ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಮನೆ: ಚೆಂದದ ಒಂದು ಕನಸಿನಲ್ಲಿ ನಾವೂ ನೀವೂ ಅವರೂ…

ಜೋಗಿ

ಆವತ್ತು ಮಧ್ಯಾಹ್ನ ಪುರುಷೋತ್ತಮನಿಗೆ ಕನಸು ಬಿತ್ತು.

ಎತ್ತರದ ಖುರ್ಚಿಯಲ್ಲಿ ಪುರುಷೋತ್ತಮ ಕೂತಿದ್ದ. ಅವನ ಸುತ್ತ ಕೋಟು ತೊಟ್ಟುಕೊಂಡ ಮಂದಿ ವಿನಯದಿಂದ ನಿಂತಿದ್ದರು. ಪುರುಷೋತ್ತಮನ ಆಜ್ಞೆಗಾಗಿ ಅವರು ಕಾಯುತ್ತಿದ್ದಂತಿತ್ತು. ಪುರುಷೋತ್ತಮ ಒಬ್ಬೊಬ್ಬರನ್ನೇ ದಿಟ್ಟಿಸಿ ನೋಡುತ್ತಿದ್ದಂತೆ ಅವರು ತಲೆಯನ್ನು ಕೊಂಚವೇ ತಗ್ಗಿಸಿ, ಅಪ್ಪಣೆಯಾಗಬೇಕು ಎಂಬಂತೆ ಸೂಚಿಸುತ್ತಿದ್ದರು.

ಈ ಅಧಿಕಾರ ಯಾಕೆ ಬಂತು ಅನ್ನುವುದೂ ಅವನಿಗೆ ಗೊತ್ತಿರಲಿಲ್ಲ. ತನ್ನ ಕರ್ತವ್ಯವೇನು ಎನ್ನುವುದು ಸ್ಪಷ್ಟವಾಗಿರಲಿಲ್ಲ. ಒಂದೆರಡು ವಾರದ ಹಿಂದೆ ಅವನು ತಿರುಪತಿಗೆ ಹೋಗಿದ್ದ. ಅಲ್ಲಿ ಎಲ್ಲರಂತೆ ಸರತಿಯ ಸಾಲಲ್ಲಿ ನಿಂತು ಹೋಗಿ ವೆಂಕಟೇಶ್ವರನ ದರ್ಶನ ಪಡೆದಿದ್ದ. ಈ ಸಲ ಆದ್ರೂ ಪ್ರಮೋಷನ್ ಸಿಗಲಿ ಅಂತ ಬೇಡ್ಕೊಳ್ಳಿ ಅಂತ ಹೆಂಡತಿ ತಲೆಮೊಟಕಿದ್ದಳು. ಪುರುಷೋತ್ತಮ ನನ್ನ ಹೆಂಡತಿಗೇನು ಬೇಕೋ ಕರುಣಿಸು ಅಂತ ಮುಗ್ಧವಾಗಿ ಬೇಡಿಕೊಂಡಿದ್ದ. ಅಲ್ಲಿಂದ ವಾಪಸ್ಸು ಬರುವ ಹೊತ್ತಿಗೆ ಪುರುಷೋತ್ತಮನಿಗೆ ತಲೆ ನೋಯಲು ಶುರುವಾಗಿತ್ತು. ಹೆಂಡತಿ ಮಾತ್ರ ಎಡೆಬಿಡದೇ, ಬಾಣಸವಾಡಿಯ ಸೈಟಿಗೆ ಕಾಂಪೌಂಡು ಹಾಕಿಸಬೇಕು, ಶಿವಾಜಿನಗರಕ್ಕೆ ಹೋಗಿ ಹಳೇ ಬಾಗಿಲು ಕಿಟಕಿ ಸಿಕ್ಕರೆ ತಂದಿಡಬೇಕು, ರಾಮಣ್ಣ ಮನೆ ಒಡೆಸ್ತಿದ್ದಾನಂತೆ, ಅವನ ಮನೆಯ ಇಟ್ಟಿಗೆ ಕಲ್ಲನ್ನೆಲ್ಲ ಜೋಪಾನವಾಗಿ ತಂದಿಟ್ಟುಕೊಳ್ಳಬೇಕು. ನಮ್ಮಪ್ಪ ಊರಲ್ಲಿ ಮರ ಕಡೀತಿದ್ದಾರೆ. ಡಬಲ್ ಕಾಟ್ ಮಾಡಿಕೊಡೋಕೆ ಹೇಳಬೇಕು ಅಂತ ಸಂಸಾರ ಮಾಡುವ ವಿಧಾನಗಳನ್ನು ವಿವರಿಸುತ್ತಿದ್ದರೆ ಪುರುಷೋತ್ತಮ ನಿದ್ದೆ ಹೋಗಿದ್ದ. ಅವನಿಂದ ಉತ್ತರ ಬರದೇ ಇದ್ದದ್ದು ನೋಡಿ, ಅವಳು ಅವನ ತಲೆಗೆ ಕೊಂಚ ಜೋರಾಗಿ ಮೊಟಕಿದ್ದಳು. ಪುರುಷೋತ್ತಮ ಕಣ್ಣು ಬಿಡುವ ಹೊತ್ತಿಗೆ ಬೆಂಗಳೂರು ಬಂದಿತ್ತು.

