– ಜೋಗಿ
ಇಂಟೆಲಿಜೆನ್ಸ್ ಏಜನ್ಸಿಗಳೂ ಖಾಸಗಿ ಗೂಢಚಾರರೂ ಸರ್ಕಾರವನ್ನು ದೋಚಲು ಆರಂಭಿಸಿದ್ದು ಮೊದಲ ಮಹಾಯುದ್ಧದ ಸಂದರ್ಭದಲ್ಲಿ. ತನ್ನ ಬಳಿ ಅಪರೂಪದ ಮಾಹಿತಿಯಿದೆ. ಅದನ್ನು ನೀಡಲು ಇಂತಿಷ್ಟು ಹಣ ಕೊಡಬೇಕು ಎಂದು ಅವರು ಸರ್ಕಾರಗಳನ್ನು ಬ್ಲಾಕ್ಮೇಲ್ ಮಾಡಲು ಆರಂಭಿಸಿದ್ದರು. ಯುದ್ಧಭೀತಿಯಲ್ಲಿದ್ದ ಅಧಿಕಾರಿಗಳು ಅದು ನಿಜವೋ ಸುಳ್ಳೋ ಎಂದು ಪತ್ತೆಹಚ್ಚುವ ಸ್ಥಿತಿಯಲ್ಲಿರುತ್ತಿರಲಿಲ್ಲ. ವೈರಿಯ ಗುಪ್ತನೆಲೆಯ ಮಾಹಿತಿ, ಯುದ್ದವ್ಯೆಹಗಳ ವಿವರ ಸಿಕ್ಕರೂ ಸಿಗಬಹುದೆಂದು ಕೇಳಿದಷ್ಟು ಹಣ ಕೊಟ್ಟು ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದರು. ಹಾಗೆ ಪಡೆದುಕೊಂಡ ಮಾಹಿತಿಯನ್ನು ಓದುವುದಕ್ಕೂ ಅವರಿಗೆ ಪುರುಸೊತ್ತಿರುತ್ತಿರಲಿಲ್ಲ. ಕಾನ್ಫಿಡೆನ್ಶಿಯಲ್ ಎಂದು ಬರೆದು ಬದಿಗಿಟ್ಟ ಅಂಥ ಸಾವಿರಾರು ಫೈಲುಗಳು ಲಾಕರಿನಲ್ಲಿ ರಾಶಿ ಬಿದ್ದಿರುತ್ತಿದ್ದವು.
ಹಾಗೆ ನೋಡಿದರೆ, ಮೊದಲ ಮಹಾಯುದ್ಧದ ಹೊತ್ತಲ್ಲಿ ಗೂಢಚರ ಸಂಸ್ಥೆಗಳಾಗಲಿ, ಗೂಢಚಾರರಾಗಲಿ ಅಷ್ಟೇನೂ ನೆರವಿಗೆ ಬರಲಿಲ್ಲ. ಅಷ್ಟಕ್ಕೂ ಮಿಲಿಟರಿ ಇಲಾಖೆಗೆ ಬೇಕಾದ ಮಾಹಿತಿಗಳೇನು ಅನ್ನುವುದೂ ಅನೇಕ ಗೂಢಚರರಿಗೆ ಗೊತ್ತಿರಲಿಲ್ಲ. ಂಥ ಹೊತ್ತಲ್ಲಿ ಜರ್ಮನಿ ಜಾವಾ ದ್ವೀಪದ ದೇವಾಲಯದ ನರ್ತಕಿಯೊಬ್ಬಳನ್ನು ಫ್ರಾನ್ಸಿನ ಗೂಢಚಾರಿಣಿಯನ್ನಾಗಿ ನೇಮಿಸಿತು. ಅವಳ ಮೇಲೆ ಸಾಕಷ್ಟು ನಂಬಿಕೆಯನ್ನೂ ಇಟ್ಟಿತು. ಆ ನಂಬಿಕೆಯನ್ನು ಮಾತಾಹರಿ ಸುಳ್ಳುಮಾಡಲಿಲ್ಲ. ಗೂಢಚರ ಜಗತ್ತು ಅವಳನ್ನು ಪರಮ ಸುಂದರಿ, ತೀವ್ರ ವ್ಯಾಮೋಹಿ, ಅಪ್ರತಿಮ ಕಾಮದರಸಿ, ತಪ್ಪುಸರಿಗಳ ಕಿಂಚಿತ್ತು ಪ್ರಜ್ಞೆಯೂ ಇಲ್ಲದ ಮೋಹದರಗಿಣಿ ಎಂದು ಬಣ್ಣಿಸುತ್ತದೆ. ಅಂಥ ಗೂಢಚಾರಿಣಿಯೊಬ್ಬಳು ಕಾಣಿಸಿಕೊಂಡದ್ದು ಅದೇ ಮೊದಲು ಅದೇ ಕೊನೆ. ಅವಳಿಗೆ ಅಂಥ ದೇಶಪ್ರೇಮವಾಗಲೀ, ಸ್ವಾಮಿಭಕ್ತಿಯಾಗಲೀ ಇರಲಿಲ್ಲ. ಆಕೆಗೆ ಬೇಕಾಗಿದ್ದದ್ದು ಹಣ ಮತ್ತು ರೋಚಕತೆ. ತನ್ನ ಪ್ರಿಯಕರರ ಜೊತೆ ಗುಪ್ತ ಮಾಹಿತಿಗಳನ್ನು ರವಾನಿಸುತ್ತಿದ್ದ ಮಾತಾಹರಿಯ ಧೈರ್ಯ, ಸಾಹಸ, ವಂಚಿಸುವ ಜಾಣ್ಮೆ, ಉತ್ಕಟತೆಗಳನ್ನು ಅವಳ ಗೆಳೆಯರೇ ಬೆರಗುಗಣ್ಣಿಂದ ನೋಡಿದವರು. ಅಧಿಕಾರ, ದುಡ್ಡು ಮತ್ತು ಮೇಲ್ವರ್ಗದ ಬದುಕು ಅವಳಿಗೆ ಬೇಕಿತ್ತು ಮತ್ತು ಅದಕ್ಕಾಗಿ ಏನು ಬೇಕಾದರೂ ಮಾಡಲು ಆಕೆ ಸಿದ್ಧಳಿದ್ದಳು. ತುಂಬ ಚಿಕ್ಕವಯಸ್ಸಿನಲ್ಲೇ ಆಕೆಗೆ ಜೀವನದ ನಶ್ವರತೆ ಅರ್ಥವಾಗಿತ್ತು. ದೇಶದೇಶಗಳು ಹೋರಾಡುವುದು, ಯುದ್ಧ ಮಾಡಿ ಸಾಯುವುದು ಹುಂಬತನ ಎನ್ನುವುದು ಅರ್ಥವಾಗಿಹೋಗಿತ್ತು. ಅವಳು ಕೇವಲ ನರ್ತಕಿ ಮಾತ್ರ ಆಗಿರಲಿಲ್ಲ. ತನ್ನ ಬಳಿ ಬಂದ ಗಂಡಸರನ್ನು ಒಲಿಸಿಕೊಳ್ಳುವ ಕಲೆಯನ್ನೂ ಕರಗತ ಮಾಡಿಕೊಂಡಿದ್ದಳು. ಅವಳ ಒನಪು ಒಯ್ಯಿರಕ್ಕೆ ಮನಸೋತು ಎಂತೆಂಥವರೋ ಯಾರಿಗೂ ಹೇಳಬಾರದ ರಹಸ್ಯಗಳನ್ನೂ ಅವಳ ಮುಂದೆ ಒದರಿಬಿಡುತ್ತಿದ್ದರು. ಏಕಕಾಲಕ್ಕೆ ಗಂಡಸರ ಹೃದಯ ಮತ್ತು ಜೇಬಿಗೆ ಲಗ್ಗೆ ಹಾಕಬಲ್ಲ ಸುಂದರಿ ಎಂದು ಅವಳನ್ನು ವರ್ಣಿಸಲಾಗಿದೆ. ಅವಳ ಕುರಿತು ಅಸಂಖ್ಯಾತ ದಂತಕತೆಗಳೂ ಇವೆ. ಅವಳನ್ನು ನೇಮಕ ಮಾಡಿಕೊಂಡ ಅಧಿಕಾರಿಗಳು ಅವಳಿಂದ ಯಾವ ಪ್ರಯೋಜನವನ್ನೂ ಪಡೆಯುತ್ತಿರಲಿಲ್ಲ. ಅದರ ಬದಲು, ಅವಳೇ ಅವರಿಂದ ಸಾಕಷ್ಟು ಅನುಕೂಲಗಳನ್ನು ಪಡಕೊಂಡಿದ್ದಳು ಅನ್ನುವುದು ಒಂದು ಕತೆ. ಅವಳನ್ನು ಜೈಲಿಗೆ ತಳ್ಳಿದಾಗ ಅಲ್ಲಿ ಆಕೆ ನರ್ತಿಸಿ ಜೈಲರುಗಳನ್ನು ತನ್ನ ದಾಸರನ್ನಾಗಿ ಮಾಡಿಕೊಂಡಿದ್ದಳಂತೆ. ಸೈನಿಕರ ಮುಂದೆ ನಿಂತು ಅವಳು ಕೈ ಬೀಸಿದರೆ ಸಾಕು ಅವರೆಲ್ಲ ಆಯುಧಗಳನ್ನು ಕೆಳಗಿಟ್ಟು ಅವಳತ್ತ ಧಾವಿಸುತ್ತಿದ್ದರಂತೆ. ಫ್ರೆಂಚ್ ಸೈನಿಕರು ಗುಂಡು ಹಾರಿಸಲು ಸಿದ್ಧರಾಗಿ ನಿಂತಾಗ ಆಕೆ ತನ್ನ ಮೇಲುಡುಪು ಕಿತ್ತೆಸೆದು ಅವರ ಗಮನ ಬೇರೆಡೆ ಸೆಳೆಯುವಂತೆ ಮಾಡಿ ಅವರು ಗುರಿತಪ್ಪುವಂತೆ ಮಾಡಿದ್ದಳಂತೆ. ಅವಳು ಫ್ರಾನ್ಸ್ ಸೇನೆಗೆ ಸೆರೆಸಿಕ್ಕಿ, ಅವಳನ್ನು ಗುಂಡಿಟ್ಟು ಕೊಲ್ಲುವಂತೆ ಆಜ್ಞೆಯಾದಾಗ ಸೈನಿಕರು ಖಾಲಿ ಕಾರ್ಟಿಡ್ಜ್ಗಳನ್ನು ಬಳಸಿದ್ದರು. ನಂತರ ಅವಳನ್ನು ಫ್ರಾನ್ಸಿನಿಂದಾಚೆ ಒಯ್ದು ಬಿಟ್ಟರು ಅನ್ನುವುದು ಮತ್ತೊಂದು ಕತೆ.
