ಇಂಗ್ಲಿಷಿನಲ್ಲಿ ಎಂಥ ತರಹೇವಾರಿ ಪುಸ್ತಕಗಳು ಬರುತ್ತಿದ್ದವು ಎಂದು ನೋಡುತ್ತಾ ಬೆರಗಾಗುತ್ತೇನೆ. ಹಳೆ ಪುಸ್ತಕದಂಗಡಿಯಿಂದ ಕೊಂಡುಕೊಂಡು ಬಂದ ಪುಸ್ತಕಗಳನ್ನೆಲ್ಲ ನಿನ್ನೆ ತಿರುವಿಹಾಕುತ್ತಾ ಕೂತಿದ್ದೆ. ದಪ್ಪದ ಪುಸ್ತಕವೊಂದು ಗಮನ ಸೆಳೆಯಿತು. ಅದರ ಹೆಸರು ವರ್ಕ್. ಅದರಲ್ಲಿ ಸುಮಾರು ಮುನ್ನೂರು ಮುನ್ನೂರೈವತ್ತು ಲೇಖಕರು ಬರೆದ ಕಾವ್ಯ, ಪ್ರಬಂಧ, ಕತೆ, ಕಾದಂಬರಿಯ ತುಣುಕು ಇದೆ. ಅವೆಲ್ಲವೂ `ವರ್ಕ್’ಗೆ ಸಂಬಂಧಿಸಿದ್ದು. ವರ್ಕ್ ಅಂದರೆ ವೃತ್ತಿ, ಉದ್ಯೋಗ ಮತ್ತು ವೃತ್ತಿಗೆ ಸಂಬಂಧಿಸಿದ್ದಲ್ಲ. ಕಾಯಕ, ಕಾಯಕದ ಸುಖ, ಕಾಯಕದಿಂದ ಸಾಧಿಸಿದ್ದು ಇವನ್ನೆಲ್ಲ ಕವಿಯೂ ಕಾದಂಬರಿಕಾರನೂ ಹೇಗೆ ನೋಡಿದ್ದಾನೆ ಅನ್ನುವುದೇ ಕುತೂಹಲಕಾರಿ.
ತುಂಬ ಹಿಂದೆ ನಾನು ಜೋಪಾನವಾಗಿಟ್ಟುಕೊಂಡಿದ್ದ ಪುಸ್ತಕವೊಂದಕ್ಕಾಗಿ ಹುಡುಕಿದೆ. ಯಾವುದೋ ಆಫ್ರಿಕನ್ ದೇಶದಿಂದ ಇಂಗ್ಲೆಂಡಿಗೆ ವಲಸೆ ಹೋಗಿ ಅಲ್ಲಿ ಬದುಕು ಕಟ್ಟಿಕೊಂಡವನ ಕತೆ ಅದು. ಅವನು ಅಲ್ಲಿಗೆ ಹೋಗಿ ನಿರಾಶ್ರಿತರ ಜೊತೆ ಸೇರಿಕೊಂಡು ನಾನೊಬ್ಬ ನಾಟಕಕಾರ ಎಂದು ಪರಿಚಯಿಸಿಕೊಂಡು ತನ್ನ ಮೈಬಣ್ಣದಿಂದಾಗಿ ಹೊರಗಿನವನೇ ಆಗಿ ಉಳಿದು, ಕ್ರಮೇಣ ನೀನು ಯಾವ ದೇಶದವನು ಎಂದು ಕೇಳಿದಾಗ ಇಂಗ್ಲೆಂಡಿನವನು ಎನ್ನುತ್ತಾನೆ. ತಾನು ಅತ್ಯಂತ ದ್ವೇಷಿಸುತ್ತಿದ್ದ ದೇಶದವನು ತಾನೆಂದು ಹೇಳಿಕೊಳ್ಳುವ ಹೊತ್ತಿಗೆ ಅವನಿಗೆ ದ್ವೇಷ ನೆನಪಾಗುವುದಿಲ್ಲ. ದ್ವೇಷದ ಜೊತೆಗೇ ಇರಬಹುದಾದ ಆಶೆ, ಹಂಬಲ ಮತ್ತು ವ್ಯಾಮೋಹವನ್ನು ತೋರಿಸುವ ಈ ಆತ್ಮಚರಿತ್ರೆಗಾಗಿ ಮತ್ತೆ ಹುಡುಕುತ್ತಿದ್ದೇನೆ. ಅದು ನಾಪತ್ತೆಯಾಗಿದೆ. ಆ ಪುಸ್ತಕದ ಹೆಸರು Remade in England.
Remade in Bangalore ಎನ್ನಬಹುದಾ. ಒಂದು ಕಾಲದಲ್ಲಿ ಬೆಂಗಳೂರನ್ನು ದ್ವೇಷಿಸುತ್ತಿದ್ದವರೆಲ್ಲ ಕ್ರಮೇಣ ಬೆಂಗಳೂರು ಸೇರಿಕೊಳ್ಳುತ್ತಾರೆ. ದ್ವೇಷಿಸುತ್ತಲೆ ಬೆಂಗಳೂರಲ್ಲಿ ಬದುಕುತ್ತಾರೆ.ಒಂದು ಸಣ್ಣ ಅವಕಾಶ ಸಿಕ್ಕರೆ ಮತ್ತೆ ಹಿರಿಯೂರಿಗೋ ಬಳ್ಳಾರಿಗೋ ಕೊಟ್ಟೂರಿಗೋ ಓಡಿಹೋಗುತ್ತೇನೆ ಅನ್ನುವವರು ಕೂಡ ಅಂಥ ಅವಕಾಶ ಸಿಗದಿರಲಿ ಎಂದು ಹಾರೈಸುತ್ತಾರೆ. ನಗರದ ಆಕರ್ಷಣೆಯೇ ಅಂಥದ್ದು. ಹತ್ತು ವರುಷದ ಮಹಾನಗರದಲ್ಲಿ ಇದ್ದವನು ಮತ್ತೆ ಹಳ್ಳಿಗೆ ಮರಳಿದರೆ, ಕಾಲ ಸ್ತಬ್ಧವಾಗಿದೆ ಅನ್ನಿಸುತ್ತದೆ. ನಿನ್ನೆಗಳಿಗೂ ನಾಳೆಗಳಿಗೂ ವ್ಯತ್ಯಾಸವೇ ಇಲ್ಲ ಎಂದು ಗಾಬರಿಯಾಗುತ್ತದೆ. ಹತ್ತು ದಿನ ಊರಲ್ಲಿರುತ್ತೇನೆ ಎಂದು ನಮ್ಮೂರಿಗೆ ಮರಳಿದ ಅನೇಕರು, ಐದೇ ದಿನಕ್ಕೆ ವಾಪಸ್ಸು ಬಂದದ್ದನ್ನು ನಾನು ನೋಡಿದ್ದೇನೆ.
ಮಹಾನಗರ ಎಲ್ಲರನ್ನೂ ಒಂದೇ ಅರೆಯಲ್ಲಿ ಹಾಕಿ ಅರೆಯುತ್ತಾ ಹೋಗುತ್ತದೆ. ಪದ್ಮುಂಜ ಎಂಬ ಪುಟ್ಟ ಊರಿನಲ್ಲಿ ಹೊಟೆಲು ನಡೆಸುತ್ತಿದ್ದ ದಿನಗಳಲ್ಲಿ ನನ್ನ ಹೊಟೆಲಿನ ಪಕ್ಕದಲ್ಲಿ ಟೈಲರ್ ಅಂಗಡಿ ಇಟ್ಟುಕೊಂಡಿದ್ದ ದೇಜಪ್ಪ ಗೌಡ ಎಂಬ ತುಂಟನಿಗೊಂದು ಅಸಾಧ್ಯ ಶಕ್ತಿಯಿತ್ತು. ಬೆಂಗಳೂರು ಮೈಸೂರುಗಳಿಗೆ ಸೇರಿದವರನ್ನು ನಮ್ಮೂರಿನಲ್ಲಿ ಘಟ್ಟದ ಮೇಲಿನವರು ಎಂದು ಕರೆಯುವುದು ರೂಢಿ. ಈ ದೇಜಪ್ಪ ನಾನು ನೋಡಿದ ಕ್ಷಣ ಘಟ್ಟದ ಮೇಲಿನವರು ಯಾರು ಎಂದು ಹೇಳಬಲ್ಲೆ ಎನ್ನುತ್ತಿದ್ದ ಮತ್ತು ಅದನ್ನು ಕರಾರುವಾಕ್ಕಾಗಿ ಹೇಳುತ್ತಿದ್ದ. ಅವನು ಭಾಷೆ, ಉಡುಗೆತೊಡುಗೆ, ಮಾತು ಇವನ್ನೆಲ್ಲ ಗಮನಿಸಿ ಅದನ್ನು ಹೇಳುತ್ತಿರಲಿಲ್ಲ. ಅವರ ನಡಿಗೆಯಲ್ಲೇ ಗರ್ವ ಇದೆ ಎನ್ನುತ್ತಿದ್ದ. ಅದು ದುಡ್ಡಿನಿಂದಲವೋ ವಿದ್ಯೆಯಿಂದಲೋ ಅಧಿಕಾರದಿಂದಲೋ ಬಂದ ಗರ್ವ ಅಲ್ಲ, ಬೆಂಗಳೂರಿಗೆ ಸೇರಿದವನು ಎಂಬ ಭಾವನೆಯಿಂದ ಬಂದ ಅಹಂಕಾರ. ಅಂಥದ್ದೇ ಅಹಂಕಾರ ಇಂಗ್ಲಿಷರಿಗೂ ಇತ್ತು. ಅಂಥ ಅಹಂಕಾರ ಇರುವವರ ಮಾತ್ರ ಆಳಬಲ್ಲರು. ಐಎಎಸ್ ಕೇಡರಿಗೆ ಸೇರಿದವರಿಗೆ, ಪೊಲೀಸ್ ಇಲಾಖೆಯಲ್ಲಿ ಇರುವವರಿಗೆ ಅಂಥದ್ದೊಂದು ಗರ್ವ ಇರುತ್ತದೆ ಎಂದೆಲ್ಲ ಅವನ ವ್ಯಾಖ್ಯಾನ ಮುಂದುವರಿಯುತ್ತಿತ್ತು.
ರೀಮೇಡ್ ಇನ್ ಇಂಗ್ಲೆಂಡ್ ಕೃತಿಯಲ್ಲೂ ಅವನು ಇಂಗ್ಲಿಷ್ ಜನರ ಸಜ್ಜನಿಕೆ ಕೂಡ ಹೇಗೆ ಅಹಂಕಾರದ ಒಂದು ಭಾಗವಾಗಿತ್ತು ಅನ್ನುವುದನ್ನು ಹೇಳುತ್ತಾನೆ. ತುಂಬ ಎತ್ತರದ ಸ್ಥಾನದಲ್ಲಿರುವವನು ಸಾಮಾನ್ಯನಂತೆ ವರ್ತಿಸಿದರೆ ಅದನ್ನು ಸರಳತೆ, ವಿನಯ ಅನ್ನಬೇಕೋ ಅಹಂಕಾರ ಎನ್ನಬೇಕೋ ಎಂದು ಗೊಂದಲವಾಗುತ್ತದೆ.
ಇಂಥ ಚಿತ್ರವಿಚಿತ್ರ ಪುಸ್ತಕಗಳ ನಡುವೆಯೇ ನನಗೆ ಸಿಕ್ಕಿದ ಮತ್ತೊಂದು ಪುಸ್ತಕ `How to become absurdly well informed about the famous and infamous’. ಅದನ್ನು ಸಂಪಾದಕ ಕಿರು ಜೀವನಚರಿತ್ರೆಗಳ ಸಂಗ್ರಹ ಎನ್ನುತ್ತಾನೆ. ಪ್ರತಿಯೊಬ್ಬರ ಜೀವನದಿಂದಲೂ ಒಂದೊಂದು ಭಾಗವನ್ನು ಆಯ್ದುಕೊಂಡು, ಪ್ರಸಿದ್ಧರ ಕುರಿತಾಗಿರುವ ದಂತಕತೆಗಳನ್ನು ಪೋಣಿಸಿ ಕೈಗಿಡುತ್ತಾನೆ ಪ್ಯಾರಟ್. ಷೇಕ್ಸ್-ಪಿಯರ್ ನಾಟಕದ ದೆವ್ವ, ಅವನ ಜೊತೆಗೇ ಮಾತಾಡುತ್ತದೆ. ಎಲಿಯಟ್ ಕವಿತೆ ಕವಿಯನ್ನೇ ಅಣಕಿಸುತ್ತದೆ.ಮೈಕೆಲೇಂಜಲೋ, ಡಾವಿಂಚಿ ಎಲ್ಲರೂ ಇಲ್ಲಿ ಬಂದು ಹೋಗುತ್ತಾರೆ, ವಿಚಿತ್ರ ರೂಪಗಳಲ್ಲಿ.
ಮತ್ತೊಂದು ಅಂಥದ್ದೇ ಪುಸ್ತಕ-ಬುಕ್ ಆಫ್ ಇನ್ಸಲ್ಟ್ಸ್. ಇದು ಕೂಡ ಪ್ರಸಿದ್ಧರ ಕುರಿತಾದದ್ದೇ. ಪ್ರಸಿದ್ಧರಿಬ್ಬರು ಭೇಟಿಯಾದಾಗ ನಡೆಯುವ ವಿಚಿತ್ರ ಪ್ರಸಂಗಗಳು ಇಲ್ಲಿವೆ. ಅವುಗಳಲ್ಲಿ ಎಷ್ಟು ನಿಜ, ಎಷ್ಟು ಸುಳ್ಳು ಎಂದು ಹೇಳುವುದು ಕಷ್ಟವೇ. ಹಾಗೇ ಮತ್ತೊಂದು ಚರಮವಾಕ್ಯಗಳ ಪುಸ್ತಕ. ಸಾಯುವ ಮೊದಲೇ ಬರೆದ ಚರಮ ವಾಕ್ಯಗಳು, ಸತ್ತ ನಂತರ ಬರೆದವುಗಳೆಲ್ಲ ಸೇರಿಕೊಂಡು ಸಾಕಷ್ಟು ಮನರಂಜನೆಯನ್ನಂತೂ ನೀಡುತ್ತವೆ. ಉದಾಹರಣೆಗೆ The epitaphs on tombstones of a great many people should read: Died at thirty, and buried at sixty.
ಹೀಗೆ ಒಂದಷ್ಟು ಪುಸ್ತಕಗಳನ್ನು ಓದಿಕೊಂಡು ವಾರ ಕಳೆಯಲು ಯತ್ನಿಸಿದೆ. ಅಣ್ಣಾ ಹಜಾರೆಯ ಹೋರಾಟ ಹುಸಿಹೋಗುತ್ತಿರುವ ಹೊತ್ತಿನಲ್ಲೇ ಸಾಯಿಬಾಬ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದಾರೆ. ಅವರ ಕೋಟ್ಯಂತರ ರುಪಾಯಿ ಆಸ್ತಿಯನ್ನೂ ಕೊಳ್ಳೆ ಹೊಡೆಯುತ್ತಿರುವವರ ಕುರಿತು ವರದಿಗಳು ಬರುತ್ತಿವೆ. ದೇವಮಾನವರು ಮತ್ತು ಮಹಾರಾಜರ ಅಂತ್ಯ ಸಂಕೀರ್ಣವೂ ನಿಗೂಢವೂ ಆಗಿರುತ್ತದೆ. ಅವನು ಎಲ್ಲರ ಹಾಗೆ ತೀರಿಕೊಳ್ಳುವುದಿಲ್ಲ, ದಿವಂಗತರಾಗುವುದಿಲ್ಲ. ಅವರ ಕಣ್ಮರೆಯ ಮರುಕ್ಷಣವೇ ಅವರ ಸಂಪತ್ತಿಗಾಗಿ ಹೊಡೆದಾಟ ಶುರುವಾಗುತ್ತದೆ. ಒಬ್ಬ ದೇವಮಾನವ, ಅವನನ್ನು ಪ್ರೀತಿಸಿದ ಅವನ ಬಾಲ್ಯಗೆಳತಿ, ಸಾಯುವ ಮುಂಚೆ ಒಂದೇ ಒಂದು ಸಲ ಅವನನ್ನು ನೋಡಲು ಹಾತೊರೆಯುವ ಅವಳು, ಅವಳು ಬರೆದ ಪತ್ರದಿಂದ ಸ್ಪೂರ್ತಿಗೊಂಡು ಅವಳನ್ನು ನೋಡಲು ಹಂಬಲಿಸುವ ಅವನು, ಆ ಇಬ್ಬರ ಭೇಟಿ ಸಾಧ್ಯವೇ ಆಗದಂತೆ ಮಾಡುವ ಅವನ ಸುತ್ತಲಿನ ಮಂದಿ. ಜಗತ್ತಿಗೇ ದೇವಮಾನವನಾದರೂ ತಾನೆಂಥ ಅಸಹಾಯಕ ಎನ್ನುವುದು ಅವನಿಗೆ ಅರ್ಥವಾಗುವ ವಿಕ್ಷಿಪ್ತ ಗಳಿಗೆ- ಇದನ್ನೆಲ್ಲ ಇಟ್ಟುಕೊಂಡು ಕಾದಂಬರಿ ಬರೆಯಬೇಕು ಎನ್ನುವ ಉತ್ಸಾಹ ಬಂತು. ಅದನ್ನು ಅದುಮಿಟ್ಟುಕೊಂಡು ಕಾಪ್ಕಾನ ದಿನಚರಿಯನ್ನು ಅನುವಾದಿಸುತ್ತಾ ಕುಳಿತಿದ್ದೇನೆ.
ಕಾಫ್ಕಾ ತಾನು ಸತ್ತ ನಂತರ ತನಗೆ ಸಂಬಂಧಿಸಿದ ಎಲ್ಲವನ್ನೂ ಸುಟ್ಟು ಹಾಕು ಎಂದು ಗೆಳೆಯನಿಗೆ ಹೇಳುತ್ತಾನೆ. ಗೆಳೆಯ ಮ್ಯಾಕ್ಸ್ ಬ್ರಾಡ್ ಅವನ ಬರಹಗಳನ್ನೆಲ್ಲ ಹಾಗೇ ಸಂಗ್ರಹಿಸಿಟ್ಟು, ಅವನ ಇಚ್ಛೆಗೆ ವಿರುದ್ಧವಾಗಿ ಪ್ರಕಟಿಸುತ್ತಾನೆ. ಕಾಪ್ಕಾ 1911ರಿಂದ 1923ರ ತನಕ ಬರೆದ ಡೈರಿ ಕೈಯಲ್ಲಿದೆ. ಕಮೂ ನೋಟ್ ಬುಕ್ ಬರೆಯುತ್ತಿದ್ದ. ಕಾಫ್ಕಾ ಡೈರಿ ಬರೆದ. ನೂರು ವರ್ಷಗಳ ಹಿಂದೆ ಅವನು ಬರೆದ ಡೈರಿಯಿಂದ ಏನು ಉಪಯೋಗ ಎಂಬ ಪ್ರಶ್ನೆ ಎದುರಾಯಿತು. ಓದುತ್ತಾ ಹೋದ ಹಾಗೆ, ಅವನ ಕೃತಿಗಳಿಗಷ್ಟೇ ಅಲ್ಲ, ಈಗಿನ ಉತ್ಸಾಹಿ ತರುಣ ಬರಹಗಾರರಿಗೂ ಅದು ಉಪಯುಕ್ತವಾಗಬಲ್ಲದು ಅನ್ನಿಸಿತು.
ಅವನ ವಿಕೃತಿ, ಒದ್ದಾಟ, ಅನಾರೋಗ್ಯ, ಸಂಕಟ ಮತ್ತು ಸಂಭ್ರಮಗಳೆಲ್ಲ ಡೈರಿಯಲ್ಲಿ ದಾಖಲಾಗಿವೆ. ಅಪ್ಪನ ಕುರಿತ ಸಿಟ್ಟು, ಗೆಳತಿಯ ಕುರಿತ ಅಪನಂಬಿಕೆ, ಪ್ರಭುತ್ವದ ಕುರಿತು ರೋಷ, ದೇವರ ಮೇಲಿನ ಅನುಮಾನ- ಇವನ್ನೆಲ್ಲ ಅಲ್ಲಲ್ಲಿ ದಾಖಲಿಸುತ್ತಾನೆ ಕಾಫ್ಕಾ. ಹಾಗಂತ ಕಾಫ್ಕನನ್ನು ಓದುವುದು ಸುಲಭವೇನಲ್ಲ. ತುಂಬ ಸರಳಗೊಳಿಸಿದರೆ ಕಾಫ್ಕ
ದಾರಿ ತಾನಾಗೇ ಸಿಗಬೇಕೇ ಹೊರತು, ಹುಡುಕಬಾರದು. ಅದು ಒರತೆಯ ಹಾಗೆ, ಸಿಕ್ಕಲ್ಲಿ ಅಲ್ಲ, ಸಿಕ್ಕಲ್ಲಿ ಮಾತ್ರ ತೆರೆಯುವುದು ಇದರ ಸೆಲೆಯು…ಎಂದು ಬೇಂದ್ರೆ ಅಂದ ಹಾಗೆ.







sadhyadalliye namma munde innondu pustaka..:):)
ಕಾಫ್ಕನನ್ನು ಕಾಯುತ್ತಿದೇವೆ .
We are Bangalored !!!
teevravad odu, adbhutavada haagu atma rathi illada baravanige, maguvina kutoohala shrama poorna dudime ee yelladara mishrana jogi- ee jogi tanna paadige taanu barahada kinnari nudisutthale irali- naavu asvaadisona -srinivas deshpande
ಕಾಫ್ಕ ಪುಸ್ತಕ ಬೇಗ ಬರಲಿ.
ಅಂದ ಹಾಗೆ ನೀವು ಬರೆದ ೧೯ ಪುಸ್ತಕಗಳಲ್ಲಿ ೬ ಮಾತ್ರ ನನ್ನ ಬಳಿ ಇವೆ. ಉಳಿದ ಪುಸ್ತಕಗಳನ್ನು ಕೊಂಡುಕೊಳ್ಳುವ ಆಸೆ ನನ್ನದು. ಆದ್ರೆ ತುಂಬಾ ಕಡೆ ವಿಚಾರಿಸಿದೆ. ಜಾನಕಿ ಕಾಲಮ್ ರವಿ ಕಾಣದ್ದು ಕಥಾ ಸಮಯ ರೂಪ ರೇಖೆ ಮಾತ್ರ ಸಿಕ್ಕಿವೆ. ಎಲ್ಲಿ ಸಿಗಬಹುದು ದಯವಿಟ್ಟು ತಿಳಿಸಿ. ನಿಮ್ಮ ಬರಹ ಗಳಿಗೆ ಓದುಗನನ್ನು ಜೀವನ್ಮುಖಿ ಮತ್ತು ಸಾಹಿತ್ಯ ಮುಖಿ ಯಾಗಿಸುವ ಅಗಾಧ ಶಕ್ತಿಯಿದೆ.
ಇಂತೀ ನಿಮ್ಮ ಓದುಗ
ಶ್ರೀನಿವಾಸ್ ಕುಲ್ಕರ್ಣಿ ತುರ್ವಿಹಾಳ್
kavimansu.blogspot.com