ಆವತ್ತು ರಾತ್ರಿ ಕೂಡ ಪುರುಷೋತ್ತಮನ ಹೆಂಡತಿಯ ಉಪದೇಶ ಮುಂದುವರಿದಿತ್ತು. ಹೇಗಾದರೂ ಮಾಡಿ ಒಂದು ಪ್ರಮೋಷನ್ ತಗೊಳ್ಳಿ. ಇನ್ನೂ ಎಷ್ಟು ದಿನ ಅವನ ಕೈ ಕೆಳಗೇ ಒದ್ದಾಡುತ್ತೀರಿ. ಅವನನ್ನು ಕಂಡರೆ ನಿಮ್ಮ ಯಜಮಾನರಿಗೂ ಆಗೋಲ್ಲವಂತೆ. ಇದೇ ಅವಕಾಶ. ಅವನನ್ನು ಮನೆಗೆ ಕಳಿಸಿ, ನೀವು ಅಧಿಕಾರ ತಗೊಂಡು ಬಿಡಿ ಅಂತ ಅವಳು ಇನ್ನಿಲ್ಲದಂತೆ ಹೇಳಿದ್ದಳು. ಪುರುಷೋತ್ತಮ ತಲೆ ಕಾಯ್ದುಕೊಳ್ಳಲು ಹೂಂ ಹೂಂ.. ಹೂಂಕಣೇ, ಮಾಡ್ತೀನಿ ಅಂತ ಸಾಂದರ್ಭಿಕವಾಗಿ ನಾಲ್ಕೈದು ಉತ್ತರ ಕೊಟ್ಟು ಸುಮ್ಮನಾಗಿದ್ದ.

ಆವತ್ತು ಅಂದುಕೊಂಡದ್ದು ಆಗೇ ಹೋಯ್ತು. ಯಜಮಾನರು ಆಫೀಸಿಗೆ ಬಂದವರೇ, ಪುರುಷೋತ್ತಮನನ್ನು ಕರೆದು ಆರ್ಡರ್ ಕೊಟ್ಟಿದ್ದರು. ಇವತ್ತಿಂದ ನೀವೇ ಇಡೀ ದಕ್ಷಿಣ ಭಾರತದ ವ್ಯವಹಾರಗಳಿಗೆ ಜವಾಬ್ದಾರರು. ನಿಮಗೆ ಪ್ರಮೋಷನ್ ಸಿಕ್ಕಿದೆ. ನೀವೀಗ ಸೌತ್ ಝೋನ್ ವೈಸ್ ಪ್ರೆಸಿಡೆಂಟ್-ಮಾರ್ಕೆಟಿಂಗ್. ನಿಮ್ಮ ಕೈಕೆಳಗೆ ಮೂವತ್ತು ಅಧಿಕಾರಿಗಳಿರುತ್ತಾರೆ. ಅವರ ಉಸ್ತುವಾರಿ, ಜವಾಬ್ದಾರಿ ಎಲ್ಲವೂ ನಿಮ್ಮದೇ. ಅವರನ್ನು ಚಾಟಿ ಹಿಡಿದು ದುಡಿಸೋ ಕೆಲಸ ನಿಮ್ಮದು ಅಂದಿದ್ದರು. ಪುರುಷೋತ್ತಮನಿಗೆ ಹೊಸ ಚೇಂಬರ್ ಕೊಟ್ಟಿದ್ದರು. ಏರ್ ಕಂಡೀಷನ್ನು, ಡೈರೆಕ್ಟ್ ಫೋನ್ ಲೈನು, ಸಂದರ್ಶಕರಿಗೆ ಕುಳಿತುಕೊಳ್ಳುವುದಕ್ಕೆ ನಾಲ್ಕು ಕುರ್ಚಿ, ಕಾಲಿಂಗ್ ಬೆಲ್ಲು- ಎಲ್ಲವೂ ಇತ್ತು. ಟೇಬಲ್ಲಿನ ಮೇಲೆ ಲ್ಯಾಪ್ ಟಾಪು, ಪಕ್ಕದಲ್ಲೇ ಕಂಪ್ಯೂಟರ್.

ಅಲ್ಲಿಗೆ ಕರೆದೊಯ್ದು ಪುರುಷೋತ್ತಮನನ್ನು ಕೂರಿಸಿ, ಕೈ ಕುಲುಕಿ, ಸಂಸ್ಥೇನ ಬೆಳೆಸಿ, ನೀವೂ ಬೆಳೀತೀರಿ ಅಂತ ಭಾಷಣ ಮಾಡಿ ಯಜಮಾನರು ಹೊರಟು ಹೋಗಿದ್ದರು. ಆಫೀಸಿನಲ್ಲಿದ್ದವರೆಲ್ಲ ಬಂದು ಪುರುಷೋತ್ತಮನ ಕೈ ಕುಲುಕಿ ಸಂತೋಷ ವ್ಯಕ್ತಪಡಿಸಿದ್ದರು. ನಿಮಗೆ ಈ ಸ್ಥಾನ ಯಾವತ್ತೋ ಸಿಗಬೇಕಿತ್ತು ಸಾರ್. ಆ ಮುದ್ಕ ಕಂಪೆನಿಯ ಡೈರೆಕ್ಟರುಗಳನ್ನೆಲ್ಲ ಹದ್ದುಬಸ್ತಲ್ಲಿಟ್ಟುಕೊಂಡು ಅಧಿಕಾರ ಚಲಾಯಿಸ್ತಿದ್ದ ಸಾರ್. ಅಂಥ ಕ್ರೂರೀನ ನಾವು ನೋಡೇ ಇಲ್ಲ ಸಾರ್. ಅವನು ಮನುಷ್ಯನಾ ಸಾರ್, ಮೃಗ. ಹ್ಯೂಮಾನಿಟಿ ಇಲ್ಲ ಸಾರ್. ಕ್ಯಾಕರಿಸಿ ಮುಖಕ್ಕೆ ಉಗೀಬೇಕು ಅನ್ನಿಸ್ತಿತ್ತು ಸಾರ್. ನಮ್ಮನ್ನೇನು ನಾಮರ್ದಗಳು ಅಂದ್ಕೊಂಡಿದ್ದಾನಾ ಸಾರ್ ಎಂದು ಒಬ್ಬೊಬ್ಬರಾಗಿ ಪುರುಷೋತ್ತಮನ್ನು ಕೊಂಡಾಡಿ ಹೋಗಿದ್ದರು.

ಪುರುಷೋತ್ತಮ ಮಾರನೇ ದಿನ ಆಫೀಸಿಗೆ ಬರುವ ಹೊತ್ತಿಗೆ ಎಲ್ಲವೂ ಸಿದ್ಧವಾಗಿತ್ತು. ಅವನ ಸುತ್ತ ಅಧಿಕಾರಿಗಳು ನಿಂತಿದ್ದರು. ಅವನ ಅಪ್ಪಣೆಗಾಗಿ ಕಾಯುತ್ತಿದ್ದರು. ಪುರುಷೋತ್ತಮ ಘನಗಾಂಭೀರ್ಯದಿಂದ ಅವರೇನು ಮಾಡಬೇಕು ಅಂತ ಸೂಚಿಸಿದ. ಅಷ್ಟದಿಕ್ಪಾಲಕರಂತೆ ಅವರೆಲ್ಲ ಒಂದೊಂದು ದಿಕ್ಕಿಗೆ ತೆರಳಿದರು. ಸಂಜೆ ಹೊತ್ತಿಗೆ ರಿಪೋರ್ಟುಗಳ ಜೊತೆ ಬರುತ್ತಿದ್ದರು. ಅವನ್ನೆಲ್ಲ ಓದಿ ತನ್ನ ಮೇಲಧಿಕಾರಿಗಳಿಗೆ ಪುರುಷೋತ್ತಮ ರವಾನಿಸುತ್ತಿದ್ದ. ಅವರು ಅದಕ್ಕೆ ಷರಾ ಬರೆದು ವಾಪಸ್ಸು ಕಳಿಸುತ್ತಿದ್ದರು.

ಪುರುಷೋತ್ತಮನ ಹೆಂಡತಿ ಖುಷಿಯಾಗಿದ್ದಳು. ತನ್ನ ಗಂಡನ ಸ್ಥಾನಮಾನಗಳ ಕುರಿತು ಹೆಮ್ಮೆಯಿಂದ ಮಾತಾಡುತ್ತಿದ್ದಳು. ಅವಳ ಓಡಾಟ ಹೆಚ್ಚಾಗಿತ್ತು. ಊರ ತುಂಬೆಲ್ಲ ಗಂಡನ ಕುರಿತು ಹೆಮ್ಮೆಯಿಂದ ಹೇಳಿಕೊಂಡು ಓಡಾಡುತ್ತಿದ್ದಳು.

ಅದೇ ಹೊತ್ತಲ್ಲಿ ದುರಂತವೊಂದು ಸಂಭವಿಸಿತು. ಪುರುಷೋತ್ತಮ ಕೆಲಸ ಮಾಡುತ್ತಿದ್ದ ಕಂಪೆನಿ ಕೀಟನಾಶಕಗಳನ್ನು ಉತ್ಪಾದಿಸುತ್ತಿತ್ತು. ಅದನ್ನು ಹಳ್ಳಿಗಳಿಗೆ ಕೊಂಡೊಯ್ತು, ಉಚಿತವಾಗಿ ರೈತರಿಗೆ ಹಂಚಿ, ಅದರ ಅಡ್ಡ ಪರಿಣಾಮಗಳನ್ನು ಕಂಡುಹಿಡಿಯುವ ಪ್ರಾಜೆಕ್ಟನ್ನು ಪುರುಷೋತ್ತಮ ನಿರ್ವಹಿಸುತ್ತಿದ್ದ. ರಾಮೋಹಳ್ಳಿಯ ರೈತರಿಗೂ ಕೀಟನಾಶಕ ಹಂಚಲಾಗಿತ್ತು. ಅದನ್ನು ಸಿಂಪಡಿಸಿದ ಮೂರೇ ದಿನಕ್ಕೆ ರಾಮೋಹಳ್ಳಿಯ ಒಂಬತ್ತು ರೈತರು ಕಣ್ಣು ಕಳಕೊಂಡರು. ಅದಕ್ಕೆ ಕಾರಣ ಪುರುಷೋತ್ತಮನ ಕಂಪೆನಿಯ ಕೀಟನಾಶಕ ಎಂದು ಪತ್ರಿಕೆಗಳಲ್ಲಿ ಯಾರೋ ಲೇಖನ ಬರೆದರು. ಪುರುಷೋತ್ತಮನ ವಿರುದ್ಧ ಪ್ರತಿಭಟನೆ ಶುರುವಾಯಿತು.

ದುರಂತ ಅಲ್ಲಿಗೇ ನಿಲ್ಲಲಿಲ್ಲ. ಪುರುಷೋತ್ತಮ ಕೀಟನಾಶಕ ಸರಬರಾಜು ಮಾಡಿದ ಎಲ್ಲ ಹಳ್ಳಿಗಳನ್ನು ಪತ್ರಕರ್ತನೊಬ್ಬ ಸುತ್ತಿ ಬಂದು, ಪ್ರತಿಯೊಂದು ಹಳ್ಳಿಯಲ್ಲೂ ಅಂಗವೈಕಲ್ಯ ತಲೆದೋರಿದ್ದನ್ನು ವರದಿ ಮಾಡಿದ. ಪುರುಷೋತ್ತಮನನ್ನು ಕೊಲೆಗಾರ ಎಂದು ಬಣ್ಣಿಸಲಾಯಿತು. ಒಂದು ಬೆಳಗ್ಗೆ ಅವನ ಮನೆಯ ಮುಂದೆ ಕುಂಟರು, ಕುರುಡರು, ಸೊಂಟ ಬಿದ್ದವರು, ಸೊರಗಿ ಸೊಟ್ಟಗಾದವರೆಲ್ಲ ಬಂದು ಧರಣಿ ಕೂತರು. ಪುರುಷೋತ್ತಮ ಕಿಟಕಿಯಿಂದ ಅವರನ್ನೆಲ್ಲ ನೋಡುತ್ತಾ ‘ನನಗೆ ಈ ಕನಸು ಸಾಕು’ ಅಂದ. ಅವನ ಹೆಂಡತಿ ಬಂದು ನೀವು ಕನಸಿನಿಂದ ಹೊರಬರುವಂತಿಲ್ಲ ಎಂದು ಗದರಿಸಿದಳು. ಮಕ್ಕಳು ಅಪ್ಪನ ಜೊತೆ ಮಾತಾಡುವುದಿಲ್ಲ ಅಂತ ಧಮಕಿ ಹಾಕಿದವು. ಅಧಿಕಾರಿಗಳು ನೀವೇನಾದರೂ ಕನಸಿನಿಂದ ಹೊರಗೆ ಬಂದರೆ ನಿಮ್ಮ ಮಾತು ಕೇಳುವುದಿಲ್ಲ ಅಂದರು. ಬ್ಯಾಂಕಿನ ಅಧಿಕಾರಿಗಳು ಬಂದು ಕನಸಿನಿಂದ ಹೊರಗೆ ಬಂದರೆ ಮನೆ ಜಪ್ತಿ ಮಾಡುವುದಾಗಿಯೂ, ಹೊಸದಾಗಿ ಕಟ್ಟಿದ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿಯೂ ಹೆದರಿಸಿದರು.

ಪುರುಷೋತ್ತಮ ಬೇರೆ ದಾರಿ ಕಾಣದೇ, ಕನಸಿನೊಳಗೇ ಉಳಿಯಲು ನಿರ್ಧರಿಸಿದ. ತನ್ನ ಮನೆ ಮುಂದೆ ಕೂತಿದ್ದವರಿಗೆ ಹೊಸ ಕನಸುಗಳನ್ನು ಹಂಚುವುದಕ್ಕೆ ಶುರು ಮಾಡಿದ. ಅವನು ತನ್ನ ಕನಸನ್ನೇ ಕತ್ತರಿಸಿ ಅವರಿಗೂ ಹಂಚಬೇಕಾಗಿತ್ತು. ಅಲ್ಲಿ ಕೂತಿರುವ ಮಂದಿಯ ಲೆಕ್ಕ ನೋಡಿದರೆ ಕೊನೆಗೆ ತನಗೇನೂ ಉಳಿಯುವುದಿಲ್ಲ ಎಂಬುದು ಪುರುಷೋತ್ತಮನಿಗೆ ಖಾತ್ರಿಯಾಗಿತ್ತು. ಅವರ ದುಃಸ್ವಪ್ನಗಳನ್ನು ವಾಪಸ್ಸು ತೆಗೆದುಕೊಂಡು, ಕನಸುಗಳನ್ನು ಹಂಚುವುದು ಅಷ್ಟು ಸುಲಭದ ಕೆಲಸ ಅಂತ ಅವನಿಗೆ ಅನ್ನಿಸಲಿಲ್ಲ.

ಒಂದು ರಾತ್ರಿ ಪುರುಷೋತ್ತಮ ಕನಸಿಲ್ಲದೇ ನಿದ್ದೆ ಮಾಡಬೇಕು ಎಂದು ನಿರ್ಧಾರ ಮಾಡಿ ಹೊದ್ದು ಮಲಗಿದ. ಹೆಂಡತಿ ಸಿಟ್ಟಲ್ಲಿ ಕೂಗಾಡುತ್ತಾ ಅವನ ಹೊದಿಕೆ ಕಿತ್ತೆಸೆದು ನೀವು ಕಣ್ಮುಚ್ಚುವಂತಿಲ್ಲ, ಕನಸು ಹಾರಿಹೋಗುತ್ತದೆ. ನೀವು ಕನಸಿನಿಂದ ಹೊರಬಂದು ನಮ್ಮನ್ನೆಲ್ಲ ಬೀದಿಪಾಲು ಮಾಡಬೇಕೂಂತಿದ್ದೀರಾ ಎಂದು ಗರ್ಜಿಸಿದಳು.

-2-

ಈ ಕತೆ ಇಲ್ಲಿಗೆ ಮುಗಿಯುವುದಿಲ್ಲ. ಪುರುಷೋತ್ತಮನ ಹಾಗೆ ಅವನ ಓರಗೆಯ ಮಂದಿ ಕೂಡ ಕನಸಲ್ಲೇ ಬದುಕುತ್ತಿರುತ್ತಾರೆ ಎಂದು ಹೇಳಿದರೆ ಇಡೀ ಪ್ರಸಂಗ ತೆಳುವಾಗುತ್ತದೆ. ಯಾವುದು ಕನಸು, ಯಾವುದು ವಾಸ್ತವ ಎಂದು ಗೊತ್ತಾಗದ ಸ್ಥಿತಿಯಲ್ಲಿರುವ ಬಗ್ಗೆ ಎ ಕೆ ರಾಮಾನುಜನ್ ಎಂದು ಚಂದದ ಪದ್ಯ ಬರೆದಿದ್ದರು. ಆ ಕವಿತೆಯಲ್ಲಿ ಒಬ್ಬ ಕನಸಿನಲ್ಲಿ ಚಿಟ್ಟೆಯಾಗಿ ಬದಲಾಗುತ್ತಾನೆ. ಕ್ರಮೇಣ ಅವನಿಗೆ ತಾನು ಮನುಷ್ಯನೋ ಚಿಟ್ಟೆಯೋ ಅನ್ನುವುದೇ ಮರೆತುಹೋಗುತ್ತದೆ. ತಾನು ಚಿಟ್ಟೆಯ ಕನಸು ಕಾಣುತ್ತಿರುವ ಮನುಷ್ಯನೋ ಮನುಷ್ಯನ ಕನಸು ಕಾಣುತ್ತಿರುವ ಚಿಟ್ಟೆಯೋ ಎಂಬ ದ್ವಂದ್ವದಲ್ಲಿ ಅವನು ಕಳೆದುಹೋಗುತ್ತಾನೆ.

ಮಹಾನಗರಗಳೂ ಅಲ್ಲಿನ ಉದ್ಯೋಗಗಳೂ ಹಾಗೆಯೇ. ನಾನು ಪತ್ರಕರ್ತನ ಕೆಲಸ ಮಾಡುತ್ತಿರುವ ಮನುಷ್ಯನೋ ಮನುಷ್ಯನಂತಿರುವ ಪತ್ರಕರ್ತನೋ ಎಂಬ ಅನುಮಾನ ಒಂದಲ್ಲ ಒಂದು ಕ್ಷಣ ಎಲ್ಲ ಪತ್ರಕರ್ತರನ್ನೂ ಕಾಡಬಹುದು. ಇಂಥ ದ್ವಂದ್ವ ಎಲ್ಲ ವೃತ್ತಿಯಲ್ಲೂ ಇದ್ದದ್ದೇ.

ವೃತ್ತಿಯೆಂಬುದು ಬೆಳೆಯುವ, ಸೃಷ್ಟಿಸುವ, ಹಂಚುವ, ಸಂತೋಷಪಡುವ ಕ್ರಿಯೆಯಾಗಿತ್ತು ಅನ್ನುವುದನ್ನೇ ಮರೆಯಬೇಕಾಗಿದೆ. ನಾವೇನು ಮಾಡುತ್ತಿದ್ದೇವೆ ಎಂಬುದು ನಮಗೇ ಗೊತ್ತಿಲ್ಲದ ಸ್ಥಿತಿ. ಕಂಪ್ಯೂಟರ್ ಮುಂದೆ ದಿನಕ್ಕೆ ಹನ್ನೆರಡು ತಾಸು ಕೂತು ಮನೆಗೆ ಬಂದಾಗ ಪುಟ್ಟ ಮಗ ಕೇಳುತ್ತಾನೆ- ‘ಇವತ್ತೇನು ಮಾಡಿದೆ ಅಮ್ಮಾ?’ ಅಮ್ಮನ ಬಳಿ ಉತ್ತರ ಇರುವುದಿಲ್ಲ.

ಅವಳ ಅಜ್ಜಿಯ ಬಳಿ ಆ ಪ್ರಶ್ನೆಗೆ ಉತ್ತರ ಇತ್ತು. ‘ನಾನು ಬತ್ತ ಬಿತ್ತಿದೆ. ನಾಳೆ ಅದು ಮೊಳಕೆ ಒಡೆಯುತ್ತದೆ. ನಾಡಿದ್ದು ಸಸಿಯಾಗುತ್ತದೆ. ಆ ಸಸಿಯಿಂದ ಬತ್ತದ ತೆನೆ ಬರುತ್ತದೆ. ಆ ಬತ್ತವನ್ನು ಕುಟ್ಟಿ ಅಕ್ಕಿ ಮಾಡಬಹುದು. ಅಕ್ಕಿಯಿಂದ ಹೊಟ್ಟೆತುಂಬುತ್ತದೆ’ ಎಂದು ಸರಳವಾಗಿ ಹೇಳಿಬಿಡುತ್ತಿದ್ದಳು. ಆ ಬೆಳವಣಿಗೆಯೇ ಎಷ್ಟು ಚೆನ್ನಾಗಿತ್ತು ನೋಡಿ. ಬಿತ್ತಿದ್ದು ಬೆಳೆದು ಫಸಲಾಗಿ, ಹುಲುಸಾಗಿ, ಹಸುರಾಗಿ ಬೆಳೆದು ಕಣ್ತುಂಬಿ, ಗಾಳಿಗೆ ತೂಗಿ, ಇಬ್ಬನಿಯಲ್ಲಿ ತೊಯ್ದು, ಮಳೆಗೆ ನೆನೆದು, ಕಾಮನಬಿಲ್ಲಿನ ಬಣ್ಣಕ್ಕೆ ಮರುಳಾಗಿ ತಲೆದೂಗಿ, ತೊನೆದು ಕೊನೆಗೆ ಆಹಾರವಾಗಿ ನಮ್ಮೊಳಗೆ ಒಂದಾಗುವ ಪವಾಡದಿಂದ ಹೊರತಾದ ಮಹಾನಗರಕ್ಕೆ ಹಸಿರೆಂದರೆ ಸಿಗ್ನಲ್ ಲೈಟು. ಧಾವಿಸುವುದಕ್ಕೊಂದು ಸೂಚನೆ.

ಧಾವಿಸುವುದಾದರೂ ಎಲ್ಲಿಗೆ? ಕನಸಿನಿಂದ ಹೊರಬೀಳಲಾರೆವು. ಕನಸನ್ನು ವಿಸ್ತರಿಸಲಾರೆವು. ಬೆಳಗಾಗೆದ್ದು ನೋಡಿದರೆ, ಕನಸಲ್ಲಿ ಕಂಡವರೇ ನಿಜಕ್ಕೂ ಎದುರಾಗುತ್ತಿರುತ್ತಾರೆ. ಕನಸು ತನ್ನ ರೋಮಾಂಚ, ಬಣ್ಣ ಮತ್ತು ಬೆರಗು ಕಳಕೊಂಡು ವಾಸ್ತವದ ಥರ ಮಬ್ಬಾದಂತಿದೆ.

ನಾವು ಕನಸು ಕಾಣುವ ವಾಸ್ತವಾದಿಗಳಾ, ವಾಸ್ತವದಲ್ಲಿರುವ ಕನಸುಗಾರರಾ?

 

‍ಲೇಖಕರು G

22 October, 2012

3 Comments

  1. D,Ravi Varma

    ಧಾವಿಸುವುದಾದರೂ ಎಲ್ಲಿಗೆ? ಕನಸಿನಿಂದ ಹೊರಬೀಳಲಾರೆವು. ಕನಸನ್ನು ವಿಸ್ತರಿಸಲಾರೆವು. ಬೆಳಗಾಗೆದ್ದು ನೋಡಿದರೆ, ಕನಸಲ್ಲಿ ಕಂಡವರೇ ನಿಜಕ್ಕೂ ಎದುರಾಗುತ್ತಿರುತ್ತಾರೆ. ಕನಸು ತನ್ನ ರೋಮಾಂಚ, ಬಣ್ಣ ಮತ್ತು ಬೆರಗು ಕಳಕೊಂಡು ವಾಸ್ತವದ ಥರ ಮಬ್ಬಾದಂತಿದೆ.
    ನಾವು ಕನಸು ಕಾಣುವ ವಾಸ್ತವಾದಿಗಳಾ, ವಾಸ್ತವದಲ್ಲಿರುವ ಕನಸುಗಾರರಾ?

    jogi nimma ii write up ideyalla ide nannannu tumbaa kaadodu….

  2. Manjunayak

    Naalkane aayama?…nice sir

  3. sandhya

    “ನಾವು ಕನಸು ಕಾಣುವ ವಾಸ್ತವಾದಿಗಳಾ, ವಾಸ್ತವದಲ್ಲಿರುವ ಕನಸುಗಾರರಾ? “….ಈ ಸಾಲು ಓದಿ…ನಾನು ಕಳೆದುಹೋದೆ….ತುಂಬಾ ಯೋಚನೆ ಮಾಡೋ ಹಾಗೆ ಮಾಡಿತು!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading