ಡಬ್ಬಿಂಗ್ ಎಂಬ ಸುನಾಮಿ
ಸಮ್ಮೇಳನಾಧ್ಯಕ್ಷರಾದ ಶ್ರೀ ವೆಂಕಟಸುಬ್ಬಯ್ಯನವರೇ, ಈ ಗೋಷ್ಠಿಯ ಅಧ್ಯಕ್ಷತೆ ವಹಿಸಿರುವ ಪದ್ಮಭೂಷಣ ಡಾ ಬಿ ಸರೋಜಾದೇವಿ ಅವರೇ, , ಜೆ.ಎಂ. ಪ್ರಹ್ಲಾದ್ ಮತ್ತು ಕೇಸರಿ ಹರವೂ ಅವರೇ, ಸಿನಿಮಾಸಕ್ತರೇ, ಚಿತ್ರರಂಗದ ಗಣ್ಯರೇ,
ನಾನಿವತ್ತು ಅತ್ಯಂತ ಅಪ್ರಸ್ತುತ ಎಂದು ಕಾಣಿಸುವಂಥ, ಆದರೆ ಅಪ್ರಸ್ತುತವಲ್ಲದ ಮತ್ತು ಅಪ್ರಸ್ತುತ ಆಗಬಾರದ ವಿಚಾರವೊಂದರ ಬಗ್ಗೆ ನನ್ನ ಪ್ರಬಂಧವನ್ನು ಮಂಡಿಸಲಿದ್ದೇನೆ. ಈ ಕಷ್ಟಕಾಲದಲ್ಲಿ ದುಷ್ಟಕಾಲದಲ್ಲಿ ಕೆಲವೊಂದು ಸಂಗತಿಗಳ ಕುರಿತು ಮಾತಾಡುವುದು ಕೂಡ ಅಪರಾಧ ಎಂಬಂತೆ ಭಾಸವಾಗುವ ಸಾಧ್ಯತೆಯಿದೆ. ಅದಕ್ಕೆ ಕಾರಣ ನಮ್ಮ ಚಿತ್ರರಂಗದ ಬದಲಾದ, ಇನ್ನೂ ಬದಲಾಗುತ್ತಿರುವ ನಿಲುವು.
ಇವತ್ತಿನ ಚಿತ್ರರಂಗ ಹೇಗಿದೆ ಅನ್ನುವುದನ್ನು ನೋಡೋಣ. ಸಾಹಿತ್ಯ ಸಮ್ಮೇಳನ ಆರಂಭವಾದ ದಿನ ಬಿಡುಗಡೆಯಾದ ಕನ್ನಡ ಚಿತ್ರದ ಹೆಸರು ‘ಕಳ್‌ಮಂಜ’. ನಾನು ತೀರಾ ವರ್ತಮಾನದಲ್ಲಿ ನಿಂತು ಮಾತಾಡುವುದಿದ್ದರೆ ‘ಕಳ್‌ಮಂಜ’ ಸಿನಿಮಾ ನೋಡಿಕೊಂಡು ಬಂದು, ಕನ್ನಡ ಚಲನಚಿತ್ರದ ಸಾಮಾಜಿಕ ಹೊಣೆಗಾರಿಕೆ ಏನು ಅನ್ನುವುದನ್ನು ವಿವರಿಸಬೇಕು. ಇದು ಪರಿಸ್ಥಿತಿ.
ಅದನ್ನು ಬಿಟ್ಟುಬಿಡೋಣ. ತಾನು ಹಾಕಿದ ಹಣವನ್ನು ಮರಳಿ ಪಡೆಯುವುದು, ಸಾಧ್ಯವಾದರೆ ಹಾಕಿದ ಹಣದ ಹತ್ತೋ ಇಪ್ಪತ್ತೋ ಪಟ್ಟು ಮೊತ್ತವನ್ನು ವಾಪಸ್ಸು ಪಡೆಯುವುದು ನಿರ್ಮಾಪಕನ ಮೊಟ್ಟ ಮೊದಲ ಜವಾಬ್ದಾರಿ. ಹೀಗಾಗಿ ಚಿತ್ರ ಆರಂಭವಾಗುವ ಮೊದಲೇ ತನ್ನ ಆರ್ಥಿಕ ಹೊಣೆಗಾರಿಕೆ ಏನು ಅನ್ನುವುದು ನಿರ್ಮಾಪಕನ ಪ್ರಕಾರ ನಿಗದಿ ಆಗಿರುತ್ತದೆ. ಇಷ್ಟಾಗುತ್ತಿದ್ದಂತೆ ಆತ ಆ ನಿಟ್ಟಿನಲ್ಲಿ ತನ್ನ ಕಾರ್ಯ ಆರಂಭಿಸುತ್ತಾನೆ. ಆಗ ಅವನು ಹುಡುಕುವುದು ಕತೆಗಾಗಿ.
ಅವನೇನೂ ಸಾಹಿತ್ಯಲೋಕದಲ್ಲಿ ಕತೆಗೋಸ್ಕರ ಹುಡುಕಾಟ ನಡೆಸುವುದಿಲ್ಲ. ಯಾವ ಸಾಹಿತ್ಯ ಕೃತಿಯನ್ನೂ ಅವನು ಓದಿರುವುದೂ ಇಲ್ಲ. ಥಟ್ಟನೆ ಅವನ ಗಮನ ಹರಿಯುವುದು ಪರಭಾಷೆಯಲ್ಲಿ ಬಂದು ಯಶಸ್ವಿಯಾದ ಸಿನಿಮಾದ ಕಡೆಗೆ. ಆ ಸಿನಿಮಾದ ಹಕ್ಕುಗಳನ್ನು ಹತ್ತೋ ಇಪ್ಪತ್ತೋ ಐವತ್ತೋ ಲಕ್ಷ ಕೊಟ್ಟು ಕೊಂಡುತಂದರೆ ಅವನು ಅರ್ಧ ಯಶಸ್ವಿಯಾದಂತೆ ಎಂದು ಭಾವಿಸುತ್ತದೆ. ‘ವೆಲ್ ಬಿಗನ್ ಈಸ್ ಹಾಫ್ ಡನ್’ ಅಂತಾರಲ್ಲ. ಹಾಗೇ, ಇಲ್ಲಿ ಶುಭಾರಂಭ ಅಂದರೆ ಪರಭಾಷಾ ಸಿನಿಮಾದ ಹಕ್ಕುಗಳನ್ನು ಪಡೆಯುವುದು.
ಅಷ್ಟಾದ ನಂತರ ಆ ಕತೆಗೆ ತಕ್ಕ ನಾಯಕನನ್ನು ಹುಡುಕುವ ಕೆಲಸ. ಎಷ್ಟೋ ನಿರ್ಮಾಪಕರು ಹಲವಾರು ನಾಯಕನಟರಿಗೆ ಯಾವಾಗಲೋ ಒಂದು ಮೊತ್ತವನ್ನು ಕೊಟ್ಟುಬಿಟ್ಟಿರುತ್ತಾರೆ. ಒಳ್ಳೇ ಕತೆ ಸಿಕ್ಕಾಗ ಸಿನಿಮಾ ಮಾಡುತ್ತೇನೆ ಎಂದಿರುತ್ತಾರೆ. ಹೀಗೊಂದು ರೀಮೇಕ್ ಕತೆ ಸಿಕ್ಕ ತಕ್ಷಣ ನಾಯಕ ನಟರ ಬಳಿಗೆ ಓಡುತ್ತಾರೆ. ಕೈಯಲ್ಲಿ ಪರಭಾಷಾ ಸಿನಿಮಾದ ಸಿ.ಡಿ. ಕೂಡ ಇರುತ್ತದೆ.
ಅಲ್ಲಿಗೆ ನಾಯಕ ನಟರಿಗೆ ಕತೆ ಹೇಳುವ ಕೆಲಸ ಇಲ್ಲ, ಅವರ ಪಾತ್ರ ಹೇಗಿರುತ್ತದೆ ಎಂದು ವಿವರಿಸಬೇಕಾಗಿಲ್ಲ. ಅವರ ವೇಷಭೂಷಣ ಹೇಗಿರಬೇಕು ಎಂದು ಹೇಳಬೇಕಾಗಿಲ್ಲ. ಕತೆಯನ್ನು ಚಿತ್ರಕತೆಯನ್ನಾಗಿಸುವುದಕ್ಕೆ ಕಷ್ಟಪಡಬೇಕಾಗಿಲ್ಲ. ಕೈಯಲ್ಲಿರುವ ಸಿನಿಮಾ ನೋಡುತ್ತಾ ಅದರಲ್ಲಿರುವ ಲೊಕೇಷನ್, ನಾಯಕಿ, ಪೋಷಕ ಪಾತ್ರ- ಇವಕ್ಕೆಲ್ಲ ಹೊಂದಿಕೆಯಾಗುವಂಥ ಜಾಗವನ್ನೂ ಕಲಾವಿದರನ್ನೂ ಹುಡುಕುವುದಷ್ಟೇ ಕೆಲಸ.
ಹೀಗೆ ನಿರ್ಮಾಣವಾದ ಚಿತ್ರದಲ್ಲಿ ನಾನು ಸಾಮಾಜಿಕ ಜವಾಬ್ದಾರಿಯನ್ನು ಹುಡುಕಬೇಕಾಗಿದೆ. ಇಂಥ ಚಿತ್ರಗಳಿಗೂ ಸಾಮಾಜಿಕ ಹೊಣೆಗಾರಿಕೆ ಇದೆ ನಂಬಬೇಕಾಗಿದೆ. ಮತ್ತು ನಮ್ಮ ಚಿತ್ರರಂಗದ ಸಾಧನೆಗಳನ್ನೂ ನಿಲುವುಗಳನ್ನೂ ಕೊಂಡಾಡಬೇಕಾಗಿದೆ. ಯಾಕೆಂದರೆ ಇದು ನಮ್ಮ ಚಿತ್ರರಂಗ.
ಇವನ್ನೆಲ್ಲ ಬಿಟ್ಟು ಮತ್ತೊಂದು ದಿಕ್ಕಿಗೆ ಹೊರಳಿದರೆ ಅಲ್ಲಿ ಇನ್ನೂ ಅಧ್ವಾನದ ಸಂಗತಿಗಳು ಕಾಣಿಸುತ್ತದೆ. ಈ ವರ್ಷ ಒಂದು ಸಣ್ಣ ಬಜೆಟ್ಟಿನ ಅವಾರ್ಡು ಸಿನಿಮಾ ಮಾಡಿಬಿಡೋಣ ಎಂದು ಕೇಳಿಕೊಂಡು ವರ್ಷಕ್ಕೆ ಏಳೋ ಎಂಟೋ ನಿರ್ಮಾಪಕರು ಪ್ರಜ್ಞಾವಂತ ನಿರ್ದೇಶಕರ ಮನೆಗೆ ಎಡತಾಕುತ್ತಾರೆ. ಎಷ್ಟೋ ಸಂದರ್ಭದಲ್ಲಿ ಈ ಪ್ರಜ್ಞಾವಂತ ನಿರ್ದೇಶಕರೇ ಅಂಥ ನಿರ್ಮಾಪಕರನ್ನು ಹುಡುಕಿಕೊಂಡು ಹೋಗುವುದೂ ಉಂಟು. ಇಬ್ಬರೂ ಸೇರಿ ಹತ್ತೊ ಹನ್ನೆರಡೋ ದಿನ ಚಿತ್ರೀಕರಣ ನಡೆಸಿ, ಹದಿನೈದರಿಂದ ಇಪ್ಪತ್ತು ಲಕ್ಷ ಬಜೆಟ್ಟಿನಲ್ಲಿ ಸಾಮಾಜಿಕ ಹೊಣೆಗಾರಿಕೆ ಇರುವ, ಸಾಮಾಜಿಕ ಪರಿಣಾಮ ಬೀರುವ ಸಿನಿಮಾ ನಿರ್ಮಾಣ ಮಾಡುತ್ತಾರೆ. ಅಂಥ ಸಿನಿಮಾಗಳು ಸಾಮಾನ್ಯವಾಗಿ ಮೂರು ಪ್ರದರ್ಶನ ಕಾಣುತ್ತವೆ. ಮೊದಲನೆಯದು ಸೆನ್ಸಾರ್ ಮಂಡಳಿಯ ಸದಸ್ಯರಿಗೆ, ಎರಡನೆಯದು ತಂತ್ರಜ್ಞರಿಗೆ, ಕಲಾವಿದರಿಗೆ ಮತ್ತು ಅದೃಷ್ಟ ಕೆಟ್ಟಿದ್ದರೆ ಪತ್ರಕರ್ತರಿಗೆ, ಮೂರನೆಯದು ಚಲನಚಿತ್ರ ಪ್ರಶಸ್ತಿ ಆಯ್ಕೆ ಮಂಡಳಿ ಸದಸ್ಯರಿಗೆ. ಒಮ್ಮೊಮ್ಮೆ ಅಂಥ ಸಿನಿಮಾಗಳಿಗೆ ಹೆದರಿ ಸಲಹಾ ಮಂಡಳಿ ಅದಕ್ಕೆ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಎಂಬ ಪ್ರಶಸ್ತಿ ನೀಡುವುದಿದೆ. ದುರದೃಷ್ಟವಶಾತ್ ಅದು ಪ್ರದರ್ಶನ ಕಾಣದೇ ಇರುವುದರಿಂದ ಪರಿಣಾಮ ಬೀರುವುದೇ ಇಲ್ಲ.
ಇಂಥ ಸಂದರ್ಭದಲ್ಲಿ ಕನ್ನಡ ಚಲನಚಿತ್ರಗಳ ಸಾಮಾಜಿಕ ಹೊಣೆಗಾರಿಕೆಯ ಕುರಿತು ನಾನು ಮಾತಾಡಬೇಕಾಗಿದೆ.
ಮೇಲಿನ ಮಾತುಗಳನ್ನು ನಾನು ನಿರಾಶೆಯಿಂದ ಹೇಳುತ್ತಿಲ್ಲ. ವಿಷಾದದಿಂದ ಹೇಳುತ್ತಿದ್ದೇನೆ. ನಮ್ಮ ನಿರ್ಮಾಪಕರು ಇವತ್ತು ಮುಖ್ಯವಾಗಿ ಉತ್ತರಿಸಿಕೊಳ್ಳಬೇಕಾದ ಪ್ರಶ್ನೆಯೊಂದಿದೆ. ಸಿನಿಮಾ ಎನ್ನುವುದು ಕಲೆಯೇ, ಉದ್ಯಮವೇ. ಕಲೆ ಅಲ್ಲ ಅನ್ನುವುದೇ ಅವರ ನಿಲುವಾದರೆ ಅದನ್ನು ಸಾರ್ವಜನಿಕವಾಗಿ ಒಫ್ಪಿಕೊಂಡುಬಿಡಬೇಕು. ನಾನು ಸಿನಿಮಾ ಮಾಡುವುದು ಲಾಭಕ್ಕಾಗಿ ಎಂದು ಹೇಳಿಬಿಡಬೇಕು. ಆಗ ಅದು ವ್ಯಾಪಾರ ಉದ್ಯಮ ಆಗುತ್ತದೆ. ಅಲ್ಲಿ ಸಮಾಜಿಕ ಜವಾಬ್ದಾರಿ ಇರುವುದಿಲ್ಲ. ಎಲ್ಲಿ ನಮ್ಮ ಮುಂದಿರುವವರನ್ನು ನಾವು ಎಚ್ಚರಿಸುತ್ತೇವೆ ಎಂಬ ಮಾತು ಕೃತಿಕಾರರಿಂದ ಬರುವುದಿಲ್ಲವೋ, ಅಲ್ಲಿ ಸಾಮಾಜಿಕ ಜವಾಬ್ದಾರಿಯ ಪ್ರಶ್ನೆ ಉದ್ಭವಿಸುವುದೇ ಇಲ್ಲ.
ಆದರೆ ನಮ್ಮ ಚಿತ್ರರಂಗ ಇವತ್ತು ರಾಜಾಶ್ರಯ ಬಯಸುತ್ತಿದೆ. ಸರ್ಕಾರದ ನೆರವಿಗೆ ಕೈ ಚಾಚುತ್ತಿದೆ, ಸಹಾಯಧನ ಮತ್ತು ರಿಯಾಯತಿಗಳನ್ನು ಬೇಡುತ್ತಿದೆ. ಆಗ ನಮ್ಮ ಮಾಧ್ಯಮ ಒಂದು ಕಲೆ ಎನ್ನುತ್ತದೆ. ಸರ್ಕಾರದ ನೆರವು ಬೇಕಿದ್ದಾಗ ಕಲೆ ನೆನಪಾಗುತ್ತದೆ.
ಇದರ ಜೊತೆಗೇ ನಮ್ಮಲ್ಲಿ ಒಂದಷ್ಟು ಹುಸಿ ಚಿಂತಕರೂ ಇದ್ದಾರೆ. ಹುಸಿ ವಿಚಾರವಾದಿಗಳಿದ್ದಾರೆ. ಅವರು ತಮಗೆ ಅಪಾರವಾದ ಸಾಮಾಜಿಕ ಜವಾಬ್ದಾರಿ ಇದೆ ಎಂದು ಇದ್ದಕ್ಕಿದ್ದಂತೆ ವರ್ತಿಸಲು ಆರಂಭಿಸುತ್ತಾರೆ. ಅವರನ್ನು ಹತ್ತಿಪ್ಪತ್ತು ವರ್ಷಗಳಿಂದ ನೋಡಿಕೊಂಡು ಬಂದಿರುವ ನಮಗೆ, ಇದ್ದಕ್ಕಿದ್ದ ಹಾಗೇ ಅವರು ಹೊಸ ಪೋಷಾಕು ತೊಟ್ಟು ಇಡೀ ಸಮಾಜವನ್ನು ತಿದ್ದುವ ಹೊಣೆ ನಮ್ಮ ಮೇಲಿದೆ ಎಂದುಕೊಂಡು ಓಡಾಡುವುದು ವಿಚಿತ್ರವಾಗಿ ಕಾಣಿಸುತ್ತದೆ. ಅವರ ಉದ್ದೇಶ ಮತ್ತು ಪ್ರಾಮಾಣಿಕತೆಯ ಕುರಿತೇ ಅನುಮಾನ ಶುರುವಾಗುತ್ತದೆ. ಅಲ್ಲಿಯ ತನಕ ರೌಡಿಯಾಗಿದ್ದವನೊಬ್ಬ, ಇದ್ದಕ್ಕಿದ್ದಂತೆ ಕಾರ್ಪೊರೇಟರ್ ಆಗಿ ಈ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಬೇಕು ಎಂದಂತಿರುತ್ತದೆ ಅವರ ವರ್ತನೆ.
ಹೀಗಾಗಿ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸುವ ಚಿತ್ರಗಳನ್ನು ಯಾರು ಮಾಡುತ್ತಿದ್ದಾರೆ, ಅವನ ನಿಲುವು ಏನು, ಅನ ಹಿನ್ನೆಲೆ ಏನು ಎನ್ನುವುದೂ ಒಬ್ಬ ಪ್ರೇಕ್ಷಕನಾಗಿ ನನಗೆ ಮುಖ್ಯವಾಗುತ್ತಾ ಹೋಗುತ್ತದೆ. ಉದಾಹರಣೆಗೆ ಗಿರೀಶ ಕಾಸರವಳ್ಳಿಯವರ ಸಿನಿಮಾ ನೋಡಲು ಹೋಗುವ ನನಗೆ ಅವರ ಸಿನಿಮಾಗಳ ಕುರಿತಾದಂತೆ ಒಂದು ಸಾಂಸ್ಕೃತಿಕ ಹಿನ್ನೆಲೆ ಇರುತ್ತದೆ. ಈ ಹಿನ್ನೆಲೆ ಇರುವಂಥ ಪ್ರತಿಯೊಬ್ಬ ಪ್ರೇಕ್ಷಕನೂ ಅವರು ಪ್ರತಿಪಾದಿಸುವ ವಿಚಾರಗಳನ್ನು ಗಂಭೀರವಾಗಿ ನೋಡುತ್ತಿರುತ್ತಾನೆ. ಇಲ್ಲಿ ನಾವು ಗಮನಿಸೇಕಾದ್ದು ಇಷ್ಟೇ. ಒಬ್ಬ ನಿರ್ದೇಶಕನ ಭಾವಲೋಕ ಮತ್ತು ಒಬ್ಬ ಪ್ರೇಕ್ಷಕನ ಭಾವಲೋಕ ಸಂಧಿಸುವ ಬಿಂದುವಿನಲ್ಲಿ ಈ ಸಾಮಾಜಿಕ ಹೊಣೆಗಾರಿಕೆ ಕಣ್ತೆರೆಯುತ್ತದೆ.
ಕೆಲವು ದಿನಗಳ ಹಿಂದೆ ನನಗೊಬ್ಬರು ಫೋನ್ ಮಾಡಿದ್ದರು. ಹಿರಿಯ ನಟಿಯೊಬ್ಬರು ಒಂದು ಆ ಥರದ ಸಿನಿಮಾದಲ್ಲಿ ನಟಿಸಬೇಕು ಎಂದು ಕೊಂಡಿದ್ದಾರೆ. ಅವರು ಮೇಕಪ್ ಇಲ್ಲದೇ ನಟಿಸೋದಕ್ಕೂ ಸಿದ್ಧರಿದ್ದಾರೆ. ಕಡಿಮೆ ಸಂಭಾವನೆ ತೆಗೆದುಕೊಳ್ಳವುದಕ್ಕೂ ತಯಾರಿದ್ದಾರೆ. ಹತ್ತಿಪ್ಪತ್ತು ದಿನ ಬಿಡುವು ಮಾಡಿಕೊಳ್ಳುತ್ತಾರೆ. ಅವರಿಗೆ ತಾಯಿಸಾಹೇಬ, ದ್ವೀಪ, ಹಸೀನಾ ಥರದ ಒಂದು ಸಿನಿಮಾ ಮಾಡುವ ಆಸೆಯಿದೆ. ಯಾವುದಾದರೂ ಹಳ್ಳಿ ಕತೆ ತೆಗೆದುಕೊಂಡು, ಹೆಣ್ಮಕ್ಕಳ ಶೋಷಣೆ ಇತ್ಯಾದಿ ಇಟ್ಟುಕೊಂಡು ಒಂದು ಸಿನಿಮಾ ಮಾಡಿಕೊಡಿ ಅಂತ ಗಿರೀಶ್ ಕಾಸರವಳ್ಳಿಯವರನ್ನು ಕೇಳಬಹುದಾ. ಒಂದು ರಾಷ್ಟ್ರಪ್ರಶಸ್ತಿ ತೆಗೆದುಕೊಳ್ಳುವ ಆಸೆಯಾಗಿದೆ ಅವರಿಗೆ ಎಂದರು. ಅಂದರೆ ಇದರ ಉದ್ದೇಶ ಇಷ್ಟೇ. ಸಾಮಾಜಿಕ ಕಳಕಳಿ ಎಂದು ಪ್ರೇಕ್ಷಕ ನಂಬುವಂಥ, ನಾವು ಬರೆಯುವಂಥ ಸಂಗತಿಯ ಹಿಂದಿರುವುದು ಬೇರೆ ಯಾವ ಕಾಳಜಿಯೂ ಅಲ್ಲ. ಒಂದು ರಾಷ್ಟ್ರಪ್ರಶಸ್ತಿ ಪಡೆಯಬೇಕು ಎಂಬ ಹಂಬಲ. ಅಂಥ ಹೊತ್ತಿಗೆ ಅವರಿಗೆ ಸಾಮಾಜಿಕ ಜವಾಬ್ದಾರಿ ನೆನಪಾಗುತ್ತದೆ.
-೨-
ಈ ನಿರಾಶೆಗಳನ್ನೆಲ್ಲ ಪಕ್ಕಕ್ಕಿಟ್ಟು ಸಾಮಾಜಿಕ ಜವಾಬ್ದಾರಿ ಅಂದರೇನು ಅನ್ನುವುದನ್ನು ನೋಡೋಣ. ಇವತ್ತಿನ ಸಿನಿಮಾದ ಸಂದರ್ಭದಲ್ಲಿ ಅದು ಅರ್ಥ ಕಳೆದುಕೊಂಡು ಸವಕಲಾಗಿರುವ ಪದ. ಭಾರತೀಯ ಸಿನಿಮಾ ಹೊರಳಿಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಅದು ಗೊತ್ತಾಗತ್ತೆ. ಸಂದೇಶವಾಹಕ ಅನ್ನೋ ಹಳೇ ಪರಿಕಲ್ಪನೆಯಿಂದ ರಿಯಲಿಸ್ಟಿಕ್ ಅನ್ನುವ ಅಥವಾ ಜೀವನ ದರ್ಶನ ಮಾಡುವಂಥ ಎನ್ನಬಹುದಾದ ಹೊಸ ಕಲ್ಪನೆ ಈಗ ಮುಖ್ಯವಾಗುತ್ತಿದೆ. ಇದು ಮೂಲತಃ ಯುರೋಪಿಯನ್ ಸಿನಿಮಾಗಳಿಂದ ಬಂದ ಪರಿಕಲ್ಪನೆ. ಯಾವಾಗ ನಾವು ರಿಯಲಿಸ್ಟಿಕ್ ಅನ್ನುತ್ತೇನೋ ಆಗ ಒಂದು ಸಿನಿಮಾದಲ್ಲಿ ಹಿಂಸೆ, ಲೈಂಗಿಕತೆ ಇರಬಾರದು ಅಂತ ಹೇಳೋದೂ ಕಷ್ಟ. ಇದು ಅಂಥ ಬದಲಾವಣೆಗೆ ಒಳಗಾಗುವ ಚಿತ್ರರಂಗ ಎದುರಿಸಬೇಕಾದ ದ್ವಂದ್ವ.
ಸಾಮಾಜಿಕ ಕಳಕಳಿ ಅಥವಾ ಹೊಣೆಗಾರಿಕೆ ಒಂದು ಸಿನಿಮಾದೊಳಗೆ ಹೇಗೆ ಪ್ರವೇಶ ಮಾಡಿತು ಅನ್ನುವುದನ್ನು ನೋಡಿ. ಅದಕ್ಕೆ ಸಾಹಿತ್ಯವೇ ಕಾರಣ. ‘ಭೂತಯ್ಯನ ಮಗ ಅಯ್ಯು’ ಕಾದಂಬರಿಯಲ್ಲಿರುವ ಸಾಮಾಜಿಕ ನೆಲೆ, ದೃಷ್ಟಿಕೋನ ಸಹಜವಾಗಿಯೇ ಆ ಕಾದಂಬರಿಯನ್ನು ಆಧರಿಸಿದ ಸಿನಿಮಾದ ಒಳಗೂ ಪ್ರವೇಶ ಮಾಡಿತು. ಅಂದ್ರೆ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದವನು ನಿರ್ದೇಶಕನೋ ಕಾದಂಬರಿಕಾರನೋ.. ಅದನ್ನು ಸ್ವಷ್ಪವಾಗಿ ಗುರುತಿಸುವುದು ಕಷ್ಟ. ಆದರೆ ನಿರ್ದೇಶಕ ಸೂಕ್ಷ್ಮಜ್ಞನಲ್ಲದೇ ಹೋದರೆ ಕಾದಂಬರಿಯಲ್ಲಿರುವ ಸಾಮಾಜಿಕ ಕಳಕಳಿ ಸಿನಿಮಾದಲ್ಲಿ ಕಾಣಿಸದಂತೆ ಮಾಡಬಹುದಾಗಿತ್ತು. ಹಾಗೇ ಮಾಡಿಲ್ಲ ಅನ್ನುವುದೇ ನಿರ್ದೇಶಕರ ಸ್ವಂತಿಕೆ.
ಆದರೆ ಸಿನಿಮಾಕ್ಕೋಸ್ಕರ ಒಂದು ಕತೆ ಯಾವಾಗ ನಿರ್ಮಾಣ ಆಗುವುದಕ್ಕೆ ಶುರು ಆಯಿತೋ, ಆಗ ಈ ಸಾಮಾಜಿಕ ಜವಾಬ್ದಾರಿ ಕಣ್ಮರೆಯಾಗುತ್ತಾ ಬಂತು. ಇದ್ದೂ ಇಲ್ಲದ ಹಾಗೆ, ಅಲ್ಲಲ್ಲಿ ಹಣಿಕಿಹಾಕುತ್ತಾ, ನಾನೂ ಇದ್ದೇನೆ ಎಂದು ತೋರಿಸಿಕೊಳ್ಳುತ್ತಾ ಇತ್ತು. ಕ್ರಮೇಣ ಒಂದು ಸಿನಿಮಾ ಅಂದರೆ ಮೂರು ಫೈಟಿಂಗು, ಐದು ಹಾಡು ಮತ್ತು ಒಂಚೂರು ಸಾಮಾಜಿಕ ಕಳಕಳಿ ಅನ್ನುವ ಮಟ್ಟಕ್ಕೆ ಬಂದು ನಿಂತಿತು.
ಆದರೆ ನಿಜಕ್ಕೂ ಸಾಮಾಜಿಕ ಹೊಣೆಗಾರಿಕೆ ಏನು ಅನ್ನುವುದನ್ನು ನಮಗೆ ತೋರಿಸಿಕೊಟ್ಟ ಸಿನಿಮಾಗಳನ್ನು ಕೊಟ್ಟವರು ಡಾ. ರಾಜ್‌ಕುಮಾರ್. ಅವರ ಬಂಗಾರದ ಮನುಷ್ಯ, ಜೀವನಚೈತ್ರದಂಥ ಚಿತ್ರಗಳು ನಿಜಕ್ಕೂ ಬದಲಾವಣೆಗೆ ಕಾರಣವಾದವು. ಹಾಗೆ ನೋಡಿದರೆ ಅವರ ಪ್ರತಿಯೊಂದು ಚಿತ್ರದಲ್ಲೂ ಸಮಾಜವನ್ನು ತಿದ್ದುವ ಉತ್ತಮ ಸಮಾಜಕ್ಕಾಗಿ ತುಡಿಯುವ ನಿಲುವು ಕಾಣಿಸುತ್ತಿತ್ತು. ಕ್ರಮೇಣ ಅದು ಬೇರೆ ನಟರ ಚಿತ್ರಗಳಲ್ಲೂ ಕಾಣಿಸಿಕೊಂಡಿತು.
ನಮ್ಮ ದುರದೃಷ್ಟ ಎಂದರೆ ಒಬ್ಬ ನಿರ್ದೇಶಕನಿಗೆ ವ್ಯಾಪಕವಾಗ ಓದು, ಸಾಹಿತ್ಯದ ಜ್ಞಾನ ಇಲ್ಲದೇ ಹೋದಾಗ ಸಾಮಾಜಿಕ ಹೊಣೆಗಾರಿಕೆಯನ್ನು ಅವನು ಒಂದು ಸಾಲಿನ ಸಂದೇಶಕ್ಕೆ ಇಳಿಸುತ್ತಾನೆ. ಅದನ್ನು ಅನೇಕರು ಉಪಾಯವಾಗಿ ಬಳಸುವುದೂ ಉಂಟು. ನಮ್ಮ ಸಿನಿಮಾದಲ್ಲಿ ಕೊನೆಯಲ್ಲಿ ಒಂದೊಳ್ಳೇ ಮೆಸೇಜ್ ಇಟ್ಟಿದ್ದೀವಿ ಅಂತ ಒಬ್ಬ ನಿರ್ದೇಶಕ ಹೇಳಿದರೆ ಆರಂಭದಲ್ಲಿ ಹಿಂಸೆ, ಅಶ್ಲೀಲತೆ ಇರುತ್ತದೆ ಎಂದೇ ಅರ್ಥಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಉದಾಹರಣೆಗೆ ರೌಡಿಯಿಸಮ್ಮು ಕೆಟ್ಟದ್ದು ಅನ್ನುವುದನ್ನು ತೋರಿಸುವುದಕ್ಕೆ ಚಿತ್ರದುದ್ಧಕ್ಕೂ ಒಬ್ಬ ರೌಡಿಯನ್ನು ವೈಭವೀಕರಿಸಿ, ಅವನ ಸಾಹಸ ಪ್ರಣಯಗಳನ್ನು ತೋರಿಸಿ, ಕೊನೆಯಲ್ಲಿ ಅವನನ್ನು ಜೈಲಿಗೆ ಕಳಿಸಿ, ರೌಡಿಯಿಸಂ ಮಾಡೋರಿಗೆಲ್ಲ ಅಂತಿಮವಾಗಿ ಇದೇ ಗತಿ ಎಂಬ ಸಂದೇಶವನ್ನು ನಮ್ಮ ಚಿತ್ರ ಹೊರಡಿಸಿದೆ ಎಂದು ಬೆನ್ನುತಟ್ಟಿಕೊಳ್ಳುವ ಪ್ರವೃತ್ತಿಯೂ ನಮ್ಮಲ್ಲಿದೆ.
ಆದರೆ, ಸಾಮಾಜಿಕ ಕಳಕಳಿ ಅನ್ನುವುದು ಸಿನಿಮಾ ಒಂದರ ಭಾಗವಾಗಿದ್ದಾಗ, ಕತೆಯಲ್ಲಿ ಹಾಸುಹೊಕ್ಕಾಗಿದ್ದಾಗ ಮಾತ್ರ ಅದು ಒಳ್ಳೆಯ ಚಿತ್ರವೂ ಆಗುತ್ತದೆ …ಅದಕ್ಕೆ ಒಳ್ಳೆಯ ಉದಾಹರಣೆಯೆಂದರೆ ಬಂಗಾರದ ಮನುಷ್ಯ. ಆದರೆ ಅಂಥ ಸಂದೇಶವನ್ನು ನೀಡುವ ನಟನಿಗೂ ಒಂದು ಹಿನ್ನೆಲೆ ಇರಬೇಕಾಗುತ್ತದೆ. ಅಂಥ ಹಿನ್ನೆಲೆಯನ್ನು ಆತ ಹೊಂದಿರಬೇಕಾಗುತ್ತದೆ. ರಾಜ್‌ಕುಮಾರ್ ಅವರಂಥ ತೂಕದ ವ್ಯಕ್ತಿತ್ವ ಇರುವ ಕಲಾವಿದರ ಬಾಯಿಂದಾನೇ ಒಂದು ಒಳ್ಳೇ ಮಾತು ಬಂದ್ರೆ ಜನ ಸ್ವೀಕರಿಸ್ತಾರೆ.
ಅಷ್ಟಕ್ಕೂ ಸಾಮಾಜಿಕ ಕಳಕಳಿ ಅಂದರೆ ಏನು. .ಅದು ಕೂಡಾ ಈಗ ಕಾಲಕಾಲಕ್ಕೆ ಬದಲಾಗುವ ಮೌಲ್ಯವೇ ಅಲ್ಲವೇ. ನಗರ ಕೇಂದ್ರಿತ ಚಿತ್ರಗಳಲ್ಲಿ ರೈತನ ಹಿತಕಾಯುವ ಬಗ್ಗೆ ಉದ್ದುದ್ದ ಡೈಲಾಗುಗಳು ಬಂದರೆ ಅದು ಹಾಸ್ಯಾಸ್ಪದ ಆಗಿ ಕಾಣಿಸುತ್ತದೆ. ಅಭಿವೃದ್ದಿ ಮಂತ್ರವನ್ನೇ ಈಗಿನ ಸಕಾ೯ರಗಳು ಜಪಿಸುತ್ತಿರುವ ಹೊತ್ತಲ್ಲಿ ಆ ಬಗ್ಗೆ ಬರುವ ಚಿತ್ರಗಳು ಸಾಮಾಜಿಕ ಕಳಕಳಿಯ ಚಿತ್ರಗಳು ಅನಿಸಿಕೊಳ್ಳುವ ಅಪಾಯ ಇಲ್ಲವೇ. ಒಂದು ಕಾಲಕ್ಕೆ ಗೆಜ್ಜೆಪೂಜೆ, ಧರ್ಮಸೆರೆಯಂಥಯಂಥ ಚಿತ್ರಗಳು ಸಮಾಜದ ಕುಂದುಗಳನ್ನು ಎತ್ತಿತೋರಿ ಅವನ್ನು ತಿದ್ದುವಂಥ ಚಿತ್ರಗಳಾಗಿದ್ದವು ಎನ್ನುವುದನ್ನು ನಾವು ಮರೆಯುವಂತಿಲ್ಲ. ಇವತ್ತಿನ ಕಾಲಘಟ್ಟದಲ್ಲಿ ಅವು ಅಪ್ರಸ್ತುಕ ಅನ್ನಿಸಬಹುದು. ವಿಧವಾ ವಿವಾಹ, ಬಾಲ್ಯ ವಿವಾಹ, ಮದ್ಯಪಾನ ವಿರೋಧದಂಥ ವಸ್ತುಗಳು ಈಗ ಹಳೇದಾಗಿದ್ದು, ಆ ಜಾಗವನ್ನು ರೈತನ ಆತ್ಮಹತ್ಯೆಯಂಥಾ ಹೊಸ ವಸ್ತುಗಳು ಆಕ್ರಮಿಸಿಕೊಂಡಿವೆ.
ಸಾಮಾಜಿಕ ಕಳಕಳಿಗಿಂತ ಮಾನವೀಯ ಸಂವೇದನೆಗಳಿಗೆ ಒತ್ತು ಕೊಡುವ ಚಿತ್ರಗಳು ಈಗಿನ ತುರ್ತು ಆಗಬೇಕು. ಈಗಿನ ಯುವಜನತೆಯ ಮುಂದಿರುವ ಸವಾಲುಗಳೇ ಕಥಾವಸ್ತು ಆಗಬೇಕು. .ಕೆಳ ಮತ್ತು ಮೇಲ್ವಗ೯ದ ನಡುವೆ ಹೆಚ್ಚುತ್ತಿರುವ ಅಂತರ, ಬೇಗನೇ ಶ್ರೀಮಂತರಾಗುವ ಆಸೆಯಿಂದ ಯುವಕರು ಶಾಟ್೯ಕಟ್ ದಾರಿಯತ್ತ ಮೊರೆ ಹೋಗುತ್ತಿರುವ ದುರಂತ, ಹೀಗೆ ಕಳಕಳಿಗೆ ನಾನಾ ಮುಖಗಳು ಅನಾವರಣವಾಗುತ್ತಿವೆ. ಸಾಹಿತ್ಯದಲ್ಲಿ ಎಪ್ಪತ್ತರ ದಶಕದಲ್ಲಿ ಕಂಡುಬಂದ ಮೌಲ್ಯಗಳು ಇವತ್ತಿನ ಸಿನಿಮಾದ ವಸ್ತುವಾಗಿರುವುದೂ ಉಂಟು. ಇಂದಿನ ಸಿನಿಮಾಗಳು ಹೆಚ್ಚು ಹೆಚ್ಚು ಒಬ್ಬ ವ್ಯಕ್ತಿಯ ಆಂತರಿಕ ತುಮುಲಗಳ ಕಡೆ ವಾಲುತ್ತಿರುವುದು ನೋಡಬಹುದು. .ಉದಾಹರಣೆಗೆ ಆಮೀರ್‌ನಂಥ ಚಿತ್ರ ಒಬ್ಬ ವ್ಯಕ್ತಿಯೊಳಗಿನ ಸಂಘಷ೯ಗಳನ್ನು ಹೇಳುತ್ತಾ ಅದನ್ನು ಸಾವ೯ತ್ರಿಕವಾಗಿಸುತ್ತದೆ ಅಥವಾ ಜನರಲೈಸ್ ಮಾಡುತ್ತದೆ.
ಬಹುಶ ಸಿನಿಮಾಗಳಲ್ಲಿ ಸಾಮಾಜಿಕ ಕಳಕಳಿ ಅನ್ನುವ ಜನಪ್ರಿಯ ವಸ್ತು ಈಗ ಕ್ಲೀಷೆಯಾಗುತ್ತಿದೆ. ಮುಂದಿನ ಕನ್ನಡ ಸಮ್ಮೇಳನದಲ್ಲಿ ಹೊಸ ವಸ್ತುವನ್ನು ಹುಡುಕುವುದು ವಾಸಿ. ಧೋಬಿಘಾಟ್‌ನಂಥಾ ಚಿತ್ರವನ್ನು ನೀವು ಯಾವ ಕೆಟಗರಿಗೆ ಸೇರಿಸುತ್ತೀರಿ…ಡಾಕ್ಯುಡ್ರಾಮಾ ಶೈಲಿಯಲ್ಲಿರುವ ಈ ಚಿತ್ರ ಆಧುನಿಕ ಹಿಂದಿ ಚಿತ್ರಗಳು ನಡೆಯುತ್ತಿರುವ ಹಾದಿಗೊಂದು ಉದಾಹರಣೆ.
-೩-
ಇವಿಷ್ಟನ್ನೂ ಹೇಳಿದ ನಂತರ ನಾನು ನನ್ನ ಮಾತಿನ ಅತ್ಯಂತ ಮುಖ್ಯವಾದ ಭಾಗಕ್ಕೆ ಬರುತ್ತೇನೆ. ನನಗಿವತ್ತು ಸಿನಿಮಾಗಳ ಸಾಮಾಜಿಕ ಹೊಣೆಗಿಂತ ಒಟ್ಟಾರೆಯಾಗಿ ಚಿತ್ರರಂಗದ ಸಾಮಾಜಿಕ ಹೊಣೆಗಾರಿಕೆಗೆ ನಾವು ಒತ್ತು ಕೊಡಬೇಕು ಅನ್ನಿಸುತ್ತದೆ. ಸಮ್ಮೇಳನಾಧ್ಯಕ್ಷರಾದ ವೆಂಕಟಸುಬ್ಬಯ್ಯನವರು ತಮ್ಮ ಅಧ್ಯಕ್ಷಭಾಷಣದಲ್ಲಿ ಡಬ್ಬಿಂಗಿನ ಕುರಿತು ಪ್ರಸ್ತಾಪ ಮಾಡಿದ್ದಾರೆ. ಇಷ್ಟೂ ವರ್ಷಗಳ ಕಾಲ ಒಳಗೆ ಕಾಲಿಡದ ಹಾಗೆ ತಡೆದಿಟ್ಟ ಡಬ್ಬಿಂಗ್ ಮತ್ತೆ ಒಳಗೆ ಕಾಲಿಡುವುದಕ್ಕೆ ನೋಡುತ್ತಿದೆ. ಒಮ್ಮೆ ಡಬ್ಬಿಂಗ್ ಪ್ರವೇಶಿಸಿತು ಅಂದರೆ ಅದು ಇಡೀ ಕನ್ನಡ ಸಂಸ್ಕೃತಿಯನ್ನೇ ನುಂಗಿಬಿಡಬಲ್ಲ ಪೆಡಂಭೂತವಾಗುತ್ತದೆ ಅನ್ನುವ ಕಲ್ಪನೆ ನಮ್ಮ ಚಿತ್ರರಂಗಕ್ಕೆ ಇಲ್ಲದೇ ಇರುವುದು ಆಶ್ಚರ್ಯಕರ.
ಡಬ್ಬಿಂಗ್ ಆರಂಭವಾಗುತ್ತಿದ್ದಂತೆ ಮೊದಲು ಹೊಡೆತ ತಿನ್ನುವವರು ನಮ್ಮ ಕಾರ್ಮಿಕರು. ಅದ್ದೂರಿ ವೆಚ್ಚದಲ್ಲಿ ತಯಾರಾದ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ಪ್ರದರ್ಶಿಸಲು ಆರಂಭಿಸಿದರೆ, ಕನ್ನಡ ಚಿತ್ರಗಳು ನಿರ್ಮಾಣ ಆಗುತ್ತವೆಯಾ. ಹಾಗಿದ್ದರೆ ಚಲನ ಚಿತ್ರ ಕಾರ್ಮಿಕರು ಎಲ್ಲಿಗೆ ಹೋಗಬೇಕು. ಅವರ ಪರಿಸ್ಥಿತಿ ಏನು. ಕನ್ನಡದಲ್ಲಿ ಚಿಂತಿಸುವ, ಪರಿಭಾವಿಸುವ, ಯೋಚಿಸುವ ಲೇಖಕರ ಗತಿಯೇನು?
ಡಬ್ಬಿಂಗ್ ಅಪಾಯಗಳ ಬಗ್ಗೆ ಚಿತ್ರರಂಗ ಗಂಭೀರವಾಗಿ ಯೋಚಿಸಿಯೇ ಇಲ್ಲ. ಕನ್ನಡದ ಕುರಿತು ಕಿಂಚಿತ್ತೂ ಕಾಳಜಿ ಇಲ್ಲದವರು, ಭಾಷೆಯ ಬಗ್ಗೆ ಗೌರವ ಇಲ್ಲದ ಮಂದಿ ಮಾತ್ರ ಅದನ್ನು ಪ್ರೋತ್ಸಾಹಿಸಬಲ್ಲರು. ಒಂದೇ ಏಟಿಗೆ ನಮ್ಮ ಸಂಸ್ಕೃತಿ, ಆಚರಣೆ, ನಿಲುವು, ದೇಸೀಯತೆ ಮತ್ತು ಕನ್ನಡತನವನ್ನು ಅದು ನಾಶಮಾಡಬಲ್ಲ ಸುನಾಮಿ ಎಂಬುದನ್ನು ನಾವು ಮರೆಯಕೂಡದು.
ಡಬ್ಬಿಂಗ್ ಬೇಕು ಅನ್ನುವವರ ವಾದ ಕೇವಲ ವ್ಯಾಪಾರಕ್ಕೆ ಸಂಬಂಧಿಸಿದ್ದು. ಒಂದು ಕೋಟಿ ಹೂಡಿ, ಎರಡು ಕೋಟಿ ಸಂಪಾದಿಸುವ ಉದ್ದೇಶ ಬಿಟ್ಟರೆ ಅವರ ವಾದದ ಹಿಂದೆ ಬೇರೆ ಯಾವ ಸದುದ್ದೇಶವೂ ಇಲ್ಲ. ದುರಂತವೆಂದರೆ ನಮ್ಮ ಕೆಲವು ನಿರ್ಮಾಪಕರೂ ಕೂಡ ಡಬ್ಬಿಂಗೆ ಬೇಕು ಅನ್ನುತ್ತಿರುವುದು. ಚಿರಂಜೀವಿ ನಟಿಸಿದ ಚಿತ್ರವನ್ನು ಕನ್ನಡೀಕರಿಸಿ ಪ್ರದರ್ಶಿಸಿದರೆ ಲಾಭ ಮಾಡಬಹುದು ಎಂಬುದು ಅವನ ಆಸೆ. ಆದರೆ ಡಬ್ಬಿಂಗ್ ಕಾಲಿಡುತ್ತಿದ್ದಂತೆ ಮೂಲ ತೆಲುವು ನಿರ್ಮಾಪಕನೇ ಅದನ್ನು ಕನ್ನಡಕ್ಕೂ ಡಬ್ಬಿಂಗ್ ಮಾಡುತ್ತಾನೆ ಅನ್ನುವ ಅಪಾಯವನ್ನು ನಾವು ಕಡೆಗಣಿಸುತ್ತಿದ್ದೇವೆ.
ಡಬ್ಬಿಂಗ್ ಪರವಾಗಿರುವ ಏಕೈಕ ವಾದ ಎಂದರೆ, ತೆಲುಗು ಚಿತ್ರವನ್ನು ಕನ್ನಡದಲ್ಲಿ ತರ್ಜುಮೆ ಮಾಡಿ ಪ್ರದರ್ಶಿಸಿದಾಗ ತೆಲುಗು ಸಿನಿಮಾ ನೋಡುವವರೂ ಅದನ್ನು ಕನ್ನಡದಲ್ಲಿ ನೋಡುತ್ತಾರೆ . ಅದರಿಂದಾಗಿ ಕನ್ನಡ ಬೆಳೆಯುತ್ತದೆ ಎನ್ನುವುದು. ಹೀಗೆ ಮಾತಾಡುವವರಿಗೆ ಕನ್ನಡ ಮನಸ್ಸು ಎಂಬ ಪದದ ಅರ್ಥವೇ ಗೊತ್ತಿಲ್ಲ. ಒಬ್ಬ ವ್ಯಕ್ತಿ ಮತ್ತೊಂದು ಭಾಷೆಯನ್ನು ಕಲಿತ ತಕ್ಷಣ ಆ ಭಾಷೆಯವನೇ ಆಗಿಬಿಡುವುದಿಲ್ಲ. ಒಂದು ಭಾಷೆಯ ಮನಸ್ಸನ್ನು ರೂಪಿಸುವುದು ಅವನು ಬೆಳೆದು ಬಂದ ಪರಿಸರ, ಅವನು ಕೇಳುವ ಹಾಡು, ಅವನ ಓದು ಮತ್ತು ಅವನ ಬಾಲ್ಯ. ನಾವೆಷ್ಟೇ ಇಂಗ್ಲಿಶ್ ಕಲಿತರೂ ನಮ್ಮದು ಕನ್ನಡ ಮನಸ್ಸೇ ಆಗಿರುತ್ತದೆ. ಕನ್ನಡದಲ್ಲೇ ನಾವು ಯೋಚಿಸುತ್ತೇವೆ. ಒಬ್ಬ ಕನ್ನಡ ಬರಹಗಾರ ಇಂಗ್ಲಿಷಿನಲ್ಲಿ ಬರೆದರೂ ಅವನು ಇಂಗ್ಲೆಂಡಿನ ಬಗ್ಗೆ ಬರೆಯಲಾರ. ಕನ್ನಡದ ಕುರಿತೇ ಅವನು ಇಂಗ್ಲಿಷಿನಲ್ಲಿ ಬರೆಯುತ್ತಾನೆ. ರಾಜಾರಾಯರ ಕಾಂತಾಪುರವಾಗಲೀ, ಆರ್ ನಾರಾಯಣರ ಮಾಲ್ಗುಡಿಯಾಗಲೀ ನಮ್ಮೊಳಗೇ ಇರುವ ಜಗತ್ತು. ಭಾಷೆ ನಮ್ಮ ಭಾವನೆಗಳನ್ನೂ ಪ್ರೇರಣೆಗಳನ್ನೂ ಸಂವೇದನೆಗಳನ್ನೂ ಬದಲಾಯಿಸಲಾರದು.
ಹೀಗಾಗಿ ಇವತ್ತು ನಮ್ಮ ಮುಂದಿರುವ ಅತಿದೊಡ್ಡ ಸವಾಲು ಮತ್ತು ಇಂದಿನ ಅತಿಮುಖ್ಯ ಹೊಣೆಗಾರಿಕೆಯೆಂದರೆ ಕನ್ನಡ ಮನಸ್ಸನ್ನು ಉಳಿಸಿಕೊಳ್ಳುವುದು. ಇದನ್ನು ತುಂಬ ಸಮರ್ಥವಾಗಿ ಮಾಡಬಲ್ಲ ಶಕ್ತಿ ನಮ್ಮ
ಚಿತ್ರರಂಗಕ್ಕಿದೆ. ಸಾಹಿತ್ಯಕ್ಕಿದೆ, ಸಂಗೀತಕ್ಕಿದೆ, ಕಲೆಗಿದೆ. ಮತ್ತು ಆ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಚಿತ್ರರಂಗಕ್ಕೆ ಎನ್ನುವುದನ್ನೂ ನಾವು ಮರೆಯುವಂತಿಲ್ಲ.
ಈ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ನಮ್ಮ ಕನ್ನಡ ಚಿತ್ರಗಳು ಮತ್ತು ಚಿತ್ರರಂಗದ ಮುಂದಾಗಬೇಕು ಎನ್ನುವುದು ನಮ್ಮೆಲ್ಲರ ಕಳಕಳಿ ಮತ್ತು ಒತ್ತಾಯ ಎಂದು ನಾನು ಭಾವಿಸಿದ್ದೇನೆ.
ಹೀಗಾಗಿ ಡಬ್ಬಿಂಗ್ ಪಿಡುಗಿನ ವಿರುದ್ಧ ಹೋರಾಡುವುದಕ್ಕೆ ಸಾಹಿತ್ಯ ಪರಿಷತ್ತು, ಸಾಹಿತ್ಯಲೋಕ ಮತ್ತು ಇಡೀ ನಾಡಿನ ಜನತೆ ಕೈ ಜೋಡಿಸಬೇಕಿದೆ.
ನಮಸ್ಕಾರ.







ಪ್ರೀತಿಯ ಜೋಗಿ ಸರ್,
ನಮ್ಮ ಚಿತ್ರರಂಗ, ಸಂಸ್ಕೃತಿ, ವಿಚಾರದ ಕುರಿತಂತೆ ನಿಜವಾದ ಕಾಳಜಿಯನ್ನು ಅಭಿವ್ಯಕ್ತೀಸಿದ್ದೀರಿ. ಧನ್ಯವಾದಗಳು. ಎಲ್ಲಿಯ ತನಕ ನಮ್ಮೊಳಗಿನ ಮನಸ್ಸು ಅಂತಹ ಕ್ಷಣಗಳಿಗೆ ಹಾತೊರೆಯುವುದಿಲ್ಲವೋ ಅಲ್ಲಿಯ ತನಕ ನಮಗೆ ಇದೆ ಗತಿ !!! ಸಹಜತೆಯನ್ನ, ಸಾಮಾಜಿಕ ಕಳಕಳಿಯನ್ನ ಬಿಂಬಿಸುವ ಚಿತ್ರಗಳು ನಮಗಿಂದು ಬೇಕಾಗಿವೆ. ಸಿನೆಮಾ ಅಂದ್ರೆ ಎಂಟರ್‌ಟೇನ್‌ಮೆಂಟ್ ಎಂಬುದೇನೋ ನಿಜ. ಆದರೆ ಅದೊಂದು ಪ್ರಭಲ ಮಾಧ್ಯಮವೆಂಬುದನ್ನು ಮರೆಯಬಾರದಲ್ಲವೇ…? ಕಮರ್ಶಿಯಲ್-ಆರ್ಟ್ ಸಿನೆಮಾಗಳನ್ನು ತಯಾರಿಸಬಹುದಲ್ಲವೇ…?
ಎಲ್ಲಿಯವರೆಗೆ ಸಿನೆಮಾ ಎಂಬುದು ಬರಿ ಉಧ್ಯಮ ಮಾತ್ರ ಕಲೆಯಲ್ಲ ಎಂದು ನಮ್ಮ ನಿರ್ಮಾಪಕರು ಚಿಂತಿಸುತ್ತಾರೋ…ಅಲ್ಲಿಯ ತನಕ ನಾವುಗಳು ನಮ್ಮ ಕನ್ನಡ ಮನಸ್ಸನ್ನು ನಮ್ಮಲ್ಲೇ ಭದ್ರವಾಗಿರಿಸಿಕೊಳ್ಳಬೇಕು. ನಮ್ಮ ಮುಂದಿನ ಪೀಳಿಗೆಯಾದರೂ ಇದರ ಬಗ್ಗೆ ಚಿಂತಿಸಲಿ, ಕಾರ್ಯಪ್ರವೃತ್ತರಾಗಲಿ. ಕನ್ನಡಕ್ಕೊಂದು ಜೀರ್ಣಾಗ್ನಿಯಿದೆ ಆದ್ದರಿಂದ ನಾವು ಹಲವು ದಾಳಿಗಳಿಂದ ಸುಧಾರಿಸಿಕೊಂಡಿದ್ದೇವೆ. ಇನ್ನೂ ನಮ್ಮ ಮನಸ್ಸಿಗೆ ಘಾಸಿಯಾದ್ರೆ ಹೇಗೆ ಸಹಿಸಿಕೊಳ್ಳಲಿ…? ಹೇಳಿ ಸರ್….?
Yes, thought provoking thoughts, very well said. Thanks.
ಎಲ್ಲ ಒಪ್ಪುವನ್ತದ್ದೆ, ಆದರೆ ನೀವು ಸಿನಿಮಾ ಮಂದಿಗೆ ಸಾಮಾಜಿಕ ಕಳಕಳಿಯ ಬಗ್ಗೆ ಬ್ಹೊದಿಸುವಾಗ ಒಂದು ರೂಪಕ ನೆನಪಾಯಿತು, ನಿಮ್ಮ ಕೈಯ್ಯಲ್ಲಿರುವುದು ಕಿನ್ನರಿ, ಎದುರಿಗಿರುವವರು ಸಿನೆಮಾನುಷರು (ಮಹಿಷರು!), ಮುಂದಿನದು ನಿಮ್ಮ ಊಹೆಗೆ!
ಉತ್ತಮ ಪ್ರಬಂಧ. ‘ಸರಕಾರದ ನೆರವು ಬೇಕಿದ್ದಾಗ ಮಾತ್ರ ಸಿನಿಮಾ ಒಂದು ಕಲೆ; ಮಿಕ್ಕಂತೆ ಅದು ಒಂದು ವ್ಯಾಪಾರ’ ಎಂಬ ಮನೋಭಾವ ಹೊಂದಿದವರಿಗೆ ನಾಟುವಂತೆ ನಿಮ್ಮ ಮಾತುಗಳಿವೆ. ಸಿನಿಮಾವನ್ನು ಎಲ್ಲಿಯವರೆಗೂ ಕಲೆಯಾಗಿ ನೋಡುವುದಿಲ್ಲವೋ ಅಲ್ಲಿಯವರೆಗೂ ಕನ್ನಡ ಚಿತ್ರರಂಗ ಪುನಶ್ಚೇತನಗೊಳ್ಳುತ್ತದೆ ಎಂದು ಭಾವಿಸುವುದಕ್ಕೂ ಆಗುವುದಿಲ್ಲ. ‘ಜಾಕಿ’ ಅಂಥ ಸಿನಿಮಾಗಳ ಸಂಖ್ಯೆಯೇ ಅತ್ಯಲ್ಪ. ಇಲ್ಲವೇ ಇಲ್ಲ ಎಂದರೂ ತಪ್ಪಾಗುತ್ತದೆ. ಸದ್ಯದ ನುಡಿಕಟ್ಟುಗಳು, ಸಹಜ ಮ್ಯಾನರಿಸಂ, ತೆರೆಯ ಮೇಲಿರುವ ಪಾತ್ರಗಳು ನಮ್ಮೊಡನೆ ಬದುಕುತ್ತಿರುವಂಥವು ಎನ್ನಿಸುವುದರ ಜೊತೆಗೆ ಒಂದಷ್ಟು ಫ್ಯಾಂಟಸಿಯೂ ಇರುವಂಥ ಜಾಕಿ ಸಿನಿಮಾದ ಯಶಸ್ಸು ಕನ್ನಡ ಚಿತ್ರರಂಗದಲ್ಲಿರುವವರ ಕಣ್ಣು ತೆರೆಸಬೇಕು. ಈರುಳ್ಳಿಗೆ ಬೆಲೆ ಬಂದೊಡನೆ ಮುಂದಿನ ಬಾರಿ ಅನೇಕ ರೈತರು ಅದನ್ನೇ ಬಿತ್ತುವಂತೆ ಯಶಸ್ಸಿನ ಯಥಾವತ್ ಅನುಕರಣೆಯೂ ಅಪಾಯ. ಒಂದೂವರೆ ದಶಕದ ಹಿಂದೆ ಮಲೆಯಾಳಂ ಚಿತ್ರರಂಗದಲ್ಲಾದ ಮತ್ತು ಸದ್ಯ ಕಮರ್ಷಿಯಲ್ ದೃಷ್ಟಿಯಿಟ್ಟುಕೊಂಡು ತಮಿಳು ಚಿತ್ರರಂಗದಲ್ಲಾಗುತ್ತಿರುವ ಪ್ರಯೋಗಗಳು ಕನ್ನಡ ಚಿತ್ರರಂಗದಲ್ಲಿಯೂ ಆಗಬೇಕು. ಡಬ್ಬಿಂಗ್ ಅಪಾಯದ ಕುರಿತು ಎಚ್ಚರಿಸಿರುವುದು ಸೂಕ್ತವಾಗಿದೆ. ಡಬ್ಬಿಂಗ್ ಬಂದರೆ ಅಲ್ಲಿಗೆ ಸೀಮಿತ ಮಾರುಕಟ್ಟೆಯಿರುವ ಕನ್ನಡ ಚಿತ್ರರಂಗದ ಕಥೆ ಗೋವಿಂದ ಗೋವಿಂದ…….
ಜೋಗಿ avre..
nimma kathegalu kachaguli iduva haage.. bhashana kooda madteera.. chennagide.
ಚಿತ್ರರಂಗದ ಕಣ್ತೆರೆಸಬಲ್ಲ ಒಳ್ಳೊಳ್ಳೆ ಅಂಶಗಳು ನಿಮ್ಮ ಮಾತುಗಳಲ್ಲಿವೆ. ನಿಜಕ್ಕೂ ಅತ್ಯುತ್ತಮವಾದ ಪ್ರಬಂಧ.
ಜೋಗಿ ಅವರು ಒಳ್ಳೆಯ ಚಿಂತನೆಗಳನ್ನು ನಮ್ಮ ಮುಂದಿಟ್ಟಿದ್ದಾರೆ.
ಡಬ್ಬಿಂಗ್ ಎನ್ನುವುದು ಒಳಗೆ ಬಂದರೆ, ಕಾರ್ಮಿಕರ ಬಾಳು, ಕನ್ನಡ ಚಿತ್ರೋದ್ಯಮಕ್ಕೆ ಒರಗಿಕೊಂಡಿರುವ ಹಲವು ಸಂಸಾರಗಳು ಕಷ್ಟಕ್ಕೀಡಾಗುತ್ತವೆ ಎಂಬ ಮಾತು ತಳ್ಳಿ ಹಾಕುವಂತದಲ್ಲ.
ನಮ್ಮ ಕನ್ನಡ ಚಿತ್ರೋದ್ಯಮ, ತೆಲುಗು, ತಮಿಳು, ಹಿಂದಿ ಚಿತ್ರೋದ್ಯಮಗಳಂತೆ ಡಬ್ಬಿಂಗ್-ಅನ್ನು ಜೊತೆಗಿಟ್ಟುಕೊಂಡೆ ಬೆಳೆದರೆ, ಕಾರ್ಮಿಕರ ಬಾಳು ಇನ್ನೂ ಹಸನಾಗುತ್ತದೆ ಎಂಬುದೂ ಅಷ್ಟೇ ನಿಜವಾದ ಮಾತು.
ಡಬ್ಬಿಂಗ್ ಎನ್ನುವುದು ನಮ್ಮ ಸಂಸ್ಕೃತಿ, ಆಚರಣೆ, ನಿಲುವು, ಕನ್ನಡತನವನ್ನು ನಾಶಮಾಡಬಲ್ಲುದು ಎಂಬ ಅಭಿಪ್ರಾಯ ಜೋಗಿ ಅವರದಾಗಿದೆ.
ಅದು ನಿಜವೇ ಆಗಿದ್ದರೆ, ಇವತ್ತು ನಮ್ಮೊಡನೆ ಇರುವ ರೀಮೇಕು ಸಂಸ್ಕೃತಿ ಕೂಡ ಕನ್ನಡತನದ, ಕನ್ನಡ ಸಂಸ್ಕೃತಿಯ ನಾಶ ಮಾಡಬಲ್ಲುದಾಗಿದೆ ಎಂಬುದನ್ನು ಒಪ್ಪಬೇಕಾಗುತ್ತದೆ.
ರೀಮೇಕು ಚಿತ್ರಗಳು ಹಲವು ವರ್ಷದಿಂದ ಮೂಡಿ ಬರುತ್ತಿದ್ದೂ, ಕನ್ನಡತನ, ಕನ್ನಡ ಸಂಸ್ಕೃತಿ ಸ್ವಮೇಕ್ ಚಿತ್ರಗಳಲ್ಲಿ ಜೀವಂತವಾಗಿ ಉಳಿದುಕೊಂಡಿರುವುದರಿಂದ, ಡಬ್ಬಿಂಗ್-ನಿಂದ ಈ ತೊಂದರೆ ಆಗಲಾರದು ಎಂದು ಹೇಳಬಹುದಾಗಿದೆ.
ಡಬ್ಬಿಂಗ್-ಅನ್ನು ನಾವು ಯಾವುದೇ ರೀತಿಯಲ್ಲೂ ಒಳಬಿಡದೆ ಇರುವುದರಿಂದ, ಹಲವು ಒಳ್ಳೆಯ ಕಾರ್ಯಕ್ರಮಗಳು ಕನ್ನಡಿಗರಿಗೆ ತಮ್ಮ ಭಾಷೆಯಲ್ಲಿ ಸಿಗದಾಗಿವೆ.
ಕೆಲವು ಉದಾಹರಣೆ ಎಂದರೆ,
೧. ಚಿಕ್ಕ ಮಕ್ಕಳ ಕಾರ್ಟೂನುಗಳು. ಕನ್ನಡದ ಮಕ್ಕಳು ಚಿಕ್ಕಂದಿನಿಂದಲೇ ಮನರಂಜನೆಗಾಗಿ ಬೇರೆ ಭಾಷೆಯನ್ನು ಅವಲಂಬಿಸಬೇಕಾದ ವ್ಯವಸ್ಥೆ ಮೂಡಿದೆ.
೨. ಡಿಸ್ಕವರಿ, ನ್ಯಾಷನಲ್ ಜಿಯಾಗ್ರಫಿ ಇಂತಹ ವಾಹಿನಿಗಳಲ್ಲಿ ಮೂಡಿ ಬರುವ ಜ್ನ್ಯಾನದ ಕಾರ್ಯಕ್ರಮಗಳು.
ಇಂತಹ ಕಾರ್ಯಕ್ರಮಗಳನ್ನು ಕನ್ನಡಕ್ಕೆ ಡಬ್ ಮಾಡಿ, ಬಿತ್ತರಿಸಲು ಅವಕಾಶವಿದ್ದರೆ ಈ ಕೆಲವು ಒಳಿತುಗಳಾಗುತ್ತವೆ.
೧. ಒಳ್ಳೆಯ ಕಾರ್ಯಕ್ರಮಗಳನ್ನು ಕನ್ನಡಿಗರು ತಮ್ಮದೇ ಭಾಷೆಯಲ್ಲಿ ನೋಡಿ ಹೆಚ್ಚಿನ ಜ್ನ್ಯಾನ ಗಳಿಸಲು ಅನುಕೂಲವಾಗುತ್ತದೆ.
೨. ಇವನ್ನು ಕನ್ನಡಕ್ಕೆ ಡಬ್ ಮಾಡಲು ಒಂದು ಉದ್ದಿಮೆ ಹುಟ್ಟಿಕೊಳ್ಳುತ್ತದೆ. ಆ ಮೂಲಕ ಕೆಲವು ಕನ್ನಡಿಗರಿಗೆ ಕೆಲಸ ಹುಟ್ಟುತ್ತದೆ.
ಡಬ್ಬಿಂಗ್-ಅನ್ನು ಕನ್ನಡಿಗರ ಒಳಿತಿಗೆ ಬಳಸಿಕೊಳ್ಳಬಹುದು. “ಹೇಗೆ?” ಎಂಬುದರ ಬಗ್ಗೆ ಚಿಂತನೆ ನಡೆಯಲಿ ಎಂಬುದು ನನ್ನ ಆಶಯ.