ಮಾತಾಹರಿಯ ಪೂರ್ವಾಶ್ರಮದ ಹೆಸರು ಮಾರ್ಗರಿಟಾ ಗರ್ಟ್ಯೂಡಾ ಝೆಲ್. ಹಾಲೆಂಡಿನ ಲೀವಾರ್ಡೆನ್ನಲ್ಲಿ ಹುಟ್ಟಿದ ಅವಳು ಮನಸ್ಸಿಲ್ಲದ ಮನಸ್ಸಿನಿಂದ ಡಚ್ ವಸಾಹತಿಗೆ ಸೇರಿದ ಅಧಿಕಾರಿಯೊಬ್ಬನನ್ನು ಮದುವೆಯಾಗುತ್ತಾಳೆ. ಅವನೊಂದಿಗೆ ಆರು ವರ್ಷ ಜಾವಾ ದ್ವೀಪದಲ್ಲಿರುತ್ತಾಳೆ. ತನ್ನ ಇಪ್ಪತ್ತೊಂಬತ್ತನೆಯ ವಯಸ್ಸಿಗೆ ಪ್ಯಾರಿಸ್ಗೆ ಬಂದು ನೆಲೆನಿಲ್ಲುವ ಆಕೆ, ಆಗ ತನ್ನ ಹೆಸರನ್ನು ಮಾತಾಹರಿ ಎಂದು ಬದಲಾಯಿಸಿಕೊಳ್ಳುತ್ತಾಳೆ. ಮಾತಾಹರಿ ಅಂದರೆ ಬೆಳಗಿನ ಕಣ್ಣು. ಭಾರತೀಯ ನೃತ್ಯದಲ್ಲಿ ಪರಿಣತಳಾದ ಆಕೆ, ಕಾಮಸೂತ್ರದ ಭಂಗಿಗಳನ್ನು ನಗ್ನಳಾಗಿ ಪ್ರದರ್ಶಿಸುತ್ತಿದ್ದಳಂತೆ. ಪ್ಯಾರಿಸ, ಬರ್ಲಿನ್, ಲಂಡನ್ ಮತ್ತು ರೋಮ್ ತುಂಬ ಪ್ರಸಿದ್ಧಳಾದ ಮಾತಾಹರಿ ಶ್ರೀಮಂತ ವ್ಯಾಪಾರಿಗಳ, ಅಧಿಕಾರಿಗಳ ಅಂತಃಪುರಕ್ಕೂ ಹೋಗಿ ಸೇವೆ ಸಲ್ಲಿಸುತ್ತಿದ್ದಳು. ಅಮೆರಿಕಾದಲ್ಲಿ ಆ ಕಾಲದಲ್ಲೇ ಪ್ರಸಿದ್ಧಳಾಗಿದ್ದ ಸಲಿಂಗಕಾಮಿ ನಟಾಲಿ ಬಾರ್ನೆಯ ಖಾಸಗಿ ಪಾರ್ಟಿಯೊಂದರಲ್ಲಿ ಮಾತಾಹರಿ ನಗ್ನಳಾಗಿ ಬಿಳಿಕುದುರೆಯನ್ನೇರಿ ಸವಾರಿ ಮಾಡಿ ಇಡೀ ಇಂಗ್ಲೆಂಡು ಮತ್ತು ಪ್ಯಾರಿಸ್ಸಿನ ಹುಡುಗರ ತಲೆಕೆಡಿಸಿದ್ದಳು. ನಲವತ್ತರ ಆಸುಪಾಸಿನಲ್ಲಿದ್ದಾಗಲೂ ಆಕೆಯ ವ್ಯಾಮೋಹದಿಂದ ಕಳಚಿಕೊಳ್ಳುವುದು ಅನೇಕರಿಗೆ ಸಾಧ್ಯವೇ ಆಗಿರಲಿಲ್ಲ. ಅವಳಿಗಾಗಿ ತಿಂಗಳಾನುಗಟ್ಟಲೆ ಕಾಯುತ್ತಿದ್ದ ಅಧಿಕಾರಿಗಳಿದ್ದರು. ಆರೆಂಟು ತಿಂಗಳ ಮೊದಲೇ ಕಪ್ಪ ಸಲ್ಲಿಸಿ ಸರದಿಯಲ್ಲಿ ಕಾಯುವ ವರ್ತಕರಿದ್ದರು. ಮೊದಲನೆಯ ಮಹಾಯುದ್ಧ ಆರಂಭವಾದಾಗ ಬರ್ಲಿನ್ನಲ್ಲಿದ್ದ ಮಾತಾಹರಿ, ತಾನು ಯಾವ ಪಕ್ಷಕ್ಕೂ ಸೇರಿದವಳಲ್ಲ ಎಂದು ತೋರಿಸಿಕೊಳ್ಳುತ್ತಾ ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್, ಸ್ಪೈನ್ – ಹೀಗೆ ಎಲ್ಲೆಂದರಲ್ಲಿ ಸುತ್ತಾಡಿಕೊಂಡಿದ್ದಾಕೆ. ಈ ಎಲ್ಲಾ ದೇಶಗಳ ಗೂಢಚರ ಸಂಸ್ಥೆಗಳಿಗೂ ಅವಳು ಗೂಢಚಾರಿಣಿ ಇರಬಹುದು ಎಂಬ ಗುಮಾನಿಯಿತ್ತು. ಆದರೆ ಯಾರೊಬ್ಬರಿಗೂ ಅವಳು ಗೂಢಚಾರಿಣಿ ಎಂದು ಸಾಬೀತು ಮಾಡಲು ಚಿಕ್ಕಾಸಿನ ಸಾಕ್ಷಿಯೂ ಸಿಕ್ಕಿರಲಿಲ್ಲ. ಜರ್ಮನ್ ಅಧಿಕಾರಿಗಳು, ಫ್ರೆಂಚ್ ಸಚಿವರುಗಳ ಜೊತೆ ಹಾಸಿಗೆ ಹಂಚಿಕೊಂಡಿದ್ದ ಅವಳನ್ನು ಮುಟ್ಟುವ ಧೈರ್ಯವೂ ಅವರಿಗೆ ಇರಲಿಲ್ಲ. ಹಾಗಿದ್ದರೂ ಅವಳನ್ನು ತಡವಿಕೊಂಡು ಅವಳ ಮೇಲೆ ಮೊಕದ್ದಮೆ ಹೂಡಿ ಆಕೆಯನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದವನು ಸರ್ ಬೆಸಿಲ್ ಥಾಮ್ಸನ್. ಸ್ಕಾಟ್ಲ್ಯಾಂಡ್ ಯಾರ್ಡ್ನ ಮುಖ್ಯಸ್ಥ. ವಿಚಾರಣೆಯ ಕೊನೆಗೆ ಮಾತಾಹರಿ, ತಾನು ಬ್ರಿಟನ್ನಿಗೆ ಬಂದದ್ದು ಫ್ರೆಂಚರ ಗೂಢಚಾರಿಣಿಯಾಗಿ ಎಂದುಬಿಟ್ಟಿದ್ದಳು. ಅವಳ ವಿರುದ್ಧ ಇದ್ದ ಪ್ರಮುಖ ಸಾಕ್ಷಿಗಳೆಂದರೆ ಜರ್ಮನ್ ಅಧಿಕಾರಿಗಳಿಂದ ಆಕೆಯ ಖಾತೆಗೆ ಜಮಾ ಆಗಿದ್ದ ದೊಡ್ಡ ಮೊತ್ತ. ಅದು ತನಗೆ ಕಾಣಿಕೆಯಾಗಿ ಬಂದ ದುಡ್ಡೆಂದೂ ಅದನ್ನು ಕೊಟ್ಟದ್ದು ಗೂಢಚರ್ಯೆಗೆ ಅಲ್ಲವೆಂದೂ ಮಾತಾಹರಿ ವಾದಿಸಿದಳು. ಅಧಿಕಾರಿಗಳು ಆ ಹಣ ಎಲ್ಲಿಂದ ಯಾರಿಂದ ಯಾವಾಗ ಬಂದಿದೆ ಎಂದು ಪತ್ತೆ ಮಾಡುತ್ತಾ ಹೋಗಿ, ಅದರ ಮೂಲವನ್ನೆಲ್ಲ ಜಾಲಾಡಿ, ಅವಳು ಬೇರೆ ಯಾವ ಕಾರಣವನ್ನೂ ಕೊಡದಷ್ಟು ಬಲವಾದ ಸಾಕ್ಷವನ್ನು ಸೃಷ್ಟಿಸಿದರು. ಕೊನೆಗೆ ಆಕೆ ಆ ಮೊತ್ತವನ್ನು ತನಗೆ ಜರ್ಮನ್ನರು ಮಾಹಿತಿ ನೀಡುವುದಕ್ಕೆಂದು ಕೊಟ್ಟಿದ್ದೆಂದೂ ಆದರೆ ಪ್ಯಾರಿಸ್ಸಿಗೆ ಬಂದ ಮೇಲೆ ಗೂಢಚರ್ಯೆ ಮಾಡುವ ಯಾವ ಆಸಕ್ತಿಯೂ ತನಗೆ ಇರಲಿಲ್ಲವೆಂದೂ ಹೇಳಿ ಪಾರಾಗಲು ನೋಡಿದಳು. ಮಾತಾಹರಿ ನ್ಯಾಯಾಲಯದಲ್ಲಿ ಏನೆಲ್ಲ ಹೇಳಿದ್ದಳು ಎಂದರೆ ಕೊನೆಗೆ ನ್ಯಾಯಾಧೀಶರು ಆಕೆಯಿಂದ ವಿವರಣೆ ಕೇಳುವುದನ್ನು ಬಿಟ್ಟು ಆಕೆಗೆ ಯಾವ ಶಿಕ್ಷೆ ಕೊಡಬಹುದು ಎನ್ನುವ ಚರ್ಚೆಯನ್ನು ಆರಂಭಿಸಿದ್ದರು. ಆಕೆ ಸಂಗ್ರಹಿಸಿದ ಮಾಹಿತಿ, ಅದರಿಂದ ಜರ್ಮನಿಗೆ ಆದ ಅನುಕೂಲ, ಅವಳು ಸಂಪರ್ಕ ಇಟ್ಟುಕೊಂಡಿದ್ದ ಅಧಿಕಾರಿಗಳು, ಅವರ ಬಳಿ ಇದ್ದ ಗುಪ್ತಮಾಹಿತಿಗಳು ಇವನ್ನೆಲ್ಲ ತಾಳೆ ಹಾಕಿ ನೋಡಿದರು. ಮಾತಾಹರಿ ಮಾಹಿತಿ ಸಂಗ್ರಹಿಸಿದ್ದಕ್ಕೆ ಸಾಕ್ಷಿಯಿತ್ತೇ ಹೊರತು, ಆಕೆ ಅದನ್ನು ಜರ್ಮನ್ನರಿಗೆ ಕೊಟ್ಟುದಕ್ಕೆ ಒಂದಿಷ್ಟೂ ಸಾಕ್ಷಿ ಇರಲಿಲ್ಲ. ಹೀಗಾಗಿ ನ್ಯಾಯಾಲಯಕ್ಕೆ ಅವಳನ್ನು ಶಿಕ್ಷೆಗೊಳಪಡಿಸುವುದಕ್ಕೆ ಸಾಕ್ಷಾಧಾರಗಳ ಕೊರತೆಯಿತ್ತು.ಮಧ್ಯೆ ನ್ಯಾಯಾಧೀಶರ ಮೇಲೆ ಪ್ರಭಾವ ಬೀರುವಂಥ ಒಂದು ಹೇಳಿಕೆಯನ್ನೂ ಮಾತಾಹರಿ ನೀಡಿದ್ದಳು. ‘ನಾನು ಫ್ರೆಂಚಳಲ್ಲ. ಅಲ್ಲದೇ, ಯಾರ ಜೊತೆಗೆ ಬೇಕಾದರೂ ಸಂಬಂಧ ಇಟ್ಟುಕೊಳ್ಳುವ ಹಕ್ಕು ನನಗಿದೆ. ನಾನು ಯಾವ ದೇಶಕ್ಕೆ ಬೇಕಾದರೂ ಹೋಗಿ ಬರಬಹುದು. ನನ್ನ ಕಾಸ್ಮೊಪಾಲಿಟನ್ ಹಕ್ಕನ್ನು ತರುಬಲು ಯುದ್ಧ ಸಕಾರಣ ಅಲ್ಲವೇ ಅಲ್ಲ. ನಾನು ಯಾವ ದೇಶಕ್ಕೂ ಸೇರಿದವಳಲ್ಲ. ನಾನು ನರ್ತಕಿ, ಯಾವ ದೇಶದವರು ಕರೆದರೂ ಹೋಗಿ ನರ್ತಿಸುತ್ತೇನೆ. ನನ್ನ ವೃತ್ತಿಯಲ್ಲಿ ನಾನು ಹೇಗೆ ಬೇಕಾದರೂ ಹಣ ಸಂಪಾದಿಸಬಲ್ಲೆ. ಆದರೆ ನನಗೆ ಫ್ರಾನ್ಸ್ ಬಗ್ಗೆ ಪ್ರೀತಿಯಿದೆ. ಇಷ್ಟೇ ನಾನು ಹೇಳಲಿಚ್ಚಿಸುತ್ತೇನೆ. ಇದನ್ನು ನೀವು ನಂಬದೇ ಹೋದರೆ ನಿಮಗಿಷ್ಟ ಬಂದಂತೆ ಮಾಡಬಹುದು.ಇದಾದ ಮೇಲೂ ನ್ಯಾಯಾಲಯ ಅವಳನ್ನು ಅಪರಾಧಿಯೆಂದು ಘೋಷಿಸಿತು. ಅವಳಿಗೆ ಮರಣದಂಡನೆ ವಿಧಿಸಿತು. ಅವಳನ್ನು ಗುಂಡಿಟ್ಟು ಸಾಯಿಸಬೇಕು ಎಂದು ಆದೇಶ ನೀಡಲಾಯಿತು. ಅಕ್ಟೋಬರ್ 15ರಂದು ಅವಳ ಕೈಗಳನ್ನು ಹಿಂದಕ್ಕೆ ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟದೆಯೇ ಅವಳನ್ನು ಗುಂಡಿಕ್ಕಿ ಕೊಲ್ಲಲಾಯಿತು.ಲ್ಲಿಗೆ ಎಲ್ಲವೂ ಮುಗಿಯಿತು ಅಂದುಕೊಂಡದ್ದು ಸುಳ್ಳಾಯಿತು. ಮಾತಾಹರಿ ಬದುಕಿದಾಗ ಮಾಡಿದ್ದಕ್ಕಿಂದ ಹೆಚ್ಚು ಸುದ್ದಿಯನ್ನು ಸತ್ತ ಮೇಲೆ ಮಾಡಿದಳು. ಅವಳು ಸತ್ತಿದ್ದಾಳೆ ಎಂದು ನಂಬಲು ಅವಳ ಆರಾಧಕರು ಸಿದ್ಧರಿರಲಿಲ್ಲ. ಅವಳ ಹೆಣ ಪತ್ತೆಯಾಗಲಿಲ್ಲ ಎಂಬ ಕಾರಣಕ್ಕೆ ಅವಳು ಸತ್ತೇ ಇಲ್ಲ ಎಂಬ ತೀರ್ಮಾನಕ್ಕೆ ಅವಳ ಮೋಹಪಾಶಕ್ಕೆ ಒಳಗಾದರು ಬಂದುಬಿಟ್ಟರು.ಅದು ಮತ್ತೊಂದು ಕತೆ.








ಸರ್,
ಮಾತಾಹರಿಯ ಯಾವ ಪುಸ್ತಕ ಓದುತ್ತಿದಿರ, ದಯವಿಟ್ಟು ತಿಳಿಸಿ.