ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ: ಸೂರಿ ಭಾವಾಂತರ ಮಾಡಿದ ದಾರಿಯೊ ಫೋ

ಆತನಿಗೆ ನೊಬೆಲ್ ಬಹುಮಾನ ಬರುತ್ತೆ. ಅವನಿಗೆ ಕೊಟ್ಟಿದ್ದರ ಬಗ್ಗೆ ಸಾಕಷ್ಟು ಗಲಾಟೆಯೂ ಆಗುತ್ತೆ. ಅವೆಲ್ಲದರ ನಡುವೆಯೇ ಪ್ರಶಸ್ತಿ ಪಡೆಯಲು ಬರುವ ಆತ ಅಲ್ಲಿದ್ದ ಸಭಿಕರ ಕೈಗೆ ಇಪ್ಪತ್ತೈದು ಪುಟಗಳ ಭಾಷಣ ಕೊಡುತ್ತಾನೆ. ಅದರ ತುಂಬ ಮಾತು, ಚಿತ್ರ, ರೇಖಾಚಿತ್ರ, ತನ್ನನ್ನು ಹೀಗಳೆದ ವಿಮರ್ಶಕರ ಕುರಿತು ವ್ಯಂಗ್ಯ. ಕವಿಗಳೂ ಚಿಂತಕರೂ ಕಂಗಾಲಾಗಿದ್ದಾರೆ. ಒಬ್ಬ ಕೋಡಂಗಿಗೆ ನೀವು ಪ್ರಶಸ್ತಿ ಕೊಟ್ಟುಬಿಟ್ಟಿದ್ದೀರಿ. ಇಂಥದ್ದೆಲ್ಲಾದರೂ ನಡೆಯೋದಕ್ಕೆ ಸಾಧ್ಯವೆ. ಪ್ರಶಸ್ತಿಗಳಿರುವುದು ಗಂಭೀರರಿಗೆ. ಆದರೆ ಗಂಭೀರವಾಗಿ ಮಾತಾಡುವವರಿಗೆ ಧೈರ್ಯ ಕಡಿಮೆ. ಅವರು ಕಟುವಾಗುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಮೆದುವಾಗುತ್ತಾ ಹೋಗುತ್ತಾರೆ. ರಾಜಿ ಮಾಡಿಕೊಳ್ಳುತ್ತಾರೆ. ಪೊಲಿಟಿಕಲ್ ಕರೆಕ್ಟ್ ಅನ್ನಿಸಿಕೊಳ್ಳುವುದಕ್ಕೆ ಹೋಗಿ ಕೊನೆಗೆ ಏನನ್ನೂ ಹೇಳಿರುವುದಿಲ್ಲ. ಒಬ್ಬ ಕೋಡಂಗಿ ಮಾತ್ರ ಸತ್ಯ ಹೇಳಬಲ್ಲ. ಅವನು ಹೇಳಿದ್ದನ್ನು ಅರಗಿಸಿಕೊಳ್ಳಲಾರದವರು ನಕ್ಕು ಅದರ ಪರಿಣಾಮದಿಂದ ಪಾರಾಗಬಹುದು. ಉಳಿದವರು ಅದೊಂದು ಹುಚ್ಚಾಟ ಎಂದು ಹೇಳಿ ತಪ್ಪಿಸಿಕೊಳ್ಳಬಹುದು.

ಹಾಗಂತ ಮಾತಾಡಿದವರು ದಾರಿಯೋ ಫೋ. ಇಟೆಲಿಯ ನಾಟಕಕಾರ, ಕಲಾವಿದ, ನಟ, ನಿರ್ದೇಶಕ. ಅವನು ಏನೇನು ಅನ್ನುವುದನ್ನು ಪಟ್ಟಿ ಮಾಡುತ್ತಾ ಹೋದರೆ ಅದು ಬೆಳೆಯುತ್ತಲೇ ಹೋಗುತ್ತದೆ. ಅವನನ್ನು ಸಂದರ್ಶಿಸಿದ ಪತ್ರಕರ್ತನೊಬ್ಬ ತಾನು ಅಷ್ಟು ಎತ್ತರದ ಇಟಾಲಿಯನ್ ಮನುಷ್ಯನನ್ನು ಅದುವರೆಗೆ ನೋಡೇ ಇರಲಿಲ್ಲ ಅನ್ನುತ್ತಾನೆ. ಆರಡಿ ಎತ್ತರದ ದಾರಿಯೋ ಫೋ, ತಮಾಷೆ ಮಾಡುತ್ತಾನೆ ಅನ್ನುವುದನ್ನು ನಂಬುವುದಕ್ಕೇ ಆಗುತ್ತಿರಲಿಲ್ಲ. ನೋಡುವುದಕ್ಕೆ ಘನಗಾಂಭೀರ್ಯದ ವ್ಯಕ್ತಿಯಂತೆ ಕಾಣುತ್ತಿದ್ದವನು, ಮಾತಿಗೆ ಕುಳಿತರೆ ಮಾತು ಮಾತಿಗೂ ನಗಿಸುತ್ತಿದ್ದ. ಅವನ ನಾಟಕಗಳ ಬಗ್ಗೆ ಅಮೆರಿಕಾಕ್ಕೆ ಭಯವಿತ್ತು. 1984ರ ತನಕ ಅವನಿಗೆ ಅಮೆರಿಕಾಕ್ಕೆ ಕಾಲಿಡುವುದಕ್ಕೆ ವೀಸಾ ಸಿಕ್ಕಿರಲಿಲ್ಲ. ಐಡಿಯಾಲಾಜಿಕಲ್ ಎಕ್ಸ್‌ಕ್ಲೂಷನ್ ಎಂಬ ವಿಚಿತ್ರ ಕಾರಣ ಕೊಟ್ಟು ಅವನು ಅಮೆರಿಕಾದೊಳಗೆ ಕಾಲಿಡದಂತೆ ತಡೆಯಲಾಗಿತ್ತು. ಕೊನೆಗೂ ಅವನಿಗೆ ಅಮೆರಿಕಾಕ್ಕೆ ಪ್ರವೇಶಿಸುವ ಅವಕಾಶ ಮಾಡಿಕೊಟ್ಟದ್ದು ರೇಗನ್.

ನೊಬೆಲ್ ಪ್ರಶಸ್ತಿ ಪಡೆಯಲು ಸ್ವೀಡಿಶ್ ಅಕಾಡೆಮಿಗೆ ಬರುವ ದಾರಿಯೋ ಫೋ ಮಾತಾಡುತ್ತಾ ಹೋಗುತ್ತಾನೆ. ಒಂಚೂರು ವಿಷಾದ, ತುಂಬ ತಮಾಷೆ, ಕಂಗೆಡಿಸುವಂಥ ವ್ಯಂಗ್ಯ, ಹಳೆಯ ಸಿಟ್ಟು ಎಲ್ಲವೂ ಬೆರೆತಂತಿರುವ ಅವನ ಮಾತುಗಳೇ ಅವನನ್ನು ನಮ್ಮ ಮುಂದೆ ಕಡೆದಿಡುತ್ತವೆ. ಅವನ ಮಾತುಗಳನ್ನು ಕೇಳಿ:

ಒಬ್ಬ ಕೋಡಂಗಿಗೆ ನೊಬೆಲ್ ಪ್ರೈಜ್ ಕೊಡೋ ಧೈರ್ಯ ಮಾಡಿದ್ದಕ್ಕೆ ಸ್ವೀಡಿಷ್ ಅಕಾಡೆಮಿಗೊಂದು ಅತ್ಯುನ್ನತ ಪ್ರಶಸ್ತಿ ಕೊಡಲೇಬೇಕು. ನಿಜಕ್ಕೂ ಇದು ಧೈರ್ಯದ ಮಾತೇ. ಯಾರನ್ನೇ ಆದ್ರೂ ಕೆರಳಿಸಬಲ್ಲ ಭಂಡ ಧೈರ್ಯ. ಇದು ಎಬ್ಬಿಸಿದ ಹುಯಿಲಿನ ಬಗ್ಗೆ ಮಾತಾಡಿದ್ದು ಸಾಕು. ಮುನ್ನೆಲೆಯಲ್ಲಿರುವ ಕವಿಗಳನ್ನೂ ಚಿಂತಕರನ್ನೂ ಇದು ಕಂಗೆಡಿಸಿದೆ. ಅವರಿಗೆ ಹೀಗಾಗಬಹುದೆಂಬ ಕಲ್ಪನೆಯೂ ಇರಲಿಲ್ಲ. ಬೆಟ್ಟದ ತಪ್ಪಲಲ್ಲಿ ಸುಖವಾಗಿ ಬದುಕುತ್ತಿರುವವರಿಗೆ, ಗುಡ್ಡಗಾಡುಗಳಲ್ಲಿ ಕಷ್ಟಪಡುತ್ತಿರುವವರ ಕಲ್ಪನೆಯೂ ಇರುವುದಿಲ್ಲ.

ಈ ಕವಿವರ್ಯರೂ ಕವಿಪುಂಗವರೂ ಈ ಚಂಡಮಾರುತಕ್ಕೆ ಸಿಕ್ಕು ತರಗೆಲೆಯಂತೆ ಹಾರಿಹೋಗಿ, ಕಂಗಾಲಾಗಿ ಬಿದ್ದಿದ್ದಾರೆ. ನನಗೆ ಬಂದ ವರದಿಗಳ ಪ್ರಕಾರ ಅನೇಕ ಕವಿಗಳ ಕರುಳು ಸುಟ್ಟುಹೋಗಿದೆ, ನರ ಕಿತ್ತುಹೋಗಿದೆ. ಇನ್ನು ಕೆಲವೇ ದಿನಗಳಲ್ಲಿ ಇಟೆಲಿಯ ಯಾವ ಔಷಧಿಯಂಗಡಿಯಲ್ಲೂ ಒತ್ತಡ ಶಮನ ಮಾಡುವ ಔಷಧಿ ಸಿಗದಂಥ ಪರಿಸ್ಥಿತಿ ನಿರ್ಮಾಣವಾಗಲಿದೆ.

ನೀವೂ ಕೊಂಚ ಅತಿ ಮಾಡಿದಿರಿ. ಒಂದು ವರ್ಷ ಕರಿಯನಿಗೆ ಪ್ರಶಸ್ತಿ ಕೊಟ್ಟಿರಿ. ಮತ್ತೊಂದು ವರ್ಷ ಒಬ್ಬ ಜ್ಯೂ ಪ್ರಶಸ್ತಿ ಪಡಕೊಂಡ. ಈ ವರ್ಷ ಅದು ಕೋಡಂಗಿಯ ಪಾಲಾಗಿದೆ. ನಿಮಗೆಲ್ಲ ತಲೆಕೆಟ್ಟಿದೆ ಸ್ವಾಮಿ. ಎಲ್ಲರೂ ಸೇರಿ ಒಂದು ತೀರ್ಮಾನಕ್ಕಂತೂ ಬಂದಿದ್ದಾರೆ. ಕೋಡಂಗಿಗಳನ್ನು ಹಸಿಹಸಿಯಾಗಿ ಸುಡಬೇಕು, ಅದೂ ಹದವಾದ ಬೆಂಕಿಯಲ್ಲಿ. ಇಲ್ಲದಿದ್ದರೆ ಉಳಿಗಾಲ ಇಲ್ಲ. ಹಾಗಂತ ಪುರೋಹಿತರೂ, ಧರ್ಮಗುರುಗಳೂ, ಮಹಾಕವಿಗಳೂ, ಸಜ್ಜನರೂ ತೀರ್ಮಾನಕ್ಕೆ ಬಂದು ಬಿಟ್ಟಿದ್ದಾರೆ.

ಅತ್ತ ನೋಡಿದರೆ ನನ್ನ ಬಳಗ ಖುಷಿಯಾಗಿದೆ. ಒಳ್ಳೆಯ ಆಯ್ಕೆ ಅಂತ ಮೆಚ್ಚುವವರೂ ಇದ್ದಾರೆ. ಈ ಕತೆಗಾರರು, ಕೋಡಂಗಿಗಳು, ಹಾಸ್ಯಗಾರರು ನಿಮಗೆ ಧನ್ಯವಾದ ಸಮರ್ಪಿಸುತ್ತಿದ್ದಾರೆ. ಹೀಗೆ ಪರ ವಿರೋಧದ ನಡುವೆ ನಾವು ನಿಂತಿದ್ದೇವೆ.

ಇದನ್ನೆಲ್ಲ ಮಾತಾಡುವ ನಾನು ನನ್ನೂರಿನ ಬಗ್ಗೆ ಹೇಳೋದನ್ನು ಮರೀಬಾರದು. ಅದೊಂದು ಸಡಗರಗಳ ಪುಟ್ಟ ಊರು. ಅಲ್ಲಿ ಕತೆ ಹೇಳುವವರಿದ್ದರು. ಉತ್ಕೃಷ್ಟವಾದ ಗಾಜಿನ ಕೆಲಸ ಮಾಡುವವರಿದ್ದರು. ಅವರು ಕೆಲಸ ಮಾಡುತ್ತಲೇ ಕೆಲಸ ಕಲಿಸುತ್ತಲೇ ಕತೆ ಹೇಳುತ್ತಿದ್ದರು. ನಗಿಸುತ್ತಾ, ನಗುತ್ತಾ, ನಗುವೆಂಬುದು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡು ನಮ್ಮನ್ನು ಕಂಗೆಡಿಸುತ್ತಿತ್ತು. ಕೆಲವೊಮ್ಮೆ ಅದು ಪ್ರತಿಭಟನೆಯಂತೆಯೂ ಕೇಳಿಸುತ್ತಿತ್ತು. ಅದರಲ್ಲೊಂದು ಕತೆ ಈಗಲೂ ನೆನಪಿದೆ.

ಒಂದೊನೊಂದು ಕಾಲದಲ್ಲಿ ಮಹಾಸರೋವರದ ಮಧ್ಯೆ ಎದ್ದು ನಿಂತ ಕಲ್ಲುಬಂಡೆಯ ನಡುವೆ ಪುಟ್ಟ ನಗರವೊಂದಿತ್ತು ಎಂದು ಒಬ್ಬ ಗಾಜು ಮಾಡುವನನು ಕತೆ ಹೇಳುತ್ತಿದ್ದ. ಬಂಡೆಗಲ್ಲಿನ ಒಂದು ಬದಿಯಲ್ಲಿ ಅಂಟಿಯೂ ಅಂಟದಂತೆ ಕೂತಿದ್ದ ಆ ನಗರ ದಿನೇದಿನೇ ಒಂದು ದಿಕ್ಕಿಗೆ ವಾಲುತ್ತಿತ್ತು. ಹೀಗೆ ವಾಲುತ್ತಾ ಒಂದು ದಿನ ಅದು ಕಣ್ಮರೆಯಾಯಿತು.

ಅದು ಹಾಗೆ ಕಣ್ಮರೆಯಾಗುವ ಮೊದಲೇ ಅನೇಕರಿಗೆ ಅದರ ಸೂಚನೆ ಸಿಕ್ಕಿತ್ತು. ದಡದಲ್ಲಿದ್ದವರು ನಿಮ್ಮೂರು ಸರೋವರದಲ್ಲಿ ಸರಿಯುತ್ತಿದೆ ಎಂದು ಅನೇಕ ಸಾರಿ ಹೇಳಿ ನೋಡಿದ್ದರು. ಆದರೆ ಯಾರೂ ಅವರ ಮಾತು ಕೇಳಿಸಿಕೊಂಡಿರಲಿಲ್ಲ. ಹಾಗೆ ಹೇಳಿದಾಗೆಲ್ಲ ಅದೆಲ್ಲ ನಿಮ್ಮ ಭ್ರಮೆ. ಅಂಥದ್ದೇನೂ ಆಗುತ್ತಿಲ್ಲ. ನಾವು ಆರಾಮಾಗಿದ್ದೇವೆ ಎಂದು ಹೇಳುತ್ತಾ ರುಚುರುಚಿಯಾದ ಅಡುಗೆ ಮಾಡಿಕೊಂಡು ತಿನ್ನುತ್ತಾ, ಆಹಾರ, ನಿದ್ದೆ, ಮೈಥುನಗಳಲ್ಲಿ ನಿರತವಾಗಿ ಮಕ್ಕಳು ಮರಿ ಮಾಡಿಕೊಂಡು ಹಾಯಾಗಿದ್ದರು. ಆಗೊಮ್ಮೆ ಈಗೊಮ್ಮೆ ನೆಲ ಅಲ್ಲಾಡಿದಂತೆ ಕಂಡರೂ ಅದು ಭೂಮಿ ಸ್ಥಿರವಾಗುತ್ತಿರುವ ಸೂಚನೆ ಎಂದೇ ಭಾವಿಸಿದರು. ಮೊಣಕಾಲಿನ ತನಕ ನೀರು ಬಂದರೂ ಅದು ಸಹಜ ಅಂದುಕೊಂಡರು. ಕೊನೆಗೊಂದು ದಿನ ಸರೋವರ ಇಡೀ ನಗರವನ್ನು ನುಂಗಿಬಿಟ್ಟಿತು.

ಅಷ್ಟಕ್ಕೇ ಅದು ಮುಗಿಯಲಿಲ್ಲ. ಈಗಲೂ ಆ ಸರೋವರದ ಬಳಿಗೆ ಹೋಗಿ ಬಗ್ಗಿ ನೋಡಿದರೆ ನಗರ ಕಾಣಿಸುತ್ತದೆ. ಅಲ್ಲಿನ ಜನ ಆರಾಮಾಗಿಯೇ ಓಡಾಡಿಕೊಂಡಿದ್ದಾರೆ. ತಮ್ಮ ಕಣ್ಣೆದುರು ಮೀನು ಓಡಾಡಿದಾಗ, ಈ ದರಿದ್ರ ಮೀನುಗಳು ಗಾಳಿಯಲ್ಲಿ ಈಜಾಡುವುದನ್ನು ಕಲಿತಿವೆ ಎಂದು ಗೊಣಗುತ್ತಾ ಅವನ್ನು ಪಕ್ಕಕ್ಕೆ ಸರಿಸಿಕೊಂಡು ಓಡಾಡುತ್ತಾರೆ. ಅಂಥದ್ದೇನೂ ಆಗಿಲ್ಲ ಅನ್ನುವ ನೆಮ್ಮದಿಯಲ್ಲಿ ಅವರು ಜೀವಿಸುತ್ತಿದ್ದಾರೆ. ದಿನೇ ದಿನೇ ನಗರ ಸರೋವರದ ತಳಕ್ಕೆ ಚಲಿಸುತ್ತಲೇ ಇದೆ. ಜನ ಇವತ್ತು ನಿನ್ನೆಗಿಂತ ಒಂಚೂರು ಚಳಿ ಜಾಸ್ತಿ, ಒಂದಿಷ್ಟು ಥಂಡಿ ಹೆಚ್ಚು, ಅಯ್ಯೋ ಇದ್ದಿದ್ದೇ ಬಿಡಿ, ಅದಕ್ಕೆಲ್ಲ ಹೆದರಿಕೊಂಡಿರೋಕೆ ಆಗುತ್ತಾ ಎಂದು ಮಾತಾಡಿಕೊಳ್ಳುತ್ತಾ ಹಾಯಾಗಿದ್ದಾರೆ.

ಇಂಥ ಕತೆಗಳನ್ನು ಕೊಟ್ಟವರು ನಮ್ಮೂರಿನ ಜನ. ಈ ಕತೆ ನಮ್ಮನ್ನು ಕದಡುತ್ತದೆ. ಹಾಗೇ ಇನ್ನೇನನ್ನೋ ಹೇಳುವುದಕ್ಕೆ ಯತ್ನಿಸುತ್ತದೆ. ಅಂಥ ಕತೆಗಾರರ ಶಿಷ್ಯನೊಬ್ಬನಿಗೆ ಇವತ್ತು ನೀವು ಬಹುಮಾನ ಕೊಟ್ಟಿದ್ದೀರಿ.

*****

ಸ್ವಲ್ಪ ದಿನದ ಹಿಂದೆ ಒಬ್ಬ ಯುವ ಪ್ರತಿಭಾವಂತ ನಟ ನನ್ನ ಹತ್ರ ಬಂದಿದ್ದ. ನಿಮ್ಮ ಶಕ್ತಿ, ಉತ್ಸಾಹಗಳೆಲ್ಲ ಯುವಕರ ಮೇಲೆ ವ್ಯಯವಾಗಬೇಕು ಅಂದ. ಅವರಿಗೆ ದೀಕ್ಷೆ ಕೊಡಬೇಕು. ನಿಮ್ಮ ಪರಿಣತಿಯನ್ನು ಅವರಿಗೆ ಹಂಚಬೇಕು. ಅನುಭವಗಳಿಂದ ಯುವಕರಿಗೆ ಲಾಭವಾಗುವಂತೆ ನೋಡ್ಕೋಬೇಕು ಅಂತ ಹೇಳಿದ. ನಾನು ನನ್ನ ಹೆಂಡ್ತಿ ಫ್ರಾಂಕಾಳ ಮುಖ ನೋಡಿದೆ. ಅವನು ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಆದರೆ ಇದನ್ನು ಅವನಿಗೆ ಹೇಳೋದು ಹೇಗೆ, ಕಲಿಸೋದು ಹೇಗೆ. ಹಾಗೆ ಕಲಿಸುತ್ತಾ ಹೋದರೆ ನಾವೆಲ್ಲಿಗೆ ತಲುಪ್ತೇವೆ.

ಇತ್ತೀಚೆಗೆ ನಾವೊಂದಷ್ಟು ಯೂನಿವರ್ಸಿಟಿಗಳಿಗೆ ಹೋಗಿದ್ವಿ. ಅಲ್ಲಿನ ಮಕ್ಕಳ ಜೊತೆ ಮಾತಾಡ್ತಾ ಅವರಿಗೊಂದಷ್ಟು ಪ್ರಸಂಗಗಳನ್ನು ಹೇಳ್ತಾ ಇದ್ದೆ. ಇತ್ತೀಚೆಗೆ ಒಂದೇ ರಾತ್ರಿಯಲ್ಲಿ ಮತಾಂಧರು ಮೂವತ್ತೇಳು ಮಂದಿ ಕಲಾವಿದರನ್ನು ಸುಟ್ಟು ಕೊಂದ ಘಟನೆಯನ್ನು ಅವರಿಗೆ ಹೇಳಿದೆ. ಆಶ್ಟರ್ಯ ಅಂದ್ರೆ ಅವರಲ್ಲಿ ಯಾರೊಬ್ಬರಿಗೂ ಅದು ಗೊತ್ತೇ ಇರಲಿಲ್ಲ. ಸಮೀಪದಲ್ಲೇ ಇರುವ ಟರ್ಕಿಯಲ್ಲಿ ನಡೆದ ಘಟನೆಯ ಬಗ್ಗೆ ಅವರಿಗೆ ಅವರ ಅಧ್ಯಾಪಕರೂ ಹೇಳಿರಲಿಲ್ಲ. ಅವರೂ ಓದಿಕೊಂಡಿರಲಿಲ್ಲ. ನಾನು ಅದನ್ನು ಹೇಳಿದಾಗ ಅವರೆಲ್ಲ ಗಾಬರಿಯಿಂದ ಕೇಳಿಸಿಕೊಂಡರು.

ಎಲ್ಲರೂ ಟೀವಿ ಮತ್ತು ಸಿನಿಮಾದಿಂದ ಆಕರ್ಷಿತರಾಗಿದ್ದಾರೆ. ಅವು ತಮಗೆ ಬೇಕಾದ್ದನ್ನು ಕೊಡುತ್ತೆ ಅಂದುಕೊಂಡಿದ್ದಾರೆ. ಟೀವಿಯಲ್ಲಿ ಥೇಟರಿನಲ್ಲಿ ಬರೋ ಸಿನಿಮಾಗಳಾದರೂ ಎಂಥವು. ಹತ್ತು ನಿಮಿಷಗಳಲ್ಲಿ ಮೂರು ಬಲಾತ್ಕಾರ, ಎರಡು ಕೊಲೆ, ಒಂದು ಹೊಡೆದಾಟ, ಹತ್ತೋ ಇಪ್ಪತ್ತೋ ಕಾರುಗಳು ಒಂದರ ಹಿಂದೊಂದು ಬಿದ್ದು ಭಸ್ಮವಾಗುವ ಒಂದು ಚೇಸ್. ಅಷ್ಟೇ ಬದುಕು.

ಇಂಥ ಅನೇಕ ಪ್ರಸಂಗಗಳನ್ನು ನೋಡಿದ ನಂತರ ನಾವೊಂದು ತೀರ್ಮಾನಕ್ಕೆ ಬಂದಿದ್ದೇವೆ. ನಮ್ಮ ನಿರ್ಧಾರ ಬಲವಾಗಿದೆ. ನಮ್ಮ ಕರ್ತವ್ಯ ಇಷ್ಟೇ- ನಮ್ಮ ಕತೆಯನ್ನು ನಾವು ಹೇಳಬೇಕು. ಯುವಕರನ್ನು ಬಳಸಿಕೊಂಡು ಯುವಕರಿಗೆ ಹೇಳುತ್ತಾ ಹೋಗಬೇಕು. ಅವರಿಗೆ ನಾಟಕದ ಕಲೆ ಕಲಿಸುವುದು ಅಂದರೆ ಅಂಗಾಂಗಳನ್ನು ಹೇಗೆ ಬಳಸಬೇಕು, ಎಲ್ಲಿ ಉಸಿರು ಬಿಗಿಹಿಡಿಯಬೇಕು, ಎಲ್ಲಿ ದನಿಯನ್ನು ಏರಿಳಿಸಬೇಕು ಎನ್ನುವುದನ್ನು ಕಲಿಸುವುದಷ್ಟೇ ಅಲ್ಲ. ತಂತ್ರ ಮತ್ತು ಶೈಲಿಯನ್ನು ಕಲಿಸುವುದು ನಮ್ಮ ಉದ್ದೇಶ ಅಲ್ಲ. ನಮ್ಮ ಸುತ್ತ ಏನಾಗುತ್ತಿದೆ ಅನ್ನುವುದನ್ನು ಹೇಳಿಕೊಡಬೇಕು. ಹಾಗೆ ಮಾಡಿದಾಗ ನಾಳೆ ಅವರು ತಮ್ಮ ಕತೆಯನ್ನು ಹೇಳಬಲ್ಲ ಸಮರ್ಥರಾಗುತ್ತಾರೆ. ತನ್ನ ಕಾಲದ ಕುರಿತು ಹೇಳದ ಕತೆಯಾಗಲೀ, ನಾಟಕವಾಗಲೀ, ಕಲೆಯಾಗಲೀ ಸಮಕಾಲೀನ ಅಲ್ಲ.

****

ದಾರಿಯೋ ಫೊ ತನ್ನೂರಲ್ಲಿ ನಾಟಕ ಮಾಡಿಕೊಂಡಿರುವ ಹೊತ್ತಲ್ಲಿ ಪ್ರಶಸ್ತಿ ಘೋಷಣೆಯಾಗುತ್ತದೆ. ದಾರಿಯಲ್ಲಿ ಹೋಗಿ ಬರುವವರೆಲ್ಲ ಅವನನ್ನು ಮುತ್ತಿಕೊಳ್ಳುತ್ತಾರೆ. ಪತ್ರಕರ್ತರು ಅವನ ಮೇಲೆ ಮುಗಿಬೀಳುತ್ತಾರೆ. ವಿಚಿತ್ರ ತಲ್ಲಣದಲ್ಲಿ ಆತ ಪ್ರಶಸ್ತಿಯನ್ನು ತನ್ನ ಹೆಂಡತಿ ಫ್ರಾಂಕಾಳ ಜೊತೆ ಹಂಚಿಕೊಳ್ಳುತ್ತೇನೆ ಅನ್ನುತ್ತಾನೆ. ಅಲ್ಲಿಗೆ ಬಂದಿದ್ದ ಪತ್ರಕರ್ತನೊಬ್ಬ ಅವನ ಹೆಂಡತಿಯ ಹತ್ತಿರ ವಿಚಿತ್ರ ಪ್ರಶ್ನೆಯೊಂದನ್ನು ಕೇಳುತ್ತಾನೆ:

ನೊಬೆಲ್ ಪುರಸ್ಕೃತನ ಹೆಂಡತಿ ಅಂತ ಕರೆಸಿಕೊಳ್ಳೋದಕ್ಕೆ ಏನನ್ನಿಸುತ್ತೆ.. ಮನೆಯಲ್ಲೊಂದು ಸ್ಮಾರಕ ಇಟ್ಟುಕೊಳ್ಳುವುದಕ್ಕೆ ಹೆಮ್ಮೆ ಅನ್ನಿಸುತ್ತದಾ. ಅದಕ್ಕೆ ಆಕೆ ಉತ್ತರಿಸುತ್ತಾಳೆ: ನಂಗೇನೂ ಚಿಂತೆಯಿಲ್ಲ. ಅದೊಂದು ಕಷ್ಟ, ಅನಾನುಕೂಲ ಅಂತಾನೂ ನಾನು ಭಾವಿಸ್ತಿಲ್ಲ. ನನಗಂತೂ ಅದು ಅಭ್ಯಾಸ ಆಗಿಬಿಟ್ಟಿದೆ. ದಿನಾ ಬೆಳಗಾಗೆದ್ದು ವ್ಯಾಯಾಮ ಮಾಡ್ತೀನಿ. ಸ್ಮಾರಕಕ್ಕೆ ತನ್ನ ಪಾಣಿಪೀಠ ಆಗೋದು ಗೊತ್ತಿದೆ ನಂಗೆ.

****

ಹೀಗೆ ಮಾತಾಡುವ ದಾರಿಯೊ ಫೊ ಎಂಬತ್ತೈದರ ಹಣ್ಣು ಹಣ್ಣು ಮುದುಕ. ಮಿಲಾನ್-ನ ಮೇಯರ್ ಆಗಲು ಯತ್ನಿಸಿದಾಗ ಸೋತವನು. ಅವನ ಪತ್ನಿ ಸೆನೇಟರ್ ಆಗಿ ಆಯ್ಕೆಯಾಗಿದ್ದಳು. ಭ್ರಷ್ಚಾಚಾರ, ರಾಜಕೀಯ ಭ್ರಷ್ಟಾಚಾರ ಮತ್ತು ಯೋಜಿತ ಹತ್ಯೆಗಳ ಸುತ್ತ ಸುತ್ತುವ ನಾಟಕಗಳನ್ನು ಬರೆದ ದಾರಿಯೊ ಫೊ ರಾಜಕೀಯ ಪ್ರವೇಶಿಸಿದಾಗ ಏನು ಮಾಡುತ್ತಾನೆ ಎನ್ನುವ ಕುತೂಹಲ ಇತ್ತು. ಅದು ಆತನ ಇಳಿವಯಸ್ಸಿನ ವ್ಯಾಮೋಹದ ಹಾಗೆ ಕಾಣಿಸಿತೇ ಹೊರತು, ಅಲ್ಲಿ ಕ್ರಿಯಾಶೀಲವಾಗುವ ವಯಸ್ಸನ್ನು ದಾರಿಯೊ ಫೋ ದಾಟಿಬಿಟ್ಟಿದ್ದ.

ಆತಂಕವಾದಿಯ ಆಕಸ್ಮಿಕ ಸಾವು ನೈಜ ಘಟನೆಯೊಂದನ್ನು ಆಧರಿಸಿದ ನಾಟಕ. ಇಟೆಲಿಯ ಬ್ಯಾಂಕೊಂದಕ್ಕೆ ಬಾಂಬು ಹಾಕಿದ ಆರೋಪಕ್ಕೆ ಗುರಿಯಾದ ವ್ಯಕ್ತಿಯನ್ನು ಪೊಲೀಸರು ನಾಲ್ಕನೇ ಮಹಡಿಯಿಂದ ಕೆಳಗೆಸೆದು ಸಾಯಿಸಿರುತ್ತಾರೆ. ಆ ಘಟನೆಯನ್ನು ಆಧಾರವಾಗಿಟ್ಟುಕೊಂಡು ಬರೆದ Accidental Death of An anarchist ನ್ಯೂಯಾರ್ಕಿನ ಬ್ರಾಡ್ವೇಯಲ್ಲಿ ಪ್ರದರ್ಶನಗೊಂಡಾಗ ಅದರ ಸಂಭಾಷಣೆಗಳನ್ನೆಲ್ಲ ತಿದ್ದಿ ಘಟನೆಗಳನ್ನು ಬದಲಾಯಿಸಿ ಇಡೀ ನಾಟಕವನ್ನು ವಿರೂಪಗೊಳಿಸಿ ಅಮೆರಿಕನ್ನರ ಮನಸ್ಥಿತಿಗೆ ಹೊಂದಿಕೊಳ್ಳುವಂತೆ ಮಾಡಿದ್ದರಂತೆ.

ಕೊನೆ ಪ್ಯಾರ :

ದಶಕಗಳ ಹಿಂದೆ ಈ ನಾಟಕವನ್ನು ಸಂಕೇತ್ ರಂಗದ ಮೇಲೆ ತಂದಿತ್ತು. ಸೂರಿ ಅನುವಾದದಲ್ಲಿ ಕನ್ನಡದ್ದೇ ಆಗಿರುವ ಈ ನಾಟಕದ ಬಿಡುಗಡೆಗೆ ಮೂವರು ರಂಗಕರ್ಮಿಗಳೇ ಬರುತ್ತಿದ್ದಾರೆ. ಕಂಬಾರ, ಅರುಂಧತಿನಾಗ್ ಮತ್ತು ಟಿಎನ್ ಸೀತಾರಾಮ್ ತ್ರಿವೇಣಿ ಸಂಗಮದಲ್ಲಿ ಈ ಭಾನುವಾರ, 17 ಮಾರ್ಚ್ 2011ರ ಬೆಳಗ್ಗೆ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಆತಂಕವಾದಿ ಮತ್ತು ನೀನಾನಾದ್ರೆ ನಾನೀನೇನಾ ನಾಟಕಗಳ ರಂಗಾರ್ಪಣೆ.

‍ಲೇಖಕರು G

16 July, 2011

3 Comments

  1. Badarinath Palavalli

    ದಾರಿಯೊ ಪೋನ ವ್ಯಕ್ತಿ ಚಿತ್ರಣ ವಿವರವಾಗಿ ಮೂಡಿಬಂದಿದೆ.
    ಸೂರಿ ಸಾರ್ ಧೈತ್ಯ ಪ್ರತಿಭೆ, ನಾನು ಪ್ರದರ್ಶನಕ್ಕೆ ಹಾಜರಿರುತ್ತೇನೆ ಸಾರ್.

  2. Vivek

    Strange writer thanks for info

  3. manjunayaka

    dario po na oorina kathe tumba ista aytu sir……..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading