ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಹೊಸ ಕಾದಂಬರಿ : ಅವಧಿ Exclusive!

ಜೋಗಿ ಅವರ ಹೊಸ ಕಾದಂಬರಿಯ ಝಲಕ್ ಅವಧಿ ಓದುಗರಿಗಾಗಿ

ರಂಗನಾಥನ ಹೆಣದ ಮುಂದೆ ದೈವಚಿಂತನಂ

ರಂಗನಾಥನ ಈಡೇರದ ಆಸೆಗಳಂತೆ ಕಾಣುತ್ತಿದ್ದ ಅರ್ಧ ಭರ್ತಿ ಮಾಡಿದ ಪದಬಂಧ, ಮೇಜಿನ ಮೇಲಿಟ್ಟಿದ್ದ ರೇಡಿಯೋದಿಂದ ಸಣ್ಣಗೆ ಹೊಮ್ಮುತ್ತಿದ್ದ ಹಾಡು, ಅರ್ಧ ಓದಿ ಬೋರಲಿಟ್ಟಿದ್ದ ಡೈರಿ, ಅರ್ಧ ಸುಟ್ಟಿದ್ದ ಸಿಗರೇಟು, ಮನೆಯೊಳಗೆ ಸಿಗರೇಟು ಹೊಗೆಯ ಕಮಟು ವಾಸನೆ ಇತ್ತು. ರಾಜಶೇಖರ ಸುತ್ತಲೂ ಮತ್ತೊಮ್ಮೆ ಕಣ್ಣಾಡಿಸಿದ. ಗೋಡೆಯಲ್ಲಿದ್ದ ಕ್ಯಾಲೆಂಡರು ಹಳೇ ತಿಂಗಳನ್ನು ತೋರಿಸುತ್ತಿತ್ತು. ಪಕ್ಕದಲ್ಲೇ ಇದ್ದ ನೋಟ್ ಬುಕ್ಕಿನ ಹಾಳೆ ತೆರೆದಿತ್ತು. ಅದರಲ್ಲಿ ರಂಗನಾಥ ಏನೋ ಗೀಚಿದ್ದ. ರಾಜಶೇಖರ ಬಾಗಿ ಅದನ್ನು ಓದಲು ಯತ್ನಿಸಿದ. ಕೊನೆಯ ಕ್ಷಣದಲ್ಲಿ ಗೀಚಿದ ಆ ಅಕ್ಷರಗಳನ್ನು ಓದಲು ಸಾಧ್ಯವಾಗದೇ, ರಾಜಶೇಖರ ಅದನ್ನು ಜೋಬಿಗಿಳಿಸಿಕೊಂಡ.

ಆಗಲೇ ಫೋಟೋಗ್ರಾಫರ್ ಕೆಲಸ ಶುರು ಮಾಡಿದ್ದ. ಪೊಲೀಸರು ಮಾರ್ಕಿಂಗ್ ಆರಂಭಿಸಿದ್ದರು. ರಂಗನಾಥನ ಹೆಣ ಬಿದ್ದ ಜಾಗವನ್ನು ಚಾಕ್‌ಪೀಸಿನಲ್ಲಿ ಗುರುತು ಮಾಡಿ, ಅಲ್ಲಿದ್ದ ವಸ್ತುಗಳನ್ನೆಲ್ಲ ಜೋಪಾನವಾಗಿ ಎತ್ತಿಡಲು ರಾಜಶೇಖರನ ಅಪ್ಪಣೆಗಾಗಿ ಕಾಯುತ್ತಿದ್ದರು. ಅವರ ಪಾಲಿಗೆ ಅದು ಮತ್ತೊಂದು ಒಂಟಿ ಮುದುಕನ ಕೊಲೆ ಅಥವಾ ಆತ್ಮಹತ್ಯೆ ಅಥವಾ ಸಹಜ ಸಾವು. ಆದಷ್ಟು ಬೇಗ ಕೆಲಸ ಮುಗಿಸಿ, ಪೋಸ್ಟ್ ಮಾರ್ಟಮ್ ಮಾಡಿಸಿ, ಶವವನ್ನು ಸಂಬಂಧಿಕರಿಗೆ ಒಪ್ಪಿಸಿದರೆ ಆವರ ಕೆಲಸ ಮುಗಿಯಿತು.

`ನಾನು ಬರುವ ತನಕ ಏನನ್ನೂ ಮುಟ್ಟಬಾರದು. ಹತ್ತು ನಿಮಿಷದಲ್ಲಿ ಅಲ್ಲಿರುತ್ತೇನೆ. ಆಮೇಲೇ ಪ್ರೊಸೀಜರ್ ಶುರು ಮಾಡಿ’ ಅಂತ ರಾಜಶೇಖರ ಆಜ್ಞಾಪಿಸಿದ್ದರಿಂದ ಅವರೆಲ್ಲ ಕಾಯುತ್ತಿದ್ದರು. ರಾಜಶೇಖರ ಮುಂದಿನ ಕ್ರಿಯೆಗಳಿಗೆ ಕಾಯುತ್ತಾ ನಿಂತವರ ಮುಖವನ್ನೇ ಗಮನಿಸತೊಡಗಿದ. ರಾಜಶೇಖರ ಯಾಕೆ ತಡ ಮಾಡುತ್ತಿದ್ದಾನೆ ಅನ್ನುವ ಅಸಹನೆ ಅವರ ಮುಖಗಳಲ್ಲಿ ಎದ್ದು ಕಾಣುತ್ತಿತ್ತು.

ಸರ್ ಕೆಲಸ ಶುರು ಮಾಡೋದಾ ಅಂತ ಸಬ್ ಇನ್ಸ್ಪೆ ಕ್ಟರ್ ರಾಜೇಗೌಡ ಪಕ್ಕಕ್ಕೆ ಬಂದು ಪಿಸುಮಾತಲ್ಲಿ ಕೇಳಿದ. ರಾಜಶೇಖರ ಅವನತ್ತ ತಿರುಗುತ್ತಿದ್ದಂತೆ ‘ಇವತ್ತು ಪಕ್ಕದ ಬೀದಿಗೆ ಸಿಎಂ ಬರ್ತಿದ್ದಾರೆ. ಅಲ್ಲೊಂದು ದೇವಸ್ಥಾನದ ಉದ್ಘಾಟನೆ ಇದೆ. ಅಲ್ಲೇ ಹೋಮ ಮಾಡ್ತಾರೆ. ಅದು ಶುರುವಾಗಿಬಿಟ್ಟರೆ ಕಷ್ಟ ಆಗತ್ತೆ. ಆದಷ್ಟು ಬೇಗ ಕ್ಲಿಯರ್ ಮಾಡಬೇಕು ‘ ಅಂತ ಪಿಸುಮಾತಲ್ಲಿ ಹೇಳಿ ಅಪ್ಪಣೆಗಾಗಿ ಕಾದ. ರಾಜಶೇಖರ ತಲೆಯಾಡಿಸಿದ.

ಪೊಲೀಸರು ತಮ್ಮ ಕೆಲಸ ಶುರು ಹಚ್ಚಿಕೊಂಡರು. ಅಲ್ಲಿಂದ ಒಂದೊಂದೇ ವಸ್ತುಗಳನ್ನು ಜೋಪಾನವಾಗಿ ಬೆರಳ ಗುರುತು ಮಾಸದಂತೆ ಎತ್ತಿಕೊಂಡು ಬಟ್ಟೆಯಲ್ಲಿ ಕಟ್ಟಿಡುತ್ತಾ ಒಂದೊಂದನ್ನೂ ಮಾರ್ಕ್ ಮಾಡುತ್ತಾ ನಂಬರ್ ಬರೆಯುತ್ತಾ ಇದ್ದಕ್ಕಿದ್ದಂತೆ ಚಟುವಟಿಕೆ ಶುರುವಾಯ್ತು. ರಾಜೇಗೌಡ ಅತ್ಯುತ್ಸಾಹದಿಂದ ಒಳಗೇನಿದೆ ನೋಡ್ರೋ, ಯಾರಾದ್ರೂ ಹಿಂದಿನ ಡೋರಿಂದ ಎಂಟರಾಗಿದ್ದಾರಾ ಚೆಕ್ ಮಾಡಿ. ನಮಗೆ ಪೋನ್ ಮಾಡಿರೋದು ಯಾರು ಅಂತ ತಿಳ್ಕಂಡು ಅವರ ಸ್ಟೇಟ್ಮೆಂಟಟ್ ತಗಳ್ಳಿ. ರಿಲೇಟಿವ್ಸ್ ಬಂದಿದ್ದಾರಾ ನೋಡಿ. ಬಾಡೀನ ಪೋಸ್ಟ್ ಮಾರ್ಟಮ್ಮಿಗೆ ಕಳ್ಸಿ ಅಂತ ಎತ್ತರದ ದನಿಯಲ್ಲಿ ಓಡಾಡುತ್ತಾ ಹುಮ್ಮಸ್ಸಿನಿಂದ ಓಡಾಡತೊಡಗಿದೆ. ತಾನು ಸಾವಿನ ಮನೆಯಲ್ಲಿದ್ದೇನೆ, ತನ್ನ ಮುಂದೆ ಒಂದು ಹೆಣ ಬಿದ್ದಿದೆ, ಆರೆಂಟು ಗಂಟೆಯ ಹಿಂದೆ ಅದಕ್ಕೂ ತನ್ನ ಹಾಗೇ ಜೀವ ಇತ್ತು. ತನ್ನ ಹಾಗೇ ಅದರ ಹೃದಯವೂ ಮಿಡಿಯುತ್ತಿತ್ತು. ಅದರೊಳಗೊಂದು ಮನಸ್ಸು, ಆ ಮನಸ್ಸಿನಲ್ಲಿ ವಿರಹ, ಪ್ರೇಮ, ಏಕಾಂಗಿತನ, ಅಸಹನೆಗಳೆಲ್ಲ ತುಂಬಿದ್ದವು ಅನ್ನುವುದನ್ನು ಮರೆತೇಬಿಟ್ಟಂತೆ ಓಡಾಡುತ್ತಿರುವ ರಾಜೇಗೌಡನನ್ನು ನೋಡುತ್ತಾ ರಾಜಶೇಖರ ಇನ್ನೇನು ಹೊರಗೆ ಬರಬೇಕು ಅನ್ನುವಷ್ಟರಲ್ಲಿ ರಂಗನಾಥನ ಟೇಬಲ್ಲಿನ ಪಕ್ಕದಲ್ಲೇ ಆ ಚಪ್ಪಲಿಗಳು ಕಾಣಿಸಿದವು.

ಗುಲಾಬಿಬಣ್ಣದ ಚಪ್ಪಲಿಗಳು, ಈಗಷ್ಟೇ ಯಾರೋ ಅಲ್ಲಿ ಬಿಟ್ಟು ಹೋಗಿದ್ದಾರೆ ಎಂಬ ಭಾವ ಹುಟ್ಟಿಸುವಂತೆ ಕಣ್ಣಿಗೆ ಬಿತ್ತು. ಚೆಂದದ ಬೆಳ್ಳನೆಯ ಪಾದದ ನಾಜೂಕು ಹುಡುಗಿ, ಅಷ್ಟೇ ನಾಜೂಕಾಗಿ ಚಪ್ಪಲಿ ತೆಗೆದಿಟ್ಟು, ಅದನ್ನು ಅಕ್ಕಪಕ್ಕ ಚೆಂದ ಕಾಣುವ ಹಾಗೆ ಇರಿಸಿ ಹೋದಂತೆ ರಾಜಶೇಖರನಿಗೆ ಭಾಸವಾಯಿತು. ಬೆಲ್ಟ್ ಇರುವ ಚಪ್ಪಲಿ, ಸದಾ ಬೆಲ್ಟು ಹಾಕುತ್ತಿದ್ದಳು ಅನ್ನುವುದಕ್ಕೆ ಸಾಕ್ಷಿಯೆಂಬಂತೆ ಅದರ ಬೆಲ್ಟು ಒಂದಿಷ್ಟೂ ಕಳೆಗುಂದಿರಲಿಲ್ಲ. ಅವಳು ಅಲ್ಲಿ ನಿಂತು ಬಲಗಾಲೆತ್ತಿ ಎಡಗೈಯಿಂದ ಬೆಲ್ಟು ಕಳಚಿ, ನಂತರ ಎಡಗಾಲಿನ ಬೆಲ್ಟು ಕಳಚಿ, ಎರಡೂ ಚಪ್ಪಲಿಗಳು ಅಕ್ಕಪಕ್ಕ ಇರುವಂತೆ. ಅದನ್ನಿಟ್ಟ ಚಿತ್ರ ಅವನ ಕಣ್ಮುಂದೆ ಮೂಡಿತು. ಅವಳು ಚಪ್ಪಲಿ ತೆಗೆಯುವಾಗ ಜೋಲಿ ತಪ್ಪದಂತೆ ಕುರ್ಚಿಯ ಬೆನ್ನನ್ನು ಹಿಡಕೊಂಡಿರಬಹುದೇ, ಗೋಡೆಯನ್ನೇ ಅಂತ ಯೋಚಿಸುತ್ತಾ ರಾಜಶೇಖರ ಆ ಚಪ್ಪಲಿಯಿಟ್ಟ ಜಾಗಕ್ಕೆ ಹೋಗಿ ನೋಡಿದ. ಸಿಗರೇಟಿನ ಹೊಗೆ, ಧೂಳು ಸೇರಿಕೊಂಡು ಮಸುಕಾಗಿದ್ದ ಗೋಡೆಯಲ್ಲಿ ಮೃದುವಾದ ಬೆರಳುಗಳು ಮತ್ತು ಒಂದಿಷ್ಟೇ ಇಷ್ಟು ಮುಟ್ಟಿಯೂ ಮುಟ್ಟದಂತಿದ್ದ ಅಂಗೈಯ ಗುರುತು ಕಾಣಿಸಿತು. ಅವಳು ಕೈಯಿಟ್ಟ ಜಾಗ ಸ್ಪಷ್ಟವಾಗಿ ಕಾಣಿಸುತ್ತಿತ್ತು. ರಾಜಶೇಖರ ಫೋಟೋಗ್ರಾಫರ್ ಕಡೆ ತಿರುಗಿ ಅದರ ಫೋಟೋ ತೆಗೆಯುವಂತೆ ಹೇಳೋಣ ಅಂದುಕೊಂಡ. ಅದರ ನಿರರ್ಥಕತೆಯ ಅರಿವಾಗಿ ಸುಮ್ಮನಾದ. ಬೆಳ್ಳಿಯ ಉಂಗುರ ಹಾಕಿಕೊಂಡ ಉದ್ದದ ಬೆಳ್ಳಗಿನ ಬೆರಳುಗಳು ಅವನ ಕಣ್ಮುಂದೆ ಮೂಡಿದವು. ರೇಡಿಯೋದಲ್ಲಿ ಜೋ ತುಮ್ ತೋಡೋ ಪಿಯಾ ಅಂತ ಲತಾ ಮಂಗೇಶ್ಕರ್ ಹಾಡುತ್ತಿದ್ದಳು. ಅದಕ್ಕೆ ನಟಿಸಿದ್ದು ಜಯಾಳೋ ರೇಖಾಳೋ ನೆನಪಿಗೆ ಬರಲಿಲ್ಲ. ಇಡೀ ಹಾಡು ಕೇಳಬೇಕು ಅಂದುಕೊಂಡು ರಾಜಶೇಖರ ಆಸೆಯಿಂದ ನಿಂತದ್ದಕ್ಕೂ, ರಾಜೇಗೌಡ ರೇಡಿಯೋ ಆಫ್ ಮಾಡಿ, ಇದನ್ನೂ ಎತ್ಕೊಂಡು ನಡೀರೋ ಅಂದಿದ್ದಕ್ಕೂ ಸರಿಹೋಯಿತು.

ರಾಜಶೇಖರನಿಗೆ ಸುದ್ದಿ ಬಂದದ್ದು ಐದೂವರೆಗೆ. ಅವನು ಕೋರಮಂಗಲ ಕ್ಲಬ್ನಂಲ್ಲಿ ಟೆನಿಸ್ ಆಡುತ್ತಿದ್ದ. ಸಾಮಾನ್ಯವಾಗಿ ಅವನು ಬೆಳಗಿನ ಹೊತ್ತು ಫೋನ್ ಒಯ್ಯುವುದಿಲ್ಲ. ಅರ್ಧಗಂಟೆಯಲ್ಲಿ ಜಗತ್ತೇನೂ ಮುಳುಗಿ ಹೋಗುವುದಿಲ್ಲ ಅನ್ನುವುದು ಅವನ ನಂಬಿಕೆ. ಮೊದಲ ಸೆಟ್ ಮುಗಿದು, ರಾಜಶೇಖರ ಬೆವರು ಒರೆಸಿಕೊಳ್ಳುತ್ತಾ ಜ್ಯೂಸ್ ಕೈಗೆತ್ತಿಕೊಳ್ಳಬೇಕಿದ್ದರೆ ಕುಮಾರ ಓಡೋಡಿ ಬರುವುದು ಕಾಣಿಸಿತ್ತು. ಸಾವಿನ ಸುದ್ದಿ ಹೇಳಲು ಬರುವವನ ಧಾವಂತವೇನೂ ಅವನ ನಡಿಗೆಯಲ್ಲಾಗಲೀ, ಭಂಗಿಯಲ್ಲಾಗಲೀ, ಮುಖದಲ್ಲಾಗಲೀ ಕಂಡಿರಲಿಲ್ಲ. ಅವನೂ ಅಷ್ಟೇ, ಚಿಕ್ಕ ವಯಸ್ಸಲ್ಲೇ ಸಾಕಷ್ಟು ಸಾವುಗಳನ್ನು ನೋಡಿದವನು. ಪೊಲೀಸ್ ಡಿಪಾರ್ಟ್ಮೆಂಟಿನಲ್ಲಿ ಡ್ರೈವರು. ಅವನ ಮುಖದಲ್ಲಿ ಮಾತ್ರ ಆಯಾಚಿತವಾದ ಮುಗ್ಧತೆಯಿತ್ತು. ಅವನನ್ನು ಮೊದಲು ನೋಡಿದವರು, ಪಾಪದ ಹುಡುಗ ಅಂದುಕೊಳ್ಳುವಷ್ಟು ಮುಗ್ಧನಂತೆ ಕಾಣಿಸುತ್ತಿದ್ದ. ಅವನು ಬಂದು ಫೋನ್ ಕೊಟ್ಟು ಅಪ್ಪಾಜಿ ಕೊಡೋಕೆ ಹೇಳಿದ್ರು. ನೀವು ಅಪ್ಪಾಜಿಗೆ ಫೋನ್ ಮಾಡಬೇಕಂತೆ ಅಂದಿದ್ದ. ರಾಜಶೇಖರ ಯಾಕೆ ಅಂತ ಕೇಳುವುದಕ್ಕೂ ಹೋಗದೇ ಫೋನ್ ನಂಬರ್ ಒತ್ತುತ್ತಿರುವ ಹೊತ್ತಿಗೇ ಅಪ್ಪಾಜಿಯೇ ಫೋನ್ ಮಾಡಿದ್ದರು. ರಂಗನಾಥ ಹೋಗಿಬಿಟ್ಟಿದ್ದಾನಂತೆ ರಾಜೂ. ಇಲ್ಲಿ ಗೌಡ ಬಂದಿದ್ದಾನೆ. ಸ್ಪಾಟಿಗೆ ಹೋಗೋ ದಾರೀಲಿ ನಿನ್ನೂ ಕರಕೊಂಡು ಹೋಗೋದಕ್ಕೆ ಬಂದಿದ್ದಾನೆ ಅಂದರು. ಅವನಿಗೆ ಹೋಗೋದಕ್ಕೆ ಹೇಳಿ, ನಾನೂ ಅಲ್ಲಿಗೇ ಬರ್ತೀನಂತ ಹೇಳಿ ಅಂದವನೇ ರಾಜಶೇಖರ ಹೊರಟು ಬಿಟ್ಟಿದ್ದ. ಮನೆಗೂ ಹೋಗಿದೇ, ಟ್ರ್ಯಾಕ್ ಸೂಟಲ್ಲೇ ಹೋಗಿ ನೋಡಿದರೆ, ಆಗಲೇ ಹತ್ತಾರು ಜನ ಸೇರಿಬಿಟ್ಟಿದ್ದರು. ಯಾರನ್ನೂ ಮನೆಯೊಳಗೆ ಬಿಟ್ಟುಕೊಳ್ಳದ, ಯಾವತ್ತೂ ಯಾರ ಜೊತೆಗೂ ಮಾತಾಡದ, ಯಾರಿಗೋ ಕಾಯುತ್ತಿದ್ದಂತೆ,ಯಾರೋ ಮುಖ್ಯವಾದವರು ಬರುತ್ತಾರೆ ಎಂಬಂತೆ ಕುರ್ಚಿಯಲ್ಲಿ ಕಾಯುತ್ತಾ ಕೂತಿರುತ್ತಿದ್ದ ರಂಗನಾಥ ಕೊನೆಗೂ ಹೊರಟುಬಿಟ್ಟಿದ್ದ.

ರಾಜಶೇಖರ ಹೊರಗೆ ಬಂದು ನಿಂತುಕೊಂಡು ಜೇಬಿನಿಂದ ಚೀಟಿ ಹೊರತೆಗೆದು ರಂಗನಾಥ ಬರೆದ ಕೊನೆಯ ಸಾಲುಗಳನ್ನು ಓದಲು ಯತ್ನಿಸಿದ. ಕನ್ನಡಕ ಹಾಕಿಲ್ಲದೇ ಇದ್ದದ್ದರಿಂದ ಅದೇನೆಂದು ಸ್ಪಷ್ಟವಾಗುತ್ತಿರಲಿಲ್ಲ. ಮೋಡಿ ಮೋಡಿ ಅಕ್ಷರಗಳು. ಆರೋ ಎಂಟೋ ಸಾಲುಗಳಷ್ಟೇ ಇತ್ತು. ಅದು ತನ್ನ ಗೆಳೆಯನ ಡೆತ್ನೋಸಟು ಎಂದು ಒಪ್ಪಿಕೊಳ್ಳಲು ಮನಸ್ಸು ನಿರಾಕರಿಸಿತು. ಅದರಲ್ಲಿ ತನಗೇನಾದರೂ ಸೂಚನೆ ಇರಬಹುದಾ, ರಂಗನಾಥನ ತಪ್ಪೊಪ್ಪಿಗೆ ಇರಬಹುದಾ, ತಾನು ಮಾಡಿದ್ದು ಸರಿಯಲ್ಲ ಅಂತ ಆತನಿಗೇ ಅನ್ನಿಸಿರಬಹುದಾ, ತನ್ನ ಇಷ್ಟೂ ವರ್ಷದ ಬದುಕಿನ ನಿರರ್ಥಕತೆಯನ್ನು ಅವನು ದಾಖಲಿಸಲು ಯತ್ನಿಸಿರಬಹುದಾ?

ರಾಜೇಗೌಡ ಪಕ್ಕಕ್ಕೆ ಬಂದು ರಾಗವಾಗಿ ಕೆಮ್ಮಿದ. ತನಗಿಂತ ದೊಡ್ಡವನು. ಸರ್ವೀಸೂ ಜಾಸ್ತಿ. ಎಂಥಾ ಪ್ರಸಂಗವನ್ನೂ ನಿಭಾಯಿಸಬಲ್ಲೆ ಎಂದುಕೊಂಡಿದ್ದಾನೆ. ಎಂಥವರನ್ನೂ ಬಾಯಿಬಿಡಿಸುತ್ತಾನೆ ಎಂಬ ಖ್ಯಾತಿಯಿದೆ. ಕೊಲೆಯ ರಹಸ್ಯ ಬೇದಿಸುವುದರಲ್ಲಿ ಎತ್ತಿದ ಕೈ ಅಂತ ಹೊಗಳಿಸಿಕೊಳ್ಳುತ್ತಿರುತ್ತಾನೆ. ಕೊಲೆ ಮಾಡಿದವರು ಯಾರು ಅಂತ ತಿಳಿದುಕೊಳ್ಳುವುದಕ್ಕೆ ಜ್ಯೋತಿಷಿ ಶರ್ಮರ ಬಳಿಗೂ ಹೋಗುತ್ತಾನೆ ಅನ್ನುವ ವದಂತಿಯನ್ನು ಆತ ಅಲ್ಲಗಳೆಯುವುದಿಲ್ಲ. ಅಂಜನ ಹಾಕಿಸಿ, ಕೊಲೆಗಾರರು ಎಲ್ಲಿದ್ದಾರೆ ಅಂತ ಪತ್ತೆ ಮಾಡಿ ಒಂದಷ್ಟು ಪ್ರಕರಣಗಳನ್ನು ಹಿಡಿದಿದ್ದೇನೆ ಅಂತ ಹೇಳಿಕೊಳ್ಳುತ್ತಾನೆ. ನಮ್ಮ ಕೆಲಸ ಅಪರಾಧಿಗಳನ್ನು ಹಿಡಿಯೋದು ಅಲ್ವ್ರಾ.. ಅದಕ್ಕೆ ಏನು ಬೇಕಾದರೂ ಮಾಡ್ತೀವಪ್ಪ. ಅಲ್ಟಿಮೇಟಾಗಿ ಏನ್ ಸಾರ್, ಕಲ್ಪ್ರಿಪಟ್ ಸಿಗಬೇಕು. ಕೇಸ್ ಕ್ಲೋಸ್ ಆಗಬೇಕು, ಅಷ್ಟೇ ತಾನೇ, ಅದಕ್ಕೆ ಏನಾದ್ರೇನು ಸಾರ್. ಸಾಮದಾನಬೇಧದಂಡ ಏನಾದ್ರೂ ಸರಿಯೇ. ಸಾರ್ ಎಯ್ಟೀ ಸಿಕ್ಸಲ್ಲಿ ಪಾವಗಡದಲ್ಲೊಂದು ಮರ್ಡರ್ ಆಗಿತ್ತು ಸಾರ್. ಕ್ಲೂನೇ ಇರಲಿಲ್ಲ ಅಂತ ತನ್ನ ಸಾಹಸಗಾಥೆಗಳನ್ನು ಕೇಳುವವರು ಸಿಕ್ಕರೆ ದಿನಗಟ್ಟಲೆ ಹೇಳುತ್ತಾನೆ. ಏನಾದರೂ ಮಾಡಿ ಮುಖ್ಯಮಂತ್ರಿಗಳ ಸೆಕ್ಯುರಿಟಿ ಆಫೀಸರ್ ಆಗಬೇಕು ಅನ್ನೋದು ಅವನ ಏಕೈಕ ಆಸೆ. ವಾರಕ್ಕೊಂದು ಸಾರಿ, ಟೀವಿಯಲ್ಲೋ ಪತ್ರಿಕೆಯಲ್ಲೂ ಕಾಣಿಸಿಕೊಳ್ಳದೇ ಹೋದರೆ, ತಾನು ಬದುಕೇ ಇಲ್ಲ ಅನ್ನುವ ಆತಂಕ ಶುರುವಾಗುತ್ತದೆ. ಅಂಥ ಹೊತ್ತಲ್ಲಿ ರಾಜೇಗೌಡ ಒಂದು ಸಮಾರಂಭ ಏರ್ಪಡಿಸಿ ಹಾಡಲು ಶುರು ಮಾಡುತ್ತಾನೆ. ಕಿಶೋರ್ ಕುಮಾರ್ ಗೀತೆಗಳನ್ನು ತಾನು ಕಿಶೋರನಿಗಿಂತಲೂ ಚೆನ್ನಾಗಿ ಹಾಡುತ್ತೇನೆ ಅಂದುಕೊಂಡಿದ್ದಾನೆ. ಕಿಶೋರ್ ಬೆಸ್ಟು ಸಾರ್, ಒಪ್ತೀನಿ, ಆದರೆ ಅವನ ವಾಯ್ಸಲ್ಲಿ ಒಂಥರದ ಉಡಾಫೆ ಇದೆ ನೋಡಿ ಸಾರ್. ಅದು ಸೂಟ್ ಆಗಲ್ಲ. ನಾನು ನಿವೇದನೆ ಮಾಡ್ಕೋಬೇಕು ಸಾರ್. ಒಂದು ಹೆಣ್ಣಿನ ಮುಂದೆ ಮನಸ್ಸು ಬಿಚ್ಚಿ ಹೇಳ್ಕೋಬೇಕು. ಅಲ್ಲಿ ನಾನೊಬ್ಬ ಗ್ರೇಟ್ ಸಿಂಗರ್ ಅನ್ನೋ ಫೀಲಿಂಗೇ ಬರಬಾರದು. ಕಿಶೋರ್ ವಾಯ್ಸಲ್ಲಿ ಅದಿದೆ ಸಾರ್. ಅದಕ್ಕೇ ನಂಗೆ ಗುಲಾಮ್ ಆಲಿ ಇಷ್ಟ ಸಾರ್. ಅವನು ಎಷ್ಟು ವಿನೀತನಾಗಿ ಹಾಡ್ತಾನೆ ಕೇಳಿ ಸಾರ್. ದೋಪೆಹರ್ ಕೀ ಧೂಪ್ ಮೆ ಮೇರೆ ಬುಲಾನೇ ಕೇ ಲಿಯೇ, ವೋ ತೇರಾ ಕೋತೇ ಪೆ ನಂಗೆ ಪಾಂವ್ ಆನಾ ಯಾದ್ ಹೇ ಅನ್ನೋ ಸಾಲು ಸಾಕು ಅಲ್ವ್ರಾ..

ರಾಜಶೇಖರ ತಿರುಗಿ ನೋಡಿದ. ರಾಜೇಗೌಡ ಗಂಭೀರವಾಗಿ `ಎಲ್ಲಾ ಮುಗೀತು ಸಾರ್. ಮನೆ ಸೀಜ್ ಮಾಡಿ ಲಾಕ್ ಮಾಡಿಸ್ತೀನಿ. ಮರ್ಡರ್ ಅಲ್ಲ ಅನ್ಸುತ್ತೆ. ಮನೇಲಿ ಏನೂ ಮಿಸ್ಸಾಗಿಲ್ಲ ಸಾರ್. ಆದ್ರೂ ಒಂದೆರಡು ದಿನದ ಮಟ್ಟಿಗೆ ಸೀಜ್ ಮಾಡೋಣಂತೆ. ಹೇಳೋರು ಕೇಳೋರು ಯಾರೂ ಇಲ್ಲದ ಜೀವ. ನಾಳೆ ಯಾರಾದ್ರೂ ಅಬ್ಜೆಕ್ಷನ್ ಮಾಡಿ ಕೇಸ್ ಜಡಿದ್ರೆ ಕಷ್ಟ. ಯಾವಾಗ ಯಾರು ಹುಟ್ಕೋತಾರೋ ಗೊತ್ತಾಗಲ್ಲ. ಬದುಕಿದ್ದಾಗ ಸತ್ತಿರೋ ಸಂಬಂಧಗಳು ಸತ್ತ ಮೇಲೆ ಜೀವಂತ ಆಗೋದೂ ಉಂಟಲ್ಲ ಸಾರ್. ಈಗ ನಾನು ಹೊರಡ್ತೀನಿ. ಸಿಎಂ ಪ್ರೋಗ್ರಾಮ್ ..’ಅಂದ. ರಾಜಶೇಖರ ತಲೆಯಾಡಿಸುವ ಮೊದಲೇ ಹೊರಟೂ ಬಿಟ್ಟ. ಅವನ ನೆನಪಲ್ಲಿ ಬಿಟ್ಟು ಹೋದ ಗುಲಾಮ್ ಆಲಿ ಸಾಲುಗಳು ಮತ್ತೆ ಮನಸ್ಸಿಗೆ ಬಂದವು. ನಂಗೇ ಪಾಂವ್ ಅನ್ನುವ ಸಾಲಿನೊಂದಿಗೆ ಅವಳು ತೆಗೆದಿಟ್ಟ ಚಪ್ಪಲಿ, ಅವಳ ನಗ್ನ ಪಾದಗಳೂ ಕಣ್ಮುಂದೆ ಬಂದವು. ಮತ್ತೊಮ್ಮೆ ಆ ಚಪ್ಪಲಿ ನೋಡಬೇಕು ಅನ್ನಿಸಿತು. ರಾಜಶೇಖರ ಆ ಆಸೆಯನ್ನು ಹತ್ತಿಕ್ಕಿಕೊಂಡು ಅಲ್ಲೇ ನಿಂತ.

ಮನೇಲಿ ಏನೂ ಮಿಸ್ಸಾಗಿಲ್ಲ ಅನ್ನೋ ಮಾತುಗಳು ಕಾಡಿದವು. ರಂಗನಾಥ ಕಳಕೊಳ್ಳುವುದನ್ನೆಲ್ಲ ಯಾವತ್ತೋ ಕಳಕೊಂಡು ಬಿಟ್ಟಿದ್ದ. ಏನೂ ಕಳೆದುಕೊಳ್ಳದವನಂತೆ ನಟಿಸುತ್ತಿದ್ದ. ಅವನ ನಿರಾಸೆ ಅವನ ಮಾತಿನಲ್ಲಿರಲಿಲ್ಲ, ನಡತೆಯಲ್ಲೂ ಇರಲಿಲ್ಲ. ಅವನ ದೇಹದಲ್ಲೇ ಇತ್ತು. ಸಾವೂ ಕೂಡ ಮುಟ್ಟಲು ಹಿಂಜರಿದವನಂತೆ ರಂಗನಾಥ ಬದುಕಿದ್ದ ಅನ್ನುವುದು ರಾಜಶೇಖರನಿಗೆ ಹೊಳೆದು ಮನಸ್ಸಿಗೆ ಕಸಿವಿಸಿಯಾಯಿತು. ಇನ್ನೊಬ್ಬರ ಸಂಕಟವನ್ನು ನಮ್ಮ ಯೋಚನೆಗಳಲ್ಲಿ ನಾವು ಅತಿಯಾಗಿ ಕಲ್ಪಿಸಿಕೊಳ್ಳುತ್ತಾ ಹೋಗುತ್ತೇವೇನೋ? ಅವರು ನಿಜಕ್ಕೂ ಅಷ್ಟೊಂದು ಯಾತನೆ ಪಡದೇ ಇದ್ದರೂ, ನಾವು ಅದಕ್ಕೆ ನಮ್ಮ ನೋವನ್ನೂ ಸೇರಿಸಿಕೊಂಡು ಅವರನ್ನು ದುಗುಡದ ಆಳದಲ್ಲಿದ್ದಾರೆಂದು ಕಲ್ಪಿಸಿಕೊಳ್ಳುವುದು ಕೂಡ ಒಂದು ಥರದ ಸಂತೋಷವನ್ನು ಕೊಡುತ್ತದೆ. ರಂಗನಾಥ ಸಂತೋಷವಾಗೇ ಇದ್ದನೇನೋ?

ತನ್ನ ಸಂತೋಷಗಳನ್ನು ರಂಗನಾಥ ತೋರಿಸಿಕೊಳ್ಳುತ್ತಿದ್ದ ರೀತಿಯೇ ವಿಚಿತ್ರವಾಗಿರುತ್ತಿತ್ತು ಅದರಲ್ಲೊಂದು ಹುಸಿತನ ಇದ್ದಂತೆ ಎಷ್ಟೋ ಸಲ ಅನ್ನಿಸುತ್ತಿತ್ತು. ಮೊದಲ ಸಲ ನೋಡಿದವರಿಗೆ ಅವನೆಷ್ಟು ಸಂತೋಷವಾಗಿದ್ದಾನಲ್ಲ ಅನ್ನಿಸಿ ಕೊಂಚ ಅಸೂಯೆಯೂ ಆಗುತ್ತಿತ್ತೋ ಏನೋ? ರಂಗನಾಥ ಒಳ್ಳೆಯ ನಟನಂತೆ ತನ್ನ ಖುಷಿಯನ್ನು ಅಭಿನಯಿಸುತ್ತಿದ್ದ. ಸದಾ ನಗುತ್ತಿರುತ್ತಿದ್ದ. ತಮಾಷೆ ಮಾಡುತ್ತಿದ್ದ. ಪದೇ ಪದೇ ದೇವರನ್ನು ಎಳೆದುತಂದು ಮಾತಾಡುತ್ತಿದ್ದ. ದೇವರ ಪ್ರಸ್ತಾಪ ಇಲ್ಲದೇ ಅವನು ಮಾತಾಡಿದ್ದನ್ನೇ ರಾಜಶೇಖರ ನೋಡಿರಲಿಲ್ಲ.

`ಎಂಥ ಅನಾಥ ನೋಡಯ್ಯ ಆ ಭಗವಂತ. ಭಕ್ತರಿಲ್ಲದೇ ಹೋದರೆ ಕೇಳೋರೇ ಇಲ್ಲ ಅವನನ್ನ. ಕಾಂಬೋಡಿಯಾಕ್ಕೆ ಹೋಗಿದ್ದೆ. ಆಂಗ್ ಕೋರ್ ವಾಟ್ ನೋಡ್ಕೊಂಡು ಬಂದೆ. ಸೂರ್ಯವರ್ಮ ಹನ್ನೆರಡೇ ಶತಮಾನದಲ್ಲಿ ಕಟ್ಟಿಸಿದ ದೇವಸ್ಥಾನ ಅಂತಾರೆ. ದೇವಸ್ಥಾನ ಕಟ್ಟಿಸೋದು ಸುಲಭ. ಮದುವೆ ಆಗೋ ಥರ ಅದು. ಯಾರೋ ಮಾಡಿಬಿಡ್ತಾರೆ. ಆದರೆ ಆಮೇಲೆ ದೇವರನ್ನು ಅದರೊಳಗೆ ಉಳಿಸಿಕೊಳ್ಳೋದು ಕಷ್ಟ. ದೇವರಾದರೂ ದೇವಸ್ಥಾನದ ಒಳಗೆ ಯಾಕಿರಬೇಕು ಹೇಳು. ನಾವು ನಮಗೆ ಪುರುಸೊತ್ತಾದಾಗೆಲ್ಲ ಹೋಗಿ ಅದು ಕೊಡು ಇದು ಕೊಡು ಅಂತ ಕೇಳೋದಕ್ಕೆ. ಪಾಪ ಕಣಯ್ಯ, ಬೈಯಂಗಿಲ್ಲ, ಶಾಪ ಕೊಡೋ ಹಂಗಿಲ್ಲ. ದೇವರು ಶಾಪ ಕೊಟ್ಟಿದ್ದು ಕೇಳಿದ್ದೇನಯ್ಯ, ಅದೇನಿದ್ರೂ ಋಷಿಗಳ ಕೆಲಸ. ಅವರು ದೇವರಿಗೆ ಬೇಕಿದ್ರೂ ಶಾಪ ಕೊಡ್ತಾರೆ. ಭಿಕ್ಷೆ ಬೇಡು ಅಂತ ಶಿವನಿಗೇ ಶಾಪ ಕೊಟ್ಟಿರ್ಲಿಲ್ವಾ. ಅವನು ಬ್ರಹ್ಮಕಪಾಲ ಎತ್ಕೊಂಡು ಮೂರು ಲೋಕ ಸುತ್ತಿರಲಿಲ್ವಾ? ದೇವರು ಮನುಷ್ಯರನ್ನು ನಂಬ್ಕೊಂಡಿದ್ದಾನೋ, ಮನುಷ್ಯ ದೇವರನ್ನು ನಂಬ್ಕೊಂಡಿದ್ದಾನೋ ಅರ್ಥಾನೇ ಆಗಲ್ಲ. ನಾನು ನೋಡಿದ ವಿಷ್ಣು ದೇವಸ್ಥಾನದ ಸುತ್ತ ಕಾಡು ಬೆಳೆದಿತ್ತಂತೆ. ಈಗ ಅದನ್ನೇ ಮುಂದಿಟ್ಕೊಂಡು ದುಡ್ಡು ಮಾಡ್ತಿದ್ದಾರೆ. ಈ ದೇವರು ಒಂಥರಾ ಕಾಂಬೋಡಿಯದ ಹುಡುಗೀರ ಥರ. ಸೌಂದರ್ಯ, ಯೌವನ ಮತ್ತು ನಮ್ಮ ತೆವಲು ಮೂರೂ ಸೇರಿ ಅಲ್ಲೊಂದು ಪ್ರಭಾವಳಿ ಹುಟ್ಕೊಂಡು ಬಿಡತ್ತೆ. ನಮಗೆ ಅವಶ್ಯಕತೆ ಇಲ್ಲದೇ ಹೋದರೆ ಅವನನ್ನೂ ಕೇಳೋರಿಲ್ಲ. ಕಾಮ ಮತ್ತು ಭಕ್ತಿ ಎರಡೂ ಒಂದೇ ಅಲ್ವಾ? ಒಳಗೆ ಸುಪ್ತವಾಗಿರತ್ತೆ. ಎಡವಟ್ಟು ಹೊತ್ತಲ್ಲಿ ಪುಸಕ್ಕಂತ ಮೇಲೆ ಬರುತ್ತೆ. ಆಮೇಲೆ ಇನ್ನೊಂದು ಕತೆ ಗೊತ್ತಾ…’

ರಾಜಶೇಖರನ ಮುಂದೆಯೇ ಮನೆಗೆ ಬೀಗ ಜಡಿದು ಪೊಲೀಸರೆಲ್ಲ ಹೊರಟರು. ಕುಮಾರ ಕಾಯುತ್ತಾ ನಿಂತಿದ್ದ. ಇನ್ನೂ ತಿಂಡಿಯಾಗಿರಲಿಲ್ಲವೆಂದು ಕಾಣುತ್ತದೆ. ಹಸಿವು ಅವನ ಅಂಗಾಂಗಗಳಲ್ಲಿ ಧುಮುಗುಡುತ್ತಿತ್ತು. ರಾಜಶೇಖರ ಅವನ ಕಡೆ ನೋಡುತ್ತಿದ್ದಂತೆ ಕುಮಾರ ಜೀಪು ಸ್ಟಾರ್ಟ್ ಮಾಡಿದ. ರಾಜಶೇಖರ ಕೂರುತ್ತಿದ್ದಂತೆ ಮನೆಯ ಕಡೆ ದೌಡಾಯಿಸಿದ.

 

‍ಲೇಖಕರು G

13 December, 2012

6 Comments

  1. bharathi

    ರಂಗನಾಥ ಒಳ್ಳೆಯ ನಟನಂತೆ ತನ್ನ ಖುಷಿಯನ್ನು ಅಭಿನಯಿಸುತ್ತಿದ್ದ… CHENNAGIDE SAALUGALU MATTE BOOK KOODAA FULL FULL SUSPENSE …INNU BOOK KOTRE PATA PATA ANTHA ODI MUGISABAHUDU …

  2. suvarna

    very interestig

  3. DIVYA ANJANAPPA

    ‘ಕುತೂಹಲ’ವನ್ನು ಮೂಡಿಸುವಂತಹ ಪ್ರವೇಶವು ಓದುಗರನ್ನು ಹಿಡಿದಿಟ್ಟಿದೆ.ಖಂಡಿತ ಕಾದಂಬರಿಯನ್ನು ಓದೇ ಓದುತ್ತೇವೆ, ಧನ್ಯವಾದಗಳು ಸರ್.

  4. balu

    Last para nice keep waiting#&&&********

  5. Anil Talikoti

    ಭಾಪಕಾ(ಭಾರಿ ಪತ್ತೇದಾರಿ ಕಾದಂಬರಿ) ಇದ್ದಂಗಿದೆ. ಪಾತ್ರಗಳು ಆಸಕ್ತಿಕರವಾಗಿವೆ, ಹೆಣ್ಣಿಲ್ಲದೆ ಹೆಣೆಯಲಾದಿತೆ ಪತ್ತೇದಾರಿ? ಕಾದಂಬರಿ ಓದಿಯೇ ತಿಳಿಯಬೇಕಾದ್ದು. ಕಾಯ್ತಾ ಇದ್ದೇನೆ ….
    -ಅನಿಲ

  6. Basava Raju L

    ಇಂಟರೆಸ್ಟಿಂಗ್ ಆಗದೆ! ವಸಿ ಬ್ಯಾಗ್ನೆ ಬರ್ದು ಮುಗ್ಸಿ ಪುಣ್ಯ ಕಟ್ಕಳಿ!!

    ಬಸವ ರಾಜು ಎಲ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading