರುವುದಿಲ್ಲ. ಹಾಗೇ ಮಲಗಿರುತ್ತೀರಿ. ನಿಮ್ಮ ಮುಂದೆ ಹಾವೊಂದು ಕಾಣಿಸಿಕೊಂಡರೆ ಎದ್ದು ಓಡುವುದಕ್ಕೆ ಶುರು ಮಾಡುತ್ತೀರಿ. ಆ ಶಕ್ತಿ ಎಲ್ಲಿತ್ತು ಹೇಳಿ. ನಿಮ್ಮೊಳಗೇ ಇದ್ದ ಶಕ್ತಿ ಅದು. ಅದು ಯಾಕೆ ನೀವು ಸಹಜವಾಗಿದ್ದಾಗ ಬಿಡುಗಡೆ ಆಗಲಿಲ್ಲ. ಅದನ್ನು ಬಿಡುಗಡೆ ಮಾಡಿಕೊಳ್ಳುವ ಮಾರ್ಗ ನಿಮಗೆ ಗೊತ್ತಿಲ್ಲ. ಜೀವನ್ಮರಣದ ಪ್ರಶ್ನೆ ಬಂದಾಗ ಅದು ತನ್ನಿಂತಾನೇ, ಅಪ್ರಯತ್ನಕವಾಗಿ ಬಿಡುಗಡೆ ಆಯ್ತು. ಅದನ್ನೇ ನಾನು ದೇಹಕ್ಕಿರುವ ಮನಸ್ಸಿಗಿರುವ ಶಕ್ತಿ ಎಂದು ಕರೆಯುವುದು.

ದೇಹಕ್ಕೆ ಅನ್ನವೂ ಬೇಡ, ಊಟವೂ ಬೇಡ. ದೇಹವೊಂದು ಆಯುಧ ಮಾತ್ರ. ಎಲ್ಲವನ್ನೂ ನಡೆಸುವುದು ಮನಸ್ಸು. ಮನಸ್ಸಿನ ಶಕ್ತಿಯ ಮುಂದೆ ಯಾವ ಶಕ್ತಿಯೂ ಇಲ್ಲ. ಅಂಥ ಶಕ್ತಿಯನ್ನು ಎಲ್ಲಾ ಪ್ರಾಣಿಗಳಿಗೂ ಕೊಡಲಾಗಿದೆ. ಆದರೆ ನಾವು ಕಲಿಯುತ್ತಾ ಕಲಿಯುತ್ತಾ ಅದನ್ನು ಮರೆಯುತ್ತಿದ್ದೇವೆ.ವಿದ್ಯೆ ಎನ್ನುವುದು ಮಾನವನ ಶತ್ರು. ನೀವು ಅವಿದ್ಯೆಯನ್ನು ಮೈಗೂಡಿಸಿಕೊಳ್ಳಬೇಕು. ಈ ಒತ್ತಡದಿಂದ, ಈ ಸಂಕಟದಿಂದ ಪಾರಾಗಲು ಇರುವ ಏಕೈಕ ಮಾರ್ಗ ಅವಿದ್ಯೆ. ಅವಿದ್ಯಾವಂತ, ಅನಕ್ಷರಸ್ತ ಎಂದೆಲ್ಲ ನಾವು ಹೀಯಾಳಿಸುತ್ತೇವಲ್ಲ. ಅವನಿಗೆ ಎಂಥಾ ಶಕ್ತಿ ಇರುತ್ತೆ ಎಂಬುದೂ ನಿಮಗೆ ಗೊತ್ತಿಲ್ಲ. ನಮ್ಮೂರಲ್ಲೊಬ್ಬ ಕುಡುಕ ಇದ್ದ. ಕರುಳು ತುಂಬುವಷ್ಟು ಕುಡೀತಿದ್ದ. ಎದ್ದು ನಿಂತರೆ ವಾಲುತ್ತಿದ್ದ. ಆದರೆ ಹಾಗೆ ವಾಲಿದರೂ ಅವನು ಬೀಳುತ್ತಿರಲಿಲ್ಲ. ನೀವು ಮಂಚದ ಮೇಲೆ ಮಲಗುತ್ತೀರಲ್ಲ. ಯಾವತ್ತಾದರೂ ಕೆಳಗೆ ಬಿದ್ದಿದ್ದೀರೇನು. ಯಾಕೆ ಬಿದ್ದಿಲ್ಲ. ನಿದ್ದೆಯಲ್ಲಿ ನಮಗೆ ದೇಹದ ಪರಿವೆಯೇ ಇರುವುದಿಲ್ಲ ಅಂತಾರಲ್ಲ. ಆದರೂ ಮಂಚದಿಂದ ನಾವೇಕೆ ಕೆಳಗೆ ಬೀಳುವುದಿಲ್ಲ ಹೇಳಿ. ಅದು ಮನಸ್ಸಿನ ಶಕ್ತಿ. ದೇಹಕ್ಕೆ ಮಾತ್ರ ದಣಿವು. ಹಸಿವು, ನಿದ್ದೆ. ಮನಸ್ಸಿಗೆ ಅದೇನೂ ಇಲ್ಲ. ಅದು ಅನಾದಿ ಮತ್ತು ಅನಂತ.

ಹೀಗೆ ಎಡೆಬಿಡದೇ ಅವರು ಮಾತಾಡಿದರು. ಅವರ ಮಾತು ಬೋರು ಹೊಡೆಸುತ್ತಿರಲಿಲ್ಲ. ಆದರೆ ಅದರಿಂದ ಏನು ಉಪಯೋಗ ಎಂದು ನನಗೆ ತಕ್ಷಣಕ್ಕೆ ಹೊಳೆಯಲಿಲ್ಲ. ವಿದ್ಯೆ ಬೇಡ ಅನ್ನುತ್ತಾರೆ. ಕೆಲಸ ಮಾಡಬೇಕು ಅನ್ನುತ್ತಾರೆ. ದುಡಿಯುವುದು ವ್ಯರ್ಥ ಅನ್ನುತ್ತಾರೆ. ಅಂದ ಮೇಲೆ ಆ ಶಕ್ತಿಯನ್ನು ಇಟ್ಟುಕೊಂಡು ಏನು ಮಾಡಬೇಕು?

ನೀವು ನಿಸ್ಸಂಗತ್ವವನ್ನು ಅಕಾರ್ಯವನ್ನೂ ಅಕರ್ಮವನ್ನೂ ಬೋಧಿಸುತ್ತಿದ್ದೀರಿ. ನಿಮ್ಮ ಬೋಧನೆಯನ್ನು ಪಾಲಿಸುವವನು ಈ ಮನೋಶಕ್ತಿಯನ್ನೋ ಮನೋಬಲವನ್ನೋ ಇಟ್ಟುಕೊಂಡು ಏನು ಸಾಧಿಸಬೇಕು. ಅದರಿಂದ ಯಾವ ಪ್ರಯೋಜನವೂ ಇಲ್ಲವಲ್ಲ. ನಮಗೆ ಎನರ್ಜಿ ಬೇಕಾಗುವುದು ದುಡಿಯುವುದಕ್ಕೆ ತಾನೇ ಎಂದು ನಾನು ಧೈರ್ಯ ಮಾಡಿ ಕೇಳಿದೆ. ಪಕ್ಕದಲ್ಲಿ ಕೂತಿದ್ದವರು ನನ್ನನ್ನು ವಿಚಿತ್ರವಾಗಿ ನೋಡಿದರು. ಇವನು ಅನಗತ್ಯ ಪ್ರಶ್ನೆಗಳನ್ನು ಹಾಕಿ ಅವರನ್ನು ಲೌಕಿಕಕ್ಕೆ ಎಳೆಯುವುದಕ್ಕೆ ನೋಡುತ್ತಿದ್ದಾನೆ ಎಂಬ ಅಸಡ್ಡೆ ಅವರ ಕಣ್ಣುಗಳಲ್ಲಿತ್ತು.

`ನಾನು ಬೋಧನೆ ಮಾಡುತ್ತಿಲ್ಲ’ ಅವರೆಂದರು. ಬೋಧನೆ ಮಾಡುವುದು ನನ್ನ ಉದ್ದೇಶವೂ ಅಲ್ಲ. ನಾನು ಸಾಧಕ. ಸಾಧನೆ ಮಾತ್ರ ನನಗೆ ಗೊತ್ತಿರೋದು. ಸಾಧನೆ ಅಂದರೇನು ಎಂದು ನೀವು ಕೇಳಬಹುದು. ಅದಕ್ಕೆ ಥಟ್ಟನೆ ಉತ್ತರಿಸುವುದೂ ಕಷ್ಟವಾಗುತ್ತದೆ. ಒಬ್ಬೊಬ್ಬರ ಸಾಧನೆ ಒಂದೊಂದು ದಿಕ್ಕಿನಲ್ಲಿ ಸಾಗುತ್ತದೆ. ಕೆಲವರದು ಲೌಕಿಕವಾದ ಸಾಧನೆ. ಅದು ನೀವು ನೋಡುವ ದೃಷ್ಟಿಯನ್ನು ಅವಲಂಬಿಸಿದೆ.

ಮತ್ತೆ ಅವರ ವಾದಸರಣಿ ಮುಂದುವರಿಯಿತು. ಮನೋಶಕ್ತಿಯಿಂದ ಅಂಥ ಪ್ರಯೋಜನವೇನೂ ಇಲ್ಲ. ಈ ದೇಹಕ್ಕೆ ಜೀವಿಸುವುದನ್ನು ಬಿಟ್ಟರೆ ಏನೂ ಬೇಕಾಗಿಲ್ಲ. ದೇವರು, ಸಾಧನೆ, ಪಾರಮಾರ್ಥಿಕತೆ, ಧರ್ಮ, ಜಾತಿ ಯಾವುದಕ್ಕೂ ಅರ್ಥ ಇಲ್ಲ. ತಪಸ್ಸು ಮಾಡುತ್ತೇನೆ ಅಂತ ಹೊರಡುವುದೂ ಮೂರ್ಖತನ. ತಪಸ್ಸಿನಿಂದ ಈ ದೇಹವನ್ನು ನೀಗಿಕೊಂಡು ಮತ್ತೆ ಹುಟ್ಟದಂಥ ವರವನ್ನು ಪಡೆದುಕೊಳ್ಳುತ್ತೇನೆ ಎಂದು ಹೊರಡುವ ಋಷಿಗಳಿಗೆ ಒಂದು ಅದ್ಭುತವಾದ ಶಕ್ತಿಯಿತ್ತು ಅಷ್ಟೇ. ಆ ಶಕ್ತಿ ಏನಪ್ಪಾ ಅಂದರೆ ಅವರು ಸತ್ಯ ಹೇಳಬಲ್ಲವರಾಗಿದ್ದರು. ಈ ಜಗತ್ತಿನಿಂದ ಏನನ್ನೂ ಬಯಸದೇ ಇದ್ದವನು ಸತ್ಯ ಹೇಳಬಲ್ಲ. ಋಷಿಗಳಿದ್ದರು ಅಷ್ಟೇ. ಋಷಿಪರಂಪರೆ ಅನ್ನುವುದು ಬೊಗಳೆ. ಪರಂಪರೆಯ ಮೂಲಕ ಮುಂದುವರಿದುಕೊಂಡು ಬರುವಂಥದ್ದೆಲ್ಲ ನಶಿಸುತ್ತಾ ಬರುತ್ತದೆ. ಅದನ್ನು ಜೀವನೋಪಾಯಕ್ಕಾಗಿ ಮಾಡುತ್ತಾ ಬರುತ್ತಾರೆ. ಸತ್ಯನಾರಾಯಣ ಪೂಜೆ ಮಾಡಿಸುವುದು ಒಂದು ವ್ಯಾವಹಾರಿಕ ದಂಧೆ. ಸತ್ಯನಾರಾಯಣನಿಗೂ ಮಾಡಿಸಿದವನಿಗೂ ಅದರಿಂದ ಪ್ರಯೋಜನ ಇಲ್ಲ. ಆದರೆ ಅದೊಂದು ವೃತ್ತಿ. ಅದನ್ನು ಮಾಡಿಸುವವನು ತನ್ನ ಜೀವವನ್ನು ದೇಹವನ್ನು ಪೊರೆಯುವುದಕ್ಕೆ ನೆರವಾಗುತ್ತದೆ.

ಹೀಗೆ ಮಾತಾಡುವ ಅವರು ನಾಸ್ತಿಕರೋ ಆಸ್ತಿಕರೋ ಅರ್ಥವಾಗಲಿಲ್ಲ. ಮಾತು ಕುತೂಹಲ ಹುಟ್ಟಿಸುತ್ತಿತ್ತು. ಆ ಕುತೂಹಲ ಕೂಡ ಕ್ಷಣಮಾತ್ರದ್ದು ಅನ್ನಿಸುತ್ತಿತ್ತು. ಅದರಿಂದ ನನಗೆ ಯಾವ ಪ್ರಯೋಜನವೂ ಇಲ್ಲ ಎಂದು ನನ್ನನ್ನು ನಾನೇ ನಂಬಿಸಿಕೊಳ್ಳಲು ಯತ್ನಿಸತೊಡಗಿದೆ.

ನನ್ನ ಮಾತುಗಳನ್ನು ಕೇಳುವುದರಿಂದ ನಿಮಗೆ ಯಾವ ಪ್ರಯೋಜನವೂ ಇಲ್ಲ ಎಂದು ಅವರೇ ಅಂದರು. ನನ್ನ ಮನಸ್ಸಿನಲ್ಲಿ ಇದ್ದಿದ್ದನ್ನು ಅರ್ಥ ಮಾಡಿಕೊಂಡಂತೆ ಮಾತಾಡುವುದನ್ನು ಕೇಳಿ ಆಶ್ಚರ್ಯವಾಯಿತು. ನನ್ನಂಥ ಅನೇಕರನ್ನು ಅವರು ಎದುರಿಸಿರಬಹುದು. ಎಷ್ಟೋ ಮಂದಿ ಅವರನ್ನು ಚಿತ್ರ ವಿಚಿತ್ರ ಪ್ರಶ್ನೆಗಳನ್ನು ಕೇಳಿರಬಹುದು. ಹೀಗಾಗಿ ಯಾವ ಪ್ರಶ್ನೆಯನ್ನಾಗಲೀ ಉತ್ತರಿಸುವ ಕಲೆ ಅವರಿಗೆ ಕರಗತವಾಗಿರಬಹುದು ಅಂದುಕೊಂಡು ಮುಂದೇನು ಹೇಳುತ್ತಾರೋ ಎಂದು ನಾನು ಕುತೂಹಲದಿಂದ ಕಾದೆ.

ಒಂದು ಸಣ್ಣ ಲೆಕ್ಕಾಚಾರ ಕೇಳಿ. ಇದೆಲ್ಲ ನಿಮಗೆ ಗೊತ್ತಿರುವಂಥದ್ದೇ. ಆದರೂ ಕೇಳಿಸಿಕೊಳ್ಳಿ. ಈ ಜಗತ್ತಿನಲ್ಲಿ ಕೋಟ್ಯಂತರ ಮಂದಿ ಇದ್ದಾರೆ. ನಿಮ್ಮ ಪಕ್ಕದ ಮನೆಯಲ್ಲೂ ಒಬ್ಬನಿದ್ದಾನೆ. ಪಕ್ಕದ ಬೀದಿಯಲ್ಲೊಂದಿಷ್ಟು ಮಂದಿ ಇದ್ದಾರೆ. ಪಕ್ಕದ ಊರಲ್ಲಿ , ಪಕ್ಕದ ರಾಜ್ಯದಲ್ಲಿ, ಪಕ್ಕದ ದೇಶದಲ್ಲಿ, ದೂರದ ಖಂಡದಲ್ಲಿ ಜನರಿದ್ದಾರೆ. ನಿಮ್ಮನೆಯ ಯಾರಾದರೂ ಸತ್ತರೆ ನಿಮಗೆ ಅತೀವ ದುಃಖವಾಗುತ್ತದೆ. ನಿಮ್ಮ ಬೀದಿಯವನು ತೀರಿಕೊಂಡರೆ ಬೇಸರ ಆಗುತ್ತದೆ. ಪಕ್ಕದ ಬೀದಿಯವನು ತೀರಿಕೊಂಡರೆ ಆಶ್ಚರ್ಯವಾಗುತ್ತದೆ. ಪಕ್ಕದ ಊರಿನವನು ತೀರಿಕೊಂಡರೆ ಸುದ್ದಿಯಾಗುತ್ತದೆ. ಪಕ್ಕದ ರಾಜ್ಯದವನು ತೀರಿಕೊಂಡರೆ ಗೊತ್ತೂ ಆಗುವುದಿಲ್ಲ. ಪಕ್ಕದ ದೇಶದಲ್ಲಿ ಸತ್ತವನು ಬದುಕಿದ್ದ ಅನ್ನುವುದೇ ನಿಮಗೆ ಅರಿವಿಲ್ಲ. ಬದುಕಿರುವುದು ಗೊತ್ತಿಲ್ಲದೇ ಇರುವ ಸ್ಥಿತಿಗೂ ಸತ್ತು ಹೋಗುವುದಕ್ಕೂ ಅಂಥ ವ್ಯತ್ಯಾಸ ಇಲ್ಲ. ನನ್ನ ಮಿತ್ರನೊಬ್ಬ ಜರ್ಮನಿಯಲ್ಲಿದ್ದಾನೆ. ಬಾಬು ಅಂತ ಅವನ ಹೆಸರು. ನಮ್ಮೂರಿನವನೇ. ಅವನು ಸತ್ತು ಹೋದರೆ ನಿಮಗೆ ಗೊತ್ತೂ ಆಗುವುದಿಲ್ಲ. ಆದರೆ ನನಗೆ ಗೊತ್ತಾಗುತ್ತದೆ. ಸಾವು ಕೂಡ ಸಾಮೀಪ್ಯದಿಂದಾಗಿ ನಮಗೆ ಮುಖ್ಯವೋ ಅಮುಖ್ಯವೋ ಆಗುತ್ತದೆ ಅಷ್ಚೇ. ಸಾಮೀಪ್ಯವೊಂದೇ ನಿಮಗೆ ಮುಖ್ಯ ಅನ್ನುವುದಾದರೆ ನಿಮ್ಮ ವಿಶ್ವಾತ್ಮಕ ದೃಷ್ಟಿಗೆ ಅರ್ಥವೇನು…

ನನ್ನ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿದೆ ಅನ್ನಿಸಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅವೆಲ್ಲ ನಾವು ಕೇಳಿಕೊಳ್ಳಬಹುದಾದ ಪ್ರಶ್ನೆಗಳಂತೆ ನನಗೆ ಭಾಸವಾಗಲೇ ಇಲ್ಲ. ನಾನೊಂದು ಪ್ರಶ್ನೆ ಕೇಳಲೇ ಎಂದೆ. ಪರಿಹಾರ ಬಯಸಿ ಪ್ರಶ್ನೆ ಕೇಳುವುದು ಬೇರೆ. ಕುತೂಹಲಕ್ಕಾಗಿ ಪ್ರಶ್ನೆ ಕೇಳುವುದು ಬೇರೆ. ಇವನಿಗೆಷ್ಟು ಗೊತ್ತಿದೆ ಎಂದು ತಿಳಿದುಕೊಳ್ಳವುದು ಬೇರೆ. ಆತ್ಮಶಾಂತಿಗಾಗಿ ಪ್ರಶ್ನೆ ಕೇಳುವುದು ಬೇರೆ. ಕೆಲವೊಮ್ಮೆ ಉತ್ತರ ಸಿಕ್ಕಿದ ನಂತರ ಮನಸ್ಸು ಮುರುಟಿಹೋಗುತ್ತದೆ. ಮನೋಬಲ ಉಡುಗಿ ಹೋಗುತ್ತದೆ. ಕೇಳು ಅಂದರು.

ಈ ಮಹಾನಗರಗಳು ಯಾಕೆ ಸೃಷ್ಟಿಯಾಗುತ್ತವೆ. ಅಧಿಕಾರದ ಕೇಂದ್ರ ಯಾವುದು. ಮಾನವೀಯತೆ, ಒಗಟ್ಟು, ಸಹಜೀವನ, ನಾಗರಿಕತೆ ಇವುಗಳ ಅರ್ಥವೇನು. ಇವನ್ನೆಲ್ಲ ಮೀರುವುದಕ್ಕೆ ಆಧ್ಯಾತ್ಮ ನೆರವಾಗುತ್ತದಾ ಅಥವಾ ಕಲೆಯೊಂದೇ ಇದಕ್ಕೆ ಪರಿಹಾರವಾ….?

ನಾವೆಲ್ಲ ಕೋಡಂಗಿಗಳು. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ- ಇವೆಲ್ಲವೂ ರಂಜನೆಯೇ. ನಮ್ಮನ್ನು ನಾಳೆಗಳಿಂದ ಮತ್ತು ನಿನ್ನೆಯಿಂದ ಯಾವುದು ಬಿಡುಗಡೆ ಮಾಡುತ್ತದೋ ಅದೇ ನಮಗೆ ಸಂತೋಷ ಕೊಡುತ್ತದೆ. ಕೈ ತುಂಬ ದುಡ್ಡು ಬಂದಾಗ, ಬಂಗಾರ ಸಿಕ್ಕಿದಾಗ ನಾವು ಭೂತಭವಿಷ್ಯಗಳನ್ನು ಮರೆಯುತ್ತೇವೆ. ಅವಳೊಂದಿಗಿನ ಉತ್ಕಟ ಸ್ಥಿತಿ ನಿನ್ನೆ ನಾಳೆಗಳನ್ನು ಮರೆಸುತ್ತದೆ. ಮೋಕ್ಷ ಹುಟ್ಟೂ ಸಾವೂ ಇರದ ಸ್ಥಿತಿಯೊಂದಕ್ಕೆ ನಿನ್ನನ್ನು ಒಯ್ಯುತ್ತದೆ. ಧರ್ಮ ನಿನ್ನೆಯೂ ಸುಳ್ಳು, ನಾಳೆಯೂ ಸುಳ್ಳು ಎನ್ನುತ್ತದೆ.

ಹಾಗೆ ನಿನ್ನೆ ನಾಳೆಗಳನ್ನು ಮರೆಯುವ ಕ್ಷಣ ನಿರಂತರವಾಗಿರಲಿ ಎಂದು ನಾವು ಆಸೆಪಡುತ್ತೇವೆ. ಅದೇ ನಮ್ಮ ಸಂಕಷ್ಟ ಎಂದು ಅವರು ಸುಮ್ಮನಾದರು. ನಮ್ಮನ್ನೊಮ್ಮೆ ನೋಡಿ ನಕ್ಕರು. ಇಲ್ನೋಡಿ, ಈಗೊಂದು ತಮಾಷೆ ತೋರಿಸುತ್ತೇನೆ. ಆ ಬಾಗಿಲು ತೆರೆಯಿರಿ ಅಂದರು. ನಾನು ಎದ್ದು ಹೋಗಿ ಬಾಗಿಲು ತೆರೆದೆ. ಅವರು ನೆಟ್ಟನೋಟದಿಂದ ಒಂದು ಕ್ಷಣ ಬಾಗಿಲನ್ನೇ ನೋಡಿದರು.

ಅದು ಯಾರೋ ಮುಚ್ಚಿದಂತೆ ನಿಧಾನವಾಗಿ ಮುಚ್ಚಿಕೊಂಡಿತು. ಇದು ಮನೋಬಲ ಎಂದು ಅವರು ಯಾವ ಅಹಂಕಾರವೂ ಇಲ್ಲದೇ ನಮ್ಮನ್ನು ನೋಡಿದರು.

ಅವರು ಬಾಗಿಲನ್ನೇ ದಿಟ್ಟಿಸಿ ನೋಡಿದರು. ಬಾಗಿಲು ನಿಧಾನಕ್ಕೆ ಮುಚ್ಚಿಕೊಂಡಿತು

 

 

‍ಲೇಖಕರು G

19 March, 2011

4 Comments

  1. ವಿಜಯ.ನರಗುಂದ

    ಜೋಗಿಯವರು ಬರೆದ ಬಹಳಷ್ಟು ಕತೆಗಳನ್ನು ಗಮನಿಸಿದ್ದೇನೆ. ಆರಂಭ ಸರಾಗವೆಂಬಂತೆ ತೆರೆದುಕೊಳ್ಳುತ್ತದೆ.ಆದರೆ ಅಂತ್ಯದಲ್ಲಿ ಅವರು ಅದ್ಯಾವ ತುದಿಯಲ್ಲಿ ನಿಲ್ಲಿಸಿದ್ದಾರೆ ಎಂದು ಊಹಿಸುವುದೆ ಕಷ್ಟವಾಗುತ್ತದೆ.ನನಗೆ ಇಲ್ಲಿಯವರೆಗು ಅವರು ಬರೆದ ಅಲ್ಲ ಕತೆಗಳಲ್ಲಿ ಅಂತ್ಯವಿದೆನಾ ಎಮದು ಕೇಳಿಕೊಳ್ಳದೆ ವಿಧಿಯಿಲ್ಲ. ಮುಗಿದಿರುತ್ತದೆ.ಆದರೆ ಮುಗಿದಂತೆ ಅನ್ನಿಸುವದಿಲ್ಲ.ನಿಮ್ಮ ಬರವಣಿಗೆಯ ಶೈಲಿ ಅಷ್ಟು ಸರಳವಾಗಿ ಕೈಗೆ ಎಟಕಲಾರದ್ದು.

  2. ms manjunatha

    ಒಂದು ಉತ್ಕಟ ಓದಿಗೆ ಅಣಿಯಾಗಬೇಕಿದೆ.

  3. srinivas deshpande

    Dear jogi,

    Nivu ondu adbhut Kathasaritsagara. Abb! adehtu kathe , kadambarigalive nimma joligeyalli. Sareekaru sanktapaduvstu!-srinivas deshpande

